ಮೊಮ್ಮಗ

ಮುಂಜಾನೆ ಎದ್ದಾಗ ಮೊದಲು ಕಣ್ಣಿಗೆ ಬೀಳುವುದು
ಮೊಮ್ಮಗ ಮರೆತು ಬಿಟ್ಟು ಹೋದ ಆ ಗೊಂಬೆ
ಅವನು ಕೈ ಎತ್ತೆಂದಾಗ ಎತ್ತಿ ಕಾಲು ಕೆಳಗಿಳಿಸು ಎಂದಾಗ ಕೆಳಗಿಳಿಸಿ
ನಗದೇ ಇದ್ದರೂ ಅವನಿಗೆ ನಕ್ಕಂತೆ ಕಂಡು, 

ಫಕ್ಕದ ಮನೆಯ ಗೃಹಿಣಿ ಮನೆಮುಂದೆ ಬರೆವ ರಂಗೋಲಿ
ಬರಬಾರದೆ ಎದ್ದು ನನ್ನ ಮನೆ ಮುಂದೆ ಎಂದುಕೊಂಡಂತೆ ನಾನು
ಹೂವಿಲ್ಲದೆ ಅರಳಿ ಎಂಥ ಸುಂಟರ ಗಾಳಿಯನ್ನೂ ಧಿಕ್ಕರಿಸಿ
ನಿಲ್ಲುವ ಹಾಗೆ ರಂಗೋಲಿ ಇರಬಹುದೇನೋ ಮೊಮ್ಮಗನಿಗೆ ಇದು?

ಕೊಡು ಅಂದರೆ ಕೊಡದ, ಕೊಟ್ಟರೆ ಮರಕ್ಷಣವೆ ಕಿತ್ತುಕೊಳ್ಳುವ
ಇದರ ಕೈಕಾಲು ಹಾಳಾಗಿ ಮುಖ ಸೊಟ್ಟು ಹಿಡಿದು ಹೋಗಿ
ದಣಿದು ಮಣಿದಂತಿರುವ ಅದು ಯಾಕೆ ಆಪ್ತ? ಅಥವಾ ಅವನು
ಇದು ನನ್ನದು, ಕೊಡಲಾರೆ ನಿನಗೆನ್ನುವುದಕ್ಕೆ ಏನುಂಟು ಅದರಲ್ಲಿ?

ಇರಬಹುದೆ ಅವನ ಅಂತರಾಳದಲ್ಲಿ ಇಂಥದೇ ಇನ್ನೊಂದು ಗೊಂಬೆ
ಪ್ರೀತಿಸುತ್ತ, ಅಥವಾ ಇದು ಪ್ರೀತಿಸುತ್ತಿರಬಹುದೆ ಅದರ?
ತಿಳಿಯದೀಗ, ಬಾಲ್ಯ ಇತ್ತಲ್ಲ ನನಗೂ, ಮತ್ತೆ ಅದು ಈಗ
ಅವನ ಮೂಲಕ ಇದಿರಾಗುತ್ತಿದೆಯೆ? ಅಥವಾ ನಾನಾಗುತ್ತಿದ್ದೇನೆಯೋ ಆಗಿ ಅವನ ಸರೀಕ?

                                                  
                                                          ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮೊಮ್ಮಗ”

  1. Raghavendra Mangalore

    ಕೊನೆಯ ನಾಲ್ಕು ಸಾಲುಗಳು ತುಂಬಾ ಆಪ್ತವಾಗಿವೆ. ಎಲ್ಲ ಅಜ್ಜಂದರಿಗೆ ಕೊಟ್ಟ ಕೊಡುಗೆ ಈ ಕವಿತೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter