ದಿಗಂತಕ್ಕೆ ಹಾರಿಸಿಬಿಟ್ಟ ಹಕ್ಕಿಗಳು!

ಕೆಲವು ದಶಕಗಳಿಂದೀಚೆಗೆ ಗುಪ್ತವಾಗಿ ಹುಟ್ಟಿ ಅವಿಭಜಿತ ದಕ್ಷಿಣ ಕನ್ನಡ ಹಾಗು ಇನ್ನಿತರ ಜಿಲ್ಲೆಗಳ ಜನ ಜೀವನವನ್ನು ಸೂಕ್ಷ್ಮ ವೈರಾಣುವಿನಂತೆ ಪ್ರವೇಶಿಸಿ ಅದರ ವಿವಿಧ ರೂಪದ ಕಷ್ಟ ಕಾರ್ಪಣ್ಯಗಳನ್ನೇ ಗುರಿಯಾಗಿಸಿ ಕೊಂಡು ವ್ಯವಹರಿಸ ತೊಡಗಿದೆ, ‘ಕಾಳಸರ್ಪ ದೋಷ!’ ಎಂಬ ಒಂದು ಹಾಳು ಪಿಡುಗು. ಆದರೆ ಜ್ಯೋತಿಶ್ಶಾಸ್ತ್ರದಲ್ಲಿ ಅಂಥದ್ದೊಂದು ವಿಧಿಯೇ ಇಲ್ಲ! ಇರುವ,‘ಕಾಳಸರ್ಪ ಯೋಗ’ಎಂಬ ವಿಧಿಯನ್ನೇ, ‘ಕಾಳ ಸರ್ಪ ದೋಷ’ಎಂದು ತಿರುಚಿ ಪ್ರಚಾರ ಮಾಡಲಾಗುತ್ತಿದೆ. ಹಾಗಾದರೆ ಇದರ ಸತ್ಯಾಸತ್ಯತೆಗಳೇನು?ಎಂಬುವುದರ ಕುರಿತು, ‘ಜ್ಯೋತಿಶ್ಶಾಸ್ತ್ರವನ್ನೇ ಲೇವಡಿ ಮಾಡುತ್ತಿರುವ ಕಾಳಸರ್ಪ ದೋಷ!’ ಎಂದು ನಾನು ಬರೆದ ಲೇಖನವೊಂದು ಕೆಲ ಕಾಲದ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಆ ಬರಹವು ಅಂಥ ಸಮಸ್ಯೆಗೆ ಬಲಿಯಾಗಿದ್ದ ಒಂದಷ್ಟು ಜನರನ್ನು ಹಾಗು ಅದೇ ವ್ಯವಹಾರದಲ್ಲಿದ್ದವರನ್ನೂ ಎಚ್ಚರಿಸಿತು ಎಂಬುದು,ಜ್ಯೋತಿಷಿರೊಬ್ಬರು ನನ್ನ ಫೇಸ್‍ಬುಕ್‍ ಖಾತೆಯಲ್ಲೂ, ಇನ್ನು ಕೆಲವರು ದೂರವಾಣಿಯಲ್ಲೂ ಅಸಹನೆ ತೋರಿಸಿ ಕೊಂಡಾಗ ಸ್ಪಷ್ಟವಾಗಿತ್ತು. ಅದರಿಂದ ಅದೆಷ್ಟು ಮಂದಿ ಸತ್ಯವನ್ನು ತಿಳಿದು ಕೊಂಡರೋ ಹಾಗೆಯೇ ಆ ಲೇಖನದಲ್ಲಿ ಉಲ್ಲೇಖಿಸಿದ್ದ ಇಬ್ಬರು ನೈಜ ಜ್ಯೋತಿಶ್ಯಾಸ್ತ್ರಜ್ಞರ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳಲು ಕೆಲವರು ಪ್ರಯತ್ನಿಸಿದ್ದರು.ಆದರೆ ಅಂಥವರಲ್ಲಿ ಒಬ್ಬರು ಹಿರಿಯ ಮಹಿಳೆಯೊಂದಿಗಿನ ಮಾತುಕತೆಯಿಂದ ಮಾತ್ರ ನನ್ನ ಬರಹದ ಉದ್ದೇಶವೇ ಗೌಣವಾದಂತೆನ್ನಿಸಿತು.

ದೂರದ ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೊಂದರ ಆಸುಪಾಸಿನ ನಿವಾಸಿಯಾದ ಆ ಮಹಿಳೆ ಆವತ್ತು ನನ್ನ ಲೇಖನವನ್ನು ಬಹಳವಾಗಿ ಪ್ರಶಂಸಿಸುತ್ತ ಆ ಕುರಿತು ಸಾಕಷ್ಟು ಸಕಾರಾತ್ಮಕ ಚರ್ಚೆಯನ್ನೂ ನಡೆಸಿದರು. ಆದರೆ ಕೊನೆಯಲ್ಲಿ ಅವರು ಕೂಡಾ ಜ್ಯೋತಿಷ್ಯರ ನಂಬರ್‍ ಕೇಳಿದಾಗ ಕುತೂಹಲವಾಯಿತು. ‘ಯಾಕೆ…?’ ಎಂಬ ಪ್ರಶ್ನೆಗೆ ಅವರ ಆತಂಕದ ಉತ್ತರ ಹೀಗಿತ್ತು:‘ದೇವರೇ…,ನಮ್ಮ ಕಥೆಯನ್ನು ಏನೂಂತ ಹೇಳಲಿ ಸಾರ್! ನಮ್ಮ ಮಗನದ್ದೇ ನಮಗೊಂದು ದೊಡ್ಡ ಚಿಂತೆಯಾಗಿ ಬಿಟ್ಟಿದೆ.ಅವನು ಇಂಜಿನೀಯರಿಂಗ್‍ ಕಲಿತು ಅಮೆರಿಕಾದಲ್ಲಿದ್ದು ಕೈತುಂಬಾ ಸಂಪಾದನೆಯನ್ನೇನೋ ಮಾಡುತ್ತಿದ್ದಾನೆ.ಆದರೆ ವಯಸ್ಸು ಮೂವತ್ತು ದಾಟಿತು. ಇನ್ನೂ ಮದುವೆಯಾಗಿಲ್ಲ! ಅವನ ಹುಟ್ಟಿನಿಂದಲು ಅವನ ಜಾತಕವನ್ನು ಯಾವ ಜೋಯಿಸರಲ್ಲಿ ತೋರಿಸಿದರೂ, ‘ದೋಷವಿದೆ’ಎಂದೇ ಹೇಳುತ್ತಿದ್ದರು.ಅದರಿಂದ ಆ ದೋಷಗಳ ನಿವಾರಣೆಗೆ ಅವರೆಲ್ಲ ಏನೇನು ಪೂಜಾ ವಿಧಿಗಳನ್ನು ಸೂಚಿಸುತ್ತಿದ್ದರೋ ಎಲ್ಲವನ್ನೂ ಚಾಚೂ ತಪ್ಪದೆ ಮಾಡುತ್ತ ಬಂದಿದ್ದೇವೆ. ಹಾಗಾಗಿ ಅವನ ಜೀವನವು ಇಲ್ಲಿಯ ತನಕ ಒಳ್ಳೆಯ ರೀತಿಯಲ್ಲೇ ನಡೆದುಕೊಂಡು ಬಂದಿತ್ತು. ಆದರೆ ಈಗ ಅವನಿಂದ ಮತ್ತೊಂದು ಹಾಳು ಸಮಸ್ಯೆ ಎದುರಾಗಿ ಬಿಟ್ಟಿದೆ. ಅವನು ಅಲ್ಲಿಯ ಬಿಳಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದಾನಂತೆ. ಮದುವೆಯಾದರೆ ಅವಳನ್ನೇ! ಅಂತ ಹಠ ಹಿಡಿದು ಕೂತಿದ್ದಾನೆ.ಆದರೆ ಅವಳಿಗೆ ನಮ್ಮಜೀವನಕ್ರಮ, ಸಂಸ್ಕೃತಿ, ಸಂಪ್ರದಾಯ ಒಂದೂ ಗೊತ್ತಿಲ್ಲವಂತೆ.ಅಲ್ಲದೇ ಮದುವೆಯಾದ ಮೇಲೆ ಅವಳು ಇಲ್ಲಿಗೆ ಬಂದು ನಮ್ಮೊಂದಿಗೆ ನೆಲೆಸಲು ತಯಾರಿಲ್ಲವಂತೆ.ಇದ್ದ ಒಬ್ಬಳು ಮಗಳನ್ನು ಜಪಾನಿಗೆ ಮದುವೆ ಮಾಡಿ ಕೊಟ್ಟಿದ್ದೇವೆ. ಹೀಗಿರುವಾಗ ನಾವು ಗಂಡ, ಹೆಂಡತಿ ರಾತ್ರಿಹಗಲು ಕಷ್ಟಪಟ್ಟು ದುಡಿದು ಸಂಪಾದಿಸಿ ಕಾಪಾಡಿಕೊಂಡು ಬಂದಂಥ ಇಷ್ಟು ದೊಡ್ಡ ಆಸ್ತಿಪಾಸ್ತಿಗೂ, ನಮಗೂ ಮುಂದೆಯಾರು ದಿಕ್ಕು? ಅಂತ ಕೊರಗು ಶುರುವಾಗಿ ಬಿಟ್ಟಿದೆ. ಅದೇ ಚಿಂತೆಯಿಂದ ಈಗೀಗ ನನ್ನ ಮತ್ತುಇವರ ಆರೋಗ್ಯವು ಹದಗೆಡುತ್ತಿದೆ.

ಇಲ್ಲಿ ನಮ್ಮೂರಿನ ಜೋಯಿಸರಲ್ಲಿ ಹೆಚ್ಚಿನವರು ಮಹಾ ಚಾಲಾಕಿಗಳು ಸಾರ್! ಆದರೂ ನಮ್ಮ ಕೆಲವು ಆಪ್ತರಲ್ಲಿ ವಿಚಾರಿಸಿ ಅಂಥವರಲ್ಲೇ ಒಂದಿಷ್ಟು ಒಳ್ಳೆಯವರನ್ನು ಹುಡುಕಿ ಕೊಂಡು ಹೋಗಿ ನಮ್ಮಸಮಸ್ಯೆಗಳನ್ನು ಅವರಲ್ಲಿ ವಿವರಿಸಿ, ಸಾಂತ್ವನ ಸಿಗುವುದೇನೋ ಎಂದು ಕೊಂಡರೆ,ಒಂದು ಅರವತ್ತು ಸಾವಿರವನ್ನಾದರೂ ಕೀಳುವ ಪೂಜಾ ವಿಧಾನಗಳನ್ನು ಸೂಚಿಸಿ ಬಿಟ್ಟವರಿದ್ದಾರೆ. ಅಷ್ಟಾದರೂ ಪರ್ವಾಗಿಲ್ಲ.ತೊಂದರೆನಿವಾರಣೆಯಾದರೆ ಸಾಕು ಎಂದುಕೊಂಡು ಅವರು ಹೇಳಿದನ್ನೆಲ್ಲ ಮಾಡಿಸಿದ ಮೇಲಾದರೂ ಸುಖ ಉಂಟಾ ಹೇಳಿ,ಎಷ್ಟು ಪ್ರಯತ್ನಿಸಿದರೂ ನಮ್ಮ ಅವಸ್ಥೆ ಹಾಗೆಯೇ ಉಳಿದುಬಿಟ್ಟಿದೆ!ಆದರೂ ಇತ್ತೀಚೆಗೆ ನನ್ನಯಜಮಾನರ ಪರಿಚಯದಒಬ್ಬಜೋಯಿಸರ ಹತ್ತಿರ ಹೋಗಿ ಮಗನ ಕತೆಯನ್ನುಹೇಳಿಕೊಂಡೆವು. ಆ ಪುಣ್ಯಾತ್ಮ ಮೂವತ್ತು ಸಾವಿರ ರೂಪಾಯಿಗಳ ವಿಶೇಷ ಪೂಜೆಯೊಂದನ್ನು ಮಾಡಲು ಹೇಳಿದವನು ಅದು ಮುಗಿಯುತ್ತಲೇ, ‘ನೋಡಿಯಮ್ಮಾ,ಇನ್ನು ಮುಂದೆ ನಿಮ್ಮೆಲ್ಲಕಷ್ಟಗಳು ಪರಿಹಾರವಾದುವುಎಂದು ತಿಳಿದುಕೊಳ್ಳಿ. ಆ ಬಿಳಿ ಹುಡುಗಿಗೂ ನಿಮ್ಮ ಮಗನಿಗೂ ಜಗಳವಾಗಿ,ಅವನು ಆ ಸಂಬಂಧವನ್ನುಇನ್ನುಆರು ತಿಂಗಳೊಳಗೆ ಕಡಿದು ಕೊಂಡು ಬಂದು ನಿಮ್ಮ ಕಾಲಿಗೆ ಬಿದ್ದು ಕ್ಷಮಾರ್ಪಣೆ ಕೇಳುತ್ತಾನೋ ಇಲ್ಲವೋ ನೋಡುತ್ತಿರಿ. ಒಂದು ವೇಳೆ ನಮ್ಮಮಾತು ಸುಳ್ಳಾದರೆ ಆವತ್ತೇ ಬೆತ್ತ ಹಿಡಿದು ಕೊಂಡು ನಮ್ಮ ಮನೆಗೆ ಬನ್ನಿ!’ಎಂದು ಸತ್ಯದ ನೆತ್ತಿಗೆ ಹೊಡೆದಷ್ಟು ಖಚಿತವಾಗಿ ಹೇಳಿದ.

ಅವನ ಮಾತನ್ನು ನಾವೂ ಸುಣ್ಣದ ಬೊಟ್ಟಿಟ್ಟಷ್ಟೇ ಗಟ್ಟಿಯಾಗಿ ನಂಬಿ ಮಗನನ್ನು ಕಾಯುತ್ತ ಕುಳಿತೆವು.ಆದರೆ ಅವನೆಲ್ಲಿ ಬಂದ? ಕಳೆದ ವಾರ ಫೋನ್ ಮಾಡಿದಾಗಲೂ ಆ ಬಿಳಿ ಮೂತಿಯ ಹುಚ್ಚಿನಲ್ಲೇ ಇದ್ದವನು,‘ನಾನು ಮದುವೆಯಾಗುವುದು ಅವಳನ್ನೇ! ಈ ವಿಷಯದಲ್ಲಿ ನೀವೇನಾದರೂ ಇನ್ನು ಮುಂದೆ ತಕರಾರೆತ್ತಿದಿರೋ ಊರನ್ನೇ ಮರೆತು ಬಿಡುತ್ತೇನೆ ಹುಷಾರ್!’ಎಂದು ಗದರಿಸಿಬಿಟ್ಟ. ಆ ಹೊತ್ತು ನನಗೆ ಬೆತ್ತವನ್ನಲ್ಲ,ದೊಡ್ಡಬಡಿಗೆಯನ್ನೇ ಹಿಡಿದುಕೊಂಡು ಹೋಗಿ ಆ ಜೋಯಿಸನಿಗೆ ನಾಲ್ಕು ಭಾರಿಸುವ ಅಂತತೋರಿತು. ಆದರೆ ಆ ಮೇಲೆ ಅವನು ನಮ್ಮ ಮೇಲೆ ಯಾವುದಾದರೂ ಮಾಟ ಮಂತ್ರ ಮಾಡಿ ಲಗಾಡಿ ತೆಗೆಯಲಿಕ್ಕೂ ಹೇಸುವವನಲ್ಲ ಎಂದೂ ಅನಿಸಿತು. ಹಾಗಾಗಿ ನಾನಂತೂ ಇಲ್ಲಿನ ಜೋಯಿಸರ ವಿಷಯದಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದೇನೆ.ನಿಮ್ಮ ಲೇಖನ ಓದಿದ ಮೇಲೆ ನೀವು ಉಲ್ಲೇಖಿಸಿದ ಆ ಇಬ್ಬರು ಜ್ಯೋತಿಷಿಗಳು ಬಹಳ ಪ್ರಾಮಾಣಿಕರು ಅಂತ ತಿಳಿದು ಸ್ವಲ್ಪ ನೆಮ್ಮದಿಯಾಯಿತು. ನನ್ನ ಕಷ್ಟವನ್ನು ಅವರಾದರೂ ಪರಿಹರಿಸುತ್ತಾರೋ ನೋಡಬೇಕು.ದಯವಿಟ್ಟು ಅವರ ನಂಬರ್‍ಕೊ ಡಿ!’ಎಂದು ವಿನಂತಿಸಿ ಕೊಂಡರು.ಅಷ್ಟು ಕೇಳಿದ ನನಗೆ ವಿಷಾದವಾಯಿತು.ಜೊತೆಗೆ ಜ್ಯೋತಿಶ್ಶಾಸ್ತ್ರಜ್ಞರ ನಂಬರ್‍ ನೀಡಲೂ ಹಿಂಜರಿಕೆಯಾಗಿ ನಿರಾಕರಿಸಿದೆ.

ಆದರೆ ಅದಕ್ಕವರು,‘ಅಯ್ಯೋ ಹಾಗನ್ನ ಬೇಡಿ ಇವ್ರೇ! ನಮಗೆ ತುಂಬಾ ತಾಪತ್ರಯಗಳಿವೆ.ಅವ್ಯಾವುದಕ್ಕೂ ಪರಿಹಾರಸಿಗದಿದ್ದರೂ ಪರ್ವಾಗಿಲ್ಲ. ಮಗನ ಮನಸ್ಸನ್ನು ಹೇಗಾದರೂ ಬದಲಾಯಿಸುವಂಥ ಪೂಜೆ ಅಥವಾ ಮಂತ್ರತಂತ್ರಗಳೇನಾದರೂ ಇದ್ದರೆ ಕೂಡಲೇ ಮಾಡಿಸಿ ಅವನು ಆ ಹುಡುಗಿಯನ್ನು ಕಟ್ಟಿಕೊಳ್ಳುವುದನ್ನು ತಡೆಯಲೇಬೇಕು! ನಮ್ಮದು ತೀರಾ ಸಂಪ್ರದಾಯಸ್ಥ ಕುಟುಂಬ. ಇವನ ಕತೆ ತಿಳಿದ ಮೇಲೆ ಕುಟುಂಬಿಕರೆಲ್ಲರೂ ತೀವ್ರ ಕೋಪಗೊಂಡವರು,‘ನಿನ್ನ ಮಗ ಆ ಹುಡುಗಿಯನ್ನು ಮದುವೆಯಾದರೆ ಆ ಮೇಲೆ ನಿಮ್ಮಯಾವ ಕಷ್ಟಸುಖಕ್ಕೂ ನಾವು ಬರೋದಿಲ್ಲ. ನಮ್ಮ ಮಕ್ಕಳು ಎಲ್ಲೇ ದುಡಿಯಲಿ ಏನೇಮಾಡಲಿ.ಆದರೆ ಜಾತಿಮತ ಬಿಟ್ಟು ಬದುಕಲು ನಾವು ಬಿಡುವುದಿಲ್ಲ. ಹಾಗೂ ಒಂದು ವೇಳೆ ಅವರು ನಮ್ಮನ್ನು ಮೀರಿ ನಡೆಯುತ್ತಾರೆಂದರೆ ಅಂಥವರನ್ನು ಕುಟುಂಬದಿಂದಲೇ ಬಹಿಷ್ಕರಿಸಿ ಬಿಡುತ್ತೇವೆ!’ಎಂದು ಹೆದರಿಸುತ್ತಿದ್ದಾರೆ. ಅದೂ ಅಲ್ಲದೇ ಇರುವ ಒಬ್ಬನೇ ಮಗ ಎಲ್ಲೋ ಪರದೇಶದಲ್ಲಿ ಉಳಿದು ಬಿಟ್ಟರೆ ಕೊನೆಗಾಲದಲ್ಲಿ ನಮಗ್ಯಾರು ಗತಿ ಇವ್ರೇ? ಈ ನಮ್ಮ ಕೆಲಸದವುಗಳನ್ನು ನಂಬಲಿಕ್ಕುಂಟಾ…ಅಯ್ಯಯ್ಯೋ, ಇಲ್ಲಪ್ಪಾ…!’ಎಂದು ಅಳಲು ತೋಡಿಕೊಂಡರು.

ಈ ರೀತಿಯ ಸಮಸ್ಯೆಗಳಿಗೆ ಬಲಿಯಾಗಿ,ವಾಸ್ತವವು ತಮ್ಮಕಣ್ಣೆದುರೇ ಕುಣಿಯುತ್ತಿದ್ದರೂ ಭ್ರಮೆಯನ್ನೇ ಅಪ್ಪಿಕೊಳ್ಳಲು ಹಾತೊರೆಯುತ್ತ ಇತರರಿಂದ ಶೋಷಣೆಗೊಳಗಾಗುವವರು ನಮ್ಮ ನಡುವೆ ಬಹಳಷ್ಟು ಮಂದಿ ಸಿಗುತ್ತಾರೆ. ಈ ಮಹಿಳೆಯ ವಿಚಾರವನ್ನೇ ತೆಗೆದು ಕೊಂಡರೆ,ಇವರ ಸಮಸ್ಯೆಯ ಮೂಲ ಯಾರು ಅಥವಾ ಯಾವುದು?ಎಂಬ ಪ್ರಶ್ನೆಯು ಸಹಜವಾಗಿಯೇ ಮೂಡುವುದಿಲ್ಲವೇ! ನಾವು ಈಗಿನವರು ಬಡವರಿರಲಿ, ಶ್ರೀಮಂತರಿರಲಿ, ಹಿಂದೆ ತಾವು ಪಟ್ಟ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂದು ಅವರನ್ನು ತುಂಬ ಪ್ರೀತಿ, ಮಮತೆಯಿಂದ ಬೆಳೆಸುತ್ತ ಉನ್ನತ ವಿದ್ಯಾಭ್ಯಾಸವನ್ನು ನೀಡಲು ಬಯಸುತ್ತೇವೆ.ಅದು ಸಹಜವೂ ಕೂಡಾ. ಆದರೆ ಅದರೊಂದಿಗೆ ಹತ್ತಿರದ ಬಂಧುಗಳನ್ನೂ, ನೆರೆಕರೆಯವರನ್ನೂ ಹಾಗು ಸಮಾಜವನ್ನೂ ಪಟ್ಟು ಬಿಡದೆ ಅನುಸರಿಸಲು ಹೊರಟು,ಕಷ್ಟವೋ ಸುಖವೋ ತಮ್ಮಮಕ್ಕಳು ಕೂಡಾ ಸಮಾಜದಲ್ಲಿ ದೊಡ್ಡದೊಡ್ಡ ಹುದ್ದೆ, ಸ್ಥಾನಮಾನಗಳನ್ನು ಗಳಿಸಿ ದೇಶ, ವಿದೇಶಗಳಲ್ಲಿ ಓಡಾಡುತ್ತ ಕೈತುಂಬಾ ಸಂಪಾದಿಸಬೇಕು ಎಂದು ಇಚ್ಛಿಸುತ್ತೇವೆ. ಒಂದು ದಿನ ಅದರಲ್ಲಿಯಶಸ್ವಿಯೂ ಆಗಿ ತೃಪ್ತಿಯಿಂದ ಬೀಗುತ್ತೇವೆ. ಆದರೆ ಇಂಥ ಬಯಕೆಗಳು ನಮ್ಮಲ್ಲಿ ಮೂಡುವ ಹೊತ್ತಲ್ಲಿ,‘ಎಂದಾದರೊಂದು ದಿನ ನಮ್ಮ ಮಕ್ಕಳು ನಮ್ಮ ಕೈತಪ್ಪಿದರು ತಪ್ಪಿಯಾರು!’ಎಂದು ಯೋಚಿಸುತ್ತೇವೆಯೇ? ಬಹುಶಃ ಬಹುತೇಕರು ಆ ಬಗೆಗೆ ಚಿಂತಿಸುವುದಿಲ್ಲ. ಹಾಗಾದರೆ ನಾವೇ ಪ್ರೀತಿಯಿಂದದಿಗಂತಕ್ಕೆ ಹಾರಿಸಿಬಿಟ್ಟ ಹಕ್ಕಿಗಳು ಮರಳಿ ಗೂಡು ಸೇರದೆ, ಕಣ್ಮರೆಯಾದಾಗ ಜೀವನವೇ ಬರಡಾದಂತೆ ಕಂಗಾಲಾಗುವುದಕ್ಕೆಅರ್ಥವಿದೆಯೇ…?

ರೆಕ್ಕೆಪುಕ್ಕಗಳು ಬಲಿತು ಅದಮ್ಯ ಉತ್ಸಾಹದಿಂದ ಗಗನಕ್ಕೆ ಹಾರುತ್ತ ಸ್ವಚ್ಛಂದವಾಗಿ ಬದುಕಲು ಕಲಿಯುವ ಆ ಹಕ್ಕಿಗಳಿಗೂ ತಮ್ಮದೇ ಆದ ಸ್ವತಂತ್ರ ಜೀವನದ ಸೆಳೆತವಿರುತ್ತದೆ ಎಂಬುದನ್ನುನಾವು ಒಪ್ಪಿಕೊಂಡರೆ ಬಹುಶಃ ಸಮಸ್ಯೆಗಳ ನಿವಾರಣೆಯಾದೀತೇನೋ. ಅದನ್ನು ಬಿಟ್ಟು,ನಾನಾ ಕಷ್ಟಕೋಟಲೆಗಳಲ್ಲಿ ಸಿಲುಕಿ ಸೂತ್ರಕಿತ್ತ ಗಾಳಿಪಟದಂತೆ ತಮ್ಮ ಜೀವನವೇ ಗಿರಕಿ ಹೊಡೆಯುತ್ತಿದ್ದರೂ,‘ಸಮಾಜವನ್ನು ಉದ್ಧರಿಸುತ್ತೇವೆ!’ಎನ್ನುವ ಒಂದಷ್ಟು ವ್ಯವಹಾರಿಕರಲ್ಲಿಯೇ ನಮ್ಮ ತೊಂದರೆಗಳಿಗೆ ಪರಿಹಾರಗಳನ್ನು ನಿರೀಕ್ಷಿಸುತ್ತೇವೆಂದರೆ ಇನ್ನೊಂದು ವಿಷವರ್ತುಲದಲ್ಲಿ ಸಿಲುಕಿದಂತೆಯೇ ಸರಿಎಂದೆನ್ನಿಸುತ್ತದೆ.ಅಷ್ಟಲ್ಲದೇ ಸನಾತನ ಹಿಂದೂ ಸಂಸ್ಕೃತಿ ಇಡೀ ಜಗತ್ತನ್ನೇ ಬೆರಗು ಗೊಳಿಸುತ್ತಿರುವ ಇಂಥ ಕಾಲಘಟ್ಟದಲ್ಲಿ ಮನುಷ್ಯ ಕುಲದ ಉದ್ಧಾರಕ್ಕಾಗಿಯೇ ಪ್ರಾಚೀನ ಋಷಿಮುನಿಗಳು ತಮ್ಮ ತಪಃಶ್ಶಕ್ತಿಯಿಂದ ಸಾಕ್ಷಾತ್ಕರಿಸಿ ಕೊಂಡಂಥ ವೇದೋಪನಿಷತ್ತುಗಳು, ಜ್ಯೋತಿರ್ವಿಜ್ಞಾನ ಹಾಗೂ ಇನ್ನಿತರ ಪುಣ್ಯಪುರಾಣಾದಿ ಧರ್ಮಶಾಸ್ತ್ರಗಳನ್ನುಯಾರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತ ಅಮಾಯಕ ಜನಜೀವನವನ್ನು ಧಾರ್ಮಿಕ, ಆಧ್ಯಾತ್ಮಿಕ ಅಧಃಪತನದೆಡೆಗೆ ತಳ್ಳುತ್ತಿರುತ್ತಾರೋ ಅಂಥವರು ಪ್ರಾಚೀನ ಸಾಧು ಸಂತರ ಶತಮಾನಗಳ ಪರಿಶ್ರಮವನ್ನುಗಾಳಿಗೆ ತೂರಿದಂತೆಯೇ ಆಗುವುದಲ್ಲದೆ, ಹಿಂದೂ ಧರ್ಮದ ಸಂರಕ್ಷಣೆಯ ವಿಚಾರದಲ್ಲೂ ಅಂಥವರು ಅನರ್ಹರೆಂದೇ ಭಾವಿಸ ಬೇಕಾಗುತ್ತದೆ!-ಎಂದುಯೋಚಿಸುತ್ತಿದ್ದವನಿಗೆ, ‘ಸಾರ್,ಜೋಯಿಸರ ನಂಬರ್‍ಕೊ ಡುತ್ತೀರಾ…?’ಎಂದು ಆ ಮಹಿಳೆ ಮತ್ತೆ ಕೇಳಿದಾಗ, ‘ದಯವಿಟ್ಟು ಕ್ಷಮಿಸಿಯಮ್ಮಾ, ಅವರ ನಂಬರ್‍ ಕೊಡಲು ನನಗೆ ಅನುಮತಿಯಿಲ್ಲ!’ಎಂದು ವಿಷಾದದಿಂದ ಫೋನಿಟ್ಟೆ.

****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ದಿಗಂತಕ್ಕೆ ಹಾರಿಸಿಬಿಟ್ಟ ಹಕ್ಕಿಗಳು!”

  1. ಅನಿತಾ ಪಿ ತಾಕೊಡೆ

    ಅಪನಂಬಿಕೆಗಳಿಗೆ ಬಲಿಯಾಗಿ ಯಾವುದೇ ಪರಿಹಾರವೂ ಸಿಗದೆ ತೊಳಲಾಡುವ ಅನೇಕರು ಇಂದಿಗೂ ಇದ್ದಾರೆ. ಒಂದಷ್ಟು ಮನಸ್ಸುಗಳನ್ನು ಪರಿವರ್ತಿಸುವ ಸಾಮರ್ಥ್ಯವುಳ್ಳ ಹಾಗೂ ಚಿಂತನೆಗೆ ಹಚ್ಚುವಂಥ ಲೇಖನ. ಅಭಿನಂದನೆ ಸರ್

  2. ಧರ್ಮಾನಂದ ಶಿರ್ವ

    ವೈಚಾರಿಕ ಲೇಖನ.
    ಸಮಸ್ಯೆಗಳು ನಮ್ಮ ಕಾಲಬುಡಕ್ಕೆ ಬಂದಾಗ ಮೂಢನಂಬಿಕೆಯ ವಿರುದ್ಧ ಇರುವ ಎಂತಹ ಅಚಲ ನಂಬಿಕೆಯಾದರೂ ಅಲ್ಲಾಡುತ್ತದೆ.
    ಅಂತಹ ಮಾನಸಿಕ ಗಟ್ಟಿತನವನ್ನು ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆಸುವುದು ತುಸು ಕಷ್ಟಕರವಾದ ಕೆಲಸ.
    ಅಭಿನಂದನೆಗಳು

    1. Gururaja Sanil, udupi

      ಹೌದು ಸರ್, ಅಂಥ ವಿಷಮ ಸಂದರ್ಭಗಳಲ್ಲಿ ನಮ್ಮ ಸ್ವಾವಲೋಕನ ಅಗತ್ಯವೆಂದು ನನ್ನ ಅನಿಸಿಕೆ. ತಮ್ಮ ಅಭಿಪ್ರಾಯಕ್ಕೆ ಕೃತಜ್ಞತೆಗಳು…

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter