(ಚಿತ್ರ: ಮಂಗಳಾ ಶೆಟ್ಟಿ)
ವಾತ್ಸಲ್ಯ ಹೆರಿಗೆ ಆಸ್ಪತ್ರೆಯ ಬೇಂಚ್ಒಂದರ ಮೇಲೆ ಮುದುರಿದಂತೆ ಕುಳಿತ ಶ್ಯಾಮಲಾ ಸುತ್ತಲೂ ಕಣ್ಣಾಡಿಸಿದಳು.ಅಲ್ಲಿ ಅವಳಂತೆಯೇ ಬೇರೆ ಬೇರೆ ಗಾತ್ರದ ಹೊಟ್ಟೆ ಹೊತ್ತ ಬಸುರಿಯರು ಕುಳಿತಿದ್ದರು.ಕೆಲವರ ಕೈ ಹೊಟ್ಟೆಯ ಮೇಲೆ ಕೆಲವರ ಕೈ ಸೊಂಟದ ಮೇಲೆ. ದಿನ ತುಂಬಿದ ಬಸುರಿಯರು.ಆ ಸಣ್ಣ ಬೆಂಚಿನಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಾ ಕಾಲು ನೀಡಿಕೊಂಡುಅರ್ಧ ಮಲಗಿದಂತೆ ಕುಳಿತಿದ್ದರು.ಶ್ಯಾಮಲೆಯ ಪಕ್ಕದಲ್ಲಿ ಕುಳಿತ ಬಸುರಿ‘ಸ್ಕಾನಿಂಗ ಕ್ಲಿಯರ್ ಬರಬೇಕಂದ್ರ ಸಾಕಷ್ಟ ನೀರು ಕುಡಿರಿ ಅಂತಾರ. ಟಾಯ್ಲೆಟ್ಟಿಗೆ ಹೋಗಂಗಿಲ್ಲ. ಈ ಬಸಿರು ಹೊಟ್ಟಿ ಹೊತ್ತ ಮತ್ತ ಮ್ಯಾಲ ಲೀಟರ್ಗಟ್ಟಲೆ ನೀರ ಕುಡಿದು ತಾಸೆರಡು ತಾಸು ಪಾಳ್ಯಾಗ ಕುಂದ್ರೂದು. ಎಷ್ಟ ಕಷ್ಟಕ್ಕೇತಿಯವ್ವಾ’ಎಂದು ನರಳಿದಂತೆ ಹೇಳುತ್ತಿದ್ದಳು.ಮಡದಿಯನ್ನುಅಸಹಾಯಕತೆಯಿಂದ ನೋಡುತ್ತಿದ್ದ ಅವಳ ಗಂಡ ‘ಈ ದವಾಖಾನಿ ಒಳಗ ಯಾವುದೂ ಸಿಸ್ಟಮ್ಯಾಟಿಕ್ ಇಲ್ಲ ಎಂದುಗೊಣಗುತ್ತಿದ್ದ.
‘ನಿನ್ನ ಹಾಂಗ ಎಲ್ಲಾ ಬಸಿರು ಹೆಂಗಸರೂ ಅಪರಾಧಿಗಳನ್ನು ಕರಕೊಂಡೇ ಆಸ್ಟತ್ರೆಗೆ ಬಂದಾರ’ ಅಲ್ಲಿ ಓಡಾಡುವ ಗಂಡಸರನ್ನು ನೋಡುತ್ತಾ ಗಂಡ ಸುಧಾಕರ ಶ್ಯಾಮಲೆಯ ಕಿವಿಯಲ್ಲಿ ಪಿಸು ನುಡಿದ. ‘ಇಶ್ ಸುಮ್ಮಕೂಡ್ರೀ ಏನಾರ ಹೇಳತೀರಿ’.ಗಂಡನ ಕೈಗೊಮ್ಮೆ ತಟ್ಟಿ ಪ್ರೇಮದಲಿ ನೋಡಿದಳು ಶ್ಯಾಮಲೆ.
ಎದೆಯ ಕೆಳಗೆ ಕೊಡ ಕೂಡಿಸಿದಂತೆ ಕಾಣುವ ದೊಡ್ಡಹೊಟ್ಟೆ ಹೊತ್ತವಳನ್ನು ನೋಡುತ್ತಾ‘ನನಗೂ ಒಂಭತ್ತು ತಿಂಗಳೆನ್ನುವಷ್ಟರಲ್ಲಿ ಇಷ್ಟೇ ಹೊಟ್ಟೆ ಬರಬಹುದೇ’ಎಂದು ಕಣ್ಣರಳಿಸಿ ನೋಡುತ್ತಿದ್ದ ಶ್ಯಾಮಲೆಯನ್ನು ನರ್ಸ‘ನಿಮ್ಮ ಪಾಳಿ ಬಂದತಿ, ಕರಿಯಾಕ ಹತ್ಯಾರಎಲ್ಲೈತಿ ನಿಮ್ಮಿಬ್ಬರ ಲಕ್ಷ್ಯಎಂದು ಕೂಗಿ ಕರೆದಳು.
ಶ್ಯಾಮಲಾಳನ್ನು ಪರೀಕ್ಷಿಸಿದ ಡಾಕ್ಟರ್ಆನಂದ‘ನೋಡಮ್ಮಾ ನಿಮ್ಮ ಸ್ಥಿತಿ ಸ್ವಲ್ಪ ನಾಜೂಕಾಗಿದೆ.ಮೂರು ತಿಂಗಳಿಗೆ ಬೇಕಾದಷ್ಟು ತೂಕಕ್ಕೆ ನಿಮ್ಮಗರ್ಭದಲ್ಲಿರುವ ಭ್ರೂಣ ಬೆಳೆದಿಲ್ಲ. ತುಂಬಾ ಹೊತ್ತು ನಿಂತು ಕೆಲಸ ಮಾಡಬಾರದು.ಭಾರಾ ಎತ್ತಬಾರದು.ಬಸ್ಸಿನಲ್ಲಿ ನಿಂತು ಪ್ರಯಾಣ ಮಾಡಬಾರದು’ ಎಂದರು.ಆ ಮಾತುಗಳನ್ನು ಕೇಳಿದಾಗ ಶ್ಯಾಮಲೆಯ ಮುಖ ಬಾಡಿತು.‘ನಿಮ್ಮಗಂಡನಿಗೆ ತುಂಬಾ ಒಳ್ಳೆಯ ಉದ್ಯೋಗವಿಲ್ಲ. ನೀವು ಹೊರಗಡೆಯೂ ದುಡಿಯುವುದು ಅನಿವಾರ್ಯ ಅನ್ನೋದನ್ನ ನಿಮ್ಮಯಜಮಾನರೇ ನನಗೊಂದು ಸಲ ಹೇಳಿದ್ದಾರೆ.ಆದಷ್ಟುಎಚ್ಚರಿಕೆ ತೆಗೆದುಕೊಳ್ಳಿ’ಎಂದು ಟಾನಿಕ್ ಮಾತ್ರೆಗಳ ಚೀಟಿ ಕೈಗಿತ್ತಿದ್ದರು.ಸುಧಾಕರನನ್ನು ಒಳಗೆ ಕರೆಸಿ ಅವಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಎಚ್ಚರಿಸಿ ಕಳಿಸಿದ್ದರು.
***********
ಮರುದಿನ ಕೊಂಚ ದುಗುಡದಿಂದಲೇ ಡಾಕ್ಟರ್ ಹೇಳಿದ ಎಲ್ಲ ವಿಷಯಗಳನ್ನೂ ಶ್ಯಾಮಲಾ ತಾನು ಸೇಲ್ಸಗರ್ಲ ಆಗಿ ಕೆಲಸ ಮಾಡುತ್ತಿದ್ದ ಬಟ್ಟೆಅಂಗಡಿ ಮಾಲಿಕರಿಗೆ ಹೇಳಿದಳು.‘ನೀನು ರೇಷ್ಮೆ ಸೀರೆಗಳ ವಿಭಾಗದಲ್ಲಿ ಕೆಲಸ ಮಾಡಮ್ಮಾ, ಕುಳಿತು ಮಾಡುವ ಕೆಲಸ ಅಷ್ಟು ಕಷ್ಟ ಆಗುವುದಿಲ್ಲ’ಎಂದು ಅವರು ಒಂದಿಷ್ಟು ರಿಯಾಯತಿ ತೋರಿದರು.ಆದರೂ ಅಂದು ರಾತ್ರಿ ಎಂಟೂವರೆಗೆ ಕೆಲಸ ಮುಗಿಸಿ ಮನೆಗೆ ಹೊರಟ ಶ್ಯಾಮಲಾಳಿಗೆ ದಣಿವಾಗಿತ್ತು.ಮನದಲ್ಲಿ ದುಗುಡವಿತ್ತು.
ಮಾರ್ಕೆಟ್ ಬಳಿ ಇರುವ ಅವಳ ಅವಳು ಕೆಲಸ ಮಾಡುವ ಅಂಗಡಿಯಿಂದ ಬಸ್ ಸ್ಟಾಂಡಿಗೆ ಹೋಗಿ ಸಿಟಿ ಬಸ್ ಹತ್ತಿದರೆ ಅಲ್ಲಿಂದ ಅವಳ ಮನೆ ಅಲ್ಲಿಂದ ಮೂರು ಕಿಲೊ ಮೀಟರ್ದೂರ.ತರಕಾರಿ ಮಾರುವವರು ಹೂ ಮಾರುವವರು ಎಲ್ಲರೂ ಮನೆಗೆ ಹೋಗುವ ಸಮಯವಾದ್ದರಿಂದ ಯಾವಾಗಲೂ ಬಸ್ ರಶ್ಇರುತ್ತಿತ್ತು.
ಇಂದಾದರೂ ಬಸ್ಸಿನಲ್ಲೊಂದು ಸೀಟು ಸಿಕ್ಕರೆ ಹಾಯಾಗಿ ಕುಳಿತು ಹತ್ತು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬಹುದು ಎಂಬ ಆಸೆ ಹೊತ್ತು ಅಂದೂ ಬಸ್ಸನ್ನೇರಿದಳು. ಹೆಂಗಸರಿಗಾಗಿ ಮೀಸಲಿಟ್ಟ ಸೀಟಿನಲ್ಲಿ ಹಜಾರದಲ್ಲಿಟ್ಟ ಸೋಫಾದಲ್ಲಿ ಕುಳಿತಂತೆ ಮೀಸೆಹೊತ್ತ ಮಹಾಶಯರು ಹಾಯಾಗಿ ಕುಳಿತಿದ್ದರು. ‘ಈ ಸೀಟುಗಳನ್ನು ಹೆಂಗಸರಿಗಾಗಿಅಂತ ಮೀಸಲಾಗಿಟ್ಟಾರ್ರೀ, ಪ್ಲೀಸ್ ಸೀಟು ಬಿಟ್ಟುಕೊಡ್ರೀ’..ಎಂದು ವಿನಯದಿಂದ ಕೇಳಿದಳು. ‘ಏನವ್ವಾನೀ ಹರೇದಾಕಿ.ಇಲ್ಲೇ ನಾರಾಯಣಪುರಕ್ಕ ಹೋಗಾಕಿ.ಇಷ್ಟ ಹತ್ರದ ಸ್ಟಾಪ್ತನಕಾ ನಿಂತಿರಾಕ ಆಗಂಗಿಲ್ಲೇನ? ನಾವ ಮೊದಲೇ ಬಂದು ಸೀಟ ಹಿಡದೇವಿ ಮತ್ತ ಕೊನೆ ಸ್ಟಾಪಕ್ಕ ಹೋಗಾವ..ಎಂದುರಾಗ ಎಳೆದ ಒಬ್ಬ ಮಹಾಶಯ.ಅವನನ್ನುಎತ್ತಿ ನಿಲ್ಲಿಸಿ ಬಿಡಬೇಕೆನ್ನುವಷ್ಟು ರೋಷಉಕ್ಕಿದರೂ ಇದೇನು ನನ್ನಿಂದ ಆಗುವ ಕೆಲಸ ಅಲ್ಲ ಎಂದು ತುಟಿಕಚ್ಚಿ ಮುಖ ಬಾಡಿಸಿ ಒಂದುಕ್ಷಣ ಸುಮ್ಮನೇ ನಿಂತಳು.
ಬಸಿರು ಹೊಟ್ಟೆಯ ಮೇಲೆ ಅವಳ ಕೈ ಇತ್ತು.ಇನ್ನೂ ಮೂರನೇ ತಿಂಗಳಷ್ಟೇ ಆಗಿದ್ದರಿಂದ ಹೊಟ್ಟೆಯಆಕಾರವೂ ಬದಲಾಗಿರಲಿಲ್ಲ. ನೋಡಿದವರಿಗೆ ಬಸುರಿಯೆಂಬುದು ತಿಳಿಯುತ್ತಲೂ ಇರಲಿಲ್ಲ. ಹಿಂದಿನ ದಿನ ಡಾಕ್ಟರ್ ಹೇಳಿದ ಮಾತುತಲೆಯಲ್ಲಿ ಸುತ್ತಾಡುತ್ತಿತ್ತು.
‘ಸೀಟ್ ಬಿಟ್ಕೊಡ್ರೀ ಇದು ಹೆಂಗಸರಿಗೆ ಅಂತಾಇಟ್ಟ ಸೀಟು’ ಎಂದು ಒಂದೆರಡು ಹೆಜ್ಜೆ ಹಿಂದೆ ಸರಿದು ಮತ್ತೊಬ್ಬ ಧಡಿಯನಲ್ಲಿ ಮತ್ತೆ ವಿನಂತಿಸಿದಳು. ‘ಬಸ್ಸಿನ್ಯಾಗ ನಿಲಾಕ್ಲಾಗದವ್ರು ದಿನಾ ಬಸ್ಸಿನ್ಯಾಗ ಯಾಕತಿರಗತೀರಿ? ನನಗೂ ಸುಸ್ತಾಗಿ ಕುಂತೇನಿ’ಎಂದು ನಿರ್ಬಿಢೆಯಿಂದ ಅವ ನುಡಿದ.ಆಗ ಸಿಟ್ಟನ್ನು ತಾಳಿಕೊಳ್ಳುವ ಮನಸ್ಸು ಆಕೆಗೆ ಬರಲೇಇಲ್ಲ. “ಸರ್ ನಮ್ಮಂತಹ ಹೆಂಗಸರಿಗೆ ಮುಟ್ಟು, ಬಸಿರು, ಹೆರಿಗೆ ಸಮಯದಲ್ಲಿ ಶರೀರ ನಾಜೂಕಾಗಿರ್ತರ್ರೀ. ಸಣ್ಣ ಕೂಸಿರಾ ತಾಯಂದ್ರು ಹಾಲೂ ಕುಡಿಸಬೇಕಾಗ್ತತಿ.ಅದಕ್ಕಂತಾನೇ ಹೆಂಗಸರಿಗಾಗಿ ಒಂದಿಷ್ಟು ಸೀಟುಗಳನ್ನು ಸರಕಾರದವರು ಇಟ್ಟಾರ. ನನ್ನ ಹೊಟ್ಟಿ ಒಳಗೂ ಮೂರ ತಿಂಗಳ ಕೂಸದರೀ. ನಿಲ್ಲಾಕ ಕಷ್ಟ ಅಂತಾನೇ ಕೇಳಾಕ ಹತ್ತೀನಿ”..ಎಂದು ಗಟ್ಟಿಯಾಗಿ ಹೇಳಿದಳು.ಅಲ್ಲಿಯವರೆಗೆ ನಾಟಕ ನೋಡುವಂತೆ ನಿಂತು ನೋಡುತ್ತಿದ್ದ ಉಳಿದ ಹೆಂಗಸರು ಏಕಾಏಕಿ ಬದಲಾದರು..
“ಏಳ್ರೀ ಎದ್ದೇಳ್ರೀ ನಿಮ್ಮ ಗಂಡ್ಸತನಕ್ಕಿಷ್ಟು ಬೆಂಕಿ ಬೀಳಾ, ಹಿಂದಲ ಸೀಟುಗಳಿಗೆ ಹೋಗ್ರೀ..ನೀವೂ ತಾಯಿ ಹೊಟ್ಯಾಗ ಇದ್ದು ಬೆಳೆದು ಬಂದವರೇ ಇದ್ದೀರೋ ಇಲ್ಲೋ?ಇನ್ನ ಈ ಸೀಟುಗಳ ಮ್ಯಾಲ ಹೆಂಗಸೂರಿಗೆ ಕೂಡಾಕ ಬಿಡಬೇಕು, ಇಲ್ಲಕಿದ್ರ ಪೋಲೀಸ್ಕಂಪ್ಲೇಟ್ ಕೊಡತೇವಿ’ಎಂದುಶ್ಯಾಮಲಾಳ ಜೊತೆ ಸೇರಿದಭಾಯಿಸಲಾರಂಭಿಸಿದರು.ಧಡಿಯನೊಬ್ಬನೇ ಅಲ್ಲದೇ ಅಂದು ಎಲ್ಲ ಗಂಡಸರೂ ಹಿಂದಿನ ಸೀಟುಗಳತ್ತ ನಡೆದರು!ಡಾಕ್ಟರ್ ಹೇಳಿದ್ದ ಮಾತನ್ನು ಪಾಲಿಸಬಹುದು ಎನ್ನುವ ಧೈರ್ಯದಲ್ಲಿ ಗೆಲುವಿನ ನಗೆ ಬೀರುತ್ತ ಹೆಂಗಸರಿಗಾಗಿ ಮೀಸಲಿಟ್ಟ ಸೀಟಿನಲ್ಲಿ ಶ್ಯಾಮಲಾ ಸಮಾಧಾನದಿಂದ ಕುಳಿತಳು.
‘ಮತ್ತ ಮೂರ ತಿಂಗಳಂದ್ರೆ ಉಲ್ಟಿ ಆಕ್ಕೇತೇನು?..ಸರಿತ್ನಾಗಿ ಊಟಾ ಮಾಡ್ತಿರೋ ಇಲ್ಲೋ?ಎರಡು ಜೀವಕ್ಕಾಗುವಷ್ಟು ತಿನ್ನ ಬೇಕೇನ್ರವ್ವಾ ಇಂತಾಟೇಮದಾಗ’ಎಂದು ಅಕ್ಕಪಕ್ಕ ಕುಳಿತ ಹೆಂಗಸರು ಕಕ್ಕುಲಾತಿಯಿಂದ ಶ್ಯಾಮಲಾಳ ಬಳಿ ಮಾತಾಡಲಾರಂಭಿಸಿದರು……ಥೇಟ್ ಅವಳ ಹೆತ್ತಮ್ಮನಂತೆ….
******
9 thoughts on “ಸವಾಲು”
ಛಂದದ ಕಥೀ ಮಾಲತಿ. ಆಗತಾವು ಇಂಥಾ ಅನುಭವಾ ಭಾಳಷ್ಟು.
ಭಾಳ ಛಲೋ ಐತ್ರಿ ಕಥೆ
ಧನ್ಯವಾದಗಳು ಸರ್
ಬಸಿರು ಹೆಂಗಸರ ಕಥೆ. ಚಂದಾಗಿದೆ
ಧನ್ಯವಾದಗಳು ಸರ್. ಬರೆಯುವವರನ್ನು ಪ್ರೋತ್ಸಾಹಿಸುವ ನಿಮ್ಮ ಗುಣಕ್ಕೆ ಧನ್ಯವಾದಗಳು.
Very relevant to present situation. Even I have seen gents adorning ‘for ladies’ seats. I believe some gents doubt their gender.
Thank you very much
ಸವಾಲು ಕತೆಯಲ್ಲಿ ಪ್ರಚಲಿತ ಸನ್ನಿವೇಶವನ್ನು ಮುಖಕ್ಕೆ ಹಿಡಿದಂತೆ ಚಿತ್ರಿಸಿದ್ದೀರಿ.
ಚಂದದ ಕಥೆ
ಧನ್ಯವಾದಗಳು ಸರ್.