ಸಂಚಾರ ಬಾಹ್ಯಕ್ಕೆ ಮಾತ್ರ ಸೀಮಿತವಾಗಬಾರದು

ಒತ್ತಡಗಳು ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಲು ಸಹಕಾರಿಯಾಗುತ್ತವೆ. ಹಾಗೆಂದು ಒತ್ತಡಗಳಿಂದಲೇ  ಬದುಕು ನಡೆಸಲು  ಎಂದಿಗೂ  ಸಾಧ್ಯವಾಗದು. ಒತ್ತಡ ರಹಿತ ಜೀವನ ನಡೆಸಲು ಸದಾ ಚಟುವಟಿಕೆಯಿಂದಿರಬೇಕು. ಒಳ್ಳೆಯ ಹವ್ಯಾಸಗಳು ಮನವನ್ನು ಸದಾ ಉಲ್ಲಾಸದಿಂದಿರುವಂತೆ ಮಾಡುತ್ತವೆ. ಭೂಮಿಯ ಮೇಲೆ ಇರುವ  ನಾವು ಪ್ರಕೃತಿಗೆ ಅನುಕೂಲವಾಗುವ ರೀತಿಯಲ್ಲಿ ಬದುಕಬೇಕು. ನಿತ್ಯವೂ ಶಿರ ಬಾಗಿ ನಮಸ್ಕರಿಸಿ ಬಾಳುವೆ ನಡೆಸಲು ಅವಕಾಶ ಒದಗಿಸಿದುದಕ್ಕೆ ಕೃತಜ್ಞತೆ ಸಲ್ಲಿಸಬೇಕು. ಆಗ ಮನದೊಳಗೆ ಅಹಂಕಾರದ ಮೊಟ್ಟೆ ಎಂದೂ ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ.

         “ತಗ್ಗಿದ  ಗದ್ದೆಗೆ ಮೂರು ಬೆಳೆ ” ಇದು ಎಲ್ಲರೂ ಒಪ್ಪುವ  ಮಾತು. ಹಿಂದಿನ ಕಾಲದ ಜನರ ಜೀವನ ಕ್ರಮದ ಅನುಭವದ ನುಡಿಗಳು ಒಂದು ರೀತಿ ಅಮೃತವೇ ಹೌದು. “ಹೂ ಕೊಡುವಲ್ಲಿ ಹೂವಿನೆಸಳು” ಕೊಟ್ಟರೂ ಸಾಕಾಗುತ್ತದೆ.

ಅನಗತ್ಯ ವಿಷಯ ಅಥವಾ ವಸ್ತುಗಳನ್ನು ಕೊಂಡು ಹಾಕಿ ಗುಡ್ಡೆ ಮಾಡಿಕೊಳ್ಳುವುದು ಮನುಷ್ಯರಿಗೆ ಹುಟ್ಟಿನಿಂದಲೇ ಬಂದುದಲ್ಲ. ನೋಡ ನೋಡುತ್ತಾ ಇತರರನ್ನು ಅನುಕರಿಸಿ ಅದನ್ನೇ ತಮ್ಮಲ್ಲಿ ಬೆಳೆಸುವ ಪ್ರಕ್ರಿಯೆ ಬೆಳೆಯುತ್ತ ಮೂಡಿ  ಬರುತ್ತದೆ. ಅದಕ್ಕಾಗಿ ಅದನ್ನೇ ಚಿಂತಿಸುತ್ತಾ  ಮನಸ್ಸು ಕೆಡಿಸಿಕೊಳ್ಳುವವರೂ ಇರುತ್ತಾರೆ. ಆದರೆ ಮನದೊಳಗಿನ  ನೆಮ್ಮದಿಗೆ ಇವೆಲ್ಲ ಬೇಕಾಗುವುದಿಲ್ಲ. ಬೆಳಗ್ಗೆದ್ದು ಸೂರ್ಯನ ದರ್ಶನ ಮಾಡಿದಲ್ಲಿಂದ ಹಿಡಿದು ಸಾಯಂಕಾಲದವರೆಗೆ ಹಾಗೂ ರಾತ್ರಿಯಲ್ಲಿ  ಪ್ರಕೃತಿ ನೀರವತೆಯಿಂದಿದ್ದರೂ ಮನುಷ್ಯರ ಓಡಾಟ ಇದ್ದೇ ಇರುತ್ತದೆ. ಸಂಚಾರ ಅಥವಾ ಪರ್ಯಟನೆ ಮನದೊಳಗೆ ನಿತ್ಯವೂ ನಡೆಯಬೇಕು. ಆದರೆ ನಮ್ಮ ಸಂಚಾರ ಅಥವಾ ತುಲನೆಯೆಂದರೂ ಸರಿಯೇ  ಬರೀ ಬಾಹ್ಯ ವಸ್ತು ವಿಷಯಗಳಿಗೆ ಮಾತ್ರ ಸೀಮಿತವಾಗಿಬಿಡುತ್ತದೆ. ಅಂತರಂಗದ ಮಾತು ಮೌನದಲ್ಲಿ ಉಳಿದುಬಿಡುತ್ತದೆ.

           “ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೇ ದಾರಿ” ಎಂಬ ಡಿ ವಿ ಜಿ ಯವರ ಮಾತು ಯಾವಾಗಲೂ ನೆನಪಲ್ಲಿ ಇಟ್ಟುಕೊಳ್ಳಬೇಕು. ನಮ್ಮಲ್ಲಿರತಕ್ಕ ಶ್ರೀಮಂತಿಕೆಗನುಸಾರವಾಗಿ   ತೃಪ್ತಿಕರವಾದ ಬದುಕು ನಡೆಸಬೇಕು. ಅದು ಬಿಟ್ಟು ಇತರರ ಸ್ಥಿತಿಯನ್ನು ನೋಡಿ ಅವರಂತೆ ಇಲ್ಲವಲ್ಲ  ಎಂಬ ಕೊರಗು ಇಟ್ಟುಕೊಳ್ಳಬಾರದು. ಬಾರದೆ ಇಪ್ಪದು ಬರುವುದ ತಪ್ಪದು. ಇದನ್ನರಿತು ಬದುಕು ನಡೆಸಬೇಕು.  ಬಸ್ಸು ತುಂಬಾ ಜನ ತುಂಬಿ ತುಳುಕುತ್ತಿದೆ. ಬಿಸಿಲು ಬೇರೆ. ಆದರೆ ಬಸ್ಸು ಇನ್ನೂ ಚಲಿಸಲು ಪ್ರಾರಂಭಿಸಿಲ್ಲ. ಎಲ್ಲರೂ ಗುಸು ಗುಸು ಅನ್ನುವವರೇ. ಹೊತ್ತು ಮೀರಿ ಹೋಗುತ್ತಿದೆ. ಆದರೆ ಚಲನೆ ಆಗಿಲ್ಲ. ಯಾಕೆ?  ಎಲ್ಲರೂ ಏನೇನೋ ಅಸಮಾಧಾನಗೊಂಡು ಇನ್ನೇನು ನಿರ್ವಾಹಕನಲ್ಲಿ ಕೇಳಿಯೇಬಿಡೋಣ ಎಂದು ಅಂದುಕೊಳ್ಳುವಾಗಲೇ ಚಾಲಕನ ಸೀಟಿನೆಡೆಗೆ ಕಣ್ಣು ಹಾಯಿಸುತ್ತಾರೆ. ಆಗ ಅಲ್ಲಿ ಚಾಲಕನೇ ಇರುವುದಿಲ್ಲ.ಒಂದು ಕಾರ್ಯ ಚಾಲನೆಗೆ ಬರಬೇಕಾದರೆ ಮುಖ್ಯ ನಿರ್ಧಾರಿತ ಅಂಶ ಇರಲೇಬೇಕು. ಮನಸ್ಸಿನ ತುಂಬಾ ಆಲೋಚನೆಗಳು ಗುಂಪು ಗುಂಪಾಗಿ ಧಾವಿಸಿ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿಬಿಡುತ್ತವೆ. ಗಟ್ಟಿಯಾದ ನಿರ್ಧಾರಕ್ಕೆ ಚಾಲನೆ ಸಿಗುವ ಅವಕಾಶ ಕೆಲವೊಮ್ಮೆ ದೊರಕದೆ ಹೋಗುವುದುಂಟು. ಆಗ ಮರಳಿ ಯತ್ನಿಸುವುದು ಒಳ್ಳೆಯದು.

ಬೆನ್ನು ಕಾಣುವುದಿಲ್ಲ. ಬೇರೆಯವರದ್ದು ಎಂದಂದು ಕೊಂಡಿರಾ? ಬೇರೆಯವರ ಬೆನ್ನು ಕಾಣಿಸುವುದರಿಂದಲೇ ಕೆಲವರು ಬೆನ್ನ ಹಿಂದೆ ಮಾತಾಡುವುದುoಟು. ಎದುರು ನಗುವಿನ ಮಾತು ಒಳಗೆ ಏನಿದೆಯೋ ದೇವರಿಗೆ ಗೊತ್ತು! ಆದರೆ ಒಂದಂತೂ ನಿಜ. ಬೆನ್ನ ಹಿಂದೆ ಮಾತಾಡುವವರ ಬೆನ್ನು ಇತರರಿಗೆ ಬೆನ್ನು ಮಾತಿಗೆ ಅವಕಾಶ ಕೊಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ಹೀಗೆ ಬೆನ್ನಿನ ಬಗೆಗೆ ಹೇಳುವುದಾದರೆ ಪುಟಗಟ್ಟಲೆ ಆದೀತು. ಭಗವಾನ್ ಶ್ರೀ ರಾಮಚಂದ್ರ   ಶೂರ್ಪನಖಿಯ ಬೆನ್ನಲ್ಲಿ ಬರೆದ ವಿಚಾರ ಆಕೆಗೆ ತಿಳಿಯದೇ ತನ್ನ ಮೂಗು ಕಿವಿಯನ್ನು ಕಳೆದುಕೊಂಡಳಲ್ಲ. ಮೂಗಿನ ತುದಿಯ ಕೋಪವೂ ಕೂಡಾ ಹಾಗೇ. ಅದೇ ರೀತಿ ಇಲ್ಲ ಸಲ್ಲದ್ದು ಕೇಳಿದ ಕಿವಿಗೂ ಅದೇ ಗತಿಯೇ.  ನಮ್ಮ ಬೆನ್ನು ಕಾಣಬೇಕಾದರೆ  ಕನ್ನಡಿಯೆದುರು ನಿಂತು ನೋಡಬೇಕಾಗುತ್ತದೆ. ಇಲ್ಲಿ  ಬೇರೊಂದು ವಸ್ತು ಪೂರಕವಾಗಿ ಇರಬೇಕು. ಹಾಗೆಯೇ ಮನಸ್ಸಿನ ಭಾವಗಳಿಗೆ ಜೀವ ತುಂಬಲು ಸದ್ವಿಚಾರ ಮಂಥನವಾಗುತ್ತಿರಬೇಕು.

       ಬೆಳಿಗ್ಗೆ ಏಳುವುದು ಜಡವೆನಿಸಿದರೂ ಮನಸ್ಸಿಗೆ  ಏಳುವಿಕೆ  ಹಿತವನ್ನೇ ಆಮೇಲೆ  ನೀಡುತ್ತದೆ. ಏಳುವ ಮೊದಲು ಮನಸ್ಸು ತರ್ಕಕ್ಕೊಳಗಾಗುತ್ತದೆ. ಬೇಡವೆಂದು ಇನ್ನಷ್ಟು ಮುದುಡುವಂತೆ ಮಾಡುತ್ತದೆ. ಆದರೆ ಹೊಸ ಬೆಳಕು, ಹೊಸ ದಿನ ಎಂದು ಬಗೆ ಬಗೆಯಾಗಿ  ಯೋಚಿಸಿ ಚಿಂತನೆ ಮಾಡಿ ಮನಸ್ಸಿಗೆ ಉಣಿಸಿದಾಗ ಪ್ರತಿದಿನವೂ  ಹೊಸತಿದೆಯೆಂದು ಅನ್ವೇಷಿಸುತ್ತ ಹೊರಟು ಎದ್ದೇಳುವಂತೆ ಪ್ರೇರೇಪಿಸುತ್ತದೆ. ಇದುವೇ ದಿನವೂ ನವ ತಾರುಣ್ಯ ಹೊಮ್ಮಿಸುವ ಪರಿಕರಗಳಂತೆ ಉಲ್ಲಾಸ ದೊರಕಿಸುತ್ತವೆ. ಬದುಕು ಮಾಧುರ್ಯವಾಗಲು  ಇಷ್ಟು ಸಾಕು.

                ಇನ್ನಷ್ಟು ಬೇಕು ಎಂಬ ಅಂತರಂಗದ  ತುಡಿತವನ್ನು ಧ್ಯಾನದ ಪ್ರಯಾಣಕ್ಕೆ ಮುಡುಪಿಡಬೇಕು.ಮನದ ಮೂಲೆಯಲ್ಲಿ ಏಳುವ ಅಲೆಗಳ ಆಶಾಕಿರಣವು  ಉಲ್ಲಾಸದ ತೆಕ್ಕೆಗೆ ಜಾರಿ ಬದುಕು ಸಂತೋಷದ ಪಾರದರ್ಶಿತ್ವ ತಲುಪುತ್ತದೆ. ಆಗ ಎಲ್ಲಾ ಇದ್ದರೂ ಏನೂ ಇರದ  ನಿಗರ್ವಿಯಾಗಿರುವ ಭಾವನೆ ಬರುತ್ತದೆ. ಇದುವೇ ಬದುಕಿಗೆ ಆದರ್ಶವನ್ನು ತರುತ್ತದೆ. ಈ ಪ್ರಕೃತಿಯಲ್ಲಿ ಯಾವುದೂ ಒಂದೇ ತೆರನಾಗಿರುವುದಿಲ್ಲ. ಅಂದ ಮೇಲೆ ಅವರಂತೆ ನಾವಿಲ್ಲ, ಇವರಂತೆ ಅವರಿಲ್ಲ ಎಂದು ಸಮಜಾಯಿಷಿ ನೀಡುವುದು ಸಲ್ಲ. ಬಂದು ಹೋಗುವ ನಡುವೆ ಎಲ್ಲಾ ವ್ಯಾಮೋಹಗಳು ಮನಸ್ಸಿನಲ್ಲಿ ಉಳಿದು ಅನುಭವಗಳ ಸಾಗರದಲ್ಲಿ ಅಲೆಗಳ ಹಾಗೆ ದಿನವೂ ಅಪ್ಪಳಿಸುತ್ತಿರುತ್ತದೆ. ಬದುಕಿನ ಬವಣೆಗಳೂ ಹಾಗೇ ಬಂದು ಸಾಗುತ್ತಿರುತ್ತವೆ. ಕಾಲು ದಾರಿಯಲ್ಲಿ ನಡೆಯುವಾಗ ಮನಸ್ಸು ಆಕಾಶದಲ್ಲಿಯೂ ಸಾಗಬಹುದು. ಸಂತೆಯಲ್ಲೂ ಇರಬಹುದು, ನೀರೊಳಗಿನ ಮೀನಿನ ಯೋಚನೆಯಲ್ಲಿರಬಹುದು. ಆದರೆ ದಾರಿಯ ಗಮನ ಕಡಿಮೆಯಾದಾಗ ಮುಳ್ಳು ಚುಚ್ಚಿ ನೋವಾದಾಗ ಮನಸ್ಸು  ವಾಸ್ತವಕ್ಕೆ ಬರುವಂತೆ ಕಷ್ಟಗಳು ಬಂದಾಗ  ದೇವರ ಒಲುಮೆಗೆ  ಕಾತರಿಸುತ್ತದೆ. ಬೇರೆ ಯಾವುದೂ ಬೇಡವಾಗುತ್ತದೆ.  ಹೊರಗಿನ ಪ್ರಾಪಂಚಿಕ ಸೆಳೆತ ಎಷ್ಟೇ ಇದ್ದರೂ  ರಾತ್ರಿಯ ಆರಾಮದ ನಿದ್ದೆಗೆ ಒಂದು ಸೂರು ಅಗತ್ಯ ಬೇಕಾಗುವಂತೆ ಮನವು ಆರಾಮದಲ್ಲಿ  ವಿರಮಿಸಲು ಯೋಗ  ಧ್ಯಾನಗಳ ಅಗತ್ಯವಿದೆ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter