ಚೌಕಟ್ಟು

ಮನೆಯ ಮುಂದಿನ ಉದ್ಯಾನದಲ್ಲಿ
ಮರಳು ತುಂಬಿಸಿಟ್ಟಿರುವರು
ಒಂದು ಸಿಮೆಂಟಿನ ಚೌಕಟ್ಟಿನಲ್ಲಿ
 
ದಿನವೂ ಮಕ್ಕಳು ಓಡಿ ಬರುವರಿಲ್ಲಿ 
ಅರಳಿದ ಕಂಗಳ ಜೊತೆಗೆ
ಮರಳಿನಾಟದ ಹುಮ್ಮಸ್ಸಿನಲ್ಲಿ

 ಮರಳಲ್ಲೇ ಕೂತು ಕೈ ಕಾಲುಗಳ ಹೂತು
ಆಡುವ ಬಗೆ ಬಗೆಯ ಆಟಗಳು
 ಮೊಗೆದು ಸುರಿದು ಅಳೆದು ಸೋತು

ತಂದೆ ತಾಯಂದಿರ ಗಸ್ತು ಎಡಬಲದಲಿ
ಬೀಳಬಾರದು ಮರಳ ಕಣಗಳು
ಮಗುವಿನ ಮುಗ್ಧ ಕಣ್ಣುಗಳಲಿ

ಬರಿಗೈಯ ಮಗುವೊಂದು ರಾಗ ತೆಗೆದಿತ್ತು 
 ಬೊಗಸೆ ತುಂಬಿದ ಉಸುಕು
ಚಿಗುರು ಬೆರಳಿನ ನಡುವೆ ಜಾರಿಹೋಗಿತ್ತು 

ಜಾಣ ಮಗುವೊಂದರ ಕೈಲಿ ಪುಟಾಣಿ ಸೌಟು
ಮರಳ ಮೊಗೆದು ತುಂಬಲು
ಮತ್ತೆ ಪುಟ್ಟದೊಂದು ಬಣ್ಣದ ಬಕೆಟ್ಟು

 ನೀರು ಸೋಕಿಸಿದಾಗ ಮರಳ ಬೆಟ್ಟ
 ತಾಳುತ್ತೆ ಬೇಕಾದ ಆಕಾರ
ಮರಳ ಮನೆ, ಗೋಪುರ, ಗುಮ್ಮಟ

ಮರಳಿನಾಟ ಆಡುವುದು ಎಷ್ಟು ಸರಳ
ಪಾಲಿಸಿದರೆ ಸಾಕು ಒಂದೇ ನಿಯಮ
 ಆಡಬೇಕು ಚೌಕಟ್ಟಿನಲ್ಲೇ ಎರಚದೇ ಮರಳ

                                   - ಸುಚಿತ್ರಾ ಹೆಗಡೆ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಚೌಕಟ್ಟು”

  1. ನಾ.ದಾಮೋದರ ಶೆಟ್ಟಿ

    ಕವನ ಸರಳ ಎನಿಸಿದರೂ ಅದಕ್ಕೊಂದು ತಾತ್ವಿಕ ಹಿನ್ನೆಲೆಯಿದೆ. ಓದಿ ಸಂಭ್ರಮಿಸಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter