ಹೃದಯದ ಹುಡುಗಿ

ವಸುಧೆಯೊಳು ಹದವಾಗಿ ಬೆರೆತು
ಋತುಮಾನಗಳ ಹಸಿಬಿಸಿಯನರಿತು
ಸೂರ್ಯ ಚಂದ್ರ ತಾರೆಗಳಾದಿಯನು ಮಡಿಲಲಿ ತೂಗುವ
ಅವಳೆಂದರೆ  ಪ್ರಕೃತಿಯ ಹೆಣ್ಣು
ಮೊಗ್ಗೊಡೆವ ಗುಟ್ಟಿನ ದನಿಗೆ ಮೆಲ್ಲಗೆ ಅರಳುವ
ಹನಿಹನಿಯೊಳಗಿನ ಮಿನುಗುವ ಕಣ್ಣು

ಶೃತಿ ಮೀರದಂತೆ ಸುಪ್ತ ಸಂಚಾರಿ ಭಾವಗಳನು ದಾಟಿ
ಎದೆಯ ನಗೆ ಹಾಡಿನ ರಾಗದಲೆಗಳನು ಮೀಟಿ
ಗೆಲುವಿನಾಲಯದ ಬೆನ್ನೇರಿದ ಅವಳು
ಭಾವ ವಿಭಾವಗಳ ಸಹಪಯಣಿಗಳು

‘ಬದುಕನ್ನು ಆಳವಾಗಿ ಅನುಭವಿಸುವ ಹೆಣ್ಣೋರ್ವಳು
ಭಾವ ಸಾಗರದಲ್ಲಿ ಈಜುವುದು ನೋಡಿ’
ಎಂದು ಹುಬ್ಬೇರಿಸಿ ನೋಡುವಂತೆ
ಭಾವಧ್ಯಾನದಲಿ ಲೀನವಾಗುವಳು

ಬರಗಾಲದ ಗೂಡಿನಲ್ಲಿ ಭಾವನೆಗಳ ತೆಪ್ಪಗಿರಗೊಡದೆ
ಜೀವಭಾವಗಳ ಜೊತೆ ಹೃದಯದ ಮಾತಿಗೂ ಕಿವಿಯಾಗಿ
ಭಾವಧಾರೆಯೊಳು ಕೈಹಿಡಿದು ನಡೆಸುವಳು
ಪ್ರೀತಿ ಎಂಬ ಜೀವಾಮೃತಕೆ ಸಮುದ್ರ ಮಂಥನವಾಗುವಳು

ಮುಗ್ಧತೆಯ ಭಾವಗಳಿಗೊಂದಿಷ್ಟು
ತುಂಟತನವನೂ ಬೆರೆಸುವ ಅವಳೊಂದಿಗಿನ ಸ್ನೇಹವು
ಭಾವಜೀವಿಗಳಿಗೆಲ್ಲ ಗಂಧದ ಜೊತೆ ಗುದ್ದಾಡಿದಂತೆ
ಮೊಗ್ಗು ಮನಸನು ಮುದ್ದಾಡಿದಂತೆ
ಅವಳನು ಓದಿದ ತಕ್ಷಣದ ಕ್ಷಣಗಳನೂ ಮೀರಿ
ಕಾಡುವ ಅವಳೀಗ ಭಾವಗಳ ಹುಡುಗಿ

“ಅವಳು ಪ್ರಕೃತಿಯವಳು ಭಾವಗಳೊಂದಿಗೆ ವಿಹರಿಸುವವಳು
ಆಂತರ್ಯದಲಿ ಹುಟ್ಟಿ ಅಲ್ಲಿಯೇ ಪ್ರತಿಧ್ವನಿಸಿ
ಜೀವದ ಗೆಳತಿಯಾಗಿ ಚಿಗುರಿ ಬೆಳೆದವಳು
ಆದರೆ ನನಗವಳು ಚೂರು ಚೂರಾಗುವುದು ಬೇಕಿಲ್ಲ
ಪೂರ್ತಿಯಾಗಿ ಸಿಗಬೇಕು ಮುಂದೊಂದು ಜನುಮದಲಿ”
ಎನುವ ಭಾವದೊಲವಿನ ಮನಸ್ಸಿಗೆ
ಅವಳೀಗ ಹೃದಯದ ಹುಡುಗಿ

  ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

13 thoughts on “ಹೃದಯದ ಹುಡುಗಿ”

  1. ಶೃದ್ಧಾನಂದ

    ಹೌದು, ಹೃದಯದ ಹುಡುಗಿ … ಚಿಗುರಿದಾಗ ಮೊಗ್ಗುಗಳು ಮುಂದೆ ಎಲೆ ಬಳ್ಳಿ ಹೂವಾಗಿ … ಅರಳುವ ಬೆಡಗಿ …
    ಪ್ರಕೃತಿಯ ಸಾನಿದ್ಯವಿರಲಿ … ಒಳಿತಾಗಲಿ
    ಶುಭಂ

  2. ಶಶಿಕಲಾ ಹೆಗಡೆ

    ಸುಂದರವಾದ ಭಾವಯಾನ..
    ಅಭಿನಂದನೆಗಳು ಅನಿತಾ.

  3. parvathi s poojari

    ಕವಿತೆ ತುಂಬಾ ಚೆನ್ನಾಗಿದೆ ಅನಿತಾ .ಅವಳು ಹೃದಯ ಮಾತೆ,,, ಭೂಮಿಗೀತೆ ಹೆಣ್ಣು

  4. ಕವಿತೆ ತುಂಬಾ ಚೆನ್ನಾಗಿದೆ. ಮುಗ್ಧ ಹೆಣ್ಣಿನ ಜೀವನ ಕವಿತೆ ಯಲ್ಲಿ ಅಂದವಾಗಿ ವರ್ಣಿಸಲ್ಪಟ್ಟಿದೆ, ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter