ಸತ್ಯದರ್ಶನ   ( ವಿಡಂಬನೆ )

ಮೊದಲು  ಪೊಲೀಸ್ ಸೆಕ್ಯೂರಿಟಿ ಜೀಪ್ ಆಂಬುಲೆನ್ಸ್ ಸೈರನ್ ಮೀರಿಸುವ ಶಬ್ದದೊಂದಿಗೆ…..’ಕೆಂಪು ದೀಪ’ ವನ್ನು ಹೊತ್ತ ಘನತವೆತ್ತ ಮಂತ್ರಿಗಳ ಹಡಗಿನಂತಹ ಕಾರು ಅದರ  ಹಿಂದೆ…..ಅದನ್ನು ಹಿಂಬಾಲಿಸುತ್ತ ಮಂತ್ರಿಗಳ    ವಂದಿ  ಮಾಗಧರರನ್ನು ಹೊತ್ತ  ಟ್ರಾಕ್ಸ್…

ಎಲ್ಲವೂ  ಸರ್ಕಾರದ  ಅನುದಾನಿತ ಘಟಕದ ದೊಡ್ಡ ಫ್ಯಾಕ್ಟರಿಯ ಮುಖ್ಯ ಗೇಟಿನ  ಮುಂದೆ ಮೆರವಣಿಗೆಯಲ್ಲಿ  ಬಂದಂತೆ ಸಾಲಾಗಿ ನಿಂತವು…

ಗುಂಡಣ್ಣ ಸಜ್ಜೆಹೊಲವೆಂಬ ಶಿರೋನಾಮೆಯ ಮಂತ್ರಿಗಳ  ಕಾರು ಬಂತು… ಬಾಗಿಲಲ್ಲೇ ಅವರೆನ್ನುದುರುಗೊಳ್ಳಲು ಸಜ್ಜಾಗಿದ್ದ ಫ್ಯಾಕ್ಟರಿಯ ಛೇರ್ಮನ್, ಪರ್ಸನಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಕಾರ್ಮಿಕ ನಾಯಕರು  ಇತ್ಯಾದಿ ಅಧಿಕಾರಿಗಳ  ತಂಡ  ಭವ್ಯ  ಸ್ವಾಗತವನ್ನೇ  ನೀಡಿತು ಮಂತ್ರಿಗಳಿಗೆ. ಮಂತ್ರಿಗಳ  ಹಿಂಬಾಲಕರ  ತಂಡ ಛೇರ್ಮನ್ ರ  ಆಫೀಸ್ ರೂಮಿನಲ್ಲಿ  ಆಸೀನವಾಯಿತು…

ಛೇರ್ಮನ್ ಜೊತೆಗೆ  ಮಂತ್ರಿ  ಗುಂಡಣ್ಣ ಸಜ್ಜೆಹೊಲ ಕಾರ್ಖಾನೆಯ ಸಮಗ್ರ  ವೀಕ್ಷಣೆಗೆ ಹೊರಟರು.

ಅಲ್ಲಲ್ಲಿ ವರ್ಕ್ ಸ್ಪಾಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯವರನ್ನು ಅವರು  ಮಾಡುತ್ತಿರುವ ಕೆಲಸದೊಂದಿಗೆ ಪರಿಚಯಿಸತೊಡಗಿದರು  ಛೇರ್ಮನ್.

“ಇವರು  ಮಿ. ರಾಮನಾಥ್  ಅಂತ.. ನಮ್ಮಲ್ಲಿಯ  ದಕ್ಷ  ಫೋರ್ಮನ್. ನಮ್ಮ ದೇಶದಲ್ಲಿ ತಯಾರಾದ ಬಿಡಿ ಭಾಗಗಳನ್ನೇ  ಉಪಯೋಗಿಸಿ ಉತ್ಪಾದನೆಯನ್ನು ದ್ವಿಗುಣಗೊಳಿಸಿ ಕಾರ್ಖಾನೆಗೆ ಹಾಗೂ ದೇಶಕ್ಕೆ ಲಕ್ಷಾಂತರ ವಿದೇಶಿ  ವಿನಿಮಯದ ಹಣ  ಉಳಿಸಿದ್ದಾರೆ ಸಾರ್.. ಇವರಿಗೆ ಈ ವರ್ಷದ  ‘ಶ್ರಮವೀರ’ ಪ್ರಶಸ್ತಿ  ಕೂಡಾ ಸಿಕ್ಕಿದೆ..”ಎಂದು ಛೇರ್ಮನ್  ಹೊಗಳಿದರು ಮಂತ್ರಿಗಳಿಗೆ 

ರಾಮನಾಥರನ್ನು ಪರಿಚಯಿಸುತ್ತಾ…

“ತುಂಬಾ ಸಂತೋಷ… ನಿಮ್ಮಂತಹ  ಉತ್ಸಾಹಿ ಕ್ರಿಯಾಶೀಲಿಗಳ ಮೇಲೆಯೇ ನಮ್ಮ ಕೈಗಾರಿಕೆ ಉದ್ಯಮದ  ಪ್ರಗತಿ ಆಧಾರ  ಪಟ್ಟಿರೋದು…ನಿಮ್ಮ ಸಾಧನೆಗೆ ಇಡೀ ದೇಶಾನೇ  ಹೆಮ್ಮೆ ಪಡುತ್ತೆ… ಕೀಪ್ ಇಟ್ ಅಪ್ ಮಿ. ರಾಮನಾಥ್…ಕಂಗ್ರಾಟ್ಸ್ ” ಎಂದು ಮೆಚ್ಚುಗೆ ಸೂಚಿಸಿ  ಕೈ  ಕುಲುಕಿದರು.

“ಇವರಿಗೆ ಪ್ರೊಡಕ್ಷನ್ ಮ್ಯಾನೇಜರ್ ಎಂದು ಬಡ್ತಿ ಕೊಡಬೇಕೆಂದು  ಕಾರ್ಮಿಕ ಸಂಘಗಳು  ಒತ್ತಾಯಿಸುತ್ತಿವೆ . ಅದಕ್ಕೆ ನಮ್ಮ ಬೆಂಬಲ ಕೂಡ  ಇದೆ.  ನಮ್ಮ ಆಡಳಿತ  ಮಂಡಳಿಯ  ಅಧ್ಯಕ್ಷರಾದ ನಿಮ್ಮ ಅಭಿಪ್ರಾಯ ಏನು ಸಾರ್? ” ಎಂದು ಕೇಳಿದರು  ಛೇರ್ಮನ್.

ಮಂತ್ರಿ ಗುಂಡಣ್ಣ ಸಜ್ಜೆಹೊಲ ಛೇರ್ಮನ್ ರತ್ತ  ದುರುಗುಟ್ಟಿ ನೋಡುತ್ತಾ  “ಕಾರ್ಮಿಕರ  ಬಡ್ತಿಯಂತಹ  ಗಂಭೀರ  ಮತ್ತು ಆಡಳಿತಾತ್ಮಕ ವಿಷಯಗಳನ್ನು  ಹೀಗೆ ಎಲ್ಲರೆದುರಿಗೆ ಚರ್ಚಿಸೋದು  ಸರಿಯಲ್ಲ… ನಿಮ್ಮ ಛೇಂಬರ್ ನಲ್ಲಿ ಕೂತು  ಮಾತನಾಡೋಣ…” ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದ  ಮಂತ್ರಿ ಗುಂಡಣ್ಣ ಸಜ್ಜೆಹೊಲರನ್ನು ಹಿಂಬಾಲಿಸಿದರು ಎಲ್ಲರೂ.

ಛೇರ್ಮನ್ ಕ್ಯಾಬಿನ್ ನಲ್ಲಿ ಸಭೆ ಶುರುವಾಯಿತು.. ಅಲ್ಲಿ ಕಾರ್ಮಿಕರಿಗೆ ಪ್ರವೇಶ  ಇಲ್ಲ ಬದಲಾಗಿ  ಅವರ ಮುಖಂಡರಿಗೆ  ಮತ್ತು ಮಂತ್ರಿಗಳ  ಛೇಲಾರಿಗೆ ಮಾತ್ರ…

ಛೇರ್ಮನ್ ರನ್ನು ಹತ್ತಿರ ಕರೆದು  ಪಿಸುದನಿಯಲ್ಲಿ ನುಡಿದರು  ಮಂತ್ರಿಗಳು

“ಛೇರ್ಮನ್ ಸಾಹೇಬರೇ…ನಮ್ಮ ಸಂಸ್ಥೆಯಲ್ಲಿ ಯಾವುದೇ ಉದ್ಯೋಗಿ ಪದೋನ್ನತಿ ಪಡೆಯಬೇಕಾದರೆ  ಅವರು  ಮೂರು ವಿಷಯಗಳಲ್ಲಿ  ತೇರ್ಗಡೆ ಆಗಿರಬೇಕು.  ಅವು ಯಾವುದೆಂದರೆ   ಯಾವುದೇ ಕಾರ್ಮಿಕನಾದರೂ ನಮ್ಮ ಸ್ವಂತ ಜಿಲ್ಲೆಯವರಾಗಿರಬೇಕು….   ನಮ್ಮ ಪಕ್ಷಕ್ಕೆ ಅವರು ಮಾನಸಿಕವಾಗಿ ಹತ್ತಿರವಿದ್ದು ಬೆಂಬಲರಾಗಿರಬೇಕು  ಮತ್ತು ನಮ್ಮದು ಜಾತ್ಯತೀತ ರಾಷ್ಟ್ರವಾದ್ದರಿಂದ ಕನಿಷ್ಠ ಪಕ್ಷ ಅಲ್ಲ,  ‘ಕಡ್ಡಾಯವಾಗಿ’ ನಮ್ಮ ಜಾತಿಯವರೇ  ಆಗಿರಬೇಕು….ಅಲ್ಲಾರೀ… ಬಸ್ ಡ್ರೈವರ್ ಯಾವುದೇ ಆಫಘಾತ  ಮಾಡದೆ  ಇಪ್ಪತ್ತೈದು ವರ್ಷದಿಂದ  ಬಸ್ ಚಾಲನೆ  ಮಾಡ್ತಿದ್ದಾನೆಂದರೆ ಅವನಿಗೊಂದು  ‘ಬೆಸ್ಟ್ ಡ್ರೈವರ್’ ಅಂತ ಅವಾರ್ಡ್  ಕೊಡ್ತಾರೆ…. ಅದೇ ತರಹ ತುಂಬಾ ಬ್ಯುಸಿ ಸರ್ಕಲ್ ನಲ್ಲಿ ಒಬ್ಬ ಪೊಲೀಸ್  ಚೆನ್ನಾಗಿ ಟ್ರಾಫಿಕ್  ಕಂಟ್ರೋಲ್ ಮಾಡುತ್ತಾನೆಂದರೆ ಅವನಿಗೊಂದು   ‘ಬೆಸ್ಟ್ ಟ್ರಾಫಿಕ್ ಪೊಲೀಸ್’ ಮೆಡಲ್ ಕೊಡ್ತಾರೆ….ಅದು ಬಿಟ್ಟು…ಕೂಡಲೇ ಪದೋನ್ನತಿ  ಕೊಟ್ಟು ಅವರಿಗೆ ಮತ್ತು ಅವರ  ವೃತ್ತಿಗೆ ಅಪಮಾನ ಮಾಡಬಾರದು  ಅಲ್ಲದೇ ಅವರ  ನೈತಿಕತೆಗೆ  ಧಕ್ಕೆ ಉಂಟು ಮಾಡಬಾರದು, ತಿಳಿಯಿತೇ…

 ಈಗ ರಾಮನಾಥ್ ವಿಷಯಕ್ಕೆ  ಬರೋಣ.  ಓಕೆ.. ಅವರಿಗಾಗಲೇ ‘ಶ್ರಮ ವೀರ’ ಪ್ರಶಸ್ತಿ ಸಿಕ್ಕಿದೆ. ಅವರು ಫೋರ್ಮನ್ ರಾಗಿದ್ದುಕೊಂಡೇ

ನೂತನ ತಂತ್ರಜ್ಞಾನ ಕಂಡು  ಹಿಡಿದು ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡಿ ನಮ್ಮ ಕಾರ್ಖಾನೆಗೆ ಹಾಗೂ ದೇಶಕ್ಕೆ ಲಕ್ಷಾಂತರ ವಿದೇಶಿ  ವಿನಿಮಯ

ಉಳಿಸಿದ್ದಾರೆ..ಒಪ್ಪುತ್ತೇನೆ. ಆದರೆ 

ಈಗ ಅವರಿಗೆ ಬಡ್ತಿ ನೀಡಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಮಾಡಿದರೆ  ಕಾರ್ಖಾನೆಗೆ ಮತ್ತು ದೇಶಕ್ಕೆ ವಿದೇಶಿ  ವಿನಿಮಯ ಉಳಿತಾಯವಾಗೋದು  ಹೇಗೆ?… ಇಂತಹ  ಪ್ರತಿಭಾವಂತರಿಗೆ  ಪ್ರಮೋಷನ್ ಕೊಟ್ಟು ಅವರ  ಉತ್ಸಾಹಕ್ಕೆ ತಣ್ಣೀರು ಎರಚೋದು ಬೇಡ!  ಇವರನ್ನು ಅದೇ ಸ್ಥಾನದಲ್ಲಿ ಕನಿಷ್ಠ ಹತ್ತು ವರ್ಷವಾದರೂ ಉಳಿಸಿದರೆ  ನಮ್ಮ ಕಾರ್ಖಾನೆಗೆ ಹಾಗೂ ದೇಶಕ್ಕೆ ಕೋಟ್ಯಾಂತರ ವಿದೇಶಿ  ವಿನಿಮಯ ಉಳಿಯುತ್ತೆ. ಕೈಗಾರಿಕೆ ಬೆಳವಣಿಗೆಯಿಂದ ಇದು ಮುಖ್ಯವಲ್ಲವೇ?… ನೀವು ಪದೋನ್ನತಿ  ಕೊಡಬೇಕೆಂದರೆ  ನಮ್ಮ ಜಾತಿಯಲ್ಲೇ ಮತ್ತು ಚುನಾವಣೆ ವೇಳೆ ನಮ್ಮ ಪಕ್ಷವನ್ನು ಬೆಂಬಲಿಸಿದ ಸಾಕಷ್ಟು  ಕಾರ್ಮಿಕರಿದ್ದಾರೆ… ಅವರಿಗೆ  ಕೊಡಿ.. ರಾಮನಾಥ್  ಅಂಥವರಿಗೆ ಕೊಟ್ಟು  ಪದೋನ್ನತಿಯ ಘನತೆಗೆ ಅವಮಾನ ಮಾಡಬೇಡಿ… “

ಎಂದು  ಛೇರ್ಮನ್ ಕಿವಿ ಹಿಂಡಿ ಹಿತವಚನ  ಬೋಧಿಸಿದರು ಮಂತ್ರಿಗಳಾದ  ಗುಂಡಣ್ಣ ಸಜ್ಜೆಹೊಲ!

        *****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಸತ್ಯದರ್ಶನ   ( ವಿಡಂಬನೆ )”

  1. ಧರ್ಮಾನಂದ ಶಿರ್ವ

    ರಾಜಕೀಯ ವಿಡಂಬನಾತ್ಮಕ ಲೇಖನ ಸೊಗಸಾಗಿದೆ

  2. The stores reflect the present political and social situation prevailing in the country.Congratulations to Sri M Raghavendra Rao for telling the story in a lucid form

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter