ಇರುವೆ

ಇರುವೆ ಎನ್ನುವುದು ಇರುವೆಯೇ ಎನುವಂತೆ
ಸಾಲಾಗಿ ಹೋಗುತ್ತಿದ್ದುವು ಅಂಗಳದಿ ಹೊರಗೆ
ಕಚ್ಚಿಸಿಕೊಂಡು ಬಂದ ಮೊಮ್ಮಗ ಚೀರಿ ಹೇಳಿದ:
‘ಅಜ್ಜ, ಕೊಲ್ಲಿ ಅವುಗಳನ್ನು ಒಂದೂ ಬಿಡದೇ !’

‘ಕೊಲ್ಲುವುದು ಬೇಡ, ನೋಡದರ ಒಗ್ಗಟ್ಟು
ಹೇಗೆ ಹೋಗುತ್ತವೆ ಒಂದು ಇನ್ನೊಂದಾಗಿ ತಮ್ಮ
ಗುರಿಯೊಂದೆ ಎಂಬಂತೆ. ನಮಗೆ ಒಬ್ಬೊಬ್ಬರಿಗೆ
ಒಂದೊಂದು ಗುರಿ, ಯಾಕದಕೆ ಚಿಂತೆ?’ ಎಂದೆ.

ಒಳಗಿದ್ದ ಇವಳು ಕೇಳಿಸಿಕೊಂಡು ಬಂದಳು ಹೊರಗೆ
‘ಬಹುತ್ವ ಎಲ್ಲಿದೆ ಅಲ್ಲಿ ನಮ್ಮ ಹಾಗೆ?
ಇರುವೆಗಳು ಮಾದರಿಯಲ್ಲ ನಮ್ಮ ಮಕ್ಕಳಿಗೆ
ಗುರುವಾಗಬೇಕಲ್ಲವೇ ನಾವು ನಮಗೆ?’

ಕೇಳಿಸಿಕೊಂಡು ಹೌದೆಂದೆ, ಆಮೇಲೆ ಕಂಡಿತು ಗುರುವೂ
ಗುರಿಯೂ ಒಂದಾಗಿ ಇರಲೆಂತು ಸಾಧ್ಯ?
ಭಿನ್ನಮತ ಸಹಮತಗಳೊಡನೆ ನಾವಿಲ್ಲವೇ?
ಇರುವೆ ಎನ್ನುವುದು ರೂಪಕವಲ್ಲ ನಮಗೆ!’

ಹೇಳಬೇಕೆನಿಸಿತದರ, ಅಷ್ಟರಲ್ಲಿ ಒಳನಡೆದು
ಇವಳು ತಂದಳು ಬೆಂಕಿ, ಉರಿದಿರುವೆ ಸಾಲು
ಕುರುಹಿಲ್ಲದಾಯಿತು, ನನ್ನ ಕಣ್ಣೆದುರಲ್ಲೆ
ಯುದ್ಧ ಇಲ್ಲದೆ ಗೆದ್ದ ಇವಳ ಕಣ್ಣು

                  ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಇರುವೆ”

  1. ಧರ್ಮಾನಂದ ಶಿರ್ವ

    ಕವಿತೆ ಚೆನ್ನಾಗಿದೆ.
    ಕಣ್ಣೆದುರಲ್ಲೆ ಯುದ್ಧವಿಲ್ಲದೆ ಗೆದ್ದ ಇವಳ ಕಣ್ಣು
    ಕವನದ ಕೊನೆಯ ದನಿಯನ್ನು ಗಟ್ಟಿಯಾಗಿಸಿದೆ.

    ಅತ್ಯುನ್ನತ ಸ್ಥಿತಿಯ ಗುರು ದೊರೆತಾಗ ಗುರುವೂ ಗುರಿಯೂ ಒಂದೇ ಆಗುವ ಸಾಧ್ಯತೆ ಇರುತ್ತದೆ.

    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter