ಮೂಲೀಮನಿ ಚುನಾವಣೆಯ ಪರಿ  ಅಂದು – ಇಂದು 

ಬಸ್ ಸ್ಟಾಂಡ್ ನಂತೆ  ಸದಾ ಬ್ಯುಸಿ ಇರುತ್ತಿದ್ದ ಗುಂಡಣ್ಣನ ಮೂಲೀಮನಿ ಮನೆ  ಈಗ ಒಂದು ವಾರದಿಂದ ಸರಕಾರಿ  ಆಸ್ಪತ್ರೆಯ ‘ಕೋವಿಡ್ ವಾರ್ಡ್’ ನಂತಾಗಿತ್ತು.

ಅಂದು

“ಹೌದು  ನಾನು ಐದು  ಲಕ್ಷ ಖರ್ಚು  ಮಾಡಿದೆ… ಪ್ರಚಾರ ಅದ್ದೂರಿಯಾಗಿ ಮಾಡಿದೆ… ನೂರಾರು ಜೀಪು – ಕಾರು-ಲಾರಿ-ಆಟೋಗಳನ್ನು  ಚುನಾವಣೆ ಪ್ರಚಾರಗಳಿಗೆ  ಬಳಸಿದೆ…ಸಾವಿರಾರು ಜನ (ಬಾಡಿಗೆ!) ವಿಶ್ರಾಂತಿ ಇಲ್ಲದೆ ಹಗಲೂ  ರಾತ್ರಿ ಪ್ರಚಾರ ಮಾಡಿದರು… ಆದ್ರೂ ನಾನು ಇಡುಗಂಟು  ಕಳೆದುಕೊಂಡೆ… ಆದರೆ  ನೀವು ಹ್ಯಾಗೆ ಗೆದ್ರಿ ಮೂಲೀಮನಿಯವರೇ…”ಎಂದು ವಿಧಾನ ಸಭೆಗೆ ಭರ್ಜರಿ ಬಹುಮತದಿಂದ ಪ್ರತಿಷ್ಠಿತ

 ಕ್ಷೇತ್ರದಿಂದ  ಆರಿಸಿ ಬಂದ ಮೂಲೀಮನಿಯವರನ್ನು ಅದೇ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಆನಂದ  ಕಟ್ಟಿಮನಿ   ಕೇಳಿದರು.

“ನಾನೇನು ತೋಡೆ ಖರ್ಚು ಮಾಡಿನೇನ್ರಿ.. ಕೊಪ್ಪರಿಗೆ ರೊಕ್ಕ ಸುರಿದೀನಿ… ಸೀರೆ, ಧೋತರ ಮನಿ ಮನಿಗೆ ಹೋಗಿ ಹಂಚೀನಿ… ಹೆಂಡದ  ಹೊಳೆ ಹರಿಸೀನಿ… ವೋಟಿಗಿಷ್ಟು ಅಂತ ರೇಟ್ ಫಿಕ್ಸ್ ಮಾಡಿ ಮತದಾರರನ್ನೂ ಖರೀದಿ ಮಾಡೀನಿ… ಪ್ರಚಾರಕ್ಕ ಸಿನಿಮಾದವರನ್ನೂ  ಕರಸೀನಿ.. ನಾನು ಗೆದ್ದರೆ ಆಕಾಶನಾ ನಿಮ್ಮ ಕೈಗಿ  ಒಪ್ಪಿಸ್ತೀನಿ… ಮಲಪ್ರಭಾನ್ನ  ತಂದು  ನಿಮ್ಮ ಮನಿ ಮುಂದು ಹರಸ್ತೀನಿ… ಹಂಗ  ಹಿಂಗ  ಅಂತ ಎಷ್ಟು ಛಲೋ ತೌಡು ಕುಟ್ಟಿದ್ದೆ… ಇಷ್ಟೆಲ್ಲಾ ಮಾಡಿದ್ದಕ್ಕೆ ಗೆಲ್ಲೋದಿರಲಿ ಡಿಪಾಸಿಟ್ಟರ ಉಳಿಬೇಕಲ್ಲ! ಅದೂ ಜಪ್ತ  ಆಗಬೇಕೆಂದ್ರೇನೂ? ನೀವು ಅದೇನು ಮೋಡಿ  ಮಾಡಿದ್ರಿ ಮೂಲೀಮನಿಯವರೇ  ಜನರಿಗೆ… ಈಗ ಹೆಂಗೂ ಗೆದ್ದೀರಿ… ಹೇಳಿದ್ರೂ ಲುಕ್ಸಾನ ಇಲ್ಲ ನೋಡ್ರಿ!” ಎಂದು ರಾಗ  ಎಳೆದರು  ಚುನಾವಣೆಯಲ್ಲಿ ಸೋತ  ಮತ್ತೊಬ್ಬ ಕ್ಯಾಂಡಿಡೇಟ್ ಹನುಮಂತಪ್ಪ  ಬಣ್ಣದ ಭಾವಿ.

ಮೂಲೀಮನಿಯವರು  ಒಮ್ಮೆ ಮೋಹಕವಾಗಿ  ಮುಗುಳ್ನಕ್ಕು ನುಡಿದರು.

“ಒಂದೊಂದು ಹಳ್ಳಿ – ಕೇರಿಗೂ ಹೋಗಿ ಹೇಳಿದೆ –  ನಿಮ್ಮ ಊರಿಗೆ ಸ್ಕೂಲು ತರ್ತೀನಿ… ಬೀದಿ ದೀಪ  ರಾತ್ರಿ ಹೊತ್ತು ಸರಿಯಾಗಿ ಉರಿಯಂಗ ವ್ಯವಸ್ಥ ಮಾಡ್ತೀನಿ… ಒಳಚರಂಡಿ  ಏರ್ಪಾಟು ಮಾಡಿಸ್ತೀನಿ… ಬೋರ್   ಹಾಕಿಸ್ತೀನಿ… ದೀನ  ದಲಿತರ  ಏಳಿಗೆ ಮಾಡ್ತೀನಿ… ನಿಮ್ಮ  ಉದ್ಧಾರಕ್ಕೆ ಟೊಂಕ  ಕಟ್ಟಿ ನಿಲ್ತಿನಿ…ಸ್ಥಳೀಯ  ಸಮಸ್ಯೆಗಳು  ಏನಿದ್ದರೂ ಬಗೆ ಹರಿಸ್ತೀನಿ… ಮನಿಗೊಬ್ಬನಿಗೆ  ಕೆಲ್ಸ ಕೊಡಿಸ್ತೀನಿ… ನಿಮ್ಮ ಸಲುವಾಗಿ  ನಾನು ಏನು ಮಾಡೋಕು ಸಿದ್ಧ

 ಅಂತ ಸುಳ್ಳ ಸುಳ್ಳೇ ಭರವಸೆ  ಕೋಡಂಗಿಲ್ಲ ನಾನು…”

 ಮೂಲೀಮನಿ  ಮಾತು ಸ್ವಲ್ಪ ನಿಲ್ಸಿ ಸೋತ  ಇಬ್ಬರು ಅಭ್ಯರ್ಥಿಗಳನ್ನು  ತುಂಟ ನೋಟದಲ್ಲಿ ನೋಡುತ್ತಾ ಮುಂದುವರಿಸಿದರು.

“ಈಗ ಓಟು ಕೊಟ್ಟು ನನ್ನ ಗೆಲ್ಲಿಸಿದರೆ ಮತ್ತೈದು ವರ್ಷ ಈ ಹಳ್ಳಿ – ಕೇರಿಗೆ 

ಕಾಲಿಡೋದಿಲ್ಲ.. ಈ ಕ್ಷೇತ್ರದ ದಿಕ್ಕಿಗೆ ತಲೆನೇ ಇಟ್ಟು ಮಲಗಂಗಿಲ್ಲ.  ಅಷ್ಟೇ ಅಲ್ಲ ನನ್ನ ಈ ಹಾಳು ಮುಸಡೀನೂ ತೋರಿಸಿ ನಿಮಗ ತೊಂದರೆ  ಕೊಡಂಗಿಲ್ಲ … ಅಸೆಂಬ್ಲಿಯಾಗ ಅಪ್ಪಿ ತಪ್ಪಿಯು ಬಾಯಿ ಬಿಚ್ಚುವದಿಲ್ಲ.. ಕೈ  ಮಾತ್ರ ಎತ್ತೀನಿ ಅದೂ ನಾಯಕರು  ಎತ್ತು ಅಂದಾಗ  ಮಾತ್ರ…ಒಟ್ಟಿನ್ಯಾಗ ನಿಮಗ  ನನ್ನಿಂದ ಯಾವ ತ್ರಾಸು ಕೊಡಂಗಿಲ್ಲ….ಹೀಗಂತ  ಮನಃಪೂರ್ವಕವಾಗಿ  ನಿಮ್ಮ ಮೇಲೆ ಆಣೆ ಇಟ್ಟು ಹೇಳ್ತಿನಿ ” ಅಂತ ಮತದಾರರಿಗೆ  ನೇರವಾಗಿ ಅವರ  ಮನಸಿಗೆ ನಾಟುವಂಗ  ಹೇಳಿದೆ ಮತ್ತು ಅದನ್ನೇ ಕರಪತ್ರಗಳನ್ನು  ಛಾಪಿಸಿ ಹಂಚಿದೆ. ಬಹುಷಃ  ಇದ್ದದ್ದು ಇದ್ದಂಗೆ ಹೇಳಿದ್ದಕ್ಕೋ ಏನೋ  ಚುನಾವಣೇಗ ನಾನು ಅಖಂಡ ವಿಜಯ ಸಾಧಿಸಿದೆ…

ಎಂದು ಅವಸರವಸರಾಗಿ ಕಾರಣ ಕೊಟ್ಟು ಕೂಡಲೇ  ಬೆಂಗಳೂರಿಗೆ  ಹಾರಲು  ಸಜ್ಜಾದರು  ನೂತನ ಶಾಸಕ ಮೂಲೀಮನಿ ಯವರು.

ಇಂದು 

ವಿಧಾನ ಸಭೆಯ ಚುನಾವಣೆಯ ಫಲಿತಾಂಶ ಘೋಷಣೆಯಾಗಿ ಆಗಲೇ  ಒಂದು ವಾರವಾಗಿತ್ತು. 

‘ ಗೆಲುವಿಲ್ಲದ  ಹ್ಯಾಟ್ರಿಕ್ ಸರದಾರ ‘ ಎನ್ನುವ ಹೆಸರನ್ನೇ  ಖಾಯಂ ಆಗಿಸಿ ಕೊಂಡು ಸೋತು ಸೊರಗಿ ಸೂತಕದಂತಹ  ಮನೆಯಲ್ಲಿ ತಣ್ಣಗೆ  ಅಡಗಿದ್ದ ಪರಾಜಿತ ಅಭ್ಯರ್ಥಿ ಗುಂಡಣ್ಣ ಮೂಲೀಮನಿ. ಅದೇ ಊರಲ್ಲಿನ ಇನ್ನೋರ್ವ ಅಭ್ಯರ್ಥಿ ಚಂದ್ರು   ಮೆಣಸಿನಕಾಯಿ  ಚುನಾವಣೆಯಲ್ಲಿ ಗೆದ್ದು  ಬೀಗಿದ್ದ. ಒಂದು ವಾರದಿಂದ ಅವರ ಮನೆಯ  ಮುಂದೆ ಶುರುವಾದ  ಪಟಾಕಿಗಳ  ಶಬ್ದ  ಈಗಷ್ಟೇ  ಕಡಿಮೆಯಾಗಿತ್ತು.

 ಹಿಂಬಾಲಕರ  ಸಭೆಯನ್ನು  ಸೋಲಿನ ಪರಾಮರ್ಶೆಗಾಗಿ ಅಂದು ‘ಚಿಂತಕರ  ಚಾವಡಿ’  ಎಂದು ಹೆಸರಾಗಿದ್ದ ತನ್ನ ಖಾಸಗಿ ಔಟ್ ಹೌಸ್ ನಲ್ಲಿ  ರಾತ್ರಿ ಕರೆದಿದ್ದರು ಗುಂಡಣ್ಣನ ‘ಕಿಚನ್ ಕ್ಯಾಬಿನೆಟ್’ ಸದಸ್ಯರು.  ಬಸ್ ಸ್ಟಾಂಡ್ ನಂತೆ  ಸದಾ ಬ್ಯುಸಿ ಇರುತ್ತಿದ್ದ ಗುಂಡಣ್ಣನ ಮೂಲೀಮನಿ ಮನೆ  ಈಗ ಒಂದು ವಾರದಿಂದ ಸರಕಾರಿ  ಆಸ್ಪತ್ರೆಯ ‘ಕೋವಿಡ್ ವಾರ್ಡ್’ ನಂತಾಗಿತ್ತು. ಇದ್ದ ಹಿಂಬಾಲಕರಲ್ಲಿ  ಆಗಲೇ  ಕೆಲವರು  ಪಕ್ಷಾಂತರ  ಮಾಡಿದ  ನೋವು ಗುಂಡಣ್ಣನ ಮುಖದಲ್ಲಿ ಕಾಣುತ್ತಿತ್ತು… ಅವರಾದರೂ  ಏನು ಮಾಡಿಯಾರು..ಪಾಪ…ಅವರೂ  ಬದುಕಬೇಕಲ್ಲವೇ?

ಸೋಫಾದಲ್ಲಿ ವಿಷದವಣ್ಣನಾಗಿ ಕೂತ  ಗುಂಡಣ್ಣ ಮೂಲೀಮನಿಯನ್ನು  ಅಂತರಂಗಿಕ ಸಖರು ಸುತ್ತುವರೆದಿದ್ದರು….

“ಅಣ್ಣಾ… ನಿನಗಾಗಿ ಮೂರು ತಿಂಗಳು ಹಗಲೂ  ರಾತ್ರಿಯೆನ್ನದೆ  ಎಲ್ಲ ಹಳ್ಳಿಗಳನ್ನು  ರೌಂಡ್ ಹಾಕಿದೆ. ಯುವ ಜನರಿಗೆ  ಮೋಜು – ಮಸ್ತಿ ಏರ್ಪಡಿಸಿದೆ… ಸ್ವ ಸಹಾಯ  ಗುಂಪುಗಳಿಗೆ ಹಣ  ಹಂಚಿದೆ  ಮತ್ತೆ ತಮ್ಮ ಸದಸ್ಯರಲ್ಲಿ  ಅವರು ಹಂಚಿಕೊಂಡು ಅಣ್ಣನಿಗೆ ಓಟು ಹಾಕಲೆಂದು!… ವಯಸ್ಸಾದವರನ್ನು  ಹುಡುಕಿ ಅವರ  ಮನೆಗೇ ಹೋಗಿ ಅವರಲ್ಲಿ  ಕೆಲವರು  ಅನರ್ಹರಿದ್ದರೂ  ವಿಧವಾ  ವೇತನ, ತಿಂಗಳ  ವೃದ್ಯಾಪ್ಯ ಪಿಂಚಿಣಿ, ಅಂಗವಿಕಲರ  ಮಾಶಾಸನ, ಕಿಸಾನ್ ಯೋಜನ, 

ಬಿ ಪಿ ಎಲ್ ಕಾರ್ಡ್ ಇತ್ಯಾದಿಗಳನ್ನು ಅರ್ಜೆಂಟ್ ಆಗಿ ಮಾಡಿಸಿಕೊಟ್ಟು ತಮ್ಮ ಮತವನ್ನು ‘ಬಡವರ ಬಂಧು’ ಗುಂಡಣ್ಣನಿಗೇ ಹಾಕಬೇಕೆಂದು ಅಡ್ಡಡ್ಡ – ಉದ್ದುದ್ದ ಬಿದ್ದು ಬೇಡಿಕೊಂಡಿದ್ದೆ… ಆದರೆ  ಎಲ್ಲಿ ಎಡವಟ್ಟು  ಆಯಿತೋ ಶಿವಾ…ಗೊತ್ತಾಗಲಿಲ್ಲ…” ಎಂದು ಮಮ್ಮುಲ ಮರಗಿ ನುಡಿದ ಗುಂಡಣ್ಣನ ಎಡಗೈ  ಬಂಟ  ಉದ್ದಾನಪ್ಪ ಉಳ್ಳಾಗಡ್ಡಿ.

ಗುಂಡಣ್ಣ ನೀರಸವಾಗಿ ಉಳ್ಳಾಗಡ್ಡಿಯತ್ತ ಒಮ್ಮೆ ದೃಷ್ಟಿ ಹಾಯಿಸಿ ನೋಡಿ ಸುಮ್ಮನಾದ.

“ಮಾಮ… ನಾನು…ನನಗೆ  ಒಪ್ಪಿಸಿದ ಎಲ್ಲ ಏರಿಯಾಗಳನ್ನು  ಸುತ್ತಿದೆ.  ಮಾನ್ಯ ಮತದಾರರಾದ ಪುರುಷರಿಗೆ ಹಣ, ಹೆಂಡ  ವಿತರಣೆ ಮಾಡೀನಿ… ಸ್ತ್ರೀಯರಿಗೆ ಸೀರೆ, ಕುಪ್ಪುಸ  ಮತ್ತು ಮೇಕ್ಅಪ್ ಕಿಟ್ ಜಾತಿ – ವಯಸ್ಸಿನ ಭೇದವಿಲ್ಲದೆ  ಎಲ್ಲರಿಗೂ ಸಮನಾಗಿ  ಹಂಚೀನಿ…

ಅವರ  ಮನಿಗಳಿಗೆ  ‘ಕರೋನ  ಕಿಟ್’ ತರಹ ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ‘ಕಿರಾಣಿ ಕಿಟ್’ ಮನೆ ಮನೆಗೆ ಮುಟ್ಟಿಸಿದೆ. ರೋಡ್ ಶೋ ಪ್ರಚಾರವಂತೂ ಸಿನಿಮಾ – ಟಿ ವಿ ನಟ

ನಟಿಯರೊಂದಿಗೆ ಭರ್ಜರಿಯಾಗಿ ಮಾಡಿಸಿದೆ… ಆದರೆ ನಮ್ಮ ಧೀಮಂತ  ನಾಯಕ  – ನನ್ನ ಪ್ರೀತಿಯ ಮಾಮ ಗುಂಡಣ್ಣ  ಮೂಲೀಮನಿ ಯಾಕ ಸೋತ  ಅನ್ನುವದು ಮಾತ್ರ ಈಗಲೂ ‘ಚಿದಂಬರ ರಹಸ್ಯ’  ಆಗ್ಯದ ನನ್ನ ಪಾಲಿಗೆ…” ಎಂದು ದುಃಖಿಸುತ್ತಾ ನುಡಿದ ಅಳಿಯ  ಮಹಾಂತಪ್ಪ  ಲಿಂಬೆಕಾಯಿ.

ದೃಷ್ಟಿ ಗೊಂಬೆಯಂತೆ  ಕೂತ  ಗುಂಡಣ್ಣನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.

“ಅಣ್ಣಾ.. ನಾನು ನನ್ನ ಟಿವಿ 111(ನೂರಾ ಹನ್ನೊಂದು) ಮುಖಾಂತರ ನಿನ್ನ  ಬಗ್ಗೆ ಸಾಕಷ್ಟು ಪ್ರಚಾರ ಮಾಡಿದೆ… ಡಿಬೇಟ್ ಡಿಸ್ಕಶನ್ ನಲ್ಲಿ ಎಲ್ಲರೂ ನಮ್ಮವರೇ ಇರುವಂತೆ  ನೋಡಿಕೊಂಡು ನೀನು  ಚುನಾವಣೆಯಲ್ಲಿ ನೀಡಿದ  ಆಶ್ವಾಸನೆಗಳಿಗೆ ಹೆಚ್ಚು ಒತ್ತು ಕೊಟ್ಟು  ಮತದಾರರನ್ನು  ನಿನ್ನತ್ತ ಸೆಳೆಯಲು ಅವಿರತ ಪ್ರಯತ್ನ  ಮಾಡಿದೆ…

 ಬೂತಿಗೊಂದು  ವಾಟ್ಸಪ್ಪ್  ಗ್ರೂಪ್ ಮಾಡಿ ಅದರಲ್ಲಿ  ನಿನ್ನ ಚುನಾವಣೆ ಭರವಸೆಗಳನ್ನು  ಹೈಲೈಟ್ ಮಾಡಿಸಿದೆ.. ಇನ್ನು ಇಂದಿನ  ಯುವ  ಜನತೆಯ  ‘ಉಸಿರಾದ’   ಫೇಸ್ಬುಕ್, ಟ್ವಿಟರ್, ಟೆಲಿಗ್ರಾಂ  ಇತ್ಯಾದಿಗಳಲ್ಲಿ ನಿನ್ನನ್ನು ಹೆಚ್ಚು ಜನ ಫಾಲೋ  ಮಾಡಿದಂತೆ  ಕೃತಕ  ಅಂಕಿ ಸಂಖ್ಯೆಗಳಿಂದ ಜಿಗ್ ಜಾಗ್ ಮಾಡಿ ಎದುರಾಳಿ ಚಂದ್ರು  ಮೆಣಸಿನಕಾಯಿಗಿಂತ ಜನಪ್ರಿಯತೆಯಲ್ಲಿ  ನೀನು ಬಹಳ  ಮುಂದಿರುವಂತೆ ತೋರಿಸುವ ನಾಟಕವನ್ನು  ನಮ್ಮ ಟೀಂ  ಅಚ್ಚುಕಟ್ಟಾಗಿ ಮಾಡಿತು.. ಸ್ಥಳೀಯ  ದಿನಪತ್ರಿಕೆಗಳಲ್ಲಿ ಮತ್ತು ಟಿವಿ 111(ನೂರಾ ಹನ್ನೊಂದು) ಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆ  ಮಾಡಿಸಿ ಅದರಲ್ಲಿ  ನೀನು ಎದುರಾಳಿಗಿಂತ ಹೆಚ್ಚಿನ ಓಟನ್ನು ಗಳಿಸುವದರಲ್ಲಿ ಸಂಶಯವಿಲ್ಲ ಎಂಬ ಸನ್ನಿವೇಶವನ್ನು  ನಮ್ಮ ಸ್ಥಳೀಯ ಮೀಡಿಯಾ ಕ್ಲಬ್  ಮಾಡುವಂತೆ ನೋಡಿದೆವು…. ಇಷ್ಟೆಲ್ಲಾ ಗ್ರೌಂಡ್ ವರ್ಕ್ ಮಾಡಿದರೂ ನಮ್ಮ ಗುಂಡಣ್ಣ ಸೋತರು  ಎಂದರೆ ನಮಗೆ ನಂಬಲಾಗುತ್ತಿಲ್ಲ… ಬಹುಶಃ ನಮ್ಮ ಹೊಸ ಯುವ  ಮತದಾರರು  ವಾಟ್ಸಪ್ಪ್, ಫೇಸ್ಬುಕ್, ಟ್ವಿಟರ್ ಮತ್ತು ಟೆಲಿಗ್ರಾಂಗಳಲ್ಲಿ  ಚುನಾವಣೆ ದಿನ ಕೂಡಾ  ದಿನನಿತ್ಯದಂತೆ ಬ್ಯುಸಿ ಇದ್ದುದರಿಂದ… ಪಾಪ…  ಅವರೆಲ್ಲಾ ಮತ  ಕೇಂದ್ರಗಳತ್ತ  ತಲೆ  ಹಾಕಲು ಸಮಯ  ಸಿಕ್ಕಿಲ್ಲ ಅನಿಸುತ್ತೆ…..ಹೀಗಾಗಿ ಮತದಾನ  ಕಡಿಮೆ ಆಗಿದ್ದು ಕೂಡಾ ಒಂದು ಕಾರಣ ಅಂತ ನನ್ನ ಸ್ಪಷ್ಟ ಅಭಿಪ್ರಾಯ… ” ಎಂದು ಪ್ರಚಾರದ ಉಸ್ತುವಾರಿ ವಹಿಸಿದ್ದ  ಅಂದಾನಪ್ಪ  ಎಮ್ಮಿಯವರ್ ವಿವರವಾಗಿ  ವರದಿ  ನೀಡಿದ.

ಗೌತಮ  ಬುದ್ಧನಂತೆ  ನಿರ್ಲಿಪ್ತನಾಗಿ ಕೂತ  ಗುಂಡಣ್ಣನ ಮುಖಭಾವದಲ್ಲಿ  ಆ ಕ್ಷಣದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ…

ಒಂದೈದು  ನಿಮಿಷ ಸ್ಮಶಾನ  ಮೌನ  ಮಡುಗಟ್ಟಿತ್ತು  ಆ-ಶೋಕ  ಸಭೆಯಲ್ಲಿ.

ದುಃಖವನ್ನು ಹೃದಯದಲ್ಲಿ  ಅಡಗಿಟ್ಟಿಸಿಕೊಂಡು ಭಾರವಾದ  ಸ್ವರದಿಂದ ಮಾತನ್ನು ಆರಂಭಿಸಿದ

ಗುಂಡಣ್ಣ ಮೂಲೀಮನಿ…

“ನಾನು ನನ್ನ ರಾಜಕೀಯದ ಅಕ್ಷರಭ್ಯಾಸನವನ್ನ ಎರಡು  ಸಲ ನಗರ ಸಭೆ  ಚುನಾವಣ್ಯಗ ನಿಂತು ಎರಡೂ  ಸರ್ತಿ ಇಡುಗಂಟನ್ನು  ಕಳಕೊಂಡು ಬಳಿಕಾನಾ  ಆರಂಭಿಸೀನಿ… ಮೊಟ್ಟ ಮೊದಲ ಸಾರಿ ರಾಜ್ಯ ಮಟ್ಟದ  ಪಕ್ಷದಿಂದ ನನ್ನ ಜಾತಿಯವರು  ಅತೀ ಹೆಚ್ಚು  ಮತದಾರರು ಇದ್ದ ಪ್ರದೇಶವನ್ನ ಖುದ್ದಾಗಿ ಆರಿಸಿದೆ… ಏಕೆಂದರೆ  ನಮ್ಮದು ‘ಜಾತ್ಯಾತೀತ’ ರಾಷ್ಟ್ರವಲ್ಲವೇ?…. ಆದರೆ  ಅಲ್ಲಿ ಸೋತೆ….ನಂತರ  ಆ ಪಕ್ಷಕ್ಕೆ ‘ಸೋಡಾ ಚೀಟಿ’ ಕೊಟ್ಟು ಎರಡನೇ ಸಲ ಅಖಿಲ  ಭಾರತ  ಮಟ್ಟದ  ರಾಜಕೀಯ  ಪಕ್ಷಕ್ಕೆ ಧುಮುಕಿ  ಮತ್ತೊಮ್ಮೆ ನನ್ನ ಅದೃಷ್ಟ  ಪರೀಕ್ಷೆ ಮಾಡಿದೆ… ಉಹೂ… ಆಗ ಸಹ ಮತದಾರ ಪ್ರಭು ಯಾಕೋ  ನನ್ನ ಕೈ  ಹಿಡಿಯಲಿಲ್ಲ… ನಾನಿದ್ದ ಪಕ್ಷದಲ್ಲಿ  ‘ಉಸಿರುಗಟ್ಟಿಸುವ’ ವಾತಾವರಣವಿದ್ದುದರಿಂದ ‘ನಮ್ಮ ಜನರ  ಹಿತರಕ್ಷಣೆಗಾಗಿ’  ಮತ್ತೊಮ್ಮೆ ಪಕ್ಷ ಬದಲಾಯಿಸಿ  ನಿಂತೆ… ಎಲ್ಲ ಚುನಾವಣ್ಯಗ ಮಾಡುವಂಗ   ಓಟಿಗಿಷ್ಟು ಎಂದು ರೇಟ್ ಫಿಕ್ಸ್  ಮಾಡಿ ರೊಕ್ಕವನ್ನ ನಾನು ನಿಮ್ಮ ಮುಖಾಂತರ ಖರ್ಚು  ಮಾಡಿಸೀನಿ… ‘ಚುನಾವಣಾ ಆಯೋಗ’  ಸೂಚಿಸಿದ ವೆಚ್ಚದ  ಮಿತಿಯನ್ನ ನಿಜ ಹೇಳಬೇಕೆಂದರೆ  ಒಂದೇ ದಿನದಾಗ ನಾನು  ದಾಟಿಸಿಬಿಟ್ಟೆ ….ಇಲ್ಲಿಯವರೆಗೆ  ಸುಮಾರು 3-4 ಕೋಟಿ ನಮ್ಮ ಮತದಾರರಿಗೆ  ಬ್ಯಾರೆ ಬ್ಯಾರೆ ರೂಪದಾಗ ಖರ್ಚು  ಮಾಡೀನಿ… ಅಲ್ದ ನಮ್ಮ ಜಾತೀ 

ಪೀಠಾಧಿಪತಿಗಳನ್ನ,  ನಮ್ಮ ಪಕ್ಷದ ನಾಯಕರುಗಳನ್ನ  ನನ್ನ   ಪರವಾಗಿ ‘ಮತ ಬೇಟೆ’  ಸಲುವಾಗಿ ಇಡೀ ಕ್ಷೇತ್ರದ ತುಂಬಾ ಓಡಾಡಿಸೀನಿ….ಎಂದು ಒಂದು ಕ್ಷಣ ಮಾತನ್ನು ನಿಲ್ಲಿಸಿ ಸಭೆಯಲ್ಲಿ  ಚುನಾವಣೆಗಾಗಿ ದುಡಿದು ತನ್ನನ್ನು ಮತ್ತೊಂದು ಸಲ ‘ಸೋಲಿಸಿದ’ ತಂಡದತ್ತ  ಒಂದು ಸಾರಿ  ಅನುಕಂಪದಿಂದ ನೋಡಿ  ದೀರ್ಘ ನಿಟ್ಟುಸಿರು ಹಾಕಿ ಅರೆ ಕ್ಷಣ  ಮಾತು ನಿಲ್ಲಿಸಿದ ಗುಂಡಣ್ಣ.

ನಂತರ  ಸಾವರಿಸಿಕೊಂಡು ಕಣ್ಣೊರೆಸಿಕೊಳ್ಳುತ್ತಾ ಮತ್ತೆ ಮುಂದುವರೆಸಿದ  ಗುಂಡಣ್ಣ  ಮೂಲೀಮನಿ.

” ನಾನು  ಹಣ, ಲಿಕ್ಕರ್, ಗಿಫ್ಟ್ ವೊಚರ್ ಇತ್ಯಾದಿಗಳನ್ನ   ನನ್ನ ಗೌರವಾನ್ವಿತ  ಮತದಾರರ  ಪಾದ  ಪದ್ಮಗಳಿಗೆ  ಸಮರ್ಪಸಿ  ಮನವಿ ಮಾಡಿದೆ – ನಿಮ್ಮ ಸೇವೆ ಮಾಡೋ ಭಾಗ್ಯ ಇದೊಂದು ಸರ್ತಿ ಕರುಣಿಸ್ರಿ… ಈಗ ವಿಧಾನ ಸಭೆ ಚುನಾವಣೆಗಾ ಸತತ ಮೂರನೆಯ  ಸಲ ನಿಲ್ತಿದ್ದೀನಿ…ಹಿಂದೆ ಎರಡೂ  ಸಲ ಜಿದ್ದು ಹಿಡಿದು ನನ್ನನ್ನು ಸೋಲಿಸಿರೀ.. ಇರ್ಲಿ….ನನಗ  ಬೇಜಾರಿಲ್ಲ…ಈ ಸಲ ಹಳೆಯ  ಸೋಲುಗಳು  ಅನುಕಂಪದ ಮತಗಳಾಗಿ  ಬದಲಾಗ್ತಾವ  ಅಂತ ನಂಬುತೀನಿ….. ನಾನು ನಿಮ್ಮ ಮನಿ ಸ್ವಂತ ಮಗ  ಅಂತ ಅಂದ್ಕೊಳ್ರಿ.. ….ನನ್ನಂಗ  ಎಲ್ಲ ಅಭ್ಯರ್ಥಿಗಳು  ನಿಮ್ಮತ್ತ ಬಂದು  ನಾನು ಕೊಟ್ಟಂಗ  ರೊಕ್ಕ , ಲಿಕ್ಕರ್, ಸೀರಿ,  ಉಡುಗೊರಿ ಇತ್ಯಾದಿಗಳನ್ನ ಕೊಡ್ತಾರ .. ನೀವು ಬ್ಯಾಡ ಅನ್ನಬ್ಯಾಡ್ರಿ…. ಮನಿ  ಮಟ ಬಂದ  ಲಕ್ಷ್ಮಿನ ದೂರ ಸರಿಸಬ್ಯಾಡ್ರಿ ….ಅವುಗಳನ್ನ  ತಗೋರಿ.. ಆದರೆ  ನಿಮ್ಮ ಅಮೂಲ್ಯ ವೋಟು ಮಾತ್ರ ‘ನಿಮ್ಮ ಮನಿ  ದ್ಯಾವರ  ಮತ್ತ ನಿಮ್ಮ ಮನಸಾಕ್ಷಿ’  ಒಪ್ಪುವಂಗ ಹಾಕರಿ ಎಂದು ಎಲ್ಲ ಮತದಾರರಿಗೆ ಕೈ  ಜೋಡಿಸಿ ಒಂದಲ್ಲ ಎರಡು  ಸರ್ತಿ ಮನವಿ ಮಾಡಿಕೊಂಡೆ…. ಆದರ ಅನುಕಂಪದ  ಓಟು ಇರಲಿ  ಸಾಮಾನ್ಯ  ಓಟು ಸಹ  ನನಗ  ಬೀಳದ ಈಗ ‘ಹ್ಯಾಟ್ರಿಕ್’ ಸೋಲನುಭವಿಸಿದ ಕುಖ್ಯಾತಿಗೆ ಪಾತ್ರನಾಗಿಬಿಟ್ಟೆ…. ” ಎಂದು ಹೆಚ್ಚು ಕಡಿಮೆ ಗದ್ಗತ  ಸ್ವರದಾಗ ನುಡಿದ ಗುಂಡಣ್ಣ ಮೂಲೀಮನಿ.

ಅದನ್ನು ಕೇಳಿ ಇದ್ದಕ್ಕಿದ್ದಂತೆ ಜೋರಾಗಿ ಅಳಹತ್ತಿದ ಗುಂಡಣ್ಣನ ಬಲಗೈ  ಬಂಟ  ಮತ್ತು ಚುನಾವಣೆಯ ವಿಶೇಷ ವಿಶ್ಲೇಷಕ ತಾಯಪ್ಪ ತೆಂಗಿನಕಾಯಿ. ನಂತರ 

ರೋಧಿಸುತ್ತ ಹೇಳಿದ ಎಲ್ಲರಿಗೂ ಕೇಳುವಂತೆ ಗಟ್ಟಿ ಸ್ವರದಲ್ಲಿ..

“ಅಣ್ಣಾ… ನೀನು ದೊಡ್ಡ ತಪ್ಪು ಮಾಡಿಬಿಟ್ಟಿ. ಮತದಾರರಿಗೆ  ‘ ನಿಮ್ಮ ದೈವ  ಸಾಕ್ಷಿ ಮತ್ತು ಮನಸಾಕ್ಷಿಗಣುವಾಗಿ ‘ ಮತ  ಹಾಕ್ರೀ ಎಂದು ಹೇಳಲೇಬಾರದಿತ್ತು… ಏಕೆಂದರೆ  ಅವರೆಡನ್ನು   ಯಾರು  ಎಲ್ಲರಿಗಿಂತ ಹೆಚ್ಚು ರೊಕ್ಕ  ಕೊಡ್ತಾರೋ ಅವರಿಗೆ ಪ್ರತಿ ಚುನಾವಣೆಯಲ್ಲಿ  ಮೀಸಲು ಇಡ್ತಾರ… ಅಲ್ಲದೇ ಈ ಧಂದೆ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಾಗಿನಿಂದ  ಚಾಲು ಅದ….ಅದರ  ಬದಲು  ನನ್ನ  ರೊಕ್ಕಾನು  ಸೇರಿಸಿ ಎಲ್ಲರಿಂದ ತಗೊಳ್ರಿ…ಆದರೆ  ನಿಮ್ಮ ಅಮೂಲ್ಯ ಓಟು ಮಾತ್ರ  ನನ್ನ ಚಿನ್ಹೆಯಾದ  ‘ಮೂರು ನಾಮಕ್ಕೆ’ ಹಾಕ್ರೀ ಎಂದು ಹೇಳಬೇಕಿತ್ತು…ಅದರ  ಬದಲು  ‘ನಿಮ್ಮ ಓಟು  ನಿಮ್ಮ ಆತ್ಮ ಸಾಕ್ಷಿಗೆ’ ಬಿಟ್ಟಿದ್ದು  ಅಂದದ್ದು ತಪ್ಪಾಯಿತು ಅಣ್ಣಾ…..” ಎಂದು ಚೀರಿದ..

ಈಗ ಗುಂಡಣ್ಣ ಮೂಲೀಮನಿಗೆ ತನ್ನ ಸೋಲಿಗೆ ಇರುವ ನೂರಾ ಎಂಟು ಕಾರಣದಾಗ ಇದು ಬಾಳ ದೊಡ್ಡದು ಮತ್ತ  ಸೋಲಿನ್ಯಾಗ ಹ್ಯಾಟ್ರಿಕ್  ಬಿರುದು ಸಿಗಲಿಕ್ಕೆ ಇದೇ ಮುಳುವಾಯಿತೆಂದು  ಗೊತ್ತಾಗಿ…. ಮುದಿ ಗಂಡನ ಶವದ  ಮುಂದೆ  ಹೊಸ ಹೆಂಡತಿಯಂಗ ಎಲ್ಲರಿಗೂ ಕಾಣುವಂಗ  ದೊಡ್ಡ ಶಬ್ದದಿಂದ ರೋಧಿಸಲು  ಶುರು  ಮಾಡಿದ… ಮತ್ತೊಮ್ಮೆ… ಮಗದೊಮ್ಮೆ ವಿರೋಚಿತ ಸೋಲು ಕಂಡ ಗುಂಡಣ್ಣ ಮೂಲೀಮನಿ!.. ಪಾಪ… ಪಾಪ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

13 thoughts on “ಮೂಲೀಮನಿ ಚುನಾವಣೆಯ ಪರಿ  ಅಂದು – ಇಂದು ”

  1. JANARDHANRAO KULKARNI

    ಲೇಖನ ಚೆನ್ನಾಗಿದೆ. ‘ ಆತ್ಮಸಾಕ್ಷಿ ‘ ಅನ್ನೋದನ್ನ ಹೇಗೆ ಬೇಕಾದರೂ ಬಳಸಬಹುದು. ತಾವು ಮಾಡಿದ್ದು ಸರಿ ಅನ್ನುವಾಗ ಆತ್ಮಸಾಕ್ಷಿ ಅಂದುಬಿಡುತ್ತಾರೆ.

      1. ಮ.ಮೋ.ರಾವ್

        ಲೇಖನ ಸುಂದರವಾಗಿ ಮೂಡಿದೆ.. ಪಾತ್ರೆಯಲ್ಲಿಯ ಹಾಲಿನಲ್ಲಿರುವ ಸತ್ವಕ್ಕಿಂತ, ಅದರ ಮೇಲಿರುವ ಬುರುಗು ಹೆಚ್ಚು ಆಕರ್ಷಣೀಯವಾಗುರುತ್ತದೆ. ಆದರೆ, ಬುರುಗು ಹೆಚ್ಚಾಗಿದೆ ಎಂದು ಗೊತ್ತಾದಾಗ, ಅದರ ಕೆಳಗಿರುವ ಸ್ವಲ್ಪ ಹಾಲನ್ನೂ ಜನ ತಿರಸ್ಕರಿಸುತ್ತಾರೆ ಎನ್ನುವುದನ್ನು ಕಥೆ ‘ಅಂದು ಇಂದು’ ಸ್ಪಷ್ಟಪಡಿಸುತ್ತದೆ. ಮಂಗಳೂರು ರಾಘವೇಂದ್ರರು ಈ ಚಿಕ್ಕ ಕಥೆಯಲ್ಲಿ ಚ್ಯವನಪ್ರಾಶದ ಹಾಗೆ ಸತ್ವವನ್ನು ತುಂಬಿದ್ದಾರೆ.

  2. JANARDHANRAO KULKARNI

    ‘ ಆತ್ಮಸಾಕ್ಷಿ ‘ ಅನ್ನೋದನ್ನ ಹೇಗೆ ಬೇಕಾದರೂ ಬಳಸಬಹುದು. ತಾವು ಮಾಡಿದ್ದು ಸರಿ ಅನ್ನುವಾಗ ಆತ್ಮಸಾಕ್ಷಿ ಅಂದುಬಿಡುತ್ತಾರೆ.

  3. ಧರ್ಮಾನಂದ ಶಿರ್ವ

    ರಾಜಕೀಯ ವಿಡಂಬನಾತ್ಮಕ ಬರಹ ಚೆನ್ನಾಗಿದೆ. ಚುಣಾವಣೆಯಲ್ಲಿ ನಡೆಯುವ ಎಲ್ಲ ಆಮಿಷಗಳನ್ನು ಉಲ್ಲೇಖಿಸುವುದರ ಮೂಲಕ ಮತದಾರ ಹೇಗೆ ಇಂತಹವರ ಕೈಯಲ್ಲಿ ಸಿಕ್ಕು ತನ್ನತನವನ್ನು ಕಳೆದುಕೊಳ್ಳುತ್ತಾನೆ ಅನ್ನುವ ಸತ್ಯವನ್ನು ಸೂಕ್ಷ್ಮವಾಗಿ ತೆರೆದಿಡುತ್ತಾ ಕೊನೆಗೆ ದೈವಸಾಕ್ಷಿ ಮತ್ತು ಆತ್ಮಸಾಕ್ಷಿಯ ಹೊಸವರಸೆಯೊಂದಿಗೆ ಕೊನೆಗೊಂಡ ಲೇಖನ ಮನಸ್ಸಾಕ್ಷಿಯನ್ನು ಚುಚ್ಚುವಂತಿದೆ.
    ಅಭಿನಂದನೆಗಳು

  4. A very good short story which reflect the unholy and unhealthy practices of present politics. Congratulations to Sri M Raghavendra Rao

  5. Covered all types of irregularities a candidate can think of resorting to in our so called fair election. Unfortunately there seems to be competition even in this sort of adopting such means.
    The satire is very good and appreciated.

  6. ನಿಮ್ಮ ಬರವಣಿಗೆಗೆ ಶಕ್ತಿ ಇದೆ. ರಾಜಕೀಯಕ್ಕೆ ಛಾಟಿ ಏಟಿನ ವಿಡಂಬನೆ ಬರಹ .

    ಮುರಳಿಧರ ಜೋಷಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter