ಚಿಂತಾಮಣಿ ಕೊಡ್ಲೆಕೆರೆ ಅವರ ಮಕ್ಕಳ ಪದ್ಯಗಳು 

1.ಚಟಪಟ 

ಉರಿಬಿಸಿಲು ಮಟಮಟ 
ಶೀನಿ ಬಾಯಿ ವಟವಟ 
ಅಮ್ಮ ಇಟ್ಟ  ಒಗ್ಗರಣೆ
ಹೊತ್ತುರಿಯಿತು ಚಟಪಟ

2.ಬಾವಿಯಲ್ಲಿ ಚಾವಿ 

ಹತ್ತಾಳಿನ ಬಾವಿ 
ಒಳಗೆ ಬಿತ್ತು ಚಾವಿ!

ರಂಗನ ಮನೆ ಚಾವಿ
ಅವರ ಹಿತ್ತಲ ಬಾವಿ!

ಕಟ್ಟೆ ಹಿಡಿದು ಬಾಗಿ 
ರಂಗ ಹೇಳಿದ ಕೂಗಿ 

ಬಾವಿ ಬಾವಿ ಕಾಪಾಡು 
ಚಾವಿ ಮೇಲಕೆ ಬೀಸಾಡು 

ಮಾತನಾಡಿತು ಬಾವಿ
ಹೇಗೆ ಎಸೆಯುವುದು ಚಾವಿ? 

ಮೀನೇ ಮೀನೇ ಕಾಪಾಡು 
ಚಾವಿ ಮೇಲಕೆ ಬೀಸಾಡು

ಮಾತನಾಡಿತು ಮೀನು 
ಹೇಗೆ ಎಸೆಯುವುದು ನಾನು?

ಕಪ್ಪೆ ಕಪ್ಪೆ  ಕಾಪಾಡು 
ಚಾವಿ ಮೇಲಕೆ ಬೀಸಾಡು

ಕುಪ್ಪಳಿಸುತ್ತಾ ಕಪ್ಪೆ 
ಹತ್ತಿತು ಬಾವಿಕಟ್ಟೆ 

ಚಾವಿ ಬೀಳಿಸಲು ನೀನು 
ಎತ್ತಿ ತರೋಕೆ ನಾನು 

ಕಂಡರೆ ಕಲ್ಲು ಎಸೀತಿ 
ಫಕ್ಕನೆ ಹಲ್ಲು ಕಿಸೀತಿ 

ರಂಗ ಹೇಳಿದ ತಪ್ಪಾಯ್ತು 
ಎಲ್ಲರೆದುರಿಗೇ ಒಪ್ಪಾಯ್ತು 

ಇವತ್ತಿನಿಂದ ಇಬ್ಬರೂ 
ಇಬ್ಬರಲ್ಲ ಒಬ್ಬರು 

ಕಪ್ಪೆ ಹಾರಿತು ಕೆಳಗೆ 
ಹುಡುಕಿತು  ಬಾವಿಯ ಒಳಗೆ 

ನೀರನು ಅಪ್ಪಳಿಸುತ್ತಾ 
ಕಪ್ಪೆ ಕುಪ್ಪಳಿಸುತ್ತಾ 

ಏರಿತು ಕಟ್ಟೆಬಾವಿ 
ಕೊಟ್ಟಿತು ರಂಗನ ಚಾವಿ 

ಹೇಳಿದ ರಂಗ ಖುಷಿಯಲಿ 
ಕಪ್ಪೆ ಸಂತತಿ ಬೆಳೆಯಲಿ 

ಇವತ್ತಿನಿಂದ ಈ ಬಾವಿ 
ಗೆಳೆಯಾ, ನಿನ್ನದೇ ಎಂದು ತಿಳಿ 

ಕಪ್ಪೆ ಹೇಳಿತು ಓ ರಂಗ 
ನಾನೂ ಬಯಸುವೆ ಸತ್ಸಂಗ!

ಬಾವಿ ನನ್ನದೇ ಆಗಿರಲಿ 
ನೀರು ನಿನ್ನದೇ ಎಂದು ತಿಳಿ 

ಹತ್ತಾಳಿನ ಆ ಬಾವಿ 
ತೆರೆಯಿತು ಸ್ನೇಹದ ಚಾವಿ!


3.ಮಕ್ಕಳ ಚಂದ್ರ 

ಪುಟ್ಟು ಆಟ ಮುಗಿತಾ ಇತ್ತು
ಪುಟ್ಟಿ ಆಟ ಮುಗಿತಾ ಇತ್ತು
ಕಮಲಾ ಆಟ ಮುಗಿತಾ ಇತ್ತು
ಸರಳಾ  ಆಟ ಮುಗಿತಾ ಇತ್ತು  
             ಬರತಾ ಇದ್ದ ಚಂದ್ರ 

ಪುಟ್ಟು ಪಾಠ ಓದ್ತಾ ಇದ್ದ
ಪುಟ್ಟಿ  ಪಾಠ ಓದ್ತಾ ಇದ್ಲು 
ಕಮಲಾ ಪಾಠ ಓದ್ತಾ ಇದ್ಲು 
ಸರಳಾ ಪಾಠ ಓದ್ತಾ ಇದ್ಲು 
               ನಗತಾ ಇದ್ದ ಚಂದ್ರ

ಪುಟ್ಟು ಊಟ ಮುಗಿತಾ ಇತ್ತು 
ಪುಟ್ಟಿ ಊಟ ಮುಗಿತಾ ಇತ್ತು
ಕಮಲಾ ಊಟ ಮುಗಿತಾ ಇತ್ತು
ಸರಳಾ ಊಟ ಮುಗಿತಾ ಇತ್ತು
                 ಇಣಕ್ತಾ  ಇದ್ದ ಚಂದ್ರ

ಅಜ್ಜ ಅಜ್ಜಿ  ಮಲಗಿದ್ದಾಯ್ತು 
ಅಪ್ಪ ಅಮ್ಮ ಮಲಗಿದ್ದಾಯ್ತು 
ಕಮಲಾ, ಸರಳಾ,ಪುಟ್ಟಾ, ಪುಟ್ಟೀ 
ಬನ್ನಿ ಹೊರಗೆ ಬನ್ನಿ ಬನ್ನೀ 
                  ಕರೀತಾ ಇದ್ದ ಚಂದ್ರ

ಪುಟ್ಟು ಮೊದಲಿಗೆ ಬಂದ  ಹೊರಗೆ 
ಪುಟ್ಟಿ ಪುಟೀತಾ ಬಂದಳು ಹೊರಗೆ 
ಕಮಲಾ ಸರಳಾ ಬಿಡ್ತಾರೇನು?
ಎಲ್ಲಾ ಬಂದರು ನಗತಾ ಹೊರಗೆ!
                  ಇಳೀತಾ ಇದ್ದ ಚಂದ್ರ 

ಪುಟ್ಟನ ಜೊತೆ ಆಟ ಆಡಿ 
ಪುಟ್ಟಿ ಜೊತೆ ಓಟ ಓಡಿ 
ಪುಟ್ಟ, ಪುಟ್ಟಿ, ಕಮಲಾ, ಸರಳಾ
ಎಲ್ಲರ ಜೊತೆಗೂ ಖೊ ಖೊ ಆಡಿ 
               ನಲಿತಾ ಇದ್ದ ಚಂದ್ರ 

ಪುಟ್ಟಾ ತಕೊ ಚಾಕ್ಲೆಟ್ ತಿನ್ನು 
ಪುಟ್ಟಿ ನೀನೂ ಚಾಕ್ಲೆಟ್ ತಿನ್ನು
ಕಮಲಾ ಸರಳಾ ನೀವೂ ತಿನ್ನಿ 
ತಾನೂ ಚಾಕ್ಲೆಟ್ ಬಾಯಲ್ಲಿಟ್ಟು 
               ಅಗಿತಾ ಇದ್ದ ಚಂದ್ರ 

ಹಾಗೇ ಮತ್ತೆ ಆಟ ಆಡಿ
ಹಾಗೇ ಮತ್ತೆ ಓಟ ಓಡಿ 
ಹಾಗೇ ಖೊ ಖೋ, ಕಬಡಿ, ಹಾಸ್ಯ
ಕಡೇಲೆರಡು ಹಾಡೂ ಹಾಡಿ 
                ಬರಲಾ ಅಂದ ಚಂದ್ರ 

ಟಾ ಟಾ ಬೈ ಬೈ ಚಂದಿರಮಾಮಾ 
ಬರತಾ  ಇರು  ಚಂದಿರಮಾಮಾ
ಆಡ್ತಾ ಕುಣಿತಾ ಚಾಕ್ಲೆಟ್ ಬಿಸ್ಕಿಟ್ 
ತರತಾ ಇರು  ಚಂದಿರಮಾಮಾ 
       ಹಾರತಾ ಹೋದ ಚಂದ್ರ 


4.
 ರಂಜನಾಳ ಸಿಟ್ಟು
 
'ಏನು ಮುದ್ದು ರಂಜನಾ, 
ಏಕೆ ಸಿಟ್ಟು ಬಂದಿದೆ?
ನನಗೆ ಹೇಳಬಾರದೆ?'

ಅಪ್ಪ ರಮಿಸಿ ಕೇಳಿದರೆ 
ಕಾರಣ - ಮರೆತಿದೆ 
ಸಿಟ್ಟು ಮಾತ್ರ ಉಳಿದಿದೆ!

'ಏಕೋ ಏನೋ ಆಗ ಅಲ್ಲಿ 
ನನಗೆ ಸಿಟ್ಟು ಬಂದಿತು 
ಇನ್ನೂ ಇಲ್ಲೆ ಉಳಿಯಿತು!'

ತಡೆದು ತಡೆದು ಹೇಳುತಾ 
ಸಿಟ್ಟು ಹಾರಿ ಹೋಯಿತು! 
ನೋಡುತಿದ್ದೆವಿಬ್ಬರೂ 
ದೂರ ದೂರ ಹೋಯಿತು!


5. ಕಾಗದದ ದೋಣಿ


ಕಾಗದದಲ್ಲಿ ದೋಣಿ
ಮಾಡ್ತಾ ಇದ್ದ ಮಾಣಿ  
ಮಳೆ ನೀರಲ್ಲಿ ತೇಲಿತೊ ಮುಳಗಿತೊ 
ನೀವೇ ಬಂದ್ಕಂಡ್ ಕಾಣಿ!

6. ಮಾರ್ಜಾಲ ಉವಾಚ 

ಏಕಾದಶಿಗೆ ಭಟ್ಟರ ಬೆಕ್ಕಿಗೆ 
ನಿರ್ಜಲ ಉಪವಾಸ 
"ಹಾಗೇನಿಲ್ಲ, ಏನು ಮಾಡುವುದು 
ಭಟ್ಟರ ಸಹವಾಸ!"

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ಚಿಂತಾಮಣಿ ಕೊಡ್ಲೆಕೆರೆ ಅವರ ಮಕ್ಕಳ ಪದ್ಯಗಳು ”

  1. Raghavendra Mangalore

    ತುಂಬಾ ಸುಂದರವಾದ ಮತ್ತು ಮಕ್ಕಳ ಬಾಯಲ್ಲಿ ಸುಲಭವಾಗಿ ಹರಿದಾಡುವ ಪದ್ಯಗಳು.

  2. ವಾಹ್, ಎಲ್ಲ ಕವನಗಳೂ ಸಕತ್ ಆಗಿವೆ . ಮತ್ತೆ ಮತ್ತೆ ಓದುವಂತಿವೆ.

  3. Bhattara sangha madida bekkigu upvasa bahala chandada kavite. nimma ella kavite makkala bayalli baruva hage ede. nimma manasinante.channageve

    MURALIDHAR JOSHI

  4. ಮಕ್ಕಳಿಗೂ ,ಕಲಿಸುವ ಹೆತ್ತವರಿಗೂ ಖುಷಿಕೊಡುವ ಪದ್ಯಗಳು..ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter