ಸುಗ್ಗಿಯ ಸಗ್ಗದಲಿ ‘ಸಂಕ್ರಾಂತಿ’

‘ಸಂಕ್ರಾಂತಿ ಬಂತು, ಹಿಗ್ಗನು ತಂತು, ಬೆಳೆ ಕಣವ ತುಂಬಿ ಸಗ್ಗದ ಸಿರಿ ತಂತು’ ಎಂದು ಹಾಡಿ ಕುಣಿಯುವ ಜನಪದರಿಗೆ ಸಂಕ್ರಾಂತಿಯೆಂದರೆ ಸುಗ್ಗಿಯ ಹಬ್ಬ. ‘ಸುತ್ತುವ ನೇಗಿಲ ಹಿಂದಿಹುದು ಈ ಜಗ’  ಎಂಬ ಕವಿವಾಣಿಯಂತೆ ಬೇಸಾಯದ ಹಿರಿಮೆಯನ್ನು ಎತ್ತಿಹಿಡಿಯುವುದೇ ಹಬ್ಬದ ಉದ್ದೇಶ. ಬೇಸಿಗೆ ಕಾಲದ ಅನುಭವ ಆರಂಭವಾಗುತ್ತಿದ್ದಂತೆ ಜನಪದರು ಆಚರಿಸುವ, ಪ್ರಕೃತಿ ಪೂಜೆಗಾಗಿಯೇ ಮೀಸಲಿರುವ ಹಬ್ಬವಾಗಿದೆ. ತಾವು ಮಾಡಿದ ಪಾಪಗಳ ನಿವಾರಣೆಗೆ ತೀರ್ಥಕ್ಷೇತ್ರಗಳಿಗೆ, ನದಿಗಳಿಗೆ, ನೀರಿನ ಮೂಲಗಳಿಗೆ ಹೋಗಿ ಪೂಜೆಯನ್ನು ಮಾಡಿ, ಪಾಪವನ್ನು ಪರಿಹರಿಸೆಂದು ದೇವರಲ್ಲಿ ವಿನಂತಿಸಿಕೊಳ್ಳುತ್ತಾರೆ.
		ಸುಗ್ಗಿಯು ಬಂದೈತೋ ಹಿಗ್ಗನು ತಂದೈತೋ
		ಸಗ್ಗದ ಸುಖವನ್ನು ಕೊಡಲಾಕ | ಬಸವಣ್ಣ
		ಹುಗ್ಗಿ ಹೋಳಿಗೆ ಮಾಡಿ ಉಣಲಾಕ |

	ಇಡೀ ವರ್ಷ ದುಡಿದು ದಣಿದ ರೈತರಿಗೆ ನೆಮ್ಮದಿಯ ನಿಟ್ಟುಸಿರು. ತಾವು ಉತ್ತಿ, ಬಿತ್ತಿ, ಬೆಳೆದ ಪೈರನ್ನು ಒಕ್ಕಲು ಮಾಡಿ, ಹುಲುಸಾದ ಬೆಳೆಯನ್ನು ಕಂಡು ಹಿರಿಹಿರಿ ಹಿಗ್ಗಿ ಸಂತೋಷಪಡುತ್ತಾರೆ. ಸುಗ್ಗಿಯು ಬಂದಿದ್ದು, ಹಿಗ್ಗಿಗಾಗಿ ಎಂದು ಬಂಧು-ಬಳಗದೊಡನೆ ಕೂಡಿಕೊಂಡು ಹುಗ್ಗಿ ಹೋಳಿಗೆಯನುಂಡು ಆನಂದದ ಸವಿಯನ್ನು ಹಂಚಿಕೊಳ್ಳುತ್ತಾರೆ.
ಮಕರ ಸಂಕ್ರಮಣದ ಹಿನ್ನಲೆ 
	ಭಾರತದಾದ್ಯಂತ ಸಂಕ್ರಾಂತಿ ಆಚರಿಸುತ್ತಾರೆ. ಸಂಕ್ರಾಂತಿಯೆಂದು ಕರೆಯಲ್ಪಡುವ ‘ಮಕರ ಸಂಕ್ರಮಣ’ ಹಬ್ಬವನ್ನು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸಂಕ್ರಾಂತಿಯಾದರೆ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಓಣಂ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಸಪ್ತಕುಕದುರೆಗಳ ಸರದಾರನಾದ ಸೂರ್ಯದೇವನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದೇ ಸಂಕ್ರಮಣ. ಸೂರ್ಯನ ದಿಕ್ಕು ಮಕರ ರಾಶಿಗೆ ಬದಲಾವಣೆಗೊಳಪಡುವುದರಿಂದ ಇದನ್ನು ‘ಮಕರ ಸಂಕ್ರಮಣ’ ಎಂದು ಕರೆಯುತ್ತಾರೆ. ಈ ಹಬ್ಬ ಜೀವನಕ್ಕೆ ಹೊಸ ಬೆಳಕು ನೀಡುವಂಥದ್ದು ಎಂಬ ಪ್ರತೀತಿ. ಇಲ್ಲಿಯವರೆಗೆ ಶೂನ್ಯ ಮಾಸ ಎಂದು ಹೇಳುವರು. ಇದರ ಮುಂದೆ ಒಳ್ಳೆ ಕೆಲಸ ಆರಂಭಕ್ಕೆ ಒಳ್ಳೆ ತಿರುವು ನೀಡುವುದು. ಸೂರ್ಯ ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಆರು ತಿಂಗಳು ಪಯಣ ಬೆಳೆಸುತ್ತಾನೆ. ಆ ದಿನವನ್ನೇ ಮಕರ ಸಂಕ್ರಾಂತಿ ಎನ್ನುತ್ತಾರೆ. ಉತ್ತರಾಯಣ ಪುಣ್ಯಕಾಲ ಎಂದೂ ಹೇಳುತ್ತಾರೆ. ಇದು ಸಾಮಾನ್ಯವಾಗಿ ಜನವರಿ ಹದಿನಾಲ್ಕನೇ ತಾರೀಖು ಬೀಳುತ್ತದೆ. ಯುಗಾದಿ ಮೊದಲ ಹಬ್ಬವಾದರೆ ಸಂಕ್ರಾಂತಿ ಕೊನೆಯ ಹಬ್ಬ. ಜನಪದರು ಮುಂದುವರೆದು ಸುಗ್ಗಿ ಹಬ್ಬ, ಕರಿ. ದ್ವಾಸಿಹಬ್ಬವೆಂತಲೂ ಕರೆಯುತ್ತಾರೆ. ಜನಪದರು ಮುಂದುವರೆದು ಬಹುಭಾಗದಲ್ಲಿ ಸಂಕ್ರಾಂತಿಯನ್ನು ಮೂರು ದಿನಗಳಲ್ಲಿ ಆಚರಿಸುತ್ತಾರೆ. ಮೊದಲ ದಿನ ಭೋಗಿಯಾಗಿಯೂ, ಎರಡನೇ ದಿನ ಸಂಕ್ರಮಣವಾಗಿಯೂ ಹಾಗೂ ಮೂರನೇ ದಿನವನ್ನು ‘ಕರಿ’ಯನ್ನಾಗಿ ಸಡಗರದಿಂದ ಆಚರಿಸುವ ರೂಢಿಯಿದೆ.
		ಹೊಳಿಯಾಗ ನೀರು ತುಂಬಿ ಹೊಲದಾಗ ಬೆಳೆ ತುಂಬಿ
		ಊರೂರ ಗುಡಿ ಮನೆ ತುಂಬಿ | ಜನತುಂಬಿ
		ಸಂಕ್ರಾಂತಿ ಬಂತು ಸಿರಿತಂತು |
ಭೋಗಿ ಆಚರಣೆ
	ಸಂಕ್ರಮಣ ಹಾಗೂ ನರಕ ಚತುರ್ದಶಿಯ ಹಿಂದಿನ ದಿನದಂದು ಆಚರಿಸುವ ಹಬ್ಬಕ್ಕೆ ಭೋಗಿ ಹಬ್ಬ ಎನ್ನುತ್ತಾರೆ. ಜನಪದರು ಅಂದು ಮೈಗೆಲ್ಲ ಅರಿಷಿಣ, ಎಳ್ಳು, ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಮಡಿಬಟ್ಟೆಯನ್ನು ಧರಿಸಿ ದೇವರನ್ನು ಪೂಜಿಸುತ್ತಾರೆ. ಗುಡಿ-ಗುಂಡಾರಗಳಿಗೆ ಹೋಗಿ ಕೈಮುಗಿದು ನೈವಿಧ್ಯ ಅರ್ಪಿಸಿ ಬರುತ್ತಾರೆ. ಅದಕ್ಕಾಗಿಯೇ ಎಳ್ಳು ಹಚ್ಚಿದ ಸಜ್ಜೆ, ಜೋಳ, ರಾಗಿ ರೊಟ್ಟಿಯನ್ನು ತಯಾರಿಸಿರುತ್ತಾರೆ. ಜೊತೆಗೆ ಬದನೆಕಾಯಿ, ಪುಂಡಿಪಲ್ಯೆ ಜೊತೆಗೆ ಹೊಸಧಾನ್ಯಗಳಿಗೆ ಸೊಪ್ಪು, ತರಕಾರಿ ಸೇರಿಸಿ ‘ಬರ್ತಾ’ ಪಲ್ಯವನ್ನು ಸಿದ್ಧಪಡಿಸುತ್ತಾರೆ. ನಾನಾ ರೀತಿಯ ಚಟ್ನಿಗಳು, ಮೊಸರು ಎಲ್ಲವನ್ನು ಪ್ರಸಾದಕ್ಕಾಗಿ ಬಳಸುತ್ತಾರೆ. ನಂತರ ಬಂಧುಬಳಗವೆಲ್ಲ ಕೂಡಿಕೊಂಡು ಅಕ್ಕಪಕ್ಕದವರೆಲ್ಲ ಸೇರಿ ರೊಟ್ಟಿಪಲ್ಯ ಸವಿಯುತ್ತಾರೆ. ‘ಕಟಗ್ ರೊಟ್ಟಿ ಖಾರಾ ಎಣ್ಣಿ, ಹಸಿ ಉಳ್ಳಾಗಡ್ಡಿ, ಎಳೆ ಸೌತಿಕಾಯಿ ಎನ್ ರುಚಿ’ ಎಂದು ಬಾಯಿ ಚಪ್ಪರಿಸುತ್ತಾರೆ. ಮಕ್ಕಳನ್ನು ಹಸೆ ಮೇಲೆ ಕೂರಿಸಿ ಎಲಚಿ, ಆವರೆ, ಕಡ್ಲೆಕಾಯಿ, ಎಳ್ಳು, ಬೆಲ್ಲ ಎಲ್ಲಾ ಬೆರಸಿ ತಲೆಯ ಮೇಲೆ ಮುತ್ತೈದೆಯರು ಎರೆಯುವರು. ಶಾಸ್ತ್ರ ಮಾಡಿ ಕಬ್ಬಿನತುಂಡು, ಎಲೆಅಡಿಕೆ, ಬಾಳೆ ಮುಂತಾದ ಹಣ್ಣುಗಳು ನೊಗೆಳ್ಳು ನೀಡುವರು. 
ಸಂಕ್ರಮಣ ಆಚರಣೆ
	ಭೋಗಿ ನಂತರ ಸಂಕ್ರಮಣದ ಆಚರಣೆ ಮೊದಲ ದಿನ ರೊಟ್ಟಿಯುಂಡ ಜನಪದರು, ಎರಡನೆಯ ದಿನ ಸಿಹಿ ಅಡುಗೆ ಮಾಡುತ್ತಾರೆ. ಇವರು ಪಾಪಪುಣ್ಯಗಳ ಬಗ್ಗೆ ನಂಬಿಕೆಯುಳ್ಳವರು. ಹಾಗಾಗಿ ವರ್ಷವಿಡೀ ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡುತ್ತಾರೆ. ಕೆರೆ, ನದಿ, ಹಳ್ಳ, ಸಾಗರಗಳಲ್ಲಿ ಮಿಂದು ಪಾಪ ಕಳೆಯಲು ಬೇಡಿಕೊಳ್ಳುತ್ತಾರೆ. ಈ ದಿನದಂದು ಮೊದಲೇ ಮಾಡಿದ ಮಾದ್ಲಿ ಎಂಬ ವಿಶೇಷ ಸಿಹಿ ಪದಾರ್ಥವನ್ನು ಹಾಲಿನೊಂದಿಗೆ ಸವಿಯುತ್ತಾರೆ. ಬಂಡಿಯನ್ನು ಕಟ್ಟಿ ಸಮೀಪದ ನದಿ ಸಂಗಮದ ಕ್ಷೇತ್ರಗಳಿಗೆ ಹೋಗಿ, ಅಲ್ಲಿಯೇ ಅಡುಗೆ ಮಾಡಿ ಪ್ರಸಾದವನ್ನು ಅರ್ಪಿಸಿ ಪ್ರಕೃತಿಯ ಮಡಿಲಲ್ಲಿ ತಾವು ಊಟ ಸವಿಯುತ್ತಾರೆ. ಸಂಜೆಯಾದೊಡನೆ ಎಳ್ಳು-ಬೆಲ್ಲವನ್ನು ಪರಸ್ಪರ ಹಂಚಿ ಒಳ್ಳೆಯ ಬದುಕಿಗಾಗಿ ಹಾರೈಕೆ ವಿನಿಮಯ ಮಾಡಿಕೊಳ್ಳುತ್ತಾರೆ. 
		ಸುಗ್ಗಿಯಲಿ ಒಕ್ಕಲಿಗ ಹುರುಪಿಲಿ ಹಾಡುವನು
		ಕಗ್ಗಾಗಿ ತುಂಬಿ ಹಣ್ಣಾಗಿ | ಕಣತುಂಬಿ
		ಹಿಗ್ಗುವುದು ಲೋಕ ರಸ ಕುಡಿದು |
ಪ್ರಕೃತಿ ಪೂಜೆ
	ರೈತರು ವರ್ಷವೆಲ್ಲ ತಾವು ದುಡಿದ ಫಲವನ್ನು ಆನಂದದಿಂದ ಸ್ವೀಕರಿಸುತ್ತಾರೆ. ಫಸಲು ಹುಲುಸಾಗಲೆಂದು ಕೇಳಿಕೊಳ್ಳುತ್ತಾರೆ. ಸಂಕ್ರಮಣದಂದು ಸೂರ್ಯ, ಭೂದೇವಿ, ಎತ್ತು, ಹಳ್ಳ, ಕೆರೆ, ಕಾಲುವೆ, ಮರಗಳೆಲ್ಲ ಅಷ್ಟೇ ಅಲ್ಲದೇ ಇಡೀ ಪ್ರಕೃತಿಯನ್ನೇ ದೇವರೆಂದು ಪೂಜಿಸುತ್ತಾರೆ.
		ಭೂಮಿ ಪೂಜಾ ಮಾಡಿ ಹೊಳೀಗಿ ಎಡೆ ಮಾಡಿ
		ಸೀಮೀಗಿ ಚರಣಾ ಚಲ್ಲಿದರ | ಭೂದೇವಿ
		ಪುರಮಾಸಿ ರಾಶಿ ಸೂಸ್ಯಾಳೋ |
	ಜನಪದ ಗೀತೆಗಳ ಮೂಲಕವೇ ಅವರ ಭಕ್ತಿಯನ್ನು ಮೇಲಿನಂತೆ ವ್ಯಕ್ತಪಡಿಸಿದ್ದಾರೆ. ಬರ ಬರದಂತೆ ಸಮೃದ್ಧ ಬದುಕನ್ನು ಕಲ್ಪಿಸಿಕೊಂಡು ಎಂದು ಸೃಷ್ಠಿಯನ್ನು ವಿನಂತಿಸಿಕೊಳ್ಳುತ್ತಾರೆ. ಜನಪದರು ಪ್ರಕೃತಿ ಆರಾಧಕರು. ನದಿ ದಂಡೆಯ ಮರಳಲ್ಲಿ ಶಿವನ ಮೂರ್ತಿ, ಈಶ್ವರಲಿಂಗವನ್ನು ಮಾಡಿ ಮಣ್ಣನ್ನು ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.
ಕರಿ ಆಚರಣೆ
	ಹಳ್ಳಿಯಲ್ಲಿ ಭತ್ತದ ಮೆದೆ, ಮನೆ ಸೂರು, ಗದ್ದೆ ಮೂಲೆಗಳಿಗೆ ಮಾವಿನಸೊಪ್ಪು, ಉತ್ತರಾಣಿ ಕಟ್ಟಿ ಇಡುವರು. ಕರಿ ದಿನವು ಜನಪದರಿಗೆ ಅಶುಭದಿನ. ಅಂದ ಯಾವ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ಕೃಷಿ ಚಟುವಟಿಕೆಗಳು ನಿಷೇಧ. ಜನಪದರಿಗೆ ದೈವದ ಮೇಲೆ ಸಾಕಷ್ಟು ಭಯ ಹಾಗೆಯೇ ಭಕ್ತಿ ಕೂಡ. ರೈತರು ಅಂದು ದನಕರುಗಳ ಮೈದೊಳೆದು ಪೂಜಿಸುತ್ತಾರೆ. ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಕೋಡುಗಳಿಗೆ ಬಣ್ಣ ಬಳಿದು ಜೂಲ, ಕೊಡೆಣಸು, ಕಾಲ್ಗೆಜ್ಜೆ, ಗಂಟೆ, ಗೆಜ್ಜೆಸರ ಹಾಕಿ ಮೆರವಣಿಗೆ ಮಾಡುತ್ತಾರೆ. ದನಗಳಿಗೆ ಅಲಂಕರಿಸಿ ಕಿಚ್ಚು ಹಾಯಿಸುವರು. ದನಕರುಗಳಿಗೆ ರೋಗರುಜಿನಗಳು ಬರದಂತೆ ತಡೆಯಲು ಸೊಪ್ಪು ಹುಲ್ಲು ಸೇರಿಸಿ ಮನೆಮುಂದೆ ಬೆಂಕಿಹಾಕಿ ಇದರಲ್ಲಿ ಹಾಯಿಸಿ ಮನೆಯೊಳಗೆ ಕರೆದುಕೊಳ್ಳುತ್ತಾರೆ. ಈ ದಿನದಂದು ಪ್ರಯಾಣವನ್ನು ಇತರೆ ಕಾರ್ಯಗಳನ್ನು ಜನಪದರು ಮಾಡುವುದಿಲ್ಲ.
ದ್ವಾಸಿ-ಅವರೇಕಾಯಿ ಪಲ್ಯ
	ಕರಿ ಆಚರಣೆಗಾಗಿ ಜನಪದರು ತಮ್ಮ ಮನೆಯಲ್ಲಿ ದ್ವಾಸಿ (ದೋಸೆ) ಹೊಯ್ಯುತ್ತಾರೆ. ಜೊತೆಗೆ ಹಸೆ ಅವರೇಕಾಯಿ ಪಲ್ಯ ಮಾಡುತ್ತಾರೆ. ದ್ವಾಸಿ-ಅವರೇಕಾಯಿ ಪಲ್ಯ ಸಂಕ್ರಮಣ ಕರಿಯ ವಿಶೇಷ. ಅಕ್ಕಿ, ರಾಗಿಯಿಂದ ದ್ವಾಸಿಯನ್ನು ಮಾಡಿದ ಹೆಣ್ಣುಮಕ್ಕಳು ಅಂದು ತಮ್ಮ ಹಿರಿಮಗನನ್ನು ಮನೆಹೊರಗಡೆ ನಿಲ್ಲಿಸಿ, ದ್ವಾಸಿ ಇಳೆದೊಗೆದು ಎಡಗೈಯಿಂದ ಮನಮಾಳಿಗೆ ಮೇಲೆ ಎಸೆಯುತ್ತಾರೆ. ಜನಪದರು ಇದನ್ನು ‘ಕರಿ ಹರಿಯುವುದು’ ಎಂದು ಕರೆಯುತ್ತಾರೆ. ನಂತರ ದ್ವಾಸಿ-ಅವರೇಕಾಯಿಯ ಪಲ್ಯ ಜೊತೆಯಾಗಿ ಮನೆಮಂದಿಯೆಲ್ಲ ಕೂಡಿಕೊಂಡು ತಿನ್ನುತ್ತಾರೆ.
		ಉತ್ತಿ ಬಿತ್ತುವ ಮಂತ್ರ ಬಿತ್ತಿ ಬೆಳೆಯುವ ಮಂತ್ರ
		ಸತ್ಯ ಶಿವಮಂತ್ರ ನಿನ್ಹೆಸರು | ಬಸವಯ್ಯ
		ಮತ್ರ್ಯದೊಳು ಮಂತ್ರ ಜೀವನಕೆ |
	ಉತ್ತಿ ಬಿತ್ತುವ ಮಂತ್ರವನ್ನೇ ಜಪಿಸಿ, ಶಿವನೊಲುಮೆಗೆ ಪಾತ್ರರಾಗುವಂತವರು ಜನಪದರು. ಅವರಿಗೆ ಒಕ್ಕಲುತನ ಬಿಟ್ಟು ಬೇರೆಯ ಬದುಕಿಲ್ಲ. ಹಾಗಾಗಿ ಅಲ್ಲಿಯೇ ಕಷ್ಟ-ಸುಖವನ್ನು ಪಡೆಯುತ್ತಾರೆ. ಈ ರೀತಿಯಾಗಿ ಸಂಕ್ರಾಂತಿ ಹಬ್ಬದಲಿ ಮೂರು ದಿನಗಳ ಕಾಲ ಸಂಭ್ರಮವನ್ನು ಜನಪದರು ಹಂಚಿಕೊಳ್ಳುತ್ತಾರೆ. ನೆರೆಹೊರೆ, ಬಂಧುಬಳಗದವರೊಡನೆ ಜೊತೆಯಾಗಿ ತಮ್ಮ ಭಾಂದವ್ಯ ಹೆಚ್ಚಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಸಂಕ್ರಾಂತಿ ಜನಪದರಿಗೆ ಸುಗ್ಗಿಯಲ್ಲಿ ಇಡೀ ಭೂಮಂಡಲವೇ ಸಗ್ಗವಾಗಿರುತ್ತದೆ.
		ಭೂಮಿಯೇ ನಮ ತಾಯಿ, ತಂದೆ ನಮ ಬಸವಣ್ಣ
		ಅವರಿತ್ತ ಸಿರಿಯ ನೋಡಬನ್ನಿ | ಧರೆಯೆಲ್ಲ
		ಸಗ್ಗವಾಗಿದೆ ಕಣ್ಣಿಟ್ಟು ನೋಡಬನ್ನಿ |
	ಸಂಕ್ರಾಂತಿಯನ್ನು ಫಸಲಿನ ಕೊಯಲಿನ ಸಂದರ್ಭದಲ್ಲಿ ಆಚರಿಸುವುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚರಣೆ. ಇಚ್ಛಾ ಮರಣಿ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿದ್ದು ಮಕರ ಸಂಕ್ರಾಂತಿ ದಿನಕ್ಕಾಗಿ ಕಾದು ಸ್ವರ್ಗ ಸೇರಿದರಂತೆ. ಸಂಕ್ರಾಂತಿ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಎಂದು ಪುರಾಣಗಳು ಸಾರುತ್ತವೆ. ಈ ಹಬ್ಬದಲ್ಲಿ ದಾನ ಮಾಡುವುದರಿಂದ ಪಾಪ ಪರಿಹಾರ ಎಂಬ ನಂಬಿಕೆ ನಮ್ಮ ಜನರಲ್ಲಿ. ಹಳ್ಳಿಯ ಜನರೆಲ್ಲ ಸೇರಿ ಮನೆಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಹಂಚುವರು. ಇದು ಭಾವೈಕ್ಯತೆಯ ಸಂಕೇತವೂ ಹೌದು. ಸಂಕ್ರಾಂತಿ ರೈತರ ಪಾಲಿಗೆ ಸುಗ್ಗಿಯ ಹಬ್ಬ. ಇತರರಿಗೆ ಸುಖ ಸಮೃದ್ಧಿಯ ಹಬ್ಬವಾಗಿದೆ. 


-ಡಾ. ಶಿವಾನಂದ ಬ. ಟವಳಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter