ಆಫೀಸಿನಲ್ಲಿ ಕೆಲಸ ಮುಗಿದರೂ ಅನುಪನಿಗೆ ಮನೆ ಸೇರುವ ತವಕವಿಲ್ಲ. ಸಹೋದ್ಯೋಗಿ ರೂಪಳೊಡನೆ ಕೂತು ಹರಟೆ, ಅದು ಇದು ಮಾತು, ನಡುವೆ ಕಾಫಿ ಕೊನೆಗೆ ಒಲ್ಲದ ಮನಸ್ಸಿನಿಂದ ಮನೆಕಡೆ ಹೆಜ್ಜೆ ಹಾಕಿದರೂ ಮನತುಂಬ ಅವಳದೇ ಧ್ಯಾನ. ಅವಳ ಆತ್ಮೀಯತೆ, ಅನುಕಂಪ, ಒಲವಿನ ಎಳೆ ಹೊತ್ತು ತರುವ ಮಾತುಗಳು ಬೇಡವೆಂದರೂ ಕಾಡುತ್ತವೆ. ತನ್ನ ಮನದ ಮೂಲೆಯಲ್ಲಿ ಕೊರತೆಯಾಗಿರುವ ಮಾನಸಿಕ ನೆಮ್ಮದಿ, ಸಾಂತ್ವನ, ಬಯಸುವ ಸುಖದ ಮಾತುಗಳನ್ನು ಅವನು ಅಲ್ಲೆಲ್ಲೋ ಹುಡುಕಲು ಯತ್ನಿಸುತ್ತಾನೆ. ಮನೆಗೆ ಬಂದರೆ ಇನ್ನೂ ಮನೆಸೇರದ ಮಡದಿ, ಬಂದರೂ ಮನೆಗೆಲಸದಲ್ಲಿ ಭಾರವಾಗುವ ಹೆಂಡತಿಯ ಮಾತುಗಳು, ತಮ್ಮಷ್ಟಕ್ಕೆ ತಾವಿರುವ ಮಕ್ಕಳು ಸದ್ದಿಲ್ಲದೆ ಅನುಪ ಏಕಾಂಗಿಯಾಗುತ್ತ ಮೊಬೈಲಿಗೆ ಮೊರೆಹೋಗುತ್ತಾನೆ. ಅದರ ಸಂಗಾತಿಯಾಗುತ್ತಾನೆ. ಅಲ್ಲಿನ ಫೇಸ್‌ಬುಕ್, ವಾಟ್ಸ್ಯಾಪ್, ಅಂತರ್ಜಾಲಗಳ ಲೋಕದಲ್ಲಿ ಕ್ರಮೇಣ ಕಣ್ಮರೆಯಾಗುತ್ತಾನೆ.
ತನ್ನ ಕೆಲಸದ ಮಧ್ಯೆಯೂ ಮಾನಸಿ ಸಮಯ ಸಿಕ್ಕಾಗೆಲ್ಲ ಸಂದೇಶನ ಬಳಿಸಾರಿ ಅವನ ಅಂತರಾಳವನ್ನು ಕಲಕುತ್ತಾಳೆ. ಅವಳ ಸುಂದರ ಮೊಗದಲ್ಲಿನ ತಿಳಿನಗು, ನಿಂತ ನಿಲುವಿನಲ್ಲಿ ಪಕ್ಕದವರನ್ನು ಬೇಕೆಂದೇ ತಾಕುವಂತಿರುವ ಅವಳುಟ್ಟ ದಿರಿಸು, ಆಡುವ ಮಾತುಗಳಲ್ಲಿ ಮತ್ತೆ ಮತ್ತೆ ನೆನಪಿಸುವಂತಿರುವ ಮುತ್ತುಗಳು….. ಮಾನಸಿ ತಾನು ಕನಸಿಸುವ ಕ್ಷಣಗಳನ್ನು ಸಂದೇಶನಲ್ಲಿ ತಡಕಾಡುತ್ತಾಳೆ. ಅವಳ ದೃಷ್ಟಿಯಲ್ಲಿ ಗಂಡ ಅರಸಿಕ. ಒಂದು ದಿನವೂ ಮುಖ ಕೊಟ್ಟು ಮಾತನಾಡಿದವನಲ್ಲ. ಮನೆಯಲ್ಲಿ ಅವನಾಯಿತು ಅವನ ಮೊಬೈಲಾಯಿತು. ಒಂದೇ ಸೂರಿನಡಿಯಲ್ಲಿ ಎರಡು ಜೀವಿಗಳ ಮಧ್ಯೆ ಹೇಳಿಕೊಳ್ಳುವಂತಹ ಮಾತುಕತೆಯಿಲ್ಲದ ಅಪರಿಚಿತ ಬದುಕು. ಅವಳಿಗೆ ಜೀವನವೇ ಬೋರೆನಿಸುವಷ್ಟು ಜಿಗುಪ್ಸೆ. ಆದರೆ ಆ ಭಾವ ಕಛೇರಿ ಮೆಟ್ಟಿಲು ಹತ್ತುತ್ತಿದ್ದಂತೆ ಮಾಯ.
ವರ್ತಮಾನ ಕಾಲದ ಒತ್ತಡದ ಬದುಕಿನಲ್ಲಿ, ನಗರಶೈಲಿಯ ಜೀವನಕ್ರಮದಲ್ಲಿ ಇಂತಹ ಸಾಕಷ್ಟು ಸಂಗತಿಗಳು ಮೌನವಾಗಿ ಬಿಕ್ಕಳಿಸುತ್ತಿವೆ. ತೋರಿಕೆಯ ಮುಖವಾಡದ ಹಿಂದೆ ತನ್ನತನವನ್ನು ಅದುಮಿಟ್ಟ ಭೀಕರ ಜ್ವಾಲಾಮುಖಿ ತಣ್ಣಗೆ ಹರಿಯುತ್ತಿದೆ. ಸುಖ, ಶಾಂತಿ, ನೆಮ್ಮದಿಯ ನೆಲೆಯಾಗಬೇಕಿದ್ದ ಮನೆ ಇಂತಹವರ ಪಾಲಿಗೆ ನರಕ. ಮನೆಯಲ್ಲಿ ಸಿಗದ ಸುಖವನ್ನು ಇನ್ನೆಲ್ಲೋ ಅರಸುವ ಆತುರ…ಕಾತುರ ಇವರಿಗೆ.
ಎಲ್ಲೆಲ್ಲೂ ಮೊಬೈಲ್… ಮುಂದೆ ಮೆಟಾವರ್ಸ್
ಬಹುಶಃ ಇಂದು ಮೊಬೈಲ್ ಇಲ್ಲದ ವ್ಯಕ್ತಿಯನ್ನು ಕಾಣುವುದು ಕಷ್ಟ.ಇಂದಿನ ಯಾಂತ್ರಿಕ ಬದುಕಿನಲ್ಲಿ ಚರವಾಣಿ ಎಬ್ಬಿಸಿದ ಬದಲಾವಣೆಯ ಬಿರುಗಾಳಿ ಮಹತ್ತರವಾದುದು. ಕೆಲವೇ ವರ್ಷಗಳಲ್ಲಿ ಈ ಒಂದು ಪುಟ್ಟ ಸಾಧನ ಹೆಚ್ಚಿನವರ ದಿನನಿತ್ಯದ ಬದುಕನ್ನೇ ಕಸಿದುಕೊಂಡಿದೆ. ಅಲ್ಲಿಯ ಸವಲತ್ತುಗಳ ಬಗ್ಗೆ ಎರಡು ಮಾತಿಲ್ಲ. ಎಲ್ಲವೂ ಇತಿಮಿತಿಯೊಳಗಿದ್ದರೆ ಚಂದ. ಆದರೆ ಪರಸ್ಪರ ಮಾತಿನ ವಿನಿಮಯ, ಭಾವನೆಗಳ ನೇರ ಅಭಿವ್ಯಕ್ತಿ, ಸಂಬಂಧಗಳ ಸೂಕ್ಷ್ಮತೆ, ಖಾಸಗಿತನ ಇಲ್ಲದ ಎಲ್ಲವನ್ನು ಆಕ್ರಮಿಸಿಕೊಂಡ ಇದು ಮಾನವೀಯತೆಯನ್ನು ಮರೆಸುತ್ತಿದೆ. ನಮ್ಮ ಸಂತೋಷ, ಸಿಟ್ಟು, ತಾಪ, ಸೆಡವು, ವ್ಯಂಗ, ವಿಮರ್ಶೆ, ಪ್ರತಿಕ್ರಿಯೆ, ಶ್ಲಾಘನೆ, ದೂಷಣೆ, ಅಂತರ್ಜಾಲದ ಸವಲತ್ತಿನಿಂದ ದಕ್ಕುವ ಎಲ್ಲದಕ್ಕೂ ಮಾಧ್ಯಮವಾದ ಮೊಬೈಲ್ ಈಗ ಹೆಚ್ಚಿನವರ ಆಜೀವ ಸಂಗಾತಿ.
ಕ್ಷಣ ದೊರೆತರೆ ಸಾಕು ಯುವ ಜನತೆಯ ಬೆರಳುಗಳು ಯಾಂತ್ರಿಕವಾಗಿ ಮೊಬೈಲುಗಳ ಮೇಲಾಡುತ್ತವೆ. ರಸ್ತೆಯ ಮೇಲಿರಲಿ, ಪ್ರಯಾಣವಿರಲಿ, ಅಕ್ಕಪಕ್ಕ ಯಾರೇ ಇರಲಿ ನಿರ್ಭಿಡೆಯಿಂದ ಕೇಳುವ ಸಂಗೀತ, ಆಡುವ ಮಾತು, ಪಿಸುಗುಡುವ ಪ್ರೇಮ, ಮಾತಿನ ಚಕಮಕಿ, ನಡೆಯುವ ಜಗಳ ಯಾವುದಕ್ಕೂ ಅಲ್ಲಿ ಅಡ್ಡಿಯಾಗುವುದಿಲ್ಲ. ಮನುಷ್ಯರ ನಡುವಿನ ಸಂಬಂಧವಿರದ ಅನ್ಯ ಗ್ರಹದ ಜೀವಿಗಳಂತೆ ನಮಗವರು ಗೋಚರಿಸುತ್ತಾರೆ. ಇದರಿಂದಾಗಿ ಬಹಳಷ್ಟು ಅಪರಾಧ, ಕ್ರಿಮಿನಲ್ ಕೇಸುಗಳಲ್ಲಿ ಮೊಬೈಲ್ ಸಂದೇಶ, ಸಂಭಾಷಣೆಗಳೇ ಸಂಬಂಧಪಟ್ಟವರನ್ನು ಹಿಡಿಯುವಲ್ಲಿ, ಶಿಕ್ಷಿಸುವಲ್ಲಿ ಸಹಕಾರಿಯಾಗಿರುವುದು ಒಂದುರೀತಿಯಲ್ಲಿ ಅದರ ಧನಾತ್ಮಕ ಅಂಶವನ್ನು ಎತ್ತಿತೋರಿಸುತ್ತದೆ.
ಈಗ ಅಂತರ್ಜಾಲದ ಮುಂದುವರಿದ ಭಾಗವಾಗಿ ‘ಮೆಟಾವರ್ಸ್’ ಅಂಬೆಗಾಲಿಕ್ಕುತ್ತಾ ಬರುತ್ತಿದೆ. ಕಣ್ಣಿಗೆ ಏರಿಸಿದ ದಪ್ಪ ಡಿಜಿಟಲ್ ಕನ್ನಡಕ ಜೊತೆಗೆ ಕೈಯಲ್ಲೊಂದು ರಿಮೋಟ್ – ಇವಿಷ್ಟಿದ್ದರೆ ಸಾಕು, ನೀವು ಹೊರಪ್ರಪಂಚದ ಎಲ್ಲವನ್ನೂ ನಿಮ್ಮ ಕಣ್ಣೆದುರು ಸಾಕ್ಷಾತ್ಕರಿಸಿಕೊಳ್ಳಬಹುದು; ನೀವದರಲ್ಲಿ ತೊಡಗಿಸಿಕೊಳ್ಳಲೂಬಹುದು. ಏನಿದು ವಿಸ್ಮಯ? ಮೊಬೈಲ್ ಬಿಟ್ಟಿರಲಾರದ ಯುವಜನಾಂಗ ಇನ್ನು ಇದನ್ನು ಬಿಟ್ಟಿದ್ದೀತೇ? ಇದರ ಸಾಧಕ ಬಾಧಕಗಳ ಕುರಿತು ಸಂಶೋಧನೆ ಇನ್ನಷ್ಟೇ ಆಗಬೇಕಿದೆ.
ಕಲಿಕೆಗೆ ಹಿನ್ನಡೆ
ಕಲಿಕೆಗೆ ಮಾರಕವಾಗಿರುವ ಮೊಬೈಲ್ ವಿದ್ಯಾರ್ಥಿಗಳ ಕಲಿಕಾಸಕ್ತಿ, ಯೋಚನಾ ಸಾಮಾರ್ಥ್ಯಕ್ಕೆ ಒಂದು ಅರ್ಥದಲ್ಲಿ ತಡೆಯನ್ನೊಡ್ಡಿದೆ. ಸಣ್ಣಪುಟ್ಟ ಲೆಕ್ಕಗಳಿಗೂ, ಸಾಮಾನ್ಯ ಜ್ಞಾನಕ್ಕೂ ಮೊಬೈಲ್ ಮೊರೆಹೋಗುವ ಪರಿಪಾಠ ಶುರುವಾಗಿದೆ. ಗೂಗಲ್ ಅಂತೂ ಇವರ ದೃಷ್ಟಿಯಲ್ಲಿ ಬೇಕಾದನ್ನು ಕೊಡುವ ಕಾಮಧೇನು! ಆದರೆ ಅಲ್ಲಿಯ ಕನ್ನಡ ತರ್ಜುಮೆಯಂತೂ ಅರ್ಥವಿಲ್ಲದ ಪದ, ವಾಕ್ಯಗಳನ್ನು ಹುಟ್ಟುಹಾಕುತ್ತಾ ಭಾಷೆಯೊಂದರ ಬೆಳವಣಿಗೆಯಲ್ಲಿ ತೊಡಕಾಗಿರುವುದು ತೆರೆದ ಗುಟ್ಟು. ಆದರೆ ಕೊರೊನಾ ಕಾಲದಲ್ಲಿ ಆನ್‍ಲೈನ್ ಕ್ಲಾಸಿಗೆ ಸ್ಮಾರ್ಟ್‍ಫೋನುಗಳು ಸಂವಹನ ಮಾಧ್ಯಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದವು. ಅಲ್ಲಿನ ತರಗತಿಗಳು ಒಂದು ಪರಿಮಿತಿಯಲ್ಲಿ ನಡೆದರೂ ನಿರ್ವಾಹವಿಲ್ಲದೆ ಎಲ್ಲರೂ ಅದಕ್ಕೆ ಜೋತುಬೀಳುವ ಪರಿಸ್ಥಿತಿ ನಿರ್ಮಾಣವಾಯಿತು. ಬೇರೆ ದಾರಿಯಿಲ್ಲದೆ ಅಂತಹ ಮನಸ್ಥಿತಿಯೊಂದಿಗೆ ನಾವು ವಾಸ್ತವದೊಂದಿಗೆ ರಾಜಿಮಾಡಿಕೊಳ್ಳಬೇಕಾಯಿತು. ಇದರ ಹೊರತಾಗಿಯೂ ಸ್ಮಾರ್ಟ್‍ಫೋನಿನಲ್ಲಿ ಇಂದು ಲಭ್ಯವಿರುವ ಲೆಕ್ಕವಿಲ್ಲದಷ್ಟು ಮನರಂಜನೆಯ ಗೇಮ್‍ಗಳು, ಮತಿಗೆಡಿಸುವ ಆಟಗಳು, ಚಾಟಿಂಗ್‍ಗಳು ಮಕ್ಕಳ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿಕೊಂಡು ಕಲಿಕಾಸಕ್ತಿಯನ್ನು ಕುಂಠಿತಗೊಳಿಸಿವೆ.
ಮನೆಯಲ್ಲಿ ಮಕ್ಕಳು ಮೊಬೈಲ್ ಹಿಡಿದು ಕುಳಿತರೆಂದರೆ ಊಟ, ತಿಂಡಿ, ನಿದ್ದೆಯನ್ನೂ ಮರೆಯುತ್ತಾರೆ. ಮನೆಯವರೊಡನೆ ಮಾತು, ಜೊತೆಯಲ್ಲಿ ಊಟ, ವಿಹಾರ, ಬಯಲಿನಲ್ಲಿ ಆಟ, ಗೆಳೆಯರ ಭೇಟಿ, ಅವರೊಡನೆ ಮೌಖಿಕ ಹರಟೆ ಎಲ್ಲವೂ ಅವರಿಗೆ ಅನಗತ್ಯದ, ಸಮಯ ವ್ಯರ್ಥಮಾಡುವ ಸಂಗತಿಗಳಾಗುತ್ತಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಇವೆಲ್ಲವೂ ಅವರಿಗೆ ಕ್ಷುಲ್ಲಕ ವಿಷಯಗಳು. ಇಲ್ಲೆಲ್ಲಾ ಒಂಟಿಯಾಗುತ್ತಾ ಸಾಗುವ ದಿನಚರಿ ಅವರ ಬುದ್ಧಿಶಕ್ತಿಯನ್ನು ಕ್ರಮೇಣ ದುರ್ಬಲಗೊಳಿಸಿ ವಿವೇಕವನ್ನು ಮಸುಕಾಗಿಸುತ್ತದೆ. ಏಕತಾನತೆ ಕಾಡುತ್ತದೆ. ಸಣ್ಣಪುಟ್ಟ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವ ಅವರು ಮಾನಸಿಕ ವಿಕ್ಷಿಪ್ತತೆಗೂ ಬಲಿಯಾಗುವುದುಂಟು. ಸ್ವಸಾಮರ್ಥ್ಯ, ವ್ಯಕ್ತಿತ್ವ ವಿಕಸನ, ಕೌಶಲ ಅಭಿವೃದ್ಧಿ, ವಿವೇಕ, ಧೀಶಕ್ತಿ ಎಲ್ಲವೂ ಕುಂಠಿತವಾಗುವ ಸಂಭವವಿರುತ್ತದೆ. ಯಾಂತ್ರಿಕವಾಗುತ್ತಿರುವ ಜೀವನಶೈಲಿ, ಯೋಚನೆ, ಚಿಂತನೆ, ಧಾವಂತದ ಬದುಕು ವ್ಯಕ್ತಿಯನ್ನು ಜೀವನ್ಮುಖಿ, ಸಮಾಜಮುಖಿಯಾಗಿಸದೆ ಅಂರ್ತಮುಖಿಯಾಗಿಸುತ್ತದೆ.
ಮಾತಿಲ್ಲ ಕತೆಯಿಲ್ಲ…
ಅತಿಯಾದರೆ ಅಮೃತವೂ ವಿಷವೇ. ಮೊಬೈಲ್ ಬಂದಂದಿನಿಂದ ಸಂವಹನ ಇಲ್ಲದೆ ಮಾತು ಮೌನವಾಗಿದೆ. ಸಂವೇದನೆಗಳೇ ಇಲ್ಲದೆ ಇತರರ ಭಾವನೆಗಳಿಗೆ ಬೆಲೆ ಕೊಡುವುದನ್ನೇ ಮರೆತಿದ್ದೇವೆ. ಕೂಡು ಕುಟುಂಬಗಳು ಇತಿಹಾಸ ಸೇರಿರುವ ಇಂದಿನ ದಿನಗಳಲ್ಲಿ ಎಲ್ಲರೂ ಬಯಸುವಂತಹ ಮೈಕ್ರೋ ಕುಟುಂಬದಲ್ಲಿಯೂ ಮೂರನೆಯ ವ್ಯಕ್ತಿಯಾಗಿ ಮೊಬೈಲ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದರಿಂದಾಗಿ ಮನೆಯೊಳಗಿರುವ ನಾಲ್ಕೈದು ಮಂದಿಯ ನಡುವೆ ಮಾತಿಲ್ಲ, ಉಳಿದವರ ಕಷ್ಟ ಸುಖ ಹಂಚಿಕೊಳ್ಳುವ ವ್ಯವಧಾನವಿಲ್ಲ. ಪರಸ್ಪರ ಮೆಚ್ಚುಗೆ ಅಭಿವ್ಯಕ್ತಿಸಲು, ತಪ್ಪಿದಲ್ಲಿ ತಿದ್ದಲು, ಸಂತಸದ ಕ್ಷಣಗಳನ್ನು ಒಗ್ಗೂಡಿ ಅನುಭವಿಸಲು ಸಮಯವಿಲ್ಲದಷ್ಟು ನಾವು ಇದಕ್ಕೆ ಗುಲಾಮರಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಒಳಿತಿಗಿಂತ ಕೆಡುಕುಗಳೇ ಹೆಚ್ಚು ಸುದ್ದಿಯಾಗುತ್ತಿವೆ. ಸಂಬಂಧಗಳ ಹಾಸುಹೊಕ್ಕನ್ನು ನಿರ್ದಯವಾಗಿ ಹರಿಯುವ, ವ್ಯಕ್ತಿಗತ ಭಾವನೆಗಳಿಗೆ ಬೆಲೆಕೊಡದ, ಸಮಾಜಮುಖಿ ಚಿಂತನೆಗಳಿಗೆ ಅವಕಾಶ ಕೊಡದ, ತಾನು ತನ್ನ ಕೋಶದೊಳಗೆ ಅವಿತು ಕಲ್ಲಾಗುವ ಪರಿಸರವನ್ನು ಇದು ಸೃಷ್ಟಿಸುತ್ತಿದೆ. ಹೊಸ ತಲೆಮಾರು ಇದಾವುದರ ಪರಿವೆಯಿಲ್ಲದೆ ಮೊಬೈಲ್ ಸುಖಕ್ಕೆ ಜೋತುಬಿದ್ದಿರುವುದು ಆತಂಕದ ಸಂಗತಿಯಾಗಿದೆ.
ಒಂದರ್ಧ ಗಂಟೆ ಎಲ್ಲೆಲ್ಲೂ ಮೊಬೈಲ್ ಸೇವೆ ಇಲ್ಲದ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಬಹುಪಾಲು ಜನರಿಗೆ ಉಸಿರಾಟವೇ ನಿಂತ ಅನುಭವವಾದೀತು. ಅಂದರೆ ನಾವು ಅದರ ಗೀಳಿಗೆ ಅಷ್ಟು ಗುಲಾಮರಾಗಿದ್ದೇವೆ. ಇದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅತಿಯಾದ ಬಳಕೆಯಿಂದಾಗುವ ಸಂಭವನೀಯ ಕೆಡುಕುಗಳ ಸಂಶೋಧನೆ ಗಮನಾರ್ಹ ರೀತಿಯಲ್ಲಿ ನಡೆದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ದೇಹ ಮತ್ತು ಮನಸ್ಸುಗಳ ಮೇಲೆ ಇದು ಬೀರಬಹುದಾದ ಗಾಢ ಪರಿಣಾಮದ ಸೂಚನೆಗಳು ಖಂಡಿತಾ ಕಂಡುಬರಬಹುದು. ಅದಕ್ಕಿಂತ ಮುಂಚೆ ನಾವು ಅದರ ಬಳಕೆಯ ಇತಿಮಿತಿಯಲ್ಲಿರುವುದು ಒಳ್ಳೆಯದು. ಚಿಕ್ಕ ಮಗು ಉಣ್ಣಲು ಹಠ ಮಾಡಿದಾಗ ಮೊಬೈಲಿನಲ್ಲಿ ಹಾಡು ಹಾಕಿ ಉಣ್ಣಿಸುವ ಪರಿಯನ್ನು ನಾನು ಕಂಡಿದ್ದೇನೆ. ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಸುಮ್ಮನಾಗಿಸುವ ತಾಯಂದಿರನ್ನು ನೀವು ನೋಡಿರಬಹುದು. ತಮ್ಮ ಮಕ್ಕಳು ಮೊಬೈಲ್ ಬಳಕೆಯಲ್ಲಿ ತೀಕ್ಷ್ಣಮತಿಗಳು ಎಂದು ಹೇಳುತ್ತ ಸಂಭ್ರಮಿಸುವ ಹೆತ್ತವರನ್ನು ಎಲ್ಲರೂ ಕಂಡಿರುತ್ತಾರೆ. ನಮ್ಮ ಅನುದಿನದ ಜೀವನದಲ್ಲಿ ಇದು ಎಷ್ಟೊಂದು ಅನಿವಾರ್ಯತೆಯ ಸ್ಥಾನವನ್ನು ಪಡೆದಿದೆ ಎಂದರೆ ಅದನ್ನು ಬಿಟ್ಟು ನಾವು ಚಿಂತಿಸುವ ಬಗೆಯನ್ನು, ವಿವೇಕವನ್ನು ಮರೆತೇಬಿಟ್ಟಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯ ಸ್ವಂತಿಕೆ ಎನ್ನುವುದು ಇಲ್ಲಿ ಎಂದೋ ಎಲ್ಲಿಯೋ ಕಳೆದುಹೋದಂತಿದೆ.
ಸಂಸಾರದಲ್ಲಿ ಬಿರುಕು ಬಿಡುವಲ್ಲಿ, ಖಾಸಗಿತನ ಬಯಲಾದಾಗ ದಾರಿ ಕಾಣದೆ ಬದುಕಿಗೆ ಅಂತ್ಯ ಹಾಡುವಲ್ಲಿ ಇದರ ಪಾತ್ರವೇನು ಕಡಿಮೆಯಿಲ್ಲ. ಮನೆಯೊಳಗಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಹಕಾರಿಯಾಗುವ, ಹೊಂದಾಣಿಕೆಯಲ್ಲಿ ಮುಖ್ಯ ಪಾತ್ರ ವಹಿಸುವ, ಸುಖ, ಸಂತಸ, ಸರಸದ ಸನ್ನಿವೇಶಗಳಿಗೆ ಮೆರುಗು ನೀಡುವ ಮಾತು ಇಂದು ಕ್ಷೀಣಿಸುತ್ತಿದೆ. ಮನೆಮಂದಿ ನಡುವಿನ ಸಹಜ ಮಾತಿನಲ್ಲಿ ಎದ್ದು ಕಾಣುವ ಕಾಳಜಿ, ವಾತ್ಸಲ್ಯ ಎಲ್ಲವೂ ಒತ್ತಡ, ಧಾವಂತಗಳಲ್ಲಿ ನಲುಗುತ್ತಿವೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ಸಾಂತ್ವನ, ಭದ್ರತೆ, ಸುರಕ್ಷೆ ಹೆಚ್ಚಿಸುವ ಮಾತು ಮನೆಯೊಳಗಿನ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಸುಖದ ಮನಸ್ಥಿತಿಯನ್ನು ಸೃಜಿಸುತ್ತವೆ. ಮನೆಯೊಳಗಿದ್ದಷ್ಟು ಸಮಯವಾದರೂ ನಾವು ಮನುಷ್ಯರಾಗಿ ನಮ್ಮವರೊಡನೆ ಬೆರೆತು ಬಾಳದಿದ್ದರೆ ಬದುಕಿನ ಸೌಂದರ್ಯವನ್ನು ಸವಿಯಲಾಗುವುದಿಲ್ಲ. ಇದಿಲ್ಲದಿದ್ದರೆ ನಾನೊಂದು ತೀರ… ನೀನೊಂದು ತೀರದ ಇರುವಿಕೆಯಿಂದ ಮನೆಯಲ್ಲಿ ಸಿಗದ ಪ್ರೀತಿ, ಸುಖ, ನಂಬಿಕೆ, ವಿಶ್ವಾಸ, ಕಳಕಳಿಯನ್ನು ಇನ್ನೆಲ್ಲೋ ಹುಡುಕಲು ಹೊರಡುತ್ತೇವೆ. ಆದರೆ ಆ ಸುಖ ಬದುಕಿನುದ್ದಕ್ಕೂ ಬಾಳದ ಆತಂಕದ ಮರೀಚಿಕೆಯಾಗುತ್ತದೆ. ಈಗಲಾದರೂ ಮೊಬೈಲನ್ನು ಒಂದಷ್ಟು ಹೊತ್ತು ಬದಿಗಿಟ್ಟು ಈ ಬಗ್ಗೆ ಚಿಂತಿಸೋಣವೇ…. ?
******************************************
5 thoughts on “ಮೊಬೈಲ್‌ಸಾಂಗತ್ಯದಲ್ಲಿ ಒಂಟಿಯಾಗುತ್ತಿರುವ ಬದುಕು”
ಸದ್ಯದ ವಾಸ್ತವಿಕ ಜಗತ್ತಿಗೆ ಹಿಡಿದ ಕನ್ನಡಿ. ಮನುಷ್ಯ ಹೆಚ್ಚು ಮೊಬೈಲ್ ಉಪಯೋಗಿಸುತ್ತಾ ಸುಂದರ ಬದುಕಿನಿಂದ ಹಿಮ್ಮುಖನಾಗುತ್ತಿರುವದು ನಿಜಕ್ಕೂ ಶೋಚನಿಯ. ನಾವೆಲ್ಲರೂ ವಾರದಲ್ಲಿ ಒಂದು ದಿನ ಮೊಬೈಲ್ ಇಲ್ಲದೆ ಬದುಕು ಸಾಗುವದನ್ನು ರೂಢಿಸಿಕೊಳ್ಳಬೇಕು. ಉತ್ತಮ ಬರಹ 👌🏻
ಧನ್ಯವಾದಗಳು
ಮೊಬೈಲ್ ಇಲ್ಲದ ಬದುಕು
ಪ್ರತಿಯೊಬ್ಬರೂ ಓದೆಲೇಬೇಕು. ಸುಂದರವಾದ ಬದುಕನ್ನು ಅನುಭವಿಸದೆ ನಮ್ಮನ್ನೇ ನಾವು ಮೋಸ
ಹೋಗುತ್ತಿರುವ ಅಂತರ್ಜಾಲದ ಸುಳಿಯಲ್ಲಿ.
ಇದರಿಂದ ಆಗುವ ಲಾಭ ಮತ್ತು ಹಾನಿಗಳ
ತುಲನೆ ಮಾಡಿದರೆ ಹಾನಿಗಳ ಪ್ರಭಾವವೇ ಜಾಸ್ತಿ.
The article tries to elaborate the
negative impact on human behaviour and life of the present young generation .I think it is everybody’s task to avert the misfortune at least to the possible extant .My sincere thanks to dear friend Sri Dharmanand Naik for timely warning
N.K.Dalabanjan
Thank you Dalabanjan