(ಜಯಂತ ಕಾಯ್ಕಿಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಗಳು: ವಿಶ್ವಧ್ವನಿ ಬಳಗ)
ಪ್ರಿಯ ಜಯಂತ್ ಕಾಯ್ಕಿಣಿಯವರೇ,
ಬೆಂಗಳೂರಿಗೆ ಹೋಗಿ ಎರಡು ದಶಕಗಳೇ ಸಂದಿತಲ್ಲ. ತಿರುಗಿ ಮುಂಬಯಿಗೆ ಬರುವಿರಾ ಎಂದು ಕಾದವರಿಗೂ ಇದೀಗ ನೀವು ಬೆಂಗಳೂರಲ್ಲೇ ಗಟ್ಟಿಯಾಗಿದ್ದೀರಿ ಅಂತ ತಿಳಿದು ನೆಮ್ಮದಿಯೂ ಆಗಿದೆ ಈಗ. ಅಂದು ನೀವು ಮುಂಬಯಿಯಲ್ಲಿದ್ದಾಗ ನಿಮ್ಮನ್ನು ಭೇಟಿ ಆಗದ ಹೊಸಬರಿಗೂ ಇಂದು ಜಯಂತ್ ತುಂಬಾ ಕ್ಲೋಸ್ ಇದ್ದಾರೆ ಅಂತ ಹೇಳಿ ತಿರುಗಾಡೋದಕ್ಕೆ ತುಂಬ ಖುಷಿ ಆಗುತ್ತಿದೆ. ಈಟಿವಿ ಚಾನಲ್ ನಲ್ಲಿ ನೀವು ಎಸ್ಪಿ ಜೊತೆ ಕಾಣಿಕೊಂಡ ನಂತರವಂತೂ ಜಯಂತ್ ಅಂದ್ರೆ ಮೊದಲಿಗಿಂತಲೂ ಎರಡು ಪಟ್ಟು ಹೆಚ್ಚೇ ನಿಮ್ಮನ್ನು ಮನಸ್ಸಿನಲ್ಲಿ ಹಚ್ಚಿಕೊಂಡು ಓಡಾಡುತ್ತಿದ್ದಾರೆ ಮುಂಬಯಿ ಜನ. ನೀವು ಮುಂಬಯಿಯಲ್ಲಿದ್ದಷ್ಟು ಸಮಯ ನಿಮ್ಮ ಸಾಹಿತ್ಯಾನುಭವಗಳನ್ನು ತೆರೆದಿಡುವಂತಹ ಹಾಗೂ ನಮ್ಮಂತವರಿಗೆಲ್ಲ ಅದನ್ನು ತಿಳಿಯುವಂತಹ ಸರಿಯಾದ ಕಾರ್ಯಕ್ರಮಗಳು ಇಲ್ಲಿ ನಡೆದಿತ್ತೇ? ಅಂದರೆ ಅದಕ್ಕೆ ಉತ್ತರಿಸುವಂತಹ ಧೈರ್ಯ ನನ್ನಲ್ಲಿಲ್ಲ.
”ಬೆಂಗಳೂರು ನನ್ನನ್ನು ಹೊರಹಾಕಿದರೆ ಮತ್ತೆ ಮುಂಬಯಿಗೆ ಬರಬೇಕಲ್ಲ. ಅದಕ್ಕೆ ಮುಲುಂಡ್‌ನ ಮನೆ ಹಾಗೆಯೇ ಇರಿಸಿದ್ದೇನೆ” ಎಂಬ ನಿಮ್ಮ ಆ ದಿನಗಳ ಮಾತು ಸದ್ಯಕ್ಕಂತೂ ಹುಸಿಯಾಗಿದೆ ಅಲ್ವೇ. ಈಗಂತೂ ಬೆಂಗಳೂರಿನವರು ನಿಮ್ಮನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ ಬಿಡಿ. ಇನ್ನು ನಮಗೆ ನಿಮ್ಮನ್ನು ಬಿಟ್ಟುಕೊಡಲಾರರು.
ನೀವು ಇಪ್ಪತ್ತನೇ ಶತಮಾನದ ಕೊನೆಗೆ ಮುಂಬಯಿ ತ್ಯಜಿಸಿ ಬೆಂಗಳೂರಿಗೆ ಹೊರಟ ನಂತರ ನಿಮ್ಮ ಬೆನ್ನಿಗೆ ನಾನೂ ಕೂಡಾ ಮುಂಬಯಿಗೆ ವಿದಾಯ ಹೇಳಿದ್ದೆ. ಶಾಶ್ವತ ವಾಸಿಸಲು ಎಂದು ನಿರ್ಧರಿಸಿ ಮಂಗಳೂರಿಗೆ ಮನೆಯ ಜವಾಬ್ದಾರಿ ಹೊತ್ತು ಹೊರಟಿದ್ದೆ. ಮುಂಬಯಿಯ ಕರ್ನಾಟಕ ಸಂಘದಲ್ಲಿ ಜರಗಿದ ವಿದಾಯ ಸಮಾರಂಭದಲ್ಲಿ ನಮ್ಮ ನೆಚ್ಚಿನ ಕತೆಗಾರ ಯಶವಂತ ಚಿತ್ತಾಲರೇ ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನನ್ನ ಕುರಿತು ಕೆಲವು (ಒಳ್ಳೆಯ!) ಮಾತುಗಳನ್ನು ಆಡುತ್ತಾ ಹೇಳಿದ ಮಾತುಗಳಲ್ಲಿ –
”ಉಮಾ ರಾವ್, ಶಾರದಾ ಶೆಣೈ, ವ್ಯಾಸರಾಯ ಬಲ್ಲಾಳ್, ಜಯಂತ್ ಕಾಯ್ಕಿಣಿ ….. ಮುಂತಾದವರ ಬಳಿಕ ಈಗ ಜೋಕಟ್ಟೆ ಕೂಡಾ ಮುಂಬಯಿ ಬಿಟ್ಟು ಮಂಗಳೂರು ಸೇರಿದರು” ಎಂದು ದು:ಖದಿಂದ ಹೇಳಿದ್ದಿದೆ. ಚಿತ್ತಾಲರ ಆತ್ಮೀಯ ವಲಯದಲ್ಲಿದ್ದ ನಾವೆಲ್ಲ ಮುಂಬಯಿ ಬಿಟ್ಟು ಕರ್ನಾಟಕದತ್ತ ಮುಖ ಮಾಡಿದ್ದು ಅವರಿಗೆ ನಿಜಕ್ಕೂ ಎಷ್ಟೊಂದು ನೋವಾಗಿತ್ತೋ?
ಮಂಗಳೂರಿಗೆ ಹೋದ ನಂತರ ಆಗಾಗ ನಾನು ಬೆಂಗಳೂರಿಗೂ ಬಂದು ಹೋಗುತ್ತಿದ್ದೆ. ಮುಂದಿನ ವರ್ಷ ವಿಜಯ ಕರ್ನಾಟಕ ಎನ್ನುವ ಹೊಸ ದೈನಿಕ ಆರಂಭವಾಗಿ ಅವರು ಭಾವನಾ ಮಾಸಿಕ ಹೊರತಂದಾಗ ‘ಭಾವನಾ” ಮಾಸಿಕಕ್ಕೆ ನೀವು ಸಂಪಾದಕರಾದಿರಿ. ಆ ದಿನಗಳಲ್ಲಿ ಒಮ್ಮೆ ಬೆಂಗಳೂರಿಗೆ ನಾನು ಬಂದಿದ್ದಾಗ ನೀವು ಪತ್ರಿಕಾ ಕಛೇರಿಗೆ ನನ್ನನ್ನು ಕರೆದೊಯ್ದಿರಿ. ಮಾತಿನ ನಡುವೆ ”ಜೋಕಟ್ಟೆ ನೀವಿನ್ನು ಮುಂಬಯಿಗೆ ಹಿಂತಿರುಗಿ ಹೋಗುವಂತಿಲ್ಲ. ನಿಮಗೆ ಹತ್ತಾರು ಸಂಘ ಸಂಸ್ಥೆಗಳು ವಿದಾಯ ಸಮಾರಂಭ ಮಾಡಿ ಕಳುಹಿಸಿದ್ದಾರೆ. ಆದರೆ ನನಗೆ ಯಾರೂ ಮುಂಬಯಿಯಲ್ಲಿ ವಿದಾಯ ಸಮಾರಂಭ ಏರ್ಪಡಿಸಿಲ್ಲ. ಹಾಗಾಗಿ ಬೆಂಗಳೂರು ನನ್ನನ್ನು ತಳ್ಳಿದರೆ ಮತ್ತೆ ನಾನು ಮುಂಬಯಿಗೆ ಬರಬಹುದು.ಆದರೆ ನೀವು ಮುಂಬಯಿಗೆ ಮರಳಿ ಹೋಗುವಂತಿಲ್ಲ” ಎಂದು ನಕ್ಕು ಹೆದರಿಸಿದಿರಿ. ಆದರೆ ನಡೆದದ್ದು ಬೇರೆಯೇ ಅಲ್ವ! ನೋಡಿ ಎಂತಹ ವಿಪರ್ಯಾಸ, ಯಾರೂ ಸನ್ಮಾನ ಮಾಡದೆ ಮುಂಬಯಿಯಿಂದ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದ ನೀವಿನ್ನೂ ಮುಂಬಯಿಗೆ ಬಾರದೆ ಬೆಂಗಳೂರಲ್ಲೇ ಗಟ್ಟಿ ಇದ್ದೀರಿ. ಆದರೆ ಸನ್ಮಾನ ಮಾಡಿ, ವಿದಾಯ ಹೇಳಿ ‘ಇನ್ನು ಬರಬೇಡ’ ಎಂಬಂತೆ ಕಳುಹಿಸಿದ್ದ ನಾನು ಮಾತ್ರ ಐದೇ ವರ್ಷದಲ್ಲಿ ತಿರುಗಿ ಮಂಗಳೂರಿನಿಂದ ಮುಂಬಯಿಗೆ ಬಂದಿದ್ದೆ. ನೀವೇ ಇಲ್ಲಿ ಗೆದ್ದವರು!
ಈ ನಡುವೆ ವಿಚಾರ ಭಾರತಿ ಸಮ್ಮೇಳನ, ಕರ್ನಾಟಕ ಸಂಘದ ಸಾಹಿತ್ಯ – ಸಂಸ್ಕೃತಿ ಸಮಾವೇಶ ,ಚಲನಚಿತ್ರ ಹಬ್ಬ, ವಿವಿ ಕನ್ನಡ ವಿಭಾಗದ ಗೌರೀಶ ಶತಮಾನೋತ್ಸವ ಕಾರ್ಯಕ್ರಮ, ಗುರುನಾರಾಯಣ ಪ್ರಶಸ್ತಿ ಸ್ವೀಕಾರ ಸಮಾರಂಭ, ಕರ್ಕಿ ಪ್ರಶಸ್ತಿ ಸ್ವೀಕಾರ ಸಮಾರಂಭ, ಕಸಾಪ ಹಮ್ಮಿಕೊಂಡ ಹೊರನಾಡ ಕನ್ನಡಿಗರ ಸಾಹಿತ್ಯ ಸಮಾವೇಶ… ಅಂತೆಲ್ಲ ಹೀಗೆ ಹಲವಾರು ಬಾರಿ ನೀವು ಮುಂಬಯಿಗೆ ಬಂದು ಹೋಗಿದ್ದೀರಿ. ಆ ಮೂಲಕ ಭೇಟಿಯಾಗುತ್ತಿದ್ದೀರಿ ಎನ್ನುವುದು ನನಗೂ ಖುಷಿ ತಂದ ಸಂಗತಿ.
ನಮ್ಮ ಪರಿಚಯಕ್ಕೆ ನಾಲ್ಕು ದಶಕಗಳಾಗುತ್ತಿವೆ ಎಂದಾಗ ಪುಳಕ ಗೊಳ್ಳುತ್ತೇನೆ.ಮುಂಬಯಿಗೆ ಬಂದ ದಿನಗಳಲ್ಲಿ ಮೊದಲಿಗೆ ನಾನು ಹುಡುಕಿ ಕೊಂಡು ಹೋದ ಇಬ್ಬರ ಮನೆಗಳೆಂದರೆ ಒಂದು ಚಿತ್ತಾಲರದ್ದು, ಇನ್ನೊಂದು ಜಯಂತರದ್ದು ಎನ್ನುವುದಕ್ಕೂ ಸಂತಸ ಪಡುತ್ತೇನೆ.
ಆ ದಿನಗಳ ನೆನಪು ಎಲ್ಲಿಂದ ಶುರುಮಾಡಲಿ.
ನಾನು ಗೌರೀಶರನ್ನು ಶಾಂತಾರನ್ನು ಮೊದಲು ಕಂಡದ್ದೇ ಮುಲುಂಡ್ ನ ನಿಮ್ಮ ಮನೆಯಲ್ಲಿ. ಗೌರೀಶರು ಅಂದಾಗ ನನಗೆ ತಾಯಿನುಡಿ ದೀಪಾವಳಿ ಸಂಚಿಕೆಯ ಘಟನೆ ನೆನಪಾಗುತ್ತದೆ. ಒಮ್ಮೆ ಗೌರೀಶರ ಲೇಖನ ಕಂಪೋಸ್ ಆದ ನಂತರ ನನಗೆ ತಾಯಿನುಡಿಯ ಸಂಪಾದಕ ಡಿ ಕೆ ಮೆಂಡನ್ ಅವರು ಪ್ರೂಫ್ ತಿದ್ದಲು ನೀಡಿದ್ದರು.ನಾನದನ್ನು ಮನೆಗೆ ಒಯ್ದಿದ್ದೆ.ಆದರೆ ಗೌರೀಶರ ಕೆಲವು ಅಕ್ಷರಗಳು ನನಗೆ ಓದಲು ಕಷ್ಟ ಆಗಿ ನಂತರ ಅರವಿಂದ ನಾಡಕರ್ಣಿ ಅವರ ವಿಲೇಪಾರ್ಲೆ ಮನೆಗೆ ಹೋಗಿ ಅವರಲ್ಲಿ ಅದೇನೆಂದು ತಿಳಿದು ಪ್ರೂಫ್ ಹಾಕಿ ಮೆಂಡನ್ ರಿಗೆ ನೀಡಿದ್ದೆ.
ತೊಂಬತ್ತರ ದಶಕದ ಆರಂಭದಲ್ಲೊಮ್ಮೆ ಆ ವರ್ಷ ಮುಲುಂಡ್ ನ ನಿಮ್ಮ ಮನೆಯಲ್ಲೇ ಉಮಾ ರಾವ್, ನಾನು ಮತ್ತು ನೀವು ಮೂವರು ಅವರವರ ಹೊಸ ಬರಹವನ್ನು ಓದಿದಾಗ ನಾನೊಂದು ಹೊಸ ಕತೆ ಬರೆದದ್ದು ಓದಿದ್ದೆನಲ್ಲ. ಅದಕ್ಕೆ ನೀವು ‘ಹೃದ್ಗತ’ ಎಂಬ ಹೆಸರು ಇಡಲು ಸೂಚಿಸಿದ್ದಿರಿ. ಅದು ಕಸ್ತೂರಿಯಲ್ಲಿ ಪ್ರಕಟವೂ ಆಯ್ತು. ನನ್ನ ಕಥಾ ಸಂಕಲನಕ್ಕೂ ಅದೇ ಶೀರ್ಷಿಕೆ ಇಟ್ಟಿದ್ದು ನಿಮಗೆ ಮತ್ತು ಚಿತ್ತಾಲರಿಗೇ ಅದನ್ನು ಅರ್ಪಿಸಿದ್ದೆ. ಉಮಾ ರಾವ್ ಎದುರಿಗಿದ್ದಾರೆ ಎಂಬ ಸಂಕೋಚದಿಂದ ಆ ಕತೆಯಲ್ಲಿ ಬರುವ ನಾಯಕಿಯ ದೇಹದ ವರ್ಣನೆಯನ್ನು ನಾನು ಕಟ್ ಮಾಡಿ ಓದಿದರೂ ನೀವು ಅದನ್ನು ಪತ್ತೇದಾರಿಯ ಮೂಲಕ ಕಂಡು ಹಿಡಿದವರು!
ಇತ್ತೀಚಿನ ವರೆಗೂ ಕರ್ನಾಟಕದ ಗಣ್ಯಾತಿಗಣ್ಯ ವಿಮರ್ಶಕರು ಮುಂಬಯಿಯ ಸಾಹಿತಿಗಳ ಕುರಿತು ಹೇಳುವಾಗ ಚಿತ್ತಾಲ, ಬಲ್ಲಾಳ, ನಾಡಕರ್ಣಿ, ಸನದಿ, ಕಾಯ್ಕಿಣಿ …ಇಲ್ಲಿಗೇ ನಿಲ್ಲಿಸಿ ಬಿಡುತ್ತಿದ್ದರು. ನೋಡಿ ಜಯಂತ್, ಎಂಭತ್ತರ ದಶಕದಲ್ಲಿ ನಾನು ಮುಂಬಯಿಗೆ ಕಾಲಿಟ್ಟಾಗಲೂ ಕರ್ನಾಟಕದ ವಿಮರ್ಶಕರು ಮುಂಬಯಿ ಸಾಹಿತ್ಯದ ಕುರಿತು ಹೇಳುವಾಗ ನಿಮ್ಮ ಹೆಸರಿಗೇ ನಿಲ್ಲಿಸಿ ಬಿಡುತ್ತಿದ್ದರು. ಮುಂಬಯಿಯಲ್ಲಿ ಸಾಹಿತಿಗಳ ಹೆಸರಲ್ಲಿ ನಿಮ್ಮ ಹೆಸರು ಬರುತ್ತಲೇ ಅಲ್ಲಿಗೆ ವಿಮರ್ಶಕರು ಮುಂಬಯಿಯಲ್ಲಿ ಇನ್ನು ಸಾಹಿತಿಗಳಿಲ್ಲ ಅಂತಲೊ ಏನೋ ನಿಮ್ಮಲ್ಲಿಗೆ ಹೆಸರು ನಿಲ್ಲಿಸುತ್ತಿದ್ದರು.ಆದರೆ ಇಂದು ಮುಂಬಯಿ ವಿ ವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ ಎನ್ ಉಪಾಧ್ಯ ಬಂದ ನಂತರ ಅವರು ಕರ್ನಾಟಕದ ಅನೇಕ ವಿಮರ್ಶಕರನ್ನು ಕರೆಸಿ ಸೆಮಿನಾರ್ ಉಪನ್ಯಾಸಗಳನ್ನು ಹಮ್ಮಿ ಕೊಳ್ಳುವ ಮೂಲಕ ಮುಂಬಯಿಯಲ್ಲಿ ಇನ್ನೂ ಕೆಲವರಿದ್ದಾರೆ ಎಂಬುದನ್ನು ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.! (ಹಾಗಾಗಿ ಇನ್ನು ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚು ಪಡುವಂತಿಲ್ಲ!)
ನಮ್ಮ ಸ್ನೇಹದಲ್ಲಿ ಚಿತ್ತಾಲರ ಮನೆಯಲ್ಲಿನ ಪಟ್ಟಾಂಗವೂ ಮುಖ್ಯವಾದುದು. ಚಿತ್ತಾಲರ ಮನೆಯ ಬಾಲ್ಕನಿಯಲ್ಲಿ ಕೂತಿರುವಾಗಲೆಲ್ಲ ಹೊರಗೆ ಬ್ಯಾಂಡ್‌ಸ್ಟ್ಯಾಂಡ್‌ನ ಸಮುದ್ರ ತೀರದ ಬಂಡೆಗಲ್ಲುಗಳಿಗೆ ಒರಗಿ ಪ್ರೇಮ ಸಲ್ಲಾಪದಲ್ಲಿ ನಿರತರಾದ ಯುವ ಜೋಡಿಗಳೇ ಕಣ್ಣ ಮುಂದೆ ಬರುತ್ತಿತ್ತಲ್ಲ.!ನಮ್ಮ ಮಾತುಕತೆಯ ಸಮಯ ಕಣ್ಣು ಆ ಕಡೆ ತಾನಾಗಿಯೇ ಹೋಗುತ್ತದೆ ಎಂಬ ಮಾತುಗಳನ್ನು ಈಗ ಎಣಿಸಿಕೊಂಡರೆ ನಗು ಬರುತ್ತದೆ. ಚಿತ್ತಾಲರ ನಿಧನದ ನಂತರ ಆ ಕಡೆ ಹೋಗಲೇ ಇಲ್ಲ. (ಮೆಂಡನ್ ತೀರಿದರು, ರಘುವೀರ ಭಟ್ ತೀರಿದರು.ಅನಂತರ ಅಂಧೇರಿ ಪಶ್ಚಿಮದ ಚಾರ್ ಬಂಗ್ಲೆ ಕಡೆ ಹೋಗೋದೇ ನಿಲ್ಲಿಸಿದೆ. ಬಹುಶ ಹೀಗೇ ನಮ್ಮ ಪಯಣ ಮೊಟಕುಗೊಳ್ಳುತ್ತಾ ಹೋಗಬಹುದು) ಎಣಿಸುವಾಗ ಯಾಕೋ ನೋವಾಗುತ್ತೆ.
ಜಯಂತ್, ಚಿತ್ತಾಲರ ಹಾಲ್ ನ ಲೈಬ್ರೇರಿ ಎದುರು ನನ್ನನ್ನು ನೀವು ಕೂರಿಸಿ ಫೋಟೋ ತೆಗೆದಿದ್ದೀರಲ್ಲ, ಅದನ್ನು ನಾನು “ಕ್ಷಮಿಸಿ, ಈ ಚಿತ್ರಕೆ ಹೆಸರಿಲ್ಲ” ನನ್ನ ಕವನ ಸಂಕಲನದ ಹಿಂಬದಿ ಪುಟದಲ್ಲಿ ಮುದ್ರಿಸಿದ್ದು ನಿಮಗೆ ನೆನಪಿರಬಹುದು.( ಅದಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ದೊರೆಯಿತು ಮುಂದೆ) ಅನಂತರ ನಾನು ಎಷ್ಟು ಪಜೀತಿ ಅನುಭವಿಸಿದ್ದೆ ಗೊತ್ತಾ? ಆ ಪುಸ್ತಕ ಕೈಗೆ ಪಡೆದವರೆಲ್ಲ, ‘ಜೋಕಟ್ಟೆ ನಿಮ್ಮ ಲೈಬ್ರೇರಿ ನಮಗೊಮ್ಮೆ ಕಾಣಬೇಕು. ಎಷ್ಟು ಆಪೂರ್ವ ಪುಸ್ತಕಗಳು ನಿಮ್ಮ ಕಪಾಟಿನಲ್ಲಿವೆ” ಎನ್ನುತ್ತಿದ್ದರು. ಆಗ ಪ್ರತೀಸಲ ನಾನು ‘ಅದು ಚಿತ್ತಾಲರ ಮನೆಯ ಲೈಬ್ರೇರಿ, ನಾನು ಅಲ್ಲಿ ಕೂತದ್ದು ಮಾತ್ರ’ ಎನ್ನಬೇಕಾಗುತ್ತಿತ್ತು.
‘ಹಾಯ್ ಬೆಂಗಳೂರು ಪತ್ರಿಕೆಗೆಅಂಕಣ ಬರೆಯುವಂತೆ ನಿಮಗೆ ರವಿ ಬೆಳಗೆರೆಯಿಂದ ಪತ್ರ ಬಂದಾಗ ಬರೆಯಬೇಕೋ -ಬೇಡವೋ ಎಂಬ ಗೊಂದಲದಲ್ಲಿ ಕೆಲವು ದಿನ ನೀವಿದ್ದಿರಿ. ಆದರೆ ‘ಬೊಗಸೆಯಲ್ಲಿ ಮಳೆ’ ನೀವು ಬರೆಯದೆ ಇರುತ್ತಿದ್ದರೆ ಮುಂಬಯಿಗರಿಗೆ ಮಾತ್ರವಲ್ಲ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟವಾಗುತ್ತಿತ್ತು. ಇವತ್ತು ಸಮಗ್ರ ಮುಂಬಯಿಯನ್ನು ವಿವಿಧ ಬರಹಗಳಲ್ಲಿ ಪರಿಚಯಿಸಿದ ಕನ್ನಡ ಸಾಹಿತಿಯೊಬ್ಬ ಇರುವುದಾದರೆ ನನ್ನ ಪ್ರಕಾರ ಅದು ಸದ್ಯಕ್ಕೆ ನೀವು .ಇಲ್ಲಿನ ಯಾವ ವಿಷಯವನ್ನೂ ನೀವು ಬಿಟ್ಟಿಲ್ಲ ಎನ್ನುವ ಹೊಟ್ಟೆಕಿಚ್ಚು ಕೂಡಾ ಒಮ್ಮೊಮ್ಮೆ ಪಡುವುದಿದೆ.
‘ಭಾವನಾ’ ಮಾಸಿಕದ ದೀಪಾವಳಿ ಸಂಚಿಕೆಯಲ್ಲಿ ನೀವು ಮುಂಬಯಿಯ ಹಲವು ಕವಿಗಳಿಗೂ ಆದ್ಯತೆ ನೀಡಿದನ್ನು ಕಂಡಾಗ ಮುಂಬಯಿಯ ಬಡ ಸಾಹಿತಿಗಳನ್ನು ನೀವು ಬೆಂಗಳೂರಿನಲ್ಲಿದ್ದೂ ಮರೆತಿಲ್ಲವೆಂದು ಖುಷಿ ಪಟ್ಟೆವು. ಎಂ.ಎಸ್. ಶ್ರೀರಾಮ್, ಆಶೋಕ ಹೆಗಡೆ ಮುಂತಾದವರನ್ನು ಮುಂಬಯಿಯಲ್ಲಿ ನಮಗೆ ಪರಿಚಯ ಮಾಡಿಕೊಟ್ಟದ್ದು ನೀವಲ್ಲವೇ ಅಷ್ಟೇ ಏಕೆ, ”ಜೋಕಟ್ಟೆ, ಮದುವೆ ಆಗಲು ಮನೆ ಇಲ್ಲ ಎಂಬುದು ಕಾರಣವಾಗಿದ್ದರೆ ಕೆಲಕಾಲ ನಮ್ಮ ಮುಲುಂಡ್ ಮನೆಯಲ್ಲೇ ಇದ್ದುಬಿಡಿ, ಸದ್ಯಕ್ಕೆ ಖಾಲಿ ಇದೆ” ಎಂದು ಬೆಂಗಳೂರಿಗೆ ಹೊರಟಾಗ ನೀವು ಹೇಳಿದ್ದ ಮಾತು ನಾನು ಮರೆಯುವುದಾದರೂ ಹೇಗೆ? (ಅದರ ಅಗತ್ಯ ಬೀಳಲಿಲ್ಲ ಎನ್ನುವುದು ಬೇರೆ ಮಾತು), ನಿಮ್ಮ ‘ಕೋಟಿತೀರ್ಥ’ ಕವನ ಸಂಕಲನದಿಂದ, ‘ಗಾಳ ಕಥಾಸಂಕಲನದಿಂದಲೇ ನನಗೆ ಕಾವ್ಯ ಕಥಾಕ್ಷೇತ್ರದಲ್ಲಿ ಏನಾದರೂ ನಾನೂ ಕೆಲಸ ಮಾಡಬೇಕು ಎನ್ನುವ ಉತ್ಸಾಹ ತುಂಬಿದ್ದು, ಬರೆಯುವ ತುಡಿತ ಹೆಚ್ಚಾದದ್ದು.
‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಎಷ್ಟೋಬಾರಿ ಬಹುಮಾನ ಪಡೆದವರು ನೀವು. ಉದಯವಾಣಿ ಸ್ಪರ್ಧೆಯಲ್ಲೂ ಕತೆಗೆ ಮೊದಲ ಬಹುಮಾನ ಪಡೆದವರು ನಿಮ್ಮ 20 ನೇ ವರ್ಷದಲ್ಲಿ. ಅದರಲ್ಲಿ ಆ ಕಾಲದ ದಿಗ್ಗಜ ಕತೆಗಾರರಿದ್ದರೂ ನೀವು ಪ್ರಥಮ ಬಹುಮಾನ ಪಡೆದಿರಿ. ಆ ಕತೆಯ ಶೀರ್ಷಿಕೆ ಇದ್ದಾಗ ಇದ್ದಾಂಗ…..ಹಾಗೇನೋ ನೆನಪು.
ನಿಮ್ಮ ಕುರುಚಲು ಗಡ್ಡದ ಫೋಟೋ ಕೂಡ ಅಲ್ಲಿ ಬಂದಿತ್ತು. ಆದರ ಕಟಿಂಗ್ಸ್ ಬಹಳ ದಿನಗಳ ಕಾಲ ನಾನು ಜೋಪಾನವಾಗಿರಿಸಿದ್ದೆ. ಅನಂತರ ಮುಂಬಯಿಯ ಸಭೆ ಸಮಾರಂಭಗಳಲ್ಲಿ ನಿಮ್ಮ ಒರಿಜಿನಲ್ ಫೋಟೋಗಳೇ ಕೈಗೆ ಸಿಕ್ಕಿದಾಗ ಆ ಕಟಿಂಗ್ಸ್ ಮಹತ್ವ ಕಡಿಮೆಯಾಯಿತು, ಲಂಕೇಶ್ ಪತ್ರಿಕೆಯಲ್ಲೊಮ್ಮೆ ಲಂಕೇಶರು ನಿಮ್ಮನ್ನು ಸಿನಿಮಾದ ಸೈಡ್ ಹೀರೋನಂತೆ ಕಾಣುತ್ತಾರೆ’ ಎಂದು ಹೇಳಿದಾಗ ಮುಂಬಯಿಗೆ ಬಂದಿದ್ದ ಸರಜೂಕಾಟ್ಕರ್ ಅವರಂತೂ ‘ಏನಪ್ಪಾ ಲಂಕೇಶ್ ತಪ್ಪು ಬರೆದಿದ್ದಾರೆ, ಸೈಡ್ ಹೀರೋ ಅಲ್ಲ, ಜಯಂತ್ ಹೀರೋ ತರಹ ನಮಗೆ ಕಾಣುತ್ತಾರೆ’ ಎಂದು ಹೇಳಿದ್ದು ನಮಗೆಲ್ಲ ಮರಿ ಸಾಹಿತಿಗಳಿಗೆ ಎಷ್ಟು ಸಂತೋಷವಾಗಿತ್ತಲ್ಲ.
ಮುಂಬಯಿಯ ವಿಚಾರ ಭಾರತಿ ಸಮ್ಮೇಳನದಲ್ಲಿ ಟಿ.ವಿ. ಚ್ಯಾನೆಲ್‌ಗಳ ಕ್ರೈಂ ವರದಿಗಳ ಧಾಟಿಗೆ ಆಕ್ಷೇಪಿಸಿದವರು ನೀವು. ಸುದ್ದಿಯಲ್ಲೇ ಇರದ ಹಾ.ಮಾ.ನಾ, ಅವರ ಪತ್ನಿಯ ಸಾವಿನ ಸಂದರ್ಭದಲ್ಲಿ ಟಿ.ವಿ. ಚಾನೆಲ್‌ಗಳ ವರ್ತನೆಗೆ ತೀವ್ರ ಆಕ್ಷೇಪಿಸಿದವರು ನೀವು.
ಹೌದು, ಈಟಿವಿ ಚಾನಲ್ ನ ಎದೆತುಂಬಿ ಹಾಡುವೆನು ಸೀರಿಯಲ್ ನಲ್ಲಿ ನಿಮ್ಮನ್ನು ಪ್ರತಿವಾರ ಆ ದಿನಗಳಲ್ಲಿ ಕಂಡಾಗ ಜಯಂತ್ ಇನ್ನು ಮುಂಬಯಿಗೆ ಬರಲಾರರು, ಬೆಂಗಳೂರಲ್ಕಿ ಗಟ್ಟಿ ಆದರು ಎಂದು ಖಾತ್ರಿಯಾಗಿತ್ತು. ನಿಮ್ಮ ನೂರಾರು ಚಲನಚಿತ್ರ ಹಾಡುಗಳ ಸಂಕಲನ ಬಂದ ಸುದ್ದಿ ಕೇಳಿದಾಗಲಂತೂ ಜಯಂತ್ ‘ಕೋಟಿತೀರ್ಥ’ಕ್ಕಿಂತ ಬಹಳ ಎತ್ತರಕ್ಕೆ ಹೋಗಿರುವುದನ್ನು ಒಪ್ಪಿಕೊಂಡೆವು.
ನನ್ನ ಟೇಬಲ್ ಮೇಲೆ 1995 ರ ಕಾಲನಿರ್ಣಯ ದೀಪಾವಳಿ ಸಂಚಿಕೆ ಈಗಲೂ ಇದೆ. ಡಾ.ವ್ಯಾಸರಾವ್ ನಿಂಜೂರ್ ಮತ್ತು ನೀವು ಅದರ ಜಂಟಿ ಸಂಪಾದಕರಿದ್ದೀರಿ.ಆ ವಿಶೇಷಾಂಕವೇ ಜಯಂತ್ ರ ತಾಕತ್ತನ್ನು ಹೇಳುತ್ತದೆ.ನಾನು ಮತ್ತು ಮಿತ್ರಾ ವೆಂಕಟ್ರಾಜ್ ಅದರಲ್ಲಿ ಉಪಸಂಪಾದಕರಿದ್ದೆವು ಎನ್ನುವುದೂ ಹೆಮ್ಮೆ ನನಗೆ.
ಜೀ ಕನ್ನಡದಲ್ಲಿ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ನಿಮ್ಮ ಸಂದರ್ಶನ ಸಮಯ ನನಗೂ ಒಂದೆರಡು ಮಾತು ಆಡಲು ಅವಕಾಶ ಸಿಕ್ಕಿದ್ದು ಎಂದೂ ಮರೆಯದು.
ನಾಲ್ಕು ವರ್ಷದ ಹಿಂದೆ ಕುಂದಾಪುರದಲ್ಲಿ ಸತೀಶ್ ಆಚಾರ್ಯರ ಕಾರ್ಟೂನ್ ಹಬ್ಬದಲ್ಲಿ ನಾವು ವೇದಿಕೆ ಹಂಚಿಕೊಂಡಿದ್ದೆವು.ಆ ವೇದಿಕೆಯಲ್ಲಿ ಮುಂಬಯಿಯ ನೆನಪುಗಳನ್ನು ಬಿಚ್ಚಿಟ್ಟಿದ್ದೆವು. 2018 ರಲ್ಲಿ ನಾಡೋಜ ಡಾ.ಮನು ಬಳಿಗಾರ್ ಕಸಾಪ ಅಧ್ಯಕ್ಷರಾಗಿದ್ದಾಗ ಮುಂಬಯಿಯಲ್ಲಿ ಹಮ್ಮಿಕೊಂಡಿದ್ದ ಹೊರನಾಡ ಕನ್ನಡಿಗರ ಸಮಾವೇಶದಲ್ಲಿ ನಿಮ್ಮ ಜೊತೆ ಮುಂಬಯಿಯಲ್ಲಿ ವೇದಿಕೆ ಹಂಚಿಕೊಳ್ಳುವ ಭಾಗ್ಯ ನನಗೆ ದೊರೆತಿತ್ತು.
ನಿಮ್ಮ ‘ನೋ ಪ್ರೆಸೆಂಟ್ ಪ್ಲೀಸ್’ ಕಥಾಸಂಕಲನಕ್ಕೆ ದಕ್ಷಿಣ ಏಷ್ಯಾ ಸಾಹಿತ್ಯದ 2019ರ ಡಿಎಸ್‌ಸಿ ಪ್ರಶಸ್ತಿ ಆ ವರ್ಷ ಜನವರಿಯಲ್ಲಿ ಒಲಿದಿತ್ತು.ಅದೇ ವರ್ಷ ಮುಂಬಯಿಯಲ್ಲಿ ಹವ್ಯಕ ವೆಲ್ಪೇರ್ ಟ್ರಸ್ಟ್ ನ ಕರ್ಕಿ ಪ್ರಶಸ್ತಿಯೂ ನಿಮಗೆ ದೊರೆತಿತ್ತು.ನಿಮ್ಮ ಬಗ್ಗೆ ನನಗೆ ಕರ್ಕಿ ಪ್ರಶಸ್ತಿಯ ಒಂದೆರಡು ನೆನಪುಗಳನ್ನು ಹಂಚಿಕೊಳ್ಳುವ ಅವಕಾಶವೂ ಅಲ್ಲಿ ದೊರೆತಿತ್ತು.
ಈ ಎಲ್ಲ ನೆನಪುಗಳೊಂದಿಗೆ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.
-ಶ್ರೀನಿವಾಸ ಜೋಕಟ್ಟೆ
8 thoughts on “ಜಯಂತ ಕಾಯ್ಕಿಣಿ ಜೊತೆಗಿನ ಕೆಲವು ನೆನಪುಗಳು…..”
ಅದ್ಭುತವಾದ ಆತ್ಮೀಯ ಬರಹ.
ಜೋಕಟ್ಟೆ ಬಹಳ ಆಪ್ತವಾಗಿ ಜಯಂತ ಅವರ ಒಡನಾಟ ನೆನೆದಿದ್ದಾರೆ.ಜಯಂತ ಅವರಿಗೆ ಜನ್ಮದಿನದ ಶುಭಾಶಯಗಳು. ಲೇಖಕರಿಗೆ ಅಭಿನಂದನೆಗಳು.
ಅರ್ಥಪೂರ್ಣ ಬರಹ ಸರ್
ಓದ್ತಾ ಓದ್ತಾ ಕಳದೇ ಹೋದೆ.
ಜಯಂತ ನನಗಿಂತ ಕೇವಲ ನಾಲ್ಕು ವರುಷ ಚಿಕ್ಕವರು.
ಆದರೆ ನಿರುಪಯುಕ್ತ ಮರಕ್ಕೂ ಮರಕ್ಕೂ ವಯಸ್ಸಾಗುವುದು.
ಇಂದಿಗೂ ಅವರು ನಮಗೆ ಹೀರೋ ನೇ..
ಸಶಕ್ತ ಸಕಾಲಿಕ ಅಕ್ಷರಗಳ ಉಡುಗೊರೆ
ನೀಡಿದ್ದಿರಿ.
ಧನ್ಯವಾದಗಳು 🌹🙏
ಜಯಂತ್ ಕಾಯ್ಕಿಣಿ ಅವರ ಹುಟ್ಟುಹಬ್ಬದ ನಿಮಿತ್ತ ಶ್ರೀನಿವಾಸ ಜೋಕಟ್ಟೆ ಅವರು ಬರೆದ ಲೇಖನ ತುಂಬಾ ಅಪ್ಯಾಯವಾಗಿದೆ. ಅಭಿನಂದನೆಗಳು ಲೇಖಕರಿಗೆ.
ಖುಶಿ ಆಯ್ತು ಲೇಖನ ಓದಿ.
ಮನದುಂಬಿ ಬರೆದ ಬರಹ ಮೃೆ ಮನ ರೋಮಾಂಚನಗೊಳಿಸಿದೆ. ಲೇಖಕರಿಗೆ ಧನ್ಯವಾದಗಳು
Wow! ಎಂತಹ ಆತ್ಮೀಯ ಬರಹ! ಲೇಖನ ಓದುತ್ತಾ ಇದ್ದರೆ ಶ್ರೀ ಜಯಂತರ ಒಡನಾಡಿಗಳ ಬಗ್ಗೆ ಹೊಟ್ಟೆ ಕಿಚ್ಚು ಹೆಚ್ಚುತ್ತದೆ.. ನಮ್ಮೂರ ಸಾಹಿತಿ ಶ್ರೀ ಜಯಂತರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಎಲ್ಲರೊಂದಿಗೆ ಸರಳವಾಗಿ ಬರೆಯುವ ಜಯಂತ ಕಾಯ್ಕಿಣಿ ಅವರ ಕುರಿತಾಗಿ ಬರೆದ ಆಪ್ತ ಲೇಖನ. ಓದಿ ಖುಷಿಯಾಯ್ತು