ದರ್ಶನ

ನಾನು ಕೇಳುತ್ತೇನೆ ನೀವು ಹೇಗಿದ್ದೀರಿ?
ನೀವು ಹೇಳುತ್ತೀರಿ ನೀನು ಹಾಗೇ ಇರು
ಇರುವುದೆಂದರೇನು?

ಪಂಜರದ ಹಕ್ಕಿ ಹಾರಲು ಮರೆತಿದೆ
ಗೊಂದಲಕ್ಕೆ ಬಿದ್ದ ರೆಕ್ಕೆಗಳಿಗೆ
ಹಾರಿ ಹೋಗೆಂದು ಬೆತ್ತ ತೋರಿಸುತ್ತೀರಿ
ಅಲ್ಲೇ ಇದ್ದು ಇದ್ದೂ ಇರುವುದನ್ನೇ ನಂಬಿದ್ದ ಹಕ್ಕಿಗೆ
ಇಲ್ಲಿ ಇರದೇ ಎಲ್ಲಾದರೂ ಹೋಗಿ ಬಿಡು ಎನ್ನುತ್ತೀರಿ
ಹೋಗುವುದೆಂದರೇನು?

ಅಡುಗೆ ಮಾಡಿದ ಅವ್ವ ಬಚ್ಚಿಡುವುದಿಲ್ಲ
ಅನ್ನಸಾರಿನ ತಪ್ಪಲೆಗಳಿಗೆ ಯಾವ ಬೀಗಗಳೂ ಇಲ್ಲ
ಕದ್ದು ಮೆದ್ದು ಕಿತ್ತುತಿಂದವರು
ಎಲ್ಲರ ಅನ್ನವನ್ನು ಎಲ್ಲೆಲ್ಲೋ ಮುಚ್ಚಿ ಎತ್ತಿಟ್ಟಿದ್ದೀರಿ
ಭಾಷಣದಲ್ಲಿ ಎಲ್ಲರಿಗೂ ಅನ್ನವಿದೆ ಎನ್ನುತ್ತೀರಿ
ಕೊಬ್ಬು ಕರಗಿಸುವವರು
ದಿವ್ಯ ಮೌನದಲ್ಲಿ ಸುಮ್ಮನಿರುತ್ತೀರಿ
ಅಹಂಕಾರದಿ ಮೆರೆಯುತ್ತೀರಿ
ಹೇಳಿ ಅನ್ನವೆಂದರೇನು?

ರೋಗ ಮುಕ್ತರಾಗಲು ಬಯಸುತ್ತಿದ್ದ ಸರ್ವಜನರು
ನಾಟಕ ರಂಗದಲ್ಲಿ ಕಲಿಯುತ್ತಿದ್ದಾರೆ
ದೇಹ ಮಾತು ನಡೆ ನುಡಿಯನ್ನು
ಸ್ವಯಂ ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ 
ಹೀಗಿದ್ದೂ ಲೋಕ ವ್ಯಾಪಿಯಾದ ರೋಗವನ್ನು
ಎಲ್ಲರೂ ಅವರವರೇ ವಿವರಿಸುತ್ತಿದ್ದಾರೆ
ದೇಹದ ಮದ್ದು ಮನಸಿಗೆ
ಮನಸಿನ ಮದ್ದು ದೇಹಕ್ಕೆ
ರೋಗಿಗಳೇ ಕಂಡುಕೊಳ್ಳುತ್ತಿದ್ದಾರೆ
ಈಗ ಭೂಲೋಕದ ನಾಟಕದ
ತಾಲೀಮಿಗೆ ವೈದ್ಯರು ಬಂದಿದ್ದಾರೆ
ನೀವೇ ಹೇಳಿ ರೋಗ ಮತ್ತು ಮದ್ದು ಎಂದರೇನು?

ಕಾಯವೆಂಬ ಗೆಳಯ
ಅಂತರಂಗವೆಂಬ ಗೆಳೆಯನೊಂದಿಗೆ ಸೇರಿ
ಲೋಕ ನಾಟಕವನ್ನು
ಬಾಳ ಚಿತ್ರವನ್ನು
ಅಧಿಕಾರದ ಮಹಾ ಲೀಲೆಗಳನ್ನು
ತದೇಕಚಿತ್ತದಿಂದ ನೋಡುತ್ತಿದ್ದಾರೆ
ದಯವಿಟ್ಟು ಹೇಳಿ
ನೋಟವೆಂದರೆ ಏನು?
ದರ್ಶನ ಎಂದರೆ ಯಾವುದು?
-ಡಾ. ಬೇಲೂರು ರಘುನಂದನ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ದರ್ಶನ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter