ಅಭಿಮಾನಿಗಳು

ಈಗ ಎಲ್ಲೆಡೆಯೂ ಅಭಿಮಾನದ ಮತ್ತು ಅಭಿಮಾನಿಗಳ ಹಾವಳಿ. ಹಿಂದೆಲ್ಲಾ ಚಿತ್ರನಟರು, ಸಂಗೀತಗಾರರು, ಆಟಗಾರರು ಮತ್ತು ಕೆಲವೇ ಕೆಲವು ರಾಜಕಾರಣಿಗಳಿಗೆ ಅಭಿಮಾನಿಗಳಿರುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಭ್ರಷ್ಟರು, ಲಂಪಟರು, ಕೃತಿಚೋರರು, ಸಮಾಜಘಾತಕರು ಮತ್ತು ದೇಶದ್ರೋಹಿಗಳಿಗೂ ಅಭಿಮಾನಿಗಳಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಅಭಿಮಾನದ ಮತ್ತು ಅಭಿಮಾನಗಳ ಬಗೆಗಿನ ವ್ಯಾಖ್ಯೆಯೇ ಬದಲಾಗಿರುವುದು ದುರದೃಷ್ಟಕರ ಸಂಗತಿ.

“ಯುವರತ್ನ”, “ರಾಜರತ್ನ” ಮತ್ತು “ಪವರ್ ಸ್ಟಾರ್” ಎಂದು ಖ್ಯಾತಿ ಪಡೆದಿದ್ದ ಪುನೀತ್ ರಾಜಕುಮಾರ ಭಾರತದ ಅತ್ಯುತ್ತಮ ನಟರಲ್ಲೊಬ್ಬರು. ತಮ್ಮ ಅಮೋಘ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಅತ್ಯಂತ ಪ್ರೀತಿಪಾತ್ರರಾಗಿದ್ದ ವಿಶಿಷ್ಟ ವ್ಯಕ್ತಿತ್ವದ ಮಹಾಮಾನವತಾವಾದಿ. ಕೇವಲ 46 ವರ್ಷಗಳ ಅಲ್ಪಾವಧಿಯಲ್ಲಿ ‘ಬದುಕಿದರೆ ಹೀಗೆಯೇ ಬದುಕಬೇಕು’ ಎಂಬಂತೆ ಸಾರ್ಥಕ ಜೀವನ ನಡೆಸಿದರು. ಅವರ ಹಠಾತ್ ನಿಧನ ಕೋಟ್ಯಂತರ ಅಭಿಮಾನಿಗಳಿಗೆ ಸಹಿಸಲಾಗದ ದುಃಖ ತಂದಿದೆ. ಈ ಜನಾನುರಾಗಿ ಮಹಾನಟನ ನಿಧನ ಕರ್ನಾಟಕಕಕ್ಕಂತೂ ಎಂದೂ ತುಂಬಲಾರದ ನಷ್ಟ. ‘ಪುತ್ರಶೋಕಂ ನಿರಂತರಂ’ ಎಂಬ ಮಾತನ್ನು ಸ್ವಲ್ಪ ಬದಲಿಸಿ ‘ಪುನೀತ್ ಶೋಕಂ ನಿರಂತರಂ’ ಎಂದು ಹೇಳಬಹುದು.

‘ಶರಣರನ್ನು ಮರಣದಲ್ಲಿ ಕಾಣು’ ಎಂಬಂತೆ ಪುನೀತ್ ರಾಜಕುಮಾರರ ನಿಧನವಾದಾಗ ನಿಜವಾದ ಅಭಿಮಾನ ಎಂದರೆ ಏನು? ಮತ್ತು ನಿಜವಾದ ಅಭಿಮಾನಿಗಳು ಯಾರು? ಎಂಬ ಸತ್ಯದ ದರ್ಶನವಾಯಿತು. ಬಹುಶಃ ಅಂದು ದೇವರೆಂಬುವವನು ಪುನೀತ್ ರಾಜಕುಮಾರರ ಅಭಿಮಾನಿಗಳ ಅಕ್ಷೋಹಿಣಿಯ ಕೈಗೆ ಸಿಕ್ಕಿದ್ದರೆ ಏನಾಗುತ್ತಿದ್ದನೋ? ಪ್ರೀತಿಯ ರಾಯಭಾರಿಯೂ, ಕನ್ನಡಿಗರ ಕಣ್ಮಣಿಯೂ ಆದ ಪುನೀತ್ ರಾಜಕುಮಾರರು ಭೌತಿಕವಾಗಿ ನಮ್ಮಿಂದ ದೂರವಾದರೂ ಸಹ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ‘ಕರ್ನಾಟಕ ರತ್ನ’ ಪುನೀತ್ ರಾಜಕುಮಾರರಿಗೆ ನನ್ನ ಹೃತ್ಪೂರ್ವಕ ನಮನಗಳು.

ಇರಲಿ, ಮತ್ತೆ ಈಗ ಅಭಿಮಾನಿಗಳ ವಿಷಯಕ್ಕೆ ಬರೋಣ. ನಮ್ಮ ದೇಶದಲ್ಲಿ ಅಭಿಮಾನಿಗಳ ವಿಷಯದಲ್ಲಿ ಚಿತ್ರನಟರಿಗೆ ಸ್ಪರ್ಧೆಯೊಡ್ಡಬಲ್ಲವರೆಂದರೆ ಅದು ಕ್ರಿಕೆಟ್ ಆಟಗಾರರು ಮಾತ್ರ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಿವೃತ್ತರಾಗಿ ತುಂಬ ವರ್ಷಗಳೇ ಕಳೆದರೂ ಅವರ ಗತ್ತು, ವರ್ಚಸ್ಸು ಕಡಿಮೆಯಾಗಿಲ್ಲ. ಬಂಗಾಳದಲ್ಲಂತೂ ಸೌರವ್ ಗಂಗೂಲಿಯವರಿಗಿರುವ ಅಭಿಮಾನಿ ಬಳಗ ಮತ್ತು ಅವರ ಬಗೆಗಿರುವ ಅಭಿಮಾನ ಕಂಡು ಯಾರಾದರೂ ಆಶ್ಚರ್ಯ ಪಡಬೇಕು ಹಾಗಿದೆ ಸೌರವ್ ಗಂಗೂಲಿಯವರ ವರ್ಚಸ್ಸು. ಇದೇ ಮಾತು ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅವರಿಗೂ ಅನ್ವಯಿಸುತ್ತದೆ. ಮಹೇಂದ್ರ ಸಿಂಗ್ ಧೋನಿಯವರಿಗೆ ನಾಯಕರಾಗಿದ್ದಾಗ ಇದ್ದ ವರ್ಚಸ್ಸು ಈಗ ಇಲ್ಲವಾದರೂ ಅವರ ಅಭಿಮಾನಿ ಬಳಗವೂ ಸಾಕಷ್ಟು ದೊಡ್ಡದಿದೆ.

ಸದ್ಯದ ಬಿಸಿ ಬಿಸಿ ಚರ್ಚೆಯೆಂದರೆ ವಿರಾಟ್ ಕೋಹ್ಲಿ ವರ್ಸಸ್ ರೋಹಿತ್ ಶರ್ಮ ಎಂಬುದು. ನಿಜಕ್ಕೂ ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮರ ನಡುವೆ ಎಷ್ಟು ಶತ್ರುತ್ವವಿದೆಯೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಅಭಿಮಾನಿಗಳ ಮಧ್ಯ ನಡೆಯುವ ಜಗಳಗಳು ತುಂಬ ಸ್ವಾರಸ್ಯಕರವಾಗಿರುತ್ತವೆ. ಭಾರತದ ಟ್ವೆಂಟಿ ಟ್ವೆಂಟಿ ಮತ್ತು ಏಕದಿನ ಕ್ರಿಕೆಟ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿ ಆಯ್ಕೆಯಾದ ನಂತರ ಇವರಿಬ್ಬರ ಅಭಿಮಾನಿಗಳ ಜಗಳ ತಾರಕಕ್ಕೇರಿದೆ. ಇದರಿಂದ ಏನೂ ಆಗದಿದ್ದರೂ ಕನಿಷ್ಠ ಪಕ್ಷ ನೆಟ್ಟಿಗರಿಗೆ ಮನರಂಜನೆಯಾದರೂ ಸಿಗುತ್ತದೆ. ಇದಕ್ಕೊಂದು ತಾಜಾ ಉದಾಹರಣೆಯಾಗಿ ಈ ಘಟನೆಯನ್ನು ಗಮನಿಸಬಹುದು.

ರೋಹಿತ್ ಅಭಿಮಾನಿ : “ಭಾರತದಲ್ಲಿ ಹುಟ್ಟಿದ ನಾನೇ ಭಾಗ್ಯವಂತ! ಏಕೆಂದರೆ ನಮ್ಮ ಗುರು ಏಕದಿನ ಕ್ರಿಕೆಟಿನಲ್ಲಿ ಮೂರು ದ್ವಿಶತಕ ಬಾರಿಸಿದ್ದಾರೆ!!”

ವಿರಾಟ್ ಅಭಿಮಾನಿ : “ನಿನ್ನನ್ನು ಹುಟ್ಟಿಸಿದ ನಿನ್ನ ತಂದೆ-ತಾಯಿ ದುರದೃಷ್ಟವಂತರು! ಏಕೆಂದರೆ ನೀನು ಕಳೆದ ಮೂರು ವರ್ಷಗಳಿಂದ ಪಿ.ಯು.ಸಿ. ಫೇಲಾಗುತ್ತಿದ್ದೀಯ!!”

ರೋಹಿತ್ ಅಭಿಮಾನಿ : “ನಿಮ್ಮ ಗುರು ಕ್ಯಾಪ್ಟನ್ ಆಗಿರುವ ಆರ್.ಸಿ.ಬಿ. ಎಷ್ಟು ಕಪ್ ಗೆದ್ದಿದೆಯೆಂದು ನಮಗೂ ಗೊತ್ತು ಮರಿ, ಸುಮ್ಮನೆ ಕೊಚ್ಚಿಕೋಬೇಡ.”

ವಿರಾಟ್ ಅಭಿಮಾನಿ : “ಈ ಸಲ ಕಪ್ ನಮ್ದೇ! ಜೈ ಆರ್.ಸಿ.ಬಿ! ಜೈ ವಿರಾಟ್ ಕೋಹ್ಲಿ!!”

ರೋಹಿತ್ ಅಭಿಮಾನಿ : “ಎರಡು ಸಾವಿರ ವರ್ಷಗಳಿಂದ ಇದನ್ನು ಕೇಳುತ್ತಿದ್ದೇನೆ! ಕನಸು ಕಾಣೋದಿಕ್ಕೆ ದುಡ್ಡು ಕೊಡಬೇಕಾಗಿಲ್ಲವಾದ್ದರಿಂದ ಅಷ್ಟಾದರೂ ಮಾಡು ಮರಿ…”

ಹೀಗೆ ನಾಟಕದ ಸಂಭಾಷಣೆಯಂತೆ ಇದು ಸಾಗುತ್ತದೆ. ನನಗೆ ನಮ್ಮ ದೇಶದಲ್ಲಿ ಎಷ್ಟು ಮಂದಿ ಕೆಲಸವಿಲ್ಲದ ಜನ ಇಂತಹ ವ್ಯರ್ಥ ವಿಷಯಗಳ ಕುರಿತು ಕಾಲಹರಣ ಮಾಡುತ್ತಿದ್ದಾರೆ ಎನಿಸಿ ಆಶ್ಚರ್ಯವಾಗುತ್ತದೆ. ಇದನ್ನು ನನ್ನ ಮಿತ್ರನೊಬ್ಬನ ಬಳಿ ಹೇಳಿದಾಗ ಆತ ಕುದ್ದು ಹೋದ.

“ಈ ಮುಂಬೈ ಮತ್ತು ಚೆನ್ನೈ ಟೀಮುಗಳವರಿಗೆ ಒಂದು ಪಾಠ ಕಲಿಸಬೇಕಾಗಿದೆ!” ಎಂದು ಸಿಟ್ಟಿನಿಂದ ಮೇಜು ಗುದ್ದಿ ಹೇಳಿದ.

“ನಮ್ಮ ಗುರು ವಿರಾಟ್ ಕೋಹ್ಲಿಯ ಸಮಯ ಸ್ವಲ್ಪ ಚೆನ್ನಾಗಿಲ್ಲ. ಟಾಸ್ ಸೋಲೆ ಮ್ಯಾಚಿನ ಸೋಲಿಗೆ ಮುಖ್ಯ ಕಾರಣ! ಟಾಸ್ ಮಾಡುವಾಗ ನಮ್ಮ ಗುರುವಿಗೆ ಮೋಸ ಮಾಡುತ್ತಿದ್ದಾರೆ, ಶೀಘ್ರದಲ್ಲಿಯೇ ಇದರ ಕುರಿತು ಸಿ.ಬಿ.ಐ. ತನಿಖೆ ಮಾಡಬೇಕೆಂಬುದು ನಾವೆಲ್ಲ ಹೋರಾಟ ಮಾಡಲಿದ್ದೇವೆ!” ಎಂದು ಆವೇಶದಿಂದ ಹೇಳಿದ.

ವಿರಾಟ್ ಕೋಹ್ಲಿ ಮತ್ತು ಆರ್.ಸಿ.ಬಿ.ಯ ಉಗ್ರ ಅಭಿಮಾನಿಯಾದ ಇವನೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ನಾನು ಆತನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು.

ಚಿತ್ರನಟರ ಕುರಿತು ಅವರ ಅಭಿಮಾನಿಗಳಿಗಿರುವ ಅತಿರೇಕದ ಪ್ರೀತಿ ಕಂಡರೆ ಆಶ್ಚರ್ಯವಾಗುತ್ತದೆ. ಈ ವಿಷಯದಲ್ಲಿ ಮಾತ್ರ ನಮ್ಮ ಕನ್ನಡಿಗರು ಪ್ರಬುದ್ಧರು. ಇದೊಂದು ವಿಷಯಕ್ಕಾದರೂ ನಮ್ಮ ಕನ್ನಡ ಪ್ರೇಕ್ಷಕರನ್ನು ಅಭಿನಂದಿಸಲೇಬೇಕು. ತೆಲುಗು, ತಮಿಳು ಮತ್ತು ಮಲಯಾಳಂ ನಟರ ಅಭಿಮಾನಿಗಳ ಹುಚ್ಚಾಟಕ್ಕಂತೂ ಮಿತಿಯೇ ಇಲ್ಲ.

ತೆಲುಗಿನ ಸ್ಟಾರ್ ನಟರಾದ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣರ ಅಭಿಮಾನಿಗಳು ಆಜನ್ಮ ವೈರಿಗಳಂತೆ ಬಡಿದಾಡುತ್ತಾರೆ. ನಟ ಪವನ್ ಕಲ್ಯಾಣನ ಉಗ್ರ ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟನನ್ನು ನಿಂದಿಸಿದವನೊಬ್ಬನನ್ನು ಕೊಲೆ ಮಾಡಿ ಜೈಲು ಸೇರಿದ! ನಂತರದ ದಿನಗಳಲ್ಲಿ ಆತನ ಆರಾಧ್ಯ ದೈವವಾದ ಪವನ್ ಕಲ್ಯಾಣ ಅವನಿಗೇನಾದರೂ ಜಾಮೀನು ಕೊಡಿಸಿ ಜೈಲಿನಿಂದ ಹೊರತಂದನೆ? ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಚಿತ್ರನಟರನ್ನು ದೇವರಂತೆ ಆರಾಧಿಸುವ ತಮಿಳು ಪ್ರೇಕ್ಷಕರ ಹುಚ್ಚಾಟದ ಬಗ್ಗೆ ಸಾಕಷ್ಟು ಜೋಕುಗಳು ಪ್ರಚಲಿತದಲ್ಲಿವೆ. “ವೀರಪಾಂಡ್ಯ ಕಟ್ಟಬೊಮ್ಮನ್” ಎಂಬ ಐತಿಹಾಸಿಕ ಚಿತ್ರದಲ್ಲಿ ತಮಿಳಿನ ಮೇರುನಟ ಶಿವಾಜಿ ಗಣೇಶನ್ ಸ್ವಾತಂತ್ರ್ಯ ಹೋರಾಟಗಾರನಾದ ತಮಿಳುನಾಡಿನ ಪಾಳೆಯಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಪಾತ್ರದಲ್ಲಿ ಅಕ್ಷರಶಃ ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟಿಸಿದ್ದರು. ಬ್ರಿಟಿಷರ ವಿರುದ್ಧ ಕಟ್ಟಬೊಮ್ಮನ್ ವೀರಾವೇಶದಿಂದ ಹೋರಾಡಿದರೂ ಸಹ ಕೊನೆಗೆ ಕಟ್ಟಬೊಮ್ಮನ್ ನನ್ನು ಬ್ರಿಟಿಷರು ಗಲ್ಲಿಗೇರಿಸುತ್ತಾರೆ.

“ವೀರಪಾಂಡ್ಯ ಕಟ್ಟಬೊಮ್ಮನ್” ಚಿತ್ರದ ಕುರಿತು ಇಂಗ್ಲಿಷ್ ಪತ್ರಿಕೆಯ ಪತ್ರಕರ್ತನೊಬ್ಬ ತಮಿಳು ಪ್ರೇಕ್ಷಕನೊಬ್ಬನನ್ನು ಕೇಳಿದಾಗ ಆತ “ಚಿತ್ರವೇನೋ ಚೆನ್ನಾಗಿದೆ ಆದರೆ ಕಟ್ಟಬೊಮ್ಮನ್ ಪಾತ್ರವನ್ನು ಶಿವಾಜಿ ಗಣೇಶನ್ ಮಾಡಿದ್ದರಿಂದ ಬ್ರಿಟಿಷರು ಗಲ್ಲಿಗೇರಿಸಿದರು. ಅದೇ ವಾದ್ಯಾರ್ (ಎಂ.ಜಿ.ರಾಮಚಂದ್ರನ್) ಕಟ್ಟಬೊಮ್ಮನ್ ಆಗಿದ್ದರೆ ಈ ಬ್ರಿಟಿಷ್ ನಾಯಿಗಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತಿದ್ದರು!” ಎಂದು ಆವೇಶಭರಿತನಾಗಿ ಹೇಳಿದನಂತೆ. ತಮಿಳು ಪ್ರೇಕ್ಷಕರ ಅಂಧಾಭಿಮಾನದ ಕುರಿತು ಇದಕ್ಕಿಂತ ಹೆಚ್ಚಿನ ವಿವರಣೆಯ ಅಗತ್ಯವಿಲ್ಲವೆನಿಸುತ್ತದೆ.

ಮಲಯಾಳಂ ಪ್ರೇಕ್ಷಕರು ನಮ್ಮ ತಮಿಳು, ತೆಲುಗು ಬಾಂಧವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಮಲಯಾಳಿಗಳ ದೃಷ್ಟಿಯಲ್ಲಿ ಮಮ್ಮುಟ್ಟಿ, ಮೋಹನಲಾಲರನ್ನು ಮೀರಿಸುವ ನಟರು ಹಿಂದೆಯೂ ಹುಟ್ಟಿಲ್ಲ, ಮುಂದೆಯೂ ಹುಟ್ಟುವುದಿಲ್ಲ! ಮಲಯಾಳಂ ಚಿತ್ರಗಳೇ ಎಲ್ಲ ಚಿತ್ರಗಳಿಗಿಂತ ಶ್ರೇಷ್ಠವೆಂಬುದು ಮಲಯಾಳಿಗಳ ಖಚಿತ ಅಭಿಪ್ರಾಯ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯವರು ಪರಸ್ಪರರ ಚಿತ್ರಗಳನ್ನು ಕದ್ದು ಸಿನಿಮಾ ಮಾಡುತ್ತಾರೆ ಆದರೆ ಮಲಯಾಳಂನವರು ಪಾಶ್ಚಾತ್ಯ ಸಿನಿಮಾಗಳನ್ನು ಕದ್ದು ಸಿನಿಮಾ ಮಾಡುತ್ತಾರೆ. ಮಲಯಾಳಿಗಳು ಎಷ್ಟು ಬುದ್ಧಿವಂತರೆಂದರೆ ಅವರು ಕದ್ದು ಸಿನಿಮಾ ಮಾಡಿದರೂ ಅದನ್ನು ಸಾಬೀತು ಮಾಡುವುದು ತುಂಬ ಕಷ್ಟ. ಅದೇ ರೀತಿ ಮಲಯಾಳಿ ಚಿತ್ರದ ಅಭಿಮಾನಿಗಳು ಎಂತಹ ಶ್ರೇಷ್ಠ ಚಿತ್ರವೇ ಬರಲಿ, ಎಂತಹ ಶ್ರೇಷ್ಠ ನಟನೇ ಇರಲಿ ಯಾವುದೇ ಕಾರಣಕ್ಕೂ ಅದನ್ನು ಒಪ್ಪುವುದಿಲ್ಲ. ಮಲಯಾಳಂ ಚಿತ್ರಗಳೇ ಮೇಲು ಎಂದು ವಾದಿಸುತ್ತಾರೆ.

ಇನ್ನು ಪ್ರಶಸ್ತಿಗಳನ್ನು ದುಡ್ಡು ಕೊಟ್ಟು ಖರೀದಿಸುವಲ್ಲಿ ಹಿಂದಿ ಮತ್ತು ಮಲಯಾಳಂ ಚಿತ್ರರಂಗದವರ ನಡುವೆ ಸಾಕಷ್ಟು ಪೈಪೋಟಿಯಿದೆ. ಯಾವುದೇ ಒಂದು ಪ್ರಶಸ್ತಿಯ ಮೇಲೆ ಮಲಯಾಳಿಗಳ ಕಣ್ಣು ಬಿದ್ದರೆ ಅವರದನ್ನು ಏನಾದರೂ ಮಾಡಿ ಪಡೆದೇ ತೀರುತ್ತಾರೆ. ಇದರ ಕುರಿತು ನನ್ನ ಮಲಯಾಳಿ ಸ್ನೇಹಿತೆಗೆ ತಮಾಷೆ ಮಾಡಿದಾಗ ಅವಳ ಮುಖ ಸಪ್ಪಗಾಯಿತು. ಮಮ್ಮುಟ್ಟಿ, ಮೋಹನಲಾಲ್ ಅಂತಹವರಲ್ಲ ಎಂದು ವಾದಿಸಿದಳು.  ಮಲಯಾಳಿ ನಟರಾದ ಮಮ್ಮುಟ್ಟಿ, ಮೋಹನಲಾಲರಿಗೋಸ್ಕರ ಈ ಸುಂದರ ಮಲಯಾಳಿ ಹುಡುಗಿಯ ಸ್ನೇಹವನ್ನು ಕಳೆದುಕೊಳ್ಳುವುದು ಬುದ್ಧಿವಂತಿಕೆಯಲ್ಲವೆಂದು ಆ ವಿಚಾರವನ್ನು ಅಲ್ಲಿಗೇ ಕೈಬಿಟ್ಟೆ.

ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳ ಕುರಿತು ಹೇಳಿದ ಮೇಲೆ ನಮ್ಮ ಸಾಹಿತ್ಯಾಭಿಮಾನಿಗಳ ಕುರಿತು ಹೇಳದಿದ್ದರೆ ಬುದ್ಧಿಜೀವಿಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಒಬ್ಬ ಶ್ರೀಮಂತ, ಮಧ್ಯವಯಸ್ಕ ಹೆಂಗಸೊಬ್ಬಳಿಗೆ ಒಳ್ಳೆಯ ಕವಯತ್ರಿಯಾಗುವ ಹಂಬಲ. ಪ್ರತಿಭೆಯಿಲ್ಲದಿದ್ದರೂ ಪ್ರಚಾರ, ಪ್ರಶಸ್ತಿ ಮತ್ತು ಪ್ರಸಿದ್ಧಿಗಾಗಿ ಹಂಬಲಿಸುತ್ತಿದ್ದ ಈ ಅತೃಪ್ತ ಲೇಖಕಿ ಗುರುವಿನ ಹುಡುಕಾಟದಲ್ಲಿದ್ದಾಗ ಅದೇ ಸಮಯಕ್ಕೆ ಸರಿಯಾಗಿ ಒಂದು ಕಾಲದಲ್ಲಿ ಬರೀ ಕಾಮುಕ ಪದ್ಯಗಳನ್ನು ಬರೆದು ಖ್ಯಾತನಾದ ಗೋದ್ರೆಜ್ ಕವಿ (ವಯಸ್ಸು ಎಪ್ಪತ್ತು ದಾಟಿದರೂ ಚಿಕ್ಕವನೆಂದು ತೋರಿಸಿಕೊಳ್ಳಲು ಗೋದ್ರೆಜ್ ಹೇರ್ ಡೈ ಬಳಸುತ್ತಿದ್ದರಿಂದ ಗೋದ್ರೆಜ್ ಕವಿ ಎಂಬ ಹೆಸರು) ತನಗೆ ಎಲ್ಲ ವಿಧದಲ್ಲೂ ಸಹಕರಿಸಬಲ್ಲ ಶಿಷ್ಯೆಯ ಹುಡುಕಾಟದಲ್ಲಿದ್ದ. ಇಂತಹ ಸಂದರ್ಭದಲ್ಲಿ ಸರಿಯಾಗಿ ಇಬ್ಬರು ಅತೃಪ್ತರಿಗೂ ಪರಿಚಯವಾಯಿತು. ನಂತರದ ದಿನಗಳಲ್ಲಿ ದೇಹವೆರಡು ಜೀವವೊಂದು ಎಂಬಷ್ಟು ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಸ್ತ್ರೀಲೋಲನಾದ ಗೊದ್ರೇಜ್ ಕವಿ ಅತೃಪ್ತ ಲೇಖಕಿಯರನ್ನು ತೃಪ್ತಿಪಡಿಸಲು ಯಾವ ಮಟ್ಟಕ್ಕಾದರೂ ಇಳಿಯಬಲ್ಲನೆಂಬ ಖ್ಯಾತಿ ಹೊಂದಿದ್ದ.

“ಹುಣಸೆ ಮರ ಮುಪ್ಪಾದರೆ ಹುಳಿ ಮುಪ್ಪೆ?” ಎಂಬ ಗಾದೆಗೆ ಒಳ್ಳೆಯ ಉದಾಹರಣೆಯೆಂದರೆ ಗೊದ್ರೇಜ್ ಕವಿ. ತನ್ನ ಶಿಷ್ಯಳಾದ ಅತೃಪ್ತ ಲೇಖಕಿಗೆ ಕಾಮುಕ ಪದ್ಯಗಳನ್ನು ಬರೆಯಲು ಚೆನ್ನಾಗಿ ತರಬೇತಿ ಕೊಟ್ಟು ಅವಳು ಕಾಮುಕ ಕವಯತ್ರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆಯುವಂತೆ ಮಾಡಿದ. ಅವಳ ಹೆಸರಿನಲ್ಲಿ ತಾನೇ ಕೆಲವು ಪೋಲಿ ಪದ್ಯಗಳನ್ನು ಬರೆದು ಅವಳ ಕವನಸಂಕಲನ ಪ್ರಕಟವಾಗುವಂತೆ ಮಾಡಿದ. ನಂತರ ನಾಯಿಕೊಡೆಗಳಂತೆ ಹುಟ್ಟಿಕೊಂಡ ಸಂಸ್ಥೆಗಳು ನೀಡುವ ಪ್ರಶಸ್ತಿಯೊಂದನ್ನು ಕೊಡಿಸಲು ಇನ್ನಿಲ್ಲದಂತೆ ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆದ. ಗೊದ್ರೇಜ್ ಕವಿ ಬರೀ ಕವಿತೆಗಳ ಮೇಲೆ ಮಾತ್ರವಲ್ಲ ಕವಯತ್ರಿಯ ಮೈಮೇಲೂ ಯಥೇಚ್ಛವಾಗಿ ಕೈಯಾಡಿಸುತ್ತಿದ್ದ ರಸಿಕನೆಂಬ ವಿಷಯ ಅನೇಕ ಜನರಿಗೆ ಗೊತ್ತಿಲ್ಲ.

ಈ ಕಾಮುಕ ಗುರು-ಶಿಷ್ಯೆ ಏಕಾಂತದ ಪ್ರಯೋಗಗಳ ಮೂಲಕ ಕಂಡುಕೊಂಡ ಸತ್ಯವೇ ಕಾಮುಕ ಕವಿತೆಗಳಲ್ಲಿ ಕಂಡುಬರುವುದರಿಂದ ಸಹಜವಾಗಿಯೇ ಇಂತಹ ಕವಿತೆಗಳನ್ನು ಆಸ್ವಾದಿಸುವ ಒಂದು ವರ್ಗದ ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಕಾಮಪೀಡಿತರಾದ ಈ ಗುರು-ಶಿಷ್ಯೆಯರ ರಚನೆಗಳು ಹೇಗಿರಬಹುದೆಂಬ ಕುತೂಹಲದಿಂದ ನೋಡಿದರೆ ಬರೀ ಕಾಮುಕತೆಯೇ ವಿಜೃಂಭಿಸುತ್ತದೆ. ಸ್ತನ, ಜಘನ, ವೀರ್ಯ, ಅಂಡಾಣು ಮತ್ತು ಮೈಥುನದಂತಹ ಪದಗಳು  ಸಾಕಷ್ಟು ಬಾರಿ ಪುನರಾವರ್ತನೆಯಾಗಿವೆ.

ದುರಂತದ ಸಂಗತಿಯೆಂದರೆ ಈ ಮಹಾಶಯ ಅವಳನ್ನು ಮಗಳೆಂದು ಕರೆಯುತ್ತಾನೆ. ಇವಳು ಅವನನ್ನು ತಂದೆ, ಗುರು, ಮಾರ್ಗದರ್ಶಿ, ಗೆಳೆಯ ಎಂದೆಲ್ಲ ಕರೆಯುತ್ತಾಳೆ. ಗೊದ್ರೇಜ್ ಕವಿ ಶ್ರೀಕೃಷ್ಣ ಮತ್ತು ಕಾಮುಕ ಕವಯತ್ರಿ ಮೀರಾ ಎಂದು ತಮ್ಮ ಅನೈತಿಕ ಸಂಬಂಧಕ್ಕೆ ಆಧ್ಯಾತ್ಮಿಕತೆಯನ್ನು ಆರೋಪಿಸಿಕೊಳ್ಳಲು ಯತ್ನಿಸುತ್ತಿದ್ದಾರಾದರೂ ಅದನ್ನು ಯಾರೂ ನಂಬುತ್ತಿಲ್ಲ.

ಯಾವುದೇ ಸಭೆ-ಸಮಾರಂಭವಿದ್ದರೂ ಗೊದ್ರೇಜ್ ಕವಿ ಕಾಮುಕ ಕವಯತ್ರಿಯನ್ನು ಕರೆದುಕೊಂಡು ಹೋಗಲೇಬೇಕು. ಅವಳು ಬಂದರೆ ಮಾತ್ರ ಇವನು ಬರುತ್ತಾನೆ. ತನಗೆ ಮತ್ತು ಅವಳಿಗೆ ಒಂದೇ ರೂಮು ಕೊಡಬೇಕೆಂದು ಹಠ ಹಿಡಿಯುತ್ತಾನೆ. ಸಾಕಿದ ನಾಯಿ ಯಜಮಾನಿಯ ಹಿಂದೆ ತಿರುಗುವಂತೆ ಸದಾ ಅವಳ ಹಿಂದೆ ಹಿಂದೆ ತಿರುಗುತ್ತಾನೆ. ಗೊದ್ರೇಜ್ ಕವಿಗೆ ಹಗಲಿರುಳೂ ಕಾಮುಕ ಕವಯತ್ರಿಯದೇ ಚಿಂತೆ. ಈ ಮುಪ್ಪಿನ ವಯಸ್ಸಲ್ಲಿ ಈ ಮಹಾಶಯ ಮಹಾವಿಷ್ಣುವಿನ ಧ್ಯಾನ ಮಾಡಿದ್ದರೆ ಸತ್ತ ಮೇಲೆ ಖಂಡಿತವಾಗಿಯೂ ವೈಕುಂಠದಲ್ಲೊಂದು ಸೀಟು ಸಿಗುತ್ತಿತ್ತೆಂದು ಹಿರಿಯ ಕವಿ ಪು.ತಿ.ನ. ಅವರ “ಶ್ರೀ ಹರಿಚರಿತೆ” ಕೃತಿಯ ಮೇಲೆ ಆಣೆ ಮಾಡಿ ಹೇಳಬಹುದು!

ಇರಲಿ, ಒಳ್ಳೆಯದಕ್ಕಿಂತ ಕೆಟ್ಟದ್ದರ ಕಡೆಗೆ ಗಮನ ಬೇಗ ಹೋಗುತ್ತದೆ. ಕಾಮುಕ ಕವಯತ್ರಿ ತನ್ನ ಗುರು ಗೊದ್ರೇಜ್ ಕವಿಗೆ ಯಾರಾದರೂ ಏನಾದರೂ ಅಂದರೆ ಕೆಂಡಾಮಂಡಲವಾಗುತ್ತಾಳೆ. ತನ್ನ ಗುರು ಮತ್ತು ಸರ್ವಸ್ವವಾದ ಗೊದ್ರೇಜ್ ಕವಿಯ ಕುರಿತು ಅವಳಿಗಿರುವ ಅಭಿಮಾನ ಅಂತಹುದು.

ಯಾವುದೋ ಚಿಕ್ಕ ಪ್ರಶಸ್ತಿ ಸಮಿತಿಯಲ್ಲಿದ್ದ ಹಿರಿಯರೊಬ್ಬರನ್ನು ಕಾಮುಕ ಕವಯತ್ರಿ ತನ್ನ ಮನೆಗೆ ಊಟಕ್ಕೆ ಕರೆದಿದ್ದಳು. ಅವಳ ಉದ್ದೇಶ ಈ ಹಿರಿಯರಿಗೆ ಗಾಳ ಹಾಕಿ ಆ ಪ್ರಶಸ್ತಿ ಪಡೆಯುವುದು. ಆದರೆ ಇವಳ ಹಿನ್ನಲೆ ತಿಳಿಯದ ಆ ಹಿರಿಯ ಲೇಖಕರು (ಇವರು ತುಂಬ ಸಂಭಾವಿತ ಮತ್ತು ವಿನೋದ ಸ್ವಭಾವದ ವ್ಯಕ್ತಿ) ಲೋಕಾಭಿರಾಮವಾಗಿ ಮಾತನಾಡುತ್ತಾ ಗೊದ್ರೇಜ್ ಕವಿಯನ್ನು ಟೀಕಿಸಿದ್ದಾರೆ. ಯಾವಾಗ ತನ್ನ ಆರಾಧ್ಯ ದೈವವಾದ ಗೊದ್ರೇಜ್ ಕವಿಯ ಕುರಿತು ಟೀಕೆಯ ಮಾತುಗಳನ್ನು ಕೇಳಿದಳೋ ಆಕೆಯ ಮುಖಚಹರೆಯೇ ಬದಲಾಯಿತು. ಕೋಪದಿಂದ ಕಣ್ಣು ಕೆಂಪಗೆ ಮಾಡಿಕೊಂಡು, ಹಾವಿನಂತೆ ಬುಸುಗುಟ್ಟುತ್ತ ಆ ಹಿರಿಯರನ್ನು ಅಕ್ಷರಶಃ ಹೊಡೆಯಲು ಬಂದಳಂತೆ. ಆ ಹಿರಿಯರು ಹೌಹಾರಿ ಹೇಗೋ ಈ ರಾಕ್ಷಸಿಯಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದರಂತೆ ಅದೇ ಸಮಯಕ್ಕೆ ಶ್ರೀಕೃಷ್ಣ ಪರಮಾತ್ಮ ಅವತರಿಸಿದಂತೆ ಆಟೋದವನೊಬ್ಬ ಬಂದು ಇವರ ಪ್ರಾಣ ಕಾಪಾಡಿದನಂತೆ. “ದೇವರು ದೊಡ್ಡವನು! ನನ್ನ ಕೈ ಬಿಡಲಿಲ್ಲ!!” ಎಂದು ಮನೆಗೆ ಹೋದ ನಂತರ ಅಕಾಲ ಮೃತ್ಯುವಿನಿಂದ ಪಾರುಮಾಡಿದ್ದಕ್ಕಾಗಿ ಶ್ರೀಕೃಷ್ಣನ ಪಟದ ಮುಂದೆ ತುಪ್ಪದ ದೀಪ ಹಚ್ಚಿದರಂತೆ.

“ನಾನೂ ನನ್ನ ಸರ್ವೀಸಿನ್ಯಾಗ ಎಂಥೆಂಥಾ ಅಭಿಮಾನಿಗಳನ್ನ ನೋಡೀನಿ. ಆದ್ರ ಯಕಶ್ಚಿತ್ ಕವಿಯೊಬ್ಬಾಂವನ ಹೆಣ್ಣು ಅಭಿಮಾನಿ ಕವಿನಿಂದನಾ ಕೇಳಲಾರದ ಕೊಲೆ ಮಾಡೂ ಮಟ್ಟಕ್ಕ ಹೋದಾಳೂ ಅನ್ನೂ ಕಲ್ಪನಾ ನನಗಿದ್ದಿದ್ದಿಲ್ಲ. ಈ ಹುಚ್ಚಂಗಿ ಮಗಾ ಗೋದ್ರೆಜನ ಸಲುವಾಗಿ ಅದನ್ನೂ ಪ್ರತ್ಯಕ್ಷ ನೋಡೂ ಹಂಗ ಆತು. ಇರ್ಲಿ, ದೇವರು ದೊಡ್ಡಾಂವ! ಜೀವರ ಉಳೀತು!! ಆದ್ರೂ ಈ ಮಂಗ್ಯಾನ ಮಗಾ ಗೋದ್ರೆಜ ಆಕಿ ಮ್ಯಾಲ ಎಂಥಾ ಮೋಡಿ ಮಾಡ್ಯಾನ್ರೀ?” ಎಂದು ತಾವು ಪ್ರಾಣಾಪಾಯದಿಂದ ಪಾರಾದ ಘಟನೆಯನ್ನು  ಆ ಹಿರಿಯರು ತಮಾಷೆಯ ಪ್ರಸಂಗವೊಂದನ್ನು ಹೇಳಿದಂತೆ ಹೇಳುತ್ತಿದ್ದರು. ಗೊದ್ರೇಜ್ ಮತ್ತು ಕಾಮುಕಿಯ ಕುರಿತು ಬರೆಯ ಹೊರಟರೆ ಅದೊಂದು ಕಾಮುಕ ಕಾದಂಬರಿಯಾಗಬಹುದು  ಆದ್ದರಿಂದ ಇವರ ವಿಷಯ ಇಲ್ಲಿಗೇ ನಿಲ್ಲಿಸುವುದು ಒಳಿತೆಂದು ತೋರುತ್ತದೆ.

ಹತ್ತು ವರ್ಷಗಳ ಹಿಂದೆ ಯುವಕವಿಯಾಗಿದ್ದ ವ್ಯಕ್ತಿಯೊಬ್ಬ ಮೂರು ನಾಲ್ಕು ಕವನಸಂಕಲನ ಪ್ರಕಟಿಸಿದ್ದ. ಸಾಕಷ್ಟು ಪ್ರಯತ್ನಿಸಿ ಜಾತಿ, ಪ್ರದೇಶ, ವಯೋಮಿತಿ ಮತ್ತು ಶಿಫಾರಸ್ಸಿನ ಆಧಾರದ ಮೇಲೆ ಕೆಲವು ಸಣ್ಣ-ಪುಟ್ಟ ಪ್ರಶಸ್ತಿಗಳನ್ನು ಪಡೆಯವಲ್ಲಿ ಯಶಸ್ವಿಯೂ ಆಗಿದ್ದ. ಈತ ಮಾತೆತ್ತಿದರೆ “ನನಗಿರುವ ಮಹಿಳಾ ಅಭಿಮಾನಿಗಳ ಲೆಕ್ಕವಿಟ್ಟರಿಲ್ಲ!” ಎಂದು ಉದ್ಧಟತನದಿಂದ ಮಾತನಾಡುತ್ತಿದ್ದ. ನನಗೆ ಈವರೆಗೆ ನೂರಕ್ಕೂ ಅಧಿಕ ಹುಡುಗಿಯರು ಮತ್ತು ಮಹಿಳೆಯರು ರಕ್ತದಲ್ಲಿ ಪ್ರೇಮಪತ್ರ ಬರೆದಿದ್ದಾರೆ ಎಂದು ಕೊಚ್ಚಿಕೊಳ್ಳುತ್ತಿದ್ದ. ನನಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆಂದು ಕಂಬಿಯಿಲ್ಲದೆ ರೈಲು ಬಿಡುತ್ತಿದ್ದ. ನಂತರ ಈತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ ಈತ ಬುರುಡೆ ಬಾಬಾ ಎಂಬ ಸತ್ಯ ತಿಳಿಯಿತು. ಈತ ಕವಿಯಾದ್ದರಿಂದ (ಕಳಪೆ ದರ್ಜೆಯ ಕವಿಯಾದರೂ ಸರಿ!) ತನ್ನ ಭ್ರಮಾಲೋಕದಲ್ಲಿ ತಾನೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ. ಭ್ರಮೆಯಲ್ಲೇ ಬದುಕು ಕಟ್ಟಿಕೊಂಡ ಇಂತಹವರಿಗೆ ಏನು ತಾನೇ ಹೇಳಲು ಸಾಧ್ಯ?

ಫೇಸ್ಬುಕ್ ಸಾಹಿತಿಯದು ವಿಚಿತ್ರ ಕಥೆ. ಹೊಸತಾಗಿ ಬರುವ ಎಲ್ಲ ಬಗೆಯ ಪುಸ್ತಕಗಳನ್ನೋದಿ ಅದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಬರೆದು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ ಮೆರೆಯುವುದು ಇವನ ವಿಶೇಷತೆಗಳಲ್ಲೊಂದು. ಈತನ ಬರಹಕ್ಕೆ ಲೈಕ್ ಒತ್ತುವವರೆಲ್ಲ ಅವನ ಅಭಿಮಾನಿಗಳೇ. ಕಮೆಂಟ್ ಹಾಕಿ ಶೇರ್ ಮಾಡಿದರೆ ಅವರು ಉಗ್ರ ಅಭಿಮಾನಿಗಳು. ಆತನ ದೃಷ್ಟಿಯಲ್ಲಿ ಅವನೊಬ್ಬ ಶ್ರೇಷ್ಠ ವಿಮರ್ಶಕ. ಈತ ಹೇಳುವಂತೆ ಕನ್ನಡದ ಹಿರಿಯ, ಕಿರಿಯ ಲೇಖಕರೆಲ್ಲ ತಮ್ಮ ಪುಸ್ತಕ ಪ್ರಕಟವಾದೊಡನೆಯೇ ಅದರ ಮೊದಲ ಪ್ರತಿಯನ್ನು ಇವನಿಗೆ ತುಂಬ ಭಯ, ಭಕ್ತಿಯಿಂದ ಕಳಿಸುತ್ತಾರೆ. ಇವನು ವಿಮರ್ಶೆ ಮಾಡಲೆಂದು ಚಾತಕ ಪಕ್ಷಿಯಂತೆ ಕಾಯುತ್ತಾರೆ. ಯಾವುದೇ ಕೃತಿಯ ಅಳಿವು-ಉಳಿವು ಈತನ ಫೇಸ್ಬುಕ್ ವಿಮರ್ಶೆಯ ಮೇಲೆ ನಿಂತಿದೆಯೆಂಬುದು ಇವನ ಖಚಿತ ಅಭಿಪ್ರಾಯ.

ದಿನವೂ ಅಂಚೆ ಮತ್ತು ಕೊರಿಯರ್ ಮೂಲಕ ಈತನ ಮನೆಗೆ ಸಾವಿರಾರು ಪುಸ್ತಕಗಳು ಬರುತ್ತವೆ. ಈತನಿಗೆ ಪುಸ್ತಕ ತಂದುಕೊಡಲು ಬೇಸತ್ತು ಮೂರು ಜನ ಪೋಸ್ಟಮನ್ನರು ರಾಜೀನಾಮೆ ಕೊಟ್ಟರೆ, ಇನ್ನೂ ಆರು ಜನ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಕೆಲವು ದೊಡ್ಡ ಕೊರಿಯರ್ ಸಂಸ್ಥೆಗಳು ಈತನಿಗಾಗಿಯೇ ಇವನ ಮನೆಯ ಹತ್ತಿರ ತಮ್ಮ ಶಾಖೆಗಳನ್ನು ತೆರೆಯಲು ಪೈಪೋಟಿ ನಡೆಸುತ್ತಿವೆಯಂತೆ! ಇದೆಲ್ಲ ಈ ಮಹಾಶಯನೇ ಹೇಳಿದ್ದು ಇದರಲ್ಲಿ ಎಷ್ಟು ಸುಳ್ಳೋ? ಎಷ್ಟು ನಿಜವೋ? ಎಂಬುದು ಬುದ್ಧಿವಂತರಿಗೆ ತಿಳಿದ ವಿಷಯ.

ಯಾರಾದರೂ ಫೇಸ್ಬುಕ್ಕಿನಲ್ಲಿ ಇಲ್ಲವೆಂದರೆ ಅವರು ಬದುಕಿಲ್ಲ, ಸತ್ತಿದ್ದಾರೆ ಎಂತಲೇ ಇವನ ಸ್ಪಷ್ಟ ಅಭಿಪ್ರಾಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲದಕ್ಕೂ ಆಧಾರ ಕಾರ್ಡ್ ಕೇಳುವಂತೆ ಇವನು ಎಲ್ಲರಿಗೂ ಫೇಸ್ಬುಕ್ ಅಕೌಂಟ್ ಇದೆಯೇ? ಎಂದು ಕೇಳುತ್ತಾನೆ. ಫೇಸ್ಬುಕ್ ಅಕೌಂಟ್ ಇಲ್ಲದವರು ಹಾಗೂ ಇವನ ಬರಹ ಓದಿ ಮೆಚ್ಚದೇ ಇರುವವರೆಲ್ಲ ಇವನ ದೃಷ್ಟಿಯಲ್ಲಿ ತೃಣಕ್ಕೆ ಸಮಾನರು. ಇರಲಿ, ಈ ಮೂರ್ಖ ಫೇಸ್ಬುಕ್ ವಿಮರ್ಶಕ ಫೇಸ್ಬುಕ್ಕಿನಲ್ಲಿ ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಲಿ!

ರಾಜಕಾರಣಿಗಳ ಅಭಿಮಾನಿಯಾಗುವುದು ಒಂದು ಅರೆಕಾಲಿಕ ಉದ್ಯೋಗ. ಮೈಗಳ್ಳರು, ಕಳ್ಳರು, ಸುಳ್ಳರು ಮತ್ತು ದಗಾಕೋರರಿಗೆ ಇದು ಹೇಳಿ ಮಾಡಿಸಿದ ಕೆಲಸ. ಯಾವುದೇ ಒಬ್ಬ ರಾಜಕಾರಣಿಗೆ ಸಚಿವ ಸ್ಥಾನ ಸಿಗದಿದ್ದರೆ ಅಥವಾ ಸಚಿವ ಸ್ಥಾನ ಸಿಕ್ಕರೂ ಬೇಕಾದ ಖಾತೆ ಸಿಗದಿದ್ದರೆ ಅಭಿಮಾನಿಗಳ ಆಕ್ರೋಶ ಭುಗಿಲೇಳುತ್ತದೆ. ಲಾಭದಾಯಕ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗದಿದ್ದರೂ ಅಭಿಮಾನಿಗಳು ರೊಚ್ಚಿಗೆದ್ದು ಪ್ರತಿಭಟಿಸುತ್ತಾರೆ. ಲೈಂಗಿಕ ಹಗರಣದಲ್ಲಿ ಭಾಗಿಯಾದವರು ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ ಮಾಡುವವರನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುವ ಇಂತಹ ಅಭಿಮಾನಿಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತಾರೆ. ಹಣಕ್ಕೆ ಬೆಲೆ ಕೊಡುವ ಇಂತಹ ಅಭಿಮಾನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಗಾಗ ಪಕ್ಷ ಮತ್ತು ನಾಯಕರನ್ನು ಬದಲಾಯಿಸುತ್ತಿರುತ್ತಾರೆ. ಇಂತಹವರ ಸಂತತಿ ಬೆಳೆಯುತ್ತಲೇ ಹೋಗುತ್ತಿರುವುದು ವಿಷಾದದ ಸಂಗತಿ.

ಇಷ್ಟೆಲ್ಲ ಹೇಳಿದ ಮೇಲೆ ಕನ್ನಡ ಭಾಷಾಭಿಮಾನಿಗಳ ಕುರಿತು ಹೇಳದಿದ್ದರೆ ತಪ್ಪಾಗುತ್ತದೆ. ಕರ್ನಾಟಕಕ್ಕೆ ತಮಿಳರು ಮತ್ತು ಮರಾಠಿಗರು ಕೊಟ್ಟಷ್ಟು ಕಿರುಕುಳವನ್ನು ಯಾರೂ ಕೊಟ್ಟಿಲ್ಲ. ಬೆಳಗಾವಿ ಮತ್ತು ಕಾವೇರಿ ವಿಚಾರ ಎತ್ತಿಕೊಂಡು ಕನ್ನಡಿಗರನ್ನು ಕೆಣಕುತ್ತಲೇ ಇರುತ್ತಾರೆ. ಕಳಸಾ-ಬಂಡೂರಿ ವಿಚಾರದಲ್ಲಿ ಗೋವಾದವರು ಮತ್ತು ಕಾಸರಗೋಡಿನ ವಿಚಾರದಲ್ಲಿ ಮಲಯಾಳಿಗಳು ಯಥಾಶಕ್ತಿ ಉಪದ್ರವ ನೀಡುತ್ತಲೇ ಇದ್ದಾರೆ. ಉದಾರಿಗಳಾದ ಕನ್ನಡಿಗರು ಇಂತಹುದನ್ನೆಲ್ಲ ಲಕ್ಷಿಸುವುದೇ ಇಲ್ಲ. ಬಹುತೇಕ ಕನ್ನಡಿಗರಿಗೆ ಕನ್ನಡದ ಬಗೆಗೆ ನಿಜವಾದ ಕಾಳಜಿಯಿಲ್ಲವೆಂಬುದು ಕಹಿ ಸತ್ಯ. ಕರ್ನಾಟಕದ ಬಗೆಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಾದರೂ ಇರುವುದು ಸಮಾಧಾನದ ಸಂಗತಿ.

ಕರ್ನಾಟಕದ ನೆಲ, ಜಲ ಮತ್ತು ಭಾಷೆಗೆ ಯಾವುದೇ ರೀತಿಯ ವಿಪತ್ತು ಬಂದರೂ ಮುನ್ನುಗ್ಗಿ ಹೋರಾಟ ಮಾಡುವ ಕನ್ನಡಾಭಿಮಾನಿಗಳು ನಿಜಕ್ಕೂ ಅಭಿನಂದನಾರ್ಹರು. ನಾಡು-ನುಡಿಗಾಗಿ ಮಿಡಿಯುವ ಇಂತಹ ಕನ್ನಡಾಭಿಮಾನಿಗಳ ಸಂತತಿ ಬೆಳೆದು ಬೆಳಗಲೆಂಬುದು ತಾಯಿ ಭುವನೇಶ್ವರಿಯಲ್ಲಿ ನನ್ನ ಹೃತ್ಪೂರ್ವಕ ಪ್ರಾರ್ಥನೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಅಭಿಮಾನಿಗಳು”

  1. Raghavendra Mangalore

    ಹಲವಾರು ಅಭಿಮಾನಿಗಳ ವರ್ಗಗಳನ್ನು ವಿಡಂಬನಾತ್ಮಕವಾಗಿ ವಿವರಿಸಿ ಹೇಳಿದ ರೀತಿ ಚೆನ್ನಾಗಿದೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter