ಪಾರ್ವತಿಪೂಜಾರಿಹಾಗೂಕಲಾಭಾಗ್ವತ್ಅವರಿಗೆಎಂ.ಬಿಕುಕ್ಯಾನ್ಚಿನ್ನದಪದಕಪ್ರದಾನ.
ಮುಂಬೈ, ಡಿ 29: ಮುಂಬೈ ವಿಶ್ವವಿದ್ಯಾಲಯದ 2021 ರ ಘಟಿಕೋತ್ಸವ ಸಮಾರಂಭವು ಡಿ.27 ರಂದು ಫೋರ್ಟ್ ಕ್ಯಾಂಪಸ್ ನ ಜಹಾಂಗೀರ್ ಹಾಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಕನ್ನಡ ವಿಭಾಗದ 2019-20 ನೆಯ ಸಾಲಿನ ಎಂ.ಎ rank ವಿಜೇತ ವಿದ್ಯಾರ್ಥಿ ಪಾರ್ವತಿ ಪೂಜಾರಿ ಹಾಗೂ 2020-21ನೆಯ ಸಾಲಿನ ಎಂ.ಎ rank ವಿಜೇತ ವಿದ್ಯಾರ್ಥಿ ಕಲಾ ಭಾಗ್ವತ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಿತ ಎಂ. ಬಿ. ಕುಕ್ಯಾನ್ ಸುವರ್ಣ ಪದಕವನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಕುಲಪತಿಗಳಾದ ಶ್ರೀ ಭಗತ್ ಸಿಂಗ್ ಕೊಶ್ಯಾರಿ ಅವರು ಪದಕ ಹಾಗೂ ಪ್ರಮಾಣಪತ್ರ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೊಗ್ರಾಫಿ ಗೋವಾ ಇದರ ನಿರ್ದೇಶಕರಾದ ಪ್ರೊ.ಸುನೀಲ್ ಕುಮಾರ್ ಸಿಂಗ್ ಅವರು ಮಾತನಾಡಿ ಕಲಿಕೆ ಎಂದಿಗೂ ನಿಲ್ಲಬಾರದು. ಗಳಿಸಿದ ಜ್ಞಾನವು ಅಂತಿಮವಾಗಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಅನೇಕ ಸವಾಲುಗಳನ್ನು ಎದುರಿಸುವ ಹಾಗೂ ಜಯಿಸುವ ಕೌಶಲ್ಯ ಮತ್ತು ಜ್ಞಾನವನ್ನು ಮುಂಬೈ ವಿಶ್ವವಿದ್ಯಾಲಯ ನೀಡಿದೆ. ಇದನ್ನು ಪಡೆದ ಎಲ್ಲರೂ ಮಹತ್ವಾಕಾಂಕ್ಷೆಯಿಂದ ಆದರ್ಶವಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಶ್ರೀಯುತ ಭಗತ್ ಸಿಂಗ್ ಕೋಶ್ಯಾರಿ ಅವರು ಮಾತನಾಡುತ್ತಾ ಐತಿಹಾಸಿಕ ಮಹತ್ವವಿರುವ ಮುಂಬೈ ವಿಶ್ವವಿದ್ಯಾಲಯದಲ್ಲಿ ಅನೇಕ ಮಹಾಪುರುಷರು ವಿದ್ಯಾರ್ಜನೆ ಮಾಡಿ ತ್ಯಾಗ-ಬಲಿದಾನ, ವಿಜ್ಞಾನ, ಕಲೆ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಈ ವಿಶ್ವವಿದ್ಯಾಲಯದಲ್ಲಿ ಕಲಿತು ಸಾಧನೆ ಮಾಡಿರುವುದು ಅಭಿಮಾನದ ಸಂಗತಿ ಎಂದು ಶುಭ ಹಾರೈಸಿದರು.
ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ಸುಹಾಸ್ ಪೆಡ್ನೇಕರ್ ಅವರು ಕೊರೋನಾ ದುರಿತ ಕಾಲದಲ್ಲಿಯೂ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಸಶಕ್ತವಾಗಿ ನಿಭಾಯಿಸಿದ ಎಲ್ಲ ವಿಭಾಗಗಳನ್ನೂ ಶ್ಲಾಘಿಸಿ ಅಭಿನಂದಿಸಿದರು. ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಶ್ರೀಯುತ ಆದಿತ್ಯ ಠಾಕ್ರೆ, ಸಹ ಕುಲಪತಿಗಳಾದ ಪ್ರೊ. ರವೀಂದ್ರ ಕುಲಕರ್ಣಿ, ಉಪ ಕುಲ ಸಚಿವ ಶ್ರೀ ರಾಜೇಂದ್ರ ಪಗಾರೆ, ಪರೀಕ್ಷಾ ಮಂಡಳಿಯ ಸಂಚಾಲಕರಾದ ಶ್ರೀ ವಿನೋದ್ ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎನ್. ಉಪಾಧ್ಯ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಶ್ರೀ ಚಿದಾನಂದ ಭಾಗ್ವತ್, ಶ್ರೀಮತಿ ದೀಪಾ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಪಾರ ಪರಿಶ್ರಮ, ಮನೆಯಲ್ಲಿ ಪೂರಕ ವಾತಾವರಣ ಇವೆಲ್ಲದರ ಜೊತೆಗೆ ಕನ್ನಡ ವಿಭಾಗ ನೀಡಿದ ವಿಷಯ ಜ್ಞಾನ, ನಿರಂತರ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಅದು ವಹಿಸಿದ ಶ್ರಮ ಹಾಗೂ ತರಬೇತಿ ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಅದರಿಂದಲೇ ಈ ಹಂತ ತಲುಪಲು ಸಾಧ್ಯವಾಯಿತು ಎಂಬುದಾಗಿ ಶ್ರೀಮತಿ ಪಾರ್ವತಿ ಪೂಜಾರಿ ಹಾಗೂ ಶ್ರೀಮತಿ ಕಲಾ ಭಾಗ್ವತ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿಭಾಗದ ಪ್ರಾಧ್ಯಾಪಕರು,ಮುಖ್ಯಸ್ಥರು ಆದ ಡಾ.ಜಿ.ಎನ್.ಉಪಾಧ್ಯ ಅವರು ಈ ಸಾಧನೆಗಾಗಿ ಇಬ್ಬರೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
1 thought on “ಮುಂಬೈ ವಿಶ್ವವಿದ್ಯಾಲಯ ಘಟಿಕೋತ್ಸವ 2021”
It is a great honor to all Mumbaikars in general & Mumbai Kannadigas, in particular ! Congrats