ಜೀವನವೆನ್ನುವುದು ಸಂಬಂಧಗಳೇ ತುಂಬಿರುವ ಒಂದು ರೋಚಕ ಕೊಂಡಿ.ಬದುಕಿನಲ್ಲಿ ಸಂಬಂಧಗಳ ಬಂಧನವಿಲ್ಲದೆ ಬದುಕನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ.ಹುಟ್ಟುತ್ತಲೇ ಅಪ್ಪ,ಅಮ್ಮ,ಅಣ್ಣ,ತಮ್ಮ,ಅಕ್ಕ,ತಂಗಿ ಎಂಬ ಬಂಧನ,ಶಾಲೆಗೆ ಹೋಗುವ ಸಮಯದಲ್ಲಿ ಗೆಳತಿ,ಗೆಳೆಯ,ಗುರುಗಳು ಎಂಬ ಸಂಬಂಧ,ಮುಂದೆ ನೌಕರಿ ಮಾಡುವಾಗ ಸಹೋದ್ಯೋಗಿಗಳ ಸಂಬಂಧ ಹೀಗೆ ಸಂಬಂಧಗಳು ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆ.ಆದರೆ ಈ ಸಂಬಂಧಗಳಲ್ಲಿಒಂದು ಸಣ್ಣ ತಪ್ಪು ಕಲ್ಪನೆ ಸಂಬಂಧಗಳು ಹದಗೆಡಲು ಕಾರಣವಾಗುತ್ತದೆ.ಕೆಲವೊಮ್ಮೆ ತಂದೆ ಮಕ್ಕಳ ನಡುವೆ ಮಹತ್ವಾಕಾಂಕ್ಷೆ ಎಂಬುದು ಸಂಬಂಧ ಕೆಡಲು ಕಾರಣವಾಗುತ್ತದೆ ಅಥವಾ ಬದುಕಿನಲ್ಲಿ ಕಾಣದ ವಿಧಿಯಾಟ ಸಂಬಂಧಗಳ ನಡುವೆ ಗೋಡೆಯನ್ನೇ ನಿರ್ಮಿಸುತ್ತದೆ.
ಜಗದೀಶ ಅವರು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರೊಫೆಸರ್. ಹೆಂಡತಿ ವನಜಾ ಅರವತ್ತರ ದಶಕದಲ್ಲೇ ಬಿ.ಎ.ಮಾಡಿದವರು. ಅರಳು ಹುರಿದಂತೆಮಾತನಾಡುವ ವನಜಾ ತುಂಬಾ ಚೂಟಿಯಾಗಿ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಮಹಿಳಾ ಸಮಾಜ,ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ಮೆಂಬರ್ ಆಗಿದ್ದ ವನಜಾ ಸಮಾಜದ ಗಣ್ಯ ಮಹಿಳೆಯರಲ್ಲಿ ಒಬ್ಬರಾಗಿದ್ದರು. ಅವರಿಗೆ ಸುಂದರವಾದ ಮೂರು ಜನ ಮಕ್ಕಳು.ದೊಡ್ಡ ಮಗ ರಾಕೇಶ ಇಂಜಿನಿಯರಿಂಗ್ಓದಿ ಮುಗಿಸಿದಾಗ ಮದುವೆ ಮಾಡಿ ಅಮೇರಿಕಕ್ಕೆ ಕಳಿಸಿದ್ದರು.ಎರಡನೆಯ ಮಗಳು ರಾಗಿಣಿ ಹೋಂಸೈನ್ಸನಲ್ಲಿ ಬಿ.ಎಸ್.ಸಿ ಮಾಡಿದ ಅವಳನ್ನು ಇಂಜಿನಿಯರ್ ವರನಿಗೆ ಮದುವೆ ಮಾಡಿ ಕೊಟ್ಟು ಕೆನಡಾಗೆ ಕಳಿಸಿದ್ದರು.ಜಗದೀಶ್ ಅವರಿಗೆ ಸ್ಪಲ್ಪ ಪ್ರತಿಷ್ಡೆಯ ಹುಚ್ಚು.ಸಮಾಜದಲ್ಲಿ ಒಂದು ಸ್ಟೇಟಸ್,ಮರ್ಯಾದೆ ಸಿಗಬೇಕೆಂದರೆ ಮಕ್ಕಳು ಅಮೇರಿಕಾ, ಕೆನಡಾ, ಲಂಡನ್ನಲ್ಲಿ ಇದ್ದು ಡಾಲರ್ನಲ್ಲಿ ಹಣ ಗಳಿಸ ಬೇಕೆಂಬ ಹುಚ್ಚು ಹಂಬಲ.
ಮೂರನೇ ಮಗ ಅಭಯ ಎಂ.ಬಿ.ಬಿ.ಎಸ್ ಮುಗಿಸಿ , ಎಂ.ಎಸ್ ಮಾಡಿದ ನಂತರ ನಗರದಲ್ಲಿಯೇ ಡಿಸ್ಪೆಂಸರಿ ತೆಗೆದು ಅಪ್ಪ,ಅಮ್ಮರ ಜೊತೆ ಇರಬೇಕೆಂದು ಆ ದಿನ ಅಪ್ಪ,ಅಮ್ಮನ ಮುಂದೆ ….. ಪಪ್ಪಾ ನನ್ನ ಎಂ.ಎಸ್ ಮುಗೀತು ನಾನು ಇಲ್ಲೇ ಪ್ರ್ಯಾಕ್ಟೀಸ್ ಶುರು ಮಾಡ್ತೀನಿ ಅಂದಾಗ, ಜಗದೀಶರು ನೋ,ನೋ ನೀನು ನಿನ್ನ ಅಣ್ಣ,ಹಾಗೂ ಅಕ್ಕನಂಗ ಫಾರಿನ್ ಗ ಹೋಗಬೇಕು.ಇಲ್ಲೆ ಈ ಸಣ್ಣ ಊರಾಗ ಏನೈತಿ.ನಿನಗೂ ಮದುವಿ ಮಾಡ್ತೇವಿ ಹೆಂಡ್ತೀನ ಕರಕೊಂಡು ಲಂಡನ್ನಿಗೆ ಹೋಗು ಎಂದರು. ಆಗ ವನಜಾ ಅವರು ರಾಕೇಶ,ರಾಗಿಣಿ ಇಬ್ಬರನ್ನೂ ಫಾರಿನ್ ಗ ಕಳಿಸೇವಿ.ಇವನೊಬ್ಬರ ನಮ್ಮ ಹತ್ರ ಇರ್ಲಿ ಎಂದಾಗ ಜಗದೀಶರು …. ನಿನಗೇನ ತಿಳಿತದ ಫಾರಿನ್ ಗ ಹೋದೋರ ಖದರ ಬ್ಯಾರೆ ಇರ್ತದ.ಸಮಾಜದಾಗ ನಮ್ಮ ಸ್ಟೇಟಸ್ಗೂ ಒಂದು ವ್ಯಾಲ್ಯೂ ಇರ್ತದ ,ಹುಚ್ಚಿ ಹಂಗ ಮಾತಾಡ ಬ್ಯಾಡ ಎಂದು ಬಾಯಿ ಮುಚ್ವಿಸಿದ್ದರು. ಜಗದೀಶರ ಪ್ರತಿಷ್ಟೆ,ವಿದೇಶೀ ಡಾಲರ್ ಮೋಹದಿಂದ ಅಭಯ ಸಹ ಮದುವೆಯಾಗಿ ಲಂಡನ್ನಿಗೆ ಹೋದ.
ಜಗದೀಶ್ ತಮ್ಮ ಮೂರೂ ಜನ ಮಕ್ಕಳು ವಿದೇಶವಾಸಿಗಳು ಎಂದು ಬಂದು,ಹೋದವರ ಮುಂದೆ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದರು .ದೊಡ್ಡದಾದ ಮನೆ,ಮನೆಯ ಸುತ್ತಲೂ ಹೂವು,ಹಣ್ಣು,ಕಾಯಿ ಬಿಡುವ ಮರ ಗಿಡಗಳು.ಆದರೆ ತಿಂದು ಖುಷಿ ಪಡುವ ಮಕ್ಕಳು,ಮೊಮ್ಮಕ್ಕಳು ವಿದೇಶದಲ್ಲಿ. ವನಜಾ ಅವರು ಧಂಡಿಯಾಗಿ ಬಿಡುವ ಹಣ್ಣು ,ಕಾಯಿಗಳನ್ನು ಸ್ವಲ್ಪ ಮಾರಿ ಉಳಿದವುಗಳನ್ನು ಅಕ್ಕ, ಪಕ್ಕದವರಿಗೆ ಕೊಟ್ಟು ಬಿಡುತ್ತಿದ್ದರು. ಕೈಕಾಲು ಗಟ್ಟಿಯಿರುವ ತನಕ ಮಕ್ಕಳ ಹತ್ತಿರ ಹೋಗಿ ಬಂದು ಮಾಡಿದ್ದರು ದಂಪತಿಗಳು.ಮಕ್ಕಳು ತಮಗೆ ಅನುಕೂಲ ಆದಾಗ ಬಂದು ಹೋಗುತ್ತಿದ್ದರು. ವಿದೇಶದಲ್ಲೇ ಮಕ್ಕಳೊಂದಿಗೆ ಇರಬೇಕೆಂಬ ಇರಾದೆಯಿಂದ ಹೋದವರು ಅಲ್ಲಿಯ ಹವಾಮಾನ ವೈಪರೀತ್ಯಗಳಿಂದ ಇರಲಾರದೆ ವಾಪಸ್ಸು ಬಂದಿದ್ದರು. ಕಾಲಚಕ್ರ ಉರುಳಿದಂತೆ ವಯಸ್ಸಾದಂತೆ ದೊಡ್ಡ ಮನೆ ಸಂಭಾಳಿಸುವುದು ಕಷ್ಟವಾಗತೊಡಗಿದಾಗ ಜಗದೀಶ್ ಅವರು ಮನೆ ಮಾರಿ ಅಪಾರ್ಟ್ ಮೆಂಟ ಸೇರಿಕೊಳ್ಳುವ ವಿಚಾರ ಮಾಡಿದಾಗ ವನಜಾ ಅವರು …ಅಳುತ್ತಾ ಆ ದಿನ ನಾನು ಅಭಯ ನಮ್ಮ ಹತ್ರನ ಇರ್ಲಿ ಅಂದ್ರ ಫಾರಿನ್,ಡಾಲರ್,ಪ್ರತಿಷ್ಟೆ,ಸ್ಟೇಟಸ್ ಅಂತ ಬಾಯಿ ಮುಚ್ಚಿಸಿದ್ರಿ . ಮಗಾ,ಸೊಸಿ,ಮೊಮ್ಮಕ್ಕಳು ಇಲ್ಲೇ ಈ ಮನ್ಯಾಗ ಇದ್ದಿದ್ದರ ಇವತ್ತ ನಮಗ ಮನಿ ಮಾರೋ ಪರಿಸ್ಥಿತಿ ಬರ್ತಿತ್ತೇನು ಎಂದು ಕಣ್ಣೀರು ಗರೆದರು.ಆದರೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು.
ಕಾರು ಹೊಡೆಯಲು ವಯಸ್ಸು ಅಡ್ಡಿಯಾದಾಗ ಅದನ್ನೂ ಮಾರಿ ಆಟೋದಲ್ಲಿ ಓಡಾಡ ತೊಡಗಿದರು.ವನಜಾ ಧೈರ್ಯ ದಿಂದಲೇ ಮನೆಯ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರೂ ಮನಸ್ಸು ಮಾತ್ರ ಮಕ್ಕಳನ್ನು ನೆನೆದು ವಿಹ್ವಲಗೊಳ್ಳುತ್ತಿತ್ತು. ಇಂಥ ವನಜಾ ಡಿಮೆನ್ಸಿಯಾ ರೋಗಕ್ಕೆ ತುತ್ತಾಗಿ ಎಲ್ಲವನ್ನೂ ಮರೆಯ ತೊಡಗಿದರು.ಮನೆಯಲ್ಲಿ ಕೆಲಸದವರ ಮೇಲೇಯೇ ಅವಲಂಬನೆ.ಊಟ,ತಿಂಡಿ,ಸ್ನಾನದ ಅರಿವಿಲ್ಲದೇ ಮಾತನಾಡಿದ್ದನ್ನೇ ಮಾತನಾಡುತ್ತ,ಒಂದೊಂದು ಸಲ ಜಗದೀಶರಿಗೆ ಗೊತ್ತಿಲ್ಲದಂತೆ ಮನೆ ಹೊರಗೆ ಹೋಗಿ ಕಳೆದು ಕೊಂಡಾಗ ಪರಿಚಯಸ್ಥರು ತಂದು ಮನೆಗೆ ಬಿಟ್ಟಾಗ ಜಗದೀಶರ ಕಣ್ಣಲ್ಲಿ ಅವರಿಗೆ ಅರಿವಿಲ್ಲದಂತೆಯೇ ಕಣ್ಣೀರು ಹರಿಯುತ್ತಿದ್ದವು.ವಯಸ್ಸಾದ ಜಗದೀಶರೂ ಅಸಹಾಯಕರಾಗಿದ್ದರು.ಇಲ್ಲಿ ತನಕ ಯಾವ ಜವಾಬ್ದಾರಿ ಇಲ್ಲದೆ ಹಾಯಾಗಿದ್ದ ಜಗದೀಶರಿಗೆ ಮೊದಲ ಬಾರಿಗೆ ತಮ್ಮ ತಪ್ಪಿನ ಅರಿವಾಗಿತ್ತು.ಇದ್ದ ಮೂರೂ ಜನ ಮಕ್ಕಳನ್ನು ಪ್ರತಿಷ್ಟೆಗೋಸ್ಕರ ವಿದೇಶಕ್ಕೆ ಕಳಿಸಿ ಎಂಥ ಮೂರ್ಖನಾದೆನಲ್ಲ ಎಂದು ಪರಿತಪಿಸಿದರು. ಇಲ್ಲೇ ನಮ್ಮ ದೇಶದಲ್ಲಿಯೇ ಇದ್ದಿದ್ದರೆ ನಮ್ಮ ಕಷ್ಟ,ಸುಖಕ್ಕೆ ಆಗುತ್ತಿದ್ದರಲ್ಲ ಎಂದು ಹಳಹಳಿಸಿದರು. ‘ಮಾಡಿದುಣ್ಣೋ ಮಾರಾಯ’ ಎನ್ನುವಂತೆ ತಮ್ಮ ಸ್ವಯಂಕೃತ ತಪ್ಪಿಗೆ ಪಶ್ಚಾತ್ತಾಪ ಪಡುವಂತಾಗಿತ್ತು ಜಗದೀಶರ ಪರಿಸ್ಥಿತಿ.
2019 ರಲ್ಲಿ ಕೊರೋನಾ ಮಹಾಮಾರಿಜಗತ್ತಿನೆಡೆಯಲ್ಲ ವಿಜೃಂಭಿಸಿ ಅಮಾಯಕ ಜನರಜೀವ ಹರಣ ಮಾಡತೊಡಗಿತು.ಈ ಸಮಯದಲ್ಲಿ ವನಜಾ ಅವರನ್ನು ಸಂಭಾಳಿಸುವುದು ತುಂಬಾ ಕಷ್ಟ ಕರವಾಗಿತ್ತು.ಮಕ್ಕಳು ಪ್ರತಿದಿನ ಫೋನು ಮಾಡಿ ಅಪ್ಪ,ಅಮ್ಮನ ಬಗ್ಗೆ ವಿಚಾರಿಸುತ್ತಿದ್ದರು.ಹಣ ಕಳಿಸಿ ಅಮ್ಮನಿಗಾಗಿ ನರ್ಸ ಗೊತ್ತು ಮಾಡಿದ್ದರು .ಅಪ್ಪನಿಗೆ ಧೈರ್ಯ ಹೇಳುತ್ತಿದ್ದರು.ವನಜಾ ಸರಿ ಇದ್ದಾಗ ಅವರ ಅರಳು ಹುರಿದಂತ ಮಾತುಗಳನ್ನು ಕೇಳುತ್ತಾ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ ಜಗದೀಶರಿಗೆ.ಈಗ ಅನಿವಾರ್ಯತೆಯಿಂದ ಟಿ.ವಿ ಹಚ್ಚಿದರೆ ಎಲ್ಲಾ ಛಾನಲ್ಗಳಲ್ಲಿ ಬರೀ ಕೊರೋನಾ ಸುದ್ದಿ.ಕೊರೋನಾ ಬಂದು ಆಸ್ಪತ್ರೆ ಸೇರಿದವರು,ಅದಕ್ಕೆ ಬಲಿಯಾಗಿ ಅನಾಥರಂತೆ ಮಸಣ ಸೇರಿದವರು,ಅಪ್ಪ,ಅಮ್ಮರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಗೋಳು,ಹದಿ ಹರೆಯದ ಮಕ್ಕಳನ್ನು ಕಳೆದುಕೊಂಡ ವೃದ್ಧ ರ ಕಣ್ಣೀರಧಾರೆ ಎಲ್ಲ ದೃಶ್ಯಗಳು ಜಗದೀಶರನ್ನು ವಿಚಲಿತಗೊಳಿಸುತ್ತಿದ್ದವು. ಲಾಕ್ಡೌನ ಆಗಿ ಇಡೀ ದೇಶ ಸ್ಥಬ್ದವಾಗಿತ್ತು.ಕೊರೋನಾ ಮಾರಿ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಮಾಡಿತ್ತು.ಹಡೆದವರಿರಲಿ,ಹಡೆದ ಮಕ್ಕಳಿರಲಿ ,ಗಂಡ ಇರಲಿ,ಹೆಂಡತಿ ಇರಲಿ ,ಸ್ನೇಹಿತರಿರಲಿ ಯಾರೇ ಕೊರೋನಾಗೆ ಬಲಿಯಾದರೂ ಬದುಕಿದ್ದವರು ಶವ ಸಂಸ್ಕಾರಕ್ಕೂ ಹೋಗದ ಪರಿಸ್ಥಿತಿ ಉಂಟಾಗಿತ್ತು. ಕೊರೋನಾ ಮಾರಿ ಯಾರನ್ನು,ಯಾವಾಗ,ಎಲ್ಲಿ ವಕ್ಕರಿಸುತ್ತೋ ಎನ್ನುವ ಭಯದಲ್ಲಿ ಜನರು ಸಂಬಂಧಗಳಿಗೆ,ಸ್ನೇಹಗಳಿಗೆ ಎಳ್ಳುನೀರು ಬಿಡುವಂತಾಗಿತ್ತು. ಕೊರೋನಾಗೆ ಬಲಿಯಾಗಿ ಯಾವ ಸಂಬಂಧದ ಬಂಧನವಿಲ್ಲದೆ ತಮಗಾಗಿ ಕಣ್ಣೀರು ಹಾಕುವ ಸಬಂಧಿಕರಿಲ್ಲದೆ ಅನಾಥವಾಗಿಚಿತೆ ಏರುವ ಶವಗಳ ಕೊನೆಯ ಯಾತ್ರೆ ಎಂಥ ಕಲ್ಲುಮನಸ್ಸಿನವರನ್ನೂ ಕರಗಿಸುವ ದೃಶ್ಯ ಜಗದೀಶರನ್ನುಕಂಗೆಡೆಸುತ್ತಿತ್ತು.ತಮ್ಮ ಮನದ ಬೇಗುದಿಯನ್ನು ತೋಡಿಕೊಳ್ಳಲು ಹತ್ತಿರ ಯಾರೂ ಇಲ್ಲ. ಹೆಂಡತಿ ಯಾವುದೋ ಲೋಕದಲ್ಲಿ.ಅಸಹಾಯಕತೆ ಜಗದೀಶರನ್ನು ಹಿಂಡಿ ಹಿಪ್ಪೆ ಮಾಡಿತ್ತು.
ಆ ದಿನ ಬೆಳಗಿನ ಒಂಬತ್ತಾದರೂ ಏಳದ ಜಗದೀಶರನ್ನು ಎಬ್ಬಿಸಲು ಮನೆಯ ಆಳು ಈರವ್ವಾ ಹೋದಾಗ ಜಗದೀಶರು ತಮ್ಮ ಕೊನೆಯುಸಿರನ್ನು ಎಳೆದಿದ್ದರು.ವನಜಾರಿಗೆ ಇದಾವುದರ ಅರಿವಿಲ್ಲ.ಪ್ರತಿದಿನದಂತೆ ಅಭಯ ಫೋನು ಮಾಡಿದಾಗ ವಿಷಯ ತಿಳಿಸಿದ್ದಳು ಈರವ್ವಾ. ಅಪ್ಪ ತಮ್ಮ ಹಠದಿಂದ ಇಂದು ಅನಾಥರಂತೆ ಬದುಕಿಗೆ ವಿದಾಯ ಹೇಳಿದ್ದು ಕಣ್ಣೀರು ಹಾಕುವಂತೆ ಮಾಡಿತ್ತು ಅಭಯನನ್ನು .ಲಾಕ್ಡೌನ ನಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ಬಂದಾಗಿದ್ದರಿಂದ ವಿದೇಶದಲ್ಲಿದ್ದ ಅವರು ಯಾರೂ ಬರುವ ಹಾಗಿರಲಿಲ್ಲ. ಊರಿನಲ್ಲಿದ್ದ ಸಂಬಂಧಿಕರೂ ಬರುವ ಹಾಗಿರಲಿಲ್ಲ. ಅಭಯನೇ ತನ್ನ ಡಾಕ್ಟರ್ ಗೆಳೆಯರಿಗೆ ಫೋನು ಮಾಡಿ ತನ್ನ ತಂದೆಯ ಕೊನೆ ವಿಧಿವಿಧಾನಗಳನ್ನು ಮಾಡಿ ಶವಸಂಸ್ಕಾರ ಮಾಡುವಂತೆ ಕೇಳಿಕೊಂಡಿದ್ದ. ಜಗದೀಶರ ಶವವನ್ನು ಕೊನೆಯದಾಗಿ ಎತ್ತಿ ಹೊರ ನಡೆದಾಗ ಅಮಾಯಕ ವನಜಾರವರು ಏನು ನಡೆಯುತ್ತಿದೆ ಎಂಬ ಅರಿವಿಲ್ಲದೆ ‘ಅಜ್ಜಾರನ್ನ ಕರಕೊಂಡು ಹೋದರು’ಎಂದಾಗ ಆಳು ಈರವ್ವ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
ಡಾಲರ್ ನಲ್ಲಿ ಕೋಟಿ ಕೋಟಿ ಗಳಿಸಿದ್ದ ಮಕ್ಕಳಿಗೆ ಅಪ್ಪನ ಪಾರ್ಥಿವ ಶರೀರಕ್ಕೆ ಒಂದು ಹಿಡಿ ಮಣ್ಣು ಹಾಕುವ ಅದೃಷ್ಟ ,ಅಮ್ಮನನ್ನು ಆಲಂಗಿಸಿ ಸಾಂತ್ವನ ಹೇಳುವ ಅವಕಾಶವನ್ನು ಕೋರೋನಾ ಕಸಿದಿತ್ತು.ಸಂಬಂಧ ಎನ್ನುವುದು ಕೊರೋನಾದ ಕಪಿಮುಷ್ಟಿಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿತ್ತು. ಗಹಗಹಿಸಿ ಅಟ್ಟಹಾಸದ ಕ್ರೂರ ನಗೆ ಬೀರುತ್ತಿದ್ದ ಕೊರೋನಾದ ಮುಂದೆ ಡಾಲರ್ ಹಾಗೂ ಸಂಬಂಧಗಳು ಮಂಡಿಯೂರಿ ಕುಳಿತಿದ್ದವು.
2 thoughts on “ಕೊರೋನಾ V/S ಡಾಲರ್ ಹಾಗೂ ಸಂಬಂಧಗಳು”
ಛಂದದ ಕಥೆ
ಕಥೆ ಮನ ಕರಗುವಂತೆ ಮಾಡಿತು