ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ 19 ರ ಸಂಜೆ ಸಂಗೀತ ಕಾರಂಜಿಯ ವೀಕ್ಷಣಾ ಅಟ್ಟಣಿಗೆಯಲ್ಲಿ ಬೆಳದಿಂಗಳ ಹೊಂಬೆಳಕಿನಲ್ಲಿ ನಡೆದ ಸಾಹಿತ್ಯ ಸಿಂಚನ ಕಾರ್ಯಕ್ರಮದಲಿ, ಕವಿ, ಕಥೆಗಾರ, ಅಂಕಣಕಾರ ಗೋಪಾಲ ತ್ರಾಸಿಯವರ ‘ಲಂಡನ್ ಟು ವ್ಯಾಟಿಕನ್ ಸಿಟಿ ’ಎಂಟು ದೇಶ- ನೂರೆಂಟು ವಿಶೇಷ ಪ್ರವಾಸ ಕಥನ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಹಿರಿಯ ಸಾಹಿತಿ ಡಾ.ನೀಲಾವರ ಸುರೇಂದ್ರ ಅಡಿಗರು ಲೋಕಾರ್ಪಣೆ ಮಾಡಿದರು.
“.ದೂರದ ಮುಂಬಯಿಯಲ್ಲಿರುವ ನಮ್ಮೂರಿನ ಕವಿ, ಲೇಖಕ ಗೋಪಾಲ ತ್ರಾಸಿಯವರ ಲಂಡನ್ ಟು ವ್ಯಾಟಿಕನ್ ಸಿಟಿ –ಎಂಟು ದೇಶ ನೂರೆಂಟು ವಿಶೇಷ ಎಂಬ ಪ್ರವಾಸ ಕಥನ ಕೃತಿ ಪ್ರವಾಸ ಪ್ರಿಯರಿಗೆ ಕೈಪಿಡಿಯಂತಿದೆ.ಇದರಲ್ಲಿ ಅವರು ಕೇವಲ ತಾವು ಸುತ್ತಾಡಿದ ಸ್ಥಳಗಳ ಕುರಿತಷ್ಟೇ ಬರೆಯದೆ, ಪ್ರವಾಸಕ್ಕೂ ಮುನ್ನ ನಡೆಸ ಬೇಕಾದ ಪೂರ್ವ ತಯಾರಿ, ಅಗತ್ಯಬೇಕಾಗುವ ಕಾಗದ ಪತ್ರಗಳ ದಾಖಲೆಗಳ ವಿವರ, ವೀಸಾ ಪಡೆಯುವ ಪ್ರಕ್ರಿಯೆ ಮುಂತಾದವುಗಳ ಕುರಿತು ವಿವರವಾದ ಮಹತ್ವದ ಮಾಹಿತಿಗಳನ್ನೂ ಕೋಡುತ್ತಾರೆ.
ಈ ಕೃತಿ ಒಂದು ಒಳ್ಳೆಯ ಪ್ರವಾಸ ಕಥನ ಎನ್ನಲು ಸಂಶಯವೇ ಬೇಡ.ಸಣ್ಣ ಸಣ್ಣ ವಿಷಯಗಳ ಸೂಕ್ಷ್ಮಅವಲೋಕನ, ಮೋಜಿನ ಸನ್ನಿವೇಶ ಪ್ರಸಂಗಗಳು ಬೋರ್ಹೊಡೆಯದಂತೆ ಕುತೂಹಲ ಕೆರಳಿಸುತ್ತವೆ.ಆಕರ್ಷಕ ಮುಖಪುಟ ವಿನ್ಯಾಸ, ಒಳ ಅಧ್ಯಾಯಗಳ ಹೆಸರು ಸಹ ಗಮನ ಸೆಳೆಯುತ್ತವೆ.
ಸರಳವಾದ ಅಚ್ಚುಕಟ್ಟಾದ ಭಾಷೆ ಈ ಕೃತಿಯ ಹೆಗ್ಗಳಿಕೆ. ತಾವು ಕಂಡದ್ದನ್ನುಅನುಭವಿಸಿದ್ದಲಯಥಾವತ್ತಾದ ಚಿತ್ರಣ ಕಟ್ಟಿ ಕೊಟ್ಟಿದ್ದಾರೆ. ಎಲ್ಲೂ ತಮ್ಮ ನಿಲುವಿನ ಭೌದ್ಧಿಕ ಹೇರಿಕೆ ತರಹದ ಅಭಿಪ್ರಾಯಗಳಿಲ್ಲ.ಅಪ್ಪಟ ದೇಶಾಭಿಮಾನ, ತಮ್ಮ ಹಿಂದಿನ ಸ್ಥಿತಿಗತಿಗಳ ಕುರಿತಾದ ಪ್ರಾಮಾಣಿಕ ಹೇಳಿಕೆಗಳ ಜೊತೆಗೆ ಪ್ಯಾಕೇಜ್ ಟೂರ್ ಗಳ ಮಿತಿಯನ್ನೂಹೇಳುತ್ತಾರೆ. ಈ ಕೃತಿಯ ಓದು ಯಾವ ರೀತಿ ಅಂದರೆ,ಸ್ವತ:ಹ ಲೇಖಕ ನಮ್ಮ ಪಕ್ಕದಲ್ಲಿ ಕುಳಿತು ಹೇಳುವಂತಹ ಶೈಲಿ ಗಮನಾರ್ಹವಾದುದು.ಒಬ್ಬಸಾಮಾನ್ಯಪರಿವಾರದಿಂದ ಬಂದು, ತಮ್ಮಹುಟ್ಟೂರು,ನಾಡುನುಡಿಯ ಬಗ್ಗೆ ಅಮಿತ ಪ್ರೇಮಭಾವವುಳ್ಳ ಒಬ್ಬ ಪ್ರತಿಭಾವಂತ ಲೇಖಕರನ್ನು ಕೊಟ್ಟ ಅವರ ತಂದೆ ತಾಯಿಯರಿಗೆ ವಂದನೆಗಳು.”ಎಂದರು.
ಕೃತಿಪರಿಚಯ, ಶಿಕ್ಷಕ,ಯುವ ಲೇಖಕ ಸತೀಶ ವಡ್ಡರ್ಸೆ :
“ಈ ಪ್ರವಾಸ ಕೃತಿಯನ್ನು ಓದುವಾಗ, ಲೇಖಕರ ಜೊತೆಗೆ ನಾವೂ ಸಹ ಆಯಾ ಸ್ಥಳಗಳಲ್ಲಿ ಅವರೊಂದಿಗೇ ತಿರುಗಾಡಿದಂತಹ ಅನುಭವ ಕೊಡುವ ಅನನ್ಯ ಶೈಲಿ ಖುಶಿಕೊಡುತ್ತದೆ. ತಾವು ನೋಡಿದ ಪ್ರತಿಯೊಂದು ಸ್ಥಳಗಳ ಸೂಕ್ಷ್ಮವಿಷಯ ವಿವರಗಳನ್ನೊಳಗೊಂಡ,ಅವುಗಳ ಹಿಂದಿನ ಇತಿಹಾಸ, ಜನಪದ ಕಥೆಗಳನ್ನುಹೇಳುವ ಮಾಹಿತಿ ಸಂಗ್ರಹ ಕೌತುಕ ಗೊಳಿಸುತ್ತದೆ.ಇದೊಂದು ವಾಸ್ತವ ರೂಪದ ಪ್ರವಾಸ ಕಥ ಅನ್ನಬಹುದು.ಎಲ್ಲೂ ಅತೀಎನ್ನಿಸದೆ,ಕಥನ ಎಂದಾಗ ಅದು ಕಾದಂಬರಿಯಾಗದಂತೆ ಎಚ್ಚರಿಕೆ ವಹಿಸಿ ಬರೆಯುವಲ್ಲಿ ಲೇಖಕರು ಯಶಸ್ಸಾಗಿದ್ದಾರೆ.
ಪರಿವಿಡಿಯ ಶೀರ್ಷಿಕೆಯಲ್ಲೂ ಸೃಜನಶೀಲತೆ ಎದ್ದು ಕಾಣುತ್ತದೆ.ಪ್ರವಾಸದ ಪೂರ್ವಸಿದ್ಧತೆ ವಿಭಾಗದಲ್ಲಿ ಪ್ರವಾಸಾಕ್ತರಿಗೆ ಉಪಯುಕ್ತವಾಗುವ,ಲೇಖಕರು ತಾವು ಅನುಭವಿಸಿದ ಮಹತ್ವವಾದ ಅಂಶಗಳಿವೆ.ಪ್ರವಾಸವೆಂದರೆ ಬರೇ ವಿದೇಶ ಸುತ್ತೋದಲ್ಲ, ನಮ್ಮನಾಡಿನ ಆಚೆ ಈಚೆಯೂ ಅಷ್ಟೇ ಸುಂದರ ಸ್ಥಳಗಳಿದ್ದು ಜೋಗ ಜಲಪಾತ, ಕೊಡಚಾದ್ರಿಬೆಟ್ಟ,ಮುರುಡೇಶ್ವರ, ತ್ರಾಸಿ ಬೀಚು, ಉಪ್ಪಿನ ಕುದುರಿನ ಕಾಂಡಲ ಮರಗಳ ಸಹಚರ್ಯ.. ಹೀಗೆ ತಾವು ಬಾಲ್ಯ ಕಾಲದಲ್ಲಿ ಪ್ರವಾಸ ಗೈದುದನ್ನೂ ಸ್ಮರಿಸುತ್ತಾರೆ.ಈಗಾಗಲೇ ಏಳು ವಿವಿದ ಕೃತಿಗಳನ್ನುಕೊಟ್ಟ ಒಬ್ಬ ಪ್ರತಿಭಾವಂತ ಕವಿ ಲೇಖಕರಿಂದಬರೆಯಲ್ಪಟ್ಟ, ಮತ್ತೆ ಮತ್ತೆ ಓದಬೇಕೆಂಬ ಆಸೆ ಹುಟ್ಟಿಸುವ ಸುಂದರವಾದ ಪ್ರವಾಸಕೃತಿ. “ಎಂದರು.
ಆರಂಭದಲಿ ಉಪನ್ಯಾಸಕರು,ಸಾಹಿತಿ ಶ್ರೀಮತಿ ವಾಸಂತಿ ಅಂಬಲಪಾಡಿಯವರು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಮಾಡಿದರು. ಒಟ್ಟುಕಾರ್ಯಕ್ರಮದ ರೂವಾರಿ, ಥೀಮ್ ಪಾರ್ಕ್ ನ ಕಾರ್ಯದರ್ಶಿ, ಸಾಹಿತಿ,ಸವ್ಯಸಾಚಿ ಸಂಘಟಕ ನರೇಂದ್ರ ಕುಮಾರ ಕೋಟ ಪ್ರಾಸ್ತಾವಿಕ ಭಾಷಣ ಗೈದರು.ಉಪನ್ಯಾಸಕರು, ಕವಿ ಸಂಜೀವ ಇವರು ಸೊಗಸಾಗಿ ನಿರೂಪಣೆ ಮಾಡಿದರು.ಕೊನೆಯಲ್ಲಿ ಪ್ರತಿಷ್ಠಾನದ ಟ್ರಸ್ಟಿ ಸುಭ್ರಾಯ ಆಚಾರ್ಯ ಧನ್ಯವಾದ ಗೈದರು.
ತದನಂತರ ಮುಖ್ಯೋಪಾಧ್ಯಾಯರು ಕವಿ ಅಮಿತಾಂಜಲಿ ಕಿರಣ್ಯವರ ಅಧ್ಯಕ್ಷತೆಯಲಿ ತೆರೆದ ಬಾನಂಗಳದಲಿ ಬೆಳದಿಂಗಳ ಕವಿಗೋಷ್ಠಿ ಜರಗಿತು.
1 thought on “‘ಲಂಡನ್ ಟು ವ್ಯಾಟಿಕನ್ ಸಿಟಿ’ ಕೃತಿ ಬಿಡುಗಡೆ”
ಕೃತಿಯ ಚಂದದ ಪರಿಚಯ, ಕೃತಿ ಬಿಡುಗಡೆ ಕಾರ್ಯಕ್ರಮದ ಸುಂದರ ವರದಿ.
ಓದಲೇಬೇಕಾದ ಪುಸ್ತಕ