“ಒಂದು ವಿಳಾಸದ ಹಿಂದೆ” ಅಡಗಿರುವ ಕವಿ ಮನಸು.

ಕೃತಿ-ಒಂದು ವಿಳಾಸದ ಹಿಂದೆ, ಲೇಖಕರು-ಸ್ಮಿತಾ ಅಮೃತರಾಜ್‌, ಸಂಪಾಜೆ

ಪ್ರಕಾಶಕರು-ಭಾವಸಿಂಚನಾ ಪ್ರಕಾಶನ, ತುಮಕೂರು ಫೋನ್‌ ನಂಬರ್‌ – +91 9036402083

ಪುಟಸಂಖ್ಯೆ-182. ಬೆಲೆ-ರೂಪಾಯಿ-200

   ಪ್ರಕೃತಿಯ ಮಡಿಲಲ್ಲಿ ಬೆಳೆದು ಬದುಕುತ್ತಿರುವ ಸ್ಮಿತಾ ಅಮೃತರಾಜ್‌ ಅವರು ಎಳವೆಯಿಂದಲೆ ಜಗದ ವಿಸ್ಮಯಗಳನ್ನು ಬೆರಗುಗಂಗಳಿಂದ ಸೂಕ್ಷವಾಗಿ ಗಮನಿಸುತ್ತ ಬಂದವರು. ತಮ್ಮ ಅನುಭವಗಳಿಗೆ ಸುಂದರವಾದ ಅಕ್ಷರ ರೂಪ ನೀಡಿ ಅವುಗಳಿಗೆ ಭದ್ರವಾದ ವಿಳಾಸವೊಂದನ್ನು ಹುಡುಕಿಕೊಟ್ಟಿದ್ದಾರೆ. ಅವರ ” ಒಂದು ವಿಳಾಸದ ಹಿಂದೆ” ಲಲಿತ ಪ್ರಬಂಧ ಸಂಕಲನದಲ್ಲಿ ಲಘು ಹಾಸ್ಯದಿಂದ ಕೂಡಿದ, ಸರಳ ಶೈಲಿಯ ಪ್ರಬಂಧಗಳ ಗುಚ್ಛವಿದೆ. ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಲೇಖನಗಳನ್ನು ಒಟ್ಟುಗೂಡಿಸಿ ಈ ಸಂಕಲನವನ್ನು ಪ್ರಕಟಿಸಿ ಓದುಗರ ಮುಂದಿರಿಸಿದ್ದಾರೆ. ಕವಿಯಾಗಿ ಸಹೃದಯರ ಗಮನ ಸೆಳೆದ, ಜನಪ್ರಿಯತೆಯನ್ನು ಗಳಿಸಿದ ಸ್ಮಿತಾ ಅವರ ಕವಿಮನಸು ಈ ಪ್ರಬಂಧ ಸಂಕಲನದ ಹಿಂದೆ ಕೂಡ ಅಡಗಿ ಕುಳಿತಿದೆ. ಹೀಗಾಗಿ ಈ ಸಂಕಲನ ಗದ್ಯಕಾವ್ಯವಾಗಿ ಹೊರಹೊಮ್ಮಿದೆ. ಕೃಷಿಕ ಮಹಿಳೆಯಾಗಿ ಗೃಹಕೃತ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವ ಸ್ಮಿತಾ ಅಷ್ಟೇ ಸಮರ್ಥವಾಗಿ ಸಾಹಿತ್ಯ ಲೋಕದಲ್ಲಿಯೂ ಕೂಡ ತಮ್ಮನ್ನು ತೊಡಗಿಸಿಕೊಂಡವರು. ಸುಳ್ಯ ತಾಲೂಕಿನ ಪಂಜದಲ್ಲಿ ಬಾಲ್ಯವನ್ನು ಕಳೆದ ಇವರು ಅಮೃತರಾಜ್‌ ಅವರೊಂದಿಗೆ ವಿವಾಹವಾಗಿ ಸಂಪಾಜೆಯಲ್ಲಿ ನೆಲೆಸಿದ್ದಾರೆ. ಸ್ಮಿತಾ ಅಮೃತರಾಜ್‌ ಅವರ ಕಾಲ ಕಾಯುವುದಿಲ್ಲ, ತುಟಿಯಂಚಲಿ ಉಲಿದ ಕವಿತೆಗಳು, ಮಾತು ಮೀಟಿ ಹೋಗುವ ಹೊತ್ತು ಎಂಬ ಮೂರು ಕವನ ಸಂಕಲನಗಳು ಈಗಾಗಲೆ ಪ್ರಕಟಗೊಂಡಿದ್ದು ಜನಮೆಚ್ಚುಗೆಯನ್ನು, ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದೆ. ಅಂಳದಂಚಿನ ಕನವರಿಕೆಗಳು ಎನ್ನುವ ಲಲಿತ ಪ್ರಬಂಧ ಸಂಕಲನ ಬೆಳಕು ಕಂಡಿದೆ.

ಸ್ಮಿತಾ ಅಮೃತರಾಜ್, ಸಂಪಾಜೆ

      ಪುಟ್ಟ ಮಗುವಾಗಿದ್ದಾಗಲೆ ಅಪ್ಪ, ಅಮ್ಮನನ್ನು ಬಿಟ್ಟು ಓದಲೆಂದು ಅಜ್ಜನ ಮನೆಯನ್ನು ಸೇರಬೇಕಾದ ಪರಿಸ್ಥಿತಿ, ಬೆಟ್ಟದಷ್ಟು ಸಂಯಮ, ತಾಳ್ಮೆಯನ್ನು ತೋರುತ್ತಾ , ಅಜ್ಜಿ , ಚಿಕ್ಕಮ್ಮರೊಂದಿಗೆ ಬೆರೆಯುತ್ತಾ, ಅಮ್ಮನ ಕೊರತೆಯನ್ನು ನದಿಯೊಂದಿಗಿನ ಸಹವಾಸದೊಂದಿಗೆ ನೀಗಿಸಿಕೊಳ್ಳಲು ಪ್ರಯತ್ನಿಸುತ್ತಾ ನದಿಯಂತಹ ಉದಾತ್ತ ಗುಣಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡವರು ಸ್ಮಿತಾ. ಇವೆಲ್ಲ ನೆನಪುಗಳು ಅವರ ಲೇಖನಗಳಲ್ಲಿ ಆರ್ದ್ರವಾಗಿ ಮೂಡಿಬಂದಿವೆ. ಅಪ್ಪನನ್ನು ಕಳೆದುಕೊಂಡ ದುಃಖವನ್ನು ಅಮ್ಮನ ದಿಟ್ಟತನ, ಧೈರ್ಯಗಳ ಸೆರಗಿನ ಮರೆಯಲ್ಲಿ ಮರೆಯಲೆತ್ನಿಸಿದ ಪರಿ, ಕಣ್ಣಿಗೆ ಕಾಡಿಗೆ ಹಚ್ಚಿದ್ದು ದೊಡ್ಡ ಅಪರಾಧವೇನೋ ಎಂಬಂತೆ ಬೈದು ಎಗರಾಡಿದ ಮಾವ, ವಾಚು ಕಟ್ಟಿಕೊಂಡು ಶಾಲೆಗೆ ಬರುವುದು ಅತಿ ದೊಡ್ಡ ತಪ್ಪು ಎನ್ನುವಂತೆ ಅಣಕವಾಡಿದ ಶಿಕ್ಷಕರು ಹೀಗೆ ತಮ್ಮ ಜೀವನಾನುಭವವನ್ನು ಅತ್ಯಂತ ಸರಳವಾಗಿ, ಸುಂದರ ನಿರೂಪಣಾ ಶೈಲಿಯಲ್ಲಿ ಹೇಳಿರುವುದು ಇವರ ವೈಶಿಷ್ಟ್ಯ. ಮೊದಲ ಬಾರಿಗೆ ಚಪ್ಪಲಿ ಮೆಟ್ಟಿದ ” ಪಾದುಕಾ ಪ್ರಸಂಗ”, ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಚುಚ್ಚಿಸಿಕೊಡ “ಮೂಗುತಿ ಮುಂಭಾರ” ವಾಗಿ  ಎದುರಿಸಬೇಕಾಗಿ ಬಂದ  ಆವಾಂತರಗಳು ಇವೆಲ್ಲ ಸ್ಮಿತಾ ಅವರ ಪ್ರಬಂಧಗಳಲ್ಲಿ ನುಸುಳಿ ನವಿರಾದ ಹಾಸ್ಯದ ಲೇಪನದೊಂದಿಗೆ  ಓದುಗರ ಮುಖದ ಮೇಲೆ ಮೃದು ಮಂದಹಾಸ  ಮೂಡಿಸುತ್ತವೆ. ಸುಖನಿದ್ದೆಯಲಿ ಮಲಗಿರುವ ಎಳೆಮಗುವೊಂದು ಕಿರುನಗು ಸೂಸಿದರೆ ಅದು ಕಂಡಿರಬಹುದಾದ ಸಿಹಿಗನಸನ್ನು ಊಹಿಸಿ ಸಂಭ್ರಮಿಸುತ್ತ,  ನಾವೇಕೆ ಸ್ವಪ್ನ ಲೋಕದ ಅಪರಿಮಿತಾನಂದವನ್ನು ಅನುಭವಿಸಬಾರದು? ಎಂದು ಪ್ರಶ್ನಿಸುತ್ತ ವಾಸ್ತವ ಪ್ರಪಂಚದ ಸಂಕೋಲೆಗಳಿಂದ ನಮ್ಮನ್ನು ಮುಕ್ತಗೊಳಿಸಿ “ಕನಸಿನ ಜಾಡು ಹಿಡಿದು” ನಮ್ಮನ್ನು ಕೈ ಹಿಡಿದು ಕರೆದೊಯ್ಯುವ ಕನಸುಗಾರ್ತಿ ಈ ಲೇಖಕಿ. ಮಾತಿನಿಂದಲೆ ಒಲವು, ಮಾತಿನಿಂದಲೆ ಗೆಲುವು ಮಾತೇ ಸಕಲಕೆ ಸಾಧನವು ಎನ್ನುತ್ತಾ ಮಾತಿನಲ್ಲಡಗಿರುವ ಸೌಂದರ್ಯವನ್ನು ಶಬ್ದಸಿರಿಯೊಂದಿಗೆ ಪಟಪಟನೆ ಚಿನಕುರುಳಿಯಂತೆ  ಭಿತ್ತರಿಸುವ ಕಲೆ ಸ್ಮಿತಾ ಅವರಿಗೆ ಸಿಧ್ಧಿಸಿದೆ ಎನ್ನುವುದು ಅವರ “ಮಾತಿಗೊದು ಎಲ್ಲೆ ಎಲ್ಲಿದೆ” ಎನ್ನುವ ಲೇಖನದ ಮೂಲಕ ಸ್ಪಷ್ಟವಾಗುತ್ತದೆ.

    ಕಣ್‌ಕೋರೈಸುವ ಮಿಂಚು, ಅಬ್ಬರದ ಗುಡುಗು ಸಿಡಿಲುಗಳ ಭರಾಟೆಯ ಬಣ್ಣನೆಯ ಜೊತೆ ಜೊತೆಗೆ ಮಳೆಗಾಲದ ಚಳಿಗೆ ಬೆಚ್ಚನೆಯ ಶಾಖ ನೀಡುವ ಬೆಂಕಿಯೊಲೆಯ ಸುಖ, ಬಾಯಾಡಿಸಲು ಸಿಗುವ ಹಲಸು ಮಾವುಗಳ ಸ್ವಾದವನ್ನೂ ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಾರೆ ಲೇಖಕಿ. ಹಾಗೆಯೇ ಬಿರುಬಿಸಿಲ ಬೇಸಿಗೆಯಲ್ಲಿ ತಂಪನೆರೆಯುವ ಹಳ್ಳ, ನದಿಗಳ ಸುತ್ತ ಒಂದು ಸುತ್ತು ಸುತ್ತಿಸಿ ಕರೆತರುತ್ತಾರೆ ಓದುಗರನ್ನು. ಹಾಗಾಗಿ ಇವರ ವಿಳಾಸವನ್ನು ಅರಸಿಕೊಂಡು ಹೋಗಲು ಸೂಕ್ತ ಋತುಮಾನಕ್ಕಾಗಿ ಕಾಯಬೇಕಾಗಿಲ್ಲ . ಏಕೆಂದರೆ ಎಲ್ಲ ಕಾಲದಲ್ಲೂ ಹಿತವೆನಿಸುವ ತಿಂಡಿ ತಿನಿಸುಗಳು , ದಣಿವಾರಿಸಿಕೊಳ್ಳಲು ಹಲವು ತಂಗುದಾಣಗಳು ಇಲ್ಲಿವೆ. ತಮ್ಮೂರಾದ ಮಲೆನಾಡಿನ  ಸೊಬಗನ್ನು, ಅಲ್ಲಿನ ಜನರ ಅತಿಥಿ ಸತ್ಕಾರದ ಔದಾರ್ಯಗುಣವನ್ನು ಹೇಳತ್ತಲೇ ತಮ್ಮೂರಿಗೊಮ್ಮೆ ಬನ್ನಿ ಎಂದು ಆತ್ಮೀಯವಾಗಿ ಸ್ವಾಗತಿಸುತ್ತಾರೆ ಸ್ಮಿತಾ.

    ಅಡುಗೆಯ ಸ್ವಾದ ಹೆಚ್ಚಾಗಲು ಕೆಲವೊಮ್ಮೆ ಕಾಡುವ ಸೆಕೆಯಿಂದ ಉರುಳುವ ಹೆಂಗಳೆಯರ ಬೆವರ ಹನಿಗಳು, ಕಂಕುಳಿನಲ್ಲಿರುವ ಪುಟಾಣಿಗಳು ಹೇಳದೇ ಕೇಳದೇ ಚಿಮ್ಮಿಸುವ ಸುಸ್ಸು ಎಂಬ ಕಾರಂಜಿಗಳೂ ಕೂಡ ಕಾರಣವಾಗುತ್ತವೆ ಎನ್ನುತ್ತ “ ಅಡಿಗೆ ಕೋಣೆಯ ಎಡವಟ್ಟು”ಗಳ ಗುಟ್ಟನ್ನು ಪಿಸುಮಾತಿನಲ್ಲಿಯೇ ರಟ್ಟು ಮಾಡಿಬಿಡುತ್ತಾರೆ. ರಾಮನಿಗೆ ಬುತ್ತಿ ಕೊಂಡೊಯ್ಯಲೆಂದೇ ಅಜ್ಜನಗಡ್ಡ ಹಾರಾಡುತ್ತಿರುತ್ತದೆ ಎಂದು ನಂಬಿಕೊಂಡಿರುವ ಮುಗ್ಧ ಮನಸ್ಸಿನಿಂದ, ವಯಸ್ಸಿನಿಂದ ಹೊರಬಂದು ದೊಡ್ಡವರಾದ ಮೇಲೆ  ಅಡುಗೆಯನ್ನು ಅಟ್ಟುವುದಕ್ಕೆಂದು ಒಲೆ ಉರಿಸುವ ಹೆಂಗಳೆಯರ ಸಂಕಷ್ಟವನ್ನು ಹೇಳಿಕೊಳ್ಳುತ್ತಾ, ಹೊಗೆಯಿಲ್ಲದೆಯೆ ಓದುಗರ ಕಣ್ಣಲ್ಲಿ ನೀರು ತರಿಸುವಂತಹ ನೈಜ ಚಿತ್ರಣ “ ಒಂದು ಒಲೆಯುರಿಯ ಮುಂದೆ” ಲೇಖನದಲ್ಲಿ ಮೂಡಿಬಂದಿದೆ. ಹಾಗೆಯೇ, ಎಲ್ಲೋ ಪುರಾಣ, ಇತಿಹಾಸಕಾಲದ ಮಾತೆನ್ನುವಂತೆ ಕಾಣುವ, ವರ್ತಮಾನದಲ್ಲಿ ಕಾಣೆಯಾಗುತ್ತಿರುವ ಒಲೆ, ಸೌದೆ, ಹೊಗೆ ಮೊದಲಾದ ಶಬ್ದಗಳೇ ಕಣ್ಮರೆಯಾದಾವೇನೋ ಎನ್ನುವ ಕಳವಳ ಕೂಡ ಈ ಪ್ರಬಂಧದಲ್ಲಿದೆ. ಅಪರೂಪಕ್ಕೆ ಹೊರಟ ರೈಲು ಪ್ರಯಾಣದ ಸರ್ವ ಸುಖವನ್ನು ಬಿಡದೆ ಸವಿಯುವ ಸ್ಮಿತಾ ಅಮೃತರಾಜ್‌  ಆ ಅನುಭವ ಪ್ರವರಗಳನ್ನು ಎಲ್ಲರೊಂದಿಗೆ  ಸೌಹಾರ್ದಯುತವಾಗಿ “ಒಂದು ರೈಲು ಪ್ರಯಾಣ” ಕಥನದ ಮೂಲಕ ಹಂಚಿಕೊಳ್ಳುತ್ತಾರೆ. 

     ತಮ್ಮ ಬರವಣಿಗೆಗಾಗಿ ವಸ್ತುಗಳನ್ನು ಹುಡುಕುವ ಕಷ್ಟ ಇವರಿಗೊದಗುವುದಿಲ್ಲ. ದಿನನಿತ್ಯ ನೋಡುವ ಪ್ರಾಣಿ ಪಕ್ಷಿಗಳು, ಗಿಡ ಮರ ಹೂ ಬಳ್ಳಿಗಳು, ನದಿ, ಹಳ್ಳ, ಕೆರೆ ತೊರೆಗಳು ಎಲ್ಲವೂ ಇವರ ಲೇಖನಗಳಲ್ಲಿ  ಜಾಗವನ್ನು ಪಡೆದಿವೆ. ಇಲಿಗಳೂ ಸಹಾ ಇವರ ಪ್ರಬಂಧದ ವಸ್ತುವಾಗಿ ಬಿಲ ಕೊರೆದು ವಾಸ್ತವ್ಯ ಹೂಡಿದೆ. ಹಾಗಾಗಿಯೇ ಮಳೆಗಾಲ, ಬೇಸಿಗೆಗಾಲ, ಚಳಿಗಾಲಗಳ ಜೊತೆಗೆ ಇಲಿಗಾಲವೆಂಬ ಹೊಸ ಕಾಲದ ಸೃಷ್ಟಿಯನ್ನು ಕೂಡ ಸ್ಮಿತಾ ಮಾಡುತ್ತಾರೆ. ಮನೆಯಲ್ಲಿನ ಯಾವ ವಸ್ತುವನ್ನೂ ಬಿಡದೆ ಕೆರೆದು ತಿನ್ನುವ, ಸಾಮಾನುಗಳನ್ನು ಹಾಳು ಮಾಡುವ ಇಲಿಗಳು ತಮ್ಮ ಪುಸ್ತಕ ಭಂಡಾರಕ್ಕೂ ಧಾಳಿಯಿಟ್ಟಿದ್ದು ಲೇಖಕಿಗೆ ಸಹನೆಯಾಗುವುದಿಲ್ಲ. ಎಂತಹ ಕಲಿಗಾಲ ಬಂತಪ್ಪಾ ಎಂದು ನಿಟ್ಟುಸಿರಿಡುತ್ತಾ , ಸಿಟ್ಟಿನಿಂದ ಇಲಿಗಳನ್ನು ಬೋನಿನೊಳಗೆ ಕೆಡಹುವ ಸನ್ನಾಹದಲ್ಲಿರುವ ಇವರು ತಮ್ಮ ಈ ಎಲ್ಲ ಬವಣೆಗಳನ್ನು “ಇದು ಕಲಿಗಾಲವಲ್ಲ ಇಲಿಗಾಲ” ಎಂಬ ಪ್ರಬಂಧದಲ್ಲಿ ತೋಡಿಕೊಂಡಿದ್ದಾರೆ.  ಭತ್ತದ ತೆನೆಗೆ ಹಾಲು ತುಂಬಲೆಂದು ಬರುವ ಬಣ್ಣ ಬಣ್ಣದ ಚಿಟ್ಟೆಗಳು ಇತ್ತೀಚೆಗೇಕೋ ಕಾಣೆಯಾಗುತ್ತಿವೆ ಎನ್ನುವ ಕಾಳಜಿ ಒಂದು ಲೇಖನದಲ್ಲಿದ್ದರೆ, ತನ್ನ ಹೊಟ್ಟೆಪಾಡಿಗಾಗಿ ಬಲೆಯನ್ನು ನೇಯ್ದು, ಸಿಕ್ಕಿಹಾಕಿಕೊಳ್ಳುವ ಮಿಕಕ್ಕಾಗಿ ಕಾದು ಕುಳಿತಿರುವ ಜೇಡದ ಸುತ್ತ ಸುಂದರವಾದ ಶಬ್ದಜಾಲವನ್ನು ಹೆಣೆದು ಓದುಗರನ್ನು ಆ ಬಲೆಯಲ್ಲಿ ಸಿಲುಕಿಸಿ, ತಮ್ಮ ಗದ್ಯಕಾವ್ಯ ಲೋಕದ ಅದ್ಭುತ ಆನಂದಾಮೃತವನ್ನು ಉಣಿಸುವ ಚಾಣಾಕ್ಷತೆ ಇನ್ನೊಂದು ಪ್ರಬಂಧದಲ್ಲಿ ಕಾಣಸಿಗುತ್ತದೆ.

     ಆಧುನಿಕ ಯುಗದ ತಾಂತ್ರಿಕತೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಜನರಿಗೆ ಕಡಿವಾಣ ಹಾಕಲೆಂದೇ ಅವತರಿಸಿರುವ , ಇಡೀ ಜಗತ್ತಿಗೆ ಹೊಸ ಪಾಠವನ್ನು ಕಲಿಸುತ್ತಿರುವ ಕೊರೋನಾ ವೈರಸ್‌ಗೆ ನಮನವನ್ನು ಸಲಿಸುತ್ತ, ಬೇಕಷ್ಟು ಕಲಿತಾಯ್ತು ನೀನಿನ್ನು ನಿರ್ಗಮಿಸು ಎಂದು ನಮ್ರವಾಗಿ ವಿನಂತಿಸಿಕೊಳ್ಳುತ್ತಾರೆ ಸ್ಮಿತಾ. ಚೌತಿಯ ಚಂದ್ರನನ್ನು ನೋಡಿದರೆ ಅಪವಾದ ಬರುವುದೆಂಬ ಹೆದರಿಕೆಗೆ ಕುತ್ತಿಗೆ ನೋವು ಬಂದರೂ ತಲೆ ತಗ್ಗಿಸಿ ನಡೆಯುವ ಇವರಿಗೆ ನೀರು ತರಲೆಂದು ಬಾವಿಗೆ ಹೋದಾಗ ಬಾವಿಯಾಳದಲ್ಲಿ ಇಣುಕಿನೋಡುತ್ತ ಕಣ್ಣು ಮಿಟುಕಿಸಿದ ಚಂದ್ರಮನ ಮೇಲೆ ಸಿಟ್ಟು. ಅದಕ್ಕಾಗಿಯೇ “ ಚೌತಿ ಚಂದ್ರಾಮ ಮಗದೊಮ್ಮೆ ನಕ್ಕಾಗ” ಎಂಬ ಲೇಖನದಲ್ಲಿ ತುಂಟ ಚಂದ್ರಮನ ದೂರನ್ನು ಗಣಪತಿಯಲ್ಲಿ ಹೇಳಿಕೊಂಡಿದ್ದಾರೆ. ಅಡುಗೆಯ ವಿವಿಧ ಹಂತಗಳಲ್ಲಿ ಅತ್ಯಂತ ಕೊನೆಯ ಆದರೆ ಮಹತ್ವದ ಹಂತ ಒಗ್ಗರಣೆಯದ್ದು. ಅಡುಗೆಯ ಘಮವನ್ನು ಜೊತೆಗೆ ಸ್ವಾದವನ್ನು ಹೆಚ್ಚಿಸುವ , ಹಸಿವನ್ನು ಕೆರಳಿಸುವ ತಾಕತ್ತನ್ನು ಹೊಂದಿರುವ ಒಗ್ಗರಣೆಯ ಸಾಮಗ್ರಿಗಳೆಲ್ಲ ಊಟದ ಕೊನೆಗೆ ಬಾಳೆಯ ತುದಿಯಲ್ಲೋ, ಬಟ್ಟಲಿನ ಅಂಚಿನಲ್ಲೋ ತ್ಯಾಜ್ಯ ವಸ್ತುಗಳಂತೆ ತಿರಸ್ಕೃತವಾಗುವುದು ಲೇಖಕಿಗೆ ಸುತಾರಾಂ ಇಷ್ಟವಿಲ್ಲ. ಒಗ್ಗರಣೆಗೂ ಹೆಣ್ಣಿಗೂ ಇರುವ ಸಾಮ್ಯತೆಯನ್ನು ಸೂಕ್ಷ್ಮವಾಗಿ ಹೇಳುವ ಇವರ ಸ್ತ್ರೀ ಸಂವೇದನೆ “ಒಗ್ಗರಣೆಯೆಂಬ ಕಾಡುವ ಸಂಗತಿ”ಯಲ್ಲಿ ಸೂಚ್ಯವಾಗಿ ವ್ಯಕ್ತವಾಗಿದೆ.

     ಚಿಕ್ಕಂದಿನ ವಿದ್ಯಾಭ್ಯಾಸ  ಜೊತೆಗೆ ಇತ್ತೀಚಿಗಷ್ಟೇ ಮುಗಿಸಿದ ಎಂ.ಎ.ಅಧ್ಯಯನದ ಅನುಭವ, “ಅರೆಯುವ ಕಲ್ಲಿನ ಮುಂದೆ,”  ಜಗುಲಿಯಲ್ಲಿ  ಆಗಸದೊಂದಿಗೆ ಮಾತನಾಡುತ್ತಾ ಕುಳಿತಾಗ ಅರಳುವ ಕವಿತೆಗಳು, “ ಜ್ವರದ ಹಳಹಳಿಕೆಗಳ”ಲ್ಲು ಹಲವರು ಕಂಡುಕೊಳ್ಳುವ ಸುಖ, ಮಿಸ್‌ ಯುನಿವರ್ಸನಂತಹ ಫಿಗರನ್ನು ಹೊಂದಬೇಕೆನ್ನುವ ಕನಸು ಕಾಣುತ್ತಾ “ತೂಕದ ತೂಗುಯ್ಯಾಲೆಯಲ್ಲಿ” ಆಡುವ ತಾರಮ್ಮಯ್ಯದಾಟ ಹೀಗೆ ಸ್ಮಿತಾ ಅವರ ಈ ಪ್ರಬಂಧ ಸಂಕಲನದಲ್ಲಿ ಬರುವ ಲೇಖನಗಳೆಲ್ಲ  ಆಪ್ತರೊಬ್ಬರು ನಮ್ಮೆದುರು ಕುಳಿತು ತಮ್ಮ ಅನುಭವಗಳನ್ನೆಲ್ಲ ಹಂಚಿಕೊಳ್ಳುತ್ತಿದ್ದಾರೆ ಎನ್ನುವಷ್ಟು ಆತ್ಮೀಯತೆಯ ಭಾವವನ್ನು ಮೂಡಿಸುತ್ತವೆ . ಪಯಸ್ವನಿ ನದಿಯ ಸಾಮೀಪ್ಯದಲ್ಲಿ ಹೆಚ್ಚು ಸಮಯ ಕಳೆಯುವ ಇವರಲ್ಲಿ ನದಿಯಂತಹ ಭಾವ ಮಡುಗಟ್ಟಿದೆ. ಅದು ಅವರ ಪ್ರಬಂಧ ಸಂಕಲನದುದ್ದಕ್ಕೂ ಜುಳು ಜುಳು ನಿನಾದವನ್ನು ಉಂಟುಮಾಡಿದೆ.

      ಒಂದೆರಡು ಕಡೆ ಈ ಸನ್ನಿವೇಶವನ್ನು ಮೊದಲು ಓದಿರುವೆ ಎನ್ನುವ ಸಂದೇಹ ಬಂದರೂ ಪುಟ ತಿರುಗಿಸಿ ನೋಡಲು ಪುರುಸೊತ್ತು ನೀಡದಂತೆ ಓದಿಸಿಕೊಂಡು ಹೋಗುವ ಗಟ್ಟಿತನ ಸ್ಮಿತಾ ಅವರ ಬರವಣಿಗೆಯಲ್ಲಿದೆ. ಪ್ರತಿಯೊಬ್ಬರಿಗೂ ಭದ್ರತೆಯ ಭಾವವನ್ನು ನೀಡುವುದು ಒಂದು ವಿಳಾಸ. ಅಂತಹ  “ಒಂದು ವಿಳಾಸದ ಹಿಂದೆ” ಅಡಗಿರುವ ತಮ್ಮೆಲ್ಲ ಭಾವಲಹರಿಯನ್ನು ಶಬ್ದರೂಪಕ್ಕಿಳಿಸಿ ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದರಲ್ಲಿ ಸ್ಮಿತಾ ಅಮ್ರತರಾಜ್‌ ಯಶಸ್ವಿಯಾಗಿದ್ದಾರೆ.

      ಅನ್ನ ಬೆಂದಿದೆಯೋ ಎಂದು ನೋಡಲು ಒಂದೆರಡು ಅಗುಳನ್ನು ಹಿಸುಕಿ ನೋಡಿದರೆ ತಿಳಿಯುತ್ತದೆ. ಆದರೆ ಸ್ಮಿತಾ ಅವರ ಈ ಲಲಿತ ಪ್ರಬಂಧ ಸಂಕಲನದ ಸವಿಯನ್ನು ಪೂರ್ತಿಯಾಗಿ ಆಸ್ವಾದಿಸಲು ಇಲ್ಲಿರುವ ಎಲ್ಲ ಲೇಖನಗಳನ್ನು ಓದಲೇಬೇಕು. ಯಾಕೆಂದರೆ ಇದು ಬೇರೆ ಬೇರೆ ಪ್ರಕಾರದ, ಬಣ್ಣದ, ಜಾತಿಯ ಹಣ್ಣುಗಳ ಬುಟ್ಟಿಯಂತಿದೆ. ಪ್ರತಿಯೊಂದು ಲೇಖನದಲ್ಲು ನಮಗೆ ಭಿನ್ನ ಭಿನ್ನವಾದ ಅನುಭವಗಳ ಸಾರ ಸವಿಯಲು ಸಿಗುತ್ತದೆ. ಇಲ್ಲಿಯ ಪ್ರಬಂಧಗಳ ವಿಶೇಷತೆಯ ಕುರಿತಾಗಿ ಶಬ್ದರೂಪದಲ್ಲಿ ಹೇಳುವ ಪ್ರಯತ್ನ  ಮಾಡಬಹುದೇ ಹೊರತು ಪೂರ್ತಿಯಾಗಿ ಇದರ ರಸಾಸ್ವಾದ ಪಡೆಯಲು ಈ ಕ್ರತಿಯನ್ನು ಓದಲೇಬೇಕು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on ““ಒಂದು ವಿಳಾಸದ ಹಿಂದೆ” ಅಡಗಿರುವ ಕವಿ ಮನಸು.”

  1. ಪುಸ್ತಕದ ಪರಿಚಯದ ಲೇಖನವೂ ಒಂದು ಸೊಗಸಾದ ಲಲಿತ ಪ್ರಬಂಧದಂತಿದೆ. 👌🙏

  2. ಪುಸ್ತಕದ ಮುಖ ಪುಟ & ಬೆನ್ನು ಪುಟ.

                             ಸ್ಮಿತಾ ಅಮೃತರಾಜ್.

    “ಸರಳ ಸುಂದರ ಪ್ರಬಂಧ ಸಂಕಲನ”

    ಒಂದು ವಿಳಾಸದ ಹಿಂದೆ ಇದೊಂದು ಮನಮೋಹಕ ಪ್ರಬಂಧಗಳ ಸಂಕಲನ ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಲವಲವಿಕೆಯ ಪ್ರಬಂಧಗಳು ವಿಳಾಸದ ಹಿಂದೆ ಪ್ರಬಂಧ ಸಂಕಲನದಲ್ಲಿ ತಾವು ಮತ್ತು ಎಲ್ಲಾ ವಯೋಮಾನದ ಕುಟುಂಬದ ಸದಸ್ಯರುಗಳು ಓದಿ ಆನಂದಿಸಬಹುದು ಜೊತೆಗೆ ತಮ್ಮ ಬದುಕಿನಲ್ಲಿ ಆಗಿಹೋದ ಅನೇಕ ವಿಷಯಗಳನ್ನು ಸ್ಮಿತಾ ಅಮೃತರಾಜ್ ಸಂಪಾಜೆ ಯವರು ನಿಮ್ಮಗಳ ವಿಷಯವನ್ನೇ ಕಟ್ಟಿಕೊಟ್ಟಿದ್ದಾರೆ ಎನ್ನುವಷ್ಟು ಆಪ್ತ ಬರಹ ಪ್ರಬಂಧಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಹಾಗಾಗಿ ಈ ಸಂಕಲನದ ಎಲ್ಲ ಪ್ರಬಂಧಗಳು ನಮ್ಮಗಳ ಬದುಕಿಗೆ ತೀರಾ ಹತ್ತಿರವಾಗಿ ನಮ್ಮ ದಿನಿಸಿ ಕೊಳ್ಳುತ್ತವೆ ಒಟ್ಟಾರೆ ಹೇಳುವುದಾದರೆ ನಮ್ಮಗಳ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೇನು ಅನಿಸುತ್ತದೆ ಓದುತ್ತಾ ಹೋದ ಹಾಗೆ.
    ಈ ಪ್ರಬಂಧ ಸಂಕಲನದಲ್ಲಿ ಒಟ್ಟು 31 ಪ್ರಬಂಧಗಳಿವೆ ಒಂದು 182 ಪುಟಗಳಲ್ಲಿ ಸ್ಮಿತಾ ಅಮೃತರಾಜ್ ಯವರು ಒಂದೇ ಉಸಿರಿಗೆ ಓದಿಸಿಕೊಂಡು ಹೋಗುವಂತೆ ಸರಳ ಸುಂದರ ಶಬ್ದಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಡೆಸಿಕೊಂಡು ಕಟ್ಟಿ ಕೊಟ್ಟಿದ್ದರಿಂದ ಆಪ್ತತೆ ಹೆಚ್ಚುತ್ತದೆ.

    ಇವತ್ತಿನ ದಿನಮಾನಗಳಲ್ಲಿ ಸಾಹಿತ್ಯಕ್ಷೇತ್ರದಲ್ಲಿ ಪ್ರಬಂಧಗಳ ಬರಹಗಳ ಕೊರತೆ ಬಹಳನೇ ಇತ್ತು ಅದನ್ನು ಸ್ಮಿತಾ ಅಮೃತರಾಜ್ ಸಂಪಾಜೆ ಅವರು ಅಕ್ಷರರೂಪದಲ್ಲಿ ಸಾಧ್ಯವಾಗಿಸಿದ್ದಾರೆ ಇದನ್ನ ಮುದ್ರಣ ಮಾಡಿ ನಮ್ಮ ಕೈಗೆ ಸೇರುವಂತೆ ಮಾಡಿದ ಭಾವನ ಸಿಂಚನ ಪ್ರಕಾಶನ ಅವರ ಸೇವೆಯನ್ನು ನಾವು ನೆನೆಯಲೇ ಬೇಕು.

    ಇವತ್ತಿನ ಕಾಲಮಾನವನ್ನು ನಾವು ರ್ಯಾಪರ್ ಯುಗವೆಂದು ಕರೆಯುತ್ತೇವೆ ಇಲ್ಲಿ ಬರಹದ ಮೌಲ್ಯ ಎಷ್ಟು ಮುಖ್ಯವೋ ಹಾಗೇನೆ ಗೋದಾವರಿ ಡಿಎಸ್ ಅವರು ರಚಿಸಿದ ಮನಮೋಹಕ ಮುಖಪುಟ ಉತ್ತಮ ಗುಣಮಟ್ಟದ ರೀಗಲ್ ಪ್ರಿಂಟ್ ಸರ್ವಿಸ್ ಬೆಂಗಳೂರು ಅವರ ಮುದ್ರಣ ಅದಕ್ಕೆ ಬಳಸಿದ ಕಾಗದ ವಿನ್ಯಾಸ ಎಲ್ಲವೂ ಅದ್ಭುತ.

    ಇವತ್ತಿನ ದಿನಮಾನಗಳಲ್ಲಿ ಸ್ಟ್ಯಾಂಡ್ ಆಫ್ ಕಾಮಿಡಿಗಳ ಕಾರ್ಯಕ್ರಮಗಳು ದಿನ ದಿನ ಹೆಚ್ಚು ಹೆಚ್ಚಾಗುತ್ತಿವೆ ಈ ಸಂದರ್ಭದಲ್ಲಿ ಈ ಪ್ರಬಂಧ ಸಂಕಲನ ಒಂದು ವಿಳಾಸದ ಹಿಂದೆ ಸಾಕಷ್ಟು ವಿಷಯ ವಸ್ತುಗಳನ್ನು ಬಳಸಿಕೊಳ್ಳಬಹುದು.

    ಸ್ಮಿತಾ ಅಮೃತರಾಜ್ ಸಂಪಾಜೆ ಯವರು ಈಗಾಗಲೇ ಕಾವ್ಯಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಅವರ ವಿಷಯ ವಸ್ತು ಬಹಳಷ್ಟು ಬದುಕಿಗೆ ಮನಸಿಗೆ ಹತ್ತಿರವಿರುವ ದಿನನಿತ್ಯದ ವಿಷಯ ವಸ್ತುಗಳನ್ನೇ ಅವರು ಆಯ್ಕೆ ಮಾಡಿಕೊಂಡು ನಮಗೆಲ್ಲ ಗೊತ್ತಿರುವ ವಿಷಯವನ್ನು ಹೊಸದೃಷ್ಟಿಯಿಂದ ಬರೆದು ನಮ್ಮನ್ನು ಬೆರಗುಗೊಳಿಸುತ್ತಾರೆ ಎಂತಹ ಅದ್ಬುತ ಮಾಂತ್ರಿಕ ಶಕ್ತಿ ಅವರ ಪ್ರಬಂಧಗಳ ಬರಹದಲ್ಲಿಯೂ ಮುಂದುವರೆದಿದೆ ಹಾಗಾಗಿ ಪ್ರಬಂಧ ಸಂಕಲನ ಈಗಾಗಲೇ ಬಹಳ ಜನಪ್ರಿಯವಾಗಿದೆ.

    ಒಂದು ವಿಳಾಸದ ಹಿಂದೆ ಪ್ರಬಂಧ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಪ್ರಬಂಧ ಗಳೆಂದರೆ ಅಮ್ಮನೆಂಬ ಮಿಡಿಯುವ ಅಂತಃಕರಣ, ಒಂದು ವಿಳಾಸದ ಹಿಂದೆ ,ಕವಿಗಳು ಸಾರ್ ಕವಿಗಳು, ಕನಸಿನ ಜಾಡು ಹಿಡಿದು ಮುಂತಾದವು.

    ತಿನ್ನುವ ಆಹಾರಕ್ಕೆ ಹೇಗೆ ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ ಹಾಗೆ ಸ್ಮಿತಾ ಅಮೃತರಾಜ್ ಅವರ ಬರಹದಲ್ಲಿ ಆಪ್ತತೆ ಸರಳತೆಯ ಸುಂದರತೆಯ ಮಾತ್ರ ಇರುತ್ತದೆ ಹಾಗಾಗಿ ಸಾಮಾನ್ಯ ಓದುಗನೂ ಕೂಡ ಓದಿ ಆನಂದಿಸಬಹುದು ಯಾವ ಪಾಂಡಿತ್ಯದ ಪ್ರದರ್ಶನವು ಇವರ ಬರಹದಲ್ಲಿ ಇರುವುದಿಲ್ಲ ಹಾಗೆಯೇ ನಾನು ಇದನ್ನು ಸರಳ ಸುಂದರ ಪ್ರಬಂಧ ಸಂಕಲನ ಎಂದು ಸತ್ಯವಾಗಿ ಸಾರುವೆ ದಯಮಾಡಿ ಓದುಗರು ಎರಡು ನೂರು ರೂಪಾಯಿಗಳನ್ನು ಭಾವನಾ ಸಿಂಚನ ಪ್ರಕಾಶನ ವಾರ್ಡ್ ನಂಬರ್ 13 ಆಂಜನೇಯನ ದೇವಸ್ಥಾನದ ಹಿಂಭಾಗ ಮಹಾವೀರ ನಗರ ಕುಣಿಗಲ್ 572130 ತುಮಕೂರು ಜಿಲ್ಲೆ ಇಲ್ಲಿಂದ ಪಡೆಯಬಹುದು,
    ನಾನು ನಿಮಗೆ ಭರವಸೆಯನ್ನು ಕೊಡುತ್ತೇನೆ ನೀವು ಕೊಟ್ಟ ಹಣಕ್ಕೆ ಹಾಗೂ ಓದುವ ಸಮಯಕ್ಕೆ ಖಂಡಿತ ಮೋಸವಿಲ್ಲ ಇಂದೇ ಕೊಂಡು ಓದಿ ಓದಿಸಿ ಕನ್ನಡ ಸಾಹಿತ್ಯ ಬೆಳಸಿ.

    – ವಿಜಯ ಅಮೃತರಾಜ್ .

  3. ನಿಮ್ಮ ಲೇಖನವೇ ಇಷ್ಟು ಚೆನ್ನಾಗಿದೆ. ಹಾಗಾದರೆ ಸ್ಮಿತಾ ಅಮೃತ್ ರಾಜ್ ಅವರ ಕಥೆ , ಕವನ, ಲೇಖನಗಳು ಎಷ್ಟು ಚೆನ್ನಾಗಿರಬೇಡ ?

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter