ಅವರವರ ಭಾವಕ್ಕೆ

ಹಾಕಿದ್ದ ಪ್ಲಾಸ್ಟಿಕ್ ಚಪ್ಪಲಿ ಸರಬರ ಸಪ್ಪಳ ಮಾಡುತ್ತಿತ್ತು. ಹೆಗಲಿನಿಂದ ಬ್ಯಾಗು ಮತ್ತೆ ಮತ್ತೆ ಜರಿಯುತ್ತಿತ್ತು. ‘ಇದೂ ಜೀವನದ ಹಾಗೆಯೇ ಸುಧಾರಿಸುತ್ತಲೇ ಇರಬೇಕು’ಎಂದು ಮನಸ್ಸಿನಲ್ಲೇ ಗೊಣಗಿಕೊಂಡೆ.ಅಜ್ಜಿಯ ಮಾತುಗಳು ನೆನಪಾಯಿತು..‘ನಾವು ಸಾಯಬೇಕು, ಸ್ವರ್ಗಕಾಣಬೇಕು’ ‘ಹೆಂಗಸರ ಹಣೆಯಲ್ಲಿ ಒಳ್ಳೆಯ ಬರಹ ಬರೆಯಲು ಬ್ರಹ್ಮನಿಗೆ ಬಿಡುವಿರೋದಿಲ್ಲ ಒಂದಿಷ್ಟು ಹಾಗೇ ಬಿಟ್ಟಿರುತ್ತಾನೆ ಅಲ್ಲಿ ನಾವೇ ಬರೆದು ಕೊಳ್ಳಬೇಕು’ ಇಂತಹ ಮಾತುಗಳೇ ಅಲ್ಲವೇ ನನ್ನ ಬದುಕನ್ನುಹಠದಿಂದ ಕಟ್ಟಲು ನೆರವಾದದ್ದು.ಪ್ರತಿಯೊಂದನ್ನು ಹಠ ಹಿಡಿದು ಸಾಧಿಸಿಯೇ ಅಲ್ಲವೇ ಬ್ಯಾಂಕಿನಲ್ಲಿ ಕ್ಯಾಶಿಯರ್ ಕೆಲಸ ದಕ್ಕಿಸಿಕೊಂಡಿದ್ದು. .. ಎಂದು ನಿಟ್ಟುಸಿರಿಟ್ಟೆ. ನಿನ್ನೆಯಿಂದ ನಡೆದ ವಿದ್ಯಮಾನಗಳೆಲ್ಲ ಮರುಕಳಿಸಲಾರಂಭಿಸಿತು.

ಮನೆಯಿಂದ ಎರಡು ಕಿಲೋಮೀಟರ್‍ ಇರುವ ಬ್ಯಾಂಕಿಗೆ ನಿತ್ಯವು ನಡೆದುಕೊಂಡೇ ಹೋಗುವ ಅಭ್ಯಾಸ. ಬ್ಯಾಂಕ್‍ ಇರುವುದು ಮಾರ್ಕೆಟ್ಟಿನ ವಿರುದ್ಧ ದಿಕ್ಕಿನಲ್ಲಿ.ಮನೆಯಲ್ಲಿರುವುದು ನಾವು ನಾಲ್ಕು ಜನ. ಎಲ್.ಐ.ಸಿ ಯಲ್ಲಿ ಆಫೀಸರ ಆಗಿ ಕೆಲಸಮಾಡುವ ಗಂಡ ಹೈಸ್ಕೂಲು ಓದುವ ಮಗ ಕಾಲೇಜಿಗೆ ಹೋಗುವ ಮಗಳೊಂದಿಗೆ ನನ್ನ ಬದುಕು.ಮನೆಯಲ್ಲಿ ಎಲ್ಲರಿಗೂ ಊಟ ತಿಂಡಿ ಅಚ್ಚುಕಟ್ಟಾಗಿ ಬೇಕು. ಆದರೆ ಅವುಗಳ ವ್ಯವಸ್ಥೆಯ ಹೊಣೆಗಾರಿಕೆ ನಮಗೆ ಬೇಡ ಎನ್ನುವಂಥವರು ಮನೆಯ ಜನರು.

ನಿನ್ನೆಯೂ ಮನೆಯಲ್ಲಿ ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿದೆ ಬ್ಯಾಂಕಿಗೆ ತೆರಳಿ ದುಡ್ಡೆಣಿಸಿ ಕೈ ಸವೆಸಿದೆ.ಸಂಜೆ ಬ್ಯಾಂಕಿನಿಂದ ಹೊರಗೆ ಬಂದು ಒಂದರ್ಧ ಕಿಲೋಮೀಟರ್ ನಡೆಯುವಷ್ಟರಲ್ಲಿ ಹಾಕಿದ್ದ ಚರ್ಮದ ಚಪ್ಪಲಿಯ ಅಂಗುಷ್ಠ ಕಿತ್ತು ಹೋಯಿತು.ಬರಿಗಾಲಿನಲ್ಲಿ ನಡೆಯುವಂತಿಲ್ಲ. ಕೊಳಕು ರಸ್ತೆ.ಒಂದು ರಿಕ್ಷಾ ಕೂಡ ಕಾಣಿಸಲಿಲ್ಲ. ಡ್ರಾಪಕೊಡಿ ಎಂದು ಕೇಳೋಣವೆಂದರೆ ಸಹೋದ್ಯೋಗಿಗಳೆಲ್ಲ ನನಗಿಂತ ಮೊದಲೇ ಬ್ಯಾಂಕಿನಿಂದ ಹೋಗಿ ಬಿಟ್ಟಿದ್ದರು.ಹರಿದ ಚಪ್ಪಲಿಯನ್ನು ಸಂಭಾಳಿಸುತ್ತ ಅಯ್ಯೋ ನನ್ನ ಶತ್ರುವಿಗೂ ಬರಬಾರದು ಇಂತಹ ಕಷ್ಟ ಎನ್ನುತ್ತ ಹೇಗೆ ಹೇಗೋ ಮನೆ ಸೇರಿದೆ.

ಅಡುಗೆ ಮನೆ ತುಂಬ ಬಿದ್ದಿರುವ ಮುಸುರೆ ಪಾತ್ರೆಗಳು, ರೂಮಿನಲ್ಲಿ ಬಿದ್ದಿರುವ ಬಟ್ಟೆಗಳು, ರಾತ್ರಿಯ ಅಡುಗೆ…ಒಂದೆ ಎರಡೇ ಸಾಲು ಸಾಲು ಕೆಲಸಗಳು ಇರುವಾಗ ಹರಿದ ಚಪ್ಪಲಿ ಹೊಲಿಸಲು ಹೋಗುವುದು ಯಾವಾಗ, ಖರೀದಿಸಿದ ಒಂದೇ ತಿಂಗಳಿನಲ್ಲಿ ಈ ಚಪ್ಪಲಿ ಕಿತ್ತು ಹೋಗಬೇಕೆ.ಛೇ..ಎಂದು ಮನದಲ್ಲಿಯೇ ಅಲವತ್ತುಕೊಂಡೆ.ಎಲ್ಲ ಕೆಲಸ ಮುಗಿಸಿದಾಗ ಹಾಸಿಗೆಗೆ ಬೆನ್ನು ಹಚ್ಚಿದರೆ ಸಾಕೆನಿಸಿತ್ತು.

                    ************

 ಬೆಳಿಗ್ಗೆ ರುಚಿಕಟ್ಟಾದ ಇಡ್ಲಿ, ಸಾಂಬಾರ್, ಚಟ್ನಿ ತಿನ್ನುತ್ತ ಕುಳಿತಿದ್ದರು ಅಪ್ಪ, ಮಗ. ಹಿಂದಿನ ದಿನ ಹರಿದು ಹೋದ ನನ್ನ ಚಪ್ಪಲಿಯ ಸುದ್ದಿಯನ್ನು, ಕಷ್ಟಪಟ್ಟು ನಡೆದುಕೊಂಡು ಬಂದಿದ್ದನ್ನುಇಬ್ಬರಿಗೂ ಹೇಳಿದೆ.ಒಂದು ಬಗೆಯ ನಿರಾಸಕ್ತಿಯಿಂದಲೇ ಕೇಳಿದರು.

‘ನಿಮ್ಮಆಫೀಸ್‍ಎದುರಿಗೆ ಚಪ್ಪಲಿ ಹೊಲಿಯುವವಿದ್ದಾನೆ ಅಲ್ಲವಾ?’ಎಂದೆ.ತಿಂಡಿ ತಿಂದು ಮುಗಿಸಿ ಪೇಪರಿನಲ್ಲಿ ಕ್ರೀಡಾಪುಟ ಆಸಕ್ತಿಯಿಂದ ಓದಲಾರಂಭಿಸಿದ ಓದುತ್ತಿದ್ದ ಯಜಮಾನರುಕತ್ತೆತ್ತಿದರು. ‘ಹೌದು ಇದ್ದಾನೆ ಯಾಕೆ?’ ಕೇಳಿದರು.

 ‘ಇವತ್ತೊಂದು ದಿನ ಮಳೆಗಾಲದಲ್ಲಿ ಹಾಕುವ ಪ್ಲಾಸ್ಟಿಕ್ ಚಪ್ಪಲಿ ಹಾಕಿಕೊಂಡು ಬ್ಯಾಂಕಿಗೆ ಹೋಗುತ್ತೇನೆ. ನನ್ನ ಚಪ್ಪಲಿಯನ್ನು ಒಂದು ಚೀಲದಲ್ಲಿ..‘ ನಾನು ಮಾತು ಮುಗಿಸುವುದರೊಳಗೇ ವಾಕ್ಯವನ್ನುಅರ್ಧದಲ್ಲಿ ಕತ್ತರಿಸಿ ನಿನ್ನ ಹರುಕು ಚಪ್ಪಲಿಯನ್ನು ತೆಗೆದುಕೊಂಡು ಹೋಗಿದ್ದು ನಮ್ಮ ಆಫೀಸಿನವರ ಕಣ್ಣಿಗೇನಾದರೂ ಬಿದ್ದರೆ” ಏನ್ ಸಾರ್ ಹೆಂಡತಿಯ ಚಪ್ಪಲಿ ಕೈಯಲ್ಲಿ ಹಿಡಿದು ಕೊಂಡು ಬಂದಿದೀರ.ಹೆಂಡತಿನಾ  ಭಾಳ ಪ್ರೀತಿಸ್ತೀರಾ ಬಿಡಿ’ ಎನ್ನುತ್ತಾರೆ.‘ಎದುರಿಗೆ ಹೊಗಳಿ ನನ್ನ ಬೆನ್ನ ಹಿಂದೆ ಆಡಿಕೊಂಡು ನಗುತ್ತಾರೆ.ನನಗೀ ಕೆಲಸ ಹಚ್ಚಬೇಡ’ಎಂದು ರಕ್ಷಣಾತ್ಮಕ ಕ್ರಿಕೆಟ್‍ಆಡಿದರು.

‘ಮಗನೇ ವಿನೂ ನೀನಾದರೂ ನನ್ನ ಚಪ್ಪಲ್ಲು’..ಅವನೂ ವಾಕ್ಯ ಮುಗಿಸುವುದರೊಳಗೇ ‘ಇಲ್ಲಮ್ಮಾ ನನ್ನ ಕ್ಲಾಸಿನ ನೋಟ್ಬುಕ್ ಬುಕ್ ಸೇರಿಸಿದ ಬ್ಯಾಗೇ ಭಾರ ಅದರ ಜೊತೆ ಊಟದ ಡಬ್ಬ ಬೇರೆ.ಬೇರೆಯವರ ಚಪ್ಪಲ್ಲು ಕವರಿನಲ್ಲಿ ಹಾಕಿಕೊಟ್ಟರೂ ಕೈಯಲ್ಲಿ ಹಿಡಿದುಕೊಂಡು ಹೋಗಲು ಅಸಹ್ಯ ಎನಿಸುತ್ತದೆ ಅಮ್ಮ’ ಎನ್ನುತ್ತಾ ಸ್ನಾನಕ್ಕೆ ಹೊರಟ.

ಜೀನ್ಸ ಧರಿಸಿ ಸ್ಟೈಲಿಶ್ ಆಗಿ ರೆಡಿಯಾಗಿ ಹೊರ ಬಂದಳು ಮಗಳು.ಮಗಳೇ ಎಂದು ಮಾತನ್ನುಆರಂಭಿಸಿದೆ..ಮಗಳು ಹತ್ತಿರ ಬಂದಳು.ನನ್ನ ಕತ್ತಿನ ಸುತ್ತಲೂ ತನ್ನ ತೋಳ ಮಾಲೆ ಹಾಕಿದಳು.‘ಅಮ್ಮಾ ಪ್ರೀತಿಯ ಅಮ್ಮಾ!ನೀನು ಅಪ್ಪನ ಹತ್ತಿರ ತಮ್ಮನ ಹತ್ತಿರ ಮಾತಾಡಿದ್ದನ್ನೆಲ್ಲ ಕೇಳಿಸಿಕೊಂಡಿದ್ದೇನೆ. ನನ್ನಚಪ್ಪಲಿ ನೀನಾದರೂ ಹೊಲಿಸಿಕೊಂಡು ಬರುತ್ತೀಯಾ ಎಂದು ಕೇಳುತ್ತೀಯಾ ಅಲ್ವಾ?’ಎಂದಳು ಇಂಗಿತಜ್ಞೆಯಂತೆ.

ಹೂಂ ಎಂದು ತಲೆ ಆಡಿಸಿದೆ. ‘ನೋಡಮ್ಮಾ ಈ ಡ್ರೆಸ್, ಹೇರ್‍ಸ್ಟೈಲ್, ಮೇಕಪ್‍ಎಲ್ಲಾ ನೋಡು. ಇಷ್ಟು ಟ್ರಿಮ್ ಆಗಲಿಕ್ಕೆ ಬರೊಬ್ಬರಿ ಒಂದು ತಾಸು ತೆಗೆದು ಕೊಂಡಿದ್ದೇನೆ. ಇಷ್ಟು  ರೆಡಿ ಆದವಳ ಕೈಯಲ್ಲಿ ನಿನ್ನ ಹರುಕು ಚಪ್ಪಲಿ!.. ಹೇಗೆ ಹೊಂದುತ್ತದಮ್ಮಾ? ಗೆಳತಿಯರು ಕಾಡಿಸುವುದಿಲ್ಲವಾ?ಇದನ್ನಾಚೆಎಸೆದು ಹೊಸದೊಂದು ಜೊತೆ ಚಪ್ಪಲಿ ತೆಗೆದುಕೊಂಡುಬಿಡು’ಎಂದೊಂದು ಸಲಹೆ ನೀಡಿ, ನನ್ನ ಕೆನ್ನೆತಟ್ಟಿ ನನ್ನಉತ್ತರಕ್ಕೂಕಾಯದೇ ಮನೆಯಿಂದ ಹೊರಬಿದ್ದಳು.

 ಮೂಗು ಮುಚ್ಚಿಕೊಂಡಾದರೂ ನಿತ್ಯವೂ ತೊಳೆಯುವ ಬೆವರಿನಿಂದ ನಾರುವ ಗಂಡನ ಕಾಲು ಚೀಲಗಳು, ಧೂಳು ಮುಚ್ಚಿಕೊಂಡು  ದಿನವೂ ನನ್ನಕೈಯಲ್ಲೇ ಸ್ವಚ್ಛವಾಗುವ ಮಗನ ಯುನಿಫಾರ್ಮ ಬೂಟುಗಳು, ನನ್ನಚಪ್ಪಲಿಗೆಂದು ತೆಗೆದಿರಿಸಿದ ಹಣದಲ್ಲಿ ಮಗಳಿಗೆ ಕೊಡಿಸಿದ ಹೈಹೀಲ್ಡ ಚಪ್ಪಲಿಗಳೆಲ್ಲ ನೆನಪಾಗಿ ತುಟಿಯಂಚಿನಲ್ಲಿ ವ್ಯಂಗ್ಯ ನಗೆಯೊಂದು ಮೂಡಿತು.

 ಹಳೆಯದೇಲ್ಲವನ್ನು ನೆನಪಿಸಿಕೊಳ್ಳುತ್ತಾ, ಏನೇನೋ ಯೋಚಿಸುತ್ತ ಮಾದನ ಚಪ್ಪಲಿ ಅಂಗಡಿಗೆ ನಡೆದೆ. ಆಗ ತಾನೆ ಅಂಗಡಿಯ ಬಾಗಿಲು ತೆಗೆದ ಹಾಗಿತ್ತು.ಅವನ ಗೂಡಂಗಡಿಯ ಎದುರಿನ ನೆಲ ಆಗ ತಾನೇ ಚಿಮುಕಿಸಿದ ನೀರಿನಿಂದ ಹಸಿಯಾಗಿತ್ತು.ಅಂಗಡಿಯೊಳಗೆ ಊದುಬತ್ತಿ ಬೆಳಗುತ್ತಿದ್ದ ಮಾದನ ಮುಖದಲ್ಲಿ ಶ್ರದ್ಧೆ ಭಕ್ತಿಗಳು ಮೇಳೈಸಿದ್ದವು.ಪೂಜೆ ಮುಗಿದ ಮೇಲೆ ನನ್ನತ್ತ ತಿರುಗಿ ಮುಗುಳ್ನಕ್ಕ.ಕೈ ಮುಗಿದ.ಏನಕ್ಕಾ ಬೆಳಿಗ್ಗೆ ಬೆಳಿಗ್ಗೆಯೇ ಬಂದುಬಿಟ್ಟೀರಿ.ಬ್ಯಾಂಕಿಗೆ ಹೋಗಾಕಿಲ್ಲವಾ?’ಎಂದ.

‘ಈಗ ಹೋಗಬೇಕಪ್ಪ. ನಿನ್ನೆಚಪ್ಪಲಿ ಕಿತ್ತುಹೋಯಿತು.. ಹೊಲಿಸಿಕೊಂಡು ಹೋಗೋಣಾ ಅಂತ ಬಂದೆ.ಇಲ್ಲಿಂದ ಸೀದಾ ಬ್ಯಾಂಕಿಗೇ ಹೋಗಬೇಕು’ಎನ್ನುತ್ತ ಬ್ಯಾಗಿನಿಂದ ಚಪ್ಪಲಿ ಇರುವ ಕವರನ್ನು ಅವನ ಕೈಗೆ ದಾಟಿಸಿದೆ.

ಚಪ್ಪಲಿ ಹೊಲಿಯುವಾಗ ಬಡಿಯಲೆಂದು ಇಟ್ಟುಕೊಂಡ ಕಲ್ಲನ್ನು ಮಾಡ ತಾನು ಹಾಕಿಕೊಂಡ ಅಂಗಿಯತುದಿಯಿಂದಲೇ ಒರೆಸಿದ ಮಾದ. ನಂತರ ಎರಡೂ ಕೈಗಳಿಂದ ಕಲ್ಲನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡ. ಲಕ್ಷ್ಮಿಯ ಫೋಟೋಕ್ಕೆ ಪೂಜಿಸುವಾಗ ಇದ್ದ ಭಾವವೇ ಈಗಲೂ ಮಾದನ ಮೊಗದಲ್ಲಿ!

ಕುತೂಹಲ ತಾಳಲಾಗದೇ ‘ಯಾಕಪ್ಪಾ ಹೀಗೆ?’ಎಂದು ಕೇಳಿದೆ.ಚಪ್ಪಲ್ಲನ್ನುಕವರಿನಿಂದ ಹೊರ ತೆಗೆದು ಹರಿದಿದ್ದೆಲ್ಲಿ ಎಂದು ಪರಿಶೀಲಿಸುತ್ತ ಮಾದನೆಂದ‘ಅಕ್ಕಾ ಇವತ್ತು ನಿಮ್ಮದೇ ಬೋಣಗಿ.(ಮೊದಲ ಕೆಲಸ) ಈ ಕಲ್ಲ ಮ್ಯಾಲೆ ಇಟ್ಟು ಚಪ್ಪಲಿಯನ್ನು ಕುಟ್ಟಿ ಹೊಲಿದು ಸರಿ ಮಾಡಿದ್ರೇ ನಮ್ಮ ಮನಿಯ ಐದು ಮಂದಿಯ ಹೊಟ್ಟೆತುಂಬೋದು. ಅದಕ್ಕೇ ದಿನಾ ಇದನ್ನು ಒರೆಸಿ ನಮಸ್ಕಾರ ಮಾಡಿದ ಮ್ಯಾಲೇ ಕೆಲಸಾ ಶುರು ಮಾಡೋದು’ಎಂದ.

‘ಮಾದ ನಿನಗೆ ಯಾರ್ಯಾರೋ ಹಾಕಿ ಕೊಂಡು ಊರೆಲ್ಲ ತಿರುಗಿದ ಚಪ್ಪಲಿ ರಿಪೇರಿ ಮಾಡಾಕ ಅಸಹ್ಯ, ಬ್ಯಾಸರಾ ಆಗೋದಿಲ್ಲೇನು?’ ತಡೆಯಲಾಗದೇ ಪ್ರಶ್ನಿಸಿದೆ.

‘ಹೊಟ್ಟೆ ಹಸಿವಿನ ಮುಂದೆ ಹೇಸಿಗೆ ಬ್ಯಾಸರಾ ಯಾವುದೂ ಲೆಕ್ಕಕ್ಕಿರಂಗಿಲ್ರೀ ಅಕ್ಕಾರ.ರೂಢಾ ಬಿದ್ದತಿ ನನಗ ಈ ಕೆಲ್ಸಾ. ಅನ್ನಾಕೊಡೋ ಈ ಕೆಲ್ಸಾನೇ ನಮ್ಮ ದೇವರು’ಎಂದ ಮಾದ.ಗಂಡ, ಮಗ, ಮಗಳು, ನಾನು ಮಾದ ಎಲ್ಲರೂ ಮನುಷ್ಯರೇ.ಒಂದೇ ನೆಲದಲ್ಲಿ ನೆಲೆಸಿದವರೇ.ಮನದಲ್ಲಿ ಮಾದನ ಬಗ್ಗೆ ಗೌರವ ಮೂಡಿತ್ತು. ಅವನು  ಹೊಲಿದ ಚಪ್ಪಲ್ಲಿಗೆ ಕೇಳಿದಷ್ಟು ಹಣ ನೀಡಿದೆ. ಹೊಸದಾಗಿ ಹೊಲಿದಿಟ್ಟ ಚಪ್ಪಲ್ಲಿನ ಜೊತೆಯೊಂದನ್ನು ಖರೀದಿಸಿದೆ. ‘ಅಂಗಡಿ ವಿಸ್ತರಿಸಲಿಕ್ಕೆ ಸಾಲ ಏನಾದ್ರೂ ಬೇಕಾದ್ರೆ ಬ್ಯಾಂಕಿಗೆ ಬಾರಪ್ಪಾ ನಾನೊಂದು ಮಾತು ಕ್ಯಾಶಿಯರ್‍ಗೆ ಹೇಳ್ತೆನೆ’ ಎಂದೆ.ಮಾದನ ಮೊಗದಲ್ಲಿ ಹೂವಂಥ ನಗೆ ಅರಳಿತು.ಅವನು ಕೈ ಮುಗಿದ. ಪ್ರತಿಯಾಗಿ ಕೈ ನಾನೂ ಮುಗಿದು ಹೊರಬಿದ್ದಾಗ ಮನ ಹಗುರಾಗಿತ್ತು ಹೆಜ್ಜೆ ಬಲವಾಗಿತ್ತು..ಆತ್ಮವಿಶ್ವಾಸ ಜೊತೆಗೂಡಿತ್ತು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter