ಶುಭ ಸಮಾರಂಭಗಳಿಗೆ ಅರಸಿನ ಕುಂಕುಮ ಲೇಪಿಸಿಕೊಂಡು ಅಕ್ಷತೆಯೊಂದಿಗೆ ನವವಧುವಿನಂತೆ ಬರುವ ಆಮಂತ್ರಣ ಪತ್ರಿಕೆಗಳ ಮೆರುಗು ಇಲ್ಲದಿದ್ದರೆ ಹೇಗೆ ಹೇಳಿ. ಒಂದು ಕಾಲದಲ್ಲಿ ಮದುವೆಯ ಮಮತೆಯ ಕರೆಯೋಲೆಯೆಂದು ಕರೆಸಿಕೊಂಡು ಕೈಸೇರುತ್ತಿದ್ದ ಆಮಂತ್ರಣ ಪತ್ರಿಕೆಗಳಲ್ಲಿ ಕಾಲ ಸರಿದಂತೆ ಸಾಕಷ್ಟು ಬದಲಾವಣೆಯ ಗಾಳಿ ಬೀಸಿತು. ನಾವು ಚಿಕ್ಕವರಿದ್ದಾಗ ಹಲವು ದೇವರ ಚಿತ್ರಗಳಿರುವ ಆಮಂತ್ರಣ ಪತ್ರಿಕೆಗಳನ್ನು ಸಂಗ್ರಹಿಸಿ ಇಡುವ ಸಡಗರವಿತ್ತು. ಈಗ ಹೆಚ್ಚಾಗಿ ವಿಘ್ನನಿವಾರಕ ಗಣಪತಿಗೇ ಈ ಸ್ಥಾನ ಮೀಸಲಾಗಿದೆ ಬಿಡಿ. ಗಜಾನನನ ಮುಖಾರವಿಂದ ನಮಗಿಲ್ಲಿ ಹತ್ತಾರು ರೂಪಗಳಲ್ಲಿ ಕಲಾತ್ಮಕವಾಗಿ ಕಾಣಸಿಗುವುದು ಹೆಮ್ಮೆಯೇ ಸರಿ. ಆಗೆಲ್ಲ ಕನ್ನಡದಲ್ಲಿ ಮಾತ್ರ ಛಾಪಿಸಲಾಗುತ್ತಿದ್ದ ಪತ್ರಿಕೆಗಳು ಬರುಬರುತ್ತಾ ಆಂಗ್ಲಭಾಷೆಯ ಸೇರ್ಪಡೆಯೊಂದಿಗೆ ದ್ವಿಭಾಷಾ ಪತ್ರಿಕೆಯಾಗಿ ಭಡ್ತಿ ಪಡೆಯಿತು. ಬಂಧು ಬಾಂಧವರು ನೆಂಟರಿಷ್ಟರಲ್ಲದೆ ಗೆಳೆಯರು, ಹಿತೈಷಿಗಳು, ಪರಿಚಿತರೆಲ್ಲರೂ ಆಮಂತ್ರಿತ ವಲಯವನ್ನು ವಿಸ್ತರಿಸಿದ್ದೇ ಇದಕ್ಕೆ ಕಾರಣವಿರಬಹುದು. ಕನ್ನಡ ಬಾರದಿರುವ ಆಮಂತ್ರಿತರಿಗಾಗಿ ಇಂಗ್ಲಿಷ್ ಇಲ್ಲಿ ಸಂವಹನಸ್ವರೂಪವೂ ಆಯಿತು. ಮುಂದೆ ಸಾಂಪ್ರದಾಯಿಕ ಆಮಂತ್ರಣ ಪತ್ರಿಕೆಯ ಒತ್ತಟ್ಟಿಗೆ ಮದುವೆಯಾಗುವವರು ವಿಭಿನ್ನ ಭಾಷಾಶೈಲಿಗಳಲ್ಲಿ ಬಾಳಸಂಗಾತಿಯಾಗುವ ಪರಿಯನ್ನು ವರ್ಣಿಸಿ ಕರೆಯುವ ವೈಯಕ್ತಿಕ ಆಹ್ವಾನ ಪತ್ರಿಕೆಗಳನ್ನು ಖಾಸಗಿ ವಲಯದಲ್ಲಿ ಹಂಚುವ ರೂಢಿಯೂ ಚಾಲ್ತಿಗೆ ಬಂತು. ಇದರಲ್ಲಂತೂ ಹೇಳತೀರದಷ್ಟು ನಮೂನೆಗಳು, ವಿನ್ಯಾಸಗಳು ಆಮಂತ್ರಣದ ಒಟ್ಟಂದಕ್ಕೆ ಗರಿಯಿಟ್ಟವು. ಈಗೀಗ ಸಾಮಾಜಿಕ ಜಾಲತಾಣಗಳ ಮೂಲಕ ಆಮಂತ್ರಣವೀಯುವ ಹೊಸಪರಿ ಯುವಜನಾಂಗವನ್ನು ಹೆಚ್ಚಾಗಿ ಆಕರ್ಷಿಸಿದೆ. ಹೊಸತನದೊಂದಿಗೆ ಸಮಯ ಮತ್ತು ಹಣದ ಉಳಿತಾಯವೂ ಸಾಧ್ಯವೆನ್ನುವ ಜಾಣ್ಮೆಯ ನುಡಿ ಅವರದ್ದು. ಒಂದೊಮ್ಮೆ ಇದ್ದ ಬಾಯಿಮಾತಿನ ಆಮಂತ್ರಣದ ಸುಧಾರಿತ ತಾಂತ್ರಿಕ ವಿಕಲ್ಪ ಇದಾಗಿರಬಹುದೇ ಎನ್ನುವ ಅನುಮಾನ ನನಗೆ. ಆದರೆ ಮದುವೆ ನೋಂದಣಿ ಆಮಂತ್ರಣ ಪತ್ರಿಕೆ ಇಲ್ಲದೆ ಸಂಪನ್ನಗೊಳ್ಳದು.
ಇನ್ನು ಈ ಆಮಂತ್ರಣ ಪತ್ರಿಕೆಗಳನ್ನು ಹಂಚುವಲ್ಲಿಯೂ ವೈವಿಧ್ಯವಿದೆ. ರಕ್ತಸಂಬಂಧಿಗಳಿಗೆ, ಹತ್ತಿರದ ಬಂಧುಗಳಿಗೆ ಅವರ ಮನೆಗೆ ಹೋಗಿ ಕುಂಕುಮವಿಟ್ಟು ಕರೆಯದಿದ್ದರೆ ಅವರು ಶುಭಕಾರ್ಯಕ್ಕೆ ಗೈರಾಗುವ ಅಪಾಯವಿದೆ. ಅಲ್ಲದೆ ಅವರ ಮುನಿಸನ್ನು ನಿಭಾಯಿಸುವುದೂ ಕಷ್ಟ. ಉಳಿದಂತೆ ಇತರರಿಗೆ ಅಂಚೆಯ ಮೂಲಕವೋ, ನೆರೆಕರೆಯವರ ಮೂಲಕವೋ ಪತ್ರಿಕೆ ಕಳುಹಿಸುವುದಿದೆ. ಕೆಲವೊಮ್ಮೆ ಒಂದು ಊರಲ್ಲಿ ಬಹಳಷ್ಟು ಮನೆಗಳಿಗೆ ಲಗ್ನಪತ್ರಿಕೆ ಕೊಡುವುದಿದ್ದರೆ ಪರಿಚಯದ ಯಾವುದಾದರೂ ಮನೆಯಲ್ಲಿ ಎಲ್ಲ ಪತ್ರಿಕೆಗಳನ್ನು ಕೊಟ್ಟು ಬರೆದ ಹೆಸರಿನವರಿಗೆ ತಲುಪಿಸುವ ಹೊಣೆಗಾರಿಕೆಯನ್ನು ದಾಟಿಸುವುದಿದೆ. ಇಲ್ಲಿ ಕೊಟ್ಟ ಪತ್ರಿಕೆಗಳು ಯಾವುದಾದರೂ ಕಾರಣದಿಂದ ಬಟವಾಡೆಯಾಗದಿದ್ದ ಪಕ್ಷದಲ್ಲಿ ಮುಂಬರುವ ವಿಪತ್ತುಗಳಿಗೆ ಯಾರು ಹೊಣೆ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಅಂಚೆಯ ಮೂಲಕ ಕಳುಹಿಸಿದ ಆಮಂತ್ರಣ ಪತ್ರಿಕೆ ಕೆಲವೊಮ್ಮೆ ಮದುವೆ ಮುಗಿದ ನಂತರ ಕೈಸೇರಿದ ಪ್ರಸಂಗವೂ ಇಲ್ಲದಿಲ್ಲ. ತೀರ ಹತ್ತಿರದ ಬಂಧುಗಳಿಗೆ ಸಿರಿವಂತರು ಬೆಳ್ಳಿತಟ್ಟೆಯಲ್ಲಿ ಆಮಂತ್ರಣ ಪತ್ರಿಕೆ ಇಟ್ಟುಕೊಡುವ ದೊಡ್ಡತನವೂ ಇದೆ. ಇಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಬೆಳ್ಳಿತಟ್ಟೆ ಬೋನಸ್. ಯಾರಿಗೆಲ್ಲ ಪತ್ರಿಕೆ ಕೊಡಬೇಕೆಂದು ತಯಾರಿಸಿದ ಯಾದಿಯಲ್ಲಿ ಕೆಲವೊಮ್ಮೆ ಬೇಕಾದವರ ಹೆಸರು ಮರೆತು ಎಡವಟ್ಟಾಗುವ ಸಂದರ್ಭಗಳೂ ಇವೆ. ಆಗ ಅವರನ್ನು ಸಮಾಧಾನಿಸುವ ಯಾವ ಶಬ್ದಗಳೂ ನಮ್ಮ ಬತ್ತಳಿಕೆಯಲ್ಲಿ ಇರುವುದಿಲ್ಲ. ಮರೆತೆವು ಅಂತ ಹೇಳಲಾಗದ ಸಂದಿಗ್ಧ ಸ್ಥಿತಿಯದು. ದಿನಪತ್ರಿಕೆಗಳಲ್ಲಿ ಕೊಡುವ ಸಾರ್ವಜನಿಕ ಆಮಂತ್ರಣ ಇಂತಹ ಇಕ್ಕಟ್ಟನ್ನು ಬಗೆಹರಿಸಬಹುದು.
ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಸಮಾರಂಭಗಳಲ್ಲಿ ಉಡುಗೊರೆಯ ಭರಾಟೆಯೂ ಜೋರಾಗಿಯೇ ಇರುತ್ತದೆ. ಹಿಂದೆ ಶುಭಕಾರ್ಯಗಳಲ್ಲಿ ಉಡುಗೊರೆಯ ರೂಪದಲ್ಲಿ ಹಣವಿಟ್ಟವರ ಯಾದಿಯನ್ನೂ ತಯಾರಿಸಲಾಗುತ್ತಿತ್ತು. ಯಾಕೆಂದರೆ ಮುಂದೆ ಅವರ ಮನೆಯ ಕಾರ್ಯಕ್ರಮಗಳಲ್ಲಿ ಈ ಹಣ ಉಡುಗೊರೆಯ ರೂಪದಲ್ಲಿ ಸಂದಾಯವಾಗಬೇಕಾಗುತ್ತಿತ್ತು. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಗ ಕೆಲ ಸಮುದಾಯದವರು ಈ ಉಡುಗೊರೆಯ ಜಂಜಾಟವೇ ಬೇಡವೆಂದು ಆಮಂತ್ರಣ ಪತ್ರಿಕೆಗಳಲ್ಲಿ ಢಾಳಾಗಿ ‘ಆಶೀರ್ವಾದವೇ ಉಡುಗೊರೆ’ ಎಂದು ಪ್ರಿಂಟಿಸಿ ಹೊಸ ಪದ್ಧತಿಗೆ ನಾಂದಿ ಹಾಡಿದರು. ಉಡುಗೊರೆಯ ತಲೆಬಿಸಿಯಿಲ್ಲದೆ ಕೈಬೀಸಿಕೊಂಡು ಹೋಗಿ, ವಧುವರರನ್ನು ಆಶೀರ್ವದಿಸಿ, ಹೊಟ್ಟೆತುಂಬ ಉಂಡು ಬಂದರೆ ಮದುವೆ ಮುಗಿಯಿತು. ಬಹಳ ಹಿಂದೆ ಉತ್ತರಕರ್ನಾಟಕದ ಕೆಲಭಾಗಗಳಲ್ಲಿ ಮದುವೆಯಲ್ಲಿ ಆಯರಿ ಓದಿಸುವ ಪದ್ಧತಿಯಿತ್ತು. ಇದಕ್ಕೆ ಮುಯ್ಯಿ ಅಂತಲೂ ಕರೆಯುತ್ತಿದ್ದರು. ಅಂದರೆ ಮದುವೆಮನೆಯಲ್ಲಿ ಉಡುಗೊರೆಯಾಗಿ ಹಣನೀಡಿದವರ ಹೆಸರು ಮತ್ತು ಮೊತ್ತವನ್ನು ಬರೆದುಕೊಳ್ಳುತ್ತಾ ಜೋರಾಗಿ ಕೂಗಿ ಹೇಳುತ್ತಿದ್ದರು. ಇದೊಂದು ಮುಯ್ಯಿಗೆ ಮುಯ್ಯಿ ತೀರಿಸುವ ಮುಜುಗರದ ಸಂಗತಿಯಾಗಿ ನನಗೆ ಕಾಣುತ್ತಿತ್ತು. ಈಗ ಇದೆಲ್ಲ ಇರಲಿಕ್ಕಿಲ್ಲ ಬಿಡಿ.
ಈಗಿನ ವೈವಿಧ್ಯಮಯ ಆಮಂತ್ರಣ ಪತ್ರಿಕೆಗಳ ಅಂದಚಂದಕ್ಕೆ ಸಾಟಿಯೇ ಇಲ್ಲ. ರೇಟಿಗೆ ತಕ್ಕಂತೆ ಅವುಗಳ ಗಾತ್ರ, ಬಣ್ಣ, ತೂಕ, ವಿನ್ಯಾಸ, ಸೊಗಸಿನಲ್ಲಿ ವ್ಯತ್ಯಾಸ. ಪತ್ರಿಕೆಯೊಂದಕ್ಕೆ ಸಾವಿರಾರು ರೂಪಾಯಿಯಿಂದ ಹಿಡಿದು ಲಕ್ಷಗಟ್ಟಲೆ ಸುರಿಯುವ ಶ್ರೀಮಂತ ಕುಳಗಳೂ ನಮ್ಮ ನಡುವೆ ಇದ್ದಾರೆ. ಆಮಂತ್ರಣ ಪತ್ರಿಕೆಯೆಂಬ ಮ್ಯಾಜಿಕ್ ಬಾಕ್ಸ್‌ನಲ್ಲಿ ಬೆಲೆಬಾಳುವ ಉಡುಗೊರೆಗಳೂ ಸಿಗಬಹುದು. ಇವೆಲ್ಲ ಸಂಗ್ರಹಯೋಗ್ಯವಾದ ಆಹ್ವಾನ ಪತ್ರಿಕೆಗಳು ಅನ್ನಿ. ಮುಖ ಒರಸುವ ಕರ್ಚೀಫಿನಲ್ಲಿ ಆಮಂತ್ರಣ ಪತ್ರಿಕೆಯನ್ನು ಅಚ್ಚು ಹಾಕಿಸಿ ಹೊಸತನ ಮೆರೆದದ್ದೂ ಇದೆ. ಮದುವೆ ಮುಗಿದ ನಂತರ ಅದನ್ನು ಬಿಸುಟದೆ ಕರವಸ್ತ್ರವಾಗಿ ಬಳಸುವಂತಹ ಈ ವಿನೂತನ ಕ್ರಮ ಎಷ್ಟು ಚಂದ ಅಲ್ಲವೇ? ಇತ್ತೀಚೆಗೆ ಬಂದ ಒಂದು ಆಮಂತ್ರಣ ಪತ್ರಿಕೆ ಸಸ್ಯದ ಬೀಜವನ್ನೊಳಗೊಂಡಿತ್ತು. ಮದುವೆಯ ನಂತರ ಪತ್ರಿಕೆಯನ್ನು ಎಸೆಯದೆ ಮಣ್ಣಲ್ಲಿ ಹೂತು ಸಸಿ ಬೆಳೆಸುವ ಸಂದೇಶವು ಅದರಲ್ಲಿತ್ತು. ಸಸಿ ಬೆಳೆದಂತೆ ನವ ವಧುವರರ ಬಾಳೂ ಬೆಳಗಲಿ ಎನ್ನುವ ಆಶಯವೂ ಜೊತೆಯಲ್ಲಿತ್ತು. ವೈಕುಂಠ ಸಮಾರಾಧನೆಯ ಆಮಂತ್ರಣ ಕಾರ್ಡ್ ಗಳು ಸಾಮಾನ್ಯವಾಗಿ ಅಂಚುಗಳಲ್ಲಿ ಕಪ್ಪುಮಸಿ ಬಳಿದುಕೊಂಡು ಬರುತ್ತವೆ. ಇದರಲ್ಲಿ ಯಾವ ರೀತಿಯ ಹೊಸತನವೂ ತಲೆಹಾಕಿಲ್ಲ.
ಆಮಂತ್ರಣ ಪತ್ರಿಕೆಯ ಕೊನೆಯಲ್ಲಿ ಆಗಮಿಸಬೇಕಾದ ಮಂದಿಯ ಸಂಖ್ಯೆಯನ್ನೂ ನಮೂದಿಸುವ ಪರಿಪಾಠ ಈಗೀಗ ಕೆಲವೆಡೆ ಶುರುವಾಗಿದೆ. ಇದು ಕೊರೊನಾದ ಪರಿಣಾಮ ಇರಬಹುದು ಎಂದು ನೀವು ಭಾವಿಸಿದರೆ ತಪ್ಪಾದೀತು. ದೊಡ್ಡ ಶಹರಗಳಲ್ಲಿ ಕಲ್ಯಾಣಮಂಟಪಗಳ ಬಾಡಿಗೆ ಬಲು ತುಟ್ಟಿ. ಅಲ್ಲದೆ ಊಟದ ಪ್ರತಿ ತಾಟಿನ ರೇಟೂ ಕೈಗೆಟುಕದಂತಿರುತ್ತದೆ. ಕೆಲವೊಂದು ದುಬಾರಿ ಸ್ಟಾರ್ ಹೊಟೇಲುಗಳಲ್ಲಿ ಮದುವೆ ಹಾಲನ್ನು ಧರ್ಮಾರ್ಥ ಕೊಟ್ಟಂತೆ ಕೊಟ್ಟು ಅದರ ಮೌಲ್ಯವನ್ನು ಪ್ರತೀ ಊಟದ ತಾಟಿನ ಮೇಲೆ ಸಾವಿರಾರು ರೂಪಾಯಿ ಹೇರಿ ವಸೂಲಿ ಮಾಡಿಕೊಳ್ಳಲಾಗುತ್ತದೆ. ಇದೊಂದು ಅತಿ ಜಾಣತನದ ನಡೆ. ಅಲ್ಲಿ ಊಟ ಮಾಡಲು ಬಾರದ ಚಿಕ್ಕ ಮಗು ಪ್ಲೇಟ್ ಹಿಡಿಯಿತೆಂದರೆ ಸಾವಿರದ ಲೆಕ್ಕ ಬಂತೆಂದೆ ಅರ್ಥ. ಇಂಥಲ್ಲಿ ಯಾವ ಮನೆಯಿಂದ ಎಷ್ಟು ಮಂದಿಯನ್ನು ಆಮಂತ್ರಿಸಬೇಕೆನ್ನುವ ಲೆಕ್ಕದಲ್ಲಿ ಕೆಳಗೆ ನಮೂದಿಸಿದ ಕ್ರಮಸಂಖ್ಯೆಯ ಮೇಲೆ ಟಿಕ್ ಮಾರ್ಕ್ ಹಾಕಲಾಗುತ್ತದೆ. ಅಷ್ಟು ಮಂದಿಗೆ ಮಾತ್ರ ಮದುವೆಗೆ ಪ್ರವೇಶ! ಸಾಮಾನ್ಯವಾಗಿ ರೂಢಿಯಲ್ಲಿರುವ ಸಕುಟುಂಬ ಸಮೇತರಾಗಿ ಇಲ್ಲಾ ಬಂಧುಮಿತ್ರರೊಂದಿಗೆ ಆಗಮಿಸಬೇಕಾಗಿ….. ಎನ್ನುವ ಧಾರಾಳತನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಆಮಂತ್ರಣ ಪತ್ರಿಕೆಯೊಂದಿಗೆ ಬಂದವರ ತಲೆಲೆಕ್ಕ ಇಲ್ಲಿನ ವೈಶಿಷ್ಟ್ಯ. ಆಮಂತ್ರಣ ಪತ್ರಿಕೆ ಇದ್ದರಷ್ಟೆ ಒಳಗೆ ಪ್ರವೇಶವಿರುವ ಅದ್ಧೂರಿ ಮದುವೆಗಳೂ ನಡೆಯುತ್ತವೆ. ಆಮಂತ್ರಣ ಪತ್ರಿಕೆ ಇಲ್ಲಿ ಪಾಸ್ ಇದ್ದಂತೆ.
ಕೊರೊನಾ ಕಾಲದಲ್ಲಿ ಆಮಂತ್ರಣ ಪತ್ರಿಕೆಗಳು ಬಂದರೂ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ಸೇರಬೇಕಾದ ಜನಸಂಖ್ಯೆಯ ಲೆಕ್ಕಕ್ಕೂ ಕತ್ತರಿ. ಲಾಕ್ಡೌಿನಿನಿಂದ ಕೆಲವೊಮ್ಮೆ ಪಾಪ ಮದುವೆಗಳು ಮುಂದೂಡಲ್ಪಟ್ಟ ಸನ್ನಿವೇಶಗಳೂ ಎದುರಾಗಿದ್ದವು. ವಿಶೇಷ ಸೂಚನೆಯಾಗಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮದುವೆಗೆ ಹಾಜರಾಗಿ ಎನ್ನುವ ಕಂಡೀಷನಲ್ ಆಮಂತ್ರಣಗಳು ಮುಂದಿನ ದಿನಗಳಲ್ಲಿ ಬಂದರೆ ಅಚ್ಚರಿಯಿಲ್ಲ.
********
8 thoughts on “ಬಹುರೂಪಿ ಆಮಂತ್ರಣ”
ಫೈವ್ ಸ್ಟಾರ್ ಹೋಟೆಲಿನ ತಟ್ಟೆ ಊಟದ ಬಗ್ಗೆ ಗೊತ್ತಿರಲಿಲ್ಲ. ಲೇಖನ ತುಂಬಾ ಸ್ವಾರಸ್ಯವಾಗಿದೆ ಮತ್ತು ಪ್ರಸ್ತುತ ಪರಿಸ್ಥಿತಿಗಳ ತಕ್ಕಂತೆ ಮದುವೆ ಆಮಂತ್ರಣ ಪತ್ರಿಕೆ ಅಪ್ಡೇಟ್ ಅದ ವಿಷಯ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು
Baraha tumba chennagide.
Ittichina dinagalli whatsapp nalli
Amantrna Yellarigu kalisuva sawlabhya iruvudarinda maretu hoguva sambava
Kadime yendu nanna anisike .
Nimma barahagalalli
Haley hagu hosatanada chaye kandu baruttade
Nimma barahagalu hige saguttirali
ಆಮಂತ್ರಣ ಪತ್ರಿಕೆ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ👌👌
ಸೊಗಸಾದ ಲೇಖನ.
ಓದಿ ಆನಂದಿಸಿದೆವು.
Very nice description about Marriage Invitation. The marriage is performed with great enthusiasm by all the family members with a lot preparation involved such as listing the persons to be invited, purchase of cloths, gold ornaments and gifts to the near ones , food to be prepared for the occassion. Apart from the above all if invited persons attend the marriage and grace the occasion the happiness is more than anything to the invitee.
Shri. Dharmanand Shirva has described very lucidly earlier marriages and present marriages and their celebrations in detail with actual happenings in a simple versatile kannada language.
ತುಂಬಾ ಚೆನ್ನಗೊ ಬರೆದಿದ್ದೀರಿ ಸರ್. ಆಮಂತ್ರಣ ಪತ್ರಿಕೆಗಳ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ ಬರೆದಿದ್ದೀರ. !
ವಿಷಯ ಯಾವುದೇ ಇದ್ದರೂ ನಿಮ್ಮ ಲೇಖನಿಯಲ್ಲಿ ನವನಾವೀನ್ಯ ತೆ ಪಡೆದು ಸ್ವಾರಸ್ಯಕರ ವಾಗಿ ಹೊರಹೊಮ್ಮು ತ್ತದೆ.ಇದೂ ಕೂಡ ಅದಕ್ಕೆ ಹೊರತಲ್ಲ. ನಿಮ್ಮ ಮುಂದಿನ ಬರಹಗಳಿಗೆ ಕಾತುರತೆ ಹೆಚ್ಚಿಸುತ್ತವೆ.
Marriage Invitation
The sequences say from 1960 to 2020 arranged in a chronological order by using appropriate wordings. Interpretation is very nice. You are great at conveying things literally. Writing is beautiful. Your writings may inspire many people. You used simple words in many occasions that are most powerful. My sincere appreciation and i enjoyed the article. Good habbitpl continue. Warm wishes from purushothama.