ಕಾನನದ ಹಕ್ಕಿ

ಪುಟ್ಟ  ಪುಟ್ಟ ಚಿಗುರಿನಲ್ಲಿ
ಮುದ್ದು ಹೂವ ಎಸಳಿನಲ್ಲಿ 
ಮಿದುವೆಲೆಗಳ ಎದೆಯ ಮೇಲಿರುವ
ಮಣಿಯ ಲಯದ ನಯದ ಒನಪಿನಲ್ಲಿ
ನೀನು ಬಂದು ಮುದದಿ ನಿಂದು
ನನ್ನ ಕರೆದು ಸನಿಹ ಸೆಳೆದು ಹಾಡುತ್ತಿದ್ದೆ

ಹಾಡಿನೊಲವು ಕಾಡಿ ಕೂಡಿ 
ಸುಪ್ತಭಾವಗಳನು ಮೀಟಿ ಸಪ್ತರಾಗದಲೆಯ ದಾಟಿ
ಪದ ಪುಂಜಗಳಲಿ ಪಲ್ಲವಿಸಿದಾಗ
ಬೆಳೆಯಿತು ಪ್ರೀತಿ ನವಿರು ಬಳ್ಳಿಯ ರೀತಿ

ನೀನು ಕಾನನದ ಹಕ್ಕಿ ನಾನು ಭುವಿಯವಳು 
ಚಂದ ಸ್ವಚ್ಛಂದದ ಸುವಿಹಾರ ನಿನ್ನದು
ಪರಿಮಿತಿಯೊಳು ಮಿತವಾದ ಹೆಜ್ಜೆ ನನ್ನದು

ದಿನ ಕಳೆದು ವರುಷಗಳು ಉರುಳಿದ ಮೇಲೆ
ಗುಣ ಧರ್ಮಗಳು ಸಮಾನವಾಗದಾಗ
ವರ್ತಮಾನದ ಯಾನಕೆ ತೆರೆಯೊಂದು ಸರಿದು ಬಂತು
ನಾನೊಪ್ಪದ ತೆರೆಯ ನೀನಪ್ಪಿದೆ

ವಿರಾಗಿಯಾಗಿರಬಹುದು ನೀನು
ದುಃಖ ದುಮ್ಮಾನಗಳಿಗೆ ಕಿವಿಯಾಗಿ
ಒಡೆದಿರಬೇಕು ಸಹನೆಯ ಪರಿಧಿ
ಅಸಹಾಯಕ ಮನಸಿನ ನುಡಿಗಳಿಗೆ ಸಾಂತ್ವನವಾಗಿ 

ನಾನು ಭುವಿಯವಳು
ಒಳ ಬೇಗುದಿಯನಷ್ಟೆ ನಿನ್ನಲ್ಲಿ  ಅರುಹಿ 
ಸಮಾಧಾನಿಯಾಗುವವಳು
ಕಪ್ಪು ಬಿಳಿಪಿನ  ಸವಾಲುಗಳನು
ಸಹನೆಯ ತಕ್ಕಡಿಯಲಿಟ್ಟು ತೂಗುತಲೇ
ಕಾಲವನು  ಕಾಯುವವಳು

ರೆಕ್ಕೆಪುಕ್ಕ ಬಲಿತು ಸಿದ್ಧರೊಳಗೆ ಬೆರೆತು
ಹೊಸಬೆಳಕಿಗೆ ಮುಖತೆರೆದು ತದ್ಯಾತ್ಮದಿ ಹೊಳೆದು
ಜ್ಞಾತದೊಳು ಲೀನವಾದ ಮೇಲೆ 
ನೀನು ಕರೆಯುವುದೇ ಇಲ್ಲ

ಎಲ್ಲೂ ಕಳೆದು ಹೋಗದೆ
ಭುವಿಯವಳ ಸುತ್ತ  ಸುಳಿಯುತ್ತಲೇ ಇರುವಾಗ
ಎಲ್ಲಿ ಎಲ್ಲಿ ಎಂದು ನಾನೂ ಹುಡುಕಾಡಲೇ ಇಲ್ಲ

ಒಡನಾಡಿದ ಭಾವಗಳ ಎದೆಯೊಳಗೆ ಕಾಪಿಟ್ಟು
ಈಗಲೂ ಎಂದಿನಂತೆ ಕಾಯುತ್ತೇನೆ
ಮನಸ್ಸಲ್ಲಿ ಸುಳಿವಾಗ ಕನಸಲ್ಲಿ ಬರುವಾಗ
ಎಲ್ಲವನ್ನೂ ಹೇಳಿ ಬಿಡುತ್ತೇನೆ

ನೀನೂ ಒಲ್ಲೆ ಎನ್ನದೆ ಕಾನನದಲಿ ಕೂತು 
ಮೌನಿಯಾಗಿ ಕೇಳುತ್ತಲೇ ಇರುವಾಗ
ಹಳೆಯ ಚಿತ್ರಪಟಗಳು ಕಣ್ಮುಂದೆ ಸುಳಿಯುತ್ತವೆ
ನೆನಪುಗಳು ದನಿಯೆತ್ತಿ ಹಾಡುತ್ತವೆ

ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಕಾನನದ ಹಕ್ಕಿ”

  1. Gururaja Sanil, udupi

    ನವಿರು ಭಾವಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸುತ್ತ ಸಾಂಗತ್ಯದ ಒಳತಿರುಳನು ಧ್ವನಿಸುವ ಸೊಗಸಾದ ಕವಿತೆ ಅನಿತಾ ಅವರೇ…ಅಭಿನಂದನೆ….

    1. ಅನಿತಾ ಪಿ ತಾಕೊಡೆ

      ಕವನ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಧನ್ಯವಾದ ಸರ್

  2. Dr.poornima Shetty

    ಹಕ್ಕಿಯೊಂದಿಗೆ ಮಾತು ಸೊಗಸಾಗಿದೆ.. ಅನಿತಾ.. ಅಭಿನಂದನೆಗಳು

  3. Nenapinalliruva hakkiya jotegina matugalalli navurada bhava spandana inidu bhsheyalli moodi bandide.
    Abhinandane Anita.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter