ಮಲಿನ ಭಾಷೆ, ಅಪ್ರಾಮಾಣಿಕತೆಗಳು ನಾಡು, ನುಡಿಯನ್ನು ಬೆಳೆಸಿಯಾವೇ?

ದಸರಾ ಸಂದರ್ಭದಲ್ಲೇ ಸಾಂಸ್ಕೃತಿಕ  ನಗರಿ ಮೈಸೂರನ್ನು ನೋಡಬೇಕು, ಸುತ್ತಾಡ ಬೇಕೆಂಬ ಆಸೆ ಬಹಳ ಹಿಂದಿನದ್ದು.ಅದಕ್ಕೆ ತಕ್ಕಂತೆ ಆ ವರ್ಷ ದಸರಾದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದ್ದು, ‘ಸುಪ್ತಪ್ರಜ್ಞೆಯಲ್ಲಿ ದಾಖಲಾಗುವ ಬಯಕೆಗಳು ಈಡೇರುತ್ತವೆ!’ಎಂಬುದಕ್ಕೆ ಸಾಕ್ಷಿಯಾದಂತಿತ್ತು. ನಾನು ಮತ್ತು ಗೆಳೆಯ ಉತ್ಸಾಹದಿಂದ ಹೊರಡುವ ಸಿದ್ಧತೆ ನಡೆಸಿ,ಹೊಟೇಲ್‍ ಕೋಣೆಯನ್ನು ಕಾಯ್ದಿರಿಸಲು ಮತ್ತೊಬ್ಬ ಗೆಳೆಯನಿಗೆ ಸೂಚಿಸಿದೆವು. ಆ ಕೂಡಲೇ ಪ್ರತಿಷ್ಠಿತ,‘ಮಧ್ಯವರ್ತಿ’ ಸಂಸ್ಥೆಯೊಂದನ್ನು ಸಂಪರ್ಕಿಸಿದ.ಅವರ ಸುಪರ್ದಿಯಲ್ಲಿದ್ದ ಹೊಟೇಲ್‍ಗಳನ್ನು ಅಂತರ್ಜಾಲದಲ್ಲಿ ಜಾಲಾಡಿದೆವು. ಥಳಥಳಿಸುವ ಬಣ್ಣದ ಗೋಡೆಗಳಿಂದಲೂ ಗರಿಮುರಿಯಾದ ಮಂಚ, ಬೆಡ್ಡುಗಳಿಂದಲೂ ಹಾಗು ಇತರ ಉತ್ತಮ ಸವಲತ್ತುಗಳಿಂದಲೂ ಮನಸೂರೆಗೊಂಡ ಕೋಣೆಯೊಂದನ್ನು ಆರಿಸಿದೆವು.ಮಧ್ಯವರ್ತಿ ಸಂಸ್ಥೆಯಿಂದ ತಕ್ಷಣ ಬುಕ್ಕಿಂಗ್ ಸಂದೇಶ ಹಾರಿ ಬಂದಿತು.ಜೊತೆಗೆ,‘ಕೊಠಡಿಯ ಮೂರು ದಿನಗಳ ಅರ್ಧ ಬಾಡಿಗೆ, 2030/- ರೂಪಾಯಿಗಳನ್ನು 24 ಗಂಟೆಗಳೊಳಗೆ ಮುಂಗಡ ಪಾವತಿಸದಿದ್ದಲ್ಲಿ ಕಾಯ್ದಿರಿಸುವಿಕೆ ರದ್ದುಗೊಳ್ಳುತ್ತದೆ!’ ಎಂಬ ಸೂಚನೆಯೂ ಠಣ್ಣೆಂದಾಗ ಆನ್‍ಲೈನ್ ಮೂಲಕ ಹಣಪಾವತಿಸಿ, ಲಕ್ಸೂರಿ ಬಸ್ಸು ಹತ್ತಿ ಮೈಸೂರು ತಲುಪಿದೆವು.

ಇಡೀ ಚಾಮುಂಡಿ ನಗರಿಯು ಆಗ ತಾನೇ ಶೃಂಗಾರಗೊಂಡ ನವ ವಧುವಿನಂತೆ ಕಂಗೊಳಿಸುವುದನ್ನು ಕಂಡು ಇಬ್ಬರ ಮನಸ್ಸುಗಳು ಅರಳಿದವು.ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋಮೀಟರ್‍ ದೂರದ ಹೊಟೇಲಿಗೆ ಆಟೋ ಹತ್ತಿದೆವು.ಆದರೆ,‘ಕಿದರ್‍ ಜಾನಾ ಹೇ ಸಾಬ್?’ಎಂದ ಆಟೋ ಚಾಲಕನ ಭಾಷೆ ಕೇಳಿ,‘ಕನ್ನಡವೆಂದರೆ ಕುಣಿದಾಡುವುದೆನ್ನೆದೆ!’ ಎಂಬ ನುಡಿಮುತ್ತನ್ನು ಯಾರೋ ಗೇಲಿ ಮಾಡಿದಂತೆನ್ನಿಸಿತು.ನನ್ನ ಗೆಳೆಯ ಕಟ್ಟಾ ಕನ್ನಡಾಭಿಮಾನಿ ಮತ್ತು ಬಂಡಾಯ ಸ್ವಭಾವದವನು.ಆದುದರಿಂದ ಚಾಲಕನಿಗೆ ಕನ್ನಡದಲ್ಲೇ ಹೊಟೇಲು ವಿಳಾಸವನ್ನು ತಿಳಿಸಿದ.‘ಟೀಕ್ ಹೇ ಸಾಬ್’ಎಂದ ಅವನು ಹತ್ತು ನಿಮಿಷದಲ್ಲಿ ನಮ್ಮನ್ನಲ್ಲಿಗೆ ತಲುಪಿಸಿ,‘ಏಟಿ(80) ರುಪೀಸ್‍ ದೇದೊ ಸಾಬ್!’ ಎಂದಾಗ ತುಸು ಕಳವಳ ಗೊಂಡೆವು.ಗೆಳೆಯ ರಪ್ಪನೆ ಸೆಟೆದು ನಿಂತವನನ್ನು ಮೆಲ್ಲನೆ ತಿವಿದು ತಣ್ಣಗಾಗಿಸಿ ಹಣ ನೀಡಿ ಹೊಟೇಲ್ ಪ್ರವೇಶಿಸಿದೆವು.

ಲಾಡ್ಜಿನ ಮೇಲ್ವಿಚಾರಕ ಗೌರವದಿಂದ ಬರಮಾಡಿ ಕೊಂಡವನು,ನಮಗಾಗಿ ಕಾಯ್ದಿರಿಸಿದ ಕೋಣೆಗೆ ಕರೆದೊಯ್ದ. ಕೇವಲ ಎಂಟಡಿ ಉದ್ದದ, ಐದಡಿ ಅಗಲದ,ಅತ್ತಿತ್ತ ಮಿಸುಕಾಡಲು  ಸಾಧ್ಯವಿಲ್ಲದ ಕಿಷ್ಕಿಂದೆಯಂಥ ಆ ಕೊಠಡಿಯನ್ನು ಇಬ್ಬರು ಮಲಗ ಬಹುದಾದ ಮಂಚವೊಂದೇ ಆಕ್ರಮಿಸಿತ್ತು.ಅದನ್ನುಕಂಡು ದಂಗಾದೆವು! ಆದರೂ ಸಾವರಿಸಿ ಕೊಂಡು ಬಚ್ಚಲನ್ನು ವೀಕ್ಷಿಸಿದೆ.ಉಸಿರು ಗಟ್ಟುವಷ್ಟು ಕಿರಿದಾದ ಅದರ ನಾಲ್ಕು ಗೋಡೆಗಳಿಗೆ ಮೈ ಕೈ ಮತ್ತು ತಲೆಯನ್ನುಗಟ್ಟಿಸಿ ಕೊಂಡೇ ನಿತ್ಯಕರ್ಮ ಮುಗಿಸ ಬೇಕಾದ ಅವಸ್ಥೆಯಿತ್ತು.ಅಂಥ ಕೋಣೆಗೆ ದಿನದ ಬಾಡಿಗೆ1300/- ರೂಪಾಯಿಗಳಂತೆ!

ಮೈಸೂರು ಎಂದರೆ ಪಕ್ಕನೆ ನೆನಪಾಗುವುದು ಆಹ್ಲಾದಕರವಾದ ಶೀತಲ ವಾತಾವರಣ.ದೂರ ದೂರದ ಬಿಸಿಲ ನಾಡು,ಜಿಲ್ಲೆಗಳಿಂದ ಇಲ್ಲಿಗೆ ಮೊದಲ ಬಾರಿ ಭೇಟಿ ನೀಡಿರುವ ಹಲವರಿಗೆ ಬಿಸಿ ನೀರಿಲ್ಲದೆ ಸ್ನಾನ ಮಾಡುವುದು ಎಂಥ ವಿಷಾದಕರ ಸಂಗತಿಯೆಂಬುದು ಮನವರಿಕೆಯಾಗಿರ ಬಹುದು. ಅಂಥದ್ದರಲ್ಲಿ ನಮ್ಮ ಕೋಣೆಯಲ್ಲಿ,‘ಬೆಳಿಗ್ಗೆ ಏಳರಿಂದ ಒಂಭತ್ತರವರೆಗೆ ಮಾತ್ರ ಬಿಸಿ ನೀರು!’ಎಂದಾಗ ಒಲ್ಲದ ಮನಸ್ಸಿನಿಂದಲೇ ಕೋಣೆಯಲ್ಲಿ ಬಂಧಿಯಾಗಿ ಬಟ್ಟೆಬರೆಗಳನ್ನಿಡಲು ಕಪಾಟನ್ನು ಹುಡುಕಿದೆವು.ಆದರೆ ಅದೆಲ್ಲಿತ್ತು? ಬಾಗಿಲ ನೆತ್ತಿಗೆ ಬಡಿದ ಒಂದಷ್ಟು ಮೊಳೆಗಳೇ ನಮ್ಮ ಪ್ಯಾಂಟು ಶರಟುಗಳನ್ನು ತಮ್ಮ ಕೊರಳಿಗೇರಿಸಿಕೊಂಡವು.ಗೆಳೆಯ ತಲೆಬಾಚಲು ದರ್ಪಣ ಹುಡುಕಿದ.ಸ್ಕೂಟರಿನ ಕನ್ನಡಿಗಿಂತ ತುಸುವೇ ದೊಡ್ಡದಿದ್ದ ಕನ್ನಡಿಯೊಂದು ಬಚ್ಚಲಲ್ಲಿ ವ್ಯಂಗ್ಯವಾಗಿ ನಕ್ಕಿತು.ಕೂಡಲೇ ಮೇಲ್ವಿಚಾರಕನನ್ನು ತರಾಟೆಗೆ ತೆಗೆದು ಕೊಂಡೆವು.ಆತ ಚೂರು ವಿಚಲಿತನಾಗದೆ,‘ನಮ್ಮಲ್ಲಿ ಇಷ್ಟೇ ವ್ಯವಸ್ಥೆ ಇರೋದು ಸಾಬ್!’ಎನ್ನುತ್ತ ಸೂಚನಾ ಫಲಕವೊಂದನ್ನು ಮುಂದೆ ತಳ್ಳಿದ.ಅದು ಮಧ್ಯವರ್ತಿ ಸಂಸ್ಥೆಯ ನಿಬಂಧನಾ ಪತ್ರವಾಗಿತ್ತು.

‘ರೂಮು ಪರೀಕ್ಷಿಸದೆ ಒಪ್ಪಿಕೊಳ್ಳಬೇಡಿ.ಸೂಕ್ತವೆನಿಸಿದರೆ ಮಾತ್ರ ಕಾಯ್ದಿರಿಸಿ!’ಎಂದಿದ್ದರೊಂದಿಗೆ ಸಂಸ್ಥೆಗೆ ಮಾತ್ರವೇ ಲಾಭದಾಯಕವೆನಿಸುವ ನಿಯಮಗಳನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅದೇ ಸಂಸ್ಥೆಯು,ಅಂತರ್ಜಾಲದಲ್ಲಿ ನೀಡಿದ್ದ ಹೊಟೇಲಿನ ಚಿತ್ರಗಳಲ್ಲಿ ರೂಮಿನ ಗೋಡೆ, ಕಿಟಕಿ ಪರದೆ ಮತ್ತು ಬಚ್ಚಲು ಕೋಣೆಯ ಫಳಫಳ ಹೊಳೆಯುವ ಟೈಲ್ಸ್‍ಗಳಿಗೂ, ಇಲ್ಲಿನ ಕಟು ವಾಸ್ತವಕ್ಕೂ ಅಜಗಜಾಂತರವಿತ್ತು.ಎಂಥ ವಂಚನೆ! ನಾವು ಸರಿಯಾಗಿ ಮೋಸ ಹೋಗಿರುವುದು ಖಚಿತವಾಯಿತು.ತಕ್ಷಣ ಮಧ್ಯವರ್ತಿ ಸಂಸ್ಥೆಗೂ ಫೋನ್ ಮಾಡಿದೆವು. ಆದರೆ ಅತ್ತಲಿಂದ ಯಾಂತ್ರಿಕ ಧ್ವನಿ ಸುರುಳಿಯೊಂದೇ ಸುಮಾರು ಹೊತ್ತು ಮಣಮಣಿಸಿದಾಗ ನಿರಾಶರಾದೆವು.

ಗೆಳೆಯ ಹೊಟೇಲ್‍ ಮೇಲ್ವಿಚಾರಕನೊಡನೆ ಜಗಳಕ್ಕೇ ನಿಂತು ಬಿಟ್ಟ.ಅವನು ಬೆದರಿ ಮಾಲಿಕನನ್ನು ಕರೆಯಿಸಿದ.ಎದೆ ಉದ್ದದ

 ಬೆಳ್ಳಗಿನ ದಾಡಿ ಬೆಳೆಸಿದ್ದ, ಬಿಳಿ ಟೋಪಿಯ, ಅರವತ್ತರ ಆಸುಪಾಸಿನ ಮಾಲಕ ಬಂದವನು, ‘ದೇಕೋ ಸಾಬ್, ನಮ್ದೂಕೆ ಮಧ್ಯವರ್ತಿ ಸಂಸ್ಥೆಯು ಇಂಥ ಕೋಣೆಗಳಿಗೆ ಆರುನೂರು ಮಾತ್ರ ಕೊಡ್ತಾವ್. ಅಷ್ಟಕ್ಕೆ ನಿಮ್ದೂಕೆ ಇಷ್ಟೇ ಸವಲತ್ತು ಕೊಡೋದಿಕ್ಕೆ ಸಾಧ್ಯ.ನೀವು ನೇರವಾಗಿ ನಮ್ದೂಕೆ ಕಾಂಟೆಕ್ಟ್‍ಆಗಿಲ್ಲ. ಅದಿಕ್ಕೆ ಮುಂದೇನಿದ್ದರೂ ಸಂಸ್ಥೆಯ ಜೊತೆಗೆನೇ ಬಾತ್‍ ಕರೋ!’ಎಂದು ಮುಖಕ್ಕಪ್ಪಳಿಸಿದಂತೆ ಅಂದುಬಿಟ್ಟ.ಆದ್ದರಿಂದ ಆ ಹೊಟೇಲನ್ನೇ ತೊರೆದು ಹೊರಡುವುದೆಂದು ನಿರ್ಧರಿಸಿದೆವು.ಆದರೆ ದಸರಾ ಸಂಭ್ರಮದಲ್ಲಿದ್ದ ನಗರದ ಹತ್ತಿಕ್ಕಲಾರದ ವಾಹನ ದಟ್ಟಣೆಯ ನಡುವೆ ಬೇರೆ ರೂಮನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ ಮಾತ್ರವಲ್ಲದೇ ಈಗಾಗಲೇ ಇಲ್ಲಿ ಮುಂಗಡವಾಗಿ ನೀಡಿದ್ದ 2030 ರೂಪಾಯಿಗಳಿಗೂ ಪಂಗನಾಮ ಬೀಳುವುದು ಖಾತರಿ ಎಂಬರಿವಾಗುತ್ತಲೇ ತಣ್ಣಗಾಗುವುದು ಅನಿವಾರ್ಯವಾಯಿತು.

ಇತ್ತ ಏಳರಿಂದ ಒಂಭತ್ತರವರೆಗೆ ಬರುವ ಬಿಸಿ ನೀರು ರಾತ್ರಿ ಹತ್ತಾದರೂ ನಾಪತ್ತೆ.ಅದಕ್ಕೆ,‘ಗೀಸರ್‍ಕೆಟ್ಟಿದೆ!’ಎಂಬ ಸಬೂಬು ಬಂತು. ಚಳಿಯಿಂದ ಕಂಪಿಸುತ್ತಲೇ ನಿತ್ಯ ಕರ್ಮವನ್ನು ಮುಗಿಸಿ ಅರಮನೆಯತ್ತ ಹೊರಟು ಆಟೋ ಹತ್ತಿದೆವು.

‘ಕಿದರ್‍ ಜಾನ ಹೇ ಸಾಬ್…?’ಎಂದ ಮತ್ತೊಬ್ಬ ಚಾಲಕ.

‘ಟಿಪ್ಪುವಿನ ಆಳ್ವಿಕೆ ನಿಂತು ಶತಮಾನ ಕಳೆಯಿತು. ಇನ್ನೂ ಉರ್ದು  ಬಿಟ್ಟಿಲ್ಲವೇ ನೀವು…?’ಎಂದು ಕನ್ನಡಾಭಿಮಾನಿ ಗೆಳೆಯ ಸಿಡುಕಿದ.

‘ಅರೆರೇ, ಕೆನಡಾ ಬರುತ್ತೆ ಸಾಬ್…!’ಎಂದ ಚಾಲಕ ಹಲ್ಲು ಗಿಂಜುತ್ತ.

‘ಅರಮನೆಯತ್ತ ಕೊಂಡು ಹೋಗು…!’ಗೆಳೆಯ ಮತ್ತೆ ಗದರಿದ.

‘ಏಟಿ(80)ರುಪೀಸ್‍ಆಗುತ್ತೆ ಸಾಬ್…’ಎಂದ ಅವನು  ಅದೇ ಧಾಟಿಯಿಂದ.

‘ಹ್ಞಾಂ! ಒಂದೂವರೆ ಕಿಲೋ ಮೀಟರಿಗೆಅಷ್ಟೊಂದಾ…?’ನಾನು ಉದ್ಘರಿಸಿದೆ.

‘ಹ್ಞೂಂ ಸಾಬ್. ಬಹುತ್‍ ಟ್ರಾಫಿಕ್‍ ಐತೆ…!’ಎಂದ ಅವನು ಗಡುಸಾಗಿ. ಗೆಳೆಯ ದಡಕ್ಕನೆ ಆಟೋದಿಂದ ಜಿಗಿದ.ಮರುಮಾತನಾಡದೆ ನಾನು ಇಳಿದು ಹತ್ತು ಗಜ ದೂರ ನಡೆದು ಹೋಗಿ ಮತ್ತೊಂದು ಆಟೋದವನನ್ನು ವಿಚಾರಿಸಿದೆವು.ಅವನು ಇವನ ಪಿತಾಮಹನಂಥವನು,‘ಹಂಡ್ರೇಡ್‍ ರುಪೀಸ್‍ ಆಗುತ್ತೆ ಸಾಬ್!’ಎಂದಾಗ ಗೆಳೆಯ ನನ್ನ ಕೈ ಹಿಡಿದು ದೂರಕ್ಕೆಳೆದೊಯ್ದ.ಸುಮಾರು ಅರ್ಧಗಂಟೆ ಹೀಗಿಯೇ ಸುತ್ತಿದ ಬಳಿಕ ಮತ್ತೊಬ್ಬ ಹಿಂದಿ ಸಾಬ್‍ ಅರವತ್ತು ರೂಪಾಯಿಗೆ ಕರೆದೊಯ್ಯಲು ಒಪ್ಪಿದ.ಮರುದಿನ ಇನ್ನೊಬ್ಬ ಚಾಲಕ ಅರಮನೆಯಿಂದ ಎರಡು ಕಿಲೋಮೀಟರ್‍ ದೂರದ ಪ್ರೇಕ್ಷಣೀಯ ಸ್ಥಳವೊಂದಕ್ಕೆ ಕರೆದೊಯ್ಯಲು ನಮ್ಮನ್ನು ಕುಳ್ಳಿರಿಸಿ ಕೊಂಡವನು, ಎಂಥ ಕಟುಕರ ಹೃದಯದಲ್ಲೂ ಕರುಣಾರಸ ಉಕ್ಕಿ ಹರಿಯಬೇಕು ಎಂಬಂತೆ ತನ್ನ ಸಂಸಾರ ತಾಪತ್ರಯಗಳನ್ನೆಲ್ಲ ಎಳೆಎಳೆಯಾಗಿ ವಿವರಿಸುತ್ತ ಎಲ್ಲೆಲ್ಲೋ ಸುತ್ತಾಡಿಸಿ ಕೊಂಡೊಯ್ದು,ನೂರೈವತ್ತು ಕಸಿದು ಕೊಂಡಿದ್ದರ ಅರಿವು ನಮಗಾದುದು ಅಲ್ಲಿಂದ ನಮ್ಮನ್ನು ಹಿಂದಿರುಗಿ ಕರೆದು ತಂದ ಮತ್ತೊಬ್ಬ ಚಾಲಕ ಎಂಬತ್ತು ಕಿತ್ತು ಕೊಂಡಾಗಲೇ! ಹೀಗೆ ನಾವು ಮೂರು ದಿನಗಳಲ್ಲಿ ಸುಮಾರು ಹದಿನೈದು ಆಟೋಗಳಲ್ಲಿ ಸಂಚರಿಸಿರ ಬಹುದು.ಆದರೆ ಮೈಸೂರಿನ ಮುಗ್ಧ ಜನತೆಯ ಪ್ರಾಮಾಣಿಕತೆಯನ್ನೂ, ಒಂದಿಷ್ಟು ಭಾಷಾ ಪ್ರೇಮವನ್ನೂ ಸಾರುವಂಥ ಒಬ್ಬಿಬ್ಬರಾದರೂ ಚಾಲಕರು ಸಿಗಬಹುದೇನೋ ಎಂಬ ನಮ್ಮ ನಿರೀಕ್ಷೆ  ಕೊನೆಗೂ ಸುಳ್ಳಾಯಿತು.

ಆದರೂ ಸಿರಿಗನ್ನಾಡಾಂಬೆಯ ಸುಂದರನಾಡೆಂಬ ಪ್ರೀತಿಯಿಂದ ನಮ್ಮ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುತ್ತ ಮನಸೋ ಇಚ್ಛೆ ಸುತ್ತಾಡಿದೆವು.ಅರಮನೆಯಿಂದ ಸುಮಾರು ಮೂರು, ನಾಲ್ಕು ಕಿಲೋಮೀಟರ್ ಸುತ್ತಮುತ್ತದ ಹೊಟೇಲು, ಬಸ್ಸು ನಿಲ್ದಾಣ, ಹೂವಿನಂಗಡಿ, ಬಟ್ಟೆಯಂಗಡಿ-ಹೀಗೆ ಎಲ್ಲಿ ವ್ಯವಹರಿಸ ಹೊರಟರು ಅಪಭ್ರಂಶ ಹಿಂದಿಯೇ ಕನ್ನಡವನ್ನು ತುಳಿತುಳಿದು ನರ್ತಿಸುತ್ತಿದ್ದುದನ್ನು ಕಂಡು ಅಪಾರವಾದ ಪರಕೀಯ ಭಾವನೆ ಮೂಡಿಬಿಟ್ಟಿತು.ಕನ್ನಡ ಭಾಷೆಯ ಕಂಪು ವಿಶ್ವಾದಾದ್ಯಾಂತ ಪಸರಿಸುತ್ತ ತನ್ನದೇ ಆದ ಛಾಪು ಮೂಡಿಸುತ್ತಿರುವಂಥ ಕಾಲಘಟದ್ದಲ್ಲಿ ನಮ್ಮ ನಾಡಿನಲ್ಲೇ ಅದರ ಪರಿಸ್ಥಿತಿ ಶೋಚನೀಯವಾಗಿದೆ ಎಂದರೆ,‘ಥೂ!ಎಂಥ ದುರಂತ!’ಎಂದುವಿಷಾದ ಪಟ್ಟುಕೊಂಡು ಸುಮ್ಮನಿರಬಹುದಾದ ಸಂಗತಿಯೇನಲ್ಲ ಇದು! ಭಾಷೆಯೊಂದು ಪ್ರಾಚೀನ ಸಂಸ್ಕೃತಿಯ ಮಹತ್ವದ ಕುರುಹು.ಪ್ರಬುದ್ಧ ಜನಜೀವನದ ಏಳಿಗೆಗೆ ಅದು ಕಳಶವಿಟ್ಟಂತೆ ಹೌದು.ಅಂಥ ಭಾಷೆಯೇ ಮಲಿನಗೊಂಡರೆ ಅದನ್ನು ಉಸಿರಾಡುವ ಸಂಸ್ಕೃತಿಯೂ ಪರಕೀಯವಾಗುತ್ತ, ಇಡೀ ಸಮಾಜದ ಮೇಲೆ ಅದರ ದುಷ್ಪರಿಣಾಮವಾಗದಿದ್ದೀತೇ…?ಎಂಬ ಚಿಂತೆಯಾಯಿತು.

ಊರಿಗೆ ಹಿಂದಿರುಗುವ ದಿನ ರಾತ್ರಿ ಇದೇ ಚರ್ಚೆಯೊಂದಿಗೆ ಬಸ್ಸು ಕಾಯುತ್ತ ನಿಂತಿದ್ದೆವು.ನಮ್ಮಎದುರುಗಡೆ ಒಂದು ಆಟೋ ನಿಂತಿತ್ತು.ಚಾಲಕ ಅದಕ್ಕೊರಗಿ ನಿಂತು ಕೊಂಡು ಬೀಡಿ ಸೇದುತ್ತಿದ್ದ.ಅಷ್ಟರಲ್ಲಿ ಇಬ್ಬರು ಪೊಲೀಸರು ರೊಂಯ್ಯನೇ ಅತ್ತ ಬಂದವರು ಆಟೋವನ್ನು ಸುತ್ತುವರೆದು ಚಾಲಕನನ್ನು ಹಿಡಿದೆಳೆದು ಬಂಧಿಸಲು ಮುಂದಾದ ದೃಶ್ಯವು ಕುತೂಹಲ ಕೆರಳಿಸಿತು.‘ಸಾ, ಸಾ…ಸಾ…! ಬಿಟ್ಟಿ ಬಿಡಿ ಸಾ…! ನಿಮ್‍ದಮ್ಮಯ್ಯ ಸಾ…!’ಎನ್ನುತ್ತ ಚಾಲಕ ಧೊಪ್ಪನೆ ಕುಸಿದು ಪೊಲೀಸನೊಬ್ಬನ ಕಾಲಿಗೆ ಬಿದ್ದು ಅಂಗಲಾಚುತ್ತಲೇ ತನ್ನ ಕಿಸೆಯಿಂದ ನೂರರ ನೋಟೊಂದನ್ನು ತೆಗೆದು ಅವನ ಕೈಗೆ ತುರುಕಿಸಿದ. ಮರುಕ್ಷಣ ಅಲ್ಲೇನೂ ನಡೆದೇ ಇಲ್ಲವೆಂಬಂಥ ವಾತಾವರಣ ಸೃಷ್ಟಿಯಾಗಿತ್ತು!ಅದನ್ನುಕಂಡ ನನಗೆ ಅಪರಾಧವೊಂದು ಸಣ್ಣದಿರಲಿ,ದೊಡ್ಡದಿರಲಿ ಅದನ್ನುಮರೆಮಾಚಲು ಅಥವಾ ಪೋಷಿಸಲು ಕೆಲವೊಮ್ಮೆನೂರರ ಒಂದು ನೋಟಿಗೂ ತಾಕತ್ತಿದೆ ಎಂದೆನ್ನಿಸಿತು.

ಆದರೆ ಇವೆಲ್ಲದರ ನಡುವೆ ನಮ್ಮದಸರಾ ಪ್ರವಾಸವನ್ನುಅರ್ಥಪೂರ್ಣಗೊಳಿಸಿದ ಸಂಗತಿಯೆಂದರೆ, ನಾಡಿನ ಪ್ರಖ್ಯಾತ ಸಾಹಿತಿ, ಎಸ್. ಎಲ್. ಭೈರಪ್ಪಅವರ ಅಧ್ಯಕ್ಷತೆಯಲ್ಲಿ,ಅರಮನೆಯಲ್ಲಿ ನಡೆದ ಅಪೂರ್ವವಾದ ಸಾಹಿತ್ಯ ಸಮಾವೇಶ!ಕನ್ನಡನಾಡು, ನುಡಿಗಳ ಘನತೆ, ಸಮೃದ್ಧತೆಯನ್ನುಉಳಿಸಿ ಬೆಳೆಸುವಲ್ಲಿ ಅಲ್ಲಿನ ಬಹುತೇಕ ಕಾರ್ಯಕ್ರಮಗಳು ತುಸು ಭರವಸೆಯನ್ನು ಮೂಡಿಸಿದವು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಲಿನ ಭಾಷೆ, ಅಪ್ರಾಮಾಣಿಕತೆಗಳು ನಾಡು, ನುಡಿಯನ್ನು ಬೆಳೆಸಿಯಾವೇ?”

  1. ಅನಿತಾ ಪಿ ಪೂಜಾರಿ

    ಮಧ್ಯವರ್ತಿ ಸಂಸ್ಥೆಯ ಸುಪರ್ದಿಯಲ್ಲಿರುವ ಹೊಟೇಲುಗಳ ಅವ್ಯವಸ್ಥೆ, ನೋಟಿನ ತಾಕತ್ತು, ಕನ್ನಡ ಭಾಷೆಯ ಕುರಿತು ಲೇಖಕರಿಗಿರುವ ಕಾಳಜಿ ಈ ಲೇಖನದಲ್ಲಿ ಒಡಮೂಡಿದೆ. ತಮಗಾದ ಅನುಭವವನ್ನು ಸುಂದರವಾಗಿ ಲೇಖನದ ರೂಪದಲ್ಲಿ ಓದುಗರಿಗೆ ಉಣಬಡಿಸಿದ್ದೀರಿ. ಅಭಿನಂದನೆ ಸರ್ 🙏🙏🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter