ಸಾಯಿಸುತೆ ಅವರ ೧೨೫ನೇ ಕಾದಂಬರಿ- `ವಸುಧೈವ ಕುಟುಂಬ’

ವಿಶ್ವಮಾನವತೆಯ ಅಂತರಂಗದಿ ಬೆಳಗುವ `ವಸುಧೈವ ಕುಟುಂಬ’

ಅನಾದಿಕಾಲದಿಂದ ಹೊಂದಿರುವ ವಿಶ್ವಮಾನವತೆಯ ದೃಷ್ಟಿಯನ್ನು ಅಂತರಂಗದಲ್ಲಿ ನೆಲೆಸಿಕೊಂಡು ಜಗತ್ತನ್ನೇ ಒಂದು ಕುಟುಂಬವಾಗಿ ಕಾಣುವ ಪರಿಕಲ್ಪನೆಯನ್ನೇ ಶೀರ್ಷಿಕೆಯಾಗಿ ಹೊಂದಿರುವ `ವಸುಧೈವ ಕುಟುಂಬ’ ಸಾಯಿಸುತೆಯವರ 125ನೇ ಕಾದಂಬರಿ. ಬಿಳಲುಗಳು ಅನೇಕವಿದ್ದರೂ ಮಾನವ ಕುಲದ ಬೇರೊಂದೇ; ಜಗತ್ತೇ ಒಂದು ಕುಟುಂಬ ಎನ್ನುವುದೇ `ವಸುಧೈವ ಕುಟುಂಬ’. ಭಾರತೀಯ ಸಂಸ್ಕೃತಿಯ ಮೂಲವೇ ಇದು. ಮಣ್ಣಿನ ಸಂಸ್ಕೃತಿ, ಅದರ ಸೊಗಡನ್ನೇ ತಮ್ಮ ಪಾತ್ರಗಳ ಮೂಲಕ ಚಿತ್ರಿಸಿದ ಸಾಯಿಸುತೆ ಅವರು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘವಾದುದು. ಹೆಂಗಳೆಯರ ಮನಸೂರೆಗೊಳ್ಳುವ ಕಾದಂಬರಿಗಳ ಮೂಲಕ ಮನೆಮಾತಾದ ಇವರ ಕಾದಂಬರಿಗಳು ಚಲನಚಿತ್ರವಾಗುವ ಮೂಲಕ ಎಲ್ಲರನ್ನೂ ಅಕರ್ಷಿಸಿದವು. ಅಪಾರ ವೈವಿಧ್ಯತೆಗಳನ್ನೂ, ಸಾಧ್ಯತೆಗಳನ್ನೂ ಹೊಂದಿರುವ ಮಧ್ಯಮವರ್ಗದ ಜನರ ನೋವು, ನಲಿವು, ಆತಂಕ, ಭಯ, ಮಾನವೀಯತೆಗಳ ಚಿತ್ರಣವನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದಾಗಿದೆ.

ಇಲ್ಲಿ ಕಾದಂಬರಿಯ ಶೀರ್ಷಿಕೆಯೇ ಮನಸೆಳೆಯುವಂತಿದೆ. ವ್ಯಕ್ತಿಯ ಬದುಕಿನಲ್ಲಿ ಹೆತ್ತವರ ಪಾತ್ರ, ಅವರ ಮಮತೆಯ ಅನಿವಾರ್ಯತೆ, ಕುಟುಂಬಗಳ ನಡುವಿನ ಆಪ್ತತೆಗಳನ್ನು ಕಾದಂಬರಿಯು ಚಿತ್ರಿಸುತ್ತದೆ. ಕಾದಂಬರಿಯ ಪ್ರಮುಖ ಪಾತ್ರಗಳಾದ ದಿನಕರ ಮತ್ತು ಅಂಕಿತಾ ಮೂಲಕ ಕುಟುಂಬದ ಪ್ರಾಮುಖ್ಯತೆಯ ಬಗೆಗಿನ ವಿವರಗಳು ಮೆಲ್ಲನೆ ಬಿಚ್ಚುತ್ತಾ ಹೋಗುತ್ತವೆ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡು ಚಿಕ್ಕಮ್ಮನ ಮನೆಯಲ್ಲಿ ಬೆಳೆದ ಸುರೇಶ್‍ಗೆ ಆರ್ಥಿಕವಾಗಿ ಅಂಥ ಪರದಾಟವೇನಿಲ್ಲದಿದ್ದರೂ ಬಾಲ್ಯವು ಅವರ ಪಾಲಿಗೆ ಸುಖಕರವಾಗಿರಲಿಲ್ಲ. ಸಿಗಬೇಕಾದ ವಯಸ್ಸಿನಲ್ಲಿ ಪ್ರೀತಿಯೇ ಅವರಿಗೆ ಸಿಕ್ಕಿರಲಿಲ್ಲ. ಇಂಥ ಸುರೇಶ್-ಚಿತ್ರಾ ದಂಪತಿಗಳು ತಮಗೆ ಮಕ್ಕಳಿಲ್ಲದಿದ್ದರೂ ಅಂಕಿತಾಳೇ ತಮ್ಮ ಮಗಳೆಂಬಂತೆ ಬೆಳೆಸುತ್ತಿದ್ದರು. ಆದರೆ ಅವರ ತಂಗಿ ಅಂಕಿತಾ ಹಾಗಲ್ಲ. ಅವಳಿಗೆ ಪ್ರತಿಯೊಂದಕ್ಕೂ ಪ್ರೈವಸಿ ಬೇಕು; ಅವಳು ಪ್ರತ್ಯೇಕವಾದ ಸ್ವತಂತ್ರ ಬದುಕನ್ನು ಇಷ್ಟಪಡುವವಳು. ಯಾರ ಅಂಕೆಯಲ್ಲಿಯೂ ಇರಬೇಕೆನ್ನುವ ಮನೋಭಾವವೇ ಅವಳದಲ್ಲ. ಒಟ್ಟಿನಲ್ಲಿ ಆಕೆಗೆ ಸಂಬಂಧದ ನಿಜವಾದ ರುಚಿ ಅರಿತಿಲ್ಲವೆಂದೇ ಹೇಳಬಹುದು.

ದಿನಕರನನ್ನು ಪ್ರೀತಿಸಿ ಮದುವೆಯಾಗುವ ಅಂಕಿತಾ ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾದ ಭಾವನೆಯನ್ನೇ ಹೊಂದಿರುತ್ತಾಳೆ. `ನಿನ್ನ ಸಂಬಂಧಿಕರು ನನಗೆ ಬೇಡ’ ಎಂದು ಗಂಡನಲ್ಲಿ ಹೇಳುವ ಅವಳ ಸುಖ, ಸಂತೋಷ, ತನ್ನತನದ ಕಲ್ಪನೆಗಳಲ್ಲಿ ಭಾರತೀಯ ಮನೋಭಾವಕ್ಕೆ ವಿರುದ್ಧವಾದ ಭಾವನೆಯನ್ನು ಗುರುತಿಸಬಹುದು.

ಅಂಕಿತಾ ಕೇವಲ ತನ್ನ ಬಗ್ಗೆ ಮಾತ್ರ ಪಾಸಿಟಿವ್ ಆಗಿ ಯೋಚಿಸಬಲ್ಲಳು. ಅವಳಿಗೆ ಒಟ್ಟಿಗೆ ಕೂತು ಉಣ್ಣಬೇಕು ಎನ್ನುವ ಸೆಂಟಿಮೆಂಟೇ ಇಲ್ಲದೆ ಚೈನೀಸ್ ರೆಸ್ಟೊರೆಂಟಿನಿಂದ ತನಗೆ ಬೇಕಾದುದನ್ನು ತರಿಸಿಕೊಂಡು ಒಬ್ಬಳೇ ತಿನ್ನುವ ಚಿತ್ರಣವನ್ನು ಕಾಣಬಹುದು. ಹಾಗೆಂದು ಅವಳೆಂದೂ ದೊಡ್ಡ ಗೆಳೆಯ, ಗೆಳತಿಯರ ಹಿಂಡನ್ನು ಕಟ್ಟಿಕೊಂಡು ಅಲೆದಾಡುವ ಜಾಯಮಾನಕ್ಕೆ ಸೇರಿದವಳಲ್ಲ; ಒಂಟಿಯಾಗಿ ಇರುವುದನ್ನೇ ಆಕೆಯು ಇಷ್ಟಪಡುತ್ತಿದ್ದಳು. ಒಟ್ಟಿನಲ್ಲಿ ಅವಳ ಜೀವನದಲ್ಲಿ ಅವಳು ಮಾತ್ರ ಇಂಪಾರ್ಟೆಂಟ್. ಅವಳು ಬಯಸುವುದು ಸ್ವಾತಂತ್ರ್ಯವನ್ನು. ಅವಳ ಇಷ್ಟದ ರೀತಿಯ ಬದುಕನ್ನು. ಅವಳಿಗೆ ಇನ್ನೊಬ್ಬರ ಕಿರಿಕಿರಿ ಬೇಡ. ಅವಳ ಜೀವನದ ರೀತಿ, ಶೈಲಿಗಳೆಲ್ಲ ಕೇವಲ ಅವಳದಾಗಿಯೇ ಇರಬೇಕೆಂಬ ಮನೋಭಾವ ಅವಳದು. ಅವಳಾಗಿಯೇ ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಚ್ಛಿಸದ ಆಕೆ ಹಣ, ಸುಖ ಹೀಗೆ ಯಾವುದನ್ನೂ ಇನ್ನೊಬ್ಬರಿಗೆ ಹಂಚಲು ತಯಾರಿರುವುದಿಲ್ಲ. ಒಂದು ರೀತಿಯಲ್ಲಿ ಸ್ವಪ್ರೇಮ, ಸ್ವಹಿತ ಮಾತ್ರ ಬಯಸುವ ವ್ಯಕ್ತಿತ್ವ ಅವಳದು.

ಅಂಕಿತಾಳ ಸ್ವಭಾವವನ್ನು ಗಮನಿಸಿದಾಗ ಬಾಲ್ಯದಿಂದಲೂ ಆಕೆಯು ಯಾರನ್ನೂ, ಇಷ್ಟಪಡದಿರುವುದನ್ನೂ, ತನ್ನ ವಸ್ತುಗಳನ್ನು ಯಾರಿಗೂ ಮುಟ್ಟಲೂ ಬಿಡದೆ ಒಬ್ಬಳೇ ಕುಳಿತಿರುತ್ತಿದ್ದುದನ್ನೂ ಗಮನಿಸಬಹುದಾಗಿದೆ. ಮಧ್ಯಮ ವರ್ಗದ ಜೀವನವನ್ನು ಕಚಡಾ ಎಂದು ಭಾವಿಸುವ ಅವಳು ಹಣ, ಫ್ಲಾಟ್, ಲಕ್ಷುರಿ ಲೈಫ್‍ಗಾಗಿ ಹಣ ಸಂಪಾದನೆಯೊಂದೇ ತನ್ನ ಗುರಿಯೆಂದು ಭಾವಿಸುತ್ತಾಳೆ.

ಅವಳ ಮಾತುಗಳನ್ನು ಗಮನಿಸಿದರೆ ಅಲ್ಲೂ ಕೇವಲ ತನ್ನ ಇಷ್ಟದ ಸುಖಮಯ ಬದುಕಿನ ಬಗ್ಗೆ ಹೇಳುತ್ತಿದ್ದಳೇ ವಿನಾ ಬೇರೆ ವಿಷಯಗಳ ಬಗ್ಗೆ ಎಂದಿಗೂ ಮಾತನಾಡುತ್ತಿರಲಿಲ್ಲ. ಸಂಗೀತ, ಸಾಹಿತ್ಯ, ಕಲೆ ಮುಂತಾದ ವಿಚಾರಗಳು ಅವಳಿಗೆ ಅಪರಿಚಿತವೆಂದೇ ಹೇಳಬಹುದು. ರಾಜಕೀಯ ಸೇರದ ಅವಳಿಗೆ ದೇಶದ ಬಗ್ಗೆ ಕಕ್ಕುಲತೆಯೇ ಇಲ್ಲ. ಒಟ್ಟಿನಲ್ಲಿ ವೈಯಕ್ತಿಕ ಯೋಚನೆಯನ್ನು ಬಿಟ್ಟು ಅತ್ತಿತ್ತ ಸರಿಯಳು.

ಅವಳ ಬದುಕು, ಅವಳ ಸುಖ-ಸಂತೋಷಕ್ಕಷ್ಟೇ ಪ್ರಾಮುಖ್ಯತೆಯನ್ನು ನೀಡುವ ಆಕೆ ಬೇರೆಯವರ ಬಗ್ಗೆ ಸಮಯ ಹೊಂದಲು ಇಷ್ಟಪಡುವುದಿಲ್ಲ. ಹೀಗಿರುವ ಅಂಕಿತಾ ಮೊದಲಿಗೆ ಸಂಬಂಧಗಳು ಬೇಡ ಎಂದು ದಿನಕರನ ಎಲ್ಲಾ ಸಂಬಂಧಿಗಳನ್ನೂ ದೂರವಿಟ್ಟು, ನಂತರ ಅಣ್ಣ-ಅತ್ತಿಗೆಯಿಂದಲೂ ದೂರವಾಗುತ್ತಾಳೆ. ಮಾತ್ರವಲ್ಲ; ತನ್ನ ಕೈಹಿಡಿದ ಗಂಡನನ್ನೇ ಹೊರದಬ್ಬುವುದು ಸಂಬಂಧಗಳೇ ಬೇಡದ ಏಕಾಂಗಿ ಬದುಕಿನ ಪ್ರೀತಿಯನ್ನು ಚಿತ್ರಿಸುತ್ತದೆ.

ಆದರೆ ಇದೆಲ್ಲದಕ್ಕಿಂತ ಭಿನ್ನವಾದ ವ್ಯಕ್ತಿತ್ವ ದಿನಕರನದು. ಕೂಡುಕುಟುಂಬದಲ್ಲಿ ಅಣ್ಣ-ಅತ್ತಿಗೆಯರ ಪ್ರೀತಿಯೊಂದಿಗೆ ಬೆಳೆದ ಆತ ಸಾಂಗತ್ಯದಲ್ಲಿ ಸ್ನೇಹವನ್ನು ಬಯಸಿದ್ದ. ಆತನಿಗೆ ಸಂಬಂಧಗಳಲ್ಲಿ ಪ್ರಾಮಾಣಿಕತೆ ಬೇಕಿತ್ತು. ಹೆಂಡತಿಯನ್ನು ಗುಲಾಮಳಂತೆ ಕಾಣುವ ಮನೋಭಾವ ಆತನದಲ್ಲ. ಅವಳ ಇಷ್ಟಕ್ಕೆ ಅನುಗುಣವಾಗಿ ಗೌರವಿಸಲು ಬಯಸುವ ಆತ ಪತ್ನಿ ಗೌರಮ್ಮನಂತಿರಬೇಕೆಂದೂ ಬಯಸುವುದಿಲ್ಲ.

ಇಲ್ಲಿ ಅಂಕಿತಾಳದು ಒಂದು ಬಗೆಯ ವಿಚಿತ್ರ ಸ್ವಭಾವ. ಗಂಡನಲ್ಲಿ ತನ್ನ ಸಿ. ಇ. ಓ ಸಿಗರೇಟು ಸೇದುವುದನ್ನು ಕಂಡಾಗ ಬಹಳ ಇಷ್ಟವಾಯಿತೆಂದು ದಿನಕರ ಬೇಡವೆಂದರೂ ಕೇಳದೆ ಆತನಿಗೆ ಸಿಗರೇಟು ಸೇದಿಸಿ ಆ ವಾಸನೆಯಿಂದೊಡಗೂಡಿದ ಪುರುಷ ಸ್ಪರ್ಶದಲ್ಲಿ ಇನ್ನಿಲ್ಲದಂತೆ ಸುಖಿಸುತ್ತಾಳೆ.

ಹೀಗೆ ಪ್ರಮುಖವಾಗಿ ದಿನಕರ ಹಾಗೂ ಅಂಕಿತಾಳ ಮೂಲಕ ಅವರೊಡನೆ ಸೇರಿಕೊಳ್ಳುವ ಕುಟುಂಬದ ಇತರ ಸದಸ್ಯರ ಪಾತ್ರಗಳ ಮೂಲಕ ಕುಟುಂಬ ಎಂದರೇನು ಎಂಬುದನ್ನೂ, ಕುಟುಂಬ ಎಂದರೆ ಕೇವಲ ತಾನು ತನ್ನದು ಎಂಬುದಲ್ಲ; ತಮ್ಮದು ಎಂಬ ಭಾವನೆಯಿಂದೊಡಗೂಡಿದುದು ಎಂಬುದನ್ನು ಸಾಯಿಸುತೆ ಅವರು ಈ ಕಾದಂಬರಿಯಲ್ಲಿ ವಿಶ್ಲೇಷಿಸಿದ್ದಾರೆ.

ಅಣ್ಣ ರವಿಕರ ತಮ್ಮ ದಿನಕರನಿಗೆ ಹೇಳುವ `ಬದುಕಿಗೆ ಎಲ್ಲಾ ಬೇಕು. ಬರೀ ಕೈ ಹಿಡಿದ ಸಂಗಾತಿಯೇ ಎಲ್ಲವನ್ನೂ ತುಂಬಿಕೊಡುವುದಿಲ್ಲ. ಅಷ್ಟರಿಂದಲೇ ಪರಿಪೂರ್ಣ ಜೀವನ ಸಾಧ್ಯವಿಲ್ಲ. ಸಂಬಂಧಗಳು ಅನ್ನುವುದೇ ಒಂದು ಪರಿಪೂರ್ಣ ಅರ್ಥಪೂರ್ಣ ಪದ. ಬೇಡ ಎನ್ನುವುದು ತೀರಾ ಮೂರ್ಖತನ’ ಎಂಬ ಮಾತುಗಳಾಗಲೀ ವಕುಳಾ ಹೇಳುವ ‘ದಾಂಪತ್ಯದಲ್ಲಿ ಗಂಡ-ಹೆಂಡತಿ ಸೇರಿ ಹಚ್ಚಿದರೆ ಮಾತ್ರ ದೀಪದ ಬೆಳಕು ಹರಡುವುದು. ಬೇರೆ ಬೇರೆ ಪರಿಸರದಲ್ಲಿ ಬೆಳೆದವರಿಬ್ಬರು ಒಟ್ಟಿಗೆ ಬಾಳುವಾಗ ಸಾಕಷ್ಟು ತಾಳ್ಮೆಯ ಅಗತ್ಯವಿದೆ’ ಎನ್ನುವ ಮಾತುಗಳು ಕುಟುಂಬ, ದಾಂಪತ್ಯ, ಸಂಬಂಧದ ಅರ್ಥವಂತಿಕೆಯನ್ನು ಸಾರುತ್ತವೆ.

ಊಹೆಗೆ ಮೀರಿದ ಸಂಬಂಧವೇ ದಾಂಪತ್ಯ. ಅದಕ್ಕೆ ಬೇಕಾಗಿರುವುದು ನಿಯಮ ನಿಬಂಧನೆಗಳಲ್ಲ; ಪ್ರೀತಿ, ನಂಬಿಕೆಯ ತಳಪಾಯ. ಹೀಗೆ ಬದುಕಿನ ಮುಖಗಳನ್ನೂ, ಬುದ್ಧಿಯೊಂದಿಗೆ ಹೃದಯವನ್ನೂ ಹೊಂದಬೇಕಾದ ಅನಿವಾರ್ಯತೆಗಳನ್ನೂ ಕಾದಂಬರಿಯು ವಿಷದೀಕರಿಸುತ್ತದೆ. ಅದರಲ್ಲೂ ಕಾದಂಬರಿಯಲ್ಲಿ ಪುಟ್ಟ ಮಗುವಿನ ಮೂಲಕ ಸಾರುವ ತತ್ತ್ವ ಇಂದಿನ `ನಾನು’ ಎಂಬ ಅವಸರದ ಬದುಕಿನಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನೂ, `ಕುಟುಂಬ’ ಎಂದರೆ ಏನು ಎಂಬುದನ್ನು ಅರಿತು ಬಾಳಬೇಕೆಂಬುದನ್ನು ಸಾರುತ್ತದೆ.

ಹೀಗೆ `ಇವನು ನನ್ನವನು, ಇವನು ಬೇರೆಯವನು’ ಎಂದೆಣಿಸದೆ ಉದಾರ ಮನಸ್ಸುಳ್ಳವನಾಗಿ, ಈ ಭೂಮಿಯನ್ನೇ ಒಂದು ಕುಟುಂಬವೆಂದು ಭಾವಿಸಿ, ಎಲ್ಲರೂ ಒಂದೇ ಎಂಬುದಾಗಿ ತಿಳಿಯಬೇಕೆಂಬುದನ್ನು ಸಾರುವುದೇ ಈ ಕಾದಂಬರಿಯ ಉದ್ದೇಶವಾಗಿದೆ. `ನಾನು ನನ್ನದು’ ಎಂಬುದನ್ನು ಬಿಟ್ಟು `ನಾವು ನಮ್ಮದು’ ಎಂಬ ಭಾವನೆಯನ್ನು ಹೊಂದುವ ಮೂಲಕ ಮೊದಲಿಗೆ ನಮ್ಮ ಮನೆಯೊಳಗೆ ಒಂದೇ ಎಂಬ ಭಾವ ಮೊಳೆತಾಗಲೇ ಜಗವೆಲ್ಲ ಒಂದು ಎಂಬ ಭಾವ ಮೊಳೆಯಲು ಸಾಧ್ಯ. `ಎಲ್ಲರೂ ಒಂದೇ ಎಂಬ ಭಾವವೇ ವಸುಧೈವ ಕುಟುಂಬ’. ಇದುವೇ ಇಂದಿನ ಅನಿವಾರ್ಯತೆಯೂ ಕೂಡಾ ಆಗಿದೆ ಎಂಬುದರ ಸಾರ ಇಲ್ಲಿದೆ. ಈ ಕಾರಣಕ್ಕಾಗಿ ಸಾಯಿಸುತೆಯವರ ಎಲ್ಲಾ ಕಾದಂಬರಿಗಳ ಪೈಕಿ `ವಸುಧೈವ ಕುಟುಂಬ’ ಕಾದಂಬರಿಯು ಕೇವಲ ಸಾಮಾಜಿಕ ಕಾದಂಬರಿ, ಓದುಗ ವರ್ಗದ ಮನಸೂರೆಗೊಳ್ಳುವ ಕಾದಂಬರಿ ಎಂಬುದಕ್ಕಿಂತಲೂ ಮಿಗಿಲಾಗಿ ಅದು ಸಾರುವ ತತ್ತ್ವ ಸಂದೇಶಗಳ ಕಾರಣಕ್ಕಾಗಿ ಅತ್ಯಂತ ಆಪ್ತವೆನಿಸುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಸಾಯಿಸುತೆ ಅವರ ೧೨೫ನೇ ಕಾದಂಬರಿ- `ವಸುಧೈವ ಕುಟುಂಬ’”

  1. ನಾ.ದಾಮೋದರ ಶೆಟ್ಟಿ

    ಜನಪ್ರಿಯ ಕಾದಂಬರಿಯ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದವರು

  2. ಬದುಕಿಗೆ ಎಲ್ಲಾ ಬೇಕು. ಬರೀ ಕೈ ಹಿಡಿದ ಸಂಗಾತಿಯೇ ಎಲ್ಲವನ್ನೂ ತುಂಬಿಕೊಡುವುದಿಲ್ಲ. ಅಷ್ಟರಿಂದಲೇ ಪರಿಪೂರ್ಣ ಜೀವನ ಸಾಧ್ಯವಿಲ್ಲ. ಸಂಬಂಧಗಳು ಅನ್ನುವುದೇ ಒಂದು ಪರಿಪೂರ್ಣ ಅರ್ಥಪೂರ್ಣ ಪದ. ಬೇಡ ಎನ್ನುವುದು ತೀರಾ ಮೂರ್ಖತನ’

    ಊಹೆಗೆ ಮೀರಿದ ಸಂಬಂಧವೇ ದಾಂಪತ್ಯ. ಅದಕ್ಕೆ ಬೇಕಾಗಿರುವುದು ನಿಯಮ ನಿಬಂಧನೆಗಳಲ್ಲ; ಪ್ರೀತಿ, ನಂಬಿಕೆಯ ತಳಪಾಯ.
    – ಹೀಗೆ ಕಾದಂಬರಿಯನ್ನು ಪರಿಚಯಿಸಿರುವ ರೀತಿ ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter