(ವಿಶ್ವಧ್ವನಿ ಬಳಗದ ಲೇಖಕಿ ಕಲಾ ಭಾಗ್ವತ್ ಹಾಗೂ ಪಾರ್ವತಿ ಪೂಜಾರಿ ಅವರಿಗೆ ಅಭಿನಂದನೆಗಳು)
ಮುಂಬೈ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ. rank ವಿಜೇತ ವಿದ್ಯಾರ್ಥಿಗಳಾದ ಕಲಾ ಭಾಗ್ವತ್ ಹಾಗೂ ಪಾರ್ವತಿ ಪೂಜಾರಿ ಅವರು ಮುಂಬೈ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ಎಂ.ಬಿ ಕುಕ್ಯಾನ್ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಈ ಸುವರ್ಣ ಪದಕವನ್ನು ಡಿಸೆಂಬರ್ 10 ರಂದು ನಡೆಯಲಿರುವ ಮುಂಬೈ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗಣ್ಯರು ಪ್ರದಾನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಪಾರ್ವತಿ ಸುಧಾಕರ್ ಪೂಜಾರಿ ಅವರು ಮೂಲತಃ ಕುಂದಾಪುರ ತಾಲೂಕಿನ ತೆಕ್ಕಟ್ಟೆಯವರು. ಪ್ರಾಥಮಿಕ ಶಿಕ್ಷಣವನ್ನು ಸೊರಬ ತಾಲೂಕಿನಲ್ಲಿ ಪೂರೈಸಿದ ಇವರು ಬೆಂಗಳೂರಿನ ಕಾಲೇಜಿನಲ್ಲಿ ಬಿ. ಎ. ಎಲ್. ಎಲ್.ಬಿ ಪದವಿಯನ್ನು ಪಡೆದಿದ್ದಾರೆ. ಮುಂಬಯಿಯ ಹಿರಿಯ ಯಕ್ಷಗಾನ ಕಲಾವಿದರಾದ ಕೊಲ್ಯಾರು ರಾಜು ಶೆಟ್ಟಿ ಅವರ ಬದುಕು ಬರಹದ ಬಗ್ಗೆ ಶೋಧ ಸಂಪ್ರಬಂಧವನ್ನು ಕನ್ನಡ ವಿಭಾಗಕ್ಕೆ ಸಾದರಪಡಿಸಿದ್ದು ಈಗ ಇದು ಕೃತಿಯಾಗಿ ಪ್ರಕಟಣೆಗೊಂಡಿದೆ .
ಕಲಾ ಚಿದಾನಂದ ಭಾಗ್ವತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದವರು. ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಪಡೆದ ಇವರು ಅಪ್ಪಟ ಸಾಹಿತ್ಯಾಭಿಮಾನಿ. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಎಂ.ಎ ಅಧ್ಯಯನದ ಸಮಯದಲ್ಲಿ ನಾಡಿನ ಹೆಸರಾಂತ ವೈದ್ಯ ಡಾ. ಬಿ.ಎಂ ಹೆಗ್ಡೆಯವರ ಜೀವನ ಸಾಧನೆಯ ಕುರಿತು ಇವರು ರಚಿಸಿದ ಶೋಧ ಸಂಪ್ರಬಂಧ ʻವೈದ್ಯ ಭೂಷಣ ಡಾ. ಬಿ.ಎಂ.ಹೆಗ್ಡೆ’ಈಗಾಗಲೇ ಕೃತಿರೂಪದಲ್ಲಿ ಬೆಳಕು ಕಂಡಿದೆ. ʻಜೀವಸ್ವರ; ಜಯಂತ ಕಾಯ್ಕಿಣಿ ಪ್ರಬಂಧ ಲೋಕ’ಎಂಬ ಇನ್ನೊಂದು ಶೋಧ ಸಂಪ್ರಬಂಧ ಪ್ರಕಟಣೆಗೆ ಸಿದ್ಧವಾಗಿದೆ. ಇವರು ಬರೆದ ಕತೆ, ಕವಿತೆ, ಪ್ರಬಂಧ, ಬಿಡಿ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ರಚನೆಗಳಿಗೆ ಬಹುಮಾನಗಳೂ ಲಭಿಸಿವೆ.
ಪಾರ್ವತಿ ಪೂಜಾರಿ ಹಾಗೂ ಕಲಾ ಭಾಗ್ವತ್ ಅವರ ಸಾಧನೆಗೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರೂ ಆದ ಡಾ.ಜಿ.ಎನ್.ಉಪಾಧ್ಯ ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮ ಸುಧಾಕರ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.
2 thoughts on “ಮುಂಬೈ ವಿ.ವಿ. ಕನ್ನಡ ಎಂ.ಎ. – ಚಿನ್ನದ ಪದಕ”
ಅಭಿನಂದನೆಗಳು ಇಬ್ಬರಿಗೂ
ಗೋಪಾಲ ತ್ರಾಸಿ ಅವರಿಗೆ ಧನ್ಯವಾದಗಳು 🙏