ಒಂದು ಮುಂಜಾನೆ
ವಾಕಿಂಗ್ ಹೋಗಿದ್ದಾಗ
ಹಚ್ಚನೆ ಹಬ್ಬಿ ನಿಂತ
ಮಾವಿನ ಮರದಲ್ಲಿ
ಕುಳಿತ ಗಿಳಿ
ಹಾಡದೇ
ಶುಭ ಹಾರೈಸಿತು….
—
ಗಿಳಿಯ ಮೌನದಲ್ಲಿ
ಶಬ್ದಗಳನ್ನು ಮೀರಿದ
ಶುಭಾಶಯವಿತ್ತು….
—
ಹಾಗೇ…
ನಿಮ್ಮನ್ನು, ನಿಮ್ಮ ಪ್ರೀತಿಯನ್ನು
ನೆನೆಯುತ್ತ….
ಒಂದುನಿಶ್ಯಬ್ದ
ಹಾರೈಕೆ ಇದು………..’ಗಿರಿ’
ಕತೆಗಾರ, ಅಂಕಣಗಾರ, ಪತ್ರಕರ್ತ, ಕನ್ನಡಪ್ರಭ ಪತ್ರಿಕೆಯ ಪುರವಣಿಗಳ ಸಂಪಾದಕ ಜೋಗಿಯವರು( ಎಚ್. ಗಿರೀಶ್ ರಾವ್, ಹತ್ವಾರ) ನನಗೆ ಕಳುಹಿಸಿದ್ದ ಹಳೆಯ ಒಂದು ದೀಪಾವಳಿ ಗ್ರೀಟಿಂಗ್ ಇದು. ಅವರು ದಶಕಗಳ ಹಿಂದೆ ಬರೆದ ಪತ್ರಗಳನ್ನು ಇರಿಸಿದ್ದ ಫೈಲ್ ನಲ್ಲಿ ಈ ಗ್ರೀಟಿಂಗ್ ಸಿಕ್ಕಿತು. ಆವಾಗ ಮೊಬಯಿಲ್ ಇಲ್ಲದ ದಿನಗಳು. ಜೋಗಿಯವರು ಆ ದಿನಗಳಲ್ಲಿ ಪತ್ರಗಳನ್ನು ನನಗೆ ಬರೆಯುತ್ತಿದ್ದರು. ದೀಪಾವಳಿಗೆ ಗ್ರೀಟಿಂಗ್ ಕಳುಹಿಸುತ್ತಿದ್ದರು. ಸುಮಾರು ಒಂದು ಡಜನ್ ನಷ್ಟು ಅವರ ಪತ್ರಗಳನ್ನು ಈಗಲೂ ತೆಗೆದಿರಿಸಿದ್ದೇನೆ.ಆ ಎಲ್ಲ ಪತ್ರಗಳನ್ನು ಮತ್ತೊಮ್ಮೆ ಎತ್ತಿಕೊಳ್ಳಲು ಕಾರಣ ಜೋಗಿಯವರಿಗೆ ಇತ್ತೀಚೆಗೆ ದೊರೆತ ಪ್ರಶಸ್ತಿಯ ಸಂದರ್ಭ.
ಕರ್ನಾಟಕದ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2020 ನೇ ಸಾಲಿನ ‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಜೋಗಿಯವರ ‘108- ನಾಲ್ಕು ದಶಕದ ಕಥೆಗಳು’ ಕೃತಿಯನ್ನು ಆಯ್ಕೆ ಮಾಡಿದೆ. ಈ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಲೇ ಜೋಗಿಯವರ ಕುರಿತು ನನಗೂ ಎರಡು ಮಾತು ಸ್ನೇಹದ ನೆಲೆಯಲ್ಲಿ ಬರೆಯಲು ಸದವಕಾಶ ಸಿಕ್ಕಿತು ಅಂತ ತಿಳಿದಿದ್ದೇನೆ.
ಇದಕ್ಕಿಂತ ಮೊದಲು ವಡ್ಡರ್ಸೆ ರಘುರಾಮ ಶೆಟ್ಟಿ ಮಾಧ್ಯಮ ಪ್ರಶಸ್ತಿಯೂ 2018 ರಲ್ಲಿ ಜೋಗಿ ಅವರಿಗೆ ಬ್ರಹ್ಮಾವರದಲ್ಲಿ ದೊರೆತಿದೆ. ಜೋಗಿಯವರು ಪ್ರಶಸ್ತಿಗಳನ್ನು ಎಂದೂ ಮಾತನಾಡದವರು. ಆದರೆ ಯಾರಿಗಾದರೂ ಏನಾದರೂ ಪ್ರಶಸ್ತಿ ಸಿಕ್ಕರೆ ಅವರ ಬಗ್ಗೆ ಖುಷಿಯಿಂದ ಫೇಸ್ ಬುಕ್ ನಲ್ಲಿ ಬರೆಯುತ್ತಾರೆ.(ನನಗೂ ಪ್ರವಾಸ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಬಂದಾಗ ಫೇಸ್ ಬುಕ್ ನಲ್ಲಿ ಬರೆದಿದ್ದರು.)
ಬಳ್ಳಾರಿಯಲ್ಲಿ 33 ವರ್ಷಗಳ ಹಿಂದೆ ಕಥಾಕಮ್ಮಟದಲ್ಲಿ ನಮ್ಮ ಪ್ರಥಮ ಭೇಟಿ:
1988 ರ ಅಕ್ಟೋಬರ್ ನ ಒಂದು ದಿನ. “ಬಳ್ಳಾರಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಒಂದು ವಾರದ ಕಥಾ ಕಮ್ಮಟ ಜರಗಲಿದೆ. 27 ವರ್ಷದ ಕೆಳಗಿನವರು ಸಾಹಿತ್ಯದಲ್ಲಿ ,ಕತಾರಚನೆಯಲ್ಲಿ ಆಸಕ್ತಿ ಇರುವವರು ಅರ್ಜಿ ಹಾಕಬಹುದು” ಎಂದು ಮುಂಗಾರು ದಿನಪತ್ರಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯೊಂದು ನನ್ನ ಗಮನ ಸೆಳೆದಿತ್ತು.ಆವಾಗ ಮುಂಗಾರು ದೈನಿಕ ಮುಂಬಯಿಗೂ ಬರುತ್ತಿತ್ತು. ನಾನು ಸಂಜೆ ಕತ್ತಲಾದ ನಂತರ ಜೆರಿಮೆರಿ ಕಾಜುಪಾಡಾದ ಪೈಪ್ ಲೈನ್ ನಲ್ಲಿ ಅರ್ಧ ಗಂಟೆ ನಡೆದು ಸಾಕಿನಾಕದ ಪೇಪರ್ ಅಂಗಡಿಯೊಂದರಿಂದ ಪ್ರತೀದಿನ ಮುಂಗಾರು ದೈನಿಕ ತರುತ್ತಿದ್ದೆ. ನಾಲ್ಕಾಣೆ ಹೆಚ್ಚು ಕೊಡಬೇಕಿತ್ತು.ಕತಾ ಕಮ್ಮಟ ಅಂದಾಗ ಆ ಪ್ರಕಟಣೆ ಓದಿ ನನ್ನ ಕತಾ ದಾಖಲೆಗಳ ಜೊತೆ ಅರ್ಜಿ ಹಾಕಿದ್ದೆ ಬಂದರೆ ಬಂತು ಎಂದು. ಎಣಿಸಿದಂತೆಯೇ ಸಾಹಿತ್ಯ ಅಕಾಡೆಮಿಯಿಂದ ನಾನೂ ಮುಂಬಯಿ ಅಭ್ಯರ್ಥಿಯೆಂದು ಆಯ್ಕೆಯಾದ ಪತ್ರವೂ ಬಂದಿತು.ಕುಂವೀ , ರಾಜಶೇಖರ ನೀರಮಾನ್ವಿ, ಮಯೂರ ಸಂಪಾದಕರಾಗಿದ್ದ ಜಿ. ಎಸ್. ಸದಾಶಿವ, ವಿಮರ್ಷಕ ಡಾ.ಕೆ.ವಿ. ನಾರಾಯಣ … ಇವರೆಲ್ಲ ಕತಾ ಕಮ್ಮಟದ ನಿರ್ದೇಶಕರಾಗಿದ್ದರು. ಆಯ್ಕೆಯಾದ ಅಭ್ಯರ್ಥಿಗಳು ರಾಜಶೇಖರ ನೀರಮಾನ್ವಿ ಅವರಲ್ಲಿ ವಸತಿ ಮತ್ತಿತರ ಸೌಲಭ್ಯಕ್ಕಾಗಿ ವಿಚಾರಿಸಬಹುದಿತ್ತು.
ಬಹುಶ ಅದು ನನ್ನ ಪ್ರಥಮ ರೈಲು ಪಯಣ.ಮುಂಬಯಿಯಿಂದ ಗುಂಟಕಲ್ ನ ರೈಲ್ ಹತ್ತಿ ಅಲ್ಲಿಂದ ಬಳ್ಳಾರಿಗೆ ಬಸ್ಸಲ್ಲಿ ಹೋಗಿದ್ದೆ.
ಈ ಕಮ್ಮಟದಲ್ಲಿ ಮೊದಲ ದಿನವೇ ಪರಿಚಯ ಆದವರು ಎಚ್ ಗಿರೀಶ್ ರಾವ್ ಹತ್ವಾರ್.( ಬೆಂಗಳೂರಿನಲ್ಲಿರುವ ಈಗಿನ ಜೋಗಿ) ಅವರು ದಕ್ಷಿಣ ಕನ್ನಡದ ಪ್ರತಿನಿಧಿಯಾಗಿ ಬಂದಿದ್ದರು. ನಾನು ಮುಂಬಯಿಯಿಂದ ಬಂದಿದ್ದರೂ ಮಂಗಳೂರಿನವನೇ. ಹಾಗಾಗಿ ದ.ಕ. ಜಿಲ್ಲೆಯಿಂದ ಬಂದವರು ಎಂದಾಗ ಅವರ ಜೊತೆ ದೋಸ್ತಿಕತೆ ಸಹಜವಾಗಿಯೇ ಮುಂದುವರಿಯಿತು. ಮೊದಲ ದಿನ ಬೆಳಿಗ್ಗೆ ಹೆಸರು ನೋಂದಣಿ ಇತ್ಯಾದಿಗಳು. ನಾನು ಹಿಂದಿನ ದಿನವೇ ಬಂದು ಹೊಟೇಲಲ್ಲಿ ರೂಮ್ ಮಾಡಿದ್ದೆ.ಜೋಗಿ ಅವರು ಆಗತಾನೆ ಬಂದಿದ್ದರಷ್ಟೆ. ಇನ್ನೂ ರೂಮು ಮಾಡಿರಲಿಲ್ಲ. ಪರಿಚಯದ ನಂತರ ಸಂಜೆ ನಾನಿದ್ದ ಹೊಟೇಲ್ ಗೇ ಬಂದು ನಾವು ರೂಮ್ ಶೇರ್ ಮಾಡಿದ್ದೆವು.
ಕಥಾ ಕಮ್ಮಟದ ಆ ಒಂದು ವಾರದ ನಮ್ಮ ಸ್ನೇಹ ಇಷ್ಟು ಗಟ್ಟಿ ಆಯ್ತೆಂದರೆ ಈ 33 ವರ್ಷಗಳಿಂದಲೂ ಆ ಸ್ನೇಹ ಹಾಗೇ ಉಳಕೊಂಡಿದೆ. ಆ ಕಥಾಕಮ್ಮಟದಲ್ಲಿ ಇಂದಿನ ಖ್ಯಾತ ಕತೆಗಾರರಾದ ಅಮರೇಶ ನುಗಡೋಣಿ, ಶ್ರೀಧರ ಬಳಗಾರ…… ಇವರೆಲ್ಲ ಇತರ ಅಭ್ಯರ್ಥಿಗಳಾಗಿದ್ದವರು..
ಕಮ್ಮಟದಲ್ಲಿ ಜೋಗಿಯವರ ಪ್ರತಿಭೆ ಆಗಲೇ ಗಮನಿಸಿದ್ದೆ. ಕಮ್ಮಟದ ನಿರ್ದೇಶಕರು, ಉಪನ್ಯಾಸಕರು ಕನ್ನಡದಲ್ಲಿ ಹೇಳುತ್ತಿದ್ದುದರ ಸಾರಾಂಶವನ್ನು ಜೋಗಿಯವರು ಇಂಗ್ಲಿಷ್ ನಲ್ಲಿ ಬರೆದುಕೊಳ್ಳುತ್ತಿದ್ದರು.ಅಷ್ಟು ಪ್ರತಿಭಾವಂತರಿದ್ದರು ಜೋಗಿ.
ಕಮ್ಮಟದ ಒಂದು ವಾರದ ನಂತರ ಕೊನೆಯ ದಿನ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ.ಆಗಿನ ಸಚಿವ ಎಂ ಪಿ ಪ್ರಕಾಶ್ ಅವರಿಂದ ಸ್ವೀಕಾರ .ವಿಶೇಷ ಅತಿಥಿಯಾಗಿದ್ದವರು ಚಿತ್ರನಟ ಶಂಕರ ನಾಗ್.ಇಂತಹ ವೇದಿಕೆಯ ಫೋಟೋ ಬದುಕಿನ ಬಹು ದೊಡ್ಡ ಕ್ಷಣಗಳು. ನನ್ನಲ್ಲಿ ಕ್ಯಾಮರಾ ಇರಲಿಲ್ಲ. ನನ್ನ ನಿರಾಶೆಯನ್ನು ಹೋಗಲಾಡಿಸಿದವರು ಜೋಗಿ. ಅಲ್ಲಿ ಕೆಲವರ ಬಳಿ ರೀಲ್ ಕ್ಯಾಮರಾ ಇತ್ತು. ನಾನು ಎಂ ಪಿ ಪ್ರಕಾಶ್ ಅವರಿಂದ ಪ್ರಮಾಣಪತ್ರ ಸ್ವೀಕರಿಸಿರುವುದರ ಫೋಟೋ ಜೋಗಿಯವರು ತೆಗೆದರು.ಊರಿಗೆ ಹೋದ ನಂತರ ಆ ಫೋಟೋ ಕಳುಹಿಸಿದ್ದರು. ಇಂದಿಗೂ ಆ ಅಪೂರ್ವ ದಾಖಲೆಗಾಗಿ ನಾನು ಜೋಗಿಯವರಿಗೆ ಎಂದಿಗೂ ಕೃತಜ್ಞನಾಗಿರುವೆ. ಅಲ್ಲಿಂದ ನಮ್ಮೊಳಗೆ ಪತ್ರವ್ಯವಹಾರ ಆರಂಭವಾಯ್ತು. ಜೋಗಿಯವರದು ಆವಾಗ ಊರಿನ ವಿಳಾಸ ಇತ್ತು.
ಅನಂತರ ಒಂದು ದಿನ ಜೋಗಿಯವರು ಬೆಂಗಳೂರಿನಿಂದ ಪತ್ರ ಬರೆದರು. ಬೆಂಗಳೂರಲ್ಲಿ ಕೆಲಸದ ಹುಡುಕಾಟ.
( ಮುಂಬಯಿಗೆ ಅವರನ್ನು ಕರೆಸಿಕೊಳ್ಳುವ ಆಸೆಯಿತ್ತು.ಆದರೆ ಆವಾಗ ನಾನೇ ಅತಂತ್ರ ಸ್ಥಿತಿಯಲ್ಲಿದ್ದೆ.ಇನ್ನು ಅವರನ್ನು ಕರೆಸಿ ಅವರೂ ಕಷ್ಟ ಪಡೋದು ಬೇಡ ಎಂದು ಮುಂದುವರಿದಿರಲಿಲ್ಲ.)
ತೊಂಭತ್ತರ ದಶಕದ ಆರಂಭ.
ಕರ್ನಾಟಕ ಪತ್ರಿಕಾ ಮಾಧ್ಯಮ ಅಕಾಡೆಮಿ 144 ನೇ ಪತ್ರಿಕೋದ್ಯಮ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಲ್ಲಿ ಜರಗಿದ ಸಮಾರಂಭದಲ್ಲಿ 25 ವರ್ಷಗಳ ಮೇಲಿನ ಪತ್ರಿಕೆಗಳಿಗೆ ಗೌರವ ಸನ್ಮಾನ ಹಮ್ಮಿಕೊಂಡಿತ್ತು.ಮುಂಬಯಿಯಿಂದ ತಾಯಿನುಡಿ ಮತ್ತು ಮೊಗವೀರ ಎರಡು ಪತ್ರಿಕೆಗಳು ಆಯ್ಕೆ ಆಗಿದ್ದವು.ಮೊಗವೀರದ ಪರವಾಗಿ ಜಿ.ಕೆ ರಮೇಶ್ ಹೋದರೆ,ತಾಯಿನುಡಿ ಸಂಪಾದಕರಾದ ಡಿ.ಕೆ.ಮೆಂಡನ್ ಅವರು ಗೌರವ ಸ್ವೀಕರಿಸಲು ತಾಯಿನುಡಿ ಪತ್ರಿಕೆಯ ಪರವಾಗಿ ನನ್ನನ್ನು ಕಳುಹಿಸಿದ್ದರು.ನನಗೋ ಬೆಂಗಳೂರು ಮೊದಲ ಬಾರಿ ನೋಡುವ ಅವಕಾಶ.ಮುಂಬಯಿಯಿಂದ ಬೆಂಗಳೂರಿನ ಬಸ್ಸು ಹತ್ತಿದ್ದೆ. ಕಾರ್ಯಕ್ರಮದ ದಿನ ಆಯೋಜಕರೇ ವಸತಿ ವ್ಯವಸ್ಥೆ ಮಾಡಿದ್ದರು.ಮರುದಿನ ನಾನು ಅಲ್ಲಿಂದ ಹೋದದ್ದು ಜೋಗಿಯವರ ರೂಮಿಗೆ.
ತೊಂಭತ್ತರ ದಶಕದಲ್ಲಿ ಜೋಗಿಯವರು ಬೆಂಗಳೂರಲ್ಲಿ (ಬಾಡಿಗೆ ರೂಮು ಮಾಡಿಕೊಂಡಿರುವ ತನಕ) ನಾನು ಬೆಂಗಳೂರಿಗೆ ಅಪರೂಪಕ್ಕೆ ಹೋದರೆ ಅವರ ರೂಮಲ್ಲೇ ಉಳಕೊಂಡದ್ದೂ ಇದೆ.
ನಾಗತಿಹಳ್ಳಿ ಚಂದ್ರಶೇಖರ, ಕೆ.ಸತ್ಯ ನಾರಾಯಣ ,ಶೂದ್ರ ಶ್ರೀನಿವಾಸ …ಮುಂತಾದ ಬೆಂಗಳೂರಿನ ಈ ಗಣ್ಯ ಸಾಹಿತಿಗಳೆಲ್ಲ ಆಗಲೇ ನನಗೆ ಪರಿಚಿತರಿದ್ದರು ಪತ್ರಗಳ ಮೂಲಕ. ನನಗೆ ಸಾಹಿತಿಗಳ ಜೊತೆ ಪತ್ರವ್ಯವಹಾರ ಆ ದಿನಗಳಲ್ಲಿ ನನ್ನ ಬದುಕಿನ ಪ್ರಧಾನ ಭಾಗವಾಗಿತ್ತು. ಆದರೆ ಇವರನ್ನೆಲ್ಲ ಬೆಂಗಳೂರಲ್ಲಿ ಕಾಣಬೇಕೆಂದರೆ ನನಗೆ ಬೆಂಗಳೂರು ಸುತ್ತಾಡಲು ದಾರಿ ಹೆಚ್ಚು ತಿಳಿದಿರಲಿಲ್ಲ. ಹಾಗೆ ಜೋಗಿಯವರು ಸಂಜೆ ಆಫೀಸ್ ನಿಂದ ಬಂದ ನಂತರ ಅವರ ಜೊತೆಗೇ ನಾನು ಈ ಸಾಹಿತಿಗಳ ಮನೆಗಳಿಗೆ ಭೇಟಿಕೊಟ್ಟದ್ದು ಇನ್ನೂ ನೆನಪು ಹಸಿರಾಗಿದೆ. ಜೋಗಿಯವರು ರೂಮಿನ ಕೀ ನನಗೆ ಕೊಟ್ಟು ಹೋಗುತ್ತಿದ್ದರು. ಅಲ್ಲೇ ಎಲ್ಲಾದರೂ ಸುತ್ತಾಡಿ ಮತ್ತೆ ರೂಮಿಗೆ ಬಂದು ಸಂಜೆಯಾಗುವುದನ್ನೇ ಕಾಯುತ್ತಿದ್ದೆ.ಜೋಗಿ ಬಂದ ನಂತರ ನಮ್ಮ ಬೆಂಗಳೂರು ಸುತ್ತಾಟ ಶುರುವಾಗುತ್ತಿತ್ತು.
ಮರೆಯಲಾರದ ವರದಿ:
ಅದು 1990 ರ ವರ್ಷ. ಪ್ರತೀ ತಿಂಗಳು ಕೊನೆಯ ಶನಿವಾರ ಶೂದ್ರ ಶ್ರೀನಿವಾಸ ಮತ್ತು ಡಾ.ರಾಮಚಂದ್ರ ಶರ್ಮಾ ಜೊತೆಗೂಡಿ ನಡೆಸುತ್ತಿದ್ದ ‘ಅನ್ಯೋನ್ಯ ಮತ್ತು ಶೂದ್ರ’ ಎಂಬ ಹೆಸರಿನ ಸಾಹಿತ್ಯ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಗೃಹದಲ್ಲಿ ಇರಿಸುತ್ತಿದ್ದರು. ಅದು ಜನವರಿ 1990 ರ ಕಾರ್ಯಕ್ರಮ.ಶೂದ್ರ ಶ್ರೀನಿವಾಸ ಅವರು ನಾನು ಬೆಂಗಳೂರಲ್ಲಿದ್ದರಿಂದ ಬರಲು ಹೇಳಿದ್ದರು. ನಾನೂ ಜೋಗಿಯವರೂ ಜೊತೆಯಲ್ಲಿ ಹೋಗಿದ್ದೆವು. ಎಚ್ ಎಸ್ ರಾಘವೇಂದ್ರ ರಾವ್ ಮತ್ತು ಡಿ ಆರ್ ನಾಗರಾಜ್ ‘ಸಾಹಿತ್ಯದ ಉತ್ಕೃಷ್ಟತೆಯ’ ಬಗ್ಗೆ ಮಾತಾಡಿದ್ದರು. ಅಲ್ಲಿ ದೊಡ್ಡ ದೊಡ್ಡ ವಿಮರ್ಶಕರನ್ನು ಮೊದಲ ಬಾರಿಗೆ ನಾವು ಕಂಡೆವು.ಚರ್ಚೆ ಮುಗಿಯುವ ಹಂತದಲ್ಲಿ ಡಾ.ಹಾ.ಮಾ.ನಾಯಕರ ‘ಸಂಪ್ರತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದಕ್ಕೆ ಡಾ.ಡಿ ಆರ್.ನಾಗರಾಜ್ ಸಿಡಿದೆದ್ದಿದ್ದರು. ಸಾಹಿತ್ಯದಲ್ಲಿ ಅಂಕಣ ಬರಹ ಎಂಬ ಪ್ರಕಾರವೇ ಇಲ್ಲ.ಹಾಗಾಗಿ ಸಾಹಿತ್ಯದ ಹೆಸರಲ್ಲಿ ಸಂಪ್ರತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಖಂಡನೀಯ .ಕೊಡುವುದಿದ್ರೆ ಶ್ರೀಕೃಷ್ಣ ಆಲನಹಳ್ಳಿ ಅವರಿಗೆ ಮರಣೋತ್ತರ ಕೊಡಬೇಕಿತ್ತು…..ಎಂದಿದ್ದರು. ಇಲ್ಲಿ ಅಂಕಣ ಸಾಹಿತ್ಯ ಎಂಬ ಪ್ರಕಾರವೇ ಇಲ್ಲ ಎಂದು ವಾದ ಮಾಡಲಾಗಿತ್ತು. ಡಿ.ಆರ್. ಕೊನೆಗೆ ಸಂಪ್ರತಿಯನ್ಬು ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದ ಸಮಿತಿ ಸದಸ್ಯರ ಹೆಸರು ಬಹಿರಂಗ ಪಡಿಸುವಂತೆಯೂ ಆಗ್ರಹಿಸಿದ್ದರು.ಕಿ ರಂ. ನಾಗರಾಜ, ಜಿ ರಾಜಶೇಖರ, ಕೆ ವಿ ನಾರಾಯಣ, ಸಿದ್ಧಲಿಂಗಯ್ಯ….ಇಂಥವರೆಲ್ಲ ಅಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಹೀಗೂ ವಿರೋಧಗಳನ್ನು ಮಾಡುವವರಿದ್ದಾರೆ ಎಂದು ನನಗೆ ಅಲ್ಲೇ ಮೊದಲಿಗೆ ಗೊತ್ತಾದದ್ದು.
ಮುಂಬಯಿಗೆ ಬಂದವ ಮುಂಗಾರು ಪತ್ರಿಕೆಗೆ ಅದರ ದೊಡ್ಡ ವರದಿಮಾಡಿ ಕಳುಹಿಸಿದ್ದೆ. ಶೀರ್ಷಿಕೆ- ‘ಅಲನಹಳ್ಳಿ ಎಲ್ಲಿ? ಸಂಪ್ರತಿ ಎಲ್ಲಿ? ‘ ಎಂದಿತ್ತು.ಆ ದಿನಗಳಲ್ಲಿ ಆ ವರದಿ ಸ್ವಲ್ಪ ಚರ್ಚೆ ಆಗಿತ್ತು.
ಇಂದು ಜೋಗಿ ಎಲ್ಲರಿಗೂ ಚಿರಪರಿಚಿತರು.ಸಿನಿಮಾ ,ಟಿವಿ,ಪತ್ರಿಕಾ ರಂಗ,ಸಾಹಿತ್ಯ ರಂಗ …ಎಲ್ಲದರಲ್ಲೂ ಅವರು ಸಾಧನೆ ಮಾಡಿದ್ದಾರೆ.ಸದ್ಯ ಕನ್ನಡಪ್ರಭದಲ್ಲಿ ಪುರವಣಿಗಳ ಸಂಪಾದಕರಾಗಿದ್ದಾರೆ .ಅವರ ಕೃತಿಗಳಲ್ಲಿ ಅವರೇ ಹೇಳಿದಂತೆ –
ಹೆಸರು ಗಿರೀಶರಾವ್ ಹತ್ವಾರ್ .ಊರು ಸುರತ್ಕಲ್ ಬಳಿಯ ಹೊಸಬೆಟ್ಟು. ಹುಟ್ಟಿದ್ದು ಮೈಸೂರು ,ಬೆಳೆದದ್ದು ದಕ್ಷಿಣಕನ್ನಡ ಜಿಲ್ಲೆಯ ಗುರುವಾಯನಕೆರೆ .ಓದಿದ್ದು ಉಪ್ಪಿನಂಗಡಿ. ಸದ್ಯದ ವಾಸ್ತವ್ಯ ಬೆಂಗಳೂರು.
ಪತ್ರಕರ್ತ ಮಾತ್ರ ಅಲ್ಲ, ಕಥೆ ಕಾದಂಬರಿಯ ನಡುವೆ ಸೀರಿಯಲ್, ಸಿನಿಮಾಗಳಿಗೆ ಚಿತ್ರಕಥೆ ಸಂಭಾಷಣೆ, ಹಾಯ್ ಬೆಂಗಳೂರಿನಲ್ಲಿ ಜಾನಕಿ ಹೆಸರಲ್ಲಿ ಅಂಕಣ, ಕಥೆಯೊಂದು ಸಿನಿಮಾ ಆಗಿದೆ…. ಇದು ಇವರ ಪುಸ್ತಕದಲ್ಲಿರುವ ಪರಿಚಯ. ಹೆಚ್ಚಾಗಿ ಅಂಕಿತ ಪುಸ್ತಕವೇ ಇವರ ಕೃತಿಗಳನ್ಬು ಪ್ರಕಟಿಸುತ್ತಿದೆ.
ತಮಾಷೆ ಹಾಸ್ಯಪ್ರವೃತ್ತಿಯ ಪತ್ರಗಳು:
ಜೋಗಿಯವರ ಪತ್ರಗಳು ಬಹಳ ತಮಾಷೆ ಇರುತ್ತವೆ.ಆದರೆ ಅವರ ಲೇಖನಗಳಂತೆ ಅಷ್ಟೇ ಪರಿಣಾಮಕಾರಿಯೂ ಸಾಹಿತ್ಯಕವಾಗಿಯೂ ಪತ್ರಗಳು ಇರುತ್ತಿದ್ದುವು..ಹಾಗೆಂದೇ ಅವುಗಳನ್ನು ತೆಗೆದಿರಿಸಿದ್ದೇನೆ. ಎರಡು ವರ್ಷದ ಹಿಂದೆ ನನ್ನ “ನಾಗತಿಹಳ್ಳಿ ಚಂದ್ರಶೇಖರ ಪತ್ರಕಾಮೇಷ್ಡಿ” ಕೃತಿಗೆ ಅವರೇ ಮುನ್ನುಡಿ ಬರೆದಿದ್ದರು. ಅದು ನಾಗತಿಹಳ್ಳಿ ಚಂದ್ರಶೇಖರ ರು ನನಗೆ ಬರೆದ ಪತ್ರಗಳ ಸಂಕಲನವಾಗಿದೆ.2003 ರಲ್ಲಿ ನನ್ನ ಕತಾಸಂಕಲನ ‘ಕೊನೆಯ ಸದ್ದು’ ಕೃತಿಗೂ ಜೋಗಿಯವರೇ ಬೆನ್ನುಡಿ ಬರೆದವರು.
ಜೋಗಿಯವರ ಪತ್ರಗಳಲ್ಲಿನ ಕೆಲವು ಸಾಲುಗಳನ್ನು ನೆನಪಿಸಲೇ ಬೇಕು. ಎಂಭತ್ತರ ದಶಕದ ಕೊನೆಯಲ್ಲಿನ ಒಂದುಪತ್ರ-
“ಪ್ರೀತಿಯ ಶ್ರೀ,
ಬರೆಯುವುದು ತೀರ ತಡವಾಯ್ತು, ನಿಮ್ಮ ತಾಯಿನುಡಿ ದೀಪಾವಳಿ ಸಂಚಿಕೆಯ ಹಾಗೆ…..
ಕಾರಣಗಳನ್ನು ನೀಡಿ ಸಮರ್ಥಿಸಿ ಕೊಳ್ಳುವ ಆಸೆಯಂತೂ ಇಲ್ಲ.
ಕತೆಗಳ ಸೃಷ್ಟಿಯಲ್ಲಿ ಹೊಸತೊಂದು ಹಾದಿ ಕಂಡು ಕೊಳ್ಳದ ಹೊರತು ಬರೆಯುವುದು ವ್ಯರ್ಥ.ಹಾಗೆ ಹಾದಿ ಕಂಡುಕೊಳ್ಳುವುದು ಬರೆಯುವ ಮೂಲಕ ಸಾಧ್ಯ.ಇತ್ತೀಚೆಗೆ ಸಾಹಿತ್ಯದ ಕುರಿತು ಕೆಲವು ಅನುಮಾನಗಳು ಹುಟ್ಟುತ್ತಿವೆ. ಅದು ಕೇಳುವ ಪ್ರಶ್ನೆ ಗಳಿಗೆ ಉತ್ತರಿಸುವುದು ಸಾಧ್ಯವಾಗುತ್ತಿಲ್ಲ.
ವಿ ಸೂ.ನನ್ನ ಇನಿಷಿಯಲ್ H (ಎಚ್) ನ ಮೂಲ ಕಂಡು ಹಿಡಿದು ರಾವ್ ಎಂಬ ಜಾತೀಸೂಚಕ ನಾಮಧೇಯೋತ್ತರಾರ್ಧವನ್ನು ಕತ್ತರಿಸಿಕೊಳ್ಳುತ್ತಿದ್ದೇನೆ……”
( ತಾಯಿನುಡಿ ಮುಂಬಯಿಯ ಮಾಸಿಕ.ಅದರ ದೀಪಾವಳಿ ಸಂಚಿಕೆ ಕೆಲವೊಮ್ಮೆ ಡಿಸೆಂಬರ್- ಜನವರಿಗೂ ಬಂದದ್ದಿದೆ!)
ಮತ್ತೊಂದು ಪತ್ರ-
“ನೂರೆಂಟು ತಾಪಗಳಿಂದ ಬರೆಯುವುದು ತಡವಾಗುತ್ತಿದೆ.ಇನ್ನು ಮುಂದೆ ವಾರಕ್ಕೆ ಮೂರು ಗಂಟೆ ಪತ್ರ ಬರೆಯಲಿಕ್ಕೆಂದು ಮೀಸಲಿಡಬೇಕೆಂದು ಕೊಂಡಿದ್ದೇನೆ….”
ನನ್ನ 2019 ರ ಕೃತಿ “ನಾಗತಿಹಳ್ಳಿ ಚಂದ್ರಶೇಖರ್ ಪತ್ರಕಾಮೇಷ್ಟಿ” ಕೃತಿಗೆ ಅವರು ಮುನ್ನುಡಿ ಬರೆಯುತ್ತಾ –
“ತಮಾಷೆ ಪಕ್ಕಕ್ಕಿಟ್ಟು ಹೇಳುವುದಾದರೆ ಇದೊಂದು ದಾಖಲೆ.ಆ ಕಾಲಘಟ್ಟ, ಮನಸ್ಥಿತಿ, ಉತ್ಸಾಹ,ಹುಮ್ಮಸ್ಸು, ಕನಸು, ಮತ್ತು ಕನವರಿಕೆಗಳೆಲ್ಲವೂ ಇಲ್ಲಿ ಎದುರಾಗುತ್ತವೆ ….”ಎನ್ನುತ್ತಾ –
“ನಾನು ಬರೆದ ಪತ್ರಗಳೂ ಇರಬೇಕು ನಿಮ್ಮ ಬಳಿ.ಅದನ್ನು ಪ್ರಕಟಿಸಿ ಮಾನಕಳೆಯಬೇಡಿ. ಬೇರೆಯವರ ಪತ್ರಗಳನ್ನು ಮಾತ್ರ ಪ್ರಕಟಿಸಿ,ಓದಿ ಸಂತೋಷಪಡುತ್ತೇನೆ ” ಎಂದು ತಮಾಷೆಯಾಗಿಯೇ ಬರೆದಿದ್ದಾರೆ.
ಕನ್ನಡಪ್ರಭಕ್ಕೆ ಸೇರಿದ ನಂತರ, ಅಲ್ಲಿಂದ ನಡುವೆ ಕೆಲ ಕಾಲ ಉದಯವಾಣಿಯ ಪುರವಣಿಗಳ ಸಂಪಾದಕರಾಗಿ, ಮತ್ತೆ ಈಗ ಜೋಗಿಯವರು ಕನ್ನಡಪ್ರಭದ ಪುರವಣಿಗಳ ಸಂಪಾದಕರಾಗಿದ್ದಾರೆ.
ಅವರು ಈ ಹಿಂದೆ ಕನ್ನಡ ಪ್ರಭದಲ್ಲಿದ್ದಾಗಲೂ (ನಾನು 2000-2004ರಲ್ಲಿ ಐದು ವರ್ಷ ನಾನು ಮುಂಬಯಿ ತ್ಯಜಿಸಿ ಊರಲ್ಲಿದ್ದೆ.) ನನ್ನ ಅನೇಕ ಬರಹಗಳನ್ನು ಸಾಪ್ತಾಹಿಕದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ.
ಕನ್ನಡಪ್ರಭ ದೀಪಾವಳಿ ಸಂಚಿಕೆಗೆ ಮೂರು ವರ್ಷ ಫಿಲ್ಮ್ ಲೇಖನ ನನ್ನಿಂದ ಬರೆಸಿದ್ದರು.
ಆದರೆ ಅವರು ಉದಯವಾಣಿ ದೈನಿಕದಲ್ಲಿದ್ದಾಗ ಅವರು ಪುರವಣಿಗಳ ಸಂಪಾದಕರಾದರೂ ನನಗೆ ಬರೆಯುವಂತಿರಲಿಲ್ಲ.ಯಾಕೆಂದರೆ ನಾನು2004 ರಲ್ಲಿ ಮತ್ತೆ ಮುಂಬಯಿಗೆ ಬಂದವ ಕರ್ನಾಟಕ ಮಲ್ಲ ದೈನಿಕದಲ್ಲಿ ಸೇರಿದ್ದೆ. ಉದಯವಾಣಿ ಮುಂಬಯಿಯಲ್ಲೂ ಮುದ್ರಣ ಆಗುವುದರಿಂದ ನನಗೆ ಅದಕ್ಕೆ ಬರೆಯುವಂತಿರಲಿಲ್ಲ. ಹಾಗಾಗಿ 2004 ರ ನಂತರ ಈ ತನಕವೂ ಉದಯವಾಣಿಗೆ ನನಗೆ ಏನೂ ಬರೆಯುವಂತಿಲ್ಲ.
ಜೋಗಿ ಉವಾಚ:
“ಅನುಭವ ನಮ್ಮನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅದನ್ನು ನಾವೇ ಬೆನ್ನತ್ತಿ ಕೊಂಡು ಹೋಗಬೇಕು ……ತುಂಬಾ ದೂರದಿಂದ ಓಡಿ ಬಂದರೆ ಅತ್ಯಂತ ದೂರಕ್ಕೆ ಜಿಗಿಯಬಹುದು ಅನ್ನುವುದು ಲಾಂಗ್ ಜಂಪ್ ನಿಯಮ. ಸಾಹಿತ್ಯದಲ್ಲಿ ಅದು ಅಷ್ಟಾಗಿ ನಿಜವಲ್ಲ .ತುಂಬ ಕಾಲ ಬರೆದವನು, ಆ ಬಿರುಸಲ್ಲಿ ಮತ್ತೇನೋ ಮಹತ್ವವಾದದ್ದನ್ನು ಬರೆಯಬಲ್ಲ ಎಂದು ನಿರೀಕ್ಷಿಸುವುದು ಹುಂಬತನವಾಗುತ್ತೆ…” ಇದು ಜೋಗಿಯವರು ಅರೆ ಬೆಳಕು! ಕೃತಿಯಲ್ಲಿ ಹೇಳಿದ ಮಾತು.
“ನಾನು ಬೆಂಗಳೂರಲ್ಲಿ ಜೀವಿಸುವ ಉಪ್ಪಿನಂಗಡಿಯವನೋ ಉಪ್ಪಿನಂಗಡಿಯಲ್ಲಿ ಜೀವಿಸುವ ಬೆಂಗಳೂರಿನವನೋ ಎಂಬುದು ಗೊತ್ತಾಗದೇ, ಕನಸು ಕಾಣುತ್ತಿರುವುದು ಹಗಲೋ ರಾತ್ರಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗದೇ ಒದ್ದಾಟದಲ್ಲಿದ್ದಾಗ ಬರೆಸಿಕೊಂಡ ಬರಹಗಳಿವು” ಎಂದು ಬಿ ಕ್ಯಾಪಿಟಲ್ ಕೃತಿಯಲ್ಲಿ ಹೇಳಿದ್ದಿದೆ.
ಐದು ವರ್ಷಗಳ ಹಿಂದೆ ಜೋಗಿ ಫ್ಯಾಮಿಲಿ ಮುಂಬಯಿಗೆ ನಾಲ್ಕು ದಿನಕ್ಕಾಗಿ ಬಂದಿದ್ದರು.ಆ ಸಮಯ ನಾವು ಅಹೋರಾತ್ರ ಅವರ ಜೊತೆಗೂಡಿ ಸಾಹಿತಿ ಡಾ.ವ್ಯಾಸರಾವ್ ನಿಂಜೂರ್ ರ ಮನೆಗೆ ಹೋಗಿ ,ಅಲ್ಲಿಂದ ರಾಜ್ ಕಪೂರರ ಆರ್ ಕೆ ಸ್ಟುಡಿಯೋಗೆ ಭೇಟಿ ನೀಡಿದ್ದ ಸಂದರ್ಭ ಯಾವತ್ತೂ ಮರೆಯುವಂತಿಲ್ಲ.ಅಲ್ಲಿ ರಿಷಿ ಕಪೂರ್,ರಣಧೀರ್ ಕಪೂರ್ ಅವರನ್ನು ಕಂಡು ಮಾತಾಡಿಸುವ ಸದವಕಾಶವನ್ನು ಸಾಹಿತಿ ಅಹೋರಾತ್ರ ಮಾಡಿಕೊಟ್ಟಿದ್ದರು.( ಇದೀಗ ಆರ್ ಕೆ ಸ್ಟುಡಿಯೋ ಮಾರಲಾಗಿದೆ.) ಕಳೆದ 2020 ರ ಜನವರಿಯಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಕಾರ್ಯಕ್ರಮಕ್ಕೆ ಒಂದು ದಿನಕ್ಕಾಗಿ ಜೋಗಿಯವರು ಬಂದು ಹೋಗಿದ್ದರು.
ಜೋಗಿಯವರಿಗೆ ಅಭಿನಂದನೆಗಳು.
———-
3 thoughts on “‘ಸಾಹಿತ್ಯರತ್ನ’ ಪ್ರಶಸ್ತಿಯ ಕತೆಗಾರ ಜೋಗಿ”
ನಾನು ‘ಸಾಹಿತ್ಯ ರತ್ನ’ ಜೋಗಿಯವರ ಅಭಿಮಾನಿ. ಅವರ ಬಗ್ಗೆ ಬರೆದ ಲೇಖನ ಓದಿ ಖುಷಿಯಾಯಿತು.
ನಿಮ್ಮ ಬರವಣಿಗೆ ಓದಿಸಿಕೊಂಡು ಹೋಯಿತು. ಅದು ನಿಮ್ಮ ವಿಶೇಷತೆ ಕೂಡ
ಅದ್ಭುತ