ಮೂರನೇ ಕಣ್ಣು

ಸುಮ್ಮನೇ ಇದ್ದ ಮಗು ಬಳಪದಲಿ ಗೆರೆ ಎಳೆದಂತೆ
ಒಂದು ಮಧ್ಯಾಹ್ನದ ಹೊತ್ತು ಎರಡು ಗುಬ್ಬಿ
ಗಳು ಹಾರಿ ಬಂದುವು ಒಂದು ಮೊದಲು, ಆಮೇಲೆ
ಇನ್ನೊಂದು ನಮ್ಮ ಮನೆಯೇ ಬೇಕೆಂದು ಬಯಸಿ 

ಚಿಂವ್ ಚಿಂವ್ ಗುಟ್ಟಿ ಆಚೀಚೆ ನೋಡಿ ಹಾರಾಡಿ
ಗೋಡೆ ಗಡಿಯಾರದ ಹಿಂದೆ ಕುಳಿತು
ನಮ್ಮ ಪ್ರತಿರೋಧ ಇಲ್ಲದ್ದು ನೋಡಿಯೇ ಗೂಡು
ಕಟ್ಟಿದುವು ಹಾಯಾಗಿ ಇರಲುಬಹುದೆಂದು		  

ಕೆಲದಿನಗಳ ಮೇಲೆ ಮೊಟ್ಟೆ, ಆಮೇಲೆ ಮರಿಗಳು
ಕಂಡು ಬಂದುವು ಮನೆಗೆ ಮೊಮ್ಮಕ್ಕಳು
ಬಂದಂತೆ ! ಖುಶಿಯಲ್ಲಿ ಬೀಗಿದೆವು. ಇವಳೋ
ಆಗ ತಾನೇ ಮದುವೆಯಾದಂತಾದಳು		  

ನಾವಿರದ ಹೊತ್ತು ಹಾವು ಹೇಗೋ ನುಗ್ಗಿ
ತಿಂದು ತೇಗಿತು ಗುಬ್ಬಿಗಳ ಮರಿಗಳ
ಅವು ಇಟ್ಟ ರೋದನಕ್ಕಿಂತ ಇವಳ ಕಣ್ಣೀರ ಹನಿ
ತೋಯಿಸಿತು ನನ್ನ ಬಲದ ಭುಜವ		

ಹಾರಿ ಹೋದುವು ಅವು ಬಂದ ಹಾಗೇ ಇಲ್ಲಿ
ಉಳಿಯಬಾರದು ಇನ್ನು ಮುಂದೆ ಎಂಬಂತೆ,
ಆಮೇಲೆ ಕಳೆದಾರು ತಿಂಗಳುಗಳ ಮೇಲೆ
ಬಂದುವು, ಅವೇ ಅಥವಾ ಬೇರೆಯೇ?		

ಗೂಡು ಕಟ್ಟಿದವು ಅವು ಗಂಡು ಹೆಣ್ಣಿನ ಮೇಲೆ
ಕುಳಿತು ಚಿಂವ್ ಚಿಂವ್ಗುಟ್ಟ ತೊಡಗಿ
ಕೊಂಡುದ ನೋಡಿ ಇವಳು ‘ಅಯ್ಯೊ! ಮತ್ತೆ
ಹಾವು ಬಂದರೆ ಉಳಿದೀತೆ ಇವುಗಳ ಮರಿ?’	   

ಎಂದು ಪ್ರಶ್ನಿಸಿ ನನ್ನ’ಸುಮ್ಮನಿರುವಿರಿ ಏಕೆ?
ಓಡಿಸಲು ಯಾಕಾಗದವುಗಳ?’ ಎಂದು ಹೇಳಿ
ಪೀಡಿಸಿದರೂ ನಾನು ಸುಮ್ಮನಿದ್ದೆ ‘ಈ ಪ್ರಕೃತಿ
ನಮ್ಮ ಕೈಯಲಿಲ್ಲ’ ಎಂದೆ ತಿರಸ್ಕರಿಸಿ	    

ನಾಲ್ಕು ದಿನಗಳ ಮೇಲೆ ಅಂಗಳದಿ ಹಾವೊಂದು
ಹರಿದಾಡುವುದು ನೋಡಿ ಭಯಪಟ್ಟೆ
ಆ ಎರಡು ಗುಬ್ಬಿಗಳು ಹಾರಿ ಹಾವಿನ ಮೇಲೆ 
ಚೀರಿ ಓಡಿಸಹತ್ತಿದುವು, ಭಯ ಇಲ್ಲದೇ	    

ಹಾವು ಹೋಯಿತು ನನ್ನ ಚಪ್ಪಾಳೆಗೆ ಹೆದರಿ
ಹಾರಿ ಹೋದುವು ಗುಬ್ಬಿಗಳು ಅದೇ ಮರುದಿನವು
ಯಾರು ಹೇಳಿದರವಕ್ಕೆ ಈ ಠಾವು ಸುರಕ್ಷಿತವಲ್ಲ
ಎಂಬ ಮಾತನು ನಾವು ಹೇಳಲಾಗದ್ದು !’    

               ಡಾ.ನಾ.ಮೊಗಸಾಲೆ

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಮೂರನೇ ಕಣ್ಣು”

  1. Gururaj sanil, udupi

    ಕವಿಗಳಿಗೆ ನಿಸರ್ಗ ಸೌಂದರ್ಯದರಿವಿರುವುದು ತಿಳಿದ ಸಂಗತಿ. ಈ ಕವಿಗಳಿಗೆ ಜೀವಜಾಲದ ನಿಷ್ಠೂರ ಸತ್ಯವೂ ಒಪ್ಪಿತವಾಗಿರುವುದು ಸ್ತುತ್ಯಾರ್ಹ…

  2. Dr B. Janardana Bhat

    ತುಂಬಾ ಚೆನ್ನಾಗಿದೆ ಕವಿತೆ.‌ ಅಭಿನಂದನೆಗಳು ಕವಿಗೆ.

  3. Dr Madhavi S Bhandary

    ಮನದಲ್ಲಿ ಗೂಡು ಕಟ್ಟಿದ ಗುಬ್ಬಚ್ಚಿ ದಂಪತಿಗಳು. ಮರಿ ಹಾಕುವುದಾದರೆ ಇಲ್ಲೇ ಹಾಕಲಿ. ಬಹು ಆಪ್ತತೆ ತುಂಬಿದ ಕವಿತೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter