ನಮ್ಮಲ್ಲೊಂದು ದ್ವೀಪದ ಹೆಸರು,‘ಕುಜುಂಬು ಕುದುರು’ಎಂದಿರುವುದನ್ನು ಕೇಳಿ ಕುತೂಹಲವಾಯಿತು. ನಿಘಂಟಿನಲ್ಲಿ ಕುಜುಂಬುವಿಗೆ ಸೂಕ್ತ ಅರ್ಥ ಸಿಗುವುದಿಲ್ಲ. ನಮ್ಮಆಡುಭಾಷೆ ತುಳುವಿನಲ್ಲಿ, ‘ಯಾವುದಕ್ಕೂ ಉಪಯೋಗವಿಲ್ಲದ’ ಅಥವಾ ‘ಕುಜುಂಬ’ ಪ್ರಯೋಜನವಿಲ್ಲದವನು ಎಂಬರ್ಥದಲ್ಲಿ ಬಳಸುವುದುಂಟು. ತುಳು ನಿಘಂಟಿನಲ್ಲಿ ಹರಕು, ಚಿಂದಿ, ಸವಕಲು, ತುಂಡು ಎಂಬರ್ಥಗಳಿವೆ. ಹಾಗಾಗಿ ತುಳುವಿನ ಅರ್ಥವೇ ಅನ್ವರ್ಥವಾದುದು ಎಂಬುದು ಆ ಕುದುರನ್ನು ಪ್ರವೇಶಿಸುತ್ತಲೇ ಅನ್ನಿಸಿತು.ಪಶ್ಚಿಮ ಘಟ್ಟದಿಂದ ಹರಿದು ಬರುವ,‘ಪಾಪನಾಶಿನಿ’ ನದಿಯು ಉಡುಪಿಯ ಉದ್ಯಾವರ, ಕಟಪಾಡಿಯ ನಡುವೆ ಸಾಗರದತ್ತ ಸಾಗುವಲ್ಲಿ ಹಾಗೂ ಉಡುಪಿಯಿಂದ ಕಟಪಾಡಿಗೆ ಹೋಗುವ ಸೇತುವೆಯ ಬಲ ಮಗ್ಗುಲಲ್ಲಿ ಈ ಸಣ್ಣ ದ್ವೀಪವಿದೆ. ಹೊಳೆಯು ಕವಲೊಡೆದು ಕುದುರುವನ್ನು ಸುತ್ತಿ ಬಳಸಿ ಸಾಗುವುದರಿಂದ ಈ ಕುದುರು ಯಾವಾಗಲೂ ಜಲಾವೃತವಾಗಿರುತ್ತದೆ.
ಸುಮಾರು ಹತ್ತು ಎಕರೆಗಳಷ್ಟು ವಿಶಾಲವಾದ ಈ ದ್ವೀಪದಲ್ಲಿ ಇರುವ ಬರೇ ಏಳೆಂಟು ಕುಟುಂಬಗಳು ಅನಾದಿ ಕಾಲದಿಂದಲೂ ಇಲ್ಲಿವಾಸಿಸುತ್ತಿವೆ ಯಂತೆ. ನನ್ನನ್ನು ಕರೆಯಿಸಿದವರು ಕುದುರುವಿಗಿಂತ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕಾರು ನಿಲ್ಲಿಸಲು ಸೂಚಿಸಿದರು.ಪುನರ್ವಸು ಮಳೆ ಗೀರುಕಟ್ಟಿ ಸುರಿಯುತ್ತಿತ್ತು. ಬಿರುಗಾಳಿಗೆ ತುಯ್ದಾಡುತ್ತಿದ್ದ ಕೋವಿಯಂಥ ನನ್ನ ಕೊಡೆಗೆ ಬಿಗಿಯಾಗಿ ಜೋತು ಬಿದ್ದು ತೊಯ್ದುತುಪ್ಪೆಯಾಗುತ್ತ ಅವರನ್ನು ಹಿಂಬಾಲಿಸಿದೆ. ಪಾಪನಾಶಿನಿಯ ಹಳೆಯ ಸೇತುವೆಯ ಪಕ್ಕದಲ್ಲಿ ಸರಕಾರವು ಈಚೆಗೆ ಹೊಸ ಸೇತುವೆಯನ್ನು ನಿರ್ಮಿಸಿದೆ. ಆದ್ದರಿಂದ ಒಂದೇ ಸೇತುವೆಯಲ್ಲಿ ದ್ವಿಮುಖ ಸಂಚಾರದ ತಾಪತ್ರಯ ತಪ್ಪಿತ್ತು. ಆದರೆ ಕುಜುಂಬು ಕುದುರುವಿಗೆ ಹೋಗಲು ರಸ್ತೆ ಎಲ್ಲಿದೆ ಎಂದು ಅವರಿಂದ ಕೇಳಿ ತಿಳಿದಾಕ್ಷಣ ಆ ಚಳಿಯಲ್ಲೂ ಮೈ ಬೆವರಿತು. ಹೆಜ್ಜೆ ಮುಂದಿಡಲಾಗದೆ ತಟ್ಟನೆ ನಿಂತು ಬಿಟ್ಟೆ. ಕರೆದೊಯ್ಯುತ್ತಿದ್ದ ರೈನ್‍ಕೋಟ್‍ಧಾರಿಯೂ ತಿರುಗಿ ನಿಂತು ನನ್ನನ್ನು ಪ್ರಶ್ನಾರ್ಥಕವಾಗಿ ನೋಡಿದವರು, ‘ಬನ್ನಿ ಸಾರ್, ಇನ್ನು ಸ್ವಲ್ಪದೂರವಷ್ಟೇ…!’ ಎಂದಾಗ ನಾನಿನ್ನೂ ಗಲಿಬಿಲಿ. ಏಕೆಂದರೆ ಪಾದಾಚಾರಿ ಅಂಚೇ ಇಲ್ಲದ ಹಳೆಯ ಸೇತುವೆಯ ಮೇಲೆ ನಮಗೆ ನಡೆದು ಹೋಗಬೇಕಿದೆ! ಯಮಧೂತರಲ್ಲ, ಸ್ವತಃ ಯಮಧರ್ಮನೇ ಚಲಾಯಿಸಿಕೊಂಡು ಬರುತ್ತಿದ್ದಾನೇನೋ ಎಂಬಂತೆ ಶರವೇಗದಿಂದ ನುಗ್ಗಿ ಬರುವ ಬಸ್ಸು, ಲಾರಿ, ಕಾರುಗಳಿಗೂ ಮಂಗಳೂರು, ಉಡುಪಿಗೆ ಧಾವಿಸುವ ಎಕ್ಸ್‍ಪ್ರೆಸ್ ಬಸ್ಸುಗಳಿಗೂ ಎದುರಾಗಿ ವಿರುದ್ಧ ದಿಕ್ಕಿನಲ್ಲಿ ನಡೆದು ಹೋಗುವುದೆಂದರೆ ತಮಾಷೆಯ ವಿಷಯವೇ…?
ಆದರೆ ಹೊಸ ಸೇತುವೆಯಲ್ಲಿ ಪಾದಾಚಾರಿ ಅಂಚನ್ನು ನಿರ್ಮಿಸಲಾಗಿತ್ತು.ಅದೇ ಸಂದರ್ಭದಲ್ಲಿ,‘ಹಳೆಯ ಸೇತುವೆಗೂ ನಿರ್ಮಿಸಿಕೊಡಿ!’ ಎಂದು ದ್ವೀಪವಾಸಿಗಳು ಬೇಡಿಕೊಂಡಿದ್ದರಂತೆ. ಆದರೂ ಹೆದ್ದಾರಿ ಪ್ರಾಧಿಕಾರವು ಸ್ಪಂದಿಸಲಿಲ್ಲವಂತೆ! ‘ನಿಮ್ಮ ಕುದುರಿಗೆ ಹೋಗಲು ಬೇರೆದಾರಿಯಿಲ್ಲವೇ…?’ಎಂದು ಅವರನ್ನು ಆತಂಕದಿಂದ ಕೇಳಿದೆ. ‘ಅಯ್ಯೋ ಇಲ್ಲ ಸಾರ್.ಈ ಸೇತುವೆಯ ನಟ್ಟ ನಡುವೆಯೇ ನಮ್ಮಕುದುರು ಇರುವುದರಿಂದ ಸೇತುವೆಯಿಂದಾಗಿಯೇ ಹೋಗಬೇಕು. ಅದೇ ನಮಗಿರುವ ಒಂದೇ ಒಂದುದಾರಿ.ಏನೂ ಹೆದರ ಬೇಡಿ. ನಾನಿದ್ದೇನೆ. ಬನ್ನಿ!’ಎಂದು ಅವರು ನಗುತ್ತ ಧೈರ್ಯ ತುಂಬಿದಾಗ ಅವರ ಬೆನ್ನು ಹತ್ತುವುದು ಅನಿವಾರ್ಯವಾಯ್ತು.
ಸರ್ರ್… ಭರ್ರ್…ಎಂದು ಕ್ಷಣ ಕ್ಷಣಕ್ಕೂ ಧಾವಿಸಿ ಬಂದು ಹಾದು ಹೋಗುತ್ತಿದ್ದ ವಾಹನಗಳಿಗೆ ನಮ್ಮಿರುವನ್ನು ಸೂಚಿಸಲು ನನ್ನ ಕೊಡೆಯೊಂದು ತನ್ನಶಕ್ತಿ ಮೀರಿ ಹೆಣಗಾಡಿತು.ಆದರೂ ಒಂದೆರಡು ಬಸ್ಸು ಮತ್ತು ಕಾರು ಚಾಲಕರು ನಮ್ಮನ್ನು ಹೊಳೆಗೆ ಗಾಳ ಹಾಕಲು ಬಂದವರೆಂದೋ ಅಥವಾ ನದಿಯುಬ್ಬರ ಕಂಡು ಮಜಾಉಡಾಯಿಸಲು ಬಂದವರೆಂದೋ ಭಾವಿಸಿ ಅಪ್ಪಳಿಸುವಂತೆಯೇ ಬೆದರಿಸಿ ಹೋದರು.ಅವನ್ನೆಲ್ಲ ಸಹಿಸಿಕೊಂಡು ಮುಂದೆ ಸಾಗುತ್ತಲೇ ಕುದುರುವಿಗೆ ಇಳಿಯಬೇಕಾದ ಜಾಗವೂ ಬಂದು ಬಿಟ್ಟಿತು. ಓಬಿರಾಯನ ಕಾಲದ ತುಕ್ಕು ಹಿಡಿದ ಕಬ್ಬಿಣದ ಏಣಿಯೊಂದು ತನ್ನ ಮೈಯಿಡೀ ಸೀತಾಳೆ ಸಿಡುಬಿನಂತಹ ಗುಳಿಗಳನ್ನು ಹೊದೆದು ಕೊಂಡು, ಸುಮಾರು ಹದಿನೈದು ಅಡಿ ಆಳಕ್ಕೆ ಮೈಚಾಚಿ ನಿಂತಿತ್ತು.ಅದನ್ನಿಳಿದು, ಮತ್ತೆ ಅರ್ಧ ಕಿಲೋಮೀಟರ್‍ನಷ್ಟಿದ್ದ ತೆಂಗಿನ ತೋಟಗಳ ನಡುವೆ ಸಾಗಿದೆವು.ಪುಣ್ಯಕ್ಕೆ ಆ ಹೊತ್ತಿಗೆ ಪುನರ್ವಸು ಸ್ವಲ್ಪ ತಾಳ್ಮೆ ತಂದುಕೊಂಡಿದ್ದ.
ಅನಾದಿ ಕಾಲದಿಂದಲೂ ತನ್ನ ಹರಿವಿಗೆ ಈ ಕುದುರೊಂದು ಸದಾ ಅಡ್ಡಿಯಾಗುತ್ತಿದೆ ಎಂದೋ ಅಥವಾ ಇಡೀ ಕುದುರುವನ್ನೇ ತೊಳೆದು ಸ್ವಚ್ಛಗೊಳಿಸುವ ಇಚ್ಛೆಯಿಂದಲೋ ಒಂದುವಾರದ ಹಿಂದೆ ಇದೇ ದಿನ ಪಾಪನಾಶಿನಿಯು ಎಂದಿಗಿಂತಲೂ ಐದಾರು ಅಡಿ ಎತ್ತರಕ್ಕೆದ್ದು ಮೈದುಂಬಿ ಪ್ರವಾಹಿಸಿದ ಪರಿಣಾಮ ಕುದುರುವಿನ ತುಂಬ ನಯವಾದ ಕೆಸರು,ತುಂಬಿ ನೆಲವನ್ನು ಕಂದು ಬಣ್ಣಕ್ಕೆ ತಿರುಗಿಸಿ, ಕಾಲಿಟ್ಟರೆ ಪುಸಕ್ಕನೆ ಜಾರುವಂತೆ ಮಾಡಿದ್ದಳು.ಆದ್ದರಿಂದ ಪ್ಯಾಂಟನ್ನು ಮೊಣಗಂಟಿನವರೆಗೆ ಎಳೆದುಕೊಂಡು, ಕೈಗಳನ್ನು ಶಿಲುಬೆಯಾಕಾರದಲ್ಲಿ ಎತ್ತಿ ಹಿಡಿದುಕೊಂಡು ತೋಲನೀಕರಿಸುತ್ತ, ಬಾಟಾ ಜೋಡುಗಳ ಹಿಮ್ಮಡಿಗೆ ಅಂಟಿ ಪಚಕ್ ಪಚಕ್‍ಎಂದು ಬೆನ್ನಿನವರೆಗೆ ಚಿಮ್ಮುತ್ತಿದ್ದ ಕೆಸರನ್ನು ಒರೆಸಿಕೊಳ್ಳುತ್ತ ಸಾಗಿದೆ. ಬೇಟೆಯ ಧ್ಯಾನದಿಂದ ಹರಿಯುವ ದೈತ್ಯ ಹೆಬ್ಬಾವಿನಂತಹ ಕಾಲು ಹಾದಿಯೊಂದು ನಾವು ಸೇರಬೇಕಾದ ಮನೆಯಂಗಳಕ್ಕೆ ನಮ್ಮನ್ನು ತಂದು ನಿಲ್ಲಿಸಿದಾಗ ಹೆಬ್ಬಾವಿನಂತೆ ನಾನೂ ಏದುಸಿರುಬಿಟ್ಟೆ.
ಕುದುರುವಿನ ಮನೆಗಳನ್ನು ನೆಲದಿಂದ ನಾಲ್ಕೈದು ಅಡಿ ಎತ್ತರದ ಅಡಿಪಾಯದ ಮೇಲೆ ಕಟ್ಟಲಾಗಿತ್ತು.ಮನೆ ಮಂದಿಯೆಲ್ಲ ನಮ್ಮ ನಿರೀಕ್ಷೆಯಲ್ಲಿ ಶತಪಥವೆನ್ನುತ್ತಿದ್ದರು. ‘ಹಾವು ಒಳಗಿನ ಕೋಣೆಯಲ್ಲಿದೆ ಸಾರ್!’ ಎಂದು ಯುವಕನೊಬ್ಬ ಗಡಿಬಿಡಿಯಿಂದ ತಿಳಿಸಿದ. ಕೋಣೆಯನ್ನು ಪ್ರವೇಶಿಸಿದೆ. ಉಕ್ಕಿ ಹರಿದಿದ್ದ ಪಾಪನಾಶಿನಿಯು ಕುದುರುವಿನ ಮನೆ ಮನೆಗಳೊಳಗೂ ಸರಾಗವಾಗಿ ನುಗ್ಗಿದ್ದನ್ನು ಆ ಮನೆಯ ಗೋಡೆಗಳ ಮೇಲಿನ ಮಟ್ಟಸದ ಕೆಸರಿನ ಗೆರೆಗಳು ಸಾರುತ್ತಿದ್ದವು.‘ಇಂಥದ್ದೊಂದು ಮಹಾ ಬೊಳ್ಳ ಇಪ್ಪತ್ತೈದು ವರ್ಷಗಳ ಹಿಂದೊಮ್ಮೆ ಬಂದಿದ್ದು ಬಿಟ್ಟರೆ ಈ ಸಲವೇ ಬಂದಿದ್ದು ಮಾರಾಯ್ರೇ!ಯಾವ ಮಾಯಕದಲ್ಲಿ ರಾತೋ ರಾತ್ರಿ ನದಿಯ ಜಲಮಟ್ಟ ಏರಿತೋ ದೇವರೇ ಬಲ್ಲ!ಎರಡು ಗಂಟೆಯೊಳಗೆ ಒಮ್ಮೆಲೆ ಎರಡಡಿ ಏರಿಬಿಟ್ಟಿತ್ತು. ನಾವಿನ್ನೂಇಲ್ಲೇ ಉಳಿದೆವೆಂದರೆ ಆಮೇಲೆ ಸರಕಾರವು ನಮ್ಮನ್ನೆಲ್ಲ ಸಮುದ್ರದಲ್ಲಿ ಹುಡುಕ ಬೇಕಾದೀತು ಎಂಬ ಯೋಚನೆ ಬಂದು ಎಲ್ಲರೂ ಮನೆಯ ಸಾಮಾನು ಸರಂಜಾಮುಗಳನ್ನು ಸಾಧ್ಯವಾದಷ್ಟು ಹೊತ್ತೊಯ್ದು ಸಮೀಪದ ಸಂಬಂಧಿಕರ ಮತ್ತು ಊರವರ ಮನೆಗಳಲ್ಲಿ ಇಟ್ಟು ಅಲ್ಲೇ ರಾತ್ರಿಯನ್ನು ಕಳೆದೆವು. ಆದರೆ ಬೆಳಿಗ್ಗೆ ಬಂದು ನೋಡಿದರೆ ಕೋಣೆಯೊಳಗಿದ್ದ ಅಕ್ಕಿ ಗೋಣಿ ಮತ್ತು ಕಾಯಿ ಚೀಲಗಳು ನೀರು ಪಾಲಾಗಿದ್ದವು.ಕೆಲವೇ ಚೀಲಗಳು ಮಾತ್ರವೇ ದೂರದ ಪೊದೆಗಳಿಗೆ ಸಿಲುಕಿದ್ದರಿಂದ ಮತ್ತೆ ದಕ್ಕಿದವು. ಅಂಥ ಒಂದು ಕಾಯಿಚೀಲವನ್ನು ಒಳಗೆ ತಂದು ತೆರೆದಾಗ ಅಬ್ಬಾ! ಅದರೊಳಗೆ ನಾಗರ ಹಾವಿತ್ತು ಮಾರಾಯ್ರೇ!’ ಎಂದುಯುವಕನೂ, ಉಳಿದವರೂ ವಿಚಲಿತತೆಯಿಂದ ವಿವರಿಸಿದರು.
ಕಾಯಿ ಚೀಲವನ್ನುಅಂಗಳಕ್ಕೆತ್ತಿ ತಂದು ಕೊಡಹಿದೆ. ಒಂದು ಮೀಟರ್ ಉದ್ದದ, ಕಂದು ಬಣ್ಣದ ದಷ್ಟಪುಷ್ಟವಾದ ಹೆಣ್ಣು ನಾಗರಹಾವೊಂದು ಕಾಯಿಗಳೆಡೆಯಿಂದ ಹೊರಗೆ ಬಂದುದು ನಮ್ಮನ್ನು ಕಂಡು ಭಯದಿಂದ ಹೆಡೆಯರಳಿಸಿ ನಿಂತು ಜೋರಾಗಿ ಬುಸುಗುಟ್ಟಿತು. ಆದರೆ ನನ್ನ ಕೋಮಲ ಸ್ಪರ್ಶಕ್ಕೆ ನಿಧಾನವಾಗಿ ಮಣಿದು ಕೆಲವೇ ಕ್ಷಣದಲ್ಲಿ ಕೈವಶ ವಾಯಿತು. ಮನೆಮಂದಿಯ ಕೃತಜ್ಞಾಪೂರ್ವಕ ಧನ್ಯವಾದಗಳೊಂದಿಗೆ ಒಂದಿಷ್ಟು ಸಾರಿಗೆ ವೆಚ್ಚವನ್ನೂ ಸ್ವೀಕರಿಸಿ ಹಿಂದಿರುಗಿದೆ. ಬರುತ್ತ ಯೋಚನೆಯೊಂದು ಕಾಡಿ, ನಗರಗಳಿಂದ ದೂರದ ದುರ್ಗಮ ದ್ವೀಪಗಳ ಅಥವಾ ತೀರಾ ಹಳ್ಳಿಗಾಡಿನ ಜನರಿಗೆ ಹಾವು ಕಚ್ಚಿದರೆ ನಗರದ ಆಸ್ಪತ್ರೆಗಳಿಗೆ ತಲುಪುವುದರೊಳಗೆ ಹೇಗೆ ಸಾವು ಸಂಭವಿಸಬಹುದೋ ಅಂತೆಯೇ ಈ ಕುದುರುವಿನ ಪರಿಸ್ಥಿತಿಯೂ ಇದೆ ಎಂದೆನಿಸಿತು. ಆದರೆ ಮಳೆಗಾಲದ ಒಂದಷ್ಟು ಸಮಯ ಉಡುಪಿಯ ಬಹುತೇಕ ಕುದುರುಗಳ ಅವಸ್ಥೆ ಹೀಗೆಯೇ ಇರುತ್ತದೆ. ಆದರೆ ಈ ದ್ವೀಪದವಾಸಿಗಳು ಮಾತ್ರ ಜೀವಮಾನವಿಡೀ ಇಂಥದುರಾವಸ್ಥೆಯಲ್ಲೇ ಬದುಕ ಬೇಕಲ್ಲಾ ಎಂದೆಣಿಸಿ ಮನಸ್ಸುಮುದುಡಿತು.ಬಹುಶಃ ಇವರೆಲ್ಲ ಅನಾದಿ ಕಾಲದಿಂದಲೂ ಇಂಥ ಪರಿಸರಕ್ಕೆ ಒಗ್ಗಿ ಹೋಗಿರ ಬಹುದು ಎಂದು ಭಾವಿಸಿ ಸಮಾಧಾನಿಸಿ ಕೊಂಡೆ.
ಕುಜುಂಬು ಕುದುರುವಿನ ನಿವಾಸಿ,ಐವತ್ತರ ಆಸುಪಾಸಿನ ವ್ಯಕ್ತಿಯೊಬ್ಬ ನಮ್ಮೊಂದಿಗೆ ಬರುತ್ತಿದ್ದವನು,‘ಯಾರೋ ತಂದು ಬಿಟ್ಟ ಹಾವು ಸಾರ್ ಇದು. ನಾವು ಯಾರೂ ಈವರೆಗೆ ಇಲ್ಲೆಲ್ಲೂ ನಾಗರಹಾವನ್ನುಕಂಡದ್ದೇ ಇಲ್ಲ!’ಎಂದು ಸಂಶಯಕ್ಕೆಡೆಯೇ ಇಲ್ಲದಂತೆ ಹೇಳಿಬಿಟ್ಟ.
‘ಹೇ, ಹಾಗೇನಿಲ್ಲ ಮಾರಾಯಾ. ಐದು ವರ್ಷದ ಹಿಂದೊಮ್ಮೆ ಮತ್ತು ಮೂರು ವರ್ಷದ ಈಚೆಗೊಮ್ಮೆ ಇಲ್ಲಿನ ಮನೆಗಳಿಗೆ ಹಾವು ಬಂದಿದ್ದು ನನಗೆ ಗೊತ್ತಿದೆ!’ ಎಂದು ನನ್ನನ್ನುಕರೆದೊಯ್ದ ವ್ಯಕ್ತಿತಟ್ಟನೆ ಉತ್ತರಿಸಿದರು. ‘ಓಹೋ, ಹೌದಾ…ಯಾವಾಗ ಮಾರ್ರೇ…? ನನಗೆ ಗೊತ್ತೇ ಇರ್ಲಿಲ್ಲ ಇದು?’ಎನ್ನುತ್ತ ಅವನು ಬಾಯಿಮುಚ್ಚಿದ.ಆಗ ನನ್ನಲ್ಲೊಂದು ಪ್ರಶ್ನೆ ಮೂಡಿತು.‘ಅಲ್ಲ ಸರ್, ಉಡುಪಿ ನಗರಕ್ಕೆಈ ಕುದುರು ಇಷ್ಟೊಂದು ಸಮೀಪವಿರುವಾಗ ಇದಕ್ಕೊಂದು ರಸ್ತೆ ಇಲ್ಲ ಎಂದರೆ ಅಚ್ಚರಿಯಲ್ಲವೇ! ಶಾಸಕರು ಕೂಡಾ ನಮ್ಮೂರಿನವರೇ ಆಗಿರುವಾಗ ನೀವ್ಯಾರೂ ಅವರ ಗಮನಕ್ಕೂ ತರಲಿಲ್ಲವೇ?’ ಎಂದೆ ಕುತೂಹಲದಿಂದ.ಅಷ್ಟೊತ್ತಿಗೆ ಮತ್ತೆ ಕಬ್ಬಿಣದ ಏಣಿ ಎದುರಾದುದರಿಂದ ಮಾತುಅಲ್ಲಿಗೇ ನಿಂತಿತು. ಸೇತುವೆಯಲ್ಲಿ ಸಾಗುತ್ತಿದ್ದ ನಿಬಿಡ ವಾಹನಗಳ ನಡುವೆಯೇ ನಮ್ಮ ನಡೆಯೂ ಇದ್ದುದರಿಂದ ಮತ್ತೆ ಜೀವಕೈಯಲ್ಲಿ ಹಿಡಿದು ಕೊಂಡು ಮೌನವಾಗಿ ಸಾಗಿದೆವು. ಆದರೆ ಸೇತುವೆಯನ್ನು ದಾಟಿದೆವೋ ಇಲ್ಲವೋ ರೊಂಯ್ಯನೆ ಧಾವಿಸಿ ಬಂದ ಬಸ್ಸೊಂದು ನನ್ನಜೊತೆಗಾರನನ್ನುಸವರಿಕೊಂಡೇ ಹೋಗಿತ್ತು! ‘ಸಾರ್…!’ ಎಂದುಚೀರಿದೆ.ಅವರೂ ಬೆಚ್ಚಿಬಿದ್ದರು.
‘ಒಂದು ವೇಳೆ ಈಗ ನಾನು ತಿರುಗಿ ನೋಡುತ್ತಿದ್ದರೆ ನನ್ನ ಕಥೆ ಇಲ್ಲೇ ಕೈಲಾಸವಾಗುತ್ತಿತ್ತು ಸಾರ್!’ಎಂದು ಹೇಳಿ ನಕ್ಕಅವರಿಗೆ ತಟ್ಟನೆ ನನ್ನ ಪ್ರಶ್ನೆಯ ನೆನಪಾಗಿರ ಬೇಕು,‘ಹ್ಞಾಂ, ಆವಾಗ ಏನು ಕೇಳಿದಿರಿ, ರಸ್ತೆಯ ಬಗ್ಗೆಯಲ್ಲವೇ…? ಆ ಮಾತು ಕೇಳಲೇ ಬೇಡಿ ಸಾರ್.ಒಮ್ಮೆಕುದುರುವಿನ ಎಲ್ಲರೂ ಸೇರಿ ಶಾಸಕರಿಗೂ ಮತ್ತು ಸಂಬಂಧಪಟ್ಟವರ ಗಮನಕ್ಕೂ ತಂದಿದ್ದೆವು. ಅವರು ಬಂದು ನಮ್ಮಊರಿನ ಅವಸ್ಥೆಯನ್ನು ಕಂಡವರು,‘ಒಂದೊಳ್ಳೆಯ ರಸ್ತೆ ಮಾಡಿ ಕೊಡುತ್ತೇವೆ. ಎಲ್ಲರೂ ಸ್ವಲ್ಪ ಸ್ವಲ್ಪಜಾಗ ಬಿಟ್ಟು ಕೊಡಿ!’ಎಂದರು.ಆದರೆ ಅಷ್ಟು ಕೇಳಿದ ಇಲ್ಲಿನ ಕೆಲವರು ಮತ್ತೆ ಯಾವತ್ತೂ ರಸ್ತೆಯ ಬಗ್ಗೆ ಚಕಾರವೆತ್ತಲಿಲ್ಲ ನೋಡಿ!’ಎಂದು ವಿಷಾದ ವ್ಯಕ್ತ ಪಡಿಸಿದರು.
‘ಅರೇ, ಯಾಕೆ ಸರ್ ಒಪ್ಪಲಿಲ್ಲ…?’ಎಂದೆ ಅಚ್ಚರಿಯಿಂದ.
‘ಮತ್ತೆ ಯಾಕೆ…ಇವರಿಗೆಲ್ಲ ತಮ್ಮ ಜಾಗದ ಮೇಲಿನ ದುರಾಸೆ ಬಿಡಬೇಕಲ್ಲ ಸಾರ್! ಇವರೆಲ್ಲರೂ ಹೋಗುವಾಗ ತಂತಮ್ಮ ಜಾಗವನ್ನೂ ಹೊತ್ತು ಕೊಂಡು ಹೋಗುತ್ತಾರೆ ನೋಡಿ, ಅದಕ್ಕೆ! ಇದಕ್ಕಿಂತ ವಿಪರ್ಯಾಸ ಬೇರೊಂದಿದೆಯೇ ಹೇಳಿ…?’ಎಂದ ಅವರು ನಮ್ಮಜೊತೆಯಲ್ಲಿದ್ದ ವ್ಯಕ್ತಿಯತ್ತ ಜಿಗುಪ್ಸೆಯಿಂದ ನೋಡಿ ನಕ್ಕರು.ಅಷ್ಟು ಕೇಳಿದ ಆ ಆಸಾಮಿ ಇದು ತನಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಕಿಸಕ್ಕನೆ ನಕ್ಕು ಕೈ ಬೀಸುತ್ತ ನಮ್ಮನ್ನು ಬೀಳ್ಗೊಂಡಾಗ, ಮತ್ತೆ ನನ್ನಲ್ಲಿ ಪ್ರಶ್ನೆಗಳು ಹುಟ್ಟಲಿಲ್ಲ.
*****
4 thoughts on “ಕುಜುಂಬು ಕುದುರು”
ಬರಹ ಚೆನ್ನಾಗಿದೆ
ಧನ್ಯವಾದ ಮೇಡಮ್…
ಬರವಣಿಗೆಯ ಶೈಲಿ ಬಹಳ ಇಷ್ಟವಾಯಿತು.
ಅ ಕುದುರಿನಲ್ಲಿ ವಾಸಿಸುವವರ ಜೀವನ ಮಳೆಗಾಲದಲ್ಲಿ ಎಷ್ಟು ಕಷ್ಟಕರ ಇರಬಹುದು ಎಂದು ಉಹಿಸಲು ಕಷ್ಟ ಆಗುತ್ತದೆ.
ಧನ್ಯವಾದ ಸರ್…ಹೌದು ಅಂಥ ಜನಜೀವನ ಇನ್ನೂ ನಮ್ಮ ಸುತ್ತಮುತ್ತವಿದೆ.