ಪ್ರಕೃತಿದತ್ತ ಜ್ಞಾನದ ನಿರಾಕರಣೆ ವಿಜ್ಞಾನಕ್ಕೆ ತುಂಬಲಾಗದ ನಷ್ಟ!

ಇತ್ತೀಚೆಗೆ ಉಡುಪಿಜಿಲ್ಲೆಯ ಒಂದು ಪ್ರತಿಷ್ಠಿತ ಕಾಲೇಜು, ಪರಿಸರ ಹಾಗೂ ವನ್ಯಜೀವಿಗಳ ಕುರಿತು ರಾಜ್ಯದ ಕೆಲವು ಖ್ಯಾತ ವನ್ಯಜೀವಿ  ಸಂಶೋಧಕರು ಮತ್ತು ವನ್ಯಜೀವಿ ಜೀವಶಾಸ್ತ್ರಜ್ಞರಿಂದ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿತು. ಅದರಲ್ಲಿಸಂಪನ್ಮೂಲ ವ್ಯಕಿಯಾಗಿ ನನಗೂ ಆಹ್ವಾನವಿತ್ತು. ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಅನೇಕ ಮಹತ್ವದ ಸಂಗತಿಗಳ ಕುರಿತು ಚರ್ಚೆ, ಸಂವಾದ ನಡೆಸಿದ ಆ ಸಂಶೋಧಕರ ಅಪಾರಜ್ಞಾನ, ಪರಿಸರ ಕಾಳಜಿ ನಿಜಕ್ಕೂ ಶ್ಲಾಘನೀಯವೆನ್ನಿಸಿತು. ಜೊತೆಗೆ ಇಂಥ ತಜ್ಞರುಗಳ ಅನುಭವಾಮೃತವು ಭಾರತದ ಪರಿಸರ ಸಂರಕ್ಷಣೆಯಲ್ಲೂ ಯಶಸ್ಸು ಕಾಣಲಿದೆ  ಎಂದು ಅನ್ನಿಸಿತು.

ಹಾಗಾಗಿ ಸಂವಾದದ ಅಂತಿಮ ಸುತ್ತಿನಲ್ಲಿ,ಬಹಳ ಹಿಂದಿನಿಂದ ನನ್ನ ಕಾಡುತ್ತಿದ್ದ ವಿಷಯವೊಂದನ್ನೆತ್ತಿ ಅವರೊಡನೆ ಮಾತಾಡಿದೆ. ಕಾರಣ, ಈ ಸಂಶೋಧಕರು ಹಿಂದೆ ಪತ್ರಿಕೆಯೊಂದರಲ್ಲಿ ಹಾವುಗಳ ಸಂರಕ್ಷಣೆಯ ಕುರಿತು ಮಾತನಾಡಿ,‘ಒಂದು ಕಡೆಯಿಂದ ಹಿಡಿದ ಹಾವುಗಳನ್ನು ಬೇರೆಡೆಗೆ ಕೊಂಡೊಯ್ದು ಬಿಡುವುದಕ್ಕಿಂತ ಸಾಯಿಸುವುದೇ ಲೇಸು!’ಎಂಬ ಹೇಳಿಕೆ ನೀಡಿದ್ದರು.ಅಂದರೆ ಅಂಥ ಹಾವುಗಳು  ಬೇರೆಡೆ  ಬದುಕುವುದೇ ಇಲ್ಲ ಎಂಬುದು ಅವರ ಮಾತಿನರ್ಥವಾಗಿತ್ತು. ಹಾಗಾಗಿ ನಾನಿಂದು ಅವರೊಡನೆ ಅದಕ್ಕೆ ಆಧಾರವನ್ನು ಕೇಳಿದೆ. ಆದರೆ ಅವರು ಈಗಲೂ ಅದನ್ನೇ ಸಮರ್ಥಿಕೊಂಡರಲ್ಲದೇ ಅದಕ್ಕೆ ಚಿರತೆಯ ಜೀವನದ ಉದಾಹರಣೆಯನ್ನು ನೀಡುತ್ತ ವಾದಿಸಿದರು. ಆದುದರಿಂದ ನನ್ನಲ್ಲಿ ವೈಜ್ಞಾನಿಕ  ಸಂಶೋಧನೆಯ ಮೇಲೆ ಸಣ್ಣ ಅನುಮಾನವೊಂದು ಮೂಡಲು ಕಾರಣವಾಯಿತು. ಏಕೆಂದರೆ ಜೀವಜಾಲದ ವಿಕಾಸ  ಮತ್ತು ಬದುಕಿನ ಪ್ರಕ್ರಿಯೆಯಲ್ಲಿ ಚಿರತೆ ಹಾಗೂ ಹಾವುಗಳ ಜೀವನ ಶೈಲಿಗೆ ಅಜಗಜಾಂತರವಿದೆ. ಹೀಗಾಗಿ ಹಾವುಗಳ ವಿಷಯದಲ್ಲಿ ಈ ಸಂಶೋಧಕರ ಉದಾಹರಣೆ ಸತ್ಯಕ್ಕೆ ದೂರವಾಗಿತ್ತು. ನನ್ನ ಪ್ರಶ್ನೆಗೆ ಉತ್ತರಿಸಲು ಹೊರಟ, ಅವರೊಂದಿಗಿದ್ದ ಇನ್ನೋರ್ವ ವನ್ಯಜೀವಿಶಾಸ್ತ್ರಜ್ಞರು ಕೂಡಾ ಸಂಶೋಧಕರ ನಿಲುವನ್ನೇ ಸಮರ್ಥಿಸಿ ಕೊಂಡರು.ಆದರೆ ಅವರು ಅದಕ್ಕೆ ಬಳಸಿದ್ದು ತಮ್ಮ ಸ್ವಾನುಭವದ ಆಧಾರವನ್ನಲ್ಲ, ಬದಲಿಗೆ ತಮ್ಮಿಬ್ಬರು ಎಳೆಯ ಉರಗಪ್ರೇಮಿ ಸ್ನೇಹಿತರ ಹೆಸರುಗಳನ್ನು ಉಲ್ಲೇಖಿಸುತ್ತ ಅವರ ಎರವಲು ಜ್ಞಾನದ ತಳಹದಿಯಲ್ಲಿಯೇ ಮಾತನಾಡಿದರು!

ಆದರೆ ವಿವಿಧ ಪ್ರಭೇದದ ಹಾವುಗಳ ಜೀವನ ಶೈಲಿ ಹೇಗಿರುತ್ತದೆ? ಆಯಾಯ ಪರಿಸರದಲ್ಲಿ ಅವುಗಳ ಮಿಲನ ಕ್ರಿಯೆ, ಸಂತಾನೋತ್ಪತ್ತಿ  ಹೇಗೆ ನಡೆಯುತ್ತದೆ? ಹೆಣ್ಣು ಹಾವೊಂದು ತಾನಿರುವ ಸಹಜ ಪರಿಸ್ಥಿತಿಯಲ್ಲಿ ಹೊಟ್ಟೆಯಿಂದ  ಮೊಟ್ಟೆಯೊಂದನ್ನು ಹೊರಗೆ ಹಾಕಲು ಎಷ್ಟು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ? ಆ ಸಮಯದಲ್ಲಿ ಆಕಸ್ಮತ್ತಾಗಿ ಅದರ ಸಮೀಪ ಶತ್ರು ಜೀವಿಯೊಂದು ಸುಳಿದರೆ ಹಾಗೂ ಅಷ್ಟರಲ್ಲಿ ಮುಂದಿನ ಮೊಟ್ಟೆಯು ಅರ್ಧ ಹೊರಗೆ ಬಂದಿದ್ದರೆ ಅದು ಪೂರ್ತಿ ಕೆಳಗೆ ಬೀಳಲು ಮತ್ತೆಷ್ಟು ಹೊತ್ತು ಬೇಕಾಗುತ್ತದೆ? ಆ ಸಮಯದಲ್ಲಿ ಹೆಣ್ಣು ಹಾವಿನ ವರ್ತನೆ ಹೇಗಿರುತ್ತದೆ? ಅನೇಕ ಜಾತಿ, ಪ್ರಭೇದದ ಹಾವುಗಳು ಮನುಷ್ಯರ ಪರಿಸರದೊಳಗೆಯೇ ಬದುಕಲು ಏಕೆ ಇಷ್ಟಪಡುತ್ತವೆ. ಅವುಗಳ ಅಂಥ ಸ್ವಭಾವದಿಂದ ಸಂಬಂಧಪಟ್ಟ ಪರಿಸರಕ್ಕೂ ಮುಖ್ಯವಾಗಿ ಜನಜೀವನಕ್ಕೂ  ಆಗುವ ಲಾಭ, ನಷ್ಟಗಳು ಯಾವ ಬಗೆಯವು? ಆಧುನಿಕ ಜನಜೀವನದಲ್ಲಿ ನಾನಾ ಕಾರಣಗಳಿಂದ ಹಾನಿಗೊಳ್ಳುವ ಹಾವುಗಳ ಗುಣ, ಸ್ವಭಾವ ಮತ್ತು ಪ್ರತಿಕ್ರಿಯೆಗಳು ಹೇಗಿರುತ್ತವೆ? ಎಂಬುದನ್ನು ನಿರಂತರ ಗ್ರಹಿಸುವುದು ಒಂದಷ್ಟು ಕಾಲ ನನ್ನಇಷ್ಟದ ಹವ್ಯಾಸವಾಗಿ ಬಿಟ್ಟಿತ್ತು.

ಆದುದರಿಂದ ಅರಣ್ಯ ಇಲಾಖೆಯ ಅನುಮತಿಪತ್ರ  ಹಾಗೂ ಸಹಕಾರದೊಂದಿಗೆ ಜನವಸತಿಗಳಿಗೆ ನುಗ್ಗಿ, ನುಸುಳಿ ಭಯಾತಂಕ ಸೃಷ್ಟಿಸುತ್ತಿದ್ದ ಸುಮಾರು ಇಪ್ಪತ್ತಾರು ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದದ್ದಿದೆ ಮತ್ತು ಅವುಗಳನ್ನು ಕೊಂಡೊಯ್ದು ಮನಬಂದಂತೆ ಎಲ್ಲೆಲ್ಲೋ ಎಸೆದು ಬಿಟ್ಟರೆ ನನ್ನ ಕೆಲಸ ಮುಗಿಯಿತು ಎಂದು ಕೊಳ್ಳುವ ತಪ್ಪೆನ್ನೆಂದೂ ನಾನು ಮಾಡಿಲ್ಲ. ಬದಲಿಗೆ ಹಿಡಿದ ಪ್ರತಿ ಹಾವಿನ ಕುರಿತಾಗಿಯೂ ಕಾಳಜಿ ವಹಿಸಿ, ಅದಕ್ಕೆಮುಂದೆಎಂಥ ನೆಲೆಯ ಅಗತ್ಯವಿದೆ ಎಂಬುದನ್ನು, ಅದನ್ನು ಹಿಡಿದ ಪರಿಸರದಿಂದಲೇ ಗ್ರಹಿಸಿ ಸೂಕ್ತ ಪ್ರದೇಶಗಳಲ್ಲಿ  ಬಿಡುಗಡೆ ಗೊಳಿಸುತ್ತ ಬಂದವನು. ಹಾಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಲ್ಪಟ್ಟ ಹಾವೊಂದರ ಹಲವಾರು ಗಂಟೆಗಳವರೆಗಿನ ವರ್ತನೆ, ನಡವಳಿಕೆಗಳು ಹೇಗಿರುತ್ತವೆ? ಹೊಸ ಪ್ರದೇಶದಲ್ಲಿ ಅದು ತನ್ನ ಬದುಕು ಕಟ್ಟಿಕೊಳ್ಳಲು ಯಾವ ರೀತಿಯ ಶ್ರಮ ಮತ್ತು ಅರಿವನ್ನು ಪ್ರದರ್ಶಿಸುತ್ತದೆ? ಹಾಗೆ ಬಿಡುಗಡೆಗೊಂಡ ಹಾವುಗಳ ಸುತ್ತಮುತ್ತಲಿನ  ಪ್ರದೇಶದ ಜೀವ ವರ್ಗ ಹಾಗೂ ಜನ ಜೀವನದಲ್ಲಿ ನಡೆಯುವ ಬದಲಾವಣೆಗಳೇನು? ಎಂಬಂಥ ವಿಚಾರಗಳನ್ನೆಲ್ಲ ಒಂದಷ್ಟು ಹಾವುಗಳ ಕಳೆಬರಗಳು ತುಂಬಿದ ಪ್ರಯೋಗಾಲಯದೊಳಗೆ ಕುಳಿತು ಅಧ್ಯಯನಿಸದೆ, ತೀರದ ಆಸಕ್ತಿಯಿಂದ ಜೀವಂತ ಹಾವುಗಳ  ಹಿಂದೆಯೇ ಬಿದ್ದು, ಯಾವುದೇ ವೈಜ್ಞಾನಿಕ ಯಂತ್ರ, ಸಲಕರಣೆಗಳ ಸಹಾಯವಿಲ್ಲದೆ,(ಮುನ್ನೂರು, ನಾಲ್ನೂರು ವರ್ಷಗಳಷ್ಟು ಹಿಂದಿನ ಸಂಶೋಧಕರುಗಳೆಲ್ಲ ಈಗಿನಂತಹ ಯಾವುದೇ ವೈಜ್ಞಾನಿಕತೆಯ ಸ್ಪರ್ಶ, ಸಹಾಯವಿಲ್ಲದೆ ಸಿದ್ಧಿಸಿಕೊಂಡ ಶುದ್ಧ ಪ್ರಾಕೃತಿಕ ಜ್ಞಾನದ ತಳಹದಿಯಲ್ಲಿಯೇ ಇಂದಿನ ವಿಜ್ಞಾನವು ಬೆಳೆದು ಬಂದಿರುವುದು!) ಛಾಯಾಚಿತ್ರ, ವಿಡೀಯೋ ದೃಶ್ಯಾವಳಿ ಹಾಗೂ ಬರಹಗಳ ಮೂಲಕವೇ ದಾಖಲಿಸಿಕೊಳ್ಳುತ್ತ, ನಡುನಡುವೆ ಹದಿಮೂರು ಬಾರಿ ವಿಷಪೂರಿತ ಹಾವುಗಳ ಕಡಿತಗಳಿಗೂ ಒಳಗಾಗಿ, ಒಮ್ಮೆ ಮಾರಾಣಾಂತಿಕವೆನಿಸಿದ‘ಕೋಮಾ’ಸ್ಥಿತಿಗೂ ತಲುಪಿ, ಅವೆಲ್ಲವನ್ನು ಅಧ್ಯಯನದ ಭಾಗವನ್ನಾಗಿ ಸ್ವೀಕರಿಸಿ, ಅದರಿಂದ ದೊರೆತ ಕಿಂಚಿತ್ತ್‍ ಅನುಭವವನ್ನು ಸಮಾಜದೊಂದಿಗೆ ಹಂಚಿಕೊಳ್ಳುತ್ತ, ಹಾವುಗಳ ಬಗೆಗಿನ ಅಜ್ಞಾನ, ಮೌಢ್ಯತೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತ ಬಂದವನು ನಾನು. ಹೀಗಾಗಿ ಇಂಥ ಅನುಭವದ ನೆಲೆಯಲ್ಲಿ ವನ್ಯಜೀವಿ ಜೀವಶಾಸ್ತ್ರಜ್ಞರ ತಪ್ಪು ಹೇಳಿಕೆಗೆ ಇಂದು ಕೆಲವು ಸರಳ ಉದಾಹರಣೆಗಳ ಮೂಲಕ ಉತ್ತರಿಸುವ ಅಗತ್ಯವಿದೆ.

ಸ್ವತಃ ನನ್ನ ವಠಾರದಲ್ಲೂ, ಇನ್ನಿತರ ಜನ ವಸತಿಗಳಲ್ಲೂ ನಡೆದ ಹಲವಾರು ಘಟನೆಗಳನ್ನು ಗಮನಿಸುತ್ತ ಬಂದ ನಂತರ ನಾವು ಮತ್ತು ಕೆಲವು ವನ್ಯಜೀವಿ ಶಾಸ್ತ್ರಜ್ಞರು ತಿಳಿದಿರುವಷ್ಟು ಹಾವುಗಳನ್ನು ಪ್ರಕೃತಿಯು ದುರ್ಬಲವಾಗಿ ಸೃಷ್ಟಿಸಿಲ್ಲ ಎಂಬುದು ಸಾಬೀತಾಗುತ್ತದೆ.ಕೆಲವು ಕಾಲದ ಹಿಂದೆ ವಿಟ್ಹೇಕರ್ಸ್‍ಬೋವಾ (eryxwhitakeri) ಎಂಬ ನಿರುಪದ್ರವಿ ಹಾವೊಂದು ಆಕಸ್ಮತ್ತಾಗಿ ಒಂದು ರಾತ್ರಿ ನನ್ನ ಸುಪರ್ದಿಯಿಂದ ತಪ್ಪಿಸಿ ಕೊಂಡಿತು.ಆದರೆ ಏಳು ತಿಂಗಳ ನಂತರ ಅದು ಸುಮಾರು ಇನ್ನೂರು ಮೀಟರ್‍ದೂರದ ಮನೆಯೊಂದರ ಅಂಗಳದಲ್ಲಿ ಮರಳಿ ಸಿಕ್ಕಿತು. ಖುಷಿಯ ಸಂಗತಿಯೆಂದರೆ,ಅದು ತಪ್ಪಿಸಿ ಕೊಂಡಾಗ ಇದ್ದುದಕ್ಕಿಂತಲೂ ದುಪ್ಪಟ್ಟು ದಷ್ಟಪುಷ್ಟವಾಗಿ ಬೆಳೆದಿತ್ತು!ಅಲ್ಲದೆ ಅದೇ ವಠಾರದಲ್ಲಿ ಈ ಹಿಂದೆ ಇನ್ನೂ ಕೆಲವು ವಿಟ್ಹೇಕರ್ಸ್ ಬೋವಾಗಳೂ ದೊರೆತಿದ್ದವು.ಆದರೂ ಅದೇ ಹಾವು ಮರಳಿ ಲಭಿಸಿದ್ದಕ್ಕೆ ಸಾಕ್ಷಿಯಾದುದು,ಇತರ ವಿಟ್ಹೇಕರ್ಸ್ ಬೋವಾಗಳಿಗಿಂತಲೂ ಈ ಹಾವಿನ ಬಾಲದ ತುದಿಯು ಹೆಚ್ಚು ಮೊಂಡಾಗಿ, ಕೆಲವು ವಿಶಿಷ್ಟ ಕಲೆಗಳಿಂದ ಕೂಡಿದ್ದುದನ್ನು ನಾನು ಮೊದಲೇ ದಾಖಲಿಸಿ ಕೊಂಡಿದ್ದೆ.

ಇಲಿ, ಹೆಗ್ಗಣ ಮತ್ತು ಹಲ್ಲಿಗಳ ಸಮಸ್ಯೆನಿವಾರಿಸಲು ಕೆಲವು ವಠಾರದಲ್ಲಿ ಬಿಟ್ಟಂಥ ಹತ್ತಾರು ವಿಷರಹಿತ ಕೇರೆಹಾವು, ಟ್ರಿಂಕೆಟ್ ಹಾವು, ಕುಕ್ರಿಹಾವು ಮತ್ತು ತೋಳಹಾವುಗಳು ಈಗಲೂ ಆರೋಗ್ಯವಂತವಾಗಿ ಬದುಕುತ್ತಿವೆ. ಹಾಗಾಗಿ ಆ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಮೂಷಿಕ ಮತ್ತಿತರ ಜೀವಿಗಳ ತೊಂದರೆಯೂ ಗಣನೀಯವಾಗಿ ಹತೋಟಿಗೆ ಬಂದಿರುವುದನ್ನು ಗಮನಿಸಿರುವುದುಂಟು. ನಿಸರ್ಗವು ತಾನು ಸೃಷ್ಟಿಸುವ ಪ್ರತಿಯೊಂದು ಜೀವಿಗೂ ತನ್ನಲ್ಲಿ ಆಗಾಗ ಉಲ್ಭಣಿಸುವ ವಿಷಮ, ವಿಕೋಪ ಪರಿಸ್ಥಿತಿಗಳನ್ನು ಎದುರಿಸಿ ಬದುಕ ಬಲ್ಲಂತಹ‘ಹುಟ್ಟರಿವು’ಎಂಬ ಜ್ಞಾನವನ್ನು ನೀಡಿರುತ್ತದೆ. ಹೌದು, ಆಕಸ್ಮತ್ತಾಗಿ ಅಪರಿಚಿತ ಪ್ರದೇಶಕ್ಕೆ  ವರ್ಗಾವಣೆಗೊಂಡ ಹಾವುಗಳು ಕೆಲವು ದಿನಗಳ ಕಾಲ ಅತಂತ್ರವಾಗಿ ಸುತ್ತಾಡುತ್ತ  ಬಳಲ ಬಹುದು. ಆದರೆ ಶೀತರಕ್ತ ಜೀವಿಗಳಾಗಿದ್ದು ದೀರ್ಘಕಾಲ ಉಪವಾಸವಿರುವ ಶಕ್ತಿಯುಳ್ಳ ಅವುಗಳು ಕೆಲವೇ ದಿನಗಳೊಳಗೆ ಅಲ್ಲಿ ತಮಗೆ ಬೇಕಾದ ಸೂಕ್ತ ವಲಯವನ್ನು ಆಯ್ದು ಕೊಂಡು ಅಲ್ಲಿನ ಜೀವರಾಶಿಗಳೊಂದಿಗೆ ನಿಸರ್ಗ ನಿಯಮದ ಪ್ರಕಾರ ಒಂದು ಬಗೆಯ ಒಪ್ಪಂದ ಹಾಗೂ ಸಾಮರಸ್ಯವನ್ನು ಬೆಳೆಸಿಕೊಂಡು ಬದುಕುತ್ತವೆ ಅಥವಾ ಕೆಲವು ದುರ್ಬಲ ಹಾವುಗಳು ಅಲ್ಲಿನ ಭಕ್ಷಕ ಜೀವಿಗಳಿಗೆ ಆಹಾರವಾಗುವ ಮೂಲಕ ಅಲ್ಲಿನ ಪರಿಸರ ಸಮತೋಲನ ಪ್ರಕ್ರಿಯೆಯಲ್ಲಿ ನವಚೈತನ್ಯ ಹಾಗೂ ಹೊಸ ಜೀವ ಸೃಷ್ಟಿಗೂ ಕಾರಣ ವಾಗಬಹುದು. ಇಂಥ ಸೂಕ್ಷ್ಮಗಳನ್ನು ಸಂಶೋಧಿಸದೆ,‘ಒಂದು ಕಡೆಯಿಂದ ಹಿಡಿದು ಇನ್ನೊಂದು ಕಡೆಗೆ ಬಿಟ್ಟ ಹಾವುಗಳೆಲ್ಲ ಹೊಟ್ಟೆಗಿಲ್ಲದೆ ಸತ್ತು ಹೋಗುತ್ತವೆ!’ ಎನ್ನುವುದು ಅಧ್ಯಯನಶೀಲ ಮನಸ್ಸುಗಳಿಗೆ ಒಪ್ಪುವಂಥದ್ದಲ್ಲ.

ಸುಮಾರು ಮೂರೂವರೆ ದಶಕಗಳಿಂದ ಉರಗ ಜೀವಿಗಳೊಂದಿಗೂ, ಅವಕ್ಕೆ ಸಂಬಂಧಿಸಿದ ಜನ ಜೀವನದೊಂದಿಗೂ ನಿರಂತರ ಒಡನಾಡುತ್ತ ತಿಳಿದ ಒಂದು ವಿಷಾದಕರ ಸಂಗತಿಯೆಂದರೆ, ಎಂಥೆಂಥ ಬುದ್ಧಿವಂತರೇ ಇರಲಿ ಅಥವಾ ಮೊನ್ನೆ ಮೊನ್ನೆಯಷ್ಟೇ ವಿಜ್ಞಾನ ಲೋಕಕ್ಕೆ ಕಾಲಿಟ್ಟ ಇಂದಿನವರೇ ಇರಲಿ ಅವರಲ್ಲಿ ಬಹುತೇಕರಿಗೆ ಪ್ರಕೃತಿಯ ಜೀವಜಾಲ ವ್ಯವಸ್ಥೆಯಲ್ಲಿ ಅಮೂಲ್ಯ ಪಾತ್ರಗಳನ್ನು ನಿರ್ವಹಿಸುವ ಹಾಗೂ ಹುಟ್ಟಿ ಸಾಯುವವರೆಗೆ ಜನ ಜೀವನದ ಏಳಿಗೆಯ ಭಾಗವಾಗಿಯೇ ಬದುಕು ಸವೆಸುವ ಹಾವುಗಳಂಥ ಅಪೂರ್ವ ಜೀವರಾಶಿಗಳ ಕುರಿತು ಸೂಕ್ತ ಅರಿವೇ ಇಲ್ಲ ಎನ್ನುವುದು ಒಂದೆಡೆಯಾದರೆ,ಇನ್ನೊಂದೆಡೆ ಆ ಕುರಿತು ಅನೇಕ ಸಾಧಕರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಗಳಿಸಿದ ಜ್ಞಾನಾನುಭವವನ್ನು ಒಪ್ಪದ, ಸ್ವೀಕರಿಸದಂಥ ಮನಸ್ಥಿತಿಯೂ ಬೆಳೆಯ ತೊಡಗಿರುವುದನ್ನು ಕಾಣುತ್ತ ಬಂದಿರುವುದರಿಂದ ಮುಂದಿನ ಪೀಳಿಗೆಯ ಆರೋಗ್ಯಪೂರ್ಣ ಜೀವನದ ಕುರಿತು ಆತಂಕ ಮೂಡುತ್ತದೆ!

ಇದೇ ವನ್ಯಜೀವಿ ಶಾಸ್ತ್ರಜ್ಞರು ಸಂವಾದದಲ್ಲಿ ಮುಂದುವರೆದು, ‘ಹಾವುಗಳಿಗೆ ಸಂವೇದನಾಶೀಲ ಶಕ್ತಿಯೂಇಲ್ಲ!’ ಎಂದು ವಾದಿಸಿದರು. ಅಂದರೆ ಅವು ಮನುಷ್ಯನ ಅಥವಾ ಇತರ ಮೂಕ ಜೀವರಾಶಿಗಳ ಸ್ನೇಹ, ಪ್ರೀತಿ, ಕ್ರೋಧಗಳಂಥ ಭಾವತರಂಗಗಳನ್ನು  ಗ್ರಹಿಸಲಾರವು ಎಂಬುದು ಅವರವಾದ.ಆದರೆ ಹಾವುಗಳು ಮಾತ್ರವೇ ಅಲ್ಲ, ನಿಸರ್ಗದ ಸಮಸ್ತ ಜೀವರಾಶಿಗಳಿಗೂ ಅಂಥಸೂಕ್ಷ್ಮ ಸಂವೇದನಾಶೀಲ ಶಕ್ತಿಯಿದೆ.ಅದಿಲ್ಲದ ಯಾವಜೀವಿಯೂ ಹುಟ್ಟು ಹೋರಾಟದ ಈ ಪ್ರಕೃತಿಯಲ್ಲಿ ಬದುಕಿ ಬಾಳಲಾರದು. ಹಾವುಗಳು ಪ್ರಕೃತಿಯ ಬಾಹ್ಯ ಆಗುಹೋಗುಗಳನ್ನು ಹೇಗೆ ಗುರುತಿಸುತ್ತವೆಯೋ ಹಾಗೆಯೇ ಮನುಷ್ಯರ ಮತ್ತಿತರ ಜೀವರಾಶಿಗಳ ಮನಸ್ಸಿನ ಭಾವಾವೇಶಗಳನ್ನೂ ಗ್ರಹಿಸುವ ಹಾಗೂ ಅದಕ್ಕೆತಕ್ಕಂತೆ ಪ್ರತಿಕ್ರಿಯಿಸುವ ಬುದ್ಧಿಮತ್ತೆಯನ್ನೂ ಹೊಂದಿವೆ ಎಂಬುದು ಅನುಭವದ ಸತ್ಯ.ಆದರೆ ಪ್ರತಿ ವಿಷಯವನ್ನೂ ವೈಜ್ಞಾನಿಕ‘ಕನ್ನಡಕ’ದ ಮೂಲಕ ನೋಡಿದರೆ ಮಾತ್ರವೇ ಸತ್ಯ! ಎನ್ನುವ ಮನಸ್ಸುಗಳಿಗೆ ನಿಸರ್ಗದ ಬಹುತೇಕ ಸೂಕ್ಷ್ಮಗಳು ಅರಿವಿಗೆ ಬರಲು ಸಾಧ್ಯವಿಲ್ಲ.ಅದನ್ನು ತಿಳಿಯಬೇಕಿದ್ದರೆ,‘ಈ ಪ್ರಕೃತಿಯ ಸರ್ವ ಜೀವರಾಶಿಗಳಂತೆಯೇ ನಮ್ಮ ಸೃಷ್ಟಿಯೂ ಕೂಡಾ!’ಎಂಬ ಅರಿವನ್ನು ನಾವು ಎಚ್ಚರಿಸಿಕೊಳ್ಳಬೇಕು.

ಭಾರತದಲ್ಲಿ ಸಾವಿರಾರು ಉರಗಪ್ರೇಮಿಗಳು, ಸಂರಕ್ಷಕರು ಮತ್ತು ತಜ್ಞರು ತಮ್ಮ ಪ್ರಾಣವನ್ನು ಪಣವಾಗಿಟ್ಟು ಕೊಂಡು ಹಾವುಗಳನ್ನೂ ಅವುಗಳಿಗೆ ಸಂಬಂಧಿಸಿದ ಜೀವಜಾಲವನ್ನೂ ಕಾಪಾಡುವ, ಪ್ರಕೃತಿ ಪ್ರೇರಿತವಾದ ಶ್ರೇಷ್ಠ ಕಾಯಕದಲ್ಲಿ ತೊಡಗಿದ್ದಾರೆ. ಅಂಥವರು ಯಾವುದೇ‘ಡಾಕ್ಟರೇಟ್’ ಪದವಿ ಪಡೆಯದಿದ್ದರೂ ಅವರ ಅಧ್ಯಯನದಿಂದ ದಕ್ಕಿದ ಜ್ಞಾನ ಹಾಗೂ ಸಹಕಾರದಿಂದಲೇ ವನ್ಯಜೀವಿ ವಿಜ್ಞಾನ ಹುಟ್ಟಿ ಬೆಳೆದಿರುವುದು ಹಾಗೂ ಅದನ್ನೇ ಇಂದಿನ ವಿಶ್ವವಿದ್ಯಾಲಯಗಳೂ ಬೋಧಿಸುತ್ತಿರುವುದು! ಆದುದರಿಂದ ನಮ್ಮ ಒಂದಷ್ಟು ವೈಜ್ಞಾನಿಕ ತಿಳುವಳಿಕೆ ಮತ್ತು ಹೇಳಿಕೆಗಳು ಅಂಥ ಸಾಧಕರ ಪರಿಶ್ರಮಗಳನ್ನೆಲ್ಲ,‘ನೀರಿನಲ್ಲಿಟ್ಟ ಹೋಮಕ್ಕೆ ಸಮ!’ ಎಂಬಂತೆ ಬಿಂಬಿಸದಿರಲಿ ಹಾಗೂ ಉರಗಜೀವಿಗಳ ಕುರಿತು ಯುವ ಪೀಳಿಗೆಯ ಮುಂದೆ ಅಧಿಕೃತವಾಗಿ ಮಾತನಾಡಲು ಹೊರಡುವ ಯಾರೇ ಆದರೂ ಸ್ವಾನುಭವದ ನೆಲೆಯಲ್ಲೇ ವ್ಯವಹರಿಸಲಿ ಎಂಬುದು ನನ್ನ ವಿನಂತಿ. ಏಕೆಂದರೆ ಅಂಥ ವ್ಯಕ್ತಿತ್ವ ಮತ್ತು ನಿಲುವುಗಳು ಮಾತ್ರವೇ ಪರಿಸರ ಸಂರಕ್ಷಣೆಯಲ್ಲಿ ನೈಜ ಪಾತ್ರವನ್ನು ನಿರ್ವಹಿಸಬಲ್ಲವು.

*ಗುರುರಾಜ ಸನಿಲ್,ಉಡುಪಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ಪ್ರಕೃತಿದತ್ತ ಜ್ಞಾನದ ನಿರಾಕರಣೆ ವಿಜ್ಞಾನಕ್ಕೆ ತುಂಬಲಾಗದ ನಷ್ಟ!”

  1. ಅನಿತಾ ಪಿ ತಾಕೊಡೆ

    ಪ್ರಕೃತಿ ಹಾಗೂ ಅಲ್ಲಿರುವ ಜೀವಿಗಳ ಕುರಿತು ತಮ್ಮ ಅಧ್ಯಯನ ಹಾಗೂ ಅನುಭವಗಳಿಂದ ಕಂಡುಕೊಂಡ ವಿಚಾರಗಳನ್ನು ಈ ಲೇಖನದಲ್ಲಿ ಅರ್ಥವತ್ತಾಗಿ ಉದಾಹರಣೆ ಸಮೇತ ವಿವರಿಸಿದ್ದೀರಿ. ಅಭಿನಂದನೆ ಸರ್. 🙏

  2. ನಿಮ್ಮ ೨ ನಿದರ್ಶನಗಳು ನಿಜವಾಗಿಯೂ ಸತ್ಯ, ನಮ್ಮಲ್ಲಿ ಪುಸ್ತಕ ಪಂಡಿತರು ತುಂಬಾ ಜನ ಸಿಗುತ್ತಾರೆ, ಮತ್ತೆ ತಮ್ಮ ತಪ್ಪನ್ನು ಒಪ್ಪದೇ ಏರುವುದು ಅವರ ಸಣ್ಣತನ ಅಂತ ನನ್ನ ಅನಿಸಿಕೆ,

    ಒಳ್ಳೆಯ ವಿಷಯವನ್ನು ಹೇಳಿದ್ದಿರಿ.

    1. Gururaj sanil, udupi

      ಹೌದು, ಅವರ‌ ಮೇಲರಿಮೆಯು ಯುವಪೀಳಿಗೆಯ ಅಜ್ಞಾನಕ್ಕೆ ಗುರಿಯಾದರೇ…? ಎಂಬ ಚಿಂತೆಯೇ ಬರೆಯಿಸಿತು ಸರ್. ಪ್ರತಿಕ್ರಿಯೆಗೆ ಧನ್ಯವಾದ…

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter