ಸಮುದ್ರದೆದುರು

ಬರಲಾರೆ ನಿನ್ನೊಳಗೆ ಎನ್ನುವಂತಿದೆ ಸಮುದ್ರ

ಸಮುದ್ರವೆ ಆಗಿ ಸಮುದ್ರ !

ನಿಂತರೆ ಎಂಟೆದೆಯವನೂ ಅದರೆದುರು

ಸ್ವತಃ ಆಗುತ್ತಾನೆ ಸಮುದ್ರ !      

  

ಹೇಗೆ ಏಳುತ್ತಿವೆ ನೋಡಿ ಅಲೆಗಳು

ಒಂದು ಇನ್ನೊಂದನ್ನು ತುಳಿದು

ಮನಸ್ಸು ಎಷ್ಟೇ ತೆರೆಗಳನ್ನೆಬ್ಬಿಸಿದರೂ

ಹೀಗೆ ಅಬ್ಬರಿಸದು ಒಳಗೂ !     

ಏನೋ ಹೇಳುವಂತಿದೆಯಲ್ಲ, ಏನು ?

ಮೀರಿದೆಯೆ ಅದು ಭಾಷೆ ?

ಅಥವಾ ಕೋಪ ಅಸಹಾಯಕತೆ ವಿಷಾದ

ಎಲ್ಲವೂ ಇಲ್ಲಿ ಆಗಿ ಕ್ಲೀಷೆ !

ನನ್ನೊಳಗಿದ್ದುದನ್ನು ಕೊಡಲಾರೆ ನಾನು

ಅದೂ ಕೊಡಲಾರದು ಏನನ್ನೂ

ಕೊಡುವ ಕೊಂಬುವ ಸಂಬಂಧವನ್ನು ಮೀರಿ

ಇರುವುದೇ ಸಮುದ್ರ, ಸಮುದ್ರವೆಂದು !     

ನದಿಯಾಗಿರುತ್ತಿದ್ದರೆ ನಾನಿಲ್ಲಿಗೆ ಬಂದು

ಸೇರುತ್ತಿದ್ದೆ ಸಮುದ್ರವ ಎಂಬ ಕನಸು

ಹುಟ್ಟುತಲೆ ಸತ್ತುಹೋಗಿದೆ, ಇದರ ನೋಡಿ

ನದವೂ ಸಮವಲ್ಲ ಇದಕ್ಕೆ ಎದುರಾಗಿ.    

*******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter