(‘ಪ್ರಿಯತಮ ‘ ಕಾವ್ಯನಾಮದ ಅಲೆವೂರು ಹರಿದಾಸ ಶೆಣೈ)
ಸಾಹಿತಿ ಪ್ರಿಯತಮ ಹೇಗಿದ್ದಾರೆ?
ಮೊನ್ನೆ ಮೊನ್ನೆಯವರೆಗೂ ನನ್ನಲ್ಲಿ ಹೀಗೆ ವಿಚಾರಿಸುತ್ತಿದ್ದವರಿಗೆ “ಮನೆಯೊಳಗೇ ಓಡಾಡುತ್ತಾ ಇದ್ದಾರೆ. ಹೊರಗಡೆ ಹೋಗುತ್ತಿಲ್ಲ. ನಾಲ್ಕು ವರ್ಷ ಹೆಚ್ಚಾಯ್ತು ,ಮನೆಯೊಳಗೇ ಇದ್ದಾರೆ ” ಎನ್ನುವ ಉತ್ತರವನ್ನು ನೀಡುತ್ತಿದ್ದೆ. ಆದರೆ ಸಾಹಿತಿ ಪ್ರಿಯತಮ ನಮ್ಮನ್ನು ಅಗಲಿದ್ದಾರೆ ಎನ್ನುವುದು ಬಹಳ ತಡವಾಗಿ ಅವರ ಮಗ ಹೇಳಿದಾಗಲೇ ಗೊತ್ತಾದುದು! ಅಷ್ಟೇ ಅಲ್ಲ, ಅವರ ಪತ್ನಿಯೂ ನಿಧನರಾದರು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ಇನ್ನೂ ತಿಳಿದಿರದ ಸಂಗತಿ. ಈಗ ವಿಶ್ವಧ್ವನಿ ಮೂಲಕ ತಿಳಿಯುತ್ತಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಹಾಸ್ಯಬರಹ ಲೇಖನಗಳಿಂದ ಜನಪ್ರಿಯರಾಗಿದ್ದ ಮುಂಬಯಿಯ ಮಲಾಡ್ ನಿವಾಸಿ ಸಾಹಿತಿ ಪ್ರಿಯತಮ( ಅಲೆವೂರು ಹರಿದಾಸ ಶೆಣೈ) 16 ಆಗಸ್ಟ್ 2021 ರಂದು ನಿಧನರಾಗಿದ್ದಾರೆ.ಅವರ ಪತ್ನಿ ಶೋಭಾ 24 ಸೆಪ್ಟಂಬರ್2021 ರಂದು ಅಲ್ಪ ಕಾಲದ ಅಸೌಖ್ಯದಿಂದ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದುದನ್ನು ಅವರ ಪುತ್ರ ವಿನಯ್ ತಿಳಿಸಿದ್ದಾರೆ. ಆಗಸ್ಟ್ 9 ರಂದು ಪ್ರಿಯತಮ ಅವರನ್ನು ಆಸ್ಪತ್ರೆಗೆ ಭರ್ತಿ ಗೊಳಿಸಲಾಗಿತ್ತು..ಅನಂತರ ಅವರಿಗೆ ಕೊರೊನಾ ಕಾಣಿಸಿತೆಂದು ಪುತ್ರ ತಿಳಿಸಿದ್ದು ಆಗಸ್ಟ್ 16 ರಂದು ನಿಧನರಾದರು. ಪ್ರಿಯತಮ ಅವರು 89 ನೇ ವರ್ಷದಲ್ಲಿ ನಿಧನರಾದರೆ, ಅವರ ಪತ್ನಿ ಶೋಭಾ 83 ರ ವಯಸ್ಸಿನಲ್ಲಿ ನಿಧನರಾದರು. ಕೊರೊನಾ ಎಂಬ ಕಾರಣದಿಂದ ಮನೆಯಲ್ಲೂ ಕ್ವಾರಂಟೇನ್ ಇದ್ದುದರಿಂದ ಹೇಳಲಾಗಲಿಲ್ಲವಂತೆ. ಪ್ರಿಯತಮ ಅವರ ಪುತ್ರ ವಿನಯ್ ಬಳಿ ನನ್ನ ನಂಬರ್ ಇದ್ದುದರಿಂದ ತಿಳಿಸಿದ್ದರು.
ಕರ್ನಾಟಕ ಮಲ್ಲದ ಜನಪ್ರಿಯ ಅಂಕಣ ಪ್ರತಿ ಮಂಗಳವಾರ ಬರುತ್ತಿದ್ದ ಪ್ರಿಯತಮರ ‘ಮುಖಾಂತರ’ಅಂಕಣ ನಿಂತು ಹಲವಾರು ವರ್ಷ ಕಳೆಯಿತು. ಸುಮಾರು ಎರಡು ದಶಕಗಳ ಕಾಲ ಪ್ರಿಯತಮ ಅವರು ಮುಖಾಂತರ ಅಂಕಣ ಬರಹಗಳನ್ನು ಬರೆದಿದ್ದರು .
ಈ ಎರಡು ವರ್ಷದಲ್ಲಿ (2020-2021) ಮಲಾಡ್ ನ ಅವರಿದ್ದ ಮನೆ ಕಡೆ ಹೋಗಲಾಗಿಲ್ಲ.2019 ರಲ್ಲಿ ಡಿಸೆಂಬರ್18 ಕ್ಕೆ ಕರ್ನಾಟಕ ಮಲ್ಲದಲ್ಲಿ ಅವರ ಕುರಿತು ಲೇಖನ ಬರೆದಿದ್ದೆ. ಆವಾಗ ಪ್ರಿಯತಮ ಅವರ ಮನೆಗೆ ಹೋಗಿ ಶುಭಾಶಯ ಸಲ್ಲಿಸಿದ್ದೇ ನಮ್ಮ ಕೊನೆಯ ಭೇಟಿ.
ಡಿಸೆಂಬರ್ 18 ಪ್ರಿಯತಮ ಅವರ ಜನ್ಮದಿನ. 2012 ಡಿಸೆಂಬರ್ 18ರಂದು ಪ್ರಿಯತಮ ಅವರಿಗೆ 80 ವರ್ಷ ತುಂಬಿದಾಗ ಕರ್ನಾಟಕ ಮಲ್ಲ ಕಛೇರಿಯಲ್ಲಿ ಅವರ ಹುಟ್ಟುಹಬ್ಬವನ್ನು ಅವರ ಜೊತೆ ಆಚರಿಸಿದ್ದೆವು. ಬಹಶ: ಅದೇ ಕೊನೆ.ಅನಂತರ ಅವರು ವಯೋಸಹಜವೆಂಬಂತೆ ಮಲಾಡ್ ನಿಂದ ಇಷ್ಟು ದೂರ ಲಾಲ್ ಬಾಗ್ ನ ಕರ್ನಾಟಕ ಮಲ್ಲ ಆಫೀಸಿಗೆ ಬರುವುದನ್ನು ನಿಲ್ಲಿಸಿದ್ದರು. ಮುಂಬೈಯಲ್ಲಿ ಅಂಕಣ ಬರಹಕ್ಕೆ ಒಂದು ಗಟ್ಟಿಯಾದ ರೂಪು ಸಿಕ್ಕಿದ್ದು ಕರ್ನಾಟಕ ಮಲ್ಲ ಆರಂಭವಾದ ನಂತರ ಅನ್ನಬಹುದು. ಅದಕ್ಕಿಂತ ಹಿಂದೆ ನುಡಿ, ತಾಯಿನುಡಿಗಳಲ್ಲೂ ಅಂಕಣ ಬರಹಗಳು ಬಂದದ್ದಿದೆ. 1993 ರಲ್ಲಿ ಡಿಸೆಂಬರ್ ನಲ್ಲಿ ಆರಂಭಗೊಂಡ ಪ್ರಿಯತಮರ ಮುಖಾಂತರ ಅಂಕಣದಲ್ಲಿ ಅವರು ಮುಟ್ಟದ ವಿಷಯಗಳೇ ಇಲ್ಲವೆನ್ನಬಹುದು .ಎರಡು ದಶಕಗಳ ಕಾಲ ನಿರಂತರ ಅಂಕಣವನ್ನು ಬರೆದಿದ್ದರು.
ಪ್ರಿಯತಮ ಎನ್ನುವುದು ಅವರ ಕಾವ್ಯನಾಮ . ಪೂರ್ಣಹೆಸರು -ಅಲೆವೂರು ಹರಿದಾಸ ಶೆಣೈ. ಅರ್ಥಾತ್ ಎ. ಎಚ್. ಶೆಣೈ. ಜನಿಸಿದ್ದು 1932 ಡಿಸೆಂಬರ್ 18. ಪ್ರಿಯತಮ ಅವರು 20 ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದರು .ಹಾಸ್ಯ ಅವುಗಳಲ್ಲಿ ಪ್ರಮುಖ .ಅವರ ಸಮಗ್ರ ಕಥಾ ಸಂಕಲನವೂ ಬಂದಿದೆ.ತಮ್ಮದೇ ಆದ ಮನುಕುಲ ಪ್ರಕಾಶನದ ಮೂಲಕ ಈವರೆಗೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರು. ಮನುಕುಲ ಎಂಬ ತ್ರೈಮಾಸಿಕವನ್ನು ಕೆಲಕಾಲ ಪ್ರಕಟಿಸಿ ನಿರಾಶರಾಗಿದ್ದರು . ಮಹಿಳೆಯರಿಗೆ ಇವರನ್ನು ಕಾವ್ಯನಾಮದಿಂದ ಕರೆಯುವುದು ಮುಜುಗರವಾಗಿತ್ತು. ಹಾಗಾಗಿ ಪತ್ರ ಬರೆಯುವಾಗ ಅಥವಾ ಸಮಾರಂಭಗಳಲ್ಲಿ ಕೆಲವರು ಇವರನ್ನು ಹೇಗಿದ್ದೀರಿ ‘ಪ್ರಿಯತಮ್ಮ’ ಎನ್ನುತ್ತಿದ್ದರಂತೆ.
ಉಡುಪಿಯಲ್ಲಿ ಮೆಟ್ರಿಕ್ ಮುಗಿಸಿ ಮುಂಬಯಿಯತ್ತ ಮುಖಮಾಡಿದ ಇವರು ‘ಒಂಟಿವಿಪ್ಲವ’ ಕೃತಿಯ ಮೂಲಕ ಕಥೆಗಾರರಾದರು. ನಾಲ್ಕು ಕತಾಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಹೆಸರು ತಂದುಕೊಟ್ಟ ಹಾಸ್ಯ ಸಂಕಲನವೆಂದರೆ ಟೋಪಿ, ಕಾಕಪುರಾಣ.ಒಟ್ಟು 10 ಹಾಸ್ಯ ಸಂಕಲನ ತಂದಿದ್ದಾರೆ.
ಇವರ ಆರಂಭದ ಬದುಕು ಸುಖಕರ ಆಗಿರಲಿಲ್ಲ. ಎರಡು ಮೂರು ಸಲ ಆತ್ಮಹತ್ಯೆ ಮಾಡಲು ಹೊರಟದ್ದೂ ಇದೆ. 19 ವರ್ಷದ ಹುಡುಗ ಊರಿನಿಂದ ಹೊಸ ಬದುಕನ್ನು ಅರಸುತ್ತಾ ಮುಂಬೈಗೆ ಬಂದದ್ದು ಸ್ಟೀಮರ್ ನಲ್ಲಿ. ಆಗ ಟಿಕೆಟ್ ದರ 12ರೂ ಇತ್ತು ಎಂಬ ನೆನಪು. 1951 ಡಿಸೆಂಬರಿನಲ್ಲಿ ಸ್ಟೀಮರ್ ಹತ್ತಿದ್ದರು. ಮುಂಬೈ ಮಹಾನಗರಕ್ಕೆ ಕಾಲಿಟ್ಟ ಹುಡುಗನ ತುಂಬಾ ನೂರಾರು ಕನಸುಗಳು…..
ಉಡುಪಿ ತಾಲೂಕಿನ ಅಲೆವೂರಿನ ಹರಿದಾಸ ಶೆಣೈ ಅವರ ಕುಟುಂಬ ದೊಡ್ಡದಿತ್ತು . ಅಲೆವೂರು ಗೋಪಾಲ ಶೆಣೈ ಮತ್ತು ಸುಂದರಿಬಾಯಿ ಶೆಣೈ ದಂಪತಿಗೆ ನಾಲ್ವರು ಮಕ್ಕಳು. ಹರಿದಾಸ ಶೆಣೈಅವರೊಬ್ಬರೆ ಗಂಡು. ಮೂವರು ತಂಗಿಯರು. ಸಂತೆಕಟ್ಟೆ ಯಲ್ಲಿ ಹೋಟೆಲ್ ಇತ್ತು. ಆದರೆ ಒಂದು ದಿನ ಅದಕ್ಕೆ ಬಾಗಿಲು ಹಾಕಿ ಉದ್ಯಾವರ ಕಿನ್ನಿಮೂಲ್ಕಿಯ ನಡುವಿನ ಬೈಲೂರು ಸಮೀಪದಲ್ಲಿ ಮನೆ ಪಡೆದರು. ಒಂದಷ್ಟು ತೆಂಗಿನ ಗಿಡಗಳು, ಚಿಕ್ಕ ವ್ಯಾಪಾರ .
ಬಾಲಕ ಹರಿದಾಸ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಓದುತ್ತಿದ್ದ. ಆರ್ಥಿಕವಾಗಿ ಹಿಂದುಳಿದ ಕುಟುಂಬ. ಮುಂದಿನ ಓದು ಕಷ್ಟವೆನಿಸಿ ನೌಕರಿಯ ಹುಡುಕಾಟಕ್ಕಿಳಿದ. ಸ್ವಲ್ಪ ಸಮಯ ಮುನಿಸಿಪಾಲಿಟಿಗಾಗಿ ಕಲೆಕ್ಷನ್ ಮಾಡುವ ಕೆಲಸ. ನಂತರ ಬಾಂಬೆ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಚೀಫ್ ಏಜಂಟರಾಗಿ ಕೆಲಸಮಾಡುತ್ತಿದ್ದ ಕೊಚ್ಚಿಕಾರ್ ಬ್ರದರ್ಸ್ ನಲ್ಲಿ ಕೆಲಸಕ್ಕೆ ಸೇರಿದರು. ಮುಂದೆ ಈ ಕಂಪೆನಿಯ ಮುಂಬಯಿ ಕಚೇರಿಯಲ್ಲಿ ಅವಕಾಶವಿದೆಯೆಂದು ಮುಂಬಯಿಗೆ ಪಯಣ. ಇಲ್ಲಿ ಸಂಬಳ 75 ರೂ. ಮಲಗುತ್ತಿದ್ದುದು ಆಫೀಸ್ ನಲ್ಲಿ. ಬ್ಯಾಗ್ ಎಲ್ಲ ಕಿಚನ್ ನ ಮೇಲ್ಗಡೆ. ಅದು ಉಡುಪಿಯ ಜಾತಿ ಬಾಂಧವರದ್ದಾಗಿತ್ತು .
1954 ರ ಸುಮಾರಿಗೆ ಸಂಬಳ 85 ರೂಪಾಯಿ ಆಯ್ತು. ಖರ್ಚು ಕಳೆದು ಊರಿಗೆ ರೂ.20 ಕಳುಹಿಸಬೇಕಿತ್ತು .ಒಂದು ದಿನ ಆಫೀಸಿನಲ್ಲಿ ಬರ ಸಿಡಿಲಿನ ಮಾತು: ಆಫೀಸ್ ಬಂದ್ ಮಾಡುವ ಸ್ಥಿತಿಯಲ್ಲಿದ್ದಾರೆ ಎಂದು. “ಮುಂದಿನ ಜನವರಿಯಲ್ಲಿ ಬೇರೆ ಕೆಲಸ ಹುಡುಕು, ನಿಲ್ಲುವ ವ್ಯವಸ್ಥೆಯನ್ನು ನೀನೆ ಮಾಡು….. “ಎಂಬ ಸಂದೇಶ .
ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು:
ಅದು ಡಿಸೆಂಬರ್ 26, 27 ,28 (1954).ಆ ದಿನಗಳನ್ನು ತಾನು ಎಂದೂ ಮರೆಯಲಾರೆ ಎನ್ನುತ್ತಿದ್ದರು ಪ್ರಿಯತಮ. ಈ ಮೂರು ದಿನವೂ ಚೌಪಾಟಿ ಬೀಚ್ ಗೆ ಹೋಗಿ ಅವರು ಕೂರುತ್ತಿದ್ದರು. ಅವರಿಗೆ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕಾಗಿತ್ತು. ಕತ್ತಲಾದಂತೆ ಅಲ್ಲಿಗೆ ಪೊಲೀಸರ ಸುತ್ತಾಟ .ಯಾರೂ ಇಲ್ಲಿ ಕೂತು ಕೊಳ್ಳಬಾರದು ಎಂದು ಕೂತವರನ್ನು ಆತ ಎಬ್ಬಿಸುತ್ತಿದ್ದ. ಆತ್ಮಹತ್ಯೆಗೆ ಮನಸ್ಸು ಮಾಡಿದ್ದ ಹರಿದಾಸರು ತಕ್ಷಣ ಎದ್ದು ಎಲ್ಲರ ಜೊತೆ ಹೊರಟರು. ಮರುದಿನವೂ ಹೀಗೇ ನಡೆಯಿತು. ಪ್ರಿಯತಮ ಇಷ್ಟರ ತನಕ ಬದುಕಿದ್ದರೆ ಅದರ ಶ್ರೇಯಸ್ಸು ಆ ಪೋಲೀಸಿನವರಿಗೆ ಎನ್ನುತ್ತಿದ್ದರು ನಮ್ಮಲ್ಲಿ ತಮಾಷೆಯಾಗಿ.
ಹರಿದಾಸರು ಆ ಮೂರು ದಿನವೂ ಆತ್ಮಹತ್ಯೆಗೆ ವಿಫಲರಾದ ನಂತರ ಮತ್ತೆ ಹೊಸ ಬದುಕಿನತ್ತ ಹೆಜ್ಜೆ ಇಡಲು ಗಟ್ಟಿಮನಸ್ಸು ಮಾಡಿದರು. ಮತ್ತೆ ಹೊಸ ಕೆಲಸದ ಹುಡುಕಾಟಕ್ಕೆ ಮನಸ್ಸು ಪರಿವರ್ತನೆಯಾಯಿತು .ಹಾಗೂ ಆಫೀಸಿಗೆ ಬರುತ್ತಿದ್ದ ದತ್ತಾತ್ರೇಯ ಶೆಣೈ ಅವರು ತಮ್ಮ ಸಂಬಂಧಿಕರಾದ ಪುರುಷೋತ್ತಮ ಶೆಣೈ ಅವರಲ್ಲಿಗೆ ಕರಕೊಂಡು ಬಂದರು. ಅವರು ಫೋರ್ಟ್ ನ ಆಫೀಸ್ ಒಂದರಲ್ಲಿ ಟೈಪಿಸ್ಟ್ ಕೆಲಸ ತೆಗೆಸಿಕೊಡುವುದಾಗಿ ಹೇಳಿದರು.ಅದು ಕಾಲಾಘೋಡ ಸಮೀಪದ ಎಸ್ಪ್ಲನೇಡ್ ಮ್ಯಾನ್ಶನ್ ನ (ಹಿಂದಿನ ವಾಟ್ಸನ್ ಹೋಟೆಲ್) ಮೂರನೇ ಮಾಳಿಗೆಯಲ್ಲಿನ ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಇಕಾನಾಮಿಕ್ ಕಚೇರಿಯಲ್ಲಿ ಟೈಪಿಸ್ಟ್ ಕೆಲಸಕ್ಕೆ ಸೇರಿಕೊಂಡರು. ಆಗ ಸಂಬಳ 110 ರೂಪಾಯಿ.ಅಂತೂ1955 ರಲ್ಲಿ ಹೊಸ ಕೆಲಸಕ್ಕೆ ಸೇರಿದರು.
ಜೊತೆಗೆ ಅಪೇರಾ ಹೌಸ್ ಎದುರಿಗೆ ಆ ಬದಿಯಲ್ಲಿನ ರಾಘವ ವಾಡಿಯಲ್ಲಿ ಇವರ ಸಂಬಂಧಿಕರ ರೂಮು ಸೇರಿಕೊಂಡರು. 25 ರೂಪಾಯಿ ಬಾಡಿಗೆ ಕೊಡಬೇಕಿತ್ತು .ಈ ನಡುವೆ ಕವಿ ಗಂಗಾಧರ ಚಿತ್ತಾಲರ ಪರಿಚಯದ ಪರಿಣಾಮವಾಗಿ ಉತ್ತರ ಕನ್ನಡದ ಹಳದೀಪುರದ ಶೋಭಾ ಅವರ ಪರಿಚಯವಾಗಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಪತ್ನಿಯ ಮೊದಲಿನ ಹೆಸರು ಸುನಂದ. ಪ್ರಿಯತಮರು ಇರಿಸಿದ ಹೆಸರು ಶೋಭಾ .
ಮದುವೆಯ ನಂತರ ಪತ್ನಿಯ ಅಕ್ಕನ ಮನೆಯಲ್ಲಿ ಸ್ವಲ್ಪ ಕಾಲ ಇದ್ದರು .ನಂತರ ಮಲಾಡ್ ಗೆ ಬಂದರು. ಅದು ಪಗ್ ಡಿ ಸಿಸ್ಟಮ್ ಮನೆ .25 ರೂ.ಬಾಡಿಗೆ. ಆಗ ನೆರವಿಗೆ ಬಂದವರು ಹನುಮಾನ್ ಟ್ರಾನ್ಸ್ ಪೋರ್ಟ್ ನ ರವೀಂದ್ರ ನಾಯಕ್.
ಅನಂತರ ಅದೇ ಚಾಳ್ ಬಿಲ್ಡಿಂಗ್ ಆಗಿ ಪರಿವರ್ತನೆಗೊಂಡಿತು.
ಪ್ರಿಯತಮ ಅವರಿಗೆ ಇಬ್ಬರು ಮಕ್ಕಳು. ವಿನಯ್ ಮತ್ತು ವಿದ್ಯಾ .1993 ರಲ್ಲಿ ಪ್ರಿಯತಮ ಸೇವಾ ನಿವೃತ್ತರಾದರು. ವಯೋಸಹಜ ಅನಾರೋಗ್ಯವಿದ್ದರೂ ಇತ್ತೀಚಿನ ವರೆಗೂ ಮನೆಯೊಳಗೆ ಓಡಾಡುತ್ತಿದ್ದರು ಎನ್ನುತ್ತಾರೆ ಮಗ ವಿನಯ್.
ನಿರಂತರ ಓದು-ಬರಹ ಪ್ರಿಯತಮರದಾಗಿತ್ತು. ಸಿಕ್ಕಾಬಟ್ಟೆ ಓದುತ್ತಿದ್ದವರು. ಮೊದಲ ಕಥೆ ‘ಶಶಿಪ್ರಭೆ’ ಪಾಟೀಲ ಪುಟ್ಟಪ್ಪನವರ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಪ್ರಿಯತಮ ಅವರಿಗೂ ನನಗೂ 80ರ ದಶಕದಿಂದ ಪರಿಚಯ .ಮುಂಬೈಗೆ ನಾಗತಿಹಳ್ಳಿ ಚಂದ್ರಶೇಖರ್ ಆ ದಿನಗಳಲ್ಲಿ ಬಂದಿದ್ದಾಗ ನಾಗತಿಹಳ್ಳಿ ಅವರ ಗೆಳೆಯರೆಂದರೆ ನಾನು ಮತ್ತು ಪ್ರಿಯತಮ. ಮುಂಬಯಿಗೆ ಬಂದಾಗ ಪ್ರಿಯತಮರ ಮನೆಗೂ ಹೋಗಿ ಬರುತ್ತಿದ್ದೆವು. ಅವರು ಅಮೇರಿಕದಿಂದ ಬಂದಿದ್ದಾಗ ನಾನೂ ಪ್ರಿಯತಮರೂ ವಿಮಾನ ನಿಲ್ದಾಣದಲ್ಲಿ ಕಾದು ಕೂತಿದ್ದೆವು.ಆ ನೆನಪನ್ನು ನಾಗತಿಹಳ್ಳಿ ಚಂದ್ರಶೇಖರ್ ಹಾಯ್ ಬೆಂಗಳೂರಿನ ತಮ್ಮ ಅಂಕಣದಲ್ಲಿ ಬರೆದಿದ್ದರು. ನನ್ನ ‘ನಾಗತಿಹಳ್ಳಿ ಪತ್ರಕಾಮೇಷ್ಟಿ’ ಕೃತಿಯನ್ನು ನಾನು ಪ್ರಿಯತಮರಿಗೇ ಅರ್ಪಣೆ ಮಾಡಿದ್ದೇನೆ.
ಕರ್ನಾಟಕ ಮಲ್ಲದ ಸಾಪ್ತಾಹಿಕ ವಿಭಾಗದ ಕತೆ ಮತ್ತು ಕವನ ಈ ಎರಡನ್ನು ಅನೇಕ ವರ್ಷಗಳ ಕಾಲ ಪ್ರಿಯತಮರೇ ನೋಡಿಕೊಳ್ಳುತ್ತಿದ್ದರು. ಅವರು ವಾರಕ್ಕೆ ಎರಡು ಬಾರಿ ಕರ್ನಾಟಕ ಮಲ್ಲದ ಲಾಲ್ಭಾಗ್ ಕಚೇರಿಗೆ ಬರುತ್ತಿದ್ದಾಗ ಅನೇಕ ಕನ್ನಡ ಮ್ಯಾಗಜಿನ್ ಗಳನ್ನು ತಿಂಡಿಯ ಜೊತೆ ನಮಗೆ ತರುತ್ತಿದ್ದರು.
ಅವರು ಯಾವುದೇ ಪ್ರಶಸ್ತಿ ಸನ್ಮಾನಗಳಿಂದ ದೂರ ಇದ್ದವರು. ಆದರೂ ಕೆಲವು ಕಡೆ ಅವರಿಗೆ ಸನ್ಮಾನಗಳು ಸಂದಿವೆ. ನಡೆಯಲು ಶಕ್ತಿ ಇದ್ದಷ್ಟು ದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಒಂದೆರಡು ಸಲ ಅವರ ತಂಡದ ಜೊತೆ ನಾನೂ ಸಾಹಿತ್ಯ ಸಮ್ಮೇಳನಗಳಿಗೆ ಹೋದದ್ದಿದೆ. ಪುಸ್ತಕ ಪ್ರೇಮಿ ಶೆಣೈಯವರು ತಿಂಗಳಲ್ಲಿ ಕನಿಷ್ಠ ಸಾವಿರ ರೂಪಾಯಿಯಾದರೂ ಆ ದಿನಗಳಲ್ಲಿ ಕನ್ನಡ-ಮರಾಠಿ ಪುಸ್ತಕಗಳಿಗೆ ಖರ್ಚು ಮಾಡುತ್ತಿದ್ದರು.
ದೀಪಾವಳಿ ಬಂದಾಗ ಕನ್ನಡ-ಮರಾಠಿ ವಿಶೇಷಾಂಕಗಳನ್ನು ತಪ್ಪದೇ ಖರೀದಿಸುತ್ತಿದ್ದರು. ತಮ್ಮ ಪುಸ್ತಕಗಳನ್ನು ಕರ್ನಾಟಕಕ್ಕೆ ತಲುಪಿಸಲು ಒಂದು ವಿಶಿಷ್ಟ ಪ್ರಯೋಗವನ್ನು ಅವರು ಮಾಡಿದ್ದಿದೆ. ಸುಮಾರು ಒಂದೂವರೆ ಸಾವಿರ ಜನರಿಗೆ ಅವರು ತಮ್ಮ ಕೃತಿಗಳ ಬಗ್ಗೆ ಪೋಸ್ಟ್ ಕಾರ್ಡ್ ಅನ್ನು ಹಾಕಿ ಬೇಕೆನಿಸಿದವರಿಗೆ ತಮ್ಮ ಪುಸ್ತಕಗಳನ್ನು ಅಂಚೆಯಲ್ಲಿ ಕಳುಹಿಸಿದ್ದೂ ಇದೆ . ಆ ಕಾರ್ಯದಲ್ಲಿ ಅವರಿಗೆ ಸುಮಾರು ಮೂರು ತಿಂಗಳಲ್ಲಿ 22 ಸಾವಿರ ರೂ. ಹಣ ಸಂಗ್ರಹವಾಗಿದ್ದು ದನ್ನು ಅವರು ಹೇಳುತ್ತಿದ್ದರು. ಇಡೀ ಕರ್ನಾಟಕಕ್ಕೆ ನಾವು ಪುಸ್ತಕವನ್ನು ತಲುಪಿಸಲು ಲೇಖಕರು ಇಂತಹ ಪ್ರಯೋಗಗಳನ್ನು ಮಾಡಿದರೆ ಮಾತ್ರ ತಲುಪಿಸಬಹುದಾಗಿದೆ ಎನ್ನುತ್ತಿದ್ದರು. ಆದರೆ ಇಂದು ಸಾವಿರಾರು ಓದುಗರಿಗೆ ಪತ್ರ ಬರೆದು ಬಂದ ಉತ್ತರಗಳಿಗೆ ಪ್ರತಿಕ್ರಿಯಿಸುವುದು, ಅವರಿಗೆ ಪುಸ್ತಕಗಳನ್ನು ಅಂಚೆಯಲ್ಲಿ ಕಳುಹಿಸುವುದು ನಾವು ನಿರೀಕ್ಷಿಸಲು ಸಾಧ್ಯವೇ? ಯಾರಿಗೆಲ್ಲ ಅಷ್ಟು ತಾಳ್ಮೆ ಇರುವುದು? ನಾವು ಪುಸ್ತಕವನ್ನು ಓದುಗರಿಗೆ ತಲುಪಿಸಲು ಪ್ರಯತ್ನ ಮಾಡುತ್ತಿದ್ದೇವೆಯಾ? ಎಂದೆಲ್ಲ ಪ್ರಶ್ನೆ ಹಾಕುತ್ತಿದ್ದರು ಪ್ರಿಯತಮ.
2001ರ ತುಳು ಪರ್ಬ ದಲ್ಲಿ ಪ್ರಿಯತಮ ಅವರನ್ನು ಡಾ. ಬಿ .ಎಂ .ಹೆಗ್ಡೆ ಅವರು ಸನ್ಮಾನಿಸಿದ್ದರು .ನಾಡಿನ ಪ್ರಮುಖ ಪತ್ರಿಕೆಗಳಲ್ಲೆಲ್ಲ ಪ್ರಿಯತಮರ ಬರಹಗಳು ಪ್ರಕಟವಾಗಿವೆ.
ಒಬ್ಬ ಬರಹಗಾರನಾಗಿದ್ದೂ ಅಪೂರ್ವ ಓದುಗರೂ ಆಗಿದ್ದ ಪ್ರಿಯತಮ ನಮಗೆಲ್ಲ ಸದಾ ಆದರ್ಶಪ್ರಾಯರು.2019 ರಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸಲು ಅವರ ಮನೆಗೆ ಹೋಗಿದ್ದೆ. ಅವರು ಖುಷಿಯಿಂದ ನೆನಪಾದಂತೆ ಮಾತಾಡಿದ್ದರು.ಪತ್ನಿ ಶೋಭಾ, ಮಗ ವಿನಯ್ ಮತ್ತು ಮಗಳು ವಿದ್ಯಾ ಮೊಮ್ಮಕ್ಕಳು ,ಅಳಿಯ ಎಲ್ಲರೂ ಆದಿನ ಇದ್ದರು. ಪ್ರಿಯತಮ ಅವರಿಗೆ ಅಂದು ನೆನಪು ಸರಿ ಬರುತ್ತಿರಲಿಲ್ಲ. ತಕ್ಷಣಕ್ಕೆ ಮರೆಯುತ್ತಿದ್ದರು.ಅವರ ಪತ್ನಿ ಶೋಭಾ ಆವಾಗ ಒಂದು ಮಾತು ಹೇಳಿದ್ದರು- “ರಾತ್ರಿ ನಿದ್ದೆಯಲ್ಲೂ ಎದ್ದು ನನ್ನ ಪುಸ್ತಕ ಹೆಬ್ರಿಯವರು ತರುತ್ತಾರೆ . ನನ್ನ ಹೊಸ ಪುಸ್ತಕ ಬರುವುದಿದೆ “ಅಂತಾರೆ. ನಮಗೆ ಅವರು ಯಾರಿಗೆ ಪುಸ್ತಕ ಮಾಡಲು ಕೊಟ್ಟಿದ್ದಾರೆ ನಮ್ಮಲ್ಲಿ ಹೇಳುತ್ತಿರಲಿಲ್ಲ” ಎಂದಿದ್ದರು.
ಅದೇನಾಯ್ತೋ ನಂತರ ನನಗೂ ತಿಳಿದಿಲ್ಲ. ಹಿರಿಯ ಸಾಹಿತಿ ಪ್ರಿಯತಮ ಮತ್ತು ಅವರ ಪತ್ನಿ ಶೋಭಾರಿಗೆ ಭಾವಪೂರ್ಣ ಶ್ರದ್ಧಾಂಜಲಿ.
——-
2 thoughts on “ಸಾಹಿತ್ಯಲೋಕದಿಂದ ಕಣ್ಮರೆಯಾದ ಹಿರಿಯ ಸಾಹಿತಿ ‘ಪ್ರಿಯತಮ ‘”
ನಾನು ಮುಂಬಯಲಿದ್ದಾಗ ಪಿೃಯತಮರಿಗೆ ಹಾಯ್ ಹಲೊ ಹೇಳುತಿದೇ
ಅವರ ಆತ್ಮಕ್ಕೇ ಶಾಂತಿ ಸಿಗಲೀ
ಹಮ್ಮು ಬಿಮ್ಮಿಲ್ಲದ ಓರ್ವ ಹೃದಯವಂತ ಸಾಹಿತಿ. ತೊಂಭತ್ತರ ದಶಕದ ಆದಿಯಲ್ಲಿ, ನಾವು ಚುಕ್ಕಿ ಗೆಳೆಯರ ಬಳಗದ ಬರವಣಿಗೆ ಕಾರ್ಯಚಟುವಟಿಕೆ ಕುರಿತು, ಚಿಗುರು ಪತ್ರಿಕೆ ಕುರಿತು, ಪ್ರೀತಿ ತುಂಬಿದ ಮಾತುಗಳಿಂದಲೂ ಪತ್ರಿಕೆಯಲ್ಲಿ ಬರೆದೂ ಪ್ರೋತ್ಸಾಹಿಸುತಿದ್ದವರು. 2005-6 ರಲ್ಲಿ ಮೂಡುಬಿದಿರೆಯಲ್ಲಿ ನಡೆದ ಅ.ಭ.ಸಾ.ಸಮ್ಮೇಳನದ ಚುಟುಕು ಕವಿಗೋಷ್ಠಿಗೆ ನಾ ಹೊರಟಾಗ ರೈಲಿನ ಅದೇ ಬೋಗಿಲ್ಲಿದ್ದ ಅವರ ಜೊತೆ ಕಳೆದ ಆ ಸಮಯ, ಆ ಪ್ರಾಂಜಲ ಮಾತುಕತೆ, ಎಂದೂ ಮರೆಯವಂತಿಲ್ಲ.ಅವರೂ ಸಹ ಇದೇ ಅಭಿಪ್ರಾಯ ತಳೆದಿದ್ದರು.
ಇತ್ತೀಚಿನ ವರ್ಷಗಳಲ್ಲಿ ವಯೋ ಸಹಜತೆಯಿಂದಾಗಿ ಕ್ಷೀಣರಾಗಿದ್ದು ಬಿಟ್ಟರೆ ಆ ನಗುಮೊಗ, ಮುಗ್ಧತೆ ಹಾಗಾಗೇ ಇತ್ತಲ್ಲ….
ಅಗಲಿದ ದಂಪತಿಗಳ ಆತ್ಮಕ್ಕೆ ಚಿರಶಾಂತಿ ಕೋರುವೆ🌹🙏🌹