ಮರಳಿ ಗೂಡಿಗೆ

ಇಳಿಬಿಸಿಲಿನ ಸಂಜೆ ಹೊರಜಗುಲಿಯಲ್ಲಿ ಯಾವ ಭಾವವೂ ಇಲ್ಲದೆ ಕೊರಡಿನಂತೆ ಕೂತ ವನಜ ತದೇಕಚಿತ್ತದಿಂದ ಆಕಾಶವನ್ನೇ ದಿಟ್ಟಿಸುತ್ತಿದ್ದಳು. ಇತ್ತೀಚೆಗೆ ಅವಳೊಳಗಿನ ನೋವು ಅಳುವಾಗಿ ಹರಿಯದ ದಿನವಿಲ್ಲ. ಹಾಗಂತ ನೋವು ಕಡಿಮೆಯಾಗಿದೆಯೆಂದರೆ ಅದು ಶಮನವಾಗುವ ನೋವಲ್ಲ.

‘ವನಜಕ್ಕ ಹೇಗಿದ್ದಾನಂತೆ ಮಗ…’ ಬಿರುನಡಿಗೆಯಲ್ಲಿದ್ದ ಸುಮತಿ ಕಾಟಾಚಾರಕ್ಕೆ ಎಂಬಂತೆ ಪ್ರಶ್ನಿಸಿದರೂ ಇವಳು ಯಾವ ಉತ್ತರವನ್ನು ಕೊಟ್ಟಾಳು. ತಿಳಿದರಲ್ಲವೇ ಕೊಡುವುದು. ತನ್ನ ಮತ್ತು ಮಗ ವಿವೇಕನ ಸಂಪರ್ಕ ಕಡಿದು ವಾರ ಗತಿಸಿದೆ. ‘ಗೊತ್ತಿಲ್ಲ ಸುಮತಿ’ ಭಾರವಾದ ಮಾತು ವನಜಳಿಂದ ಹೊರಬಿದ್ದಾಗ ಅದು ಸುಮತಿಗೆ ಮುಟ್ಟದಷ್ಟು ದೂರ ಅವಳು ಕ್ರಮಿಸಿಯಾಗಿತ್ತು. ಸುತ್ತಲಿನ ಹತ್ತಾರು ಮನೆಗಳ ಜನರು ಈಗ ತನ್ನ ಮನೆಯಂಗಳಕ್ಕೂ ಕಾಲಿಡುವುದಿಲ್ಲ. ಮಾತಂತೂ ದೂರ ಉಳಿಯಿತು. ಆಡಿದರೂ ತೋರಿಕೆಯ ಮಾತಿನಲ್ಲಿ ಆಪ್ತತೆ ಕರಗಿ ಹಾದಿಯ ಆ ಬದಿಯಲ್ಲಿ ನಿಂತು ಕೂಗಿಕೇಳುವಂತೆ ಅವಳಿಗೆ ಭಾಸವಾಗುತ್ತಿತ್ತು. ಇದರಲ್ಲಿ ಅವರ ತಪ್ಪಿಲ್ಲವೆನ್ನುವ ಅರಿವು ಒಂದೆಡೆ ಘಾಸಿಗೊಂಡ ಮನಸ್ಸಿಗೆ ಸಾಂತ್ವನ ಹೇಳುತ್ತಿದ್ದರೂ ಮೊನ್ನೆ ಮೊನ್ನೆಯ ತನಕ ತನ್ನ ಮನೆಯೊಳಗೆಲ್ಲ ಸಲುಗೆಯಿಂದ ಅಡ್ಡಾಡಿ ಕುಶಾಲು ಮಾಡುತ್ತಿದ್ದ ನೆರೆಕರೆಯವರು ಹೀಗೆ ಏಕಾಏಕಿ ತನ್ನನ್ನು ದ್ವೀಪವಾಗಿಸಿದ್ದು ಅವಳನ್ನು ಮಾನಸಿಕವಾಗಿ ಇನ್ನಷ್ಟು ಕುಸಿಯುವಂತೆ ಮಾಡಿತ್ತು. ಎಲ್ಲಿತ್ತೋ ಈ ಮಹಾಮಾರಿ. ಹೋಗಿ ಬಂದು ತನ್ನ ಮಗನಲ್ಲೇ ಸೇರಿಕೊಳ್ಳಬೇಕೆ… ಆಲಿಸುವ ದೇವರು ಎದುರಿಗಿದ್ದರೆ ಖಂಡಿತ ಈ ಪ್ರಶ್ನೆಯನ್ನು ಅವಳು ನಿರ್ಭಿಡೆಯಿಂದ ಕೇಳುತ್ತಿದ್ದಳೇನೋ ಇಲ್ಲಾ ಇನ್ನೂ ಬಾಳಿಬದುಕಬೇಕಾದ ಮಗನನ್ನು ಬಿಟ್ಟು ಅದು ತನ್ನನ್ನು ಬಲಿತೆಗೆದುಕೊಳ್ಳಲಿ ಎಂದು ಬೇಡಿಕೊಳ್ಳುತ್ತಿದ್ದಳೇನೋ. ಆದರೆ ಕಾಣದ ದೇವರಲ್ಲಿ ಮೊರೆಯಿಡಲು ಅವಳ ಮನಸ್ಸು ಒಪ್ಪಲಿಲ್ಲ.

ಅಂಗಳದ ಮೂಲೆಯಲ್ಲಿ ಇರುವ ದೈವಸ್ಥಾನದ ಕಡೆ ಕೈಮುಗಿದು ‘ಸ್ವಾಮೀ ಪಂಜುರ್ಲಿ ನನ್ನ ಮಗ ಯಾವ ತೊಂದರೆಯೂ ಇಲ್ಲದೆ ಒಮ್ಮೆ ಮನೆಗೆ ಬರಲಿ. ನಿನಗೆ ಹರಕೆಯಾಗಿ ಕೋಲವನ್ನು ಕೊಡುತ್ತೇನೆ’ ಎಂದು ಭರವಸೆಯ ಆಶಯದ ಮಾತುಗಳನ್ನು ಮನದಲ್ಲಿಯೇ ನುಡಿದು ಲಾಗಾಯ್ತಿನಿಂದ ನಂಬಿಕೊಂಡು ಬಂದ ದೈವವನ್ನೊಮ್ಮೆ ಸ್ಮರಿಸಿಕೊಂಡಳು. ಬಾಳಿನ ಐವತ್ತು ಸಂವತ್ಸರಗಳನ್ನು ಹಿಂದಿಕ್ಕಿದ ವನಜಳಲ್ಲಿ ದೈಹಿಕ ಕಸುವು ಎಳ್ಳಷ್ಟೂ ಕುಂದಿರಲಿಲ್ಲ. ಆದರೆ ನೆಮ್ಮದಿ ಕೆಡಿಸಿದ ಈ ಕೊರೊನಾ ಸುದ್ದಿ ಅವಳ ಸರ್ವಸ್ವವನ್ನೂ ಹಣ್ಣಾಗಿಸಿತ್ತು.

ವಿವೇಕ ಊರಿಗೆ ಬಂದ ನಂತರದ ಘಟನೆಗಳು ಬೇಡವೆಂದರೂ ಅವಳಲ್ಲಿ ಮತ್ತೆ ಮರುಜೀವ ಪಡೆಯತೊಡಗಿದವು. ಅಬುಧಾಬಿಯಿಂದ ಮಗ ಬರುವ ಸುದ್ದಿ ತನ್ನಲ್ಲಿ ಎಷ್ಟು ಹುರುಪನ್ನು ತುಂಬಿಸಿತ್ತು. ತನ್ನೊಡಲ ಜೀವ ಸಂತಸದಿಂದ ಹಾರುಹಕ್ಕಿಯಾಗಿತ್ತು. ಊರಿಗೆ ಬರುವ ಕಾರಣವನ್ನು ಸೂಕ್ಷ್ಮವಾಗಿ ತಿಳಿಸಿದ ವಿವೇಕ ಹೆಚ್ಚು ಮಾತಾಡಿರಲಿಲ್ಲ. ಅದ್ಯಾವುದೋ ಕೊರೊನಾ ಸೀಕು ಅಲ್ಲಿ ನೆಲೆಸಿರುವ ಭಾರತೀಯರನ್ನು ತಮ್ಮ ಮೂಲ ನೆಲೆಗಳಿಗೆ ಮರಳುವಂತೆ ಮಾಡಿದ್ದು ಮಾತ್ರವಲ್ಲ ಸಾಧ್ಯವಾದಷ್ಟು ಬೇಗ ಜಾಗ ಖಾಲಿಮಾಡುವಂತಹ ಆತಂಕವನ್ನು ಸೃಷ್ಟಿಸಿತ್ತು. ವಿಷಯ ತಿಳಿದ ವನಜ ‘ಆಯಿತು ಮಗ ಬೇಗ ಬಂದುಬಿಡು. ದೇವರಿದ್ದಾನೆ. ನಿನಗೇನು ಆಗದಿರಲಿ’ ಎಂಬ ಸಾಂತ್ವನದ ಮಾತುಗಳನ್ನು ಆಡಿದ್ದಳು. ಅದಾಗಿ ವಾರದೊಳಗೆ ಮಗ ಮನೆ ತಲುಪಿದ್ದ. ಬರುವಾಗಲೇ ವಿಮಾನನಿಲ್ದಾಣದಲ್ಲಿ ನೀಡಿದ್ದ ಕಟ್ಟೆಚ್ಚರಿಕೆಯ ಭಾರವನ್ನು ಹೊತ್ತುಕೊಂಡೇ ಬಂದಿದ್ದ.

ಮೂಗು, ಬಾಯಿ ಮುಚ್ಚಿಕೊಂಡ ಮುಖಗವಸು, ಕೈಗವಸುಗಳಲ್ಲಿ ಬಂದ ವಿವೇಕನ ಸ್ವರೂಪವನ್ನು ನೋಡಲು ತಾಯಿಗೆ ಸಾಧ್ಯವಾಗಿರಲಿಲ್ಲ. ಅವಳ ಕಾತರದ ನಿರೀಕ್ಷೆ ಭಯವಾಗಿ ಕಾಡತೊಡಗಿದ್ದು ಆಗಲೇ. ಬಂದವನೇ ತಾಯಿಗೂ ಮುಖಗವಸನ್ನು ನೀಡಿ ನಿರಂತರವಾಗಿ ಅದನ್ನು ಕಟ್ಟಿಕೊಳ್ಳುವಂತೆ ಆಜ್ಞಾಪಿಸಿದ್ದ. ಜೊತೆಗೆ ಆಗಾಗ್ಗೆ ಸಾಬೂನು ಹಚ್ಚಿ ಕೈತೊಳೆಯಲು ಹೇಳಿದ್ದ. ಅಲ್ಲಿ ಪಾಲಿಸಬೇಕಾದ ಮುಂಜಾಗೃತ ಕ್ರಮಗಳನ್ನು ವಿವರವಾಗಿ ತಾಯಿಗೆ ಪಾಠಮಾಡಿದ್ದ. ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಕೋಣೆಯೊಂದನ್ನು ಸೇರಿ ತನ್ನ ದೈನಂದಿನ ಅಗತ್ಯಗಳನ್ನು ಅಲ್ಲಿಯೇ ತೀರಿಸತೊಡಗಿದ್ದ. ಊಟದ ಸಮಯದಲ್ಲಿ ಅವನ ಆಣತಿಯಂತೆ ತಾಯಿ ಬಾಗಿಲ ಬಳಿ ಊಟದ ತಟ್ಟೆ ಇಟ್ಟರೆ ತೆಗೆದುಕೊಂಡು ಏಕಾಂಗಿಯಾಗಿ ಕುಳಿತು ನಿರ್ಭಾವುಕತೆಯಿಂದ ಉಣ್ಣುತ್ತಿದ್ದ. ಒಂದುರೀತಿಯಲ್ಲಿ ಮನೆಯೊಳಗಿನ ಅಜ್ಞಾತವಾಸದ ಅನುಭವ ಅವನನ್ನು ಇನ್ನಿಲ್ಲದಂತೆ ಕುಗ್ಗಿಸುತ್ತಿದ್ದರೆ ಇತ್ತ ತಾಯಿಹೃದಯ ಮಾತಿಲ್ಲದ ನೋವಿನಲ್ಲಿ ಮಮ್ಮಲ ಮರುಗುತ್ತಿತ್ತು. ಮನೆಯೊಳಗೆ ಹೆಪ್ಪುಗಟ್ಟಿದ ಮೌನದಲ್ಲಿ ಅವರ ನಡುವೆ ಮಾತು ಕ್ಷೀಣಿಸಿತ್ತು. ವಿವೇಕನ ಕಣ್ಣುಗಳಲ್ಲಿ ಕಾಣುತ್ತಿದ್ದ ಸಂಕಟವನ್ನು ಹಂಚಿಕೊಳ್ಳಲು ಅವಳಿಗೆ ಯಾರೂ ಇರಲಿಲ್ಲ. ಒಬ್ಬಂಟಿಯಾಗಿದ್ದ ಅವಳು ಈಗ ಆ ಮನೆಯಲ್ಲಿ ಮಗನಿದ್ದೂ ಒಂಟಿಯಾಗಿದ್ದಳು.

ವನಜಳಿಗೆ ಚಿಕ್ಕಂದಿನಲ್ಲಿ ಕಂಡ ಕೊರಗರ ಸ್ಥಿತಿಗತಿಯ ನೆನಪು ಆಗ ಬೇಡವೆಂದರೂ ಹೊರಳಿತ್ತು. ಪೇಟೆಯ ಹರಕು ಗುಡಿಸಲ ಹೊಟೇಲಿನ ಮುರಿದ ಕಿಟಕಿಯಿಂದ ಕೊರಗರ ತೆಂಗಿನ ಗೆರಟೆಗೆ ಸುರಿಯುತ್ತಿದ್ದ ಚಹ, ಕಾಗದದ ತುಂಡಿನಲ್ಲಿ ತಿಂಡಿ ಕಟ್ಟಿ ಎತ್ತರದಿಂದ ಉದುರಿಸುತ್ತಿದ್ದ ಅಸ್ಪೃಶ್ಯತೆಯ ದಿನಗಳು ಅವಳ ಕಣ್ಣಮುಂದೆ ತೇಲಿಬಂದಿದ್ದವು. ಅಂತಹ ಪರಿಯನ್ನು ಅಕ್ಷರಶಃ ಕಾಣುವ ತನ್ನ ತಾಯ್ತನದ ವೇದನೆ ಅವಳನ್ನು ಒಂದೇಸಮನೆ ಹಿಂಡುತ್ತಿತ್ತು. ಅಂಗಳದ ಅಂಚಿನ ತೆಂಗಿನಮರದ ಬುಡದಲ್ಲಿ ಬೆಳೆದ ಕೆಸುವಿನ ಎಲೆಗಳು, ಗದ್ದೆಯ ಬದುವಿನಲ್ಲಿ ಈ ಸಲ ಮರತುಂಬ ಕಚ್ಚಿಕೊಂಡ ಹಲಸಿನಕಾಯಿಗಳು ಬೇರೆ ಸಮಯದಲ್ಲಾದರೆ ಅವನ ಇಷ್ಟದ ಪತ್ರೊಡೆಗೆ, ತೇಗದೆಲೆಯಲ್ಲಿ ಬೇಯಿಸುವ ಹಲಸಿನ ಕಡುಬಿಗೆ ಎರವಾಗುತ್ತಿದ್ದವು. ಅಕ್ಕರೆಯಿಂದ ಅವೆಲ್ಲವನ್ನು ಮಾಡಿ ಉಣಿಸುವ ಕ್ಷಣಗಳಿಂದಲೂ ಅವಳು ವಂಚಿತಳಾಗಿದ್ದಳು.

ಮಗ ಬಂದ ಹತ್ತನೆಯ ದಿನಕ್ಕೆ ಏನಾಯಿತೋ ಗೊತ್ತಿಲ್ಲ. ವಿವೇಕನಿಗೆ ಹತ್ತಿದ ಕೆಮ್ಮು, ಗಂಟಲುರಿ, ಮೈಬಿಸಿ ಶಮನವಾಗುವ ಲಕ್ಷಣ ಕಾಣಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ತನ್ನನ್ನು ಪರೀಕ್ಷೆಗೆ ಒಳಪಡಿಸುವುದೇ ಉತ್ತಮವೆಂದರಿತ ಅವನು ಸೂಕ್ಷ್ಮವಾಗಿ ತಾಯಿಗೆ ತಿಳಿಸಿದ. ಅದರ ಬಗ್ಗೆ ಸಾಕಷ್ಟು ಮಾಹಿತಿಯಿರದ ಅವಳು ಗಾಬರಿಯಾದದ್ದು ಸಹಜವೇ. ತುರ್ತು ನಿಗಾ ವಾಹನದ ನಂಬರಿಗೆ ಕರೆಮಾಡಿದ ವಿವೇಕ ಮನೆತೊರೆದು ಆಸ್ಪತ್ರೆಯಲ್ಲಿರಲು ನಿರ್ಧರಿಸಿದ್ದ. ಹೊರಡುವ ಮುನ್ನ ದೂರದಿಂದಲೇ ತಾಯಿಗೆ ನೆಲಮುಟ್ಟಿ ನಮಸ್ಕರಿಸಿ ‘ಹೋಗಿ ಬರ್ತೀನಮ್ಮ’ ಎಂದು ಗದ್ಗದಿತನಾಗಿದ್ದ. ಬಂದ ಆಸ್ಪತ್ರೆಯ ಸಿಬ್ಬಂದಿ ವನಜಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಿ ಪರೀಕ್ಷೆಗಾಗಿ ಅವಳ ಗಂಟಲ ದ್ರವ ಸಂಗ್ರಹಿಸಿ ಹಿಂತಿರುಗಿ ಬಿಟ್ಟಿದ್ದರು. ವಿವೇಕ ಮನೆಯೊಳಗೆ ಪಾಲಿಸಿದ ಕಟ್ಟುನಿಟ್ಟಿನ ಕ್ರಮಗಳನ್ನು ಡಾಕ್ಟರರಿಗೆ ಸವಿಸ್ತಾರವಾಗಿ ವಿವರಿಸಿದ್ದ. ಆಸ್ಪತ್ರೆಯಿಂದ ಹಿಂತಿರುಗುವಾಗ ರೋಗಲಕ್ಷಣಗಳು ಕಂಡಲ್ಲಿ ಕೂಡಲೇ ಸಂಪರ್ಕಿಸುವಂತೆ ವನಜಳಿಗೆ ಎಚ್ಚರಿಕೆಯ ತಾಕೀತು ಮಾಡಲಾಗಿತ್ತು. ಆಸ್ಪತ್ರೆ ಸೇರಿದ ವಿವೇಕನನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಮೊಬೈಲಿನಲ್ಲಿ ತಾಯಿಯೊಂದಿಗೆ ಆತನಾಡುವ ಒಂದಿನಿತು ಮಾತುಗಳು ಅವನ ಆರೋಗ್ಯದ ಬಗೆಗಿನ ಸ್ಪಷ್ಟತೆಯನ್ನು ಸಾರಲು ಸೋತಿದ್ದವು. ಕ್ವಾರಂಟೈನಿನಿಂದ ವೆಂಟಿಲೇಟರಿಗೆ ಶಿಫ಼್ಟ್ ಆದ ನಂತರವಂತೂ ಇಬ್ಬರ ನಡುವಿನ ಸಂವಹನಕ್ಕೆ ತೆರೆಬಿದ್ದಿತ್ತು. ಆಗ ಅವಳಲ್ಲಿ ಉಳಿದದ್ದು ಅಸಹಾಯಕತೆಯ ನಿಟ್ಟುಸಿರೊಂದೆ. 

ವನಜಳ ಮನಸ್ಸಿನಲ್ಲಿ ಗತಕಾಲದ ಜೀವನಹಾಳೆಗಳು ಮೆಲ್ಲನೆ ಮಗುಚತೊಡಗಿದವು. ಗುಡ್ಡದ ಆ ಇಳಿಜಾರಿನ ತುಂಡುಭೂಮಿಯಲ್ಲಿ ಗಂಡ ಶಂಕರನೊಂದಿಗೆ ಬದುಕು ಕಟ್ಟಿಕೊಂಡಾಗ ವನಜಳಿಗೆ ಏರು ಯೌವನದ ವಯಸ್ಸು. ವಿವೇಕ ಇನ್ನೂ ಹುಟ್ಟಿರಲಿಲ್ಲ. ಎರಡೆಕರೆ ಕೃಷಿಭೂಮಿಯಲ್ಲಿ ಹೆಚ್ಚಿನದ್ದು ಬೆಟ್ಟುಗದ್ದೆಗಳು. ಮಳೆಗಾಲದಲ್ಲಿ ಹದವಾಗಿ ಮಳೆಬಿದ್ದರೆ ಒಂದು ಬೆಳೆಯ ಸಂಭ್ರಮ. ಭತ್ತದ ಕೊಯ್ಲು ಮುಗಿಯುತ್ತಿದ್ದಂತೆ ಬಿತ್ತುವ ಉದ್ದು, ಹೆಸರು, ಅಲಸಂದೆ, ಹುರುಳಿ ಮನೆಯ ಖರ್ಚಿಗೆ ಸಾಕಾಗುತ್ತಿತ್ತು. ಬೈಲಿನಲ್ಲಿರುವ ಎರಡು ಗದ್ದೆಗಳು ಕಟ್ಟುವ ಕಟ್ಟದ ನೀರಿನಿಂದಾಗಿ ಎರಡು ಬೆಳೆ ಕಾಣುತ್ತಿದ್ದವು. ಇಬ್ಬರೇ ಇದ್ದ ಸಂಸಾರಕ್ಕೆ ಬೆಳೆದ ಭತ್ತ, ದ್ವಿದಳ ಧಾನ್ಯಗಳು, ತರಕಾರಿ ಸಾಕಷ್ಟಾಗಿ ಉಳಿಕೆಯಾಗುತ್ತಿತ್ತು. ಜೀವನ ತೂಗಿ ಅಳಿದುಳಿದುದನ್ನು ಜತನದಿಂದ ಕಾಪಿಟ್ಟು ವರ್ಷವೂ ಹತ್ತಿರದ ಪೇಟೆಯಲ್ಲಿ ಮಾರಿ ಒಂದಿಷ್ಟು ಹಣವನ್ನು ಕೂಡಿಟ್ಟಿದ್ದರು. ಇರುವ ಹೆಂಚಿನ ಮನೆಯ ಜಾಗದಲ್ಲಿ ತಾರಸಿ ಮನೆ ಕಟ್ಟುವ ದೂರದ ಆಸೆ ಅವರಲ್ಲಿತ್ತು. ಆ ಕನಸು ಸಾಕಾರಗೊಂಡದ್ದು ಇಪ್ಪತ್ತು ವರ್ಷಗಳ ಹಿಂದೆ.

ವಿಶಾಲವಾದ ಹಜಾರ, ಒಳಗೆ ಊಟದ ಕೋಣೆಯಿಂದಲೇ ಪ್ರವೇಶ ಪಡೆಯುವ ಎರಡು ಬೆಡ್ ರೂಂಗಳು, ಅದರಲ್ಲಿ ಒಂದಕ್ಕೆ ಅಟ್ಟ್ಯಾಚ್ಡ್ ಬಾತ್‍ ರೂಂ, ಹೊರಗೊಂದು ಬಾತ್ ರೂಂ, ಆಗ್ನೇಯ ಮೂಲೆಯಲ್ಲಿ ಅಡುಗೆಮನೆ, ಹಾಲಿಗೆ ಅಂಟಿಕೊಂಡಂತೆ ಪುಟ್ಟ ದೇವರಕೋಣೆ, ಹೊರಗೆ ಕೂರಲು ಸಣ್ಣದೊಂದು ಜಗುಲಿ ಅವರ ಮನಸ್ಸಿಗೊಪ್ಪುವಂತೆ ಸರಳ ಸುಂದರ ನಿಲಯ. ಗೃಹಪ್ರವೇಶದ ಸಮಯದಲ್ಲಿ ವಿವೇಕನಿಗೆ ಹತ್ತರ ಹರಯ.

ಕತ್ತಲು ನಾಲ್ದೆಸೆಗಳಿಂದಲೂ ನಿಧಾನಕ್ಕೆ ಇಳಿಯತೊಡಗಿತ್ತು. ಹಗಲಿಡೀ ಕಾದ ನೆಲಕ್ಕೆ ಹಾಡಿಯ ಕಡೆಯಿಂದ ಬೀಸುವ ಗಾಳಿ ತಂಪನ್ನು ಹೊತ್ತುತರುತ್ತಿತ್ತು. ಜಗುಲಿಯಲ್ಲಿ ಕೂತವಳ ದೃಷ್ಟಿ ಗದ್ದೆಗಳ ಕಡೆ ಹೊರಳಿತು. ಕಣ್ಣಳತೆಯ ದೂರದವರೆಗೂ ಹಡೀಲು ಬಿದ್ದ ಗದ್ದೆಗಳು. ಗೇಯುವ ಕೈಗಳಿಲ್ಲದೆ ಬೀಳುಬಿದ್ದ ಗದ್ದೆಗಳಲ್ಲಿ ಆಳೆತ್ತರಕ್ಕೆ ಬೆಳೆದ ಹುಲ್ಲು, ಮುಳ್ಳುಕಂಟಿಗಳು. ಮೊದಲಾದರೆ ಒಂದೆರಡು ಜೋರು ಮಳೆ ಬಿದ್ದಾಗಲೇ ಸಾಗುವಳಿಯ ಪೂರ್ವಸಿದ್ಧತೆಗಳು ಜೀವಪಡೆಯುತ್ತಿದ್ದವು. ಬೆಳೆದ ಹುಲ್ಲು, ಮುಳ್ಳುಕಂಟಿಗಳನ್ನು ಸವರಿ ಗದ್ದೆಗಳಲ್ಲೇ ಸುಟ್ಟು, ಬದುಗಳನ್ನು ಗಟ್ಟಿಗೊಳಿಸಿ ಉಳುಮೆಗೆ ಸಿದ್ಧತೆ ನಡೆಸುವುದಿತ್ತು. ಅಂತಹ ಸಂಭ್ರಮಗಳು ಮರೆಯಾಗಿ ಐದು ವರ್ಷಗಳು ಸಂದಿವೆ. ಶಂಕರ ಇದ್ದಾಗ ಭೂಮಿತಾಯಿಯನ್ನು ಬರಿದು ಬಿಡಬಾರದೆಂದು ಒಂದಿಷ್ಟು ಒದ್ದಾಡಿ ಮನೆಖರ್ಚಿಗೆ ಸಾಕಾಗುವಷ್ಟು ಬೆಳೆಸುತ್ತಿದ್ದ. ಅವನ ಅನಿರೀಕ್ಷಿತ ಸಾವಿನ ಜೊತೆ ಗದ್ದೆಗಳು ಬೀಳುಬಿದ್ದಿದ್ದವು. ಇದು ಅವಳೊಬ್ಬಳ ಹಳ್ಳಿಬದುಕಿನ ಕತೆಯಲ್ಲ. ಸುತ್ತಮುತ್ತಲಿರುವ ಎಲ್ಲರ ಸ್ಥಿತಿಯು ಇದಕ್ಕಿಂತ ಭಿನ್ನವಿಲ್ಲ. ಕೈಗೆ ಬಂದ ಹುಡುಗರು ಓದಿ ಸಂಪಾದಿಸಲು ನಗರ ಸೇರಿದ್ದರಿಂದ ಮುದಿಜೀವಗಳು ಕಣ್ಣಲ್ಲಿ ಜೀವಹಿಡಿದು ಮಕ್ಕಳ ಒಳಿತನ್ನು ಬಯಸುತ್ತ ಕೊನೆಯ ದಿನಗಳನ್ನು ಎಣಿಸುತ್ತಿದ್ದವು. ಮಕ್ಕಳು ಕಳಿಸಿಕೊಡುತ್ತಿದ್ದ ಅಷ್ಟಿಷ್ಟು ಹಣ ಹೆಚ್ಚಿನ ಬೇಡಿಕೆಗಳಿಲ್ಲದ ಅವರ ಇತಿಮಿತಿಯ ಬದುಕಿಗೆ ಸಾಕಾಗುತ್ತಿತ್ತು.

ಸುತ್ತಲೂ ಪೂರ್ಣ ಕತ್ತಲು ಆವರಿಸಿದ್ದರಿಂದ ಒಲ್ಲದ ಮನಸ್ಸಿನಿಂದ ಎದ್ದವಳು ದೀಪ ಹಾಕಿ ದೈವಸ್ಥಾನದಲ್ಲಿ ದೀಪಹಚ್ಚಿ ಬಂದಳು. ತನ್ನ ಮನವನ್ನಾವರಿಸಿದ ಕತ್ತಲೆಯಲ್ಲಿ ಕರಗಿದಂತೆ ಮತ್ತದೇ ಜಾಗದಲ್ಲಿ ಕೂತಳು. ಸಂದ ಅರೆಬರೆ ಸಂಭ್ರಮದ ನೆನಪುಗಳು ಯಾವತ್ತೂ ಆರಕ್ಕೇರದ ಮೂರಕ್ಕಿಳಿಯದ ಸರಳರೇಖೆಯ ಬದುಕನ್ನು ಕೆದಕತೊಡಗಿದವು.

ವಿವೇಕ ಪ್ರಾಥಮಿಕ ಶಿಕ್ಷಣವನ್ನು ಕಾಲ್ನಡಿಗೆಯ ದೂರದಲ್ಲಿದ್ದ ಶಾಲೆಯಲ್ಲಿ ಪಡೆದರೆ ಮುಂದಿನ ಪಿಯುಸಿವರೆಗಿನ ಓದನ್ನು ಪೇಟೆಯಲ್ಲಿರುವ ಶಿಕ್ಷಣಸಂಸ್ಥೆಯಲ್ಲಿ ಮುಗಿಸಿದ್ದ. ಮೊದಮೊದಲು ಎರಡು ಮೈಲಿ ದೂರದ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದ ವಿವೇಕ ಹೈಸ್ಕೂಲು ಮೆಟ್ಟಿಲೇರುತ್ತಿದ್ದಂತೆ ಸೈಕಲಿನ ಆಸರೆ ಪಡೆದಿದ್ದ. ಓದಿನಲ್ಲಿ ಯಾವತ್ತೂ ಮುಂದಿದ್ದ ಅವನು ನಡೆನುಡಿಯಲ್ಲಿಯೂ ಊರವರ ಪ್ರೀತಿಗೆ ಪಾತ್ರನಾಗಿದ್ದ. ಯಾವ ತಂಟೆ. ರಗಳೆಗೆ ಹೋದವನಲ್ಲ. ಅವನ ಮಾತೂ ಹಿತಮಿತವಾಗಿರುತ್ತಿತ್ತು. ಪಿಯುಸಿ ಮುಗಿಯುತ್ತಿದ್ದಂತೆ ಅವನಿಗೆ ಮುಂದೆ ಓದುವ ಹಂಬಲವಿತ್ತು. ಅದಕ್ಕೆ ಒತ್ತಾಸೆಯಾಗಿ ಅವನ ಶಿಕ್ಷಕವೃಂದವೂ ಶಂಕರ ಮತ್ತು ವನಜರನ್ನು ಒಪ್ಪಿಸುವಲ್ಲಿ ತಮ್ಮ ಪ್ರಯತ್ನವನ್ನು ಬಿಡದೆ ಮಾಡಿತ್ತು. ಮಗ ಹೆಚ್ಚಿನ ಓದಿಗೆ ಹೋಗುವ ಇಚ್ಛೆ ವನಜಳಿಗಿರಲಿಲ್ಲ. ಹೀಗಾಗಿ ಮಗನನ್ನು ಕರೆದು

‘ಕಲಿತದ್ದು ಸಾಕು ಮಗ. ಜೀವನಕ್ಕೆ ಎರಡೆಕರೆ ಭೂಮಿಯಿದೆಯಲ್ಲ. ಕಷ್ಟಪಟ್ಟು ತಂದೆಯಂತೆ ದುಡಿದರೆ ಅದೆಂದೂ ನಮ್ಮನ್ನು ಉಪವಾಸ ಕೆಡವುದಿಲ್ಲ. ಅಲ್ಲದೆ ನಮ್ಮ ಕಡೆಗಾಲಕ್ಕೆ ನೀನು ಹತ್ತಿರ ಇದ್ದಂತೆ ಕೂಡ ಆಗ್ತದೆ… ಯೋಚನೆ ಮಾಡು’ ಎಂದು ತನ್ನ ಮನದಿಂಗಿತವನ್ನು ಹೊರಗೆಡವಿದ್ದಳು. ಶಂಕರನಿಗೆ ಮಾತ್ರ ತನ್ನ ಮಗ ಇತರರಂತೆ ಓದಿ ಉನ್ನತ ಹುದ್ದೆಗೇರಬೇಕೆಂಬ ಕನಸಿತ್ತು. ಎಲ್ಲರ ಒತ್ತಾಯಕ್ಕೆ ಮಣಿದು ತಾಯಿಯನ್ನು ಅನುನಯಿಸಿದ ವಿವೇಕ ಉನ್ನತ ವ್ಯಾಸಂಗಕ್ಕೆ ನಿಟ್ಟೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜನ್ನು ಸೇರಿದ್ದ. ಪಿಯುಸಿಯಲ್ಲಿ ವಿಜ್ಞಾನದ ಐಚ್ಛಿಕ ವಿಷಯಗಳಲ್ಲಿ ಗಳಿಸಿದ ಅತಿಹೆಚ್ಚಿನ ಅಂಕಗಳು ಮತ್ತು ಸಿಇಟಿಯಲ್ಲಿ ಪಡೆದ ಉತ್ತಮಶ್ರೇಣಿ ತಾಂತ್ರಿಕ ಕಾಲೇಜಿನಲ್ಲಿ ಸರಕಾರಿ ಸೀಟು ಪಡೆಯಲು ನೆರವಾಯಿತು. ತನ್ನಿಷ್ಟದ ಕಂಪ್ಯೂಟರ್ ಸೈನ್ಸ್ ಶಾಖೆಯಲ್ಲಿಯೇ ಅವನು ಇಂಜಿನಿಯರಿಂಗ್ ಮುಗಿಸಿದ. ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಕಂಪನಿಯೊಂದಕ್ಕೆ ಆಯ್ಕೆಯಾದ ಅವನು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ ಮೂರು ವರ್ಷ ದುಡಿದದ್ದು ಈಗೆಲ್ಲ ಇತಿಹಾಸ.

ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಹೊಸದರಲ್ಲಿ ತಮ್ಮಿಬ್ಬರನ್ನು ಊರುಬಿಟ್ಟು ತನ್ನೊಂದಿಗೆ ಬಂದು ಇರುವಂತೆ ವಿವೇಕ ದುಂಬಾಲುಬಿದ್ದಿದ್ದ. ಆದರೆ ಹಳ್ಳಿಯ ವಾತಾವರಣಕ್ಕೆ ಒಗ್ಗಿಸಿಕೊಂಡ ಮೈಮನಸ್ಸುಗಳು ಬೆಂಗಳೂರನ್ನು ಸೇರಲು ಹಿಂದೇಟು ಹಾಕಿದ್ದವು. ಮೇಲಾಗಿ ಮನೆ, ತೋಟ, ಗದ್ದೆ, ದನಕರು ಬಿಟ್ಟು ಮಗನ ಹಿಂದೆ ಹೋಗುವುದಕ್ಕೆ ಇಷ್ಟವೂ ಇರಲಿಲ್ಲ. ಈ ಮಧ್ಯೆ ಶಂಕರನ ಸಾವು ವನಜಳನ್ನು ಅಧೀರಳನ್ನಾಗಿಸಿತ್ತು. ಮಗನ ಮುಂದಿನ ಭವಿಷ್ಯತ್ತಿನ ಬೆಳಕಿನಲ್ಲಿ ತನ್ನೆಲ್ಲ ಕಷ್ಟಗಳನ್ನು ಮರೆತು ತಾನೂ ಸಂತಸಪಡುವ ಇಂಗಿತದೊಂದಿಗೆ ದಿನದೂಡುತ್ತಿದ್ದಳು. ಎರಡು ವರ್ಷಗಳ ಹಿಂದೆ ಊರಿಗೆ ಬಂದ ವಿವೇಕ ಅಬುಧಾಬಿಗೆ ಹೊಸ ಕೆಲಸದ ಮೇಲೆ ತಾನು ತೆರಳುವ ನಿರ್ಧಾರವನ್ನು ವನಜಳ ಮುಂದೆ ಇಟ್ಟಾಗ ಅವಳಿಗೆ ದಿಕ್ಕೇ ತೋಚದಂತಾಗಿತ್ತು. ಇದ್ದೊಬ್ಬ ಮಗನೂ ದೂರದೇಶಕ್ಕೆ ಹೋದರೆ ತನ್ನ ಕೊನೆಗಾಲಕ್ಕೆ ಆಗುವವರು ಯಾರು ಎನ್ನುವ ಚಿಂತೆಯೂ ಅವಳನ್ನು ಬಾಧಿಸಿತ್ತು. ಒಂದಡೆ ಮಗನ ನಿರೀಕ್ಷೆಗಳು, ಅವನ ಉಜ್ವಲ ಬದುಕು, ಮತ್ತೊಂದೆಡೆ ತಾನು, ತನ್ನ ಉಳಿದ ಲೆಕ್ಕಕ್ಕಿಲ್ಲದ ಆಯುಸ್ಸು…. ಯೋಚಿಸಿದರೆ ಎಲ್ಲರಂತೆ ತಾನು ಹರಸಿ ಕಳುಹಿಸುವುದೇ ಒಳಿತೆಂದು ತೋರಿತ್ತು. ಮದುವೆ ಮಾಡಿ ಕಳುಹಿಸಿದರೆ ಸೊಸೆ ಅವನಿಗೆ ಜೊತೆಗಾತಿಯೊಂದಿಗೆ ಅವನ ಕಷ್ಟಸುಖಕ್ಕೆ ಆದಾಳು ಎನ್ನುವ ಆಶಯದೊಂದಿಗೆ ಮದುವೆಯ ಪ್ರಸ್ತಾಪವನ್ನು ಎದುರಿಗಿಟ್ಟಾಗ ಅವನು ಒಪ್ಪಿರಲಿಲ್ಲ.

‘ಮುಂದಿನ ಸಲ ಬಂದಾಗ ಖಂಡಿತ ಮದುವೆಯಾಗುತ್ತೇನಮ್ಮ. ನಿನಗೆ ಗೊತ್ತಿದ್ದ ಎಲ್ಲ ಹುಡುಗಿಯರ ಲೆಕ್ಕವಿಟ್ಟಿರು’ ಎಂದು ನಗೆಯಲ್ಲೇ ಮಾತು ತೇಲಿಸಿದ್ದ. ಈಗ ಈ ಅವಸ್ಥೆಯಲ್ಲಿ ಬಂದು ಊರು ಸೇರಿದ್ದಾನೆ. ವನಜಳ ಕಣ್ಣು ಹನಿಗೂಡಿದವು. ನಿಸ್ಸಹಾಯಕಳಾದ ಅವಳಲ್ಲಿ ಕಣ್ಣೀರು ಬಿಟ್ಟರೆ ಸಮಾಧಾನದ  ಎಲ್ಲ ದಾರಿಗಳು ಮುಚ್ಚಿದ್ದವು. ನಿಸ್ತೇಜವಾದ ಅವಳ ಬಾಳಿನಲ್ಲಿ ಇದ್ದ ಒಂದು ಭರವಸೆಯ ಕುಡಿಯ ಸುದ್ದಿಯೂ ಈಗ ಅವಳಿಗಿರಲಿಲ್ಲ. ಊರವರು ತಲೆಗೊಂದು ಮಾತನಾಡುವಾಗ ಅವಳ ಹೃದಯ ಅವ್ಯಕ್ತ ಭಯದಿಂದ ಕಂಪಿಸುತ್ತಿತ್ತು. ದೈವಸ್ಥಾನದಲ್ಲಿ ಹಚ್ಚಿಟ್ಟು ಬಂದ ದೀಪ ಯಾವಾಗಲೋ ಆರಿತ್ತು. ಸುತ್ತಲೂ ಕವಿದ ಕತ್ತಲೆಯಲ್ಲಿ ಎಂದೂ ಇಲ್ಲದ ಆತಂಕದ ತನ್ನ ಎದೆಬಡಿತ ಕಿವಿಗಳಿಗೆ ನಗಾರಿಯಂತೆ ಕೇಳಿಸುತ್ತಿತ್ತು.

‘ವನಜಕ್ಕ..ವನಜಕ್ಕ…’ ವನಜಳಿಗೆ ಯಾರೋ ತನ್ನನ್ನು ಕೂಗಿ ಕರೆದಂತಾಯಿತು. ಹೌದು ಕೂಗಳತೆಯ ದೂರದಲ್ಲಿರುವ ಗೋಪಾಲನ ಮನೆಯಿಂದಲೇ ಆ ಕರೆ ಕೇಳಿಸುತ್ತಿದೆ. ವನಜಳಿಗೆ ತನ್ನ ಹೃದಯ ಯಾಕೋ ಭಾರವಾದಂತೆ ಅನಿಸತೊಡಗಿತು. ಕೂಗುತ್ತ ಮನೆಯಂಗಳಕ್ಕೆ ಬಂದ ಗೋಪಾಲ ಏದುಸಿರು ಬಿಡುತ್ತಿದ್ದ.ಕತ್ತಲಲ್ಲಿ ಅವನ ಮುಖಭಾವ ಕಾಣಿಸದ್ದರಿಂದ ಅವಳು ಯಾವುದನ್ನೂ ಊಹಿಸಲು ಅಸಮರ್ಥಳಾಗಿದ್ದಳು. ಹೀಗಾಗಿ ಆತಂಕವನ್ನು ತಡೆಯಲಾರದೆ  ‘ಏನು ಬೇಗ ಹೇಳೋ ಗೋಪಾಲ. ನನ್ನೆದೆ ಒಂದೇಸಮನೆ ಹೊಡೆದುಕೊಳ್ತಿದೆ’ ಎಂದು ಅವಸರಿಸಿದಳು. ‘ಧೈರ್ಯ ತಂದುಕೋ ವನಜಕ್ಕ… ವಿವೇಕ ಹುಷಾರಾಗಿದ್ದಾನಂತೆ. ಇಷ್ಟರಲ್ಲೇ ಡಿಸ್ಚಾರ್ಜ್ಮಾಡ್ತಾರಂತೆ… ಹಾಗಂತ ಪೇಟೆಯಲ್ಲಿ ಮಾತಾಡುತ್ತಿದ್ದದ್ದನ್ನ ಕೇಳಿದೆ ಅಕ್ಕ…’ ಒಂದೇ ಉಸುರಿಗೆ ಹೇಳಬೇಕಾದ್ದನ್ನು ಗೋಪಾಲ ಹೇಳಿಬಿಟ್ಟ. ಅವನ ಮಾತಿನ ಕಂಪನಗಳಿನ್ನೂ ಕತ್ತಲೆಯಲ್ಲಿ ಕರಗಿರಲಿಲ್ಲ ವನಜಳ ಮುಖದಲ್ಲಿ ನೆಮ್ಮದಿಯ ಭಾವದೊಂದಿಗೆ ನಿರಾಳತೆಯ ನಿಟ್ಟುಸಿರೊಂದು ಹೊರಬಿತ್ತು.

‘ಎಂಥ ಒಳ್ಳೆ ಸುದ್ದಿ ತಂದಿ ಗೋಪಾಲ. ಈಗ ನಂಗೆ ಸ್ವಲ್ಪ ಸಮಾಧಾನ ಆಯ್ತು. ಇನ್ನು ದೇವರಿದ್ದಾನೆ ಬಿಡು…’ ಅವಳ ಮಾತಿನಲ್ಲಿ ಯುದ್ಧವೊಂದನ್ನು ಗೆದ್ದ ಸಂಭ್ರಮವಿತ್ತು. ‘ಇದ್ದ ಒಬ್ಬ ಮಗನನ್ನೂ ಕಳ್ಕೊಳ್ತೇನೇನೋ ಎನ್ನುವ ಭಯವಿತ್ತು ನಂಗೆ…’ ಅವಳ ಮಾತುಗಳು ಅಳುವಿನಲ್ಲಿ ಅದ್ದಿ ಬರತೊಡಗಿದವು. ಸುಖಾಂತವಾದ ಪರಿಸ್ಥಿತಿಯನ್ನು ಇನ್ನಷ್ಟು ಹದಗೊಳಿಸಲು ಒಂದೆರಡು ಮಾತಾಡಿದ ಗೋಪಾಲ ಅಲ್ಲಿಂದ ತನ್ನ ಮನೆಕಡೆ ನಡೆದ. ಮರುದಿನ ಆಸ್ಪತ್ರೆಯಿಂದ ಮನೆಗೆ ಮರಳಿದ ವಿವೇಕನಲ್ಲಿ ಹೊಸ ಚೈತನ್ಯ ತುಂಬಿದಂತಿತ್ತು. ಮರುಹುಟ್ಟು ಪಡೆದವನಂತೆ ತುಂಬ ಲವಲವಿಕೆಯಲ್ಲಿದ್ದ ಅವನು ಬಂದವನೇ ತಾಯಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ವನಜಳಲ್ಲಿ ಅಳುವೇ ಮಾತಾಗಿತ್ತು. ತುಂಬಿ ಬಂದ ಸಂತಸದಲ್ಲಿ ಅವಳು ಮಾತುಗಳನ್ನು ಮರೆತಂತೆ ಕಂಡಿತು. ವನಜಳ ಗಂಟಲುದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕಿಲ್ಲದ ವರದಿಯನ್ನೂ ಅವನು ಜೊತೆಯಲ್ಲೇ ತಂದಿದ್ದ.

 ದೈವಸ್ಥಾನದಲ್ಲಿ ಮುಂಜಾನೆ ಹಚ್ಚಿಟ್ಟ ದೀಪ ಸಣ್ಣಗೆ ಉರಿಯುತ್ತಿತ್ತು. ಹೊರಜಗುಲಿಯಲ್ಲಿ ನಿಂತ ವಿವೇಕ ಮನೆಯೆದುರು ಹರಡಿಕೊಂಡಿರುವ ತಮ್ಮ ಪಾಳುಬಿದ್ದ ಜಮೀನನ್ನು ಹಾಗೇ ನೋಡುತ್ತ ‘ಅಮ್ಮ ಇನ್ನು ಮುಂದೆ ನಾನು ನಿನ್ನ ಜೊತೆಯೆಲ್ಲೇ ಇರ್ತೇನೆ. ಎಲ್ಲೂ ಹೋಗೊಲ್ಲ. ಇರುವ ಗದ್ದೆಗಳಲ್ಲೇ ಮೊದಲಿನಂತೆ ಸಾಗುವಳಿ ಮಾಡಿ ಹೊಸ ಬದುಕನ್ನು ಕಾಣ್ತೇನಮ್ಮ… ನೀನೇನು ಹೆದರ್ಬೇಡ…’ ಅಂದ.

ಅವನ ದೃಢವಾದ ಮಾತುಗಳು ವನಜಳಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕತೊಡಗಿದವು. ಅಂತೂ ನಂಬಿದ ಹೊಲಗಳನ್ನು ಬಂಜೆಯಾಗಿಸದ ಅವನ ನಿರ್ಧಾರ ಅವಳಲ್ಲಿ ಹೊಸ ಹುರುಪನ್ನು ಮೂಡಿಸಿತು. ಮಗನ ಕೈಹಿಡಿದ ಅವಳು ದೈವಸ್ಥಾನದೆಡೆಗೆ ನಂಬಿಕೆಯ ಹೆಜ್ಜೆಯಿಡತೊಡಗಿದಳು.  

***************************

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ಮರಳಿ ಗೂಡಿಗೆ”

  1. ಬಿ.ಟಿ.ನಾಯಕ್ರ್

    ಸರ್ , ತುಂಬಾ ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

  2. Congrats,
    Narration/interpretation of the sequences in the article are arranged in a logical manner. Article is very close to the real life of many of the families of coastal area and many of them experienced in their life in the present Pendamic period.
    I like the clarity focussed in the article and the appropriate words used. I appreciate your nice writing skill.The content, expression, your insight are awesome.
    Keep up-good luck.

  3. ‘Marali guidige ‘Tumba bavanatmakavagide,
    Vanajala tumalagalannu chennagi chitrisiddiri . Nimma sahitya keishi hige munduvareili.

    Prakash Kundapur

  4. Sir, story is related to Present situation and touched the feelings of aged parents who are wholly depending on their children for cultivation and lively hood.

  5. ಕಥೆ ತುಂಬಾ ನೈಜವಾಗಿದೆ. ಓದಿ ಖುಷಿಯಾಯಿತು. ತುಂಬಾ ಚೆನ್ನಾಗಿ ಬರೆದಿದ್ದೀರಿ.👌👌👌👏👏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter