ವನ್ಯ ಜೀವರಾಶಿಗಳು ತಮ್ಮ ನಿರ್ದಿಷ್ಟ ವಲಯದಲ್ಲಿ ಬದುಕು ಕಟ್ಟಿಕೊಂಡು ಎಂತಹ ಎಚ್ಚರಿಕೆಯಿಂದ ಜೀವಿಸುತ್ತವೆ ಎಂಬುದನ್ನು ಕಾಣುವ ಅವಕಾಶವೊಂದು ಒದಗಿ ಬಂತು.
ಉಡುಪಿ ಜಿಲ್ಲೆಯಾದ್ಯಂತ ಹಾವುಗಳನ್ನು ಹಿಡಿಯಲು ನಿರಂತರ ಬರುವ ಕರೆಗಳಿಗೆ ಸಾಧ್ಯವಾದಷ್ಟು ಸ್ಪಂದಿಸುತ್ತ, ಅನೇಕ ಭಯಭೀತ ಮನಸ್ಸುಗಳ ಹೊಡೆತಕ್ಕೆ ಬಲಿಯಾಗಿ ಸಾವನ್ನಪ್ಪಬಹುದಾದ ವಿವಿಧ ಪ್ರಭೇದಗಳ ಹಾವುಗಳನ್ನು ಉಳಿಸಲು ಪ್ರಯತ್ನಿಸುವುದು ನನ್ನ ನೆಚ್ಚಿನ ಹವ್ಯಾಸ. ಆದರೆ ಅವುಗಳ ಮೂಲ ಸ್ಥಾನಗಳಿಂದ ಬೇರ್ಪಡಿಸಿ ಸಮೀಪದ ಅರಣ್ಯಗಳಿಗೋ, ನಿರ್ಜನ ಪ್ರದೇಶಗಳಿಗೋ ಅಥವಾ ಅಭಯಾರಣ್ಯಗಳಿಗೋ ಕೊಂಡೊಯ್ದು ಬಿಡುವುದು ಸಮಂಜಸವಲ್ಲದ ಹಾಗೂ ಇಷ್ಟವಿಲ್ಲದ ಕಾಯಕ. ಹಾಗೆಂದು ಒಂದು ಮನೆಯಲ್ಲೋ, ಅದರ ಸಮೀಪದಲ್ಲೋ ಹಿಡಿದ ಹಾವನ್ನು ಅಲ್ಲಿಯೇ ಅಥವಾ ಸ್ವಲ್ಪ ದೂರದಲ್ಲಿ ಬಿಡಲು ಹೊರಟೆನೆಂದರೆ ಬಹಳಷ್ಟು ಮಂದಿ ಒಪ್ಪುವುದಿಲ್ಲ! ಹಾವುಗಳ ಮೇಲೆ ಅವರಲ್ಲಿರುವ ಭಯ, ಮೌಢ್ಯತೆಗಳ ಕುರಿತು ಸಾಕಷ್ಟು ಮಾಹಿತಿ ನೀಡಿ ಮನವೊಲಿಸಲೆತ್ನಿಸಿದರೂ ವ್ಯರ್ಥವಾದಾಗ ವರ್ಗಾಯಿಸುವ ಅನಿವಾರ್ಯ ಒದಗುತ್ತದೆ.
ಆದರೆ ಹಾವುಗಳೆಂಬ ಅಪೂರ್ವ ಜೀವಿಗಳನ್ನು ಜೀವಮಾನದಲ್ಲಿ ಎಂದೂ ಸ್ಪರ್ಶಿಸುವ ಸಾಹಸವನ್ನೇ ಮಾಡದೆ, ಜೀವಂತ ಹಾವುಗಳನ್ನು ಕೂಡಾ ದೂರದಿಂದಲೇ ಕಾಣುತ್ತ ಅವುಗಳ ಸಂಶೋಧನೆಯಲ್ಲಿ ತೊಡಗುವ ಕೆಲವು, ‘ಉರಗ ಶಾಸ್ತ್ರಜ್ಞರು’ಮಾತ್ರ ಹಾವುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಿಟ್ಟರೆ ಅವು ಸತ್ತೇ ಹೋಗುತ್ತವೆ!’ಎನ್ನುವುದನ್ನು ಕೇಳಿ ವಿಷಾದವೆನಿಸಿದೆ. ಏಕೆಂದರೆತಮ್ಮ ಪರಿಸರದಲ್ಲುಂಟಾಗುವ ಬಹುತೇಕ ಬಗೆಯ ವಿಷಮ ಪರಿಸ್ಥಿತಿಗಳನ್ನು ಎದುರಿಸಿ ಜೀವಿಸ ಬಲ್ಲಂಥ ಶಕ್ತಿಯನ್ನು ಪ್ರಕೃತಿಯು ಮನುಷ್ಯರಿಗಿಂತಲೂಒಂದು ಪಟ್ಟು ಹೆಚ್ಚೇ ಹಾವುಗಳಿಗೂ, ಇತರ ಜೀವಿಗಳಿಗೂ ನೀಡಿದೆ ಎಂಬುದು ಅವುಗಳ ಜೀವನ ಕ್ರಮದಿಂದಲೇ ತಿಳಿಯ ಬಹುದು. ವಾಸಸ್ಥಾನ ಬದಲಾದ ಹಾವುಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲ ಶ್ರಮಪಡುತ್ತ ಬಳಲಬಹುದು ಹಾಗೂ ಅಷ್ಟೇ ಬೇಗ ಸೂಕ್ತ ವಲಯವೊಂದನ್ನು ಆಯ್ದು ಕೊಂಡು ಬದುಕುತ್ತವೆ ಎಂಬುದು ಅನುಭವ ವೇದ್ಯ.
ಒಮ್ಮೆ ಒಂದಷ್ಟು ಹಾವುಗಳನ್ನು ಹಿಡಿದು ಕೊಂಡು ದಟ್ಟಾರಣ್ಯಗಳತ್ತ ಹೊರಟೆ.ಸುಮಾರು ಅರವತ್ತು ಕಿಲೋ ಮೀಟರ್ ಸಾಗಿದ ನಂತರ ಮನೋಹರವಾದ ಹಸಿರು ಪ್ರದೇಶವೊಂದು ಮನ ಸೆಳೆಯಿತು. ಸದಾ ತುಂಬಿ ಹರಿಯುತ್ತಿದ್ದ ಅಲ್ಲಿನ ಹೊಳೆಯ ದಂಡೆಗೆ ಹೋಗಿ ನಿಂತೆ. ಆ ಹೊಳೆಯನ್ನು ಮೂರು ದಿಕ್ಕುಗಳಿಂದಲೂ ನಿಬಿಡಾರಣ್ಯವು ಆವರಿಸಿತ್ತು. ಈ ಹಿಂದೆ ಕೆಲವು ಬಾರಿ ಅಲ್ಲಿಗೆ ಹೋಗಿದ್ದಾಗ ಜಿಂಕೆ, ಕಡವೆ, ಕಾಡುಹಂದಿ ಹಾಗೂ ದೈತ್ಯ ಕಾಡು ಕೋಣಗಳ ಹಿಂಡುಗಳು ಸ್ವಾಗತಿಸಿದ್ದವು. ಆದರೆ ಇವತ್ತು ಅವು ಯಾವುವೂ ಕಾಣಿಸಲಿಲ್ಲ. ತುಸು ನಿರಾಶೆಯಿಂದ ಕಾಡನ್ನು ವೀಕ್ಷಿಸುತ್ತ ನಿಂತೆ. ಅಷ್ಟರಲ್ಲಿ ನನ್ನ ಸುತ್ತಮುತ್ತ ಯಾವುದೋ ಪ್ರಾಣಿಗಳ ಸರಬರ ಸದ್ದಿನೊಂದಿಗೆ ಅವು ಅತ್ತಿಂದಿತ್ತ ಓಡಾಡಿ ಅವಿತು ಕೊಂಡಂತೆ ಭಾಸವಾಯಿತು. ತಟ್ಟನೆ ಭಯದಿಂದಮೈ ಜುಮ್ಮೆನಿಸಿ ಸುತ್ತಲೂ ದೃಷ್ಟಿ ನೆಟ್ಟೆ. ಸುಮಾರು ಇಪ್ಪತ್ತು, ಇಪ್ಪತ್ತೈದರಷ್ಟು ಮಂಗಗಳು ಪೊದೆ, ಮರಗಳೆಡೆಯಲ್ಲಿ ಮಿಸುಕಾಡದೆ ಕುಳಿತು ನನ್ನನ್ನು ದಿಟ್ಟಿಸುತ್ತಿದ್ದವು. ಅವು ನಾಡಿನ ಮಂಗಗಳಲ್ಲ .ಕಾಡಿನಲ್ಲಿಯೇ ಹುಟ್ಟಿವಾಸಿಸುವ ಅರಣ್ಯ ಕೋತಿಗಳು. ಬಾನೆಟ್ ಮೆಕಾಕ್ (bonnet macaque) ಎಂದು ಅವುಗಳ ಹೆಸರು. ನಮ್ಮ ಊರು, ನಗರಗಳಲ್ಲಿ ವಾಸಿಸುವ ಇದೇ ಜಾತಿಯ ಮಂಗಗಳು ಮನುಷ್ಯರನ್ನು ಕಂಡ ಕೂಡಲೇ ಎಂಥೆಂಥ ಕಸರತ್ತು, ಕರಾಮತ್ತು ಗಳನ್ನು ಪ್ರದರ್ಶಿಸುತ್ತ ಸಮೀಪ ಹೋದರೆ ಅಥವಾ ನಮ್ಮ ಕೈಯಲ್ಲೇನಾದರೂ ವಸ್ತುಗಳಿದ್ದರೆ ರಪ್ಪನೆ ಓಡಿ ಬಂದು ಸರಕ್ಕನೆ ಕಿತ್ತೆಳೆದು ಗಾಯಗೊಳಿಸಿ ಓಡುವಂಥ ಕೀಟಲೆ ಮಾಡುತ್ತವೆ. ಬಹುಶಃ ಮನುಷ್ಯರ ನಡುವೆ ಬದುಕ ಬೇಕಾದರೆ ಅಂಥದ್ದೇ ಆಕ್ರಮಣಕಾರಿ ಸ್ವಭಾವಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯ ಎಂಬುದನ್ನು ಅವುಗಳು ಮನಗಂಡಿರಬಹುದು.
ಆದರೆ ಕಾಡಿನ ಕೋತಿಗಳು ನಾಡಿನ ಕಪಿಗಳ ಹಾಗೆ ಚೆಲ್ಲುಚೆಲ್ಲಾಗಿ, ಒರಟಾಗಿ ಹಾಗೂ‘ಬರೇ ಮಂಗಗಳು ಮಾರಾಯ್ರೇ!’ ಅನ್ನುತ್ತಾರಲ್ಲ ಹಾಗೆವರ್ತಿಸುವುದಿಲ್ಲ. ಅವುಗಳಿಗೆ ಪ್ರಕೃತಿಯು ನೀಡಿದ‘ಹುಟ್ಟರಿವು’ಎಂಬ ಜ್ಞಾನವು ಊರ ಮಂಗಗಳಿಗಿಂತಲೂ ಮೇಲ್ಪಟ್ಟದಲ್ಲಿದ್ದು ತಮ್ಮ ಪರಿಸರ ಮತ್ತು ಶತ್ರುಗಳ ಕುರಿತು ಸೂಕ್ಷ್ಮಸಂವೇದನೆ, ವಿಶೇಷ ಗಾಂಭೀರ್ಯ ಹಾಗೂ ಅಷ್ಟೇ ತ್ವರಿತ ಗತಿಯ ಪ್ರತಿಕ್ರಿಯೆಯನ್ನು ತೋರುತ್ತವೆ. ಅವುಗಳು ಮನುಷ್ಯರ ಪ್ರವೇಶವನ್ನು ಕ್ಷಣದಲ್ಲಿ ತಿಳಿದು, ಅಲ್ಲಲ್ಲೇ ತಟಸ್ಥಗೊಂಡು ಕಣ್ಣರೆಪ್ಪೆಯನ್ನೂ ಅಲುಗಿಸದೆ ಗ್ರಹಿಸುತ್ತ ತಮಗೇನಾದರೂ ತೊಂದರೆ, ಅಪಾಯವಿದೆ ಎಂದೆನ್ನಿಸಿದಾಕ್ಷಣ ಕಣ್ಮರೆಯಾಗುತ್ತವೆ. ಒಮ್ಮೆ ನನ್ನ ಕೆಲವು ಸ್ನೇಹಿತರೊಂದಿಗೆ ಪಶ್ಚಿಮ ಘಟ್ಟದ ದಟ್ಟಾರಣ್ಯದೊಳಗಿನ ಪುರಾತನ ದೇವಸ್ಥಾನವೊಂದರತ್ತ ಹೋಗಿದ್ದೆ. ಅಲ್ಲೊಂದು ಕೋತಿ ಕುಟುಂಬವು ದೂರದ ಹೊಳೆಯ ಬಂಡೆಗಳ ಮೇಲೆ ಓಡಾಡುತ್ತಿತ್ತು. ನಮ್ಮೊಂದಿಗಿದ್ದ ಮಕ್ಕಳು ಅವುಗಳತ್ತ ಬಾಳೆ ಹಣ್ಣುಗಳನ್ನು ಎಸೆದರು. ಆದರೆ ಅವು ಹಣ್ಣುಗಳನ್ನು ಕಣ್ಣೆತ್ತಿಯೂ ನೋಡದೆ ತಟ್ಟನೆ ಮರವೇರಿದವು, ಕ್ಷಣದಲ್ಲಿ ಕಣ್ಮರೆಯಾಗಿ ಬಿಟ್ಟವು .ಮಕ್ಕಳಿಗೂ ಉಳಿದವರಿಗೂ ನಿರಾಶೆಯಾಗಿ ದೇವಸ್ಥಾನದತ್ತ ಹೊರಟು ಹೋದರು. ನನಗೆ ಸೋಜಿಗವೆನಿಸಿತು. ಬಾಳೆ ಹಣ್ಣಿಗಾಗಿ ಅವು ಮರಳಿ ಬರಬಹುದೇನೋ ಎಂದು ಸುಮಾರು ಹೊತ್ತು ಕಾದೆ.ಆದರೆ ಅವು ಮತ್ತೆ ಬರಲೇಇಲ್ಲ! ಹಾಗಾಗಿ ನಾನೂ ದೇವಸ್ಥಾನಕ್ಕೆ ಹೋಗಿ, ಅರ್ಚಕರೊಡನೆ ಮಾತಾಡುತ್ತ ಕೋತಿಗಳ ವಿಚಾರವೆತ್ತಿದೆ. ಅದಕ್ಕವರು, ‘ಹೌದು ಅವು ಕಾಡಿನ ಕೋತಿಗಳು. ನಾವಿಲ್ಲಿ ಪೂಜೆಯ ಹೊತ್ತಲ್ಲಿ ಮಾತ್ರಇದ್ದು ನಂತರ ಮನೆಗೆ ಹೋಗುತ್ತೇವೆ. ದೇವಸ್ಥಾನದ ಬಾಗಿಲು ಸದಾ ತೆರೆದಿರುತ್ತದೆ. ಆದರೂ ಆ ಮಂಗಗಳು ಈವರೆಗೆ ದೇವಸ್ಥಾನದ ಒಳಗೂ ಬಂದದ್ದಿಲ್ಲ!’ ಎಂದರು ನಗುತ್ತ.
ಹಾಗಾಗಿಯೇ ಇಂದು ಅಪರಿಚಿತ ಜೀವಿಯಾದ ನಾನು ಅವುಗಳ ಪ್ರದೇಶಕ್ಕೆ ಅನಿರೀಕ್ಷಿತವಾಗಿ ಪ್ರವೇಶಿಸಿದ್ದರಿಂದ ಅವು ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತ ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದವು. ನನ್ನದೃಷ್ಟಿ ಅವುಗಳ ಮೇಲೆ ಬಿದ್ದಕೂಡಲೇ ಚೂರೂ ಸದ್ದಿಲ್ಲದೆ ಸರಸರನೆ ದೈತ್ಯ ಮರಗಳನ್ನು ಹತ್ತಿ ತುತ್ತತುದಿಗೇರಿ ಕುಳಿತು ನನ್ನನ್ನು ಮಿಕಾ ಮಿಕಾ ದಿಟ್ಟಿಸತೊಡಗಿದವು.ನನ್ನ ಭಯ ತುಸು ಸ್ಥಿಮಿತಕ್ಕೆ ಬಂತು. ಕಾರಿನತ್ತ ಹಿಂದಿರುಗಿ ಹಾವುಗಳ ಚೀಲವನ್ನುಕೈಗೆತ್ತಿಕೊಂಡೆನೋ ಇಲ್ಲವೋ, ಆಗಸದೆತ್ತರದಲ್ಲಿದ್ದ ಕೋತಿಗಳಿಗೆ ನಾನು ಹಾವುಗಳನ್ನೇ ಕೈಗೆತ್ತಿಕೊಂಡಿದ್ದೇನೆ ಎಂದು ಹೇಗೆ ತಿಳಿಯಿತೋ! ಕಪಿಗಳ ನಾಯಕ ಮೂರು ನಾಲ್ಕು ಬಾರಿ ವಿಚಿತ್ರವಾಗಿ ಬಾಯಗಲಿಸಿ ತನ್ನ ಕುಟುಂಬದ ಸದಸ್ಯರನ್ನು ಎಚ್ಚರಿಸುವಂಥ ಮಾರ್ಮಿಕ ಗುಟುರುಗಳನ್ನು ಹಾಕಿದ. ಮರು ಕ್ಷಣ ಉಳಿದ ಮಂಗಗಳಿಂದಲೂ ಚೀತ್ಕಾರ, ಅರಚುವಿಕೆಗಳು ಕಿವಿಗಪ್ಪಳಿಸಿದವು.
ನಾನು ಮತ್ತೊಮ್ಮೆ ಬೆಚ್ಚಿ ಅವುಗಳತ್ತ ದಿಟ್ಟಿಸಿದೆ. ಮುಖಂಡ ತನಗಿಂತ ಕೆಳಗಿನ ರೆಂಬೆಕೊಂಬೆ ಗಳಲ್ಲಿದ್ದ ಸದಸ್ಯರನ್ನೆಲ್ಲ ಆತಂಕದಿಂದ ಮೇಲೆಕರೆಯ ತೊಡಗಿದ. ಆದರೂ ಕೆಲವು ಮಂಗಗಳು ಲೆಕ್ಕಿಸದಿದ್ದಾಗ ಅವನು ಕೋಪಗೊಂಡು ಮರವಿಡೀ ಅವುಗಳನ್ನು ಬೆನ್ನಟ್ಟಿ ಗದರಿಸಿದ. ಒಂದಷ್ಟು ಹೊತ್ತು ಅವೆಲ್ಲ ಕಲಹ ವೆಬ್ಬಿಸುತ್ತ ಓಡಾಡಿದವು. ಮುಂದಿನ ಕ್ಷಣದಲ್ಲಿ ಸೂಜಿ ಬಿದ್ದರೂ ಕೇಳಿಸುವಂಥ ನಿಶ್ಶಬ್ದ ಹರಡಿತು.ನನಗೆ ಕುತೂಹಲವೆದ್ದಿತು. ಹಾವುಗಳ ಚೀಲವನ್ನು ನೆಲದ ಮೇಲಿರಿಸಿ ಬಿಡುಗಡೆಗೊಳಿಸಲಣಿಯಾದೆ. ಕೋತಿಗಳು ಮರಳಿ ನನ್ನತ್ತ ಬಾಯಗಲಿಸಿ, ಹಲ್ಲುಕಿರಿದು ಹೆದರಿಸಿದವು. ಲೆಕ್ಕಿಸದೆ ಕೆಲಸ ಮುಂದುವರೆಸಿದೆ.ಆಗ ಅವು ವಿಧಿಯಿಲ್ಲದೆ ಆತಂಕದಿಂದ ದಿಟ್ಟಿಸ ತೊಡಗಿದವು.
ಹತ್ತೋ, ಹನ್ನೆರಡೋ ನಾಗರ ಹಾವುಗಳನ್ನು ಮೆಲ್ಲನೆಹೊರಗೆ ಬಿಟ್ಟೆ. ಆ ಹಾವುಗಳು ಹೆದರಿ ದಿಕ್ಕು ತಪ್ಪಿ ಓಡತೊಡಗಿದವು. ಆದರೆ ತುಸುದೂರದಲ್ಲಿ ಎರಡು ಮೂರು ಕೋತಿಗಳು ಇನ್ನೂ ನೆಲದ ಮೇಲೆಯೇ ಕುಳಿತು ನನ್ನನ್ನು ಗಮನಿಸುತ್ತಿದ್ದವು ಎಂಬುದು ಆಗಲೇ ತಿಳಿದದ್ದು! ಓಡುವ ರಭಸದಲ್ಲಿ ತಮ್ಮತ್ತಲೇ ಹರಿದುಬರುತ್ತಿದ್ದ ಹಾವುಗಳನ್ನು ಕಂಡ ಕೋತಿಗಳು ಒಂದೇ ಉಸಿರಿಗೆ ಮರ ಹತ್ತಿ ಭೀಭತ್ಸವಾಗಿ ಅರಚುತ್ತ ಆ ಇಡೀ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿಬಿಟ್ಟವು. ಅವುಗಳ ಕೂಗಾಟಕ್ಕೆ ಪ್ರತಿಯಾಗಿ ದೂರದಲ್ಲೆಲ್ಲೋ ಜಿಂಕೆಗಳ ಕೆನೆತ, ಕೆಂಚಳಿಲಿನ ಉಲಿತ, ಕಾಜಾಣ, ನವಿಲು ಹಾಗೂ ಇತರ ಪಕ್ಷಿಗಳ ಅಪಾಯ ಸೂಚಕ ಧ್ವನಿ ತರಂಗಗಳು ಕಾಡಿನ ಮೌನವನ್ನು ಕದಡಿಬಿಟ್ಟವು. ನಾಗರಹಾವುಗಳು ಓಡುವುದನ್ನೇ ಕೋತಿಗಳು ಕಣ್ಣೆಲ್ಲ ಕಿವಿಯಾಗಿ ನೋಡತೊಡಗಿದವು. ಎರಡು ಮೂರು ನಿಮಿಷ ಕಳೆಯಿತು. ಹಾವುಗಳು ಒಂದೂ ಕಾಣದಂತೆ ಮರೆಯಾದವು. ಕೋತಿಗಳ ಗಾಬರಿಯೂ ಇಳಿದು ಸಹಜ ಸ್ಥಿತಿಗೆ ಬಂದವು ತಮ್ಮ ಚಟುವಟಿಕೆಯನ್ನು ಮರಳಿ ಆರಂಭಿಸಿದವು. ಅದು ಅವುಗಳ ಸಂತಾನೋತ್ಪತ್ತಿಯ ಕಾಲವಿರಬೇಕು. ಗುಂಪಿನ ಕೆಲವು ಗಂಡುಗಳ ನಡುವೆ ಹೆಣ್ಣಿಗಾಗಿ ಬೆನ್ನಟ್ಟಿ ಕಾದಾಡುವ ಕೃತ್ಯ ಆರಂಭವಾಯಿತು .ಕೆಲವು ಜೋಡಿಗಳು ಅಲ್ಲಲ್ಲೇ ಕೂಡಲು ಶುರುವಿಟ್ಟವು. ಅವನ್ನೆಲ್ಲ ಗಮನಿಸುತ್ತ ದೊಡ್ಡ ಗಾತ್ರದ ಹೆಬ್ಬಾವೊಂದನ್ನು ಚೀಲದಿಂದ ಹೊರಗೆ ತೆಗೆದೆ .ಅದು ಹಿಂದಿನ ದಿನವಷ್ಟೇ ಮನೆಯೊಂದರಗೂಡು ಹೊಕ್ಕು ಹುಂಜವೊಂದನ್ನು ಹಿಡಿದು ಕೊಂದು ನುಂಗಲಣಿಯಾಗುವಷ್ಟರಲ್ಲಿ ಮನೆಮಂದಿಯ ದೃಷ್ಟಿಗೆ ಬಿದ್ದು ನನ್ನಿಂದ ಹಿಡಿಸಲ್ಪಟ್ಟು ಹಸಿವಿನಿಂದ ಕಂಗೆಟ್ಟ ಹಾವು!
ಹೆಬ್ಬಾವನ್ನು ಕಂಡ ಕೋತಿಗಳ ಮನ್ಮಥಲೀಲೆಗೆ ತಟ್ಟನೆ ಬ್ರೇಕ್ ಬಿತ್ತು. ಗುಂಪಿನ ನಾಯಕ ಮರಳಿ ವಿಕಾರವಾಗಿ ಅರಚಿದ. ಇತ್ತ ಹೆಬ್ಬಾವು ನಿಧಾನ ಗತಿಯಲ್ಲಿ ಹರಿಯತೊಡಗಿತು.ಅದರ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಕೋತಿಗಳಿಗೆ ಏನನ್ನಿಸಿತೋ ರಪರಪನೆ ಮರಗಳಿಂದಿಳಿದು ಜಾಗರೂಕತೆಯಿಂದ ಹೆಬ್ಬಾವನ್ನು ಮುತ್ತಿಕೊಂಡವು. ಹೆಬ್ಬಾವಿಗೂ ಅವುಗಳ ವರ್ತನೆ ಅಪಾಯದ ಸೂಚನೆ ನೀಡಿರಬೇಕು. ಅದು ತಟ್ಟನೆ ನಿಂತು ತನ್ನ ಸೀಳು ನಾಲಗೆಯನ್ನು ನಾಲ್ಕೈದು ಕ್ಷಣಸುತ್ತಲೂ ಚೆಲ್ಲಿ ಕೋತಿಗಳನ್ನೂ, ಅವುಗಳ ಆಗಿನ ಮನಸ್ಥಿತಿಯನ್ನೂ ಸೂಕ್ಷ್ಮವಾಗಿ ಗ್ರಹಿಸಿದ್ದು ಅವುಗಳ ಮೇಲೆರಗಲೇ ನುಗ್ಗಿತು. ಕೋತಿಗಳು ಹಾರಿ ನೆಗೆದು ದೂರ ಓಡಿದವು, ಮರಳಿ ಬಂದು ಹಾವನ್ನು ಹೆದರಿಸತೊಡಗಿದವು.ಅಷ್ಟರಲ್ಲಿ ಹೆಬ್ಬಾವು ಪೊದೆಯೊಂದಕ್ಕೆ ನುಸುಳಿತು. ಕೋತಿಗಳೂ ಪೊದೆಯನ್ನು ಸುತ್ತುವರಿದವು. ಆದರೆ ಅವುಗಳಿಗೆ ತಾವುಈ ಮೊದಲು ನಾಗರಹಾವುಗಳನ್ನು ಕಂಡಿದ್ದ ಭಯವೂ ಮತ್ತೀಗಿನ ಹೆಬ್ಬಾವಿನ ಹೆದರಿಕೆಯೂ ಒಟ್ಟಿಗೆ ಕಾಡಿರಬೇಕು. ಪೊದೆಯತ್ತ ಗಮನನೆಟ್ಟಿದ್ದವು, ನಡುನಡುವೆ ನಾಗರಹಾವುಗಳು ಹರಿದು ಹೋದ ದಿಕ್ಕುಗಳನ್ನೂ ಹಾಗೂ ಸುತ್ತಮುತ್ತದ ನೆಲವನ್ನೂ ಬಿರುಗಣ್ಣುಗಳಿಂದ ಪರೀಕ್ಷಿಸುತ್ತ ಸಣ್ಣದೊಂದು ಹುಲ್ಲುಕಡ್ಡಿ ಅಲುಗಾಡಿದರೂ ಹಾವೇ ಎಂಬಂತೆ ಹೌಹಾರಿ ಅವಲೋಕಿಸುತ್ತ ಹೆಬ್ಬಾವಿನ ಪೊದೆಯ ಸುತ್ತ ಸಂಚರಿಸ ತೊಡಗಿದವು.ಇದನ್ನೆಲ್ಲ ಅನತಿ ದೂರದಲ್ಲಿನಿಂತು ಗಮನಿಸುತ್ತಿದ್ದವನಿಗೆ ಕೋತಿಗಳ ಆ ಬಗೆಯ ಆತ್ಮರಕ್ಷಣಾ ಭಯವು ನಮ್ಮ ಜನರಲ್ಲೂ ಇದ್ದುದನ್ನು ಕಂಡ ನೆನಪಾಯಿತು.
ಹಾವುಗಳನ್ನು ಹಿಡಿಯಲು ಹೋದ ಸಂದರ್ಭಗಳಲ್ಲಿ, ಅವುಗಳ ಕುರಿತು ಮಾಹಿತಿಯನ್ನು ನೀಡಲು ಮುಂದಾದಾಗ ಅಲ್ಲಿನವರು ನನ್ನ ಸುತ್ತ ನೆರೆದು ಆಸಕ್ತಿಯಿಂದ ಕೇಳುತ್ತಿದ್ದರು. ಅದೇ ಸಮಯದಲ್ಲಿ ಕೆಲವು ಕೀಟಲೆಯ ಹುಡುಗರು ತಮ್ಮವರನ್ನು ಹೆದರಿಸಿ ಮಜಾ ತೆಗೆದುಕೊಳ್ಳಲು ಅವರ ಹಿಂದಿನಿಂದ ಹೋಗಿ ಸಪೂರದ ಕೋಲನ್ನೋ, ಇತರ ವಸ್ತುಗಳನ್ನೋ ಪಾದ, ಮತ್ತಿತರ ಅಂಗಗಳಿಗೆ ತಿವಿಯುತ್ತಿದ್ದುದುಂಟು. ಆಗ ಅಂಥವರು ಅಲ್ಲೊಂದು ಸಣ್ಣ ಭೂಕಂಪವೇ ಸಂಭವಿಸಿದಂತೆ ಅರಚಿ ನೆಗೆದು ಓಡುತ್ತಿದ್ದ ದೃಶ್ಯವು ಈಗ ಕೋತಿಗಳಲ್ಲೂ ಕಂಡದ್ದರಿಂದ ಇಲ್ಲೂ ಅಂದಿನ ನಗೆ ಮರುಕಳಿಸಿತು. ನಿಶ್ಶಬ್ದವಾಗಿ ನಕ್ಕವನಿಗೆ, ‘ಮನುಷ್ಯರು ಮತ್ತು ಕೋತಿಗಳ ನಡುವೆ ಸೋದರ ಸಂಬಂಧವಿದೆ!’ ಎಂಬ ಡಾರ್ವಿನ್ನನ ಮಾತು ನಿಜವೆನಿಸಿತು.
ನಾಗರ ಹಾವುಗಳಿಗಿಂತ ಹೆಬ್ಬಾವುಗಳು ಕೋತಿಗಳಿಗೆ ಹತ್ತಿರದ ಶತ್ರುಗಳು. ಕೋತಿಗಳಿರುವ ಪ್ರದೇಶದಲ್ಲಿ ಹೆಬ್ಬಾವುಗಳೂ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತವೆ. ಅವುಗಳಿಗೆ ಕೋತಿಗಳು ಕೂಡಾ ಪ್ರಿಯ ಆಹಾರ .ಕೋತಿಗಳು ಹಗಲು ಸಂಚಾರಿಗಳಾದರೆ ಹೆಬ್ಬಾವುಗಳು ರಾತ್ರಿ ಚಟುವಟಿಕೆಯವು. ಕೋತಿ ಕುಟುಂಬವು ರಾತ್ರಿ ಎತ್ತರದ ಮರಗಳಲ್ಲಿ ನಿದ್ರಿಸುವ ಸಮಯದಲ್ಲಿ ಹೆಬ್ಬಾವುಗಳು ಮರ ಹತ್ತಿ ಅವುಗಳನ್ನು ಹಿಡಿದು ಉಸಿರುಗಟ್ಟಿಸಿ ಕೊಂದು ನುಂಗುತ್ತ ಆಯಾಯ ಪ್ರದೇಶದ ವಾನರ ವಂಶವನ್ನು ಹತೋಟಿಯಲ್ಲಿಡುತ್ತವೆ. ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ನಾನು ಕೃಷಿಕರಿಗೆ, ನಿಮ್ಮ ವಠಾರ ಹಾಗೂ ಕೃಷಿ ಪರಿಸರದಲ್ಲಿ ಹೆಬ್ಬಾವುಗಳನ್ನು ವಾಸಿಸಲು ಬಿಡಿ. ಆವಾಗ ಕೋತಿಗಳ ಕಾಟ ಕಡಿಮೆಯಾಗುತ್ತದೆ ಎಂಬ ಸಲಹೆ ನೀಡುತ್ತಿದ್ದುದುಂಟು.
ಆದರೆ ಈಗ ಅದು ಅಷ್ಟು ಪರಿಣಾಮಕಾರಿಯಲ್ಲ ಎಂಬುದು ತಿಳಿಯುತ್ತಿದೆ. ಏಕೆಂದರೆ, ಹಿಂದೆ ಕೋಳಿ, ಹಂದಿ ಮತ್ತಿತರ ಕೆಲವು ಪ್ರಾಣಿಗಳ ದೇಹಗಳಲ್ಲಿ ಮಾತ್ರವೇ ವಾಸಿಸುತ್ತಿದ್ದಂಥ ಹಂದಿಜ್ವರದ ವೈರಾಣುಗಳು ಪ್ರಕೃತಿಯ ಆಯ್ಕೆಯ ಮೇರೆಗೆ ಹೇಗೆ ರೂಪಾಂತರಗೊಂಡು ಮನುಷ್ಯನ ದೇಹದಲ್ಲೂ ಬದುಕಲು ಕಲಿತಿವೆಯೋ ಹಾಗೆಯೇ ಕೋತಿಗಳು ಕೂಡಾ ಕಾಡುಗಳು ನಾಶವಾಗ ತೊಡಗಿದ ನಂತರ ನಾಡಿಗೆ ಬಂದು ರೈತರ ಬೆಳೆಗಳನ್ನು ಶ್ರಮವಿಲ್ಲದೆ ತಿಂದುಂಡು ಸ್ವೇಚ್ಛಾ ಜೀವನವನ್ನಾರಂಭಿಸಿವೆ. ತೋಟ, ಗದ್ದೆಗಳಿಂದ ತಮ್ಮನ್ನು ಓಡಿಸಲು ಪ್ರಯತ್ನಿಸುವಂಥ ಕೃಷಿಕರ ಅನೇಕ ಉಪಾಯಗಳನ್ನೂ ನಿಷ್ಫಲಗೊಳಿಸುತ್ತ ಬೆಳೆ ನಾಶದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಎಷ್ಟರ ಮಟ್ಟಿಗೆಂದರೆ, ತೆಂಗಿನ ಮರಗಳಿಗೆ ದಾಳಿಯಿಟ್ಟು ಸೀಯಾಳ ಕುಡಿಯುವ ಸಮಯದಲ್ಲಿ ಅವುಗಳನ್ನು ಓಡಿಸಲು ಪ್ರಯತ್ನಿಸುವವರ ನೆತ್ತಿಗೇ ಗುರಿಯಿಟ್ಟು ಸೀಯಾಳವನ್ನೆಸೆಯುವಷ್ಟು ಜೀವಿಸುವ ಕಲೆಯಲ್ಲಿ ಅವು ಯಶಸ್ಸುಕಂಡಿವೆ. ಹಾಗೆಯೇ ಹಿಂದೆ ಕಾಡಿನ ಪ್ರಾಣಿ ಪಕ್ಷಿಗಳನ್ನೇ ಅವಲಂಬಿಸಿ ಬದುಕುತ್ತಿದ್ದ ಹೆಬ್ಬಾವುಗಳೂ ಈಗೀಗ ತಮ್ಮ ವಾಸಸ್ಥಾನಗಳ ನಾಶ ಹಾಗೂ ಆಹಾರದ ಜೀವಿಗಳ ಕೊರತೆಯಿಂದಾಗಿ ಕೋತಿಗಳಂಥ ಕಷ್ಟಕರ ಬೇಟೆಯತ್ತ ಉದಾಸೀನ ತಳೆದು ಜನವಸತಿಗಳತ್ತ ಮುಖಮಾಡಿ, ಸಾಕುಪ್ರಾಣಿಗಳನ್ನು ಹಿಡಿದುತಿನ್ನುವ ಬದುಕಿಗೆ ಅಭ್ಯಾಸಗೊಳ್ಳುತ್ತಿವೆ.
ಇಲ್ಲಿ ಪೊದೆಯಲ್ಲಿ ಕುಳಿತ ಹೆಬ್ಬಾವನ್ನು ಸುತ್ತುವರೆದ ಕಪಿಗಳ ಗುಂಪಿನಲ್ಲಿ ಮತ್ತೊಂದು ವಿಚಿತ್ರವನ್ನು ಕಂಡು ಅಚ್ಚರಿಪಟ್ಟೆ.ಸುಮಾರು ಹೊತ್ತು ಆ ಪೊದೆಯ ಸುತ್ತಲೇ ಹೊಂಚು ಹಾಕಿ ಕುಳಿತಿದ್ದ ಕಪಿಗಳಲ್ಲಿ ಸಣ್ಣ ಪ್ರಾಯದ ಗಂಡು ಮಂಗವೊಂದು ಅದೇ ಪ್ರಾಯದ ಹೆಣ್ಣನ್ನು ಅಂಥ ಅಪಾಯಕರ ಸನ್ನಿವೇಶದಲ್ಲೂ ಬರಸೆಳೆದು ಕೂಡ ತೊಡಗಿತು! ಹೆಬ್ಬಾವು ಪೊದೆಯೊಳಗೆ ಆಗಾಗ ಮಿಸುಕಾಡುತ್ತಲೇ ಆ ಗಂಡು, ಹೆಣ್ಣನ್ನು ತಟ್ಟನೆ ತಳ್ಳಿ ದೂರ ನೆಗೆದು ಕೆಲವು ಕ್ಷಣ ಅತ್ತಿತ್ತ ಓಡಾಡಿ ಮತ್ತೆ ಕೂಡುತ್ತಿತ್ತು. ಸಾವೆಂಬುದು ಅವುಗಳ ಅತೀ ಸಮೀಪ, ಹಸಿದ ಹೆಬ್ಬಾವಿನ ರೂಪದಲ್ಲೇ ಹೊಂಚು ಹಾಕುತ್ತಿದೆ! ತುಸುವೇ ಮೈಮರೆತರೂ ಪ್ರಾಣಕ್ಕೇ ಸಂಚಕಾರ ಎಂಬುದೂ ಅವುಗಳಿಗೆ ತಿಳಿದಿದೆ. ಹಾಗಿದ್ದರೂ ತಲತಲಾಂತರದಿಂದ ನಿರಂತರ ಸಂಘರ್ಷಮಯ, ನಿಷ್ಠುರ ಪರಿಸರದಲ್ಲೇ ಬದುಕು ಕಟ್ಟಿಕೊಂಡು, ಸಂತತಿಯನ್ನು ಬೆಳೆಸುತ್ತ, ಯಶಸ್ವಿಯಾಗಿ ಜೀವಿಸುವ ಕಲೆಯನ್ನು ಅವುಗಳಿಗೆ ನೀಡಿದ ಪ್ರಕೃತಿಯ ಚಮತ್ಕಾರವನ್ನು ನೆನೆದು ವಿಸ್ಮಯವಾಯಿತು .ಜೊತೆಗೆ, ಅದೇ ಪ್ರಕೃತಿ ಇತರ ಜೀವರಾಶಿಗಳೊಂದಿಗೆ ಅನ್ಯೋನ್ಯವಾಗಿ ಜೀವಿಸುವ ಕಲೆಯನ್ನು ನಮಗೂ ದಯಪಾಲಿಸಿದೆ. ಆದರೆ ನಾವೇಕೆ ಅಂತಹ ಮಹತ್ವದ ಸಂಗತಿಗಳಿಂದ ಸದಾ ವಿಮುಖರಾಗಲೇ ಉತ್ಸುಕರಾಗಿದ್ದೇವೆ…? ಎಂಬ ಪ್ರಶ್ನೆಯೂ ಮೂಡಿತು. ಅಷ್ಟರಲ್ಲಿ ಕೋತಿಗಳ ನಾಯಕ ರಪ್ಪನೆ ಮರವೇರಿದ. ಅವನ ಬಳಗವೂ ಒಂದೊಂದಾಗಿ ಹಿಂಬಾಲಿಸಿ ದೂರ ದೂರದ ಮರಗಳಿಗೆ ನೆಗೆಯುತ್ತ ಕಣ್ಮರೆಯಾಯಿತು. ಮುಂದಿನ ಕ್ಷಣ, ‘ಅಯ್ಯೋ…ಸಾರ್ ನಮ್ಮ ನಾಯಿಗಳು ನಾಗರಹಾವೊಂದನ್ನು ಹಿಡಿದು ಘಾಸಿಗೊಳಿಸಿವೆ. ಆದಷ್ಟು ಬೇಗ ಬನ್ನಿ…!’ ಎಂಬ ಕರೆ ಬಂದಾಗನಾನೂ ಹಿಂದಿರುಗಿದೆ.
*******
2 thoughts on “ವನ್ಯ ಜೀವಿಗಳ ಅಭದ್ರ ಬದುಕಿನಲ್ಲೂ ಭದ್ರತೆಯ ಕಲೆ!”
ಪರಿಸರ ಜೀವಿಗಳ ಕುರಿತು ಅರಿವು ಮೂಡಿಸುವ ಮಾಹಿತಿಪೂರ್ಣ ಲೇಖನ. ಅಭಿನಂದನೆ 👌👌👌👌
ಧನ್ಯವಾದ ಅನಿತಾ ಅವರೇ…