ವಿ.ಕೃ.ಗೋಕಾಕರ ಇಂದಿನ ಕರ್ನಾಟಕ

ಕನ್ನಡದ ಖ್ಯಾತ ಕವಿಗಳಾದ ವಿ.ಕೃ.ಗೋಕಾಕರು ಸಂಪಾದಿಸಿ, ಧಾರವಾಡದ ಲಲಿತ ಸಾಹಿತ್ಯ ಮಾಲೆಯ ಮೂಲಕ ಪ್ರಕಟಿಸಿದ “ಇಂದಿನ ಕರ್ನಾಟಕ” ಒಂದು ವಿಶಿಷ್ಟ ಕೃತಿ. “ಇಂದಿನ ಕರ್ನಾಟಕ” ಕೃತಿ ಪ್ರಕಟವಾದಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅದೇ ರೀತಿ ಕರ್ನಾಟಕ ರಾಜ್ಯವೂ ಅಸ್ತಿತ್ವದಲ್ಲಿರಲಿಲ್ಲ. ಆ ಸಮಯದಲ್ಲಿ ಕನ್ನಡ ನಾಡು ಹತ್ತು ಹಲವು ಭಾಗಗಳಲ್ಲಿ ಹರಿದು ಹಂಚಿ ಹೋಗಿತ್ತು. ಏಕೀಕೃತ ಕರ್ನಾಟಕದ ಬಗೆಗೆ ಕನಸು ಕಂಡ ನಮ್ಮ ಹಿರಿಯರು ಇಂತಹದೊಂದು ವಿಶಿಷ್ಟ ಪುಸ್ತಕವನ್ನು ‘ಏಕೀಕೃತ ಕರ್ನಾಟಕದ ಆತ್ಮಪುರುಷನ ಅಲರಡಿಯಲ್ಲಿ’ ಅರ್ಪಿಸಿದ್ದು ತುಂಬ ಸಮಯೋಚಿತವಾಗಿದೆ.

1945ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಕೃತಿ ಕನ್ನಡ ನಾಡಿನ ಕೆಲವು ನಗರ, ಪಟ್ಟಣ ಮತ್ತು ಹಳ್ಳಿಗಳ ಕುರಿತು ಸ್ಥೂಲ ಪರಿಚಯ ನೀಡುವ ಪ್ರಬಂಧಗಳನ್ನೊಳಗೊಂಡಿದೆ. ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಮದ್ರಾಸ್ ಕರ್ನಾಟಕ, ನಿಜಾಂ ಕರ್ನಾಟಕ ಮತ್ತು ಕೊಡಗು-ಕನ್ನಡ ಎಂಬ ಐದು ಭಾಗಗಳಲ್ಲಿ ಒಟ್ಟು ಹದಿನೆಂಟು ಊರುಗಳ ಕುರಿತ ಪ್ರಬಂಧಗಳಿವೆ.

ವಿ.ಕೃ.ಗೋಕಾಕರು ‘ಕ್ರಾಂತಿಪ್ರಿಯ’ ಎಂಬ ನಾಮಧೇಯದಲ್ಲಿ ಬರೆದ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ, ವಿಜಾಪುರ (ವಿಜಯಪುರ) ಮತ್ತು ಅಥಣಿ ಬಗೆಗಿನ ಪ್ರಬಂಧಗಳೂ ಸೇರಿದಂತೆ ಶಿವರಾಂ ಕಾರಂತ, ಸಿಂಪಿ ಲಿಂಗಣ್ಣ, ವಿಹಾರಿ (ವಿ.ಎಂ.ಇನಾಂದಾರ) ಮತ್ತು ದ.ಬಾ.ಕುಲಕರ್ಣಿಯವರಂತಹ ಲೇಖಕರು ಮಂಗಳೂರು, ಹಲಸಂಗಿ, ಚಡಚಣ, ಮೈಸೂರು, ಬಳ್ಳಾರಿ ಮತ್ತು ಮಡಿಕೇರಿಯನ್ನು ಕುರಿತು ಬರೆದ ಪ್ರಬಂಧಗಳು ತುಂಬ ಸ್ವಾರಸ್ಯಕರವಾಗಿವೆ.

ಇಂತಹದೊಂದು ವಿಶಿಷ್ಟ ಪುಸ್ತಕದ ಅಗತ್ಯದ ಬಗ್ಗೆ ಸಂಪಾದಕರಾದ ವಿ.ಕೃ.ಗೋಕಾಕರು ಬರೆದ ಮಾತುಗಳು ಗಮನ ಸೆಳೆಯುವಂತಿವೆ.

“ಇಲ್ಲಿ ಸಾಧಿಸಲು ಪ್ರಯತ್ನಿಸಿದ್ದು ಬರಿ ಭೂಗೋಲವಲ್ಲ, ಭೂಗೋಲ ವಿಜ್ಞಾನದ ಆತ್ಮವಿಕಾಸ. ಮಣ್ಣು, ಉಸಿರು, ಮನಸ್ಸು, ಬುದ್ಧಿ ಮೊದಲಾದ ಸಾಮಗ್ರಿಗಳ ಕೂಟವನ್ನು ಬಳಸಿಕೊಂಡು ಓರ್ವ ವ್ಯಕ್ತಿಯ ವ್ಯಕ್ತಿತ್ವವು ಬೆಳೆಯುವಂತೆ ಹವಾಮಾನ, ಋತುಮಾನ, ಐತಿಹಾಸಿಕ ಚಾರಿತ್ರ್ಯ, ರಾಜಕಾರಣ ಮೊದಲಾದ ಅಂಗಗಳನ್ನು ಸೇರ್ಪಡಿಸಿಕೊಂಡ ಒಂದೊಂದು ಸ್ಥಳವೂ ಒಂದೊಂದು ವೈಶಿಷ್ಟ್ಯವನ್ನೂ, ಮಹತಿಯನ್ನೂ ಪಡೆದಿರುತ್ತದೆ. ಇಪ್ಪತ್ತನೆಯ ಶತಮಾನದಲ್ಲಿ ಜನ್ಮ ತಾಳಲಿರುವ ಅಖಂಡ ಕರ್ನಾಟಕದ ದೃಷ್ಟಿಯಿಂದ ಕನ್ನಡ ನಾಡಿನಲ್ಲಿಯ ಪಟ್ಟಣ-ಹಳ್ಳಿಗಳಲ್ಲಿ ಬೆಳೆದು ಬರುತ್ತಿರುವ ಹೊಸ ಜೀವನವನ್ನು ಇಲ್ಲಿ ಚಿತ್ರಿಸಲು ಹವಣಿಸಿದೆ.”

(ಪುಟ v)

ವಿದ್ಯಾನಗರಿ, ಸಾಹಿತಿಗಳು, ಸಂಗೀತಗಾರರು ಮತ್ತು ಕಲಾವಿದರ ತವರೂರು, ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಧಾರವಾಡ ನಗರದ ಕುರಿತ ಪ್ರಬಂಧದಲ್ಲಿ ವಿ.ಕೃ.ಗೋಕಾಕರು ಧಾರವಾಡ ನಗರದ ವಿಶೇಷತೆಗಳನ್ನು ತುಂಬ ಸಡಗರದಿಂದ ಚಿತ್ರಿಸಿದ್ದಾರೆ. 20ನೆಯ ಶತಮಾನದ ಆರಂಭದಲ್ಲಿ  ಧಾರವಾಡ ನಗರ ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡ ಬಗೆಗೆ ವಿವರಿಸಿದ್ದಾರೆ. ಗೋಕಾಕರು ಧಾರವಾಡದ ಕುರಿತು ಸುಮಾರು ಎಪ್ಪತ್ತಾರು ವರ್ಷಗಳ ಹಿಂದೆ ಬರೆದ ಸಾಲುಗಳಿವು,

“ಧಾರವಾಡವು ಹುಬ್ಬಳ್ಳಿಯ ರಸ್ತೆಯಗುಂಟ ಹಬ್ಬಬೇಕು. ಹುಬ್ಬಳ್ಳಿಯು ಧಾರವಾಡದ ರಸ್ತೆಯಗುಂಟ ಹಬ್ಬಬೇಕು. ಎರಡೂ ನಗರಗಳು ಕೂಡಿ ಒಂದು ಮಹಾನಗರವಾಗಬೇಕು. ಹೀಗೆ ಧಾರವಾಡ-ಹುಬ್ಬಳ್ಳಿ ನಗರವು ಉತ್ತರ ಕರ್ನಾಟಕದ ಬಳ್ಳಿಗೆ ಬಿಟ್ಟ ಹೂವಾಗಬೇಕು. ಉತ್ತರದ ಬೆಂಗಳೂರಾಗಬೇಕು. ಹುಬ್ಬಳಿಯ ಭಾಗವು ಉದ್ಯೋಗದ ಕೇಂದ್ರ. ಧಾರವಾಡ ಭಾಗವು ಸಂಸ್ಕೃತಿಯ ಕೇಂದ್ರ. ಇಂಥ ಎರಡು ಭಾಗಗಳನ್ನೊಳಗೊಂಡ ಮಹಾನಗರವು ಮುಂಬೈ ಕರ್ನಾಟಕದ ಮುಖ್ಯ ಪಟ್ಟಣವಾಗಬೇಕು. ಇದೊಂದು ನಾವು ಕಾಣುತ್ತಿರುವ ಕನಸು.”

(ಪುಟ 4-5)

ಗೋಕಾಕರೂ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಹಿರಿಯರು ಅಂದು ಕಂಡ ಕನಸು ಇಂದು ಬಹುತೇಕ ನನಸಾಗಿದೆಯೆಂದೇ ಹೇಳಬಹುದು. ಹುಬ್ಬಳ್ಳಿಯು ವಾಣಿಜ್ಯ ನಗರಿಯಾಗಿಯೂ, ಧಾರವಾಡವು ಸಾಂಸ್ಕೃತಿಕ ನಗರಿಯಾಗಿಯೂ ಉತ್ತರ ಕರ್ನಾಟಕದ ಕೇಂದ್ರವಾಗಿ ಕಂಗೊಳಿಸುತ್ತಿವೆ.

ಉತ್ತರ ಕರ್ನಾಟಕದ ಅತ್ಯಂತ ಪ್ರಮುಖ ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿಯ ಕುರಿತು ಬರೆಯುತ್ತ ಗೋಕಾಕರು ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಅಂದೂ ಇಂದೂ ಹುಬ್ಬಳ್ಳಿ ಅನೇಕ ವಲಸಿಗರಿಗೆ ಆಶ್ರಯ ನೀಡಿದೆ. ಮರಾಠರು, ಕೊಂಕಣಿಗಳು, ತೆಲುಗರು, ಗುಜರಾತಿಗಳು, ಮಾರ್ವಾಡಿಗಳು ಮತ್ತು ಬಿಹಾರಿಗಳು ಸೇರಿದಂತೆ ಭಾರತದ ನಾನಾ ಭಾಗದಿಂದ ಬಂದ ಜನರು ಹುಬ್ಬಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಮತ್ತು ವರ್ಕಶಾಪ್ ಹೊಂದಿದ ಹುಬ್ಬಳ್ಳಿ ಅನೇಕ ಜನರ ಅನ್ನಕ್ಕೆ ದಾರಿಯಾಗಿದೆ.

ವಾಣಿಜ್ಯ ನಗರಿಯಾದ ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ನೆಲೆಯಾಗಿಯೂ ಖ್ಯಾತವಾಗಿದೆ. ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕದ ಏಕೀಕರಣ ಚಳುವಳಿಗಳ ಮೂಲಕ ಹುಬ್ಬಳ್ಳಿ ನಾಡಿನ ಗಮನ ಸೆಳೆದಿದ್ದು ಈಗ ಇತಿಹಾಸ. ಕೆಲವು ಜಾತಿ ಸಂಘರ್ಷಗಳಂತಹ ಅಪ್ರಿಯ ಘಟನೆಗಳಿಗೂ ಹುಬ್ಬಳ್ಳಿ ಸಾಕ್ಷಿಯಾಗಿದೆ. ಗೋಕಾಕರು ನಲವತ್ತರ ದಶಕದ ಹುಬ್ಬಳ್ಳಿಯ ಜೀವಂತ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಹೆಸರು ಕೇಳಿದರೇ ಮರಾಠಿಗರಿಗೆ ರೋಮಾಂಚನವಾಗುತ್ತದೆ. ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವುದೇ ವಿಷಯ ಸಿಕ್ಕದಿದ್ದರೆ ಅವರಿಗೆ ನೆನಪಾಗುವುದೇ ನಮ್ಮ ಬೆಳಗಾವಿ. ಮಹಾರಾಷ್ಟ್ರದ ಸಮಯಸಾಧಕ ರಾಜಕಾರಣಿಗಳು ತುಂಬ ಸುಲಭವಾಗಿ ಬೆಳಗಾವಿ ಪ್ರಶ್ನೆಯನ್ನೆತ್ತಿ ಅಂಧಾಭಿಮಾನಿಗಳಾದ ಮರಾಠಿಗರನ್ನು ರೊಚ್ಚಿಗೆಬ್ಬಿಸುತ್ತಾರೆ. ಈಗಲೇ ಇಂತಹ ಸ್ಥಿತಿಯಿದ್ದರೆ, ಸುಮಾರು 76 ವರ್ಷಗಳ ಹಿಂದಿನ ಸ್ಥಿತಿ ಹೇಗಿರಬಹುದು? ಅಂದಿನ ಬೆಳಗಾವಿಯ ಸ್ಥಿತಿ, ಮರಾಠಿಗರ ವೀರಾಭಿಮಾನ ಮತ್ತು ಕನ್ನಡಿಗರ ನಿರಭಿಮಾನದ ಕುರಿತು ಗೋಕಾಕರು ತುಂಬ ವ್ಯಥೆಯಿಂದ ಬರೆದಿದ್ದಾರೆ.

ವಿಜಾಪುರ ನಗರದ ವಿಶೇಷಗಳಾದ ಗೋಲಗುಮ್ಮಟ, ಮಸೀದಿ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳು ಮತ್ತು ಆದಿಲಶಾಹಿಗಳ ಆಳ್ವಿಕೆಯ ಬಗ್ಗೆ ಬರೆಯುವ ಗೋಕಾಕರು ವಿಜಾಪುರದಲ್ಲಾದ ಕನ್ನಡ ಪರ ಬೆಳವಣಿಗೆಗಳ ಕುರಿತು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ವಿಜಾಪುರದಲ್ಲಾದ ಕೆಲವು ಕೋಮುಗಲಭೆಗಳ ಪ್ರಸ್ತಾಪವೂ ಇಲ್ಲಿದೆ. ಅಂದಿನ ಸ್ಥಿತಿಯ ಬಗ್ಗೆ ಆ ದಿನಗಳಲ್ಲಿ ಗೋಕಾಕರು ಬರೆದ ಮಾತುಗಳು ಇಂದಿಗೂ ಪ್ರಸ್ತುತವಾಗುವಂತಿರುವುದು ಗಮನಾರ್ಹ.

“ಜಾತಿ-ಜಾತಿಗಳ ಬಡಿದಾಟವು ಎಂದು ಲಯವಾಗುವುದೋ ದೇವರೇ ಬಲ್ಲ ಜಗಳಾಡುವ ಜನರ ಜಾತಿ ಇರುವವರೆಗೆ ಇದೂ ಉಳಿಯುವ ಹಾಗೆ ತೋರುತ್ತದೆ! ಕಾಲು ಕೆದರಿ ನ್ಯಾಯ ಮಾಡುಬೇಕೆನ್ನುವವರಿಗೆ ಯಾವ ಕುಂಟು ನೆವವೂ ಸಾಕಾಗಬಹುದು, ಜಾತಿಯ ಭೂತವೊಂದೇ ಏಕೆ! ಆದರೆ ನಾವಿಂದು ಕೇಳಿಕೊಳ್ಳುವುದು ಇಷ್ಟೇ ಆರ್ಥಿಕ ಇಲ್ಲವೇ ರಾಜಕೀಯ ರಂಗದಲ್ಲಿಯ ಅನರ್ಥಗಳು ಸಾಹಿತ್ಯ ಸಂಸ್ಕೃತಿಗಳನ್ನಾದರೂ ಮುಟ್ಟದಿರಲಿ. ಒಂದೆಡೆಗಾದರೂ ನಾವು ಮಡಿವಂತರಾಗಿ ಬಾಳೋಣ.  ಸಾಹಿತ್ಯ ಲೋಕದಲ್ಲಿ ಕಲಿತ ಸಂಘಟನೆಯಿಂದ, ಸದಾಚಾರದಿಂದ, ಸಮ್ಮಿಲನದಿಂದ ನಾಳೆ ಜೀವನದ ಉಳಿದ ಕ್ಷೇತ್ರಗಳಲ್ಲಿಯಾದರೂ ತಿಳುವಳಿಕೆ ಹಬ್ಬೀತು. ಸಾಹಿತ್ಯ ರಂಗವಾದರೂ ಪವಿತ್ರ ಪ್ರಯೋಗಶಾಲೆಯೆಂದು ನಾವು ಬಗೆಯೋಣ. ಇಲ್ಲಿಯೂ ರಾಡಿಯನ್ನೊಗೆದು ಬಾವಿಯನ್ನು ತುಂಬಿ ಕೊಳಚೆಯೆಂದು ಅದನ್ನೆಬ್ಬಿಸಿದರೆ – ಮುಂದೆ ಗತಿಯೇನು?”

(ಪುಟ 38)

ಬೆಂಗಳೂರಿನ ಕುರಿತ ಪ್ರಬಂಧದಲ್ಲಿ ಗೋಕಾಕರು ಆ ಕಾಲದಲ್ಲೇ ಬೆಂಗಳೂರು ಭವಿಷ್ಯದ ಕಾಸ್ಮೋಪಾಲಿಟನ್ ನಗರವಾಗಿ ಬೆಳೆಯುತ್ತಿರುವುದನ್ನು ಮನಗಾಣಿಸಿದ್ದಾರೆ. ನಮ್ಮ ದೇಶದ ಅತ್ಯಂತ ಸುಂದರ ನಗರಗಳಲ್ಲೊಂದಾದ ಬೆಂಗಳೂರಿನ ವಿಶೇಷತೆಗಳಾದ ಕನ್ನಡ ಸಾಹಿತ್ಯ ಪರಿಷತ್ತು, ಉದ್ಯಾನಗಳು, ವಿದ್ಯಾ ಮಂದಿರಗಳು, ಟಾಟಾ ವಿಜ್ಞಾನ ಸಂಸ್ಥೆ, ವಾಣಿಜ್ಯೋದ್ಯಮ, ಸುಗಮ ಸಾರಿಗೆ ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ ಮತ್ತು ಮುದ್ರಣಾಲಯಗಳ ಕುರಿತು ಸಹ ಗೋಕಾಕರು ಪ್ರಸ್ತಾಪಿಸಿದ್ದಾರೆ.

ಆ ದಿನಗಳಲ್ಲಿ ತಮಿಳು ಜನರಿಂದ ತುಂಬಿದ ದಂಡು ಪ್ರದೇಶದಲ್ಲಿ ಕನ್ನಡದವರಿಗುಂಟಾಗುವ ಅನಾನುಕೂಲತೆಗಳ ಕುರಿತು ಉಲ್ಲೇಖಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಬಂದ ಜನರಿಗೆಲ್ಲ ಬೆಂಗಳೂರು ಆಶ್ರಯ ನೀಡಿದೆ. ಇಂದಿನಂತೆಯೇ ಅಂದೂ ಸಹ ಯಾವ ರೀತಿ ಕನ್ನಡೇತರರ ಹಾವಳಿ ಬೆಂಗಳೂರಲ್ಲಿತ್ತೆಂಬುದರ ಕುರಿತ ವಿವರಗಳು ಕುತೂಹಲಕರವಾಗಿವೆ.

ಆ ಕಾಲದಲ್ಲಿ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಮೈಸೂರು ನಗರ ಇಂದಿಗೂ ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಈಗಲೂ ತಮಿಳು, ತೆಲುಗು ಮತ್ತು ಮಲಯಾಳಿಗಳಿಗೆ ಕರ್ನಾಟಕವೆಂದರೆ ನೆನಪಾಗುವುದೇ ಬೆಂಗಳೂರು ಮತ್ತು ಮೈಸೂರು. ಈ ಕನ್ನೇಡತರ ಜನ ವಲಸಿಗರಾಗಿ ಬಂದು ಬೆಂಗಳೂರು, ಮೈಸೂರು ನಗರಗಳಲ್ಲಿ ಖಾಯಮ್ಮಾಗಿ ನೆಲೆ ನಿಂತಿದ್ದಾರೆ.

ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾದ ಮೈಸೂರು ದೇಶ-ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅರಮನೆಗಳು, ಉದ್ಯಾನಗಳು, ಮೈಸೂರು ವಿಶ್ವವಿದ್ಯಾನಿಲಯ, ಸಂಗೀತಗಾರರು, ಗಾಯಕರು ಮತ್ತು ಕಲಾವಿದರಿಂದ ಸಂಪನ್ನವಾದ ಮೈಸೂರು ಮಹಾರಾಜರ ರಾಜಾಸ್ಥಾನ, ಮೈಸೂರು ಮಹಾಜನತೆಯ ರಾಜಭಕ್ತಿ, ಮೈಸೂರು ದಸರೆಯ ವೈಭವ, ಅಸಂಖ್ಯ ವಿದ್ಯುದ್ದೀಪಗಳಿಂದ ಜಗಮಗಿಸುವ ಬೃಂದಾವನ ಮತ್ತು ನಾಡದೇವಿಯ ಆವಾಸ ಸ್ಥಾನವಾದ ಚಾಮುಂಡಿ ಬೆಟ್ಟ ನೋಡುಗರ ಕಣ್ಮನಗಳನ್ನು ತಣಿಸುತ್ತವೆ.

ಇಷ್ಟೆಲ್ಲ ಖ್ಯಾತಿ ಪಡೆದ ಮೈಸೂರಿನಲ್ಲಿ ಉತ್ತರ ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾದ ಧಾರವಾಡದಲ್ಲಿ ನಡೆದಷ್ಟು ಕನ್ನಡಪರ ಕೆಲಸಗಳು ನಡೆಯುತ್ತಿಲ್ಲವೆಂಬುದನ್ನು ಉಲ್ಲೇಖಿಸುತ್ತಾ ಲೇಖಕರು ತುಂಬ ಖೇದ ವ್ಯಕ್ತಪಡಿಸಿದ್ದಾರೆ. ತೆಲುಗು, ತಮಿಳರ ಹಾವಳಿಯಿಂದ ಕನ್ನಡ ಬಡವಾಗುತ್ತಿರುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ಬಂದರು ನಗರಿ ಕಾರವಾರದ ಕುರಿತ ಮ.ಗ.ಶೆಟ್ಟಿಯವರ ಪ್ರಬಂಧ ಮನೋಜ್ಞವಾಗಿದೆ.ಒಂದು ಬದಿ ಕಡಲು ಮತ್ತೊಂದು ಬದಿ ದಟ್ಟ ಕಾನನ ಹೊಂದಿದ ಕಾರವಾರ ನಿಜಕ್ಕೂ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಕಾರವಾರದಲ್ಲಿ ಕನ್ನಡಕ್ಕೆ ಎದುರಾಳಿಯಾಗಿರುವುದು ಮರಾಠಿಯೇ ಹೊರತು ಕೊಂಕಣಿಯಲ್ಲ ಎಂಬುದನ್ನು ಲೇಖಕರು ಸಾಧಾರವಾಗಿ ಸಾಬೀತು ಪಡಿಸಲು ಶ್ರಮಿಸಿದ್ದಾರೆ.

ಕನ್ನಡ ನಾಡಿನ ಭಾಗವಾದರೂ ಮದ್ರಾಸ್ ಪ್ರಾಂತಕ್ಕೆ ಸೇರಿದ ಮಂಗಳೂರಲ್ಲಿ ತುಳು ಮತ್ತು ಕೊಂಕಣಿ ಭಾಷೆಗಳು ಮೇಲುಗೈ ಪಡೆದು ಕನ್ನಡ ಹಿಂದಾದುದರ ಕುರಿತು ಶಿವರಾಂ ಕಾರಂತರು ಬರೆದಿದ್ದಾರೆ. ಮಂಗಳೂರು ನಗರದ ಮಿಷನರಿಗಳು ಕನ್ನಡದ ಏಳಿಗೆಗೆ ಶ್ರಮಿಸಿದ್ದನ್ನು ಉಲ್ಲೇಖಿಸುವುದನ್ನು ಕಾರಂತರು ಮರೆತಿಲ್ಲ.

ಕರ್ನಾಟಕಾಂಧ್ರದ ಗಡಿಪ್ರದೇಶದ ದೊಡ್ಡ ನಗರಗಳಲ್ಲೊಂದಾದ ಬಳ್ಳಾರಿ ಆ ಕಾಲದಲ್ಲಿ ಮದ್ರಾಸ್ ಪ್ರಾಂತ್ಯದ ಭಾಗವಾಗಿತ್ತು. ಬಿಸಿಲನಗರಿಯಾದ ಬಳ್ಳಾರಿಯಲ್ಲಿ ಕನ್ನಡಕ್ಕಿಂತ ತೆಲುಗೇ ಹೆಚ್ಚು ಪ್ರಬಲವಾಗಿದೆ. ಇಂದಿಗೂ ಆ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನಾಗಿಲ್ಲ ಆದರೆ ಕನ್ನಡಿಗರು ಮತ್ತು ಮರಾಠಿಗರ ನಡುವಿರುವ ದ್ವೇಷದಂತೆ ಕನ್ನಡಿಗರು ಹಾಗೂ ತೆಲುಗರ ನಡುವೆ ದ್ವೇಷವಿರದೇ ಸಾಮರಸ್ಯವಿದೆಯೆಂಬುದೇ ಸಮಾಧಾನದ ಸಂಗತಿ.

ಆ ಕಾಲದ ಬಳ್ಳಾರಿಯಲ್ಲಿ ತೆಲುಗು ಭಾಷೆ ಮತ್ತು ರಂಗಭೂಮಿಗೆ ಸಿಕ್ಕಷ್ಟು ಪ್ರೋತ್ಸಾಹ ಕನ್ನಡಕ್ಕೆ ಸಿಗಲಿಲ್ಲ. ಎಲ್ಲಕ್ಕಿಂತ ಆಶ್ಚರ್ಯವೆಂದರೆ ತೆಲುಗನ್ನು ಬೆಂಬಲಿಸಿ ಬೆಳೆಸಿದವರು ವೀರ ಕನ್ನಡಿಗರೆಂಬುದು. ಬಳ್ಳಾರಿಯಲ್ಲಿ ಕನ್ನಡಕ್ಕಿಂತ ತೆಲುಗು ಶಾಲೆಗಳು ಹೆಚ್ಚಿದ್ದು ಕನ್ನಡ ಜನ ಕೂಡ ತೆಲುಗಿಗೇ ಪ್ರಾಶಸ್ತ್ಯ ನೀಡುತ್ತಿದ್ದರೆಂಬ ವಿವರಗಳು ತುಂಬ ಕುತೂಹಲಕಾರಿಯಾಗಿವೆ. ಬ್ರಿಟಿಷರ ಕಾಲದಲ್ಲಿ ಆಂಧ್ರಕ್ಕೆ ಸೇರಿದ ಆದವಾನಿಯಲ್ಲಿ ಕನ್ನಡಪರ ಚಳುವಳಿಗಾರರು ತಲೆಯೆತ್ತಿ ಹೇಗಾದರೂ ಮತ್ತೊಮ್ಮೆ ಕರ್ನಾಟಕಕ್ಕೆ ಆದವಾನಿಯನ್ನು ಸೇರಿಸಲು ಪಟ್ಟ ಶ್ರಮದ ಬಗೆಗೆ ಲೇಖಕರು ವಿವರಿಸಿದ್ದಾರೆ.

ಧಾರವಾಡ ಜಿಲ್ಲೆಯ ಒಂದು ಚಿಕ್ಕ ಹಳ್ಳಿಯಾದ ಹುಲಗೂರಿನ ಕುರಿತ ಲೇಖಕ ಲಕ್ಷ್ಮೇಶ್ವರರ ಬರಹ ಕುತೂಹಲಕರ ವಿವರಗಳಿಂದ ಕೂಡಿದೆ. ಸುತ್ತ ಮುತ್ತಲಿನ ಕೆಲವು ಹಳ್ಳಿಗಳಿಗೆ ಕೇಂದ್ರ ಸ್ಥಾನದಲ್ಲಿರುವ ಹುಲಗೂರಿನಲ್ಲಿ ನಡೆಯುವ ಸಂತೆ ಆ ಭಾಗದಲ್ಲಿ ತುಂಬ ಖ್ಯಾತಿ ಪಡೆದಿದೆ. ಲೇಖಕರು ಇಲ್ಲಿ ಸಂತಕವಿ ಶಿಶುನಾಳ ಶರೀಫರು ಮತ್ತು ಗುರು ಗೋವಿಂದ ಭಟ್ಟರ ಲೀಲೆಗಳು, ಖಾದ್ರಿ ಆದಿಲ್ ಶಾಹ ಎಂಬ ಸತ್ಪುರುಷರ ದರ್ಗಾ ಮತ್ತು ಹುಲಗೂರಿನ ಜನರ ಕೋಮುಸಾಮರಸ್ಯದ ಬಗೆಗೆ ವಿವರವಾದ ಮಾಹಿತಿ ನೀಡಿದ್ದಾರೆ. ಹುಲಗೂರಿನ ಸಂತೆ, ಜಾತ್ರೆ, ಮತ್ತು ಉರುಸುಗಳ ಬಗ್ಗೆ ಮಾತ್ರವಲ್ಲ ಆ ಕಾಲದಲ್ಲಿ ಖ್ಯಾತನಾಗಿದ್ದ ಇಮಾಮ ಎಂಬ ಕಳ್ಳನ ಬಗ್ಗೆಯೂ ಬರೆದಿದ್ದಾರೆ.

ಮಧುರಚೆನ್ನರ ‘ಗೆಳೆಯರ ಗುಂಪು’ ಕನ್ನಡ ಸಾಹಿತ್ಯಪ್ರಿಯರೆಗೆಲ್ಲ ಪರಿಚಿತ. ಹಲಸಂಗಿ ವಿಜಾಪುರ ಜಿಲ್ಲೆಯ ಒಂದು ಸಾಧಾರಣ ಹಳ್ಳಿಯಾದರೂ ಸಹ ಮಧುರಚೆನ್ನರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ನಾಡಿನ ಗಮನ ಸೆಳೆದಿದೆ. ಒಂದು ಸಣ್ಣ ಹಳ್ಳಿಯಾದರೂ ಹಲಸಂಗಿಯಲ್ಲಿ ನಡೆದ ಕನ್ನಡಪರ ಕೆಲಸಗಳು ಎಂತಹವರೂ ಮೆಚ್ಚುವಂತಿವೆ.

ಜಾನಪದ ವಿದ್ವಾಂಸರಾದ ಸಿಂಪಿ ಲಿಂಗಣ್ಣನವರ ಕರ್ಮಭೂಮಿ ಚಡಚಣ. ವಿಜಾಪುರ ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಕೇಂದ್ರವಾಗಿದ್ದ ಚಡಚಣ ಆ ದಿನಗಳಿಂದಲೂ ಒಂದು ಮುಖ್ಯ ವ್ಯಾಪಾರಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಿಂಪಿ ಲಿಂಗಣ್ಣನವರು ನೀಡಿರುವ ಅಂದಿನ ಹಲಸಂಗಿ ಮತ್ತು ಚಡಚಣದ ಸಂಕ್ಷಿಪ್ತ ಪರಿಚಯ ಉಪಯುಕ್ತ ಮಾಹಿತಿಯೊದಗಿಸುತ್ತದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳವಿರುವ ನಂದಗಡ ಹಾಗೂ ಅಥಣಿಯ ಕುರಿತ ಲೇಖನಗಳಲ್ಲಿ ಅಲ್ಲಿನ ಸ್ಥಳ ವಿಶೇಷತೆಗಳೊಂದಿಗೆ ಮರಾಠಿ ಭಾಷೆಯ ಪ್ರಾಬಲ್ಯ ಮತ್ತು ಕನ್ನಡ ಭಾಷೆಯ ಅವಗಣನೆಯ ಬಗೆಗೆ ಮಾಹಿತಿಯಿದೆ. ಕನ್ನಡದ ಕುರಿತು ಕನ್ನಡಿಗರೇ ತೋರಿಸುತ್ತಿರುವ ನಿರ್ಲಕ್ಷ್ಯದ ಬಗೆಗೆ ವ್ಯಥೆಯಿದೆ.

ನಿಜಾಂ ಕರ್ನಾಟಕದ ಭಾಗವಾದ ರಾಯಚೂರು ಆ ದಿನಗಳಲ್ಲಿ ಮೊಗಲಾಯಿಗಳ ಆಳ್ವಿಕೆಯಲ್ಲಿ ಬಸವಳಿದು ಹೋಗಿತ್ತು. ತೆಲುಗು, ಉರ್ದುಗಳ ಹಾವಳಿಗೆ ಸಿಕ್ಕು ಕನ್ನಡ ಸೊರಗಿ ಹೋಗಿತ್ತು. ಆ ಭಾಗದ ಪ್ರಮುಖ ವ್ಯಾಪಾರ ಕೇಂದ್ರವಾಗಬಹುದಾದ ಎಲ್ಲ ಅವಕಾಶಗಳಿದ್ದರೂ ರಾಯಚೂರು ಹೆಚ್ಚಿನ ಅಭಿವೃದ್ಧಿ ಕಾಣದೇ ಹೋದದ್ದರ ಕುರಿತು ಲೇಖಕರು ವಿಷಾದಿಸಿದ್ದಾರೆ.

ಜಗನ್ನಾಥ ದಾಸರು ಮತ್ತು ವಿಜಯದಾಸರ ಕರ್ಮಭೂಮಿಯಾದ ಮಾನ್ವಿ ತಾಲ್ಲೂಕು ಕೇಂದ್ರವಾದರೂ ಒಂದು ಹಳ್ಳಿಯಂತೆಯೇ ಇದ್ದು ಅಷ್ಟೇನೂ ಅಭಿವೃದ್ಧಿ ಹೊಂದಿಲ್ಲ. ಮಾನ್ವಿಯ ಕುರಿತು ಬರೆಯುತ್ತ ವಿಹಾರಿಯವರು ನಾಡಿನ ಹಳ್ಳಿಗಳು ಎಲ್ಲ ರೀತಿಯಿಂದಲೂ ಸುಧಾರಿಸಬೇಕಾದ ಅಗತ್ಯದ ಬಗೆಗೆ ಬರೆದಿದ್ದಾರೆ.

ಕಾಫಿಯ ನಾಡೆಂದೇ ಖ್ಯಾತವಾದ ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿ. ತಮ್ಮ ಕಲಿತನಕ್ಕೆ ಹೆಸರಾದ ಕೊಡವರು, ತುಂಬ ಜತನದಿಂದ ತಮ್ಮ ಆಚಾರ-ವಿಚಾರಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಪ್ರಕೃತಿ ಸೌಂದರ್ಯದಿಂದ ಮನಸೆಳೆಯುವ ಮಡಿಕೇರಿ ಬ್ರಿಟಿಷರ ವಿಶೇಷ ಆದರಕ್ಕೆ ಪಾತ್ರವಾಗಿತ್ತು. ದ.ಬಾ.ಕುಲಕರ್ಣಿ ಮಡಿಕೇರಿಯ ವಿಶೇಷಗಳನ್ನು ಗುರುತಿಸುವಂತೆಯೇ ಬಿಳಿಯರ ಪ್ರಭಾವಕ್ಕೊಳಗಾಗಿ ತಮ್ಮ ಜೀವನಶೈಲಿಯನ್ನೇ ಬದಲಿಸಿಕೊಂಡಿರುವ ಶ್ರೀಮಂತ ಕೊಡವರ ಬಗೆಗೂ ಉಲ್ಲೇಖಿಸಿದ್ದಾರೆ. ಮೊದಲಿನಿಂದಲೂ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಬಂದಿರುವ ಕೊಡಗಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹಬ್ಬಿದ ಬಗೆಗೆ ವಿವರ ನೀಡಿರುವ ಲೇಖಕರು ಕೊಡಗಿನಲ್ಲಿ ಕನ್ನಡದ ಸ್ಥಾನಮಾನದ ಕುರಿತು ಸಮಾಧಾನಕರ ಮಾತುಗಳನ್ನಾಡಿದ್ದಾರೆ.

1945ರಲ್ಲಿ ಪ್ರಕಟವಾದ 106 ಪುಟಗಳ ಪುಟ್ಟ ಪುಸ್ತಕ “ಇಂದಿನ ಕರ್ನಾಟಕ”. ಸುಮಾರು ಎಪ್ಪತ್ತಾರು ವರ್ಷಗಳ ಹಿಂದೆ ಅಖಂಡ ಕರ್ನಾಟಕದ ಕನಸು ಕಂಡ ಕನ್ನಡ ಮನಸ್ಸುಗಳು ಅದಕ್ಕಾಗಿ ಹವಣಿಸಿರುವುದನ್ನು ಇಲ್ಲಿ ಕಾಣಬಹುದು. ಪ್ರತಿಯೊಂದು ಊರಿನ ಕುರಿತ ಬರಹದಲ್ಲೂ ಅಲ್ಲಿ ಕನ್ನಡಕ್ಕೆ ಯಾವ ಸ್ಥಾನವಿದೆ ಎಂಬುದರ ಬಗೆಗೆ ಚರ್ಚೆಯಿದೆ. ಕನ್ನೇಡತರರ ಹಾವಳಿಯಿಂದ ಕನ್ನಡಕ್ಕೊದಗಿದ ದುಸ್ಥಿತಿಯ ಬಗ್ಗೆ ವ್ಯಥೆಯಿದೆ. ಕನ್ನಡಿಗರೇ ಕನ್ನಡ ಭಾಷೆಯನ್ನು ಅಲಕ್ಷಿಸುತ್ತಿರುವುದಕ್ಕಾಗಿ ಮರುಕವಿದೆ. ಕೆಲವು ಕಡೆಗಳಲ್ಲಾದರೂ ಕನ್ನಡವು ಬೆಳೆಯುತ್ತಿರುವುದಕ್ಕಾಗಿ ಹರ್ಷವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದಲ್ಲ ನಾಳೆ ಕನ್ನಡ – ಕರ್ನಾಟಕ ತನ್ನ ಗತವೈಭವವನ್ನು ಮರಳಿ ಪಡೆಯುತ್ತದೆನ್ನುವ ಆಶಾಭಾವನೆಯಿದೆ.

ಸುಮಾರು ಏಳೂವರೆ ದಶಕಗಳ ಹಿಂದೆ ನಮ್ಮ ಹಿರಿಯರು ಇಂತಹದೊಂದು ವಿಶಿಷ್ಟ ಪುಸ್ತಕದ ಮಹತ್ವವನ್ನರಿತು ಹೊರತಂದರೆಂಬುದೇ ಆಶ್ಚರ್ಯ ಮತ್ತು ಸಂತೋಷದ ಸಂಗತಿ. ವಿ.ಕೃ.ಗೋಕಾಕರು ಸಮರ್ಥವಾಗಿ ಸಂಪಾದಿಸಿದ ಈ ಕೃತಿಗೆ ಚಾರಿತ್ರಿಕ ಮಹತ್ವವಿದೆ. ಇಂತಹ ಮಹತ್ವದ ಪುಸ್ತಕಗಳು ಮರು ಮುದ್ರಣಗೊಂಡು ಮತ್ತೆ ಓದುಗರಿಗೆ ಸಿಗುವಂತಾಗಬೇಕು. ಎಲ್ಲ ಕನ್ನಡಿಗರೂ ಓದಲೇಬೇಕಾದ ಕೃತಿ “ಇಂದಿನ ಕರ್ನಾಟಕ”.

********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ವಿ.ಕೃ.ಗೋಕಾಕರ ಇಂದಿನ ಕರ್ನಾಟಕ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter