ಅಂದು ಕಣ್ಣಿಗೆ ಬಿದ್ದ ಹೊಸ ವಿಚಾರವೊಂದು ಮನಸ್ಸಿಗೆ ನುಸುಳಿ, ವಿಲಕ್ಷಣ ರೂಪತಾಳಿ ಕುಣಿಯ ತೊಡಗಿತು.ಅದರ ನ್ಯೂನತೆಯನ್ನು ಸರಿಪಡಿಸಿ ಮತ್ತೆ ನರ್ತಿಸಲು ಪ್ರಶಸ್ತ ವೇದಿಕೆ ಕಲ್ಪಿಸ ಬೇಕು ಎಂದನಿಸಿದ್ದೇ, ಮನಸ್ಸುಸೂಕ್ತ ಸ್ಥಳದ ಅನ್ವೇಷಣೆಗಿಳಿಯಿತು. ಆಗ ಸೆಳೆದದ್ದು ಸುಮಾರು ಹದಿನೈದು ಕಿ.ಮೀ. ದೂರದ ಇರ್ಮಾಡಿ ಗ್ರಾಮದ, ‘ಕಂಬಳಗುಂಡಿ’ ಹೊಳೆಯ ಪರಿಸರ. ಕಾರು ಹತ್ತಿ ಅಲ್ಲಿಗೆ ತಲುಪಿದೆ.
ಹೊಳೆಯ ಎದುರಿನ ತೀರದಲ್ಲೊಂದು ಸದಾ ಹಚ್ಚಹಸುರಾಗಿ ಕಂಗೊಳಿಸುವ ವಿಶಾಲ ತೋಟವಿದೆ. ಅದರೊಳಗೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಸೂಚನೆಯಾಗಿ ಆಧುನಿಕ ಯಂತ್ರದಾರ್ಭಟವು ಸುತ್ತಲಿನ ಪ್ರಶಾಂತತೆಯನ್ನು ಕದಡುತ್ತಿತ್ತು. ಅದರ ನಡುವೆಯೂ ವಿವಿಧ ಪಕ್ಷಿಗಳ ಚಿಲಿಪಿಲಿ ಇಂಚರ ಹಾಗೂ ಸಮೀಪದ ಬಲ್ಲೆಯಿಂದ ಕ್ವಾಕ್…ಕ್ವಾಕ್…ಕ್ವಾಕ್…! ಎಂದು ಅಮ್ಮನನ್ನು ಕರೆವ ಕೊಕ್ಕರೆ ಮರಿಗಳ ಆದ್ರ್ರಉಲಿತವು ಪ್ರಕೃತಿಗೂ, ಮನುಷ್ಯಜೀವಿಗೂ ಇರುವ ಸಂಬಂಧವನ್ನು ಎಚ್ಚರಿಸುವಂತಿತ್ತು. ಅದು ನಿಸರ್ಗ ಶಾಂತತೆಯನ್ನು ಸೀಳಿ ಧ್ವನಿಸುತ್ತಿದ್ದರೂ ಕೃಷಿ ಯಂತ್ರದಷ್ಟು ಕರ್ಕಶವಿರದೆ ಪ್ರಕೃತಿ ಮೌನಕ್ಕೆ ಪೂರಕವೆನಿಸುತ್ತಿತ್ತು. ಆತ ತೋಟದೊಡೆಯನಿರಬೇಕು, ‘ಹೇ, ದ್ವಾವಣ್ಣಾ, ನಿನ್ನದು ಪೂರ್ತಿಯಾಯ್ತ ಮಾರಾಯಾ…?’ ನೀರವತೆಯನ್ನು ಸೀಳಿ ಅವನ ಗೊಗ್ಗರುಧ್ವನಿ ಅಪ್ಪಳಿಸಿತು.‘ಇಲ್ಲಯಜಮಾನ್ರೇ, ಇನ್ನೂ ಸ್ವಲ್ಪಇದೆ…!’ಎಂದಿತು ದ್ಯಾವಣ್ಣನ ನಮ್ರ ಸ್ವರ.‘ಹೌದಾ, ಇರಲಿ ಪರ್ವಾಯಿಲ್ಲ. ನೀನು ಬಾ. ಚಹಾ ಕುಡಿದ ಮೇಲೆ ಮುಂದುವರೆಸೋಣ!’ ಎಂದಿತು ಒಡೆಯಧ್ವನಿ.ಅಲ್ಲಿಗೆ ಯಂತ್ರವು ಒಮ್ಮೆ ಜೋರಾಗಿ ಗರ್ಜಿಸಿ ತಟಸ್ಥವಾಯಿತು.ಮತ್ತೆ ಸುತ್ತಲೂ ಮೋಹಕ ನಿಶ್ಶಬ್ದ ಆವರಿಸಿತು.ನಾನು ಕಂಡ ಕೆಲವು ಮನೋಹರ ತಾಣಗಳಲ್ಲಿ ಇದೂ ಒಂದು.
ಮಾನವರ ಹಕ್ಕೋತ್ತಾಯಗಳಿಗೆ ಮಣಿದು, ಕಾಡುತೊರೆದು ಕಾಂಕ್ರೀಟ್ ಗುಡಿಗಳೊಳಗೆ ಪ್ರತಿಸ್ಠಾಪಿತರಾಗಿ, ತಾವು ಸದಾ ಸುಡು ಬೇಗೆಯಲ್ಲಿ ಬೆಂದು ಬಸವಳಿಯುತ್ತಿದ್ದರೂ ತಮ್ಮ ಭಕ್ತಾದಿಗಳಿಗೆ ಸದಾಇಂಬು ನೀಡುತ್ತ ಬಂದಿರುವ, ಹೊಳೆ ದಂಡೆಯ ಮೇಲಿನ ನಾಗನ ಭವನ ಮತ್ತು ದೈವದ ಗುಡಿಗಳತ್ತ ನಡೆದೆ. ಗುಡಿಯ ಪಡಸಾಲೆಯಲ್ಲಿ ಅರ್ಚಕರಿಗೋ, ಮತ್ತ್ಯಾರಿಗೋ ಇರಿಸಿದ ಒಂಟಿ ಕುರ್ಚಿಯೊಂದಿತ್ತು. ಬಹುಶಃ ನನಗೇ ಇಟ್ಟಿರ ಬಹುದು ಎಂದು ಭಾವಿಸಿದರೆ ತಪ್ಪೇನು?ಎಂದು ಕೊಂಡು ಅದನ್ನೆತ್ತಿ ತಂದು, ತುಸು ಉಳಿಸಲಾಗಿದ್ದ ಹಸುರು ಬನದ ನೆರಳಲ್ಲಿಟ್ಟು ಮೈಚೆಲ್ಲಿ ಕುಳಿತೆ.ಆಗ ಬರೆಯ ಬೇಕೆಂದಿದ್ದ ವಿಷಯವು ಸ್ಫುಟವಾಗಿ ಮುನ್ನೆಲೆಗೆ ಬಂತು.
ಉಡುಪಿಯ ಪರ್ಕಳದ ಒಳ ಗ್ರಾಮವೊಂದರ ಹಿರಿಯ ಹೆಂಗಸೊಬ್ಬರಿಂದ ಬಂದ ಆತಂಕದ ಕರೆಯದು. ಆಕೆಯ ಭಯ ತುಂಬಿದ ವಿವರಣೆ ಕೇಳಿದ ಕೂಡಲೇ ಅತ್ತ ಧಾವಿಸಿದೆ. ಕೃಷಿ ಬದುಕು ನಶಿಸಿ ಶತಕವೇ ಕಳೆದಿರುವಂತೆ ತೋರುತ್ತಿದ್ದ, ಉದ್ದಕ್ಕುದ್ದ ಹಡಿಲು ಬಿದ್ದಿದ್ದ ಅಲ್ಲಿನ ಭೂಮಿಯು ಸುಡು ಬೇಸಿಗೆಯ ತಾಪಕ್ಕೆ ಒಣಗಿ ಬಿಕೋ ಎನ್ನುತ್ತಿತ್ತು. ವಿಶಾಲ ಹೊಲಗದ್ದೆಗಳ ಆಸುಪಾಸು ಆರೇಳು ದಶಕಗಳಷ್ಟು ಹಳೆಯದಾದ ಕೆಲವು ಹಂಚಿನ ಮನೆಗಳಿದ್ದವು. ಆ ವಠಾರದ ಹತ್ತಿರ ಪುಟ್ಟ ಕುರುಚಲು ಹಾಡಿಯೊಂದೂ ಇತ್ತು. ನನ್ನ ಕಾರು ಚಿಕ್ಕದೊಂದು ಗುಡ್ಡೆ ಇಳಿದು ತಮ್ಮ ಸಮೀಪ ಬರುವವರೆಗೆ ವಠಾರದ ಹಿರಿಯ ಕಿರಿಯರೆಲ್ಲ ಕೂಡಿ ಎತ್ತರ ಗದ್ದೆಯ ಹುಣಿಯೊಂದರಲ್ಲಿ ಸಾಲಾಗಿ ನಿಂತಿದ್ದವರ ಗಮನವು ಚೂರೂ ಅತ್ತಿತ್ತ ಚಂಚಲಿಸ ದೆಹಾಡಿಯತ್ತಲೇ ನೆಟ್ಟಿದ್ದನ್ನು ಕಂಡೆ. ನಾನು ಕಾರಿನಿಂದಿಳಿಯುತ್ತಲೇ ಅವರೆಲ್ಲರಲ್ಲಿ ಚೈತನ್ಯ, ಕುತೂಹಲಗಳೆದ್ದು ಕಾಣಿಸಿದವು. ನಮ್ಮಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ನನ್ನ ಸರಕು ಸಾಧನೆಗಳನ್ನು ಆ ಮಟ್ಟಕ್ಕೆ ಬಿಂಬಿಸಿವೆಯೋ ಅಥವಾ ಈ ಹವ್ಯಾಸದಲ್ಲಿ ನಾನೇ ಆ ಹಂತಕ್ಕೆ ಮುಳುಗಿ ಬಿಟ್ಟಿದ್ದೇನೋ ಹೇಳುವುದು ಕಷ್ಟ.ನಾನೊಬ್ಬಅಸಾಮಾನ್ಯ ವ್ಯಕ್ತಿಎಂಬಂಥಭಾವಾಚ್ಚರಿಗಳು ಅವರಲ್ಲಿ ಕುಣಿಯುತ್ತಿದ್ದವು. ಎಲ್ಲರೂ ಬಂದು ನನ್ನನ್ನು ಸುತ್ತುವರೆದು, ಅಲ್ಲಿ ಈ ಹಿಂದೆ ನಡೆದಿದ್ದ ಮತ್ತೀಗ ನಡೆಯುತ್ತಿರುವ ವಿಷಯವನ್ನೆಲ್ಲ ಆಸಕ್ತಿಯಿಂದ ವಿವರಿಸಿದರು.ವೃದ್ಧ, ವೃದ್ಧೆಯರಿಬ್ಬರು ಮಾತ್ರ ಹಾಡಿಯತ್ತ ನೋಡುವ ತಮ್ಮ ಪತ್ತೆದಾರಿ ಕಾಯಕದಿಂದ ವಿಮುಖರಾಗಿರಲಿಲ್ಲ.
‘ಹೋಯ್ ಹೋಯ್…ಬೇಗ ಬನ್ನಿ ಮಾರಾಯ್ರೇ…! ಓ… ಅಲ್ಲಿ ನೋಡಿ,ಅವು ಅಲ್ಲಿವೆ…!’ಎಂದು ಆ ಜೀವಿಗಳಿಗೆ ಕೇಳಿಸಿತೇನೋ ಎಂಬಂತೆ ಪಿಸು ಮಾತಿನಲ್ಲಿ ವೃದ್ಧೆ ಪಿಸುಗುಟ್ಟಿದರು.ನನ್ನ ಜೊತೆಗಿದ್ದ ಅಲ್ಲಿನ ಜನರ ಪಟಲಾಮಿನೊಂದಿಗೆ ಅತ್ತ ಧಾವಿಸಿದೆ. ಹಿಂದೆ ಸಮೃದ್ಧ ಕೃಷಿ ಚಟುವಟಿಕೆಯಿದ್ದ ಕಾಲದಲ್ಲಿ ಹೊಲಗಳ ಅಂಚುಗಳುದ್ದಕ್ಕೂ ನೆಟ್ಟುಬೆಳೆಸಿದಂಥ ದೈತ್ಯ ಕಾಟು ಮಾವಿನ ಮರಗಳು, ಉಪ್ಪಿನಕಾಯಿಗೆ ಹೆಸರುವಾಸಿಯಾದ ‘ಅಪ್ಪೆಮಿಡಿ’ ಮರ, ಎರಡು ಹಲಸಿನ ಮರಗಳು ಮತ್ತವುಗಳ ನಡುವೆ ದೈತ್ಯಾಕಾರದ ಮರವೊಂದು ನಿಬಿಡವಾಗಿ ಬೆಳೆದು ನಿಂತು ಆ ಪರಿಸರಕ್ಕೆವಿಪುಲವಾದ ನೀರು, ನೆರಳನ್ನು ನೀಡುತ್ತಿರುವುದರ ಮಹತ್ವವೇ ಆ ಜನರಿಗೆ ತಿಳಿಯದೇನೋ ಎಂಬಂತೆ ಅವರಲ್ಲೊಂದಿಬ್ಬರು, ‘ದರಿದ್ರದ ಮರಗಳನ್ನೆಲ್ಲ ಆದಷ್ಟು ಬೇಗ ಕಡಿದು ಹಾಕಬೇಕು ಮಾರಾಯ್ರೇ…!’ಎಂದರು ಅಸಹನೆಯಿಂದ.ಅಷ್ಟು ಕೇಳಿದವನು ಅವರನ್ನೊಮ್ಮೆ ವಿಷಾದದಿಂದ ದಿಟ್ಟಿಸಿ ಪತ್ತೆದಾರಿ ಹಿರಿಯರ ಸಮೀಪ ನಡೆದೆ.
‘ನಿಧಾನವಾಗಿ ಬನ್ನೀ…! ಓ ಅಲ್ಲಿ ಹೊರಳಾಡುತ್ತಿವೆ ನೋಡಿ…?’ಎಂದು ಅವರು ಬಹು ಮೆಲ್ಲನೆ ಉಸುರಿದರು.ಆದರೆ ಅಲ್ಲಿ ನನಗೇನೂ ಕಾಣಿಸಲಿಲ್ಲ! ಆದರೆ ಒಣಗಿ, ಮುರುಟಿ ಬೂದು ಬಣ್ಣದ ಹಪ್ಪಳದಂತಾಗಿದ್ದ ತರಗೆಲೆಯ ದಟ್ಟ ಪದರಗಳು ಪರಪರ ಸದ್ದಿನೊಂದಿಗೆ ಚಲಿಸುತ್ತಿದ್ದುದು ಗೋಚರಿಸಿತು.ಹಗುರವಾದ ಹೆಜ್ಜೆಗಳನ್ನಿಡುತ್ತ ಹೋಗಿ ಗಮನವಿಟ್ಟು ಹುಡುಕಿದಾಗ ಕಾಣಿಸಿದುವು, ಎರಡು ದೈತ್ಯ ಗಂಡು ನಾಗರಹಾವುಗಳು! ಒಣ ತರಗೆಲೆ, ಕಸಕಡ್ಡಿಗಳ ಬಣ್ಣಕ್ಕೆ ಅವುಗಳ ಶರೀರ ಬಣ್ಣ ಎಷ್ಟೊಂದು ದಟ್ಟವಾಗಿ ಮಿಳಿತ (camouflage) ಗೊಂಡಿತ್ತೆಂದರೆ, ಅವುಗಳ ಚಲನೆಯಿಂದಲ್ಲದೆ ಪಕ್ಕನೆ ಪತ್ತೆ ಹಚ್ಚಲು ಸಾಧ್ಯವೇ ಇಲ್ಲವೆಂಬಷ್ಟು ನಿಗೂಢವಾಗಿದ್ದವು. ಪ್ರಕೃತಿಗೆ ತನ್ನ ಜೀವ ಸೃಷ್ಟಿಯ ಮತ್ತು ಸಂರಕ್ಷಣೆಯ ಕುರಿತು ಇರುವಂಥ ಅಪಾರ ಪ್ರೀತಿಯನ್ನು ಕಂಡು ಮನಸ್ಸು ಅರಳಿತು.
ಅಲ್ಲಿ ನಡೆಯುತ್ತಿದ್ದುದು ನಾಗರ ಹಾವುಗಳ, ‘ಗಡಿನೃತ್ಯ’.ಅವು ಒಂದನ್ನೊಂದು ಹುರಿಹಗ್ಗದಂತೆ ಬಿಗಿಯಾಗಿ ನೆಯ್ದುಕೊಂಡು ಸಿಕ್ಕಸಿಕ್ಕಲ್ಲಿ ತೀಕ್ಷ್ಣವಾಗಿ ಕಚ್ಚಿಕೊಳ್ಳುತ್ತ, ಉರುಳು ಸೇವೆಯ ರೀತಿಯಲ್ಲಿ ಹೋರಾಡುತ್ತಿದ್ದವು. ಒಂದು ಹೆಣ್ಣಿಗಾಗಿ ಅಥವಾ ಗಂಡೊಂದು ವಾಸಿಸುವ ವಲಯಕ್ಕೆ ಮತ್ತೊಂದು ಗಂಡು ಅಕ್ರಮ ಪ್ರವೇಶ ಮಾಡಿದಲ್ಲಿ ಅಥವಾ ಹಾವೊಂದು ಹಸಿದಂಥ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅವುಗಳ ನಡುವೆ ಇಂಥ ಕದನ ಹಾಗೂಇತರ ಚಟುವಟಿಕೆಗಳು ನಡೆಯುತ್ತವೆ. ಅಂಥ ಸಮಯದಲ್ಲೇ ತಮ್ಮನ್ನು ಕಬಳಿಸಲು ಸದಾ ಹೊಂಚು ಹಾಕುವ ಶತ್ರುಜೀವಿಗಳಿಗೆ ಚಳ್ಳೆಹಣ್ಣು ತಿನ್ನಿಸುವಂಥ ಎಚ್ಚರಿಕೆಯಿಂದ ತಮ್ಮ ಶರೀರ ಬಣ್ಣಕ್ಕೆ ಹೊಂದಿಕೆಯಾಗುವಂಥದ್ದೇ ಪರಿಸರವನ್ನು ಆಯ್ದು ಕೊಳ್ಳಬೇಕೆಂಬ ಅರಿವನ್ನು ಆ ಮೂಕಜೀವಿಗಳಿಗೆ ನೀಡಿದರು ಯಾರು? ಎಂದು ನಮ್ಮಲ್ಲಿಯಾರನ್ನಾದರೂ ಪ್ರಶ್ನಿಸಿದರೆ, ‘ಪ್ರಕೃತಿ ಅಥವಾ ದೇವರು!’ಎಂದು ಬಿಡುತ್ತೇವೆ. ಆದರೆ ಇಂಥ ಕ್ರಿಯೆಗಳನ್ನು ಕಾಣುವ ನಮ್ಮೊಳಗೆ ಅರ್ಥವಿಲ್ಲದ ಭಯ, ಅಚ್ಚರಿ ಹಾಗೂ ಮೌಢ್ಯಗಳನ್ನು ತುರುಕಿಸಿದವರಾರು ಮತ್ತು ಏಕೆ? ಎಂದರೆ, ಉತ್ತರಿಸಲು ತಡಕಾಡುತ್ತೇವೆ!
***
‘ಅಯ್ಯೋ ಇವ್ರೇ…,ಮೂರು ದಿನಗಳಿಂದ ನಾವ್ಯಾರೂ ಸರಿಯಾಗಿ ನಿದ್ದೆನೇ ಮಾಡಿಲ್ಲ ನೋಡಿ! ಇವೆರಡಲ್ಲ, ಇನ್ನೊಂದು ಸ್ವಲ್ಪ ಚಿಕ್ಕ ಹಾವೂಇದೆ! ಅವು ಮೂರೂ ಸೇರಿ ಆಗಾಗ ಇಲ್ಲಿನ ಕೆಲವು ಮನೆಯೊಳಗೆ ನುಗ್ಗಲೆತ್ನಿಸುತ್ತಿದ್ದವು. ಆದರೆ ಇವತ್ತು ಆ ಚಿಕ್ಕದು ಎಲ್ಲಿ ಹೋಯಿತೋ? ಇವೆರಡು ಒಂದು ಗಂಟೆಯಿಂದ ಹೀಗೆ,‘ಕೂಡುತ್ತ’ ಗದ್ದೆಯಿಡೀ ಹೊರಳಾಡುತ್ತಿವೆ. ಇಂಥ ಸ್ಥಿತಿಯಲ್ಲಿ ಅವನ್ನು ನೋಡುವುದು ಪಾಪ, ದೋಷ ಎನ್ನುತ್ತಾರೆ.ಆದರೆ ಅವುಗಳ ರಾಸಲೀಲೆಯನ್ನು ನೋಡಿಕೊಂಡು ಎಷ್ಟು ದಿನಾಂತ ಸುಮ್ಮನಿರೋದು ಹೇಳಿ? ನಾಳೆ ಅವುಗಳ ಸಂತಾನ ಈ ವಠಾರದಲ್ಲಿ ಬೇಕಾಬಿಟ್ಟಿ ಬೆಳೆದು ಬಿಟ್ಟರೆ ನಮ್ಮ ಗತಿಯೇನು? ನೋಡಿದ ಪಾಪಕ್ಕೆ ಪ್ರಾಯಃಶ್ಚಿತ್ತವಾಗಿ ಆಮೇಲೆ ಏನಾದರೊಂದು, ‘ಶಾಂತಿ’ಮಾಡಿಸಿದರಾಯ್ತು. ಮಾಡದಿದ್ದರೆ ಅದೂ ಬಿಡಬೇಕಲ್ಲ?’ ಎಂದರು ಹಿರಿಯರು.
‘ಯಾವುದು ಬಿಡುವುದಿಲ್ಲ?’ ಎಂದೆತಮಾಷೆಗೆ. ಅವರು ನನ್ನನ್ನೊಮ್ಮೆ ಸೋಜಿಗದಿಂದ ದಿಟ್ಟಿಸಿ ವ್ಯಂಗ್ಯವಾಗಿ ನಕ್ಕವರು, ‘ಮತ್ತ್ಯಾವುದು, ನಾಗದೋಷ ಬಿಡಬೇಕಲ್ಲಾ!’ ಎಂದವರು, ‘ಅಷ್ಟೂ ಗೊತ್ತಾಗುವುದಿಲ್ಲವಾ ನಿಮಗೆ?’ ಎಂಬಂತೆ ಹುಬ್ಬು ಗಂಟಿಕ್ಕಿದರು. ನಾನು ಮತ್ತೆ ಪ್ರಶ್ನಿಸಲಿಲ್ಲ. ಈ ನಡುವೆ, ಆವರೆಗೆ ವೈರಸ್‍ಅ ಟ್ಯಾಕ್ ಆದಂತೆ ಸ್ಥಬ್ಧವಾಗಿದ್ದ ಐದಾರು ಯುವ, ಮಧ್ಯವಯಸ್ಕ ಮತ್ತು ಮುದಿ ಮೊಬೈಲ್ ಫೋನ್‍ಗಳಿಗೆಲ್ಲ ನಾನು ಹಾವುಗಳತ್ತ ಹೆಜ್ಜೆಯಿಡುತ್ತಲೇ ತಟಪಟನೆ ಜೀವ ತಳೆದು,ಅಲ್ಲಿನ ವಿಶೇಷ ಸುದ್ದಿಯನ್ನು ತುರಂತಾಗಿ ಜಗಜ್ಜಾಹೀರುಗೊಳಿಸಲು ತಂತಮ್ಮ ಅಚಲ ದೃಷ್ಟಿಯನ್ನು ನನ್ನ ಮತ್ತು ಹಾವುಗಳ ಮೇಲೆ ಗುರಿಯಿಟ್ಟು ನಿಂತವು. ನಾನು ಕೂಡಾ ದೃಶ್ಯವನ್ನು ಸೆರೆ ಹಿಡಿದುಕೊಂಡೆ.‘ಜಗತ್ತಿನ ಜೀವರಾಶಿಗಳ ಪರಮ ಶತ್ರು ’ ಎಂದೆನಿಸಿದ ಮಾನವ ಜೀವಿಯೊಂದು ತಮ್ಮತ್ತಲೇ ಬರುತ್ತಿರುವುದನ್ನುಆ ನಾಗರಗಳು ತಮ್ಮ ಸಾವು, ಬದುಕಿನ ವಿಷಮಸ್ಥಿತಿಯಲ್ಲೂ ತಟ್ಟನೆ ಗ್ರಹಿಸಿದವು. ಆದರೆ ತಾವು ಒಬ್ಬರನ್ನೊಬ್ಬರು ಹಿಡಿದ ಪಟ್ಟನ್ನು ಚೂರೂ ಸಡಿಲಿಸದೆಯೇ ಹಾಡಿಯತ್ತ ಉರುಳ ತೊಡಗಿದವು.
‘ಈ ಅಪರೂಪದ ಕ್ರಿಯೆಯನ್ನು ನೋಡಲಿಚ್ಛಿಸುವವರು ಸದ್ದು ಮಾಡದೆ ಸಮೀಪ ಬನ್ನಿ!’ ಎಂದೆ ಮೆಲುಧ್ವನಿಯಿಂದ. ಅತ್ಯಂತ ಕುತೂಹಲಿಗರು ಅಳುಕುತ್ತ ಬಂದರು. ಉಳಿದ ಕೆಲವರಲ್ಲಿ, ‘ಏನ್ರೀ ನಮ್ಮ ಪ್ರಾಣ ಅಷ್ಟೊಂದು ಅಗ್ಗವಾಗಿದೆ ಅಂದು ಕೊಂಡಿರಾ…!’ಎಂಬ ಭಾವವಿದ್ದರೆ ಮತ್ತುಳಿದವರು, ‘ಅಯ್ಯಯ್ಯೋ…ಆಮೇಲೆ ಯಾರಿಗೆ ಬೇಕು ಮಾರಾಯ್ರೇ ನಾಗದೋಷದಕಾಟ!’ ಎಂಬಂಥ ಧೋರಣೆಗಳನ್ನು ಬಿಂಬಿಸುತ್ತ ನಿಂತಲ್ಲೇ ತಟಸ್ಥರಾಗಿದ್ದರು.
ಇಲ್ಲಿ ನಡೆಯುತ್ತಿರುವುದು ಹೆಣ್ಣು,ಗಂಡು ನಾಗರಹಾವುಗಳ ಮಿಲನ ಕ್ರಿಯೆಅಲ್ಲ. ಎರಡು ಗಂಡು ಹಾವುಗಳು ಹೆಣ್ಣಿಗಾಗಿ ಕಚ್ಚಾಡುತ್ತಿವೆ ಅಷ್ಟೆ. ಕದನದಲ್ಲಿ ಸೋತದ್ದನ್ನು ಗೆದ್ದ ಹಾವು ಇಡಿಯಾಗಿ ಕಬಳಿಸ ಬಹುದು ಅಥವಾ ತನ್ನ ವಲಯದಿಂದ ಹೊರಗಟ್ಟಬಹುದು. ಬಳಿಕ ಗೆದ್ದ ಹಾವು ಹೆಣ್ಣನ್ನು ಸೇರಬಹುದು.ಅಲ್ಲದೇ ಈ ಪ್ರಕ್ರಿಯೆ ಬೇರೆ ಕೆಲವು ಕಾರಣಗಳಿಗೂ ನಡೆಯುತ್ತದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಾಗರ ಹಾವಿನ ಸಂತತಿ ಮಿತಿ ಮೀರಿದರೆ ಅದನ್ನು ಸಮತೋಲನೀಕರಿಸಲು ಅವೇ ಒಂದನ್ನೊಂದು ನುಂಗಿಕೊಂಡು ಹಸಿವು ನೀಗಿಸಿಕೊಳ್ಳುವ ಪ್ರಚೋದನೆಯನ್ನು ಪ್ರಕೃತಿಯೇ ನೀಡುತ್ತದೆ. ವಿಷದ ಹಾವುಗಳ ದೇಹದಲ್ಲಿಯೇ ವಿಷವು ಉತ್ಪತ್ತಿಯಾಗುವುದರಿಂದ ಮತ್ತು ಆ ವಿಷದ ವಿರುದ್ಧ ಅವು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುವುದರಿಂದ ಅವು ಒಂದನ್ನೊಂದು ಕಚ್ಚಿಕೊಂಡರೆ ಸಾಯುವುದಿಲ್ಲ’ಎಂದು ಅವರಿಗೆ ವಿವರಿಸಿ, ‘ತುಸು ಹೊತ್ತು ಸುಮ್ಮನಿದ್ದು ಅವುಗಳ ಕ್ರಿಯೆಯನ್ನು ಗಮನಿಸೋಣ!’ಎಂದೆ.
ಅಷ್ಟು ಕೇಳಿದ ಎಲ್ಲರಿಗೂ ಆಶ್ವರ್ಯ! ‘ಅಯ್ಯಯ್ಯೋ ದೇವರೇ! ಹೀಗೂ ಉಂಟಾ ಮಾರಾಯ್ರೇ?! ಆದರೆ ನಾವು ಸುಮ್ಮನೆ ಮಿಲನ, ಅದೂ ಇದೂ ಅಂತ ಮಂಡೆ ಹಾಳು ಕೊಂಡೆವಲ್ಲಾ…!’ಎಂದು ಹಿರಿಯರುಅ ಚ್ಚರಿ, ನಿರಾಶೆ ವ್ಯಕ್ತಪಡಿಸಿದರೆ, ಉಳಿದವರು ಎಂಥದ್ದೋ ಒತ್ತಡದಿಂದ ಬಿಡುಗಡೆಯಾದಂತೆ ಕೊರಳೆತ್ತಿ ಆ ದೃಶ್ಯವನ್ನು ವೀಕ್ಷಿಸತೊಡಗಿದರು. ಅದರಿಂದ ಹಾವುಗಳಿಗೂ ಮನುಷ್ಯರ ವಾಸನೆ ಜೋರಾಗಿ ಬಡಿದಿರಬೇಕು. ಅವುಗಳಲ್ಲೊಂದು ತಟ್ಟನೆ ಬೇರ್ಪಟ್ಟು, ತನ್ನ ನಿತ್ರಾಣಗೊಂಡ ದೇಹವನ್ನೆಳೆದುಕೊಂಡು ಹಾಡಿಯತ್ತ ಹರಿಯಿತು. ‘ಹೋಯ್, ಹೋಯ್… ಹಿಡಿರೀ, ಹಿಡಿರೀ ಮಾರ್ರೇ…ಓಡಿ ಹೋಗ್ತಿದೆ ನೋಡಿ.ತಪ್ಪಿಸಿಕೊಂಡರೆ ಕಷ್ಟ ಮತ್ತೆ!’ ಎಂದು ಹಿರಿಯರು ಮತ್ತೆ ಕೂಗಿದರು.ಅಷ್ಟರಲ್ಲಿ ಗೆದ್ದ ಹಾವು ಮತ್ತೆ ಅದನ್ನುಬೆನ್ನಟ್ಟಿಹೋಗಿ ಹಿಡಿಯಿತು. ಆಗ ನೆರೆದವರೆಲ್ಲ ಒಬ್ಬರ ಮುಖವನ್ನೊಬ್ಬರು ನೋಡಿದವರು,‘ಅಲ್ಲಾ, ಇವನನ್ನು ಕರೆದಿರುವುದು ಈ ವಿಷಜಂತುಗಳನ್ನು ಹಿಡಿದು ಇಲ್ಲಿಂದೊಮ್ಮೆ ದೂರ ಎಲ್ಲಾದರೂ ಕೊಂಡೊಯ್ದು ಬಿಡಲಿ ಅಂತಲ್ಲವಾ? ಇವನು ಆ ಕೆಲಸ ಮಾಡುವುದನ್ನು ಬಿಟ್ಟು ಪ್ರವಚನ ನೀಡುತ್ತ ನಿಂತಿದ್ದಾನಲ್ಲ…!’ ಎಂಬಂಥ ಭಾವದಿಂದ ನನ್ನನ್ನು ದಿಟ್ಟಿಸಿದರು.ಆದ್ದರಿಂದ,ಒಂದು ಇನ್ನೊಂದರ ಹೊಟ್ಟೆ ಸೇರಿ ಒಂದು ತಿಂಗಳ ಹಸಿವು ನೀಗಿಸಿಕೊಳ್ಳುವುದರಲ್ಲಿದ್ದ ಹಾವುಗಳನ್ನು ನಾನು ವಿಧಿಯಿಲ್ಲದೇ ಬೇರ್ಪಡಿಸಿ ಹಿಡಿದು ಒಂದೇ ಚೀಲಕ್ಕೆ ಸೇರಿಸಿದೆ.
***
ಈ ಕಾರ್ಯಚರಣೆ ಮುಗಿದು ನಿರಾಳವಾಗುವಷ್ಟರಲ್ಲಿ ಅಲ್ಲಿ ಮತ್ತೊಂದು ಅಚ್ಚರಿ ಘಟಿಸಿತು.ಹೆಂಗಸೊಬ್ಬಳು, ಇಬ್ಬರು ಸಣ್ಣ ಹುಡುಗರೊಂದಿಗೆ ನನ್ನತ್ತ ಧಾವಿಸಿ ಬಂದವಳು,‘ಹೋಯ್, ಸಾರ್, ಸಾರ್… ಅಲ್ನೋಡಿ…ಮತ್ತೆರಡು ಹಾವುಗಳು ನಮ್ಮ ಹಿತ್ತಲಲ್ಲೇ ಹೆಣೆಯಾಡುತ್ತಿವೆ! ಎಂಥಕರ್ಮ ಮಾರಾಯ್ರೇಇದು…? ಇಷ್ಟು ವರ್ಷ ಇಲ್ಲದ್ದು ಇವೆಲ್ಲ ಈಗೆಲ್ಲಿಂದ ಪ್ರತ್ಯಕ್ಷವಾದವೋ ದೇವರಿಗೇ ಗೊತ್ತು!’ ಎಂದಾಗ ಎಲ್ಲರೂ ಅತ್ತ ಓಡಿದೆವು. ಆಕೆಯ ಮನೆಯ ಹಿಂದುಗಡೆಯ ಕುರುಚಲು ಪೊದೆಗಳ ಸಮೀಪ ಎರಡು ಗಂಡು ಕೇರೆ ಹಾವುಗಳು ಹೆಣೆಯಾಡುತ್ತಿದ್ದವು.ಇದು ಕೂಡಾ ನಾಗರಹಾವುಗಳಂಥದ್ದೇ ಗಡಿನೃತ್ಯ.ಆದರೆ ಇವು ತಮ್ಮ ಹೋರಾಟದಲ್ಲಿ ಒಂದನ್ನೊಂದು ಕೊಂದು ಕೊಳ್ಳುವುದಿಲ್ಲ ಎನ್ನುವುದುಅಚ್ಚರಿ. ನನ್ನಹಿಂದೆ ಧಾಪುಗಾಲಿಕ್ಕುತ್ತ ಬಂದ ಜನರನ್ನು ಅಲ್ಲಲ್ಲೇ ನಿಲ್ಲಲು ಸೂಚಿಸಿ ಅದರ ಕುರಿತೂ ಅವರಿಗೆ ವಿವರಿಸಬೇಕೆಂಬಷ್ಟರಲ್ಲಿ ಅಲ್ಲಿ ಮತ್ತೊಂದು ಬೆರಗು!
ದೂರದ ತಾಳೆ ಮರದ ತುದಿಯಲ್ಲಿದ್ದ ಸುಂದರವಾದಗಂಡು ನವಿಲೊಂದುಹಾರುತ್ತ ಬಂದಿದ್ದುಹಾವುಗಳಿದ್ದ ಗದ್ದೆಗಿಳಿಯಿತು. ಅದನ್ನುಕಂಡ ಹೆಂಗಸಿಗೆ ಅದೆಂಥಆನಂದವಾಯಿತೆಂದರೆ, ‘ಅಯ್ಯಬ್ಬಾ ಸುಬ್ರಮಣ್ಯ…! ನೀನೇ ಕಾಪಾಡಬೇಕಪ್ಪಾ…!’ಎಂದವಳು ತಟ್ಟನೆ ನನ್ನತ್ತ ತಿರುಗಿ, ‘ಇನ್ನು ತೊಂದರೆಯಿಲ್ಲ ಸಾರ್.ಅವುಗಳನ್ನು ಹಿಡಿಯಬೇಕಂತಿಲ್ಲ.ನವಿಲೇ ಅವೆರಡನ್ನೂತಿಂದು ಹಾಕುತ್ತದೆ!’ಎಂದು ನೆಮ್ಮದಿಯಿಂದ ಎದೆ ನೀವಿ ಕೊಂಡಳು. ಅವಳನ್ನು ಸುಮ್ಮನಿರುವಂತೆ ಸೂಚಿಸಿ, ಎಲ್ಲರೂ ಕುತೂಹಲದಿಂದ ವೀಕ್ಷಿಸಲಾರಂಭಿಸಿದೆವು. ಮಿಶ್ರಾಹಾರಿಯಾದ ಮಯೂರಕ್ಕೂ ಹಾವುಗಳು ಆಹಾರವೇ. ಆದರೆ ಮುಖ್ಯ ಆಹಾರವಲ್ಲ.ತನ್ನ ತುಸುವೇ ದೂರದಲ್ಲಿದ್ದ ಕೇರೆಹಾವುಗಳನ್ನು ಆ ನವಿಲು ಗಮನಿಸಿದಂತಿರಲಿಲ್ಲ. ಅದು ಕೀಟಾನ್ವೇಷಣೆಯ ಧ್ಯಾನದಲ್ಲಿ ಮೆಲ್ಲನೆ ಹಾವುಗಳತ್ತಲೇ ಸಾಗಿದ್ದು ತಟ್ಟನೆಕೇರೆ ಹಾವುಗಳ ಹೊರಳಾಟವನ್ನು ಗ್ರಹಿಸಿತು.ಮರುಕ್ಷಣಕೊರಳೆತ್ತಿ ಅವುಗಳನ್ನು ದೀರ್ಘವಾಗಿ ದಿಟ್ಟಿಸಿದ್ದು ಚೂರೂ ವಿಚಲಿತವಾಗದೆ, ‘ತನ್ನೆದುರು ನಡೆಯುತ್ತಿರುವ ಈ ಕ್ರಿಯೆತನಗೆ ಸಂಬಂಧಿಸಿದ್ದೇ ಅಲ್ಲ!’ ಎಂಬಷ್ಟುನಿರ್ಲಿಪ್ತವಾಗಿ ಸರಕ್ಕನೆ ತನ್ನ ದಿಕ್ಕನ್ನು ಬದಲಿಸಿತು! ಅತ್ತ ಹಾವುಗಳು ಕೂಡಾತಮ್ಮ ಕಾಳಗದ ನಡುವೆಯೂ ನವಿಲನ್ನು ಗಮನಿಸಿದವು.ಆದರೆ ಅವು ಸಹ ವಿಚಲಿತವಾಗದಿದ್ದುದನ್ನು ಕಂಡ ನನ್ನಲ್ಲಿ ಹೊಸ ಅರಿವು ಮೂಡಿತು.ಆ ನವಿಲು,ಹಾವುಗಳಿಂದ ಮೂತಿತಿರುಗಿಸಿದ್ದನ್ನು ಕಂಡ ಹೆಂಗಸು, ‘ಛೇ,ಛೇ!ಇದೆಂಥ ಸುಬ್ರಮಣ್ಯಾ…!?’ ಎಂದುನಿರಾಶೆಯಿಂದ ಅಂದವರು ನವಿಲಿಗೆಒಂದಷ್ಟು ಶಾಪ ಹಾಕಿದರು.
ಈ ಭೂಮಿಯ ಮೇಲಿನ ಯಾವ ಜೀವರಾಶಿಗಳೂ ನಿಸರ್ಗದ ನಿಯಮವನ್ನು ಮುರಿಯುವುದಿಲ್ಲ. ಆದರೆ ನಾವು ಮಾತ್ರ ನಮ್ಮೊಳಗಿನ ಅರ್ಥವಿಲ್ಲದ ಭಯ ,ಅಜ್ಞಾನಕ್ಕೆ ಬಲಿಯಾಗಿ ಅಂಥ ನಿಯಮಗಳನ್ನು ಚೂರೂ ವಿವೇಚಿಸದೆ ಗಾಳಿಗೆ ತೂರಿ ಮನ ಬಂದಂತೆ ಜೀವಿಸುತ್ತಿರುವುದುಎಷ್ಟು ಸರಿ…? ಎಂಬ ಪ್ರಶ್ನೆಯೊಂದು ಕಾಡಿತು.ಆದ್ದರಿಂದ ಕೇರೆ ಹಾವುಗಳ ಕುರಿತೂ ಅವರಿಗೆ ಒಂದಿಷ್ಟು ಮಾಹಿತಿ ನೀಡುವುದರ ಮೂಲಕ ಅವುಗಳನ್ನು ಅಲ್ಲಿಯೇ ಬದುಕಲು ಬಿಡಿಸುವಲ್ಲಿ ಸಫಲನಾದೆ.
ಆದರಿತ್ತ ಎರಡೂನಾಗರಹಾವುಗಳನ್ನು ಒಂದೇ ಚೀಲಕ್ಕೆ ಹಾಕಿದ್ದೆನಲ್ಲವೇ? ಅವುಗಳನ್ನು ತಂದುಕೆಲವು ದಿನಗಳ ಕಾಲ ಒಟ್ಟಿಗೆಇರಿಸಿ, ಇಲ್ಲಾದರೂ ಅವುಗಳಲ್ಲೊಂದರ ಹಸಿವು ನೀಗಲಿ ಎಂದುಕೊಂಡೆ.ಆದರೆ ಆವತ್ತು ಒಂದನ್ನೊಂದು ಮುಗಿಸಲೇ ಪಣತೊಟ್ಟಂತಿದ್ದ ಹಾವುಗಳು ಈಗ, ‘ಮಾನವ ಸಹಜವಾದರಾಗ ದ್ವೇಷಗಳಂಥ ಯಾವ ಹೀನ ಗುಣಗಳೂ ನಮ್ಮೊಳಗೆ ಉದಿಸಲು ಸಾಧ್ಯವಿಲ್ಲ!’ ಎಂಬಂತೆ ಒಂದನ್ನೊಂದು ಬೆಸೆದು ಕೊಂಡೇ ಚೀಲದೊಳಗಿದ್ದವು ಮಾತ್ರವಲ್ಲದೆ ಬಿಡುಗಡೆಗೊಳಿಸುವಾಗಲೂ ಸೌಮ್ಯವಾಗಿ,ಒಂದಕ್ಕೊಂದು ವಿರುದ್ಧ ದಿಕ್ಕಿಗೆ ಹೊರಟು ಹೋದುದನ್ನು ಕಂಡು ಆ ವಿಷಜಂತುಗಳ ಮೇಲಿದ್ದ ಗೌರವ ಇಮ್ಮಡಿಯಾಗಿತ್ತು.
*****
9 thoughts on “ನರ, ನಾಗರ ಕಥೆ”
ಉರಗ ತಜ್ಞರಾಗಿದ್ದುಕೊಂಡು ಹಾವುಗಳನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ಅವುಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವಿರಿ ಎಂಬುದು ಈ ಲೇಖನದಿಂದ ತಿಳಿದು ಬರುತ್ತದೆ. ಪರಿಸರ ಹಾಗೂ ಪರಿಸರ ಜೀವಿಗಳ ಕುರಿತು ಬಹಳಷ್ಟು ಮಾಹಿತಿಯನ್ನು ತಿಳಿಯಪಡಿಸುವ ಲೇಖನವಿದು. ಗುರುರಾಜ್ ಸನಿಲ್ ಅವರಿಗೆ ಅಭಿನಂದನೆ 😊🙏
ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆ, ಪ್ರೋತ್ಸಾಹಕ್ಕೆ ಧನ್ಯವಾದ ಅನಿತಾ ಅವರೇ…
ಕಡೆಯ ಪ್ಯಾರದಲ್ಲಿ ಬರುವ ‘ ಮಾನವ ಸಹಜ ರಾಗದ್ವೇಷದಂತಹ ಹೀನ ಗುಣಗಳು ನಮ್ಮಲ್ಲಿ ಇಲ್ಲ’ ಎನ್ನುವಂತಹ ವಿಷಜಂತುಗಳ ಅಭಿಪ್ರಾಯ ಸತ್ಯವಾಗಿದೆ. ಅದ್ಭುತ ಕಥೆ ಹೆಣೆದ ಶ್ರೀ ಗುರುರಾಜ್ ಸನಿಲ್ ಅವರಿಗೆ ಅಭಿನಂದನೆಗಳು.
ಹೌದು, ಮೂಕ ಜೀವರಾಶಿಗಳಲ್ಲಿ ನಾನು ಕಂಡ ಅಪೂರ್ವ ಸಂಗತಿ ಸರ್ ಇದು. ತಮ್ಮ ಓದು ಮತ್ತು ಅಭಿನಂದನೆಗೆ ಧನ್ಯವಾದ…
ಎರಡು ಗಂಡು ನಾಗರಗಳು ಹೀಗೆ ಹೆಣೆದಾಡುವುದನ್ನು ನಾನು ಇದೇ ಮೊದಲು ಕೇಳಿದ್ದು. ಗಂಡು ಹೆಣ್ಣು ಉರಗಗಳ ಮಿಲನವನ್ನು ನಾನು ನೋಡಿದ್ದೆ. ಅದೊಂದು ಭಯಂಕರ ದೃಶ್ಯ. ನಮ್ಮ ಗಮನ ಅವುಗಳಿಗೆ ತೊಂದರೆಯಾದರೆ ಓಡಿಸಿಕೊಂಡು ಬರುತ್ತವೆ ಅಂತನೂ ಕೇಳಿದ್ದೆ. ಇದು ಎಷ್ಟು ಸರಿ ಗೊತ್ತಿಲ್ಲ. ಉರಗ ಪ್ರಪಂಚದ ಮಾಹಿತಿಗೆ ಧನ್ಯವಾದಗಳು.
ಪ್ರತಿಕ್ರಿಯೆಗೆ ಧನ್ಯವಾದ ಸರ್. ತಾವು ನೋಡಿರುವ ನಾಗರ ಹಾವುಗಳ ಕ್ರಿಯೆ ತುಸು ಭೀಕರವಾಗಿದ್ದರೆ ಅದು ಹೆಣ್ಣು, ಗಂಡಿನ ಮಿಲನ ಅಲ್ಲ, ಎರಡೂ ಗಂಡುಗಳ ಹೋರಾಟವೇ ಆಗಿರುತ್ತೆ. ನಾಗರಗಳ ಮಿಲನ ಕೋಮಲಕ್ರಿಯೆಯಾಗಿರುತ್ತದೆ. ಅದರಲ್ಲಿ ಗಂಡು ಹೆಣ್ಣಿನ ಮೇಲೆ ಮೃದುವಾಗಿ ಹರಿದಾಡುತ್ತ ಕೂಡುತ್ತದೆ. ಅಲ್ಲಿ ಅವುಗಳ ನಡುವೆ ಹೋರಾಟವಿರುವುದಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದ ಸರ್, ತಾವು ನೋಡಿರುವ ನಾಗರ ಹಾವುಗಳ ಕ್ರಿಯೆ ಭಯಂಕರವಾಗಿದ್ದರೆ ಅದು ಮಿಲನ ಅಲ್ಲ, ಎರಡೂ ಗಂಡು ಹಾವುಗಳ ಹೋರಾಟವಾಗಿರುತ್ತೆ. ಮಿಲನ ಕೋಮಲಕ್ರಿಯೆಯಾಗಿರುತ್ತದೆ. ಹಾವುಗಳು ಮಿಲನಗೊಳ್ಳುವ ಸಂದರ್ಭದಲ್ಲಿ ತುಸು ವಿಚಲಿತಗೊಂಡಿರುತ್ತವೆಯಾದರೂ ಆಕಸ್ಮತ್ ನಾವು ಸಮೀಪ ಹೋದರೆ ಅಟ್ಟಿಸಿಕೊಂಡು ಬರುವುದಿಲ್ಲ. ಅವುಗಳ ಕ್ರಿಯೆಗೆ ತೊಂದರೆ ಮಾಡದಿರುವುದು ಪ್ರಕೃತಿ ಸಂರಕ್ಷಣೆಯ ಸುಲಭೋಪಾಯ.
ನಿಮ್ಮ ಕಾರ್ಯಕ್ಷೇತ್ರ, ಅಪರಿಮಿತ ವಿಷಯ ಜ್ಞಾನ, ಪ್ರಾಣಿ ಪರಿಸರ ಕಾಳಜಿ ಲೋಕ ಪ್ರಸಿದ್ಧವಾದುದು. ನಿಮ್ಮ ಮಹತ್ವದ ಕೃತಿಗಳನ್ನು ಓದುವಾಗ ಮತ್ತು ಈ ಕಥಾನಕದ ಬರವಣಿಗೆಯ ಶೈಲಿ ಆಪ್ತ ಹಾಗೂ ಆಕರ್ಷಕವಾದುದು. ಶುಭ ಹಾರೈಕೆಗಳು ಗುರುರಾಜ್ ಅವರೇ.
ಗೋಪಾಲ ತ್ರಾಸಿ ಅವರಿಗೆ ನಮಸ್ಕಾರ. ನೀವು
ಬರಹವನ್ನು ನೋಡುವ, ಕರ್ತೃವನ್ನು ಅಭಿನಂದಿಸುವ ರೀತಿ ಬರಹಗಾರರಿಗೆ ಸ್ಫೂರ್ತಿ. ಸಾಹಿತ್ಯ ಕ್ಷೇತ್ರ ನಿಮ್ಮಂಥ ಕವಿ, ಸಾಹಿತಿಗಳಿಂದ ಶ್ರೀಮಂತವಾಗುಳಿದಿದೆ. ಧನ್ಯವಾದ.