ಶ್ರೀಮತಿ ಶ್ವೇತಾ ನರಗುಂದ ಅವರು ನಾನು ಕೇಳಿದ ಹೆಸರುಗಳಲ್ಲಿ ಮುಖ್ಯವಾದದ್ದು. ಆದರೆ ನಾನು ಅವರನ್ನು ಓದಿದ್ದು ಕಡಿಮೆ ಅಥವಾ ಓದಲೇ ಇಲ್ಲವೇನೋ ಎಂಬ ಗುಮಾನಿ ನನಗೆ. ಇಂಥವರು ದಿಢೀರಾಗಿ ಫೋನಿಸಿದಾಗ ಆಶ್ಚರ್ಯವೂ ಕುತೂಹಲವೂ ಆಗುವುದು ಸಹಜ. ಆದರೂ ವಿಶ್ವಾಸದಿಂದಲೇ ಮಾತನಾಡಿಸಿದೆ. ಅವರು ತಾನೊಂದು ಕವನ ಸಂಗ್ರಹ ಹೊರತರುವುದಾಗಿಯೂ ಅದಕ್ಕೆ ನಾನು ಮುನ್ನುಡಿಸಬೇಕೆಂದು ವಿನಂತಿಸಿದರು. ನನಗೆ ಸ್ವಲ್ಪ ಮುಜಗರವೂ ಆತಂಕವೂ ಆಯ್ತು. ನಾನು ಈ ತನಕ ಬರೆದ ಮುನ್ನುಡಿಗಳಲ್ಲಿ ಆಯ್ದ ನಲುವತ್ತನ್ನು ಪ್ರಕಾಶಕರಿಗೆ ಕೊಟ್ಟಿದ್ದೆ. ಅದು ‘ನುಡಿಗೊಂದು ಮುನ್ನುಡಿ’ ಎನ್ನುವ ಹೆಸರಲ್ಲಿ ಹೊರಬರಲು ಸಿದ್ಧವಾಗಿತ್ತು. ಅದರ ಸಿದ್ಧತೆ ನಡೆಸುವಾಗ ನಾನು ಇನ್ನು ಮುನ್ನುಡಿ ಬರೆಯಬಾರದು ಎಂದು ನಿರ್ಧಾರಕ್ಕೆ ಬಂದಿದ್ದೆ. ಕಾರಣ ಎರಡು : ಮೊದಲನೆಯದ್ದು ನಾನು ವಿಮರ್ಶಕನಲ್ಲ. ಎರಡನೆಯದ್ದು : ಈಗ ಹೊಸದಾಗಿ ಬರುತ್ತಿರುವ ಕವಿತೆಗಳನ್ನು ಓದುವಾಗ ಈ ಕವಿಗಳಿಗೆಲ್ಲ ಪೂರ್ವ ಸೂರಿಗಳನ್ನು ಓದಬೇಕೆಂದು ಅನಿಸುವುದಿಲ್ಲವಲ್ಲ ಎಂದು ಅನಿಸಿದ್ದು! ಯಾಕೆಂದರೆ ತುಂಬಾ ಪ್ರತಿಭಾವಂತರಿರುವ ಇಂದಿನ ಹೊಸ ತಲೆಮಾರಿಗೆ ಕುವೆಂಪು, ಬೇಂದ್ರೆ, ಅಡಿಗ, ಪು.ತಿ.ನ, ಕೆ.ಎಸ್.ನ, ಕಣವಿ, ಶಿವರುದ್ರಪ್ಪ ಮೊದಲಾದರ ಕಾವ್ಯ ಓದಿದ (ಓದುವ) ಪರಿಪಾಠ ಇಲ್ಲ ಎಂದು ಅವರ ಕವಿತೆಗಳು ‘ಹೇಳುವುದನ್ನು’ ನಾನು ಗಮನಿಸಿದ್ದೇನೆ. ಹಾಗೆಂದು ಓದಲೇಬೇಕೆಂದು ಯಾರನ್ನೂ ಒತ್ತಾಯಿಸಲು ನಾನು ಯಾರು? ಅದಾಗ್ಯೂ ನನ್ನ ನಿಲುವು ಏನೆಂದರೆ, ಕವಿಯಾದವನಿಗೆ ಪ್ರತಿಭೆಯ ಜೊತೆಗೆ ಸತತಾಭ್ಯಾಸ ಪ್ರಯತ್ನವೂ ವೃದ್ಧಸೇವಾನುರಾಗವೂ (ಪೂರ್ವ ಸೂರಿಗಳ ಸ್ಮರಣೆಯೂ) ಬೇಕೆಂದು ನಮ್ಮ ಕಾವ್ಯವೀಮಾಂಸೆ ಹೇಳುದಲ್ಲ, ನಾನು ಅದನ್ನು ಈ ನೆಲೆಯಲ್ಲಿ ಸ್ವಲ್ಪ ಪ್ರಯತ್ನ ನಡೆಸಿದವನಿದ್ದೇನೆ.
ನಾನು ನರಗುಂದ ಅವರಿಗೆ ಪ್ರಕೃತ ಮುನ್ನುಡಿ ಬರೆಯದಿರಲು ನಿರ್ಧರಿಸಿದ್ದೇನೆ ಎಂಬ ಮಾತನ್ನು ಹೇಳಿದೆ. ಅವರಿಗೆ ನಿರಾಶೆಯ ಜೊತೆ ತುಸು ಬೇಸರವೂ ಆಯಿತು. ನಾನು ಯಾಕೆ ಮುನ್ನುಡಿ ಬರೆಯುವುದಿಲ್ಲ ಎಂದು ಕೊಟ್ಟ ಕಾರಣಗಳನ್ನು ಒಪ್ಪಿಕೊಳ್ಳದ ಅವರು ‘ನಿಮಗೆ ಬಿಡುವು ಆದಾಗ ಬರೆಯಿರಿ’ ಎಂಬ ಔದಾರ್ಯ ಮೆರೆದರು. ಈಗ ಒಪ್ಪಿಕೊಳ್ಳದಿರಲು ಆಗಲಿಲ್ಲ. ‘ನಿಮ್ಮ ಹಸ್ತಪ್ರತಿ ಕಳುಹಿಸಿ’ ಎಂದೆ. ಮರುಟಪ್ರಾಲಿಗೆ ಹಸ್ತಪ್ರತಿ ಬಂತು. ಹೇಗಿರಬಹುದು ಎಂಬ ಕುತೂಹಲದ ಬೆನ್ನಲ್ಲೇ, ಚೆನ್ನಾಗಿಲ್ಲದಿದ್ದರೆ ಹೇಗೆ ಮುನ್ನುಡಿಸುವುದು ಎಂದು ಅವರ ಕವನ ಸಂಗ್ರಹವನ್ನು ಕೈಗೆತ್ತಿಕೊಂಡೆ. ಪರವಾಗಿಲ್ಲ ಎನ್ನುವುದಲ್ಲ; ಚೆನ್ನಾಗಿಯೇ ಇದೆಯಲ್ಲ ಅನಿಸಿತು. ಪ್ರಾಯಃ ಈ ಮುನ್ನುಡಿಯ ನೆಪದಿಂದಾಗಲೂ ಒಳ್ಳೆ ಕವಿತೆಗಳನ್ನು ಅಪರೂಪದಲ್ಲಿ ಓದುವಂತಾಯಿತಲ್ಲ ಎಂದು ಖುಶಿಪಟ್ಟೆ.
ಹಾಗೆ ನೋಡಿದರೆ ನರಗುಂದ ಅವರು ನನ್ನ ಸಂಬಂಧಿಕರು ! ರಕ್ತ ಸಂಬಂಧದಿಂದ ಅಲ್ಲ. ವೃತ್ತಿ ಸಂಬಂಧದಿಂದ! ಅವರು ಆಸ್ಪತ್ರೆ ನಿರ್ವಹಣೆಯ ವೃತ್ತಿಯನ್ನು ಒಪ್ಪಿಕೊಂಡವರು. ಸ್ವತಂತ್ರವಾಗಿ ತನ್ನ ಗಂಡನೊಂದಿಗೆ ಸೇರಿ ಇಪ್ಪತ್ತು ವರುಷಗಳ ಕಾಲ ‘ನರಗುಂದ ಆಸ್ಪತ್ರೆ’ ನಡೆಸಿದವರು (1991-2010) ಮಕ್ಕಳೆಲ್ಲ ದೊಡ್ಡವರಾಗಿ ಓದಿ ಮದುವೆಯಾಗಿ ವಿದೇಶಗಳಲ್ಲಿ ವಾಸ್ತವ್ಯ ನಡೆಸಲು ಮುಂದಾದ ಮೇಲೆ ತನ್ನ ರಕ್ತದಲ್ಲಿ ಬೀಜ ರೂಪವಾಗಿದ್ದ ಸಾಹಿತ್ಯ ಪ್ರೀತಿಯನ್ನು ಕರಸ್ಥಳಕ್ಕೆ ತಂದವರು. ‘ಇನ್ನೇನಿದ್ದರೂ ಈ ವೈದ್ಯಕೀಯ ವೃತ್ತಿಯ ಸಂಪರ್ಕ ಸಾಕು. ಸಾಹಿತ್ಯದ ಸಾಂಗತ್ಯ ಬೇಕು’ ಎಂದು ಬರವಣಿಗೆಗೆ ಕೈ ಹಚ್ಚಿದವರು. ಇಂಥ ನಿರ್ಧಾರಕ್ಕೆ ಬರುವಾಗ ಅವರಿಗೆ ಐವತ್ತು ಆಗಿತ್ತು. ಅನೇಕ ಸಾಹಿತಿಗಳು ತಮ್ಮ ಐವತ್ತರಲ್ಲಿ ಐವತ್ತಕ್ಕೂ ಮಿಕ್ಕಿ ಸಾಹಿತ್ಯ ಕೃತಿಗಳನ್ನು ಹೊರತರುತ್ತಾರಾದರೆ, ಈ ಅಮ್ಮ ಐವತ್ತರಲ್ಲಿ ಲೇಖನಿ ಹಿಡಿದ್ದದೇ ಆಶ್ಚರ್ಯ! ಆದರೆ ಅವರ ಜೀವನಾನುಭವವು ಸರಾಗವಾಗಿ ಶಾಯಿಯಾಗಿ ಅವರ ಲೇಖನಿಯಾಗಿ ಇಳಿಯಿತು. ಈ ನೆಲೆಯಲ್ಲಿ ಅವರು ಈಗಾಗಲೇ ಹದಿಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಎರಡು ಕವನ ಸಂಗ್ರಹಗಳು, ಎರಡು ಕತಾಸಂಗ್ರಹ, ಒಂದು ಜೀವನ ಚಿತ್ರ, ಎರಡು ಪ್ರವಾಸ ಕಥನ, ಒಂದು ವೈದ್ಯ ವಿಜ್ಞಾನ ಕೃತಿ ಮತ್ತು ಒಂದು ಕಾದಂಬರಿ ಹಾಗೂ ಎರಡು ಶಿಶು ಸಾಹಿತ್ಯ ಸಂಕಲನಗಳಿವೆ. ‘ಕಾವ್ಯ ಕುಂದಣ’ ಎಂಬ ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕವನಸಂಗ್ರಹವನ್ನು ಅವರು ಸಂಪಾದಿಸಿದ್ದಾರೆ.
ಸಾಮಾನ್ಯವಾಗಿ ನಾವು ನಮಗೆ ಬೇಕಾದ ವಿಷಯಗಳನ್ನು ನಮ್ಮ ಮಿತಿಯಲ್ಲಿ ‘ಪ್ಲೇನ್’ (Plan) ಹಾಕಿಕೊಳ್ಳುತ್ತೇವೆ. ಅದು ಯಶಸ್ವಿಯಾಗುವುದೂ ಉಂಟು, ವಿಫಲವಾಗುವುದೂ ಇಲ್ಲದಿಲ್ಲ! ನರಗುಂದ ಅವರು ತನ್ನ ಬದುಕು ಹೇಗಿರಬೇಕು ಎಂಬುದನ್ನೇ ಪ್ಲೇನು ಹಾಕಿಕೊಂಡ ಹಾಗೆ, ತನ್ನ ಐವತ್ತರ ಒಳಗೆ ಓದು, ದುಡಿಮೆ, ಕುಟುಂಬ ಸಂಸಾರ ನಿರ್ವಹಣೆ ಎನ್ನುವುದನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸಿ, ಆ ಮೇಲಿನ ಶೇಷಾಯುಷ್ಯವು ತನ್ನ ಬದುಕಿಗೆ ಮಾತ್ರವಲ್ಲ ಈ ಜಗತ್ತಿಗೆ ಅರ್ಥ ಇದೆಯೇ? ಇದ್ದರೆ ಯಾವುದು? ಅಥವಾ ಹೇಗೆ ಎನ್ನುವುದಕ್ಕೆ ಮೀಸಲಿರಲಿ ಎಂದು ನಿರ್ಧರಿಸಿದಂತಿದೆ. ಅದು ಅವರ ಸಾಹಿತ್ಯದಲ್ಲಿ ಪ್ರತಿಬಿಂಬಿಸಿದೆ.
ನಾನು ಮುನ್ನುಡಿಸಲು ಒಪ್ಪಿದ ಈ ಸಂಕಲನದ ಹೆಸರು “ಮನಮದ್ದಳೆಯ ಸ್ವಗತ” ಇದೊಂದು ಅಪರೂಪದ ಶಿರೋನಾಮೆ. ಮನಸ್ಸು ಒಂದು ಮದ್ದಳೆ ಎನ್ನುವುದು ತುಂಬಾ ಸೊಗಸಾದ ರೂಪಕ. ಮದ್ದಳೆ ಎನ್ನುವುದು ಒಂದು ‘ನುಡಿವಾದ್ಯ’ ವಿಶೇಷವಾಗಿರುವ ಶಬ್ದ. ಯಾಕೆಂದರೆ ನಮ್ಮೆಲ್ಲರ ಮನಸ್ಸು ನುಡಿವಾದ್ಯವೇ. ಇಂಥ ನುಡಿವಾದ್ಯದ ‘ನಡೆಗಳು’ (ನುಡಿಸುವಾಗ ಉಂಟಾಗುವ ಶಬ್ದಗಳು) ಸಹಜವಾಗಿ ಇನ್ನೊಬ್ಬರಿಗೆ ಕೇಳಿಸುವಂಥದ್ದಲ್ಲ. ಆ ಕಾರಣದಿಂದ ಅವು ಸ್ವಗತಗಳು. ಅಂದರೆ ತನಗೆ ತಾನೇ ಹೇಳಿಕೊಳ್ಳುವಂಥಾದ್ದು ಎನ್ನುವುದನ್ನು ಧ್ವನಿಸುತ್ತವೆ. ಹೌದು ಈ ಸಂಕಲನ ಇರುವುದೂ ಹಾಗೆಯೇ!
ಈ ಸಂಕಲನದ ಅಥವಾ ಶಿರೋನಾಮೆಯ ‘ಮೆನಿಪೆಸ್ಟೋ’ದ ಹಾಗಿರುವ ಮೊದಲ ಕವಿತೆ ನರಗುಂದ ಅವರ ನಿಲುವನ್ನು ‘ಆಡದೇ ಉಳಿದ ಮಾತುಗಳು’ ಎನ್ನುವ ಕವಿತೆಯಲ್ಲಿ ಹೀಗೆಯೇ ಅಭಿವ್ಯಕ್ತಿಸಿದೆ.
ಅಂದು ಆಡದ್ದು
ಇಂದು ಧ್ವನಿ ಪಡೆದುಕೊಂಡರೇನಾದೀತು?
ಕೇಳಿತೇ ಒಂದಾದರೂ ಕಿವಿ?
ಅಥವಾ ಮಿಡಿಯದೇ ಒಂದಾದರೂ ಹೃದಯ?
ಸಾಕಲ್ಲ?’
ಇದು ತಣ್ಣಗೆ, ತನಗೆ ತಾನೇ ಸಾಂತ್ವನ ಹೇಳುವ ವಿಧಾನ.
ಆದರೂ ನಮ್ಮ ನಿಲುವು ಒಲವುಗಳು ಹೇಗೆ ಕವಿತೆಯಾಗಬೇಕು/ ಕವಿತೆಯಾಗುತ್ತವೆ ಎನ್ನುವುದು ಪ್ರತಿಯೊಬ್ಬ ಕವಿಯನ್ನೂ ಸದಾ ಕಾಡುವ ಪ್ರಶ್ನೆ. ಯಾಕೆಂದರೆ ಕವಿತೆ ಅಂದರೆ ಏನು? ಎಂದು ಸರಳವಾಗಿ ಉತ್ತರಿಸುವುದು ಕಷ್ಟ ಅಥವಾ ಬದುಕು ಏನು ಎನ್ನುವುದರಲ್ಲಿ ಅದರ ಉತ್ತರ ಇರಬಹುದು ! ಅಲ್ಲಮನ ಮಾತಿನಲ್ಲಿ ಹೇಳುವುದಾದರೆ ‘ಕಲ್ಲಿನೊಳಗಿನ ಬೆಂಕಿಯ ಹಾಗೆ, ನೀರಿನೊಳಗಿನ ಪ್ರತಿಬಿಂಬದ ಹಾಗೆ ಅಥವಾ ಶಬ್ದದೊಳಗಿನ ನಿಶ್ಶಬ್ದದ ಹಾಗೆ’ ಕವಿತೆ ಇರುವುದು ಹೆಚ್ಚು. ಇಂಥ ಕವಿತೆಯನ್ನು ಕಾಣಬೇಕೆಂದರೆ (ಕಾಣುವುದು ಅಂದರೆ ನೋಡುವುದಲ್ಲ!) ಕವಿತೆಯನ್ನು ಅನುಭವಿಸುವ (‘ಓದುವ’ ಅಲ್ಲ) ಸಹೃದಯತೆ ಬೇಕು. ಹಾಗಾಗಿ ಕವಿತೆ -ಹೀಗೆ-ಇರಬೇಕು ಎಂದು ಅಪ್ಪಣೆ ಕೊಡುವುದೂ(ಕೊಡಿಸುವುದೂ) ಹೇಗೆ ತಪ್ಪೋ ಕವಿತೆಯನ್ನು ಅರ್ಥೈಸಿಕೊಂಡೆ ಎನ್ನುವುದು ಪೂರ್ತಿ ಸತ್ಯವಲ್ಲ! ಯಾಕೆಂದರೆ ಒಳ್ಳೆಯ ಕವಿತೆಯಲ್ಲಿ ಸ್ಪಷ್ಟತೆಯಷ್ಟೇ ಅಸ್ಪಷ್ಟತೆಯೂ ಇರುತ್ತದೆ. ಹಾಗಾಗಿ ಈ ಮಾಯಾಂಗನೆಯನ್ನು ಹಿಡಿಯಲು ಕವಿಗಳು ತಂತಮ್ಮ ಕವಿತೆಗಳಲ್ಲಿ ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೂ ಅದು ತಪ್ಪಿಸಿಕೊಳ್ಳುತ್ತಲೇ ಇರುತ್ತದೆ. ನರಗುಂದ ಅವರು ಕವಿತೆಯ ಬಗ್ಗೆ ನಾಲ್ಕೈದು ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಅವರು ಸೋತಿಲ್ಲ! ಹಾಗೆಯೇ ಅವರು ಜಯಿಸಿಯೂ ಇಲ್ಲ! ಆದರೂ ನನಗೆ ಅದು ಇಷ್ಟವಾದವೇ! ‘ಕವಿತೆ ಇಣುಕಿ’ ಎನ್ನುವುದರ ಪ್ರಾರಂಭ-
ಕವಿತೆ ಅವಳಲ್ಲಿ
ಇಣುಕಿದ್ದು ಆವರಿಸಿ ಉಸಿರೆಳೆದದ್ದು
ಯಾವಾಗ?
ಗೊತ್ತಿಲ್ಲ !
ಎಂದಿದ್ದು, ಮುಂದೆ ಅದು ಬೇರೆ ಬೇರೆ ರೂಪಕಗಳ ಮೂಲಕ ‘ಕವಿತೆ’ ಎನ್ನುವುದೂ (ನರಗುಂದ ಅವರ ಕವಿತೆಯೂ) ಒಟ್ಟೊಟ್ಟಿಗೇ ಬೆಳೆದು ಕೊನೆಗೆ ನಿಜವಾದ ಕವಿತೆ ಎಲ್ಲಿ ಹುಟ್ಟಿತು ಎಂಬುದನ್ನು ಅವರು ಕವಿತೆ ಕವಿತೆಯಲ್ಲೇ ಹುಟ್ಟಿತು ಎನ್ನುತ್ತಾರೆ. ಅದು ಹೀಗಿದೆ-
ಕವಿತೆ ಕುಡಿಯೊಡೆದದ್ದು
ಎಲ್ಲರೂ ಅವಳನ್ನು ಬಿಟ್ಟು ಹೋಗಿ
ಒಂಟಿಯಾಗಿಸಿದ ಮೇಲೆ
ಅವಳು ಈಗ ಕವಿತೆ ಬರೆಯುತ್ತಾಳೆ
ಹರೆಯದ ಪುಳಕಗಳ ಬಗೆಗೆ
ದಾಂಪತ್ಯದ ತುಡಿತಗಳ ಬಗೆಗೆ
ಮಾತೃತ್ವದ ಧನ್ಯತೆಯ ಬಗೆಗೆ
ಕವಿತೆಯೇ ಆಗಿ!
ಇದು ವ್ಹಾರೆ ವಾ! ಎನ್ನುವಷ್ಟು ಸೊಗಸಾಗಿದೆ. ಇದರಲ್ಲಿ ಅನುಭವ ಮಾತ್ರವಲ್ಲ ಅನುಭಾವವೂ ಇದೆ.
ನರಗುಂದ ಅವರಿಗೆ ಪ್ರಕೃತಿಯ ಬಗ್ಗೆ ಹೆಚ್ಚು ಮೋಹ ಅಲ್ಲ ವ್ಯಾಮೋಹ! ಯಾಕೆಂದರೆ ಆಕೆ ಹೆಣ್ಣು ಮಗಳು. ಆದ್ದರಿಂದಲೇ ಕವಿತೆಗೂ ಋತುಗಳಿಗೂ ಆಕೆ ಸಂಬಂಧವನ್ನು ಕಲ್ಪಿಸುತ್ತಾರೆ. ‘ಕವಿತೆ ಮತ್ತು ಋತು’ ಎನ್ನುವುದು ಈ ನೆಲೆಯ ಕವನ. ಅದರ ಕೊನೆ ‘ಬಿದಿರಲಿ ಹೊಕ್ಕ ಗಾಳಿ/ ಕವಿತೆಯಾಗಲು ನಾನು ಉಸಿರಾಗಬೇಕು’ ಎಂದಿದೆ. ಹೌದು ನಾನೂ ಒಂದು ‘ಒಪ್ಪಿಕೊಳ್ಳುವುದು’ ಎಂಬ ಒಂದು ಕವಿತೆಯನ್ನು ಬಹಳ ವರುಷಗಳ ಹಿಂದೆ ಬರೆದಿದ್ದೆ.
‘ಕಾಡೇ ಕರುಣೆಯಿಂದ ಕಳುಹಿಸಿದ ಹಾಗಿರುವ/ ಈ ಬಿದಿರ ತುಂಡು/ ನಾಡಿಗೆ ಬಂದು ಕೊಳಲಾಗಿದೆ/ ಕೋಗಿಲೆ ಮತ್ತು ನವಿಲುಗಳ ಜೊತೆಗೇ/ ಬಗೆಬಗೆಯ ಕಾಡಿನ ಹೂಗಳೂ ಬಂದು/ ಸ್ವರಗಳಾದಂತಿವೆ ಕೊಳಲಲ್ಲಿ/ ನುಡಿಸಿದರೂ ನುಡಿಸದಿದ್ದರೂ/ ಬಿದಿರತುಂಡೊಂದನ್ನು ಒಪ್ಪಿಕೊಂಡ ಮೇಲೆ ಕೊಳಲೆಂದು/ ತಿರಸ್ಕರಿಸಿದರೂ ಅದು / ಬಿದಿರಾಗದು’
ನರಗುಂದ ಅವರಿಗೆ ಪ್ರಕೃತಿಯ ಮೇಲಿನ ಪ್ರೀತಿಯೂ ಇದೇ ಬಗೆಯದ್ದು. ಅದು ಅಂತಿಂಥ ಪ್ರೀತಿಯಲ್ಲ; ತಾಯ್ತನದ ಪ್ರೀತಿ. ಅವರು ತಾಯಿಯನ್ನು ಪ್ರಕೃತಿಯಲ್ಲಿ ಕಾಣುತ್ತಾರೆ. ತಾಯಿಯಲ್ಲಿ ಮಾತ್ರ ತಾಯ್ತನ ಇರುತ್ತದೆ ತಾನೇ? ಯಾರಲ್ಲಿ ತಾಯ್ತನ ಇರುತ್ತದೋ ಅಂಥವರ ಕಣ್ಣುಗಳಿಗೆ ಎಲ್ಲೆಲ್ಲೂ ಪ್ರಕೃತಿ ಕಾಣುತ್ತದೆ. ಅಂಥ ಪ್ರಕೃತಿಯೋ ತಾಯಿಗೆ ರೂಪಕ.
ಇದಕ್ಕೆ ಉದಾಹರಣೆಯಾಗಿ ಈ ಸಂಕಲನದಲ್ಲಿ ನಾಲ್ಕಾರು ಕವನಗಳು ಸಿಗುತ್ತವೆ. ಅವುಗಳಲ್ಲಿ ‘ಅತಿವೃಷ್ಟಿ’ ಎನ್ನುವುದೂ ಒಂದು. ಇಲ್ಲಿ ಒಂದು ತಾಯಿ ಹೃದಯ ಅತಿಯಾದ ಮಳೆಗೆ ಎಷ್ಟು ಕೊರಗುತ್ತದೆ ಅಂದರೆ ನಮ್ಮ ಇದಿರಿಗೇ ಈಗ ಮಳೆ ಸುರಿಯುತ್ತಿದೆ ಎನ್ನುವಷ್ಟು ನಾಟಕೀಯವಾಗಿ ಈ ಕವಿತೆ ಇದೆ. ಜಾನಪದ ಮಾದರಿಯಲ್ಲಿರುವ ಮತ್ತು ಹಾಡಲು ಅನುಕೂಲಕರವಾದ ಛಂದಸ್ಸಿನಲ್ಲಿ ಇರುವ, ಇದನ್ನು ಓದುದುತ್ತಾ ಹೋದ ಹಾಗೆ ನಮ್ಮ ಹೃದಯವೂ ಹೆಣ್ಣಿನ ಹೃದಯವಾಗುತ್ತದೆ. ಮನಕಲಕುವ ಈ ಕವನವನ್ನು ಸರಾಗವಾಗಿ ಎತ್ತರದ ಸ್ವರದಲ್ಲಿ ಯಾರಾದರೂ ಹಾಡಿದರೆ ಖಂಡಿತವಾಗಿಯೂ ಶ್ರೋತೃಗಳು ‘ಅಯ್ಯೋ ಪಾಪ’ ಎನ್ನುವಷ್ಟು ಕರುಣಾರಸವನ್ನು ಇದು ಹರಿಸುತ್ತದೆ. (ಈ ನೆಲೆಯಲ್ಲಿ ಇದೊಂದು ಉತ್ತಮ ಭಾವಗೀತೆ)
‘ಮಹಾಕಾವ್ಯ’ ಎನ್ನುವುದು ಕೂಡಾ ಮಳೆಗಾಲಕ್ಕೆ ರೂಪಕವಾಗಿ ಬಂದಿದೆ. ವರ್ಷ ಋತುವನ್ನು ವರ್ಣಿಸುತ್ತಲೇ ಮಹಾಕಾವ್ಯವೂ ಹೀಗೇ ಎನ್ನುವುದು ಮತ್ತು ಆ ಕವನ ಕೊನೆಗೊಳ್ಳುವುದು ಅಡಿಗರು ‘ಬರಲಿ ವಿನತಾಪುತ್ರ’ ಎನ್ನುವ ರೀತಿಯಲ್ಲಿ.
ರಾತ್ರೋರಾತ್ರಿ ರೆಕ್ಕೆ ಬಿರಿದೇಳುವ
ಕ್ರಿಮಿಕೀಟ ಖಗಮೃಗಗಳೆದೆಯಲ್ಲಿ ಜೀವಕಾರಂಜಿ
ನೆಲ ನೀರು ಕಾಡ್ಮುಗಿಲು ಎಲ್ಲೆಂದರಲ್ಲಿ
ಮಿಲನ ಮಹೋತ್ಸವದ ಹರ್ಷೋನ್ಮಾದ.
ಇಲ್ಲಿ – ಛಂದಸ್ಸಿನ ಬಿಗಿ ಮತ್ತು ಲಯದ ನೆಗೆತ ಎಷ್ಟು ಖುಶಿ ಕೊಡುತ್ತದೋ ಹಾಗೆ ‘ಕಾಡ್ಮುಗಿಲು’ ಎಂದ ಹೊಸ ಪದ ಪ್ರಯೋಗವೂ ಮಳೆಗಾಲದ ವರ್ಣನೆಗೆ ‘ಶಬ್ದ ಸಾರ್ಥಕ್ಯ’ವನ್ನು ಒದಗಿಸಿದೆ. ‘ಮಳೆ ಎಂದರೆ’ ಎನ್ನುವುದೂ ಈ ರೀತಿಯಲ್ಲಿ ಬಿಚ್ಚಿಕೊಳ್ಳುವ ಸೊಗಸಾದ ಕವನ
ಮಳೆ ಎಂದರೆ
ಎಳೆ ಕಂಗಳ ಬೆರಗು
ಪುಟ್ಟ ಕೈಗಳ ಕಾಗದದ ದೋಣಿ
ಬೆಚ್ಚನೆಯ ಉಣ್ಣೆಯ ಕುಲಾವಿ
ಕೆಂಪಡರಿದ ಮೂಗು!
ಈ ನಾಲ್ಕೈದು ಸಾಲುಗಳು ಕಟ್ಟಿಕೊಡುವ ಅನುಭೂತಿಗೆ ಪೂರಕವಾಗಿ ಮತ್ತೆ ಐದು ಸ್ಟಾಂಜಾಗಳು ಇದ್ದರೂ ಈ ಒಂದು ಸ್ಟಾಂಜಾನೇ ಮಳೆಗಾಲದ ವರ್ಣನೆಗೆ ‘ಸಾಕು’. ಇದರಲ್ಲಿ ಬರುವ ಎಳೆಕಂಗಳು, ಬೆರಗು, ಪುಟ್ಟ ಕೈಗಳು ಕಾಗದದ ದೋಣಿ ಬೆಚ್ಚನೆಯ ಉಣ್ಣೆಯ ಕುಲಾವಿ ಎಲ್ಲವೂ ಒಂದೊಂದು ಅನುಭವಕ್ಕೆ ಸಾಕ್ಷಿಯ ಹಾಗಿದ್ದರೆ ‘ಕೆಂಪಡರಿದ ಮೂಗು’ ಎನ್ನುವುದು ಪುಟ್ಟ ಕಂಗಳಿಗೆ ಮಾತ್ರವಲ್ಲ ದೊಡ್ಡವರಿಗೂ ಘಾತಕೊಡುವ ‘ಶೀತ’ ಎನ್ನುವ ಧ್ವನಿ ಖುಶಿ ನೀಡುತ್ತದೆ.
‘ತಾಯಿ’ ಎನ್ನುವುದು ಕೂಡಾ ಈ ಸಂಕಲನ ಯಶಸ್ವಿ ಕವನ.
ಹೆಣ್ಣು
ಎತ್ತಿಕೊಂಡು ಕಣ್ಣುಗಳವಲ್ಲದ ಬಿಜಾಣುವೊಂದು
ಗುಣಿಸಿ ಬಲು ನಾಜೂಕಿನಿಂದ
ಮಾಯದ ಮಣ್ಣಾಗಿಸಿ
ಕಾಪಿಟ್ಟು ಜಗದ ದಿಟ್ಟಿಯಿಂದ
ತಿದ್ದಿ ತೀಡಿ ಚೆಲುಪುತ್ಥಳಿಯ ಮಾಡಿ
ಮೀಯಿಸುತ ತನ್ನೊಡಲ ಅಮೃತದಲಿ
ಸೃಜಿಸಿದಳೊಂದು ಅದ್ಭುತವ
ಮೇಲಿನ ಸಾಲುಗಳು ತಾಯಿಯ ಗರ್ಭದಲ್ಲಿ ಮಗುವೊಂದು ರೂಪುಗೊಳ್ಳುವುದನ್ನು ಸುಂದರವಾಗಿ ಬಿಚ್ಚಿಡುವ ಸಾಲುಗಳಿಂದ ಆಪ್ತವಾಗುತ್ತದೆ. ಇಲ್ಲಿಯೂ ಕೂಡಾ. ‘’ಮಳೆ ಎಂದರೆ’ ಕವನದ ಹಾಗೆ ಪದವಿಟ್ಟ ಅಥವಾ ಪುದುವಿಟ್ಟ ಅಕ್ಷರಗಳೆಲ್ಲದರಲ್ಲಿ (ಶಬ್ದಗಳೆಲ್ಲದರಲ್ಲಿ) ‘ತಾಯಿ’ ಜೀವಂತ ಕಾಣುತ್ತಾಳೆ!
ಹೀಗೆ ಕಾವ್ಯಕ್ಕೆ ನೇರಾನೇರ ಇದಿರಾಗುವ ನರಗುಂದ ಅವರು ಸ್ತೀವಾದಿಯಾಗಿ ಚಿಂತಿಸಲಿಲ್ಲವೇ? ಎಂದರೆ ಅಥÀವಾ ಸ್ತ್ರೀವಾದದ ಬಗೆಗೆ ಆಕೆಯ ಉತ್ತರವೇನು ಎಂದರೆ ಅದಕ್ಕೆ ಅವರದೇ ಆದ ದಾಟಿಯಲ್ಲಿ ಉತ್ತರ ಸಿಗುತ್ತದೆ. ಎಲ್ಲಾ ಸ್ತ್ರೀಯರ ಬನ್ನಬವಣೆಗಳನ್ನು, ಶೋಷಣೆಗಳನ್ನು ಚಡಪಡಿಕೆಗಳನ್ನು, ಪುರುಷ ವ್ಯವಸ್ಥೆಯ ಕ್ರೌರ್ಯವನ್ನು ಆಕೆ ಸ್ವತಃ ಅನುಭವಿಸದಿದ್ದರೂ ಹತ್ತಿರದಿಂದ ನೋಡಿ ಆಕೆ ಕರಗಿದ್ದಾರೆ. ಆದರೆ ಆಕೆಯಲ್ಲಿ ರಾಜಸ ಸಿಟ್ಟಿಲ್ಲ.
ಆದರೆ ಸಾತ್ವಿಕ ಆಕ್ರೋಶ ಇದೆ. ಅದನ್ನೇ ಆಕೆ ‘ಹೇಳಿ ಬಿಡಿ ಒಮ್ಮೆ’ ಎಂದು ಮೆಲುದನಿಯಲ್ಲಿ ಪ್ರಶ್ನಿಸುತ್ತಾರೆ. ಆ ಕವನದ ಕೊನೆಯ ಸ್ಟಾಂಜಾ ಹೀಗಿದೆ.
ನಿನ್ನ ದಾರಿಗೊಂದು ಪ್ರಶ್ನೆಯನೊಡ್ಡುವೆ
ಮಣ್ಣಿನಲ್ಲಿ ಜೀವಂತ ಸಮಾಧಿಯಾದದ್ದು
ನಿನಗೆ ಸಾಕಾಗಲಿಲ್ಲವೆಂದರೆ…
ಇದು ಸೀತೆ ರಾಮನಿಗೆ ಹಾಕಬೇಕಾಗಿದ್ದ ಪ್ರಶ್ನೆ. ಇಂದೂ ಇದು ಪ್ರಸ್ತುತ. ಆದರೆ ನಮ್ಮ ಪುರುಷೋತ್ತಮರಿಗೆ ಅದು ಈ ತನಕವೂ ಕೇಳಿಸಿಲ್ಲ ಎನ್ನುವ ಕಾರಣದಿಂದಲೇ ಆಕೆ ‘ಹೆಣ್ತನದ ಹಂಗಿಗೆ ಕಟ್ಟು ಬಿದ್ದು ಇನ್ನೂ/ ಏನೇನು ಮಾಡಬೇಕು ಹೇಳು ಗೆಳೆಯ?/ ಎಂದು ‘ಕಾಂತಾಸಮ್ಮಿತ’ವಾಗಿಯೇ ಪ್ರಶ್ನಿಸುತ್ತಾರೆ !
‘ಹೆಣ್ತನಕೆ ಉಸಿರಿಲ್ಲ’ ಎನ್ನುವ ಕವನವು ಮೇಲೆ ಹೇಳಿದ ಕವನದ ಮುಂದಿನ ಭಾಗದ ಹಾಗಿದೆ. ಆ ಕವನವು ಹೆಣ್ಮಗಳೊಬ್ಬಳು ಹುಟ್ಟಿದಂದಿನಿಂದ ಸಾಯುವ ತನಕ ಕೇಳಬಾರದ್ದನ್ನು ಕೇಳುವ, ಮಾನವೀಯತೆಯನ್ನು ಮೀರಿದ ಮಾತುಗಳನ್ನು ಕೇಳಬೇಕಾದ, ದೇವರು ಧರ್ಮ ಸಾಮಾಜಿಕ ರೀತಿ ನೀತಿಗಳ ಹೆಸರಿನಲ್ಲಿ ಶೋಷಣೆಗೆ ಒಳಗಾಗಬೇಕಾದ, ಅಡಿಗೆ ಮನೆಯನ್ನೇ ತನ್ನ ‘ಅರಮನೆ’ ಮಾಡಿಕೊಳ್ಳಬೇಕಾದ ಪರಿಸ್ಥಿತಿಯನ್ನು ತಣ್ಣಗೆ ತೆರೆದಿಡುತ್ತದೆ. ಆದರೆ ಈ ತಣ್ಣಗಿನ ಮಾತುಗಳಲ್ಲಿ ನೀರಿನೊಳಗಿನ ಬೆಂಕಿ ಇದೆ ಎನ್ನುವುದು ಅಗೋಚರವಾಗಿ (ಕಾಣದೇ) ಕಾಣುತ್ತದೆ ! ಇದೊಂದು ಸ್ತ್ರೀವಾದಿ ಗೀತೆ ಅಥವಾ ಸ್ತ್ರೀವಾದಿ ಚಿಂತನೆಗೆ ಹೊಸ ಸ್ವರೂಪಕೊಟ್ಟ ಅಂತರಂಗದ ಅನಂತವಾಣಿ. ‘ಹರಿದ ಸೀರೆ’ ಎನ್ನುವುದೂ ಇಂಥಾದ್ದೇ ಇನ್ನೊಂದು ಕವನ. ನಮ್ಮ ಹೆಣ್ಮಕ್ಕಳು ಹೊಟ್ಟೆ ಬಟ್ಟೆಗಾಗಿ ಹೇಗೆ ಹರಿದ ಸೀರೆಯಾಗಿದ್ದಾರೆ ಎನ್ನುವ ರೂಪಕ ತುಂಬ ಅರ್ಥಪೂರ್ಣವಾಗಿ ಇಲ್ಲಿ ತೆರೆದುಕೊಂಡಿದೆ. ಈ ಕವನದ ಪ್ರತಿಯೊಂದು ಸಾಲೂ ನಮ್ಮ ಮುಂದೆ ಓಡಾಡುವ ಗುಡಿಸಲಲ್ಲಿ ನೆಲಸಿರುವ ನಮ್ಮ ಸಹೋದರಿಯರ ಬದುಕು ಬವಣೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದ ಹಾಗೆ ಚಿತ್ರಿಸಿದೆ. ಇದರ ಕೊನೆಯ ಸಾಲು ‘ಚಹಾ ಕಾಯಿಸಲು ಹೊರಟ ನನ್ನ ನಿರಾಳ ಕಾಲುಗಳ ಕಂಡು ನಾನೇ ವಿಷಾದಗೊಂಡೆ’ ಎನ್ನುವ ಸಾಲು ‘ಕೋವಿಯ ತುದಿಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ’ ಎನ್ನುವುದಕ್ಕೆ ಸಮಾನವಾದುದು.
‘ನಿರ್ಭಯಾ ಮೊದಲಲ್ಲ ಮನಿಷಾ ಕೊನೆಯಲ್ಲ’ ಎನ್ನುವ ಕವನವು ಒಂದು ಮನಕಲಕುವ ಕವನ. ಇದನ್ನು ಹೆಣ್ಮಗಳೊಬ್ಬಳು ಮಾತ್ರ ಬರೆಯಲು ಸಾಧ್ಯ ಎನ್ನುವಷ್ಟು ಇದು ಸ್ತ್ರೀ ಸಂವೇದನೆಯನ್ನು ಒಳಗೊಂಡಿದೆ. ಹೆಣ್ಣು ಏನು ಎನ್ನುವುದನ್ನು ನಾವು ಅಂದರೆ ಪುರುಷರು ತರ್ಕಿಸಬಲ್ಲವಷ್ಟೇ ಹೊರತು ಹೇಳುವುದು ಕಷ್ಟ! ಹೆಣ್ಣಿನ ‘ಸಮಸ್ತ’ವನ್ನೂ ಹೇಗೆ ಪುರುಷ ಪ್ರಧಾನ ವ್ಯವಸ್ಥೆ ಪ್ರತಿನಿತ್ಯವೂ ಅತ್ಯಾಚಾರಕ್ಕೆ ಒಳಪಡಿಸುತ್ತಿದೆ ಎನ್ನುವುದನ್ನು ಇದು ಸಶಕ್ತವಾಗಿ ಅಭಿವ್ಯಕ್ತಿಸಿದೆ. ಈ ಕವನದ ಯಾವ ಸ್ಟಾಂಜಾವನ್ನು ಉದಾಹರಣೆಗೆ ತೆಗೆದುಕೊಳ್ಳಲಾಗದಷ್ಟು ಅಂದರೆ ಎಲ್ಲಾ ಸ್ಟಾಂಜಾಗಳೂ ಉದಾಹರಣೆಗಳಾಗಿಯೇ ಇವೆ ಎಂಬಂತೆ ಈ ಕವನ ತನಗೆ ತಾನೇ ಸಾರ್ಥಕ್ಯ ಪಡೆದಿದೆ. ಆದರೂ ಕೊನೆಯಲ್ಲಿ ಈ ಅತ್ಯಾಚಾರವನ್ನು ಕೊನೆಯಿಲ್ಲದಂತೆ ಪ್ರಶ್ನಿಸುವ ಕೊನೆಯ ಸ್ಟಾಂಜಾ-
ಎಷ್ಟು ನಿರ್ಭಯಾರೋ ಎಷ್ಟು ಮನೀಷಾರೋ ಅಂದಿನಿಂದ ಇಂದಿನವರೆಗೆ ಲೆಕ್ಕವಿದೆಯೇ?
ಮೋಜು ಮಸ್ತಿ ವಿಕೃತ ಕಾಮ ಪಿಪಾಸೆಗೆ
ಧಿಕ್ಕಾರ ನಿನ್ನ ರತಿಗೆ
ಆತ್ಮರತಿಗೆ.
ಎನ್ನುವುದು ನನ್ನ ಎದೆಯನ್ನು ಕಲಕಿತು
‘ಕಾಚಪ್ರಮಾಣ’ ಎಂಬ ಒಂದು ಕವನ ನನಗೆ ಯಾಕೆ ಇಷ್ಟವಾಯಿತು ಅಂದರೆ ಈ ಕವನದ ಒಳಗೆ ಅಕ್ಕ ಮಹಾದೇವಿಯ ಚಿಂತನೆಗಳ ಬೀಜಗಳು ಪರೋಕ್ಷವಾಗಿ ಮೈದಾಳಿವೆ ಎಂಬ ಕಾರಣದಿಂದ. ಪ್ರಾಯಃ ಇದೊಂದು ಸ್ತ್ರೀವಾದಿ ಚಿಂತನೆಯ ಅತ್ಯುತ್ತಮ ಕವನ. ನಮ್ಮ ಸರೀಕರಿಂದ ಇಂಥ ಕವನ ಬಂದಿಲ್ಲ ಅಂದರೆ ಅದು ನನ್ನ ‘ಮಿತಿ’ ಇರಬಹುದು. ಇದಕ್ಕಾಗಿ ನಾನು ನರಗುಂದ ಅವರನ್ನು ಅಭಿನಂದಿಸಲೇ ಬೇಕು.
ಹೀಗೆ ಈ ಸಂಕಲನ ಹೇಗೆ ನನ್ನನ್ನು ಕಾಡಿತು ಎನ್ನುವುದನ್ನು ನನ್ನ ಮಿತಿಯಲ್ಲಿ ಬಿಚ್ಚಿಡಲು ಪ್ರಯತ್ನಿಸಿದ್ದೇನೆ. ಹಾಗೆಂದು ಈ ಸಂಕಲನದ ಎಲ್ಲಾ ಕವನಗಳು ಚೆನ್ನಾಗಿವೆ ಎಂದು ಅರ್ಥವಲ್ಲ. ಒಳ್ಳೆ ಪ್ರಾರಂಭದಿಂದ ಪ್ರಾರಂಭಗೊಂಡ ಇಲ್ಲಿನ ಕೆಲವು ಕವನಗಳು ಮಧ್ಯದಲ್ಲೋ ಅಥವಾ ಕೊನೆಯಲ್ಲೋ ಸೋತದ್ದನ್ನು ನಾನು ನೋಡಿದ್ದೇನೆ. ಹಾಗೇ ಕೆಲವು ಸಲ ನರಗುಂದ ಅವರು ತಮ್ಮ ವೈಚಾರಿಕ ನಿಲುವನ್ನು ಕಾವ್ಯವಾಗಿಸಲು ಪ್ರಯತ್ನಿಸಿ, ಅದು ಕಾವ್ಯವಾಗದೇ ಉಳಿದು ಹೋಗುವುದನ್ನೂ ನಾನು ಗಮನಿಸಿದ್ದೇನೆ. ಅದನ್ನು ನಾನು ಉದ್ದೇಶ ಪೂರ್ವಕವೇ ಇಲ್ಲಿ ಉದಾಹರಿಸಿಲ್ಲ.
ಏನಿದ್ದರೂ ಶ್ವೇತಾ ನರಗುಂದ ನಮ್ಮ ನಡುವಿನ ಒಳ್ಳೆ ಕವಯಿತ್ರಿ ಎನ್ನುವುದನ್ನು ಈ ಸಂಕಲನದ ಮೂಲಕ ರುಜುವಾತು ಪಡಿಸಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಈ ಕಾವ್ಯಕರ್ಮವನ್ನು ಅವರು ಮುಂದುವರಿಸಿ, ಕನ್ನಡ ಕಾವ್ಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲಿ ಎಂದು ಹಾರೈಸುತ್ತೇನೆ.
* ನಾ.ಮೊಗಸಾಲೆ , ಕಾಂತಾವರ
3 thoughts on “ಶ್ವೇತಾ ನರಗುಂದ ಅವರ ‘ಮನದ ಮದ್ದಳೆಯ ಸ್ವಗತಕ್ಕೆ’ : ಓದುವ ಮೊದಲು”
ಸೊಗಸಾದ ವಿಮರ್ಶೆ. ಶ್ವೇತಾ ಮೇಡಂ ಒಳ್ಳೆಯ ಲೇಖಕಿ.
ಡಾ. ನಾ. ಮೊಗಸಾಲೆ ಕನ್ನಡದ ಪ್ರಖ್ಯಾತ ಲೇಖಕರು. ಅವರು ಮುನ್ನುಡಿ ಬರೆದಿದ್ದಾರೆಂದರೆ ಖಂಡಿತ ಓದುವಂತಹ ಕವನ ಸಂಕಲನ ಆಗಿರುತ್ತದೆ. ಸಂಶಯವಿಲ್ಲ. ಕವಿಯತ್ರಿ ಶ್ರೀಮತಿ ಶ್ವೇತ ನರಗುಂದ ಅವರ ತಾಳ್ಮೆಗೆ ಅಭಿನಂದನೆಗಳು.
ಡಾ. ನಾ. ಮೊಗಸಾಲೆಯವರ ಸಹೃದಯತೆಗೆ ನಾನು ಮೂಕವಿಸ್ಮಿತಳಾಗಿದ್ದೇನೆ. ಅವರಿಗೆ ಧನ್ಯವಾದಗಳು.