ಜಯಂತ ಕಾಯ್ಕಿಣಿ ಅವರ ‘ಅಮೃತಬಳ್ಳಿ ಕಷಾಯ’- ಅವಲೋಕನ

ಜಯಂತ ಕಾಯ್ಕಿಣಿಯವರ ಕತೆಗಳನ್ನು ಓದುವುದು ಎಂದರೆ ಒಂದು ಹಬ್ಬ ಆಚರಿಸಿದಂತೆ. ಕತೆಗಳಲ್ಲಿನ ಪಾತ್ರ ರಚನೆ, ಸ್ವಭಾವ ಚಿತ್ರಣ ಮತ್ತು ವಿಶಿಷ್ಠವಾದ ಶಬ್ದಚಿತ್ರಗಳು ನೀಡುವ ಅನುಭವ ಅಪೂರ್ವವಾದುದು. ೨೫ ವರ್ಷಗಳ ಹಿಂದೆ ಬರೆದ ಅವರ ಕಥಾ ಸಂಕಲನ “ಅಮೃತ ಬಳ್ಳಿಯ ಕಷಾಯ” ದಲ್ಲಿ ಸಮಕಾಲೀನ ವಸ್ತುವಿದೆ,ವೈವಿಧ್ಯತೆಯಿದೆ. ಅವರು ಕಥೆ ಹೇಳುವ ಪರಿ, ಬಳಸುವ ಉಪಮೆ, ವಿಗ್ರಹ ವಾಕ್ಯಗಳು, ಒಟ್ಟಾಗಿ ನೀಡುವ ಖಾರವಾದ ವಿಡಂಬನೆ ಎಲ್ಲವೂ ಪರಿಪಕ್ವವಾದುದು.ಕಾಯ್ಕಿಣಿಯವರ ಕತೆಯ ಭಾಷೆಯಲ್ಲಿ ದುಂದು ವೆಚ್ಚವಿಲ್ಲ. ಅವರು ಬದುಕನ್ನು ಶೋಧಿಸುತ್ತಾರೆ. ಸಂಬಂಧಗಳನ್ನು ವಿಶ್ಲೇಷಿಸುತ್ತಾರೆ. ಅವರ ಹೆಚ್ಚಿನ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುವಂತಾದ್ದು.

ಸದ್ಯದ ಸಂಕಲನದಲ್ಲಿ ಸ್ತ್ರೀ ಕೇಂದ್ರಿತ ವಸ್ತುವಿನ ಮೂರು ಕತೆಗಳಿವೆ. ಮಕ್ಕಳನ್ನು ಕುರಿತು ಮೂರು ಕತೆಗಳಿವೆ. ಯುವಕರನ್ನು ಕುರಿತು ಮೂರು ಕತೆಗಳಿವೆ. ಮನುಷ್ಯನ ಸಂಬಂಧದ ನಿಗೂಢತೆಯ ಬಗೆಗೆ ಎರಡು ಕತೆಗಳಿವೆ. ಬದುಕಿನ ಶೋಧದ ಬಗೆಗೆ ಮೂರು ಕತೆಗಳಿವೆ.


‘ಸುಮಿತ್ರೆಗೊಂದು ಸುದ್ದಿ’, ‘ಡೈಮಂಡ್ ಸರ್ಕಸಿನಲ್ಲಿ ಒಂದು ಹೆರಿಗೆ’ ಮತ್ತು ‘ಮೋಗ್ರಿಯ ಸತ್ಸಂಗ’ ಈ ಕತೆಗಳಲ್ಲಿ ಕಥಾ ನಾಯಕಿಯರು ಸ್ವತಂತ್ರವಾಗಿ, ಸ್ವಾವಲಂಬಿಗಳಾಗಿ, ಆತ್ಮವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡವರು. ಪುರುಷ ಸುಖವನ್ನು ಪಡೆದರೂ, ಅದಕ್ಕಾಗಿ ಹಂಬಲಿಸದೆ, ತಮ್ಮತನವನ್ನು ಪ್ರದರ್ಶಿಸಿದವರು. ಸುಮಿತ್ರೆ ತನ್ನ ಸಂಬಂಧಿಕರಿಗೆ ನೆರವಾದವಳೇ ಹೊರತು ಅವಳ ನೆರವಿಗೆ ಯಾರೂ ಬಂದವರಿಲ್ಲ. ಗಂಡ ಸತ್ತ (ಎಂದೂ ಬಿಟ್ಟು ಹೋದ) ಸುದ್ದಿ ಅವಳನ್ನು ವಿಚಲಿತಳಾಗಿಸುವುದಿಲ್ಲ. ಬದುಕಿನ ಗತಿಗೆ, ನಡಿಗೆಗೆ ಸುಮಿತ್ರೆ ರಾಜಿ ಮಾಡಿಕೊಂಡಿದ್ದಾಳೆ. ಡೈಮಂಡ್ ಸರ್ಕಸಿನ ಹಂಪಿ, ತನ್ನ ದೊಡ್ಡಮ್ಮ ಅವಳನ್ನು ಸರ್ಕಸ್ಕಂ ಪೆನಿಯಲ್ಲಿ ಬಿಟ್ಟು ಹೋದ ನಂತರ, ಮಾನಸಿಕ ಆಸರೆ, ಸ್ನೇಹ ನೀಡಿದ ಶಫಿಯನ್ನು ಕೂಡಿ ಬಸಿರಾದರೂ, ಗರ್ಭಪಾತಕ್ಕೆ ಒಲ್ಲದೆ, ಶಫಿಯನ್ನು ತ್ಯಾಗ ಮಾಡಿ ಮಗುವನ್ನು ಉಳಿಸಲು ಯತ್ನಿಸುತ್ತಾಳೆ. ಈ ನಿಟ್ಟಿನಲ್ಲಿ ಸರ್ಕಸ್ ಕಂಪೆನಿಯ ಯಜಮಾನನನ್ನು ಎದುರು ಹಾಕಿಕೊಳ್ಳುತ್ತಾಳೆ.


“ಮೋಗ್ರಿಯ ಸತ್ಸಂಗ” ಕತೆಯ ಮೋಗ್ರಿ ಸಮಾಜದಲ್ಲಿನ ಕಾಮುಕರನ್ನು ಚೆನ್ನಾಗಿ ಗುರುತಿಸುತ್ತಾಳೆ. ಕೈ ತುಂಬಾ ಸಂಪಾದನೆಯ ಬಾರ್ ಪರಿಚಾರಿಕೆಯ  ಉದ್ಯೋಗವನ್ನು ತನ್ನ ಧೋರಣೆಗಾಗಿ ತ್ಯಾಗ ಮಾಡುತ್ತಾಳೆ. ಮೂರು ಮದುವೆಯಾದ ತನ್ನ ತಂದೆಯ ಬಗೆಗೆ ಅವಳಲ್ಲಿ ಸಿಟ್ಟಿಲ್ಲ. ತಾನು ಬಾರ್ ನಲ್ಲಿ ದುಡಿಯುತ್ತಿದ್ದಾಗ, ತನ್ನ ಗೆಳತಿ ಯಮುನ ಜನರಿಗೆ ಹೆದರಿ ತನ್ನ ಮದುವೆಗೆ ಮೋಗ್ರಿಯನ್ನು ಆಮಂತ್ರಿಸುವುದಿಲ್ಲ. ಹಾಗಿದ್ದೂ ಮೋಗ್ರಿ ಯಮುನಾಳ ಪ್ರಸವದ ಕಾಲದಲ್ಲಿ ನೆರವಿಗೆ ಓಡುತ್ತಾಳೆ. ಮೋಗ್ರಿಯ ಬದುಕಲ್ಲಿ ಸಾಂತ್ವನ ಸಿಕ್ಕಿದ್ದು ತಾನು ಬಾರ್ ನ ಕೆಲಸ ಬಿಟ್ಟು ಇರಾನಿ ಚಾ ಹೋಟೆಲಿನ ಮೇಲ್ವಿಚಾರಕಿಯಾಗಿ ಕೆಲಸ ಹಿಡಿದಾಗ. ಚಾ ಹೋಟೆಲಿನ  ವೈಟರ್ಸ್ – ವಯೋ ವೃದ್ದರು ಅವಳ ಸತ್ಸಂಗದ ನಾಯಕರು. ಕತೆಗಾರರು ಇಲ್ಲಿ ಬಳಸುವ “ಹಿಂಗಾಲು ಪ್ರಾಣಿ” , “ಗುತ್ತು ನಿಧಿ” ಪದಗಳು ವಿಡಂಬನೆಯನ್ನು ಸೂಚಿಸುತ್ತದೆ.

ಮಕ್ಕಳನ್ನು ಕೇಂದ್ರಿತ ಕತಾ ವಸ್ತುವಿನ ‘ಹಾಲಿನ ಮೀಸೆ’, ತನ್ಮಯಿಯ ಸೂಟಿ’, ‘ಪ್ರಕಾಶ ವರ್ಷ’ ಕತೆಗಳಲ್ಲಿ ಮಕ್ಕಳ ಅಸಹಾಯಕತೆ ಮತ್ತು ನಾಗರೀಕತೆಯ ಓಟದಲ್ಲಿ ತಂದೆ ತಾಯಿಯವರ ಭಾವನಾಶೂನ್ಯತೆ, ಕ್ರೌರ್ಯವನ್ನು ಚಿತ್ರಿಸಲಾಗಿದೆ. ‘ಹಾಲಿನ ಮೀಸೆ’ ಕತೆಯ ಪುಂಡಲೀಕ ಭಟ್ಕಳದಿಂದ ಮುಂಬಯಿಯ ಡೊಂಬಿವಲಿಯ ಮನೆಯೊಂದರಲ್ಲಿ ಮನೆ ಕೆಲಸಕ್ಕಾಗಿ ಸೇರಿದ ಹುಡುಗ. ಮನೆ ಕೆಲಸದೊಂದಿಗೆ ಮನೆಯ ಪುಟ್ಟ ಹುಡುಗಿ  ಪಿಂಕಿಯ ಊಟ, ಆಟ ಮತ್ತು ಶಾಲೆಯ ಹೊಣೆಗಾರಿಕೆ ಆತನ ಮೇಲಿದೆ. ಊರಿಂದ ಆಗಾಗ ಬರುವ ಪೋಸ್ಟ್ ಕಾರ್ಡ್ ಗಳಲ್ಲಿ ಅವನ ಬಗ್ಗೆ ಕಾಳಜಿಯಿಲ್ಲ. ಬದಲಿಗೆ ಮನೆಯ ಸಮಸ್ಯೆಗಳ ಸರಮಾಲೆ. ಪುಂಡಲೀಕನ ತಂಗಿಯೂ ಮುಂಬಯಿಗೆ ಚಾಕರಿಗೆ ಬರುವುದು ಮತ್ತು ಅವಳಿಗೆ ಬುದ್ಧಿ ಹೇಳಲು ಪುಂಡಲೀಕನನ್ನು ಅಲ್ಲಿಗೆ ಕರೆದೊಯ್ಯುವುದು ಕಥೆಯ ಗಾಢವಾದ ವಿಡಂಬನೆ.

‘ತನ್ಮಯಿಯ ಸೂಟಿ’ ಕತೆಯಲ್ಲಿ ಓದು, ಉನ್ನತ ವ್ಯಾಸಂಗ, ನೌಕರಿ, ಪೈಪೋಟಿಯ ನೆವದಲ್ಲಿ ಮಕ್ಕಳ ಮೇಲೆ ಆಗುವ ಕ್ರೌರ್ಯದ ಚಿತ್ರಣವಿದೆ. ಮಕ್ಕಳನ್ನು ಹಣ ಸಂಪಾದಿಸುವ ಯಂತ್ರವನ್ನಾಗಿಸುವ ದುರಂತವಿದೆ.  ‘ಪ್ರಕಾಶ ವರ್ಷ’ ಕತೆ ತೆರೆದುಕೊಳ್ಳುವ ಮುಂಬಯಿಯ ಚಾಳ್ ನ ಜನರ ದೈನಂದಿನ ಬದುಕು, ಅವರ ಹಬ್ಬಗಳು,  ಅವರ ಒತ್ತಡ ಎಲ್ಲವನ್ನೂ ಜಯಂತರು ಸಮಗ್ರವಾಗಿ ತಮ್ಮ ಕತೆಗಳಲ್ಲಿ ಸೆರೆ ಹಿಡಿಯುತ್ತಾರೆ. ಕತೆಯ ನಾಯಕ ಹುಡುಗ ಪ್ರಕಾಶ ಹತ್ತರ ನಂತರ ಕಲಿಯಲು ಇಚ್ಛಿಸದೆ ಪುಟ್ಟ ದಂಧೆ ನಡೆಸುವ ತಯಾರಿಯಲ್ಲಿರುತ್ತಾನೆ. ಆತನಿಗೆ ಸದಾ ಬೆನ್ನೆಲುಬು ಆತನ ಅಜ್ಜ. ಮಳೆ ಬಂದು ಪ್ರಕಾಶ ತಯಾರಿಸಿದ್ದ ಮಾರಾಟದ ಕಂದೀಲುಗಳು ಹಾಳಾಗುತ್ತದೆ. ಸಿಟ್ಟಿನಲ್ಲಿ ಪ್ರಕಾಶ ತನ್ನ ತಾಯಿಯ ಕಪಾಟು ಒಡೆಯುತ್ತಾನೆ . ನೆರೆಮನೆಯವರ ದೂರಿನಿಂದಾಗಿ ಪೊಲೀಸ್ ನ ಬಂಧನಕ್ಕೊಳಗಾಗಿ, ತಂದೆಯ ನೆರವಿನಿಂದ ಹೊರ ಬರುತ್ತಾನೆ. ಕತೆಯ ಕೊನೆಯಲ್ಲಿ ಪ್ರಕಾಶ ಮನೆ ಬಿಟ್ಟು ಓಡುವುದು. ಅಜ್ಜ ಆತನನ್ನು ಹುಡುಕುತ್ತ ಹೊರಡುವುದು. ಇಲ್ಲಿನ ಕಥಾ ವಸ್ತು. ಪಾತ್ರಗಳ ಚಿತ್ರಣ, ಕೆಳ ವರ್ಗದ ಜನರ ಬದುಕಿನ ಆತಂಕ, ಜಂಜಡ ಇಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

ಯುವಕರ ಬದುಕಿನ ಸುತ್ತಮುತ್ತ ಚಿತ್ರಿಸಿದ ಕತೆಯಾದ ‘ಪಮ್ಮೇಚನ ಶಿವರಾತ್ರಿ’, ‘ಚಂದ್ರಕಾಂತನ ದೀಪೋತ್ಸವ’ ಮತ್ತು ‘ಮಿಥುನ್ ನಂಬರ್ ಟು’ – ಇವುಗಳಲ್ಲಿ ಯುವಕರು ಬದುಕಿನ ಅರ್ಥವನ್ನು, ಗುರಿಯನ್ನು ಹುಡುಕುತ್ತಾರೆ. ಪಮ್ಮೇಚ ತಂದೆಯ ವೃತ್ತಿಯಾದ ಪೌರೋಹಿತ್ಯವನ್ನು ಮಾಡುತ್ತಾ ಸಂಗೀತದ ಬಗೆಗೆ ವಿಶೇಷ ಆಸ್ಥೆ ವಹಿಸುತ್ತಾನೆ. ಬದುಕಿನ ಏಕತಾನತೆಯನ್ನು ದೂರವಾಗಿಸಿ ಹೊಸ ಚೈತನ್ಯವನ್ನು ನೀಡುವ ಪ್ರತೀ ವರ್ಷದ ಶಿವರಾತ್ರಿ ಹಬ್ಬ ಮತ್ತು ಆ ಪ್ರಯುಕ್ತ ಊರಲ್ಲಿ ನಡೆಸುವ ನಾಟಕ, ಮಳಿಗೆ ಪಮ್ಮೇಚಗೆ ಪ್ರಾಣ. ಶಿವರಾತ್ರಿಯ ನಾಟಕ ಕಂಪೆನಿಯ ಪೇಟಿ ಮಾಸ್ತರ್ ವೃದ್ಧ ಶರಣಯ್ಯ ಆತನಿಗೆ ಆಪ್ತ ಸ್ನೇಹಿತರಾಗುತ್ತಾರೆ. ಆತನಿಗೆ ಹೊಸ  ದೃಷ್ಟಿಯನ್ನು ನೀಡುತ್ತಾರೆ.

‘ಚಂದ್ರಕಾಂತನ ದೀಪೋತ್ಸವ’ ದ ನಾಯಕ ಚಂದ್ರಕಾಂತ, ಗೋಕರ್ಣದ ಬೀರಣ್ಣಜ್ಜನನ್ನು ಮುಂಬಯಿ ಆಸ್ಪತ್ರೆಗೆ ತಪಾಸಣೆಗಾಗಿ ರೈಲಿನಲ್ಲಿ ಪ್ರಯಾಣಿಸುತ್ತಾನೆ. ರೈಲಿನ  ಪ್ರಯಾಣಿಕ ದೀಪೋತ್ಸವ ಮುಖರ್ಜಿಯೊಂದಿಗೆ ಸ್ನೇಹ ಸಲುಗೆ ಬೆಳೆದು ಪರಸ್ಪರ ತಮ್ಮ ಬದುಕನ್ನು ಸಿಂಹಾವಲೋಕನ ಮಾಡುತ್ತಾರೆ. ಕೊನೆಯಲ್ಲಿ ಕತೆಗಾರರು ಎಲ್ಲ ಸುಖ ಸಂತೋಷಗಳು ನಮ್ಮೊಳಗೆ ಇವೆ ಹೊರತು ಹೊರಗೆ ಅದನ್ನು ಹುಡುಕುವುದು ವ್ಯರ್ಥ ಎನ್ನುವ ಸಂದೇಶ ನೀಡುತ್ತಾರೆ. ರೈಲಿನ ಪ್ರಯಾಣಿಕರ ಊಟ, ನಿದ್ದೆ, ಮಾತು ಮತ್ತು ಇತರರ ಬಗೆಗಿನ ಬಾವನೆಗಳು ಇಲ್ಲಿ ಸುಂದರವಾಗಿ, ಆಪ್ತವಾಗಿ ಅನಾವರಣಗೊಳ್ಳುತ್ತದೆ. ‘ ಮಿಥುನ್ ನಂಬರ್ ಟು’ ಕತೆ ದಟ್ಟವಾದ ವ್ಯಂಗ್ಯ ಮತ್ತು ವಿಡಂಬನೆಯ ಕಥಾವಸ್ತುವನ್ನೊಳಗೊಂಡಿದೆ . ಕರಾಡದ ಯುವಕ ಚಂದು ಸಿನೆಮಾ ಸೇರುವ ಹುಚ್ಚಿನಿಂದ ಮುಂಬಯಿಗೆ ಬಂದು ಸ್ಟೊವ್ ರಿಪೇರಿ ಕೆಲಸ ಮಾಡಿ ಹಾಗೂ ಹೀಗೂ ಸಿನೆಮಾ ಸೇರಿ ಡೂಪ್ಲಿಕೇಟ್ ಕಲಾವಿದ ಮಿಥುನ್ ನಂಬರ್ ೨ ಆಗುವ ದುರಂತ ಈ ಕತೆಯಲ್ಲಿದೆ. ಎದ್ದು ಬಿದ್ದು, ಗುದ್ದಾಡಿ ಸಾವು ಬದುಕಿನ ನಡುವೆ ಡೂಪ್ಲಿಕೇಟ್ ಆಗಿ ದುಡಿಯುವ ಮಿಥುನ್ ನಂಬರ್ ೨ – ಚಂದುವಿನ ದೃಷ್ಟಿಯಲ್ಲಿ ನಿಜವಾದ ಮಿಥುನ್ ಚಕ್ರವರ್ತಿ ಪೇಲವ, ಹೆಳವ, ಅಸಹಾಯಕ ಮತ್ತು ಪೊಳ್ಳು ಹೀರೊ ಆಗಿ ಕಂಡು ಬರುತ್ತಾನೆ.

‘ಕೊಂಡಿ’ ಮತ್ತು ‘ಅಂತಃ ಪುರದೊಳಗೆ’ ಕತೆಯಲ್ಲಿ ಮನುಷ್ಯ ಸಂಬಂಧಗಳ ನಿಗೂಢ ಚಿತ್ರಣವಿದೆ. ‘ಕೊಂಡಿ’ ಕತೆಯಲ್ಲಿ ಕತಾನಾಯಕ ನೀಲಕಂಠ ತನ್ನ ತಂದೆಯ ಬಗೆಗಿನ ವಿಚಾರಗಳನ್ನು, ತನ್ನ ಅಭಿಪ್ರಾಯಗಳನ್ನು ಕ್ರಮೇಣ ಬದಲಾಯಿಸುತ್ತಾನೆ. ಅತ್ಯಂತ ಶಿಸ್ತಿನ ನಾರಾಯಣ ಮಾಸ್ತರು ಮಗ ನೀಲಕಂಠನನ್ನು ಹೊಡೆದು ಬಡಿದು  ಬೆಳೆಸಿದವರು. ನಿವೃತ್ತ ನಂತರ ಮಗನ ಬಗೆಗೆ ಮೃದುತ್ವ ತೋರಿಸುತ್ತಾರೆ. ನೀಲಕಂಠ ಮುಂಬಯಿಯಲ್ಲಿ ಸ್ವತಂತ್ರವಾಗಿ ನೌಕರಿ ಹಿಡಿದು ಬದುಕುತ್ತಾನೆ. ತಂದೆ ಊರಿನ ಮಾದೇವಜ್ಜನ ಚಿಕಿತ್ಸೆಗೆ ಮುಂಬಯಿಗೆ ಬಂದಾಗ ಅಪ್ಪನ ಪ್ರೀತಿಯನ್ನು ಅರಿಯುತ್ತಾನೆ. ‘ಅಂತಃ ಪುರದೊಳಗೆ’ ಕತೆಯಲ್ಲಿ ಗಂಡ- ಹೆಂಡತಿ ಸಂಬಂಧದ ಸಂಕೀರ್ಣತೆಯನ್ನು ಕತೆಗಾರರು ಅನಾವರಣಗೊಳಿಸುತ್ತಾ ಬದುಕಿನ ವಿಡಂಬನೆಯನ್ನು ಚಿತ್ರಿಸುತ್ತಾರೆ. ಕತೆಯಲ್ಲಿ ಗಂಡ ಅಂತರಿಕ್ಷ ಕೊಠಾರಿ ಬಿಸ್ ನೆಸ್ ಹಚ್ಚಿಕೊಂಡವ. ಆದರೆ ಎಲ್ಲೂ ಯಶಸ್ಸಿಲ್ಲ. ಪತ್ನಿ ಮೀರಾ ಹೊರಗೆ ದುಡಿಯುತ್ತ, ಗಂಡನನ್ನು ಅಪರಿಚಿತನಂತೆಯೇ ಕಾಣುವವಳು. ಲಹರಿ ಬಂದಾಗ ಇಬ್ಬರೂ ಕೂಡುವರು. ಈ ಇಬ್ಬರ ನಡುವೆ ಬರುವ ಅಂತರಿಕ್ಷನ ಸ್ನೇಹಿತೆ ಪಾರುಲ್ ಮೀರಾಳೊಂದಿಗೆ ಆತ್ಮೀಯತೆ, ಸ್ನೇಹ ಬೆಳೆಸುತ್ತಾಳೆ. ದುರಂತವೆಂದರೆ ಪತ್ನಿ ಮೀರಾ ಮತ್ತು ಸ್ನೇಹಿತೆ ಪಾರುಲ್ ಅಂತರಿಕ್ಷನನ್ನು ಮರೆತು ಬಿಡುತ್ತಾರೆ. ಬಿಸ್ ನೆಸ್ ಗೆ ಸಂಬಂಧದಲ್ಲಿ ಮೂರು ದಿನ.ಮನೆಗೆ ಬಾರದ ಅಂತರಿಕ್ಷ ರಾತ್ರಿ ಮನೆಗೆ ಬಂದಾಗ ಕತ್ತಲಲ್ಲಿ ಅವನನ್ನು ಕಳ್ಳನೆಂದು ತಿಳಿದು  ಬೊಬ್ಬಿಡುತ್ತಾರೆ. ಅಂತರಿಕ್ಷ ತನ್ನ ಮನೆಯಿಂದಲೇ ರಾತ್ರಿ ಹೆದರಿ ಮೂರು ಮಹಡಿ ಇಳಿದು ರಸ್ತೆ ಸೇರಿ ಓಡುತ್ತಾನೆ. ಕತೆಯಲ್ಲಿ ಇನ್ನೊಂದು ಪ್ರಮುಖ ಪಾತ್ರ ಗಂಡ ಹೆಂಡತಿಯರ ಡಬಲ್ ಬೆಡ್. ಪತ್ನಿ ಮೀರಾ ಈ ಬೆಡ್ ನಲ್ಲಿ ನಿರಾತಂಕವಾಗಿ ಬದುಕುವವಳು. ಮೀರಾ ಹೆಡ್ ಮಾಸ್ತರಣಿಯಂತೆ ಮನೆ ನಡೆಸುವವಳು. ಅಂತರಿಕ್ಷನನ್ನು ಹಣದ ಕನಸು ಸತಾಯಿಸುತ್ತದೆ. ಹಣವನ್ನು ಹೇಗೆ  ಎಲ್ಲಿ ಇಟ್ಟರೆ ಅದು ಕುಡಿಯೊಡೆಯುತ್ತದೆ. ಎಷ್ಟು ಪಟ್ಟು ಆಗುತ್ತದೆ ಎಂದು ಅವನು ಮುಳುಗಿ ಬಿಡುತ್ತಾನೆ. ಒಟ್ಟಿನಲ್ಲಿ ವಿಚಿತ್ರ ಅನುಭವ ನೀಡುವ ವಿಡಂಬನಾತ್ಮಕ ಕತೆ.

‘ಚಂದಿರನೇತಕೆ ಓಡುವನಮ್ಮ’ ಮತ್ತು ‘ಸಂತೆಯ ದಿನ’ ಕತೆಗಳು ಸಂಕಲನದ ವಿಭಿನ್ನ ನಿಲುವಿನ ಕತೆಗಳು. ಕತೆಗಾರರು ಇಲ್ಲಿ ಬದುಕಿನ ಅರ್ಥವನ್ನು, ಗುರಿಯನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. ‘ಚಂದಿರನೇತಕೆ ಓಡುವನಮ್ಮ’ ಕತೆಯ ನಾಯಕ ಪಾರ್ಥಿವ ಶರ್ಮ ಮುಂಬಯಿಯ ನೌಕರಿಯಲ್ಲಿ ನೈಟ್ ಶಿಫ್ಟ್ ಮುಗಿಸಿ ರಸ್ತೆ ದಾಟುವಾಗ ಅಪಘಾತಕ್ಕೊಳಗಾಗುತ್ತಾನೆ. ದೇಹಕ್ಕೆ ಏನೂ ತೊಂದರೆಯಾಗದಿದ್ದರೂ ಬಿದ್ದಲ್ಲೇ ತನ್ನ ಬದುಕನ್ನು ಅವಲೋಕಿಸುತ್ತಾನೆ. ಬದುಕಿನಲ್ಲಿ ಹೆಚ್ಚಿನ ಹಣಕ್ಕಾಗಿ ಸಣ್ಣ ಪುಟ್ಟ ದಂಧೆ ಮಾಡುವ ಪತ್ನಿ ಪಮ್ಮಿ ಶರ್ಮ, ಬೋರ್ಡಿಂಗ್ ಶಾಲೆಯಲ್ಲಿರುವ ಮಗ, ಪ್ರಮೋದ್ ನನ್ನ ಸ್ಮರಿಸುತ್ತಾ ತಾನು ಬಿದ್ದುಕೊಂಡ ರಸ್ತೆಯ ಸಮೀಪದ ಜೋಪಡಿಗಳ ಜನರ ಜೀವನವನ್ನು ಹತ್ತಿರದಿಂದ ನೋಡುತ್ತಾನೆ. ಬಿದ್ದವನನ್ನು ಯಾವ ಸಂಬಂಧವೂ ಇಲ್ಲದ ಜೋಪಡಿಯ ವ್ಯಕ್ತಿ ಎಬ್ಬಿಸಿ ಮನೆಯಲ್ಲಿ ಮಲಗಿಸುವುದು  ನಗರದ ಅಸೀಮ ಮಾನವೀಯತೆಯ ಸಂಕೇತ. ನಿಜವಾದ ಮನುಷ್ಯನಲ್ಲಿ ವರ್ಣ ಭೇದವಿಲ್ಲ. ಬದುಕನ್ನು ಸ್ವೀಕರಿಸುವ ಹಾಗೂ ಬದುಕಿನ ಸವಾಲುಗಳಿಗೆ ಸ್ಪಂದಿಸುವ ಮತ್ತು ಮನುಷ್ಯನ ಅವಶ್ಯಕತೆಗೆ ಮನುಷ್ಯನೇ ಎನ್ನುವ ಧ್ವನಿ ಈ ಕತೆಯಲ್ಲಿದೆ. ಇದೆ ಧ್ವನಿಯ ಇನ್ನೊಂದು ಕತೆ ‘ಸಂತೆಯ ದಿನ’. ‘ಸಂತೆಯ ದಿನ’ ಕತೆಯ ನಾಯಕರು ಕ್ಸೆರಾಕ್ಸ್ ಅಂಗಡಿಯ ಕೇಕು ಮತ್ತು ರಸ್ತೆ ಬದಿ ಹಣ್ಣು ಮಾರುವ ಪ್ಯಾರೆಲಾಲ್. ಈ ಇಬ್ಬರ ನಾಯಕರ ಸ್ವಭಾವ ಚಿತ್ರಣ ಬಹಳ ಸುಂದರವಾಗಿ ಮೂಡಿ ಬಂದಿದೆ. ಮುಂಬಯಿಯಲ್ಲಿ ಅಂಗಡಿ ಮಾಲೀಕನಾಗಿದ್ದು, ಇನ್ನು ಮದುವೆಯಾಗದ ಕೇಕು ಸಂಬಂಧಿಗನೊಂದಿಗೆ ಇದ್ದು ಏಕಾಂಗಿ. ದೂರದ ಊರಿಂದ ಹೊಟ್ಟೆ ಪಾಡಿಗಾಗಿ ನಗರಕ್ಕೆ  ಬಂದ ಪ್ಯಾರೆಲಾಲ್ ಏಕಾಂಕಿ. ಇಬ್ಬರ ಸ್ನೇಹ ದಿನನಿತ್ಯದ್ದು. ಮುಂಬಯಿ ಬಂದ್ ದಿನ ನಗರ ತಿರುಗಾಟಕ್ಕೆ ಹೊರಟ ಇಬ್ಬರೂ ಗರ್ಭಿಣಿ ಹೆಂಗಸಿನ ನೆರವಿಗೆ ಧಾವಿಸುತ್ತಾರೆ. ಆಸ್ಪತ್ರೆಯಲ್ಲಿ ಗರ್ಭಿಣಿಯ ತಾಯಿಗೆ ಸಾಂತ್ವನ ನೀಡುತ್ತಾರೆ. ಗರ್ಭಿಣಿಯ ಆರೈಕೆಗೆ ತೊಡಗುತ್ತಾರೆ. ಕೇಕು ಅನಾಥ ಮಕ್ಕಳ ಆಶ್ರಮದಲ್ಲಿ ರಾತ್ರಿ ಓಡಿ ಹೋದ ಮಕ್ಕಳ ಬಗ್ಗೆ ಹಾಗೂ ಆಶ್ರಮದಲ್ಲಿರುವ ಮಕ್ಕಳ ಬಗ್ಗೆ ಚಿಂತಿಸುತ್ತಾನೆ.

ಜಯಂತರ ಕತಾ ಆಶಯ ಸಮಷ್ಠಿ ಚಿತ್ರಣ. ಮನುಷ್ಯನಲ್ಲಿ ಉಕ್ಕಿ ಹರಿಯುವ ಪ್ರೀತಿ, ಕಾಳಜಿ ಕಾಲ, ದೇಶ, ಸಂದರ್ಭಗಳನ್ನು ಮೀರಿ ಜಯಿಸಬಲ್ಲದು ಎನ್ನುವುದನ್ನು ಸೂಚಿಸುತ್ತದೆ.  ಸಂಕಲನದ ಶೀರ್ಷಿಕೆಯ ಕತೆ ‘ಅಮೃತಬಳ್ಳಿ ಕಷಾಯ’ ಒಂದು ಅದ್ಭುತ ಕತೆ. ಓದಿಯೇ ಅನುಭವಿಸಬೇಕಾದ ಕತೆ. ಮುಖ್ಯ ಪಾತ್ರಗಳು ಮುಂಬಯಿಯ ಉಪನಗರವೊಂದರಲ್ಲಿ ಫೋಟೋ ಫ್ರೇಮ್ ಅಂಗಡಿ ನಡೆಸುವ ಗಂಗಾಧರ ಮತ್ತು ಅವನ ತಾಯಿ. ಗಂಗಾಧರನ್ನು ಬಹುವಾಗಿ ಕಾಡಿದ್ದು ಐವತ್ತು ದಾಟಿದ ಮಹಿಳೆ, ಮುದಿ ಗಂಡಸು ಮತ್ತು ಮಧ್ಯ ವಯಸ್ಸಿನ ಭಾವ ಚಿತ್ರಗಳು. ಆ ಆರ್ಡರ್ ಕೊಟ್ಟವರು ಬರಲಿಲ್ಲ. ಅವರು ಬದುಕಿದ್ದಾರೋ ಸತ್ತಿದ್ದಾರೋ ಗೊತ್ತಿಲ್ಲ. ಇದರ ವಿಲೇವಾರಿಯನ್ನು ತಾಯಿಯಲ್ಲಿ ಚರ್ಚಿಸಿ, ಗೆಳೆಯ ನಾಟಕದ ಬಂಡ್ಯಾನಿಗೆ ಗಂಗಾಧರ ತಾತ್ಕಾಲಿಕವಾಗಿ ಕೊಡುತ್ತಾನೆ. ಕತೆಯ ಮತ್ತೊಂದು ಘಟನೆ ತಂದೆ ತಾಯಿ ಗೊತ್ತಿಲ್ಲದೆ ಬೆಳೆದ ರಿಕ್ಷಾ ಚಾಲಕ ಚೆಂದದ ಹುಡುಗಿಯನ್ನು ಮೋಹಿಸಿ ಮದುವೆಯಾಗ ಬಯಸುವುದು. ಅವಳಿಗಾಗಿ ಚಾಳ್ ನಲ್ಲಿ ಕೊಠಡಿ ಖರೀದಿಸಿ, ಅವಳ ತಾಯಿ ತಂದೆಗೆ ತೋರಿಸಲು ತನ್ನ ಅಪ್ಪ ಅಮ್ಮನ – ಒಂದು ವೃದ್ಧ ತಾಯಿ ತಂದೆಯ ಫೋಟೋಗಾಗಿ ಗಂಗಾಧರನಲ್ಲಿ ವಿಚಾರಿಸುತ್ತಾನೆ. ಕೊನೆಗೆ ಗಂಗಾಧರ  ತನ್ನ ದಿವಂಗತ ತಂದೆಯ ಫೋಟೋ ಆತನಿಗೆ ನೀಡುತ್ತಾನೆ. ಗಂಗಾಧರನ ತಾಯಿಯ ಚಿತ್ರಣ ಓದುಗರನ್ನು ಗಾಢವಾಗಿ ತಟ್ಟುತ್ತದೆ. ಆಕೆ ಮನೆಯಲ್ಲಿ ಕಡಿಮೆ, ಹೊರಗೆ ಪರೋಪಕಾರಕ್ಕೆ ಜಾಸ್ತಿ . ಕಾಯಿಲೆ ಇದ್ದವರಿಗೆ ಅಮೃತಬಳ್ಳಿ ಕಷಾಯ ಮಾಡಿ ವಿತರಿಸುವುದರಿಂದ ಹಿಡಿದು ನೆರೆ ಹೊರೆಯವರು ಯಾವ ಕಾಯಿಲೆ ಬಿದ್ದರೂ ಉಪಚರಿಸಲು ಓಡುವವಳು. ಮುಂಬಯಿಯಲ್ಲಿ ಕೋಮು ಗಲಭೆ ಹುಟ್ಟಿ ಎಷ್ಟೋ ಜನ ಸಾವು ನೋವಿಗೆ ತುತ್ತಾದಾಗ ಎರಡು ಕೋಮಿನ ನಾಯಕರು ಮನೆಯಲ್ಲಿ ಕೂತು ಮೃತ ಸಂಖ್ಯೆಯನ್ನು ಆಸ್ವಾದಿಸುವ ಹೊತ್ತಲ್ಲಿ , ಗಂಗಾಧರನ ತಾಯಿ ಕಷಾಯ, ಗಂಜಿ ಹೊತ್ತು ಆಸ್ಪತ್ರೆಗೆ ಓಡುವಳು. ಕತೆಯ ಕೊನೆಯಲ್ಲಿ ಪೇಶೆಂಟ್ ನಂಬರ್ ೨೧೩೨ ಆರೈಕೆಗೆ ಅವಳು ತೊಡಗುವುದು- ೨೧೩೨ ಕೋಮು, ವಿಳಾಸ, ತೂಕ, ವಯಸ್ಸು, ಹೆಸರು, ಅಡ್ಡ ಹೆಸರು ಕಳೆದುಕೊಂಡು ಕೇವಲ ಶಿಶುವಿನಂತೆ ಗಂಜಿ ತಿನ್ನುವುದು. ಇವು ಕತೆ ನೀಡುವ ಪರಿಣಾಮಕಾರಿ, ಶಕ್ತಿಯುತವಾದ ಸಂದೇಶ.

ಒಟ್ಟಿನಲ್ಲಿ ಹೇಳಬೇಕೆಂದರೆ ಜಯಂತ ಕಾಯ್ಕಿಣಿಯವರ ಕತೆಗಳಲ್ಲಿ ಬರುವ ಶಬ್ದ ಚಿತ್ರಗಳು ಅಪಾರ. ಕತೆಗಳಲ್ಲಿ ವಸ್ತು ವೈವಿಧ್ಯತೆಯಿದೆ. ವಿಡಂಬನೆಯಿದೆ. ನಿಗೂಢ ಬದುಕಿನ ಬಗೆಗೆ ಚಿಂತನೆಯಿದೆ. ಬದುಕಿನ ಸಂಕೀರ್ಣತೆಯ ಬಗೆಗೆ ಅನುಕಂಪವಿದೆ. ಕತೆಗಳ ಮೂಲಕ ಕಾಯ್ಕಿಣಿಯವರು ಬದುಕನ್ನು ಶೋಧಿಸುತ್ತಾರೆ. ಕತೆಗಳ ಯಶಸ್ಸು ಅವು ನೀಡುವ ಅರ್ಥ ಸಾಧ್ಯತೆಯಿಂದ. 

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಜಯಂತ ಕಾಯ್ಕಿಣಿ ಅವರ ‘ಅಮೃತಬಳ್ಳಿ ಕಷಾಯ’- ಅವಲೋಕನ”

  1. Vishwanath Karnad

    Kaikini awara kathegala smeekshe uttama mattaddagide.manohar tonse vimarshaka tuch iruva bhasha prayoga dinda sameeksheya ghanateyannu hecchisuttsre ,barawanigeya kaushalya awaralli tumba ide.odugarige kushi koduva lekhana.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter