ಹೊಸ ಮುಖ್ಯಮಂತ್ರಿ ಮುಂದೆ ಕೊವಿಡ್ ಮತ್ತು ಫ್ಲಡ್, ಸವಾಲು ಇತ್ಯಾದಿ

ಬಸವರಾಜ ಸೋಮಪ್ಪ ಬೊಮ್ಮಾಯಿ ಎಂಬ ಹೆಸರಿನವನಾದ ನಾನು ಎಂದು ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದಾದ ಕ್ಷಣಮಾತ್ರದಲ್ಲಿ ತತಕ್ಷಣದ ತೀವ್ರ ಸವಾಲಿನಂತೆ  ಮಾಧ್ಯಮಗಳಲ್ಲಿ ಶೃತಿಗೊಂಡುದು ಕೊವಿಡ್ ಮತ್ತು ಫ್ಲಡ್. ಇವು ಪ್ರಸಕ್ತ ದುರಿತಕಾಲದ ಸುಡುಸುಡುವ ಸಮಸ್ಯೆಗಳೇ ಹೌದು. ಆದರೆ ಅವೆರಡೇ ಮಾತ್ರ ಪರಮಾದ್ಯತೆಯ ವಿಷಯಗಳು ಅಲ್ಲವೆಂದಲ್ಲ. ಕೆಲಮಟ್ಟಿಗೆ ಹೌದಾದರೂ  ಅವೇ ಎಲ್ಲ ಸವಾಲುಗಳಲ್ಲ ಎಂಬುದನ್ನು ಯಾರೂ ಮರೆಯುವ ಹಾಗಿಲ್ಲ.

ಮಾನವೇಂದ್ರನಾಥ ರಾಯ್ ಅನುಯಾಯಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿ ಮತ್ತು ಕೇಂದ್ರ ಸರಕಾರದಲ್ಲಿ ಮಾನವ ಸಂಪನ್ಮೂಲ ಮಂತ್ರಿಗಳಾಗಿದ್ದರು. ಬಾಡಿದ ಮುಖದಂತಿರುವ ಬತ್ತದ ಭಾವಗಳ ಬಸವರಾಜರು ಸರಳ, ಸಭ್ಯ, ಸಹೃದಯ ಸಂಪನ್ನರು. ಸಧ್ಯಕ್ಕೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಒನ್ ಮ್ಯಾನ್ ಆರ್ಮಿ. ಅವರೆದುರು ಸಂಪುಟ ವಿಸ್ತರಣೆಯ ಸವಾಲು ಮಿಲಿಯನ್ ಡಾಲರ್ ಪ್ರಶ್ನೆಗಳ ಕಡಾಯಿಯಲ್ಲಿ ಕೊತ ಕೊತನೆ ಕುದಿಯುತ್ತಿರುವಂತಿದೆ.

ದುರದೃಷ್ಟಕರ ಸಂಗತಿಯೆಂದರೆ  ಮುಖ್ಯಮಂತ್ರಿಯಾದವರು ಹೆಲಿಕಾಪ್ಟರ್ ಇಲ್ಲವೇ ವಿಮಾನ ಹತ್ತಿ ಬರುವ ನೆರೆಸಂತ್ರಸ್ಥರ ಭೆಟ್ಟಿಯೆಂಬ ಬೆಳವಣಿಗೆ, ಪ್ರಹಸನದ ಪರಂಪರೆಯಂತಾಗಿದೆ. ಯಡಿಯೂರಪ್ಪ ಇನ್ನೇನು ಎರಡು ದಿನಗಳಲ್ಲಿ ಕುರ್ಚಿಬಿಟ್ಟು ಕೆಳಗಿಳಿಯುವ ವಿದಾಯದ ಗಳಿಗೆಗಳಲ್ಲಿ ಒಂದರ್ಧ ದಿನದಮಟ್ಟಿಗೆ ಬೆಳಗಾವಿ ಜಿಲ್ಲೆಯ ಪ್ರವಾಹ ಪ್ರವಾಸ ಮಾಡಿಬಂದರು.

ಕೇಂದ್ರದ ಹೈಕಮಾಂಡ್ ಆದೇಶದ ಮಹಾನಿರೀಕ್ಷೆ ಮತ್ತು ಯಡಿಯೂರಪ್ಪ  ರಾಜೀನಾಮೆ ಗುದುಮುರಿಗೆಯ ೨೪/೭ ಪ್ರಖರ ಪ್ರಚಾರದ ನಡುವೆ ನೆರೆಸಂತ್ರಸ್ತರ ಭೇಟಿ ಮತ್ತು ಪರಿಹಾರಕಾರ್ಯ ಕಿರು  ಪ್ರಹಸನದಂತೆ ಕಂಡುಬಂತು. ಅದಾದ ಒಂದೆರಡು ದಿನಗಳ ತರುವಾಯ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊನ್ನೆಯಷ್ಟೇ ಕಾರವಾರ ಜಿಲ್ಲೆಗೆ ಹೋಗುತ್ತಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಳಿಬಂದು ನಿಮ್ಮ ಅಹವಾಲು, ಸಂಕಟಗಳನ್ನು ಹೇಳಿಕೊಳ್ಳಿರೆಂದು ಅಧಿಕಾರಿಗಳು ಮತ್ತು ಮಾಧ್ಯಮದ ಮಿತ್ರರು ಸಂತ್ರಸ್ತರಲ್ಲಿ ಮನವಿ ಮಾಡಿಕೊಂಡರು.

ಕಾರವಾರ ಜಿಲ್ಲೆ ಅಂಕೋಲೆ ತಾಲೂಕಿನ ಕೊಡಸಣೆ ಗ್ರಾಮದ ಗ್ರಾಮಸ್ಥರನೇಕರು ಇಂತಹ ಮನವಿಗೆ ಸ್ಪಂದಿಸಲಿಲ್ಲ. ಬದಲಿಗೆ ನಾವು ಮುಖ್ಯಮಂತ್ರಿ ಬಂದಾಗ ಅವರ ಬಳಿಹೋಗಿ ನಮ್ಮ ನೋವುಗಳನ್ನು ಹೇಳಿ ಕೊಳ್ಳುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಅವರು ತಮ್ಮ ತೀವ್ರವಾದ ನಿರಾಸಕ್ತಿ ತೋರಿದರು. ಅದನ್ನು ಅವರು ನೇರವಾಗಿ ವಿದ್ಯುನ್ಮಾನ ಮಾಧ್ಯಮಗಳೆದುರು ಪ್ರತಿಭಟನೆಯ ಗಟ್ಟಿ ಸ್ವರದಲ್ಲಿಯೇ ಹೇಳಿಯು ಬಿಟ್ಟರು.

ಕಳೆದ ಬಾರಿ ಇದೇ ರೀತಿ ಮುಖ್ಯಮಂತ್ರಿ ಬಂದರು ಮತ್ತು ಹೋದರು. ಆದರೆ ತಮಗೆ ಯಾವುದೇ ಕಿಲುಬು ಕಾಸಿನ ಕಿಂಚಿತ್ ಪರಿಹಾರ ದೊರಕಿಲ್ಲ ಎಂಬುದು ಅವರ ಇಂದಿನ ನಿರಾಸಕ್ತಿಯ ಹಿಂದಿನ ನಿಜವಾದ ಕಾರಣ. ಮುಖ್ಯಮಂತ್ರಿ ಯಾಕೆ ಪ್ರಧಾನಮಂತ್ರಿಯೇ ಬಂದರೂ ನಾವು ಅವರ ಬಳಿ ಹೋಗಿ ನಮ್ಮ ನೋವುಗಳನ್ನು ಹೇಳಿಕೊಳ್ಳಲಾರೆವು. ನಮ್ಮಮನೆ, ಹೊಲ, ಬೆಳೆ, ದನಕರುಗಳು ಒಟ್ಟಾರೆ ನಮ್ಮ ಬದುಕೇ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೂರಾಬಟ್ಟೆಯಾಗಿದೆ. ನಮಗೆ ಯಾವ ಸರಕಾರಗಳು ಯಾವ ಬಗೆಯಿಂದಲೂ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂಬುದು ಅವರ ನಿರಂತರ ಅಳಲು.

ನೆರೆಹಾವಳಿ ಎಂಬುದು ಪ್ರತೀ ವರ್ಷವೂ ಪರಿಹಾರ ದೊರಕದ ಪ್ರಚಂಡ ಸಮಸ್ಯೆಯೇ ಆಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಪ್ರವಾಸ, ವೈಮಾನಿಕ ಸಮೀಕ್ಷೆ ಎಂಬುದು ಮಾಧ್ಯಮಗಳಲ್ಲಿ ಮಾಮೂಲಿನ ಚುರುಕು ಸುದ್ದಿಯೇ ಆಗಿರ್ತದೆ. ಕೆಲವೊಮ್ಮೆ ಕೇಂದ್ರದ ತಂಡದ ಸಮೀಕ್ಷೆಯ ಶಾಸ್ತ್ರ.  ಹಾಗೆಯೇ ನೆರೆಪೀಡಿತರಿಗೆ ದಕ್ಕದ ಪರಿಹಾರ ಕುರಿತು ಮಾಧ್ಯಮಗಳು ತಳಮಟ್ಟದ ಸುದ್ದಿಕತೆಗಳನ್ನು ಬಯಲು ಮಾಡುತ್ತವೆ. ಇದು ಕೂಡಾ ಎಂದಿನಂತಾಗಿದೆ. ಇದೆಲ್ಲ ಕೇವಲ ವರ್ತಮಾನ ಸರಕಾರ ಕುರಿತಾದ ಕತೆಯಲ್ಲ. ಎಲ್ಲ ರಾಜಕೀಯ ಪಕ್ಷಗಳ ಎಲ್ಲಕಾಲದ ಸರಕಾರಗಳಲ್ಲಿ ಜನರ ನೋವಿನ ನಿರಂತರ ನರಕ ಯಾತನೆ. ಪರಿಹಾರಕ್ಕಾಗಿ ದಿಲ್ಲಿ ಕಡೆ ಕೈತೋರಿಸುವುದು ಉಂಟು.

ಎಲ್ಲವೂ ದಿಲ್ಲಿಯ ಹುಕುಮಿಗೆ ಎದುರು ನೋಡುವಂತಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ತನ್ನ ಹಿತದ ಕುರಿತಾಗಿ ಇರಬೇಕಾದ ಪರಮಾಧಿಕಾರಕ್ಕು ಕೇಂದ್ರದ ಕಡೆ ನೋಡುವ ಸ್ಥಿತಿ. ಮುಖ್ಯಮಂತ್ರಿ ನೇಮಕದಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಿರಿಯ ನೇಮಣೂಕಿಯನ್ನು ದಿಲ್ಲಿಯೆಂಬ ಹೈಕಮಾಂಡುಗಳು ತಮ್ಮ ಮುಷ್ಠಿಯಲ್ಲಿಟ್ಟುಕೊಂಡಿರುತ್ತವೆ. ವಾಸ್ತವಸ್ಥಿತಿ ಹೀಗಿರುವಾಗ ಜನತಂತ್ರಕ್ಕೆ ಏನರ್ಥ? ಜನರು ಕೇವಲ ಮತ ಚಲಾಯಿಸುವ ಯಂತ್ರಗಳೇ.? ಪ್ರಜಾಪ್ರಭುತ್ವ ಅರ್ಥ ಕಳಕೊಳ್ಳುತ್ತಿದೆ.

ಇಷ್ಟು ಮಾತ್ರಖರೇ: ಸಂತ್ರಸ್ತರ ಗೋಳಿಗೆ ಕೊನೆಯೇ ಇಲ್ಲದಂತಾಗಿರುವುದನ್ನು ಅಲ್ಲಗಳೆಯಲಾಗದು. ಹಾಗಾದರೆ ಎಲ್ಲ ಸಂತ್ರಸ್ತರ ಸಂಕಟಗಳು ನಿಕಾಲೆ ಆಗುವುದು ಯಾವಾಗ.? ಜನರಿಂದ ಆಯ್ಕೆಗೊಂಡ ನಮ್ಮ ಸರಕಾರಗಳು ಬರಪರಿಹಾರ, ನೆರೆಹಾವಳಿಯಂತಹ ನೈಸರ್ಗಿಕ ವಿಪತ್ತು ನಿರ್ವಹಣೆಯಲ್ಲಿ ಯಾಕಿಂತಹ ದಿವ್ಯ ನಿರ್ಲಕ್ಷ್ಯ ತೋರಿಸುತ್ತವೆ.? ಪರಿಹಾರದ ಬರೀ ತೋರಿಕೆ ಮೆರೆಯುತ್ತಿರುವುದು ಮೇಲ್ನೋಟಕ್ಕೆ ಖಚಿತವಾಗುತ್ತದೆ. ಅದಕ್ಕೆಂದೇ  ”  ಬರವೆಂದರೆ ತುಂಬಾ ಇಷ್ಟ ” ಎಂದು ಪತ್ರಕರ್ತ ಪಿ. ಸಾಯಿನಾಥ್ ಅವರು ಬರೆದ ಪುಸ್ತಕದ ಮಾತುಗಳು ನೆನಪಾಗುತ್ತವೆ.

ಇಂತಹ ವಿಪತ್ತು ನಿರ್ವಹಣೆಯಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಂಪಾಗುತ್ತಾರೆ. ಮತ್ತು ನೆಮಲು ಹಾಕುತ್ತಾ ಮಲಗಿ ಬಿಡುತ್ತಾರೆಂಬುದು ಸಾರ್ವಕಾಲಿಕ ಸತ್ಯ. ಪಾಪಿಗಳು ತಿಂದು ಉದ್ಧಾರವಾಗಿ ಹೋಗಲಿ. ಅಂತೆಯೇ ಹಿಂದಿನ ಸರಕಾರಗಳು ಘೋಷಿಸಿದ ಪರಿಹಾರಗಳೇ ರೈತರು, ಸಾಮಾನ್ಯರು, ಸಂತ್ರಸ್ತರಿಗೆ ಸಿಗದಿರುವಾಗ ಇಂದಿನ ಸರಕಾರ ಘೋಷಿಸುವ ಪರಿಹಾರ ದೊರಕುವುದು ಇನ್ನೆಂದಿಗೋ ಎಂಬ ಅಪಸವ್ಯದ ಸೈತಾನ ನರ್ತನ.

ಹೀಗೇನೆ ಇತ್ತೀಚಿನ ಎಲ್ಲ ಸರಕಾರಗಳು  ತಮ್ಮನ್ನು ಆರಿಸಿ ಕಳಿಸಿದ ಜನರ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿವೆ. ಸರಕಾರಗಳಿಗೆ ಬುದ್ಧಿ ಕಲಿಸಬಲ್ಲ ಸಂಘಟಿತ ಹೋರಾಟದ ಅಧಿನಾಯಕನ ಕೊರತೆ. ಜನಸಾಮಾನ್ಯರು ಪ್ರಭುತ್ವದ ಅಸಡ್ಡೆತನ, ಲಪೂಟ ಮಾತುಗಳನ್ನು ನಂಬುವುದಿಲ್ಲ. ಆದರೆ ಲಜ್ಜೆಗೆಟ್ಟ ರಾಜಕಾರಣಿಗಳು ಸುಳ್ಳು ಹೇಳುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂಬ ಹುಚಪ್ಯಾಲಿ ಹುಯಿಲಾಟದಲ್ಲಿದ್ದಾರೆ. ಅಂತೆಯೇ ಅವರು ತಮ್ಮ ಸುತ್ತಲೂ ವಂದಿಮಾಗದರ ಹಿಂಡು ಕಟ್ಟಿಕೊಂಡಿರುತ್ತಾರೆ.

ಏಕೆಂದರೆ ಮುಂಬರುವ ಚುನಾವಣೆಗಳಲ್ಲಿ ಮತ್ತೆ ಮತ್ತೆ ಗೆಲ್ಲುವ ಒಳಹೇತು. ಜನರಿಗೆ ಅತ್ಯುತ್ತಮ ಆಡಳಿತ ನೀಡಬೇಕೆಂಬ ಕಿಂಚಿತ್ತೂ ಕಳಕಳಿ ಅವರಿಗೆ ಇಲ್ಲವೇ ಇಲ್ಲ. ಆದಾಗ್ಯೂ ತಮ್ಮದು ಜನಸ್ನೇಹಿ ಆಡಳಿತ ಎಂಬ ಬುಬ್ಬಣಾಚಾರದ ಮಾತುಗಳಿಗೇನು ಕೊರತೆಯಿಲ್ಲ. ಮಾಧ್ಯಮಗಳೆದುರು ಹೇಗೆ ಮಾತಾಡಬೇಕೆಂಬ ಚಾಲಾಕಿತನ ಚೆನ್ನಾಗಿ ಕಲಿತು ಕೊಂಡಿರುತ್ತಾರೆ. ರಾಜಕಾರಣಿಯೊಬ್ಬ ತಾನು ಪ್ರತಿನಿಧಿಸುವ ಪದವಿ, ಪಕ್ಷ, ಅದರ ಹೈಕಮಾಂಡಿಗೆ ತೋರುವ ಪ್ರೀತಿಯ ಅರ್ಧದಷ್ಟು ಪ್ರೀತಿ ಕಾಳಜಿಯನ್ನು ಜನರ ಮೂಲಭೂತ ಅಗತ್ಯಗಳಿಗೆ ತೋರಿದ್ದರೆ ಸಾಕಿತ್ತು.

ಇನ್ನೇನು ಆಗಷ್ಟ್ ಮೂರನೇ ವಾರದೊಳಗೆ ಕೊರೊನಾ ಮೂರನೇ ಅಲೆಯ ಮರಣ ಮೃದಂಗದ ಘಂಟಾನಾದ ಮಾಧ್ಯಮಗಳಲ್ಲಿ ಮೊಳಗ ತೊಡಗಿದೆ. ಮೂರನೇ ಅಲೆಯನ್ನು ಅದೆಷ್ಟು ಸಮರ್ಥವಾಗಿ ಎದುರಿಸಿ ಗೆಲ್ಲುತ್ತೇವೆಂಬುದು ಸರಕಾರದ ಸಿದ್ಧತೆ ಮೇಲೆಯೇ ಅವಲಂಬಿತವಾಗಿದೆ. ಅದನ್ನು ಸರಕಾರವೇ ಹೇಳಬೇಕು. ಏಕೆಂದರೆ ನೆರೆಯ ಕೇರಳದಲ್ಲಿ ಕೊರೊನಾ ಬೆಂಕಿ ಹತ್ತಿ ದಗದಗ ಉರಿಯುತ್ತಿದೆ.

ಲಸಿಕೆ ನೀಡುವಲ್ಲಿ ಇನ್ನೂ ಅರವತ್ತು ಎಪ್ಪತ್ತರಷ್ಟು ಶೇಕಡಾವಾರು ತಲುಪದ ಲೆಕ್ಕಾಚಾರ. ಈ ಹಿಂದಿನ ಕೊವಿಡ್ ಸಾವುಗಳ ಸಂಖ್ಯೆಯಲ್ಲೇ ಅಪರಾ ತಪರಾ ಆಗಿರುವ ಅನುಮಾನಗಳಿವೆ. ಖಾಸಗಿ ದವಾಖಾನೆಗಳಿಗೆ ಕೊರೊನಾ ಎಂಬುದು ಹಣ ಗಳಿಕೆಯ ಸುಗ್ಗಿಯ ಹಬ್ಬವೇ ಆಗಿದೆ. ಬೆಂಗಳೂರು ಮತ್ತು ಕಲಬುರ್ಗಿಯಂತಹ ಕಲ್ಯಾಣ ಕರ್ನಾಟಕದ ರಾಜಧಾನಿಯಲ್ಲಿ ಖಾಸಗಿ ದವಾಖಾನೆಗಳೆಂಬ ಕೊರೊನಾ ಸೌಧಗಳು ಸುಲಿಗೆಯ ಹತಾರಗಳ ಸಾಣೆ ಹಿಡಿದು ಮತ್ತೆ ಮೂರನೇ ಅಲೆಯ ಸುಲಿಗೆಗೆ ಸಡಗರ, ಸಂಭ್ರಮದಿಂದ ಸಿದ್ಧಗೊಳ್ಳುತ್ತಿವೆ. ನೂತನ ಮುಖ್ಯಮಂತ್ರಿಗಳು ಇದನ್ನೆಲ್ಲ ಜಾಣತನದಿಂದಲೇ ಫೇಸ್ ಮಾಡುವ ಸಂಭಾವ್ಯ ಶಕ್ತಿ ಹೊಂದಿದ್ದಾರೆಂಬ ನಂಬುಗೆ ನನ್ನದು.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter