ಸೆಳೆತ

( ಕಿರು ನಾಟಕ)

ಪಾತ್ರವರ್ಗ: (ಶಂಕ್ರ, ಮಂಜಾ, ವಿನ್ಯಾ, ಭರಮ್ಯಾ, ಸೋಮ್ಯಾ, ವೀರು, ಈರು, ಚಿದು)

(ಉತ್ತರ ಕರ್ನಾಟಕದ ಹಳ್ಳಿಯೊಂದರ ಹದಿನೆಂಟರಿಂದ ಮೂವತ್ತು ವರ್ಷದೊಳಗಿನ ಯುವಕರು.)

ಬಸಪ್ಪಜ್ಜ:  ಎಪ್ಪತ್ತು ವರ್ಷದ ವೃದ್ಧ

ನೀಲು ಇಪ್ಪತ್ತು ವರ್ಷದ ತರುಣಿ.

 ದೃಶ್ಯ 1

(ಮಾಲಿಂಗನ ಗುಡಿಯ ಕಟ್ಟೆ)

(ಶಂಕ್ರ, ಮಂಜಾ, ವಿನ್ಯಾ, ಭರಮ್ಯಾ, ಸೋಮ್ಯಾ, ವೀರು, ಈರು, ಚಿದು, ಗುಡಿ ಕಾಯುವ ಬಸಪ್ಪಜ್ಜ)

  ಹಾಡು

ಕೋಲು ಮುತ್ತಿನ ಕೋಲು

ಕೋಲು ಚಿನ್ನದ ಕೋಲು

ಕೋಲು ರನ್ನದ ಕೋಲು

ಕೋಲು ಕೋ$ಲೆ

ಹರಿಯುವ ನದಿ ಚೆಂದ

ತುಂಬಿದ ಕೆರಿ ಚೆಂದ

ಹೂಡುವ ಎತ್ತು ಬಲು ಚೆಂದ

ಕೋಲು ಮುತ್ತಿನ ಕೋಲು

ಕೋಲು ಕೋಲೇ…. ||

ಸುರಿಯುವ ಮಳಿ ಚೆಂದ

ಹನಿಯುವ ಹನಿ ಚೆಂದ

ಹಸಿರು ಹಸಿರಾದ ಹೊಲ ಚೆಂದ

ಕೋಲು ಮುತ್ತಿನ ಕೋಲು

ಕೋಲ ಕೋಲೇ…. ||

ಹೂವಾಡೋ ಹತ್ತಿ ಚೆಂದ

ತೂಗಾಡೋ ತೆನಿ ಚೆಂದ

ಹಾರ್ಯಾಡಿ ಬರುವ ಗಿಣಿ ಚೆಂದ

ಕೋಲು ಮುತ್ತಿನ ಕೋಲು

ಕೋಲು ಕೋಲೇ…. ||

ಮಾಲಿಂಗನ ಗುಡಿ ಚೆಂದ

ಊರ ಮುಂದಲ ಕಟ್ಟಿ ಚೆಂದ

ರೊಟ್ಟಿ ಬುತ್ತಿ ಊಟ ಬಲು ಚೆಂದ

ಕೋಲು ಮುತ್ತಿನ ಕೋಲು

ಕೋಲು ಕೋಲೇ…. ||

ಶಂಕ್ರ:  ಸಂಕ್ರಾಂತಿ ಜಾತ್ರಿ ಮುಗಿತು.ಸಾಕ ಮಾಡೋಣು ಇನ್ನ ಈ ಕೋಲಾಟ.

ಮಂಜಾ: ನಾವು ಎಂಟ ಮಂದಿ ಸೇರಿದ್ರ ಯಾವಾಗಲು ಜಾತ್ರೀ ಸಂಭ್ರಮಾನೆ ತಗೋಪ್ಪಾ.

ವಿನ್ಯಾ: ಹಬ್ಬದ ಹಿಂದಲ ದಿನದ ತನಾ ಬಣವಿ ಕಟ್ಟೀವಿ. ಜಾತ್ರೀ ತೇರ ಎಳದೀವಿ.ಕೈ ಕಾಲ ಕಸುವೆಲ್ಲ ಕಳದಿರಬೇಕು ಪಾಪ ನಮ್ಮ ಶಂಕ್ಯ್ರಾಗ. ಬರೀ ಮೂರ ಮೂರ ರೊಟ್ಟಿ ತಿನ್ನಾಂವ ಅಂವ.

ಶಂಕ್ರ:  ಲೇ ವಿನ್ಯಾ.. ಮುಚ್ಚಲೇ ಬಾಯಿ. ನೀ ನನಗಿಂತ ಎರಡು ರೊಟ್ಟಿ ಜಾಸ್ತಿ ತಿನ್ನತಿ ಅಷ್ಟ  ಹೌದಿಲ್ಲೋ..ನಿನ ಮಾತು ಕೇಳಿದ್ರ ಮೂವತ್ತ ರೊಟ್ಟಿ ತಿನತಿ ಅನಬೇಕು!  ಹಂಗ  ಅಂದೇ ಅನತಾನ (ಎಲ್ಲಾರ ಜೋರಾದ ನಗು)

ಭರಮ್ಯಾ :  ಮೂರಾರ ತಿನ್ರೀ ಮುವತ್ತಾರ ತಿನ್ರಿ. ನಾಳೆ ಬುತ್ತಿ ಕಟ್ಟಿಕೊಂಡು ಹೋಗಬೇಕು ಹೊಲದಾಗ ಹಳ್ಳದ ದಂಡೀಗ ಹೋಗಬೇಕು.ನೆನಪೈತೇನಿಲ್ಲೋ ಎಷ್ಟ ಗಂಟೇಕ ಹೋಗೋದ್ರೋ?

ವೀರು:  ಒಂಭತ್ತ ಗಂಟೇಕ್ಕ ಹೋಗೋಣ.

ಬಸಪ್ಪಜ್ಜ: ಮಾಲಿಂಗನ ಗುಡ್ಡಿ ಕಟ್ಟೆ ಇನ್ನ ಬಣಾ ಬಣಾ ಅನ್ನಿಸ್ತತಿ.. ದಿನಾ ಬಂದು ಕೋಲಾಟ ಮಾಡತಿದ್ರಿ..ನನಗೂ ಸಂಜೆ ಹೊತ್ತಿಗೆ ವ್ಯಾಳೆ ಹೆಂಗ ಹೋಗತತಿ ಅನ್ನೂದ ತಿಳೀತಿರಲಿಲ್ಲ. ಜಾತ್ರಿಮುಗಿದ್ರೂ ಬರೂದ ಬಿಡಬ್ರಾಡ್ರೋ ಹುಡುಗರ್ಯಾ.

ಮಂಜ್ಯಾ: ಇಲ್ಲಜ್ಜಾ.ಹೊಲಕ್ಕ ಹೋಗಿ ಬರೂ ಮುಂದ ಗುಡ್ಯಾಗಿನ ಮಾಲಿಂಗಗೆ ನಮಸ್ಕಾರಾ ಹಾಕಿ ನಿನ ಕೂಡ ಒಂದ ಚೂರು ಅಡಕೆ ಹೋಳ ಬೇಡಿ ತಿನ್ನದಿದ್ರೆ ನಮಗೂ ಸಮಾಧಾನ ಆಗಂಗಿಲ್ಲ.

ಬಸಪ್ಪಜ್ಜ: ಬಂಗಾರದಂಥಾ ಹುಡುಗೋರಪ್ಪಾ ನೀವು.ವರಷಾ ವರಷಾ ಊರ ಗುಡಿಗೆ ಸುಣ್ಣಾ ಬಣ್ಣಾ ಬಳಿದುಕೊಡತೀರಿ.ದ್ಯಾವ್ರು ನಿಮ್ಮನ್ನ ಚೆಂದಾಗಿಟ್ಟಿರಲಿ.

 (ಎಲ್ಲರೂ ಅಜ್ಜನಿಗೆ ನಮಿಸಿ ಮರು ದಿನ ಸಿಗೋಣ ಎನ್ನುತ್ತ ಮನೆಗೆ ತೆರಳುವರು)

                ದೃಶ್ಯ 2

(ಶಂಕ್ರ, ಮಂಜಾ, ವಿನ್ಯಾ, ಭರಮ್ಯಾ, ಸೋಮ್ಯಾ, ವೀರು, ಈರು, ಚಿದು)

ಭರಮ್ಯಾ-  ನನಗಂತೂ ಹೊಟ್ಟಿ ಭಾಳ ಹಸದತಿ. ಬುತ್ತಿ ಬಿಚ್ಚರಲೇ

ಈರು-  ಏನಂದಿ ಏನಂದಿ ಭರಮ್ಯಾ ಹೊಟ್ಟಿ ಹಸದತ ನಿಂದು? ನಾವೆಲ್ಲಾ ಹೊಳ್ಯಾಗ ಬಿದ್ದ ಈಸಾಡಿದ್ವಿ . ಹೊಟ್ಟಿ ಹಸದತಿ ಅಂದ್ರ ಸರೀನಪಾ..ನೀ ಭಾಳ ಹೊತ್ತು ದಂಡ್ಯಾಗ ಕುಂತ ಹೋಗೂ ಬರೂ ಹುಡುಗ್ಯಾರನ್ನ ನೋಡಿಕೊಂತಿದ್ಯಯಲ್ಲೋ.ನಿನಗ ಹಸಿವಾತ?ಖರೇ ಹೇಳ ನಿನಗ ಹೊಟ್ಟಿನೇ ಹಸದತೊ ಇಲ್ಲಾ (ಎಲ್ಲರ ನಗು)

ಭರಮ್ಯಾ– ಲೇ ಬ್ಯಾಡಾ ಬ್ಯಾಡಾ ಈರು.. ಸುಳ್ಳ ಸುಳ್ಳ ಮಾತಾಡಿದ್ರ ನಾಲ್ಕ ಕಡತಾ ಕಡಿತೀನಿ ನೋಡ ನಿನಗ..

ಮಂಜಾ– ಬಡಿಲೇ ಬರಮ್ಯಾ ಬಡಿ ಇವಂಗ್ ನಾಲ್ಕ ಬಡಿತಾ.ನಾ ಅದೀನಿ ನಿನ ಪಾರ್ಟಿಗ.ಈ ಈರು ಜಾತ್ರ್ಯಾಗ, ಸಿನೇಮಾದಾಗ ಹುಡುಗೀರ ಕಣ್ಣೀಗ ಬಿದ್ರ ಸಾಕು ಪಿಳ್ ಪಿಳ್ ಸಿಳ್ಳೆ ಹೊಡಿಯಾಕ ಚಲೂ ಮಾಡ್ತಾನ. ಅವ್ರು ಸಿಟ್ಟಿಲೆ ತಿರ ತಿರಗಿ ನೋಡ್ತಾರ. (ಜೊತಿಗಿರೋ ನಮಗೂ ಜೀವಾ ಪುಕು ಪುಕು ಅಂತಿರ್ತದ) ಯಾವುದಾರ ಹುಡುಗಿ ಕಾಲ್ಮರಿ ತಗೊಂಡ ಕ್ಯಾರ ಬಡಿತಾ ಬಡೀಯೋ ಮೊದ್ಲ  ನೀನ ಹೊಡ್ಯೋದು ಪಾಡ ನೋಡಪ್ಪಾ..

ಈರು– ಲೇ ಮಂಜ್ಯಾ ಹರೇದಾಗೂ ಹುಡಗೀರನ್ನ ನೋಡಲಾರದ್ರೆ ಮುದಕ ಆದ ಮ್ಯಾಲ ನೋಡಿ ಸೀಟಿ ಹೊಡಿಯಾಕ ಆಕ್ಕೇತೇನೋ. ನೀ ಒಳ್ಳೆ  ಮಠದಾಗಿನ  ಸ್ವಾಮಿಗೋಳಂಥಂವಾ  ಹುಡೀರನ್ನ ನೋಡಿದ ಕೂಡ್ಲೆ ಕಣ್ಣ ಮುಚ್ಚಿಕೋತೀಪ್ಪಾ.  ನಾ ಹಾಂಗಿರಾಂಗಿಲ್ಲ ಬಿಡಪ್ಪ .

ಚಿದು– ಏ ಈರು ಏನ ಹುಡುಗ್ಯಾರು ಅಂತ ಬಿದ್ದ ಸಾಯತೀಯೋ ಮಾರಾಯ. ನೀವೇನ ಸದ್ಯೇಕ್ಕ ಜಗಳಾಡೂದು ನಿಲ್ಲೊಸೋ ಹಂಗ ಕಾಣಾಕಹತ್ತಿಲ್ಲ. ಎಲ್ಲಾರು ನಿಮ್ಮ ಬುತ್ತಿ ನನ್ನ ಕಡೆ ಕೊಡ್ರಿ ನನಗಂತೂ ಜೀವಾ ಹೋಗುವಷ್ಟ ಹಸಿವಾಗೇತಿ ನಾ ಉಣತೀನಿ.

ಸೋಮ್ಯಾ – ನಮ್ಮವ್ವ ಸಜ್ಜೆರೊಟ್ಟಿ, ಝುಣಕದ ವಡಿ, ಶೇಂಗಾ ಚಟ್ನಿ, ಕಾಳ ಪಲ್ಲೆ ಕಟ್ಟಿಕೊಟ್ಟಾಳ ತಗೋಳಪ್ಪಾ. ಹೊಟ್ಟಿಬಾಕ ಅದೀ ನೀ. ಎಲ್ಲಾ ತಿನಬ್ಯಾಡ ಮತ್ತ. ಎಲ್ಲರೂ ಕೂಡಿ ತಿನ್ರಿ ಅಂತಾ ಕೊಟ್ಟಳ ನಮ್ಮವ್ವ.

ಚಿದು- ಲೇ ನಿನಕಿಂತಾ ಒಂದೀಟ ಜಾಸ್ತಿ ತಿನತೀನೇಳು. ಪೂರಾ ತಿನ್ನಾಕ ಹೆಂಗ ಆಕ್ಕೇತಿ ನಿಮ್ಮವ್ವಂದು ದ್ವಾಡ್ಡ ಕೈ, ಆರ ಮಂದಿಗಂದ್ರ ಹತ್ತ ಮಂದಿಗಾಗೋವಷ್ಟ ಕಟ್ಟೂವಾಕಿ.ಆಕಿ ನಿನ್ನ ಹಂಗ ಜುಗ್ಗ ಇಲ್ಲ ಬಿಡು. ಅಲ್ಲಲ್ಲ ನೀನಗ ಆಕಿ ಹಂಗದ್ವಾಡ್ಡ ಮನಸಿಲ್ಲ ಬಿಡು…( (ಸೋಮ್ಯಾ ಚಿದುಗೊಂದು ಗುದ್ದುವನು)

ಸೋಮ್ಯಾ-  ಇವತ್ತು ನನಗಂದ್ರೂ ನಮ್ಮವ್ವನ ಹೊಗಳಿ ಪಾರಾದಿ ಮಗನ ಇಲ್ಲಾ ಅಂದ್ರ ..

(ಎಲ್ಲರೂ ವೃತ್ತಾಕಾರವಾಗಿ ಕುಳಿತು ಊಟ ಮಾಡಲು ಆರಂಭಿಸುವರು)

ಭರಮ್ಯಾ– ನಮ್ಮವ್ವ ಗುರೆಳ್ಳ ಚಟ್ನಿ, ತಪ್ಪಲ ಪಲ್ಯಾ ಜ್ವಾಳದ ರೊಟ್ಟಿ, ಶೇಂಗಾ ಹೋಳಗಿ, ಕಟ್ಟಿ ಕೊಟ್ಟಾಳ ತಗೋರೋ.‘ಪಾಪ ನಮ್ಮವ್ವ ಮುಂಜಾನಿ ನಾಲ್ಕ ಗಂಟೇಕ ಎದ್ದು ರೊಟ್ಟಿ ಬಡಿದುಕೊಟ್ಟಾಳ.ಕಣ್ಣೀಗಿ ಪೊರೆ ಬರಾಕ ಹತ್ತೇತಿ.ಆಪರೇಶನ್ ಮಾಡಿಸಬೇಕು ಅಂತ ಡಾಕ್ಟ ಹೇಳ್ಯಾರ.ಅಂತಾದ್ರಾದ ಒಂದ ನಿಮಿಷಾ ಸುಮ್ಮ ಕುಂದ್ರಂಗಿಲ್ಲ. ಕಟಿಪಿಟಿ ಕೆಲ್ಸಾ ಮಾಡತಾಳ.ರೊಕ್ಕ ಖರ್ಚಾಕ್ಕೇತಿ ಆಪರೇಷನ್ನಿಗೆ ಮಾಡಿಸಬೇಕಂದ್ರೆ,  ಹೆಂಗಸೂರಿಗೆ ಕಣ್ಣ ಮಬ್ಬಾದ್ರೆ ಏನಾಕ್ಕೇತಿ ಏನ ಬ್ಯಾಂಕಿಗೆ ಹೋಗಿ ಯವಾರ ಮಾಡೂದೈತೇನು ಆಕಿ ಅಂತ ಅಂದ ಜಬರಿಸ್ತಾನ ನಮ್ಮಪ್ಪ. ಭಾಳ ಜುಗ್ಗ ಅದಾನ..ಏ ವೀರು ನೀ ಈ ವರಸಾನೂ ಕೆಲಸ ಮಾಡಾಕ ಬೆಂಗಳೂರಿಗೆ ಹೊಕ್ಕೀಯೇನೋ?

ವೀರು- ಹೌದಪ್ಪಾ ಈ ವರಷಾನೂ ಹೊಕ್ಕೀನಿ.ಗೊಣವಿ ಸೆಳೆದ ಕ್ಯಾರ ಧಾನ್ಯ ಮನ್ಯಾಗ ತಂದು ಒಟ್ಟತೇನಿ.ಅದಷ್ಟ ಕೆಲ್ಸಾ ಮುಗಸಿ ಮುಂದಿನವಾರ ಹೋಕ್ಕೆನಿ.ಇನ್ನೂ ಎರಡು ವರಸಾ ಹಿಂಗ ಹೋಗಿ ಒಂದಷ್ಟು ದುಡಕೊಂಡ ಬರಲಿಲ್ಲಾ ಅಂದ್ರ ತಂಗಿ ಮದವಿಗೆ ಖರ್ಚ ಹೊಂದಿಸಾಕ ಆಗಂಗಿಲ್ಲ.

ಭರಮ್ಯಾ-ಆತಪ್ಪಾ..ಇದ್ರ ಇಂಥಾ ಅಣ್ಣ ಇರಬೇಕು ಭೂಮಿ ಮ್ಯಾಲ.ಆದ್ರ ಉಣ್ಣೂ ಹೊತ್ತಿನ್ಯಾಗ ಊರ ಬಿಡೋ ಮಾತ್ಯಾಕ. ಏ ತತ್ತಾರೋ ನನಗೊಂದು ಶೇಂಗಾ ಹೋಳಗಿ.. ನಮ್ಮನಿ ಸಜ್ಜಾ ರೊಟ್ಟಿ ಪೂರಾ ಖಾಲಿ ಮಾಡ್ರೋ.. ಹೊಳ್ಳಿ ತಗೊಂಡ ಹೋಗಂಗಿಲ್ಲ ನಾ..

 (ಎಲ್ಲರ ಊಟ ಮುಗಿದು, ನೀರು ಕುಡಿದು ಮರದ ನೆರಳಲ್ಲಿ ಮಲಗುವರು ಒಂದಿಬ್ಬರು ಕುಳಿತುಕೊಳ್ಳುವರು. )

ಚಿದು- ಸುಗ್ಗಿ ಕೆಲ್ಸಾ ಸುರುವಾದಂದಿನಿಂದ ಚೆಂದಾಗಿ ಉಣ್ಣಾಕೂ ಪುರುಸೊತ್ತಾಗಿದ್ದಿಲ್ಲ. ಹಗಲನ್ನಂಗಿಲ್ಲ ರಾತ್ರಿ ಅನ್ನಂಗಿಲ್ಲ ದುಡಿಯಾದು, ಆಗಾಗ ಮಾಲಿಂಗನ ಗುಡಿ ಕಟ್ಟಿಗ ಹೋಗಿ  ಕೋಲಾಟ ಆಡೂದು.. ಎಲ್ಲಾರೂ ಒಗ್ಗಟ್ಟಿಲೆ ಹರಟಿ ಹೊಡಕೋತ ಕೆಲ್ಸ ಮಾಡತೀವಿ ದಿನಾ ಹೆಂಗ ಹೋಗತಿತ್ತೋ ಗೊತ್ತೇ ಆಗತಿರ್ಲಿಲ್ಲ.

ಭರಮ್ಯಾ- ಹೌದಪ್ಪ. ಅದ್ರಾಗೂ ಹಿಂಗ ಊರ ಹೊರಗ ಬಂದು ಆರಾಮಲೇ ಸಂಕ್ರಾಂತಿ ಬುತ್ತಿ ಉಣ್ಣೂ ಮಜಾನೇ ಬ್ಯಾರೆ..ಈಗ ಹೇಳಪ್ಪಾ ವೀರೂ ಬೆಂಗಳೂರಿಗೆ ಹೋಗಿ ದುಡಿಯೂದು ಪಾಡಂತಿಯೇನು?

ವೀರು- ಅಲ್ಲಿ ಕೂಲಿ ಚೊಲೋ ಸಿಗತತೋ ಭರಮ್ಯಾ. ಅಪಾರ್ಟಮೆಂಟ್ ಕಟ್ಟೂ ಕೆಲಸಕ್ಕ ನಿಂತ್ರ  ದಿನಕ್ಕ ಎಂಟನೂರು ರೂಪಾಯಿ ಕೊಡತಾರ. ಒಂದಿನ್ನೂರು ರೂಪಾಯಿ ಖರ್ಚದರೂ ದಿನಕ್ಕ ಆರ ನೂರು ರೂಪಾಯಿ ಉಳಿತತಿ.ನಾಲ್ಕ ತಿಂಗಳಾ ಅತ್ತಾಗ ಹೋಗಿ ದುಡಿದು ಬಿಡತೇನಿ. ಮುಂಗಾರ ಹಂಗಾಮಿಗೆ ಊರಿಗೆ ಬರೂ ಹೊತ್ತಿನ್ಯಾಗ ಏನಿಲ್ಲಾ ಅಂದ್ರೂ ಅರವತ್ತ ಸಾವಿರ  ರೊಕ್ಕ ಕೂಡಿರ್ತತಿ ಕೈಯಾಗ. ತಂದ ನಮ್ಮವ್ವನ ಕೈಯಾಗ ಹಾಕಿಬಿಡತೇನಿ.. ಆಗೀಗ ಖರ್ಚಿಗೆ ಬೇಕಂದ್ರು ಆಕಿ ಕಡೆನೇ ಇಸಗೊಳ್ತೇನಿ.ಉಳಿದಿದ್ರಾಗ ತಂಗಿಗೇನರ ಸಣ್ಣಾ ಪುಟ್ಟಾ ಒಡವಿ ವಸ್ತ್ರಾ ತರತೀವಿ.

ಭರಮ್ಯಾ– ವೀರು ಈ ವರ್ಷಾ ನಾನು ನಿನ್ನಕೂಡಾ ಬರತೀನಿ ಅಲ್ಲಿ ಕೆಲಸಾ ಹಚ್ಚಿ ಕೊಡತಿಯೇನು? ಹೊಳ್ಳಿ ಬಂದ ಮ್ಯಾಲೆ ಅವ್ವನ ಕಣ್ಣಿನ ಆಪರೇಷನ್ ಮಾಡಿಸಾಕ ಆಕ್ಕೇತಿ.

ವೀರು-‘ಬಾರೋ ಮಾರಾಯ ಹೋಗೋಣ.ನೂರಾರ ಮಂದಿಗೆ ಆ ಬಿಹಾರಿ ಸಾವ್ಕಾರ ಕೆಲ್ಸಾ ಕೊಡತಾನ. ಮತ್ತ ಯಾರಾರ ಬರತೀರೇನು?ನಾ ಹೋಗಿ ಹೊಳ್ಳಿ ಬಂದ ಮ್ಯಾಲ ಚೊಲೋ ಚೊಲೋ ಅರಬಿ ಹಾಕತೀಪ್ಪಾ, ಮೊಬೈಲೂ ತಗೊಂಕೊಂಡಿಯೇನು? ವಾಚ ತುಗೊಂಡಿಯೇನು? . ವೀರೂನ ಕೈಯಾಗ ರೊಕ್ಕ ಆಡಾ ಹತ್ತೇತಿ” ಅಂತ ಕೇಳತೀರಿ… ನನಗ ಒಂದ ನಮೂನಿ ಅನ್ನಿಸ್ತತಿ..

ಈರು- ಏ ವೀರು ಅಲ್ಲಿ ಹುಡುಗ್ಯಾರು ಹೆಂಗಿರತಾರೋ? ನಾ ಅಂತೂ ಇನ್ನೂ ತನಾ ಈ ಊರು ಬಿಟ್ಟು ಇನ್ನೆಲ್ಲಿ ಹೋಗಿಲ್ಲಾ ಬ್ಯಾರೆ ಹುಡುಗೀರನ್ನೂ ಕಂಡಿಲ್ಲ.

ವೀರು –( ಜೋರಾಗಿ ನಗುತ್ತ) ನಿನಗದು ಬಿಟ್ಟು ಬ್ಯಾರೆ ಚಿಂತಿನೇ ಇಲ್ಲ ನೋಡಪ್ಪಾ..ಟಿವಿ ಸೀರಿಯಲ್ಲಿನ್ಯಾಗ ಕನ್ನಡಾ ಪಿಚ್ಚರಿನ್ಯಾಗ ಹಿರೋಯಿನ್ಗಳು ಬರ್ತಾರಲ್ಲಪ್ಪಾ ಅಂಥಾ ಹುಡುಗ್ಯಾರು ಅಲ್ಲಿ ರೋಡ ಮ್ಯಾಲ ಕಾಣಿಸ್ತಾರ.

ಈರು- ಆಆ..ಅಂದ ಹಂಗ ಅರಿಬಿನೂ ಹಂಗ ಹಾಕಿರ್ತಾರೇನೋ ವೀರು?( ಎಲ್ಲರ ನಗು)

ವೀರು-  ಥೂ ನಿನ್ನ ನಿನ್ನ.. ಹೌದಪ್ಪಾ ಹಂಗ ಹಾಕಿರ್ತಾರ.

ಈರು- ಏನೋ ತಿಳಕೊಳ್ಳಾಕ ಕೇಳಿದೆಪ್ಪಾ.ಎಲ್ಲಾರು ಅಷ್ಟಾಕ ನಗತೀರಿ?ನಾನು ಈ ವರಷಾ ನಿನ್ನ ಕೂಡಾ ಬರ್ತಿನಪ್ಪಾ ಬೆಂಗಳೂರಿಗೆ. ನಮ್ಮಪ್ಪನ ಕೂಡಾ ಎಲೆ -ಅಡಕಿ ಖರ್ಚಿಗೆ ರೊಕ್ಕ ಕೇಳಿದ್ರೂ ಕಣ್ಣ ಕೆಂಪಗ ಮಾಡತನ.. ಹಗಲಿಗೆ ಕೆಲ್ಸಾ ಮಾಡಿ ರಾತ್ರಿ ಸಿನಿಮಾ ನೋಡಕ ಅಕ್ಕೆತೇನೋ ವೀರು?

ವೀರೂ- ಆರ ಗಂಟೇಕ ಕೆಲಸ ಬಿಡತಾರ.ರಾತ್ರಿ ಊಟ ಮುಗಿಸಿ ಒಂಭತ್ತರಿಂದ ಹನ್ನೆರಡು ಗಂಟೆತನ ಸಿನೇಮ ನೋಡಬಹುದು.ವಾರಕ್ಕೊಂದು ದಿನಾ ಸೂಟಿ ಕೊಡತಾರ ಅವತ್ತು ಹಗಲಿಗೂ ಹೋಗಬಹುದು.

ಮಂಜ್ಯಾ –ನಾ ಅಂಕ್ರ ಬರಂಗಿಲ್ಲಪ್ಪಾ.ನನ್ನ ಹೆಂಡ್ತಿ ಕಳಿಸಂಗಿಲ್ಲ. ಈಗ ಆಕಿ ಹೊಟ್ಯಾಗಿದ್ದಾಳ.ನಿಮಗ್ಯಾರಿಗೂ ಮದವಿ ಆಗಿಲ್ಲ. ಹೋಗಂಗಿದ್ರ ಹೋಗ್ರಿ. ವಿನ್ಯಾ ನೀ ಹೋಕ್ಕಿಯೇನೋ?

ವಿನ್ಯಾ- ಇಲ್ಲಪಾ ನನಗೂ ಆಗಂಗಿಲ್ಲ. ಮುಂಜಾನೆ ನಮ್ಮಪ್ಪಾರಿಗೆ ಕೈಕಾಲ ಹಿಡಕೊಂಡಿರ್ತಾವ. ಏನೂ ಕೆಲ್ಸ ಮಾಡಾಕ ಆಗಂಗಿಲ್ಲ. ಹಟ್ಟಿ ಕೆಲ್ಸಾ ಮಾಡಾಕ ಅವ್ವಾಗೂ ಆಗಂಗಿಲ್ಲ. ಎಲ್ಲಾ ನಾನೇ ಮಾಡಬೇಕು.

ವೀರು- ಚಿದು, ಶಂಕ್ರಾ, ಸೋಮ್ಯಾ ನೀವು ಬರತೀರೇನಪ್ಪಾ? ಆರ ಮಂದಿ ಆದ್ರೂ ಹೋದ್ರೆ ಸ್ಲಮ್‍ನ್ಯಾಗೆ ಎರಡು ರೂಮು ಬಾಡಿಗೆ ಹಿಡಕೊಂಡು ಇರಾಕ ಆಕ್ಕೇತಿ..

ಚಿದು– ನನಗ ದಿನಾ ಉಣ್ಣಾಕ ಜ್ವಾಳದ ಭಕ್ಕರಿ ಬೇಕೇ ಬೇಕಪ್ಪಾ.ಮತ್ತ ಎಲ್ಲಾ ಹುಡುಗೋರೆ ಹೊಂಟೀವಿ. ಯಾರಿಗೂ ಭಕ್ಕರಿ ಬಡಿಯಾಕಂತೂ ಬರಂಗಿಲ್ಲ.. ಅನ್ನಾ ಸಾರು ಉಂಡ ಕೂಲಿ ಮಾಡಾಕ ನನ ಕಡೆ ಆಗಂಗಿಲ್ಲಪಾ. ನಾ ಒಲ್ಲೇಪ್ಪಾ..ಬೆಂಗಳೂರಿಗೆ ಬರಾಕ.

ವೀರು- ಉತ್ತರ ಕರ್ನಾಟಕದ ಮಂದಿ ಅಲ್ಲಿ ಖಾನಾವಳಿ ಮಾಡ್ಯಾರೋ ಚಿದು.. ದಿನಾ ಅಲ್ಲಿಂದ ರೊಟ್ಟಿ ಪಲ್ಲೆ ತಂದಕೊಳ್ಳೋಣ..ಅನ್ನಾ ಸಾರು ನಾವ ಮಾಡಿಕೊಳ್ಳೋಣ.

ಶಂಕ್ರಾ_ ನಾ ಬರಾಕ ತಯ್ಯಾರ ಅದೀನಪ್ಪ .ನಮ್ಮವ್ವನ ಒಪ್ಪಸೋ ಜಬಾದರಿ ನಿಂದು. ನಾ ಎಲ್ಲಿಗಾರ ಹೋಗತೇನಂದ್ರ ಸಾಕು, ಮುಳು ಮುಳು ಅಳತಾಳ..

ಸೋಮ್ಯಾ- ನಾನೂ ಬರತೇನಪ್ಪಾ.ಇದ್ದೂರಾಗ ಇದ್ದ ಇದ್ದ ಸಾಕಾಗೇತಿ.ಮನ್ಯಾಗೂ ಒಂದೀಟ ಕಷ್ಟಾನೇ ಆಗೇತಿ. ಅವ್ವ ತೀರಿಕೊಂಡ ಮ್ಯಾಲ ನಮ್ಮ ಅತ್ತಿಗೆವ್ವ ನನಗ ಊಟಕ್ಕ ಇಕ್ಕಾಗ ನಾ ಯಾಕ ಅಂತಾಳ .ಕೆಲ್ಸಾ ಮಾತ್ರ ಬಿಟ್ಟೂ ಬಿಡದೇ ಹೇಳ್ತಳ.ನಮ್ಮಣ್ಣ ಏನೂ ಕೆಲಸ ಮಾಡವಲ್ಲ. ಬ್ಯಾಸಿಗ್ಯಾಗಂತೂ ಆಕಿನ್ನ ತಗೊಂಡ ಜಾತ್ರಿ ಮದವಿ ಅಂತ ಅಡಾಡತಾರ..ನಾಯಿಗಿಟ್ಟ ಹಂಗ ನನಗ ಒಂದಿಷ್ಟ ತಂಗಳ ಭಕ್ಕರಿ ಇಟ್ಟ ಹೋಗಿಬಿಡ್ತಾರ.ನಮ್ಮ ಅಣ್ಣಾನ ಕೂಡಾನೂ ಒಂದೀಟ ಮಾತಾಡಿ ಒಪ್ಪಸೋ ವೀರೂ. ನಿನಗ ಪುಣ್ಯಾ ಹತ್ತತತಿ..

ವೀರು_ ಹಂಗ ಆಗ್ಲೆಪ್ಪಾ ಎಲ್ಲಾರೂ ಕೂಡಿ ಹೋಗೋಣಂತ ಕಷ್ಟಾ ಸುಖ ಹಂಚಿಕೊಂಡು ದುಡಿದು ಬರೂಣಂತ. ಇಷ್ಟ ವರಷಾ ಅಕ್ಕ ಪಕ್ಕದ ಊರಿನ ಗೆಳ್ಯಾರ ಕೂಡ ಹೋಗತಿದ್ದೆ ಈ ವರಷಾ ನೀವೂ ಹೊಂಟೀರಿ..ಭಾಳ ಖುಷಿ ಅನ್ನಿಸಕ ಹತ್ತೈತಿ..ನಡ್ರಿ ಸಂಜಿ ಆಗೋದ್ರೊಳಗ ಮನಿ ಮುಟ್ಟ ಬೇಕು ಅಂತ ನಮ್ಮ ಅವ್ವ ತಾಕೀತು ಮಾಡ್ಯಾಳ.

(ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ.. ಚಿತ್ರಗೀತೆ ಹಾಡುತ್ತ ಮನೆಯತ್ತ ಹೊರಡುವರು)

             ದೃಶ್ಯ 3

(ಬೆಂಗಳೂರಿಗೆ ಗುಳೆ ಬಂದು  ಕಟ್ಟಡ ಕಟ್ಟುತ್ತಿರುವವರು)

ವೀರು-  ಏ ಭರಮ್ಯಾ ಮಾಲ್ ತಗೊಂಬಾರಲೇ..

ಭರಮ್ಯಾ-  ತಡಿಲೇ ವೀರು, ವಿನ್ಯಾ ಸ್ವಲ್ಪ ನೀರ ಹಾಕಿ ಮಾಲ ಮತ್ತೊಮ್ಮಿ ಕಲಸಾಕ ಹತ್ಯಾನ ಬಿಸಿಲಿಗೆ ಜಲ್ದಿ ಜಲ್ದಿ ಸಿಮೀಟ್ ಗಟ್ಯಾಗಾಕ ಹತ್ತೇತಿ..

ವೀರು- ಹಾಂಗಾರ ನೀನು ಮಂಜ್ಯಾ ಅಷ್ಟೊತ್ತು ಇಲ್ಲಿ ಬಿದ್ದ ಇಟ್ಟಂಗಿ ತುಕಡಿ ಆರಿಸಿ ಒಂದ ಕಡೆ ಒಟ್ರೀ.ಕಾಲ ಕಾಲಾಗ ಇಟ್ಟಂಗಿ ತುಕಡಿ ಸಿಗಾಕ ಹತ್ತೇತಿ.

ಭರಮ್ಯಾ_ ವೀರೂ ನೀ ಬಿಲ್ಡಿಂಗ್ ಮಾಲಿಕ್ರ ಗತಿ ಆಡತೀಲೇ.ಒಂದ ನಿಮಿಷಾ ಸುಮ್ನ ನಿಂದ್ರಾಕ ಕೊಡಂಗಿಲ್ಲ. ಆತ ತಗೋ ಆರಸ್ತೀವಿ, ನೀ ಮತ್ತ ಸ್ಟೂಲ ಮ್ಯಾಲ ಕುಂತ ಬಿಡು ಮತ್ತ ಇಳಿಯಾಕ ಹೋಗಬ್ಯಾಡ.

( ಮಂಜ್ಯಾ, ಭರಮ್ಯಾ ಇಟ್ಟಂಗಿ ತುಕಡಿಗಳನ್ನು ಆರಿಸಿ ಮೂಲೆಯಲ್ಲಿ ಹಾಕುವರು)

ವೀರು- ಈರು ಎಲ್ಲಿ ಹೋಗ್ಯಾನೋ ಭರಮ್ಯಾ?

ಭರಮ್ಯಾ- ಈರೂ ಮಾಲ ಕಲಸಾಕ ನೀರು ತರಾಕ ಹತ್ಯಾನ. ಸೋಮ್ಯಾ,  ಶಂಕ್ರ್ಯಾ ಸೀಮೀಟು ಉಸಕು  ರಾಶಿ ಹಾಕಾಕ ಹತ್ಯಾರೋ. ಈಗ ಕಲಸಿದ್ದ ಮಾಲು ಇನ್ನೊಂದ ಏಳೆಂಟು ಬುಟ್ಟಿ ಅಷ್ಟ ಆಗತೈತಿ. ಹೊತ್ತು ಮುಳಗಾಕ ಇನ್ನೂ ಎರಡ ತಾಸೈತಿ ಅದಕ ಮತ್ತೊಮ್ಮಿ ಕಲಸಾಹತ್ತಾರ..

ವೀರು_ ನಾ ಎರಡು ವರ್ಷಾ ಇಲ್ಲಿ ಬಂದು ಗೌಂಡಿ ಕೆಲ್ಸಾ ಕಲಿತಿದ್ದು ಚೊಲೋ ಆತು. ಪಗಾರ ಜಾಸ್ತಿ ಐತಿ ಈ ಕೆಲಸಕ್ಕ. ನಾ ಗೌಂಡಿ ಆಗಿದ್ದರಿಂದ ನಾವೆಲ್ಲ ಒಟ್ಟಿಗೇ ಕೆಲ್ಸಾ ಮಾಡಾಕ ಆಗೇತಿ.

ಭರಮ್ಯಾ_ ಹೌದೋ ಮಾರಾಯ.ನಾವೆಲ್ಲ ಈ ಕೆಲ್ಸಕ್ಕೆ ಹೊಸಬ್ರು.ಪಕ್ಕದಾಗ ಕೆಲ್ಸಾ ಮಾಡೋ ಬಿಹಾರಿ ಮೇಸ್ತ್ರೀಗಳು ಲೆಕೆಆ ಲೆಕೆಆ ಎಂದು ಬೊಬ್ಬೆ ಹಾಕತಿರ್ತಾರ. ಅಂಥವ್ರ ಕೈಯಾಗ ನಮ್ಮನ್ನ ಕೆಲ್ಸಕ್ಕ ಹಚ್ಚಿದ್ರ ಏನೂ ಅರ್ಥ ಆಗಲಾರದೇ ಕಣ್ಣ ಕಣ್ಣ ಬಿಟ್ಟಕೊಂತ ನಿಲ್ಲಬೇಕಾಗ್ತಿತ್ತು..

ಮಂಜ್ಯಾ_ ನಮ್ಮೂರಾಗಿನ ಹೊಲದ ಕೆಲ್ಸಕ್ಕ, ಈ ಊರ ಬಿಲ್ಡಿಂಗ್ ಕೆಲ್ಸಕ್ಕ ಭಾಳ ಫರಕ್ ಐತಿ ಬಿಡಪ್ಪಾ..ಈ ಸಿಮೀಟು ಉಸಕಿನ ಧೂಳು ಕಣ್ಣು ಮೂಗಿನ್ಯಾಗ ಹೊಕ್ಕು ಸಂಜಿ ಅನ್ನೂದ್ರಾಗ ತೆಲಿನೋವ ಬರತದ. ಹೊಲದಾಗ ಎಷ್ಟ ಹೊತ್ತು ದುಡಿದ್ರೂ ಅಷ್ಟ ದಣಿವಾಗ್ತಿದ್ದಿಲ್ಲ. ಇಲ್ಲಿ ಒಂದ ನಮೂನಿ ಸುಸ್ತಾಗ್ತದೋ ವೀರು.

ವೀರು –ಹೌದಪ್ಪಾ ನಮ್ಮೂರಿನಷ್ಟು ಸುಖಾ ಇನ್ನೆಲ್ಲೂ ಸಿಗಂಗಿಲ್ಲ. ಆದ್ರ ಈಗ ಅಲ್ಲೇ ಇದ್ರ ಏನ ಕೆಲಸ ಸಿಗತಿತ್ತು ಹೇಳು? ಬರಿಗೈ ಭಂಟರಾಗತಿದ್ವಿ ಹೌದಿಲ್ಲೋ..

ಭರಮ್ಯಾ_ ಖರೇನಪ್ಪ ನಿನ ಮಾತು.ವಾರಾ ವಾರಾ ಮೂರ ಸಾವಿರ ರೂಪಾಯಿ ಪಗಾರಾ ಸಿಗತಿದ್ದಿಲ್ಲ. ನಾ ಈ ವಾರಾ ಸಂಬ್ಳಾ ಆತಂದ್ರ ಭರ್ಜರಿ ಬೂಟ ತಗೋತೀನಪ್ಪಾ ಸಣ್ಣಾಂವಿದ್ದಾಗಿಂದಾ ನನಗ ಭಾಳಾ ಆಶಾ ಐತಿ ಸಿನೇಮಾದಾಗ ಹೀರೋಗಳು ಹಾಕಿದಂಥಾ ಬೂಟ ತಗೋತೀನಿ.

ಮಂಜ್ಯ – ನಾ ಈ ವಾರಾ ಮಸ್ತ ಹೇರ್ ಸ್ಟೈಲ್ ಮಾಡಿಸಿ ಕಲರಿಂಗ ಮಾಡಸ್ತೀನಲೇ.ಈರೂನೂ ಹೇರ್ ಕಲರಿಂಗ್‍ಮಾಡಿಸ್ತನಂತ. ಹೋಗಿ ಬರೂ ಹುಡುಗ್ಯಾರೆಲ್ಲ ಅವನ್ನ ತಿರ ತಿರಗಿ ನೋಡಬೇಕಂತ. ಅಂವಾ ಹ್ವಾದÀ ವಾರಾ ರೋಡ್ ಸೈಡ್ನ್ಯಾಗ ದ್ವಾಡ್ ಕೂಲಿಂಗ್ ಗ್ಲಾಸ್ ತಗೋಂಡಾನ.

ವೀರೂ- ಬಳ್ಳಾರಿಯಿಂದ ಬಂದ ಕೂಲಿಕಾರ ಸಾಮಣ್ಣನ ಮಗಳನ್ನ ಬುಟ್ಟಿಗೆ ಹಾಕಿಕೋ ಬೇಕು ಅಂತ ಈರು ಪ್ರಯತ್ನ ನಡೆಶ್ಯಾನ. ಅವಂಗ್ ಬೈದು ಬುದ್ದಿ ಹೇಳೀನಿ..ಅತ್ತ ಕಡಿ ಮಂದಿ ಭಾಳ ಸಿಟ್ಟಿನವ್ರ ಇರತಾರು. ಪರ ಊರಿಗೆ ಬಂದು ಇಂತಾವೆಲ್ಲ ಮಾಡಾಕ ಹತ್ತಿದ್ರ ಕಂಡವ್ರ ಕಡೆಗೆ ಹೊಡತಾ ತಿನ್ನಬೇಕಾಗ್ತತಿ…  

ಭರಮ್ಯಾ– ಏ ನಾನೂ ಅವಂಗ ಹಾಂಗ ಹೇಳೀನಿ.ಬೇಕಾದ್ರೆ ವಾರದಾಗ ಎರಡೋ ಮೂರೋ ಸಿನೆಮಾ ನೋಡು.ಹಾದ ಬೀದ್ಯಾಗ ಕಾಣೂ ಹುಡುಗ್ಯಾರನ್ನ ನೋಡು ನಡಿತತಿ. ಆದ್ರ ಲವ್ವು ಗಿವ್ವು ಮಾಡಾಕ ಹೋಗಬ್ಯಾಡ ಅಂದಿನಿ! ನಮ್ಮ ವೀರೂಗ ಕೆಟ್ಟ ಹಸರ ತರಬ್ಯಾಡೋ.ದೋಸ್ತ್ರು ಅಂತ ನಮ್ಮ ನೆಂಬಿ ಕರಕೊಂಡ ಬಂದಾನ ನಮ್ಮ ವೀರು ಅಂದೀನಿ.

ವೀರು– ಹೌದಪ್ಪಾ. ಎಲ್ಲಾರ  ಎಲ್ಲಾರ ಮನಿ ಹೊಕ್ಕು ಹೊಂಟು ನಿಮ್ಮ ಮಗನ್ನ ಕಳಿಸ್ರಿ ಅಂತ ಒಪ್ಪಿಸಾಕ ನನಗ ಒಂದ ವಾರ ಹಿಡದಿತ್ತು. ಈರೂನ ಅವ್ವಾ ಅಂಕ್ರ ಬೆಂಗಳೂರ ಬಸ್ಸಿನ ತನಾ ಬಂದ ಜ್ವಾಕಿ ಅಪ್ಪಾ ಅಂತ ನೋರಾರ ಸಲ ಅಂದು ಸೀರಿ ಸೆರಗ ಕಣ್ಣಿಗಿ ಹಚ್ಚಿ ನಿಂತಿದ್ಲು.

ಭರಮ್ಯಾ_ ಈರೂ ದುಡಿಯಾಕ ಹೊಂಟಾನೋ, ಒಂದನೆತ್ತಾ ಸಾಲಿಗ ಹೊಂಟಾನೋ ಅನಸಿತ್ತಪಾ.

ವೀರು- ತಾಯಿ ಕಳ್ಳ ಅಂದ್ರ ಹಂಗಪಾ..ಎಷ್ಟ ದೊಡ್ಡಾವ್ರಾದರೂ ಇನ್ನೂ ಮಕ್ಕಳ ಆಕಿ ಪಾಲಿಗೆ..ಈಗ ಮಾಲು ತಯಾರಾಗಿರಬೇಕು ನಡ್ರೀ ತಗೊಂಡು ಬರ್ರೀ.

                 ********

                  ದೃಶ್ಯ 4

ಭರಮ್ಯಾ– ಏ ವೀರು ಬಂದ್ಯೇನೋ, ಬಾರೋ ಮಾರಾಯ, ಎಲ್ಲಿಂದ ಬಂತಪ್ಪಾ ಈ ಕೊರೋನಾ ಮಹಾ ಮಾರಿ. ಹಿಂದೆಂದೂ ಕೇಳಿಲ್ಲದ ರೋಗಾ..ಲಾಕ್‍ಡೌನ್ ಆದಿಂದ ಹಿಂಗ ಅವ್ರಿವ್ರು ತಂದಕೊಟ್ಟ ಊಟಾ ಮಾಡಿಕೊಂತ ಎಷ್ಟ ದಿನಾ ಇರೋದ ಹೇಳಪಾ ಮಾರಾಯ.ಚಿತ್ರಾನ್ನ, ಬಿಸಿಬೇಳೆ ಬಾತು, ಇಡ್ಲಿ ದ್ವಾಸಿ ನೋಡಿ ನೋಡಿ ಬ್ಯಾಸತ್ತು ಹೋಗೇವÀಪ್ಪಾ..

ಮಂಜ್ಯ– ಹಿರ್ಯಾರು ದಾನಕ್ಕ ಕೊಟ್ಟಿದ್ದಕ್ಕ ಹೆಸರಿಡಬಾರ್ದು ಅನ್ನತಾರ ಖರೇ.ಆದ್ರ ನಮ್ಮ ಊಟದ ಲೆಕ್ಕಾನೇ ಬ್ಯಾರೆ ಐತಲ್ಲಪ್ಪಾ ವೀರು. ಬಿಸಿ ಬಕ್ಕರಿ, ಹಸಿಖಾರ, ಮುಳಗಾಯಿ ಪಲ್ಯ ತಿಂದ ಹೊಲಕ್ಕ ಹೋಗಿ ದುಡಿತಿದ್ವಿ. ನಮ್ಮೂರಾಗ ನಾವಿರೂದೇ ಭೇಷಿತ್ತ ಏನಪ್ಪಾ.

ಭರಮ್ಯಾ- ಬೆಂಗಳೂರಿಗೆ ಹೋಗೋಣ ಬರ್ರೀ.ನಾಲ್ಕ ತಿಂಗಳಾ ದುಡದ ಬರೋಣ, ಮತ್ತ ನಾಲ್ಕ ತಿಂಗಳಾ ಕುಂತ ಉಣ್ಣೋ ಅಷ್ಟು ರೊಕ್ಕ ಸಿಕ್ಕೇತಿ.ಊರಾಗ ಸಿಗೂದಕ್ಕಿಂತ ಪಗಾರ ಹೆಚ್ಚ ಸಿಕ್ಕತೇತಿ ಅಂತ ಆಶಾ ಹಚ್ಚಿಕ್ಯಾರ, ಕುಂದಗೋಳದಿಂದ ಇಲ್ಲಿಗೆ ಆರ ಮಂದೀನ ಎಬ್ಬಿಕೊಂಡ ಬಂದಿಪ್ಪಾ.ಈ ಅಪಾರಮೆಂಟ್ ಕಟ್ಟೂ ಸಾವ್ಕಾರನ ಕೈಲೆ ನಾಲ್ಕ ವಾರಾ ಪಗಾರ ತಗೊಂಡ ಚೈನಿ ಮಾಡಿದ್ದೇ ಬಂತು ನೋಡಪಾ. ಈಗ ಅಂವಾ ನಾಪತ್ತೆ.ಅಷ್ಟ ದೂರದ ಊರಿಂದ ತನ್ನ ನೆಂಬಿ ಬಂದಾರ ಈ ಕಾರ್ಮಿಕರು ಅನ್ನೂದು ಇಲ್ಲೇ ಇಲ್ಲಾ ಆ ಮನಷ್ಯಾಗ. ಊರಿಗಿ ಹೊಳ್ಳಿ ಹೋಗಾಕ ಬಸ್ಸಿಲ್ಲ, ರೈಲಿಲ್ಲ, ಕೈಯಾಗ ರೊಕ್ಕಾ ಇದ್ದಿದ್ದೂ ಕಡಮಿನೇ..

 ಮಂಜ್ಯಾ- ನಮ್ಮವ್ವಾ ಫೋನ್ ಮಾಡಿ ವೀರು ಹೆಂಗದಿಯೋ ಜೀವ ನೆನಸಾಕ ಹತ್ಯೇದ ಅಂತ  ದಿನಾ ಅಳ್ತಾಳ. ನಿನ್ನ ಬಗ್ಗೆ ಚಿಂತಿ ಮಾಡಕೊಂತ ಹೊಟಬ್ಯಾನಿ ಹಚ್ಚಿಕೊಂಡ ಉಣ್ಣಂಗಿಲ್ಲಪ್ಪಾ ನಿಮ್ಮವ್ವ ಅಂತ ನಮ್ಮಪ್ಪ ಅನ್ನತಾನ. ತೆಲಿ ಕೆಟ್ಟ ಹೋಗೇತಪ್ಪಾ ಹೆಂಗಾರ ಆ ಸಾವ್ಕಾರನ್ನ ಹುಡುಕೋ ಮಾರಾಯ. ನಮ್ಮೂರಿಗ ಇಷ್ಟ ಮಂದಿನ ಹ್ಯಾಂಗಾರ ಮಾಡಿ ಕಳಿಸಿಕೊಡ್ರೀ ಅಂತ ಕಾಲಿಗಿ ಬಿದ್ದು ಕೇಳೋಣ..

ವೀರು– ‘ನಾ ತೆಪ್ಪ ಮಾಡಿದ್ನೋ ಭರಮ್ಯಾ ನಿಮ್ನೆಲ್ಲಾ ಕಷ್ಟದಾಗ ಸಿಗಸಿದ್ನಿ. ನಂಗೇನು ಗೊತ್ತಿತ್ತಪಾ ಇಂಥಾದ್ದೊಂದು ರೋಗ ಬರ್ತತಿ.ಲಾಕಡೌನ್ ಆಕ್ಕೇತಿ, ಸಾವ್ಕಾರ ಹಿಂಗ ಮಾಡ್ತಾರು ಅನ್ನೋದು?ನಾಲ್ಕ ವರಷಾ ಆತು, ನಾ ಬೆಂಗಳೂರಿಗೆ ಬರೂದು, ವರಷದಾಗ ನಾಲ್ಕ ತಿಂಗಳಾ ದುಡಿಯೋದು ಮಾಡಾಕ್ಹತ್ತಿ ಎಂದೂ ಹಿಂಗಾಗಿದ್ದಿಲ್ಲ. ದರ ವರುಷಾ ನಾ ತರೂ ರೊಕ್ಕ ನೋಡಿ ನೀವು ಆಶಾ ಮಾಡತಿದ್ರಿ.ಗೆಳ್ಯಾರು ನೀವೂ ಉದ್ಧಾರ ಆಗ್ಲಿ ಅಂತ ಈ ವರಷಾ ನಿಮ್ಮನೂ ಕರಕೊಂಡ ಬಂದ್ನೆಪ್ಪಾ.ಅಂದ ಹಾಂಗ ಈರು ಎಲ್ಲದಾನೋ?

ಭರಮ್ಯಾ– ಹೌದಪ್ಪಾ ವಿರೂ ನಿನಗ ಅನ್ನೂದು ತಪ್ಪ ಆಕ್ಕೇತಿ. ನೀವು ಬರಾಕ ಬೇಕು ಅಂತ ನಿ ನಮ್ನ ಒತ್ತಾಯ ಮಾಡಿ ತಂದಿಲ್ಲ.. ಹೋಗಿ ಬಿಡು ಎಲ್ಲಾರ ನಸಿಬ ಕೆಟ್ಟಿರಬೇಕು. ಅಲ್ಲಿ ನೋಡು ಶೆಡ್ ಬಾಜು ಬಳ್ಳಾರಿ ನೀಲೂ ಜೋಡಿ ಈರು ಮಾತಾಡಾಕ ಹತ್ಯಾನ.

( ರಂಗದ ಇನ್ನೊಂದು ಕಡೆ)

ಈರು-ನೀಲೂ ನಿನ್ನ ನೋಡು ತನಾ ಯಾಕರೆ ಬಂದೆ ಈ ಊರಿಗೆ ದುಡಿಯಾಕ ಅನ್ನಸ್ತಿತ್ತು.

ನೀಲು_ ನನಗೂ ಹಂಗ ಅನ್ನಿಸ್ತಿತ್ರೀ.ನಾ ಬೆಂಗಳೂರಿಗೆ ಬರಾಕಒಲ್ಲೆ ಅಂತ ಕುಂತಿದ್ದೆ.ಒಬ್ಬಾಕಿನೇ ಊರಾಗ ಬಿಡಾಕ ಸರಿ ಆಗಂಗಿಲ್ಲ. ನಿನ್ನ ಮದವಿಗೆ ರೊಕ್ಕಾ ಕೂಡಿಸಾಕ ಅಂತ ದುಡಿಯಕ ಹೊಂಟೆವಿ. ನೀನೂ ಬಾ ಅಂತ ನಮ್ಮಪ್ಪ ಅವ್ವ ಒತ್ತಾಯ ಮಾಡಿ ಕರಕೊಂಡು ಬಂದಾರ್ರೀ.

ಈರು- ಒಳ್ಳೇದೇ ಆತು.ಇಲ್ಲಕ್ಕಿದ್ರ ನೀ ಬರತಿದ್ದಿಲ್ಲ. ಜಿಂಕೆ ಮರಿಯಂಥಾ ನೂಲು ನನ ಕಣ್ಣಿಗೆ ಬೀಳತಿದ್ದಿಲ್ಲ.

ನೀಲು- (ವೈಯಾರ ಮಾಡುತ್ತ) ನನ ಕಣ್ಣೀಗೂ ಈ ಚೆಲುವ ಚೆನ್ನಿಗರಾಯ ಬೀಳತಿದ್ದಿಲ್ಲ..

ಈರು- ನಿನ ಮದವಿ ಮಾಡತಾರೇನು ನಿಮ್ಮ ಅಪ್ಪಾ.. ನನಗ ಕೊಡತಾರೇನು ಅಂತ ಕೇಳಲಾ..ಎನ್ನುತ್ತ ಅವಳ ಕೈ ಹಿಡಿಯುತ್ತಾನೆ.

ನೀಲು_ ಅತ್ತ ಇತ್ತ ನೋಡುತ್ತಾ ಐ ಕೈ ಬಿಡ್ರೀಪ್ಪಾ ನಮ್ಮಪ್ಪ ನೋಡಿದ್ರೆ ಚರ್ಮಾನೇ ಸುಲೀತಾರ.ನಾ ಹುಟ್ಟಿ ತೊಟ್ಟಿಲಿಗೆ ಹಾಕೂ ಮುಂದನ$ ನಮ್ಮ ಸ್ವಾದರ ಮಾವಗ ಮದವಿ ಮಾಡಿ ಕೊಡತೀನಿ ಅಂತ ನಮ್ಮವ್ವ ನಮ್ಮಜ್ಜಿಗೆ ಮಾತು ಕೊಟ್ಟರ..

ಈರು- ಆ ಏನಂದಿ ನಿನ್ನ ಕೇಳಲಾರ್ದೆ ನಿನ ಮದವಿನಾ?ಅಂವಾ ನಿನ್ನ ಮಾವಾ ಹೆಂಗದಾನ?

ನೀಲೂ- ಇದ್ದಾನ ಬಳ್ಳಾರಿ ಕಲ್ಲ ಬಂಡೆ ಹಂಗ ನಮ್ಮಪ್ಪನ ಹಾಂಗ ಕುಡಿತಾನ. ನನಗ ಬ್ಯಾಡ ಈ ಮದವಿ ಒಲ್ಲೆ ಅಂತÀ ಅವ್ವನಗೂಡ ಎಷ್ಟೋ ಸಲಾ ಜಗಳಾಡೀನಿ..ನಿನ್ನ ತಮ್ಮಾ ಕುಡಿತಾನ. ನಾನೂ ನಿನ್ನ ಹಂಗ ಹೊಡೆತಾ ಬಡಿತಾ ತಿನ್ನ ಬೇಕಾಗ್ತತಿ ಅಂತೀನಿ. ಆಕಿ ತಲ್ಯಾಗ ಇಳೀವಲ್ದು ಭಾಷೆ ಕೊಟ್ಟೀನಿ ಅನ್ನತಾಳ..(ಅಳುವಳು)

ಈರು-  ನಾ ನಿಮ್ಮಪ್ಪ ಅವ್ವಾನ ಕೂಡ ಮಾತಾಡಿ ನನಗ ಕೊಡ್ರೀ ನೀಲೂನ ಅನ್ನಲೇನು?

ನೀಲೂ-ನಮ್ಮವ್ವಾ ಕೊಟ್ಟ ಮಾತೂ ತಪ್ಪೂವಾಕಿ ಅಲ್ಲ. ಅಷ್ಟ ಅಲ್ದ ನೀವು ನೇಕಾರ ಮಂದಿ.ನಾವು ಒಡ್ಡರÀ ಮಂದಿ.ಜಾತಿ ಬ್ಯಾರೆ ಬ್ಯಾರೆ..ಮದವಿ ಆದ ಹಾಂಗ$.ನಾಳೆ ಊರಿಗೆ ಊರಿಗೆ ಹೋಗೋಣ ಅನ್ನಾಕತ್ತಾರ..ಇನ್ನ ಈ ಜೀವನದಾಗ ನಾವಿಬ್ಬರು ಭೆಟ್ಟಿ ಆಕ್ಕೀವೋ ಇಲ್ಲೋ. ನನ ಮರತು ಸುಖವಾಗಿರ್ರಿ..

ಈರು_ ಹಂಗನಬಾಡ ನೀಲೂ. ಈ ಬೆಳ್ಳಿ ಚೈನು ಹನುಮಂತನ ಲಾಕೆಟ್ ತಗೋ ಇದನ್ನ ನನ್ನ ನೆನಪಾಗಿ ಇಟ್ಗೋ. ಕೊರೋನಾ ಮುಗಿದ ಮ್ಯಾಲ ನೀನೂ ಬೆಂಗಳೂರಿಗೆ ಬಾ ನಾನೂ ಬರತೀನಿ..(ಅವಳು ಬೇಡವೆಂದರೂ ತನ್ನ ಕೊರಳಲ್ಲಿದ್ದ ಚೈನನ್ನು ಅವಳ ಕೈಗಿಡುತ್ತಾನೆ)

ಅಷ್ಟರಲ್ಲಿ ಈರೂ ಎನ್ನುವ ವೀರೂನ ಕರೆಗೆ ಓಗುಟ್ಟು ನೀಲೂನತ್ತ ಕೈ ಬೀಸಿ ಗೆಳೆಯರತ್ತ ಬರುತ್ತಾನೆ.

               ********

              ದೃಶ್ಯ 5

ವೀರು– ಎರಡು ವಾರಾತು ಅವರಿವರು ಕೊಟ್ಟ ಊಟ ಉಣ್ಣಾಕ ಹತ್ತಿ.. ಕೆಲ್ಸಾ ಮತ್ತ ಶುರುವಾಗೋ ಲಕ್ಷಣಾನೇ ಇಲ್ಲ..ಹಿಂಗ ಆದ್ರ ಮನೆ ಭಾಡಗಿ ಕೊಡುದ ಹೆಂಗ?ಈ ದಾನಿಗಳು ಊಟಾ ಕೊಡುದು ನಿಲ್ಲಿಸಿದ್ರ ಬದಕದು ಹೆಂಗ?ಬಸ್ಸು ರೈಲು ಏನಾರ ಇದ್ರ ನಮ್ಮೂರಿಗೆ ನಾವು ನಮ್ಮೂರಿಗರ ಹೋಗಬಹುದಿತ್ತು.ಏನ ಮಾಡೂದೋ?ತೆಲಿ ಕೆಟ್ಟ ಹೋಗೇತೋ ಭರಮ್ಯಾ. 

ಈರು_ ವರಷದಾಗ ಒಮ್ಮಿ ಉಳವಿ ಜಾತ್ರಿಗೆ  ಒಂದಿಷ್ಟ ಮಂದಿ ಪಂಡರಾಪುರಕ್ಕ ಪಾದಯಾತ್ರೆ ಮಾಡ್ತಾರಲ್ಲಪ್ಪಾ,  ಹಂಗ ನಾವೂ ನಮ್ಮೂರ ಮಾಲಿಂಗನ ಭಜನೆ ಪದಾ ಹಾಡಿಕೊಂತ ನಡಕೊಂಡು ಊರಿಗ ಹೋಗಿ ಬಿಡೋಣೇನು?

ವೀರು- ‘ಏ ಈರ್ಯಾ ಯಾತ್ರೆ ಮಾಡೋವ್ರಿಗೆ ದಾಸೋಹ ಮಾಡಿ ಉಣ್ಣಾಕ ಹಾಕತಾರೋ. ಇಲ್ಲಾ ಬುತ್ತಿನಾರ ಕಟಗೊಂಡು ಹೋಗಿರ್ತಾರು.ಬರಿಗೈ ಬಂಟರು ನಾವು, ನಡಕೊಂಡು ಹೊಂಟರ ನಾವು ದಾರ್ಯಾಗ ಏನು ತಿನ್ನೋದೋ?’

ಭರಮ್ಯಾ_ ಹುಟ್ಟಿಸಿದ ದೇವ್ರು ಹುಲ್ಲ ಮೇಯ್ಸೋದಿಲ್ಲ. ದಾರಿ ಅಕ್ಕಪಕ್ಕದಾಗ ಏನರೆ ಸಿಕ್ಕಿದ್ದು ತಿನಕೊಂತ ಹೋಗೂದಪ್ಪ.ಇಲ್ಲ ಹಳ್ಳಿಗೋಳ ಕಂqಲ್ಲಿ ಬೇಡಿ ತಿನಕೊಂಡಾರ ಹೋಗೂದಪ್ಪಾ.ಮೊದಲು ಕಟ್ರೀ ಗಂಟು ಮೂಟೆ..…

ವೀರೂ- ಈಗ ಹಿಂಗ ಹ್ವಾದ್ರ  ಊರಾಗಿನ ಮಂದಿ ಆಡಿಕೊಂಡ ನಗಂಗಿಲ್ಲೇನ್ರೋ.. ದೊಡ್ಡ ದುಡ್ಡ ದುಡಿಯಾಕಂತ  ಊರ ಬಿಟ್ಟು ಹ್ವಾದವ್ರು. ಈಗ ನೋಡು ಬಾಲಾ ಮುದರಿದ ಬೆಕ್ಕಿನ ಹಾಂಗ ಬಂದಾರ ಅನ್ನಂಗಿಲ್ಲೇನ್ರೋ.

ಭರಮ್ಯಾ-ಅಂದೆ ಅನತಾರ..ನಾಕ ದಿನ ಹತ್ತಿ ಅರಳಿ ಕಿವ್ಯಾಗ ಇಟ್ಟುಗೊಂಡವ್ರ ಗತಿ ಇದ್ರಾತು.ಆಮ್ಯಾಲ ಮತ್ತ ನಮ್ಮೂರ ಹುಡುಗೋರು ಅಂತ ಒಪ್ಪಗೊಂಡೇ ಒಪ್ಪಿಕೋತಾರ ನಮ್ಮೂರ ಮಂದಿ.

ಮಂಜ್ಯಾ- ಹೌದಲೇ ವೀರು.ನಮ್ಮೂರಿಗೆ ನಾ ಹೋಗೇ ಬಿಡೋಣು.ನಾಲ್ಕ ಮಾತಂದ್ರೂ ನಮ್ಮೂರಾಗಿನ ಮಂದಿ ಮನಸು ಬೆಣ್ಣಿದ್ದ ಹಂಗ.ನಾವು ನಡಕೊಂಡು ಹ್ವಾದವಿ ಅಂದ್ರ ತಾಯಿಗೋಳು ಮೊದಲ ಪಾಪ ಅನತಾರ.ಆಮ್ಯಾಲೆ ಉಳಕಿದವ್ರನ್ನ ಅವರೇ ಒಪ್ಪಿಸ್ತಾರ.

ಭರಮ್ಯಾ ಏನೇನೋ ಕನಸು ಹೊತ್ತು ಬಂದೀವಿ..ಎಲ್ಲಾ ಕರಗಿ ಹೋತು.

ವೀರು -ಸುಮ್ನಿರಲೇ.ಮಂಜ್ಯಾ ಹೇಳಿದ ಹಂಗ ಮಾಡೋಣ.ನಿನ್ನೆ ಬಸಪ್ಪಜ್ಜಗ ಫೋನ್ ಹಚ್ಚಿದ್ದೆ. ಅಂವಾ ಹೇಳಿದಾ..ಊರಿನ ಪಂಚಾಯತಿಯವ್ರು ಉದ್ಯೋಗ ಖಾತ್ರಿ ಯೋಜನೆಯಾಗ ಕೆರಿ ಹೂಳ ಎತ್ತಿಸ್ತಾರಂತ.ಇಲ್ಲಿ ದುಡಿಯೋ ಬದ್ಲಿ ಅಲ್ಲಿಗೇ ಹೋಗಿ ದುಡಿದ್ರೆ ಆತು.ಆದರ  ಬೆಂಗಳೂರಿಂದಾ ಊರಿಗೆ ಹೋದಾವ್ರ ಊರಿನೊಳಗ ತುಗೋಬಾರದು.. ಪರ ಊರಿಂದ ಬಂದಾವ್ರು ಕೊರೋನಾ ಮಾರಿ ಊರಿಗೆಲ್ಲ ಹಬ್ಬಸ್ತಾರ ಅಂತ ಗೌಡರು ಹೇಳ್ಯಾರಂತೋ..

ಭರಮ್ಯಾ-ಅಯ್ಯೋ ಮಾಲಿಂಗಾ…ಇಲ್ಲೂ ಇರಾಕ ಆಗವಲ್ಲದು ಅಲ್ಲೂ ನಮ್ನ ಕರಕೊಳ್ಳವಲ್ಲರು ಅಂದ್ರ ಮ್ಯಾಲ ಹೋಗೂದೇನೋ ವೀರು?

ವೀರು- ಥೂ ಬಿಡ್ತು ಅನ್ನೋ ಮಾರಾಯಾ..ಮುಸ್ಸಂಜಿ ಹೊತ್ತಿನ್ಯಾಗ ಕೆಟ್ಟ ಮಾತು ಅನಬಾರದು.ನನಗೊಂದು ಉಪಾಯಾ ಹೊಳ್ಯಾಕ ಹತ್ತೇತಿ.ಮಾಲಿಂಗನ ಗುಡಿಗೆ ಜಾತ್ರೀ ಟೇಮಿಗೆ ತಂದ ಸುಣ್ಣಾ ಬಣ್ಣಾ ಬಾಳ ಉಳದಾವು.ನಾವು ಹೋಗಿ ಊರ ಹೊರಗಿರೋ ಸಾಲ್ಯಾಗ ಉಳಕೊಳ್ಳೋಣ. ನಮಗ ಯಾರಿಗೂ ರೋಗ ಅಂತೂ ಬಂದಿಲ್ಲ. ಹದಿನಾಲಕ್ಕ ದಿನಾ  ಅಲ್ಲಿದ್ದು ಬಸಪ್ಪಜ್ಜ ಕೂಡ ಸುಣ್ಣಾ ಬಣ್ಣಾ ತರಿಸಿಕೊಂಡು ಸಾಲಿಗೆ ಬಣ್ಣಾ ಹಚ್ಚೋಣ..

ಭರಮ್ಯಾ – ಭೇಷ್ ಐತಿ ಐಡಿಯಾ ವೀರೂ. ನಿನ್ನ ತಲಿಗೆ ಏನ ಕೊಟ್ರೂ ಕೊಡಬೇಕಪ್ಪಾ. ಹತ್ತಾರು ವರಷದಿಂದ ಸುಣ್ಣಾ ಬಣ್ಣಾ ಕಾಣದ ಸಾಲಿಗೆ ಚೆಂದಾಗಿ ಬಣ್ಣಾ ಹೊಡದೀವಂದ್ರ ಊರಾಗಿನವ್ರು ಎಲ್ಲಾ ಮರತ ಹೊಗಳಾಕ ಚಾಲೂ ಮಾಡ್ತಾರ.

ವೀರು- ಹೌದಪ್ಪಾ ನಾವು ಓದಿದ ಸಾಲೀಗ ನಾವು ಬಣ್ಣಾ ಹಚ್ಚಿದ ಹಾಂಗೂ ಆಕ್ಕೇತಿ.

ಭರಮ್ಯಾ- ಸಾಲ್ಯಾಗಿದ್ದು ಹೊಟ್ಟಿಗೇನು ತಿನ್ನೋದೋ ವೀರು?

ವೀರು- ಬಸಪ್ಪಜ್ಜ ಊರಾಗಿಂದ ಬುತ್ತಿ ತಂದು ಕೊಡಬಹುದು.ಪಾಪ ನಮ್ಮ ಮ್ಯಾಲ ಭಾಳ ಜೀಂವದಾನ. ಹೆಂಗಾರ ಊರಿಗೆ ಬರ್ರೋ ಹುಡುಗರ್ಯಾ. ಪರ ಊರಿಗೆ ಹೋಗಿ ಎಂತಾ ಕಷ್ಟದಾಗ ಸಿಕ್ಕಿ ಬಿದ್ದೀರ್ರೊ..ಅಂತಾ ನಿನ್ನೆ ಅಳಾಕ ಚಾಲೂ ಮಾಡಿದ್ದ ಪಾಪ.

ಭರಮ್ಯಾ- ಆತಲಾ ಎಲ್ಲಾ ಸಮಸ್ಯೆ ಬಗೆಹರೀತು.ಮತ್ಯಾಕ ತಡಾ ನಡೀರಿ ನಡೀರಿ.ಊರ ಹಾದಿ ಹಿಡೀರಿ.

ವೀರು – ನಮ್ಮೂರ ಕೆರಿ ಹೂಳೆತ್ತಿ ನೀರ  ತುಂಬಿಸೋಣಾ. ಮುಂಗಾರ ಬೆಳಿ ಜೋಡಿ ಹಿಂಗಾರ ಬೆಳಿನೂ ತಗಿಯೋಣ.ನಾಲ್ಕ ಕಾಸು ದುಡಿದು ಏನೇನೊ ಮಾಡಬೇಕು ಅನಕೊಂಡು ಬೆಂಗಳೂರಿಗೆ ಬಂದ್ವಿ ಎಲ್ಲಾ ಸುಳ್ಳಾತು ಮನಸ್ಸು ಹೋಳಾತು.

ಬೆಂಗಳೂರ ನಿನಗ ದ್ವಾಡ್ಡ ನಮಸ್ಕಾರ.ಮಾಲಿಂಗನ ನೆನೆಸಿಕೊಂಡ ನಡೀರೋ ಗೆಳ್ಯಾರಾ..

ಆ ಊರು ಈ ಊರು ಯಾವೂರ ಬಿಟ್ಟರೂ

ನಮ್ಮೂರು ನಮ್ಮಾ ಕೈ ಬಿಡದು..

ಆ ದೇವ್ರು ಈ ದೇವ್ರು ಯಾವ ದ್ಯಾವ್ರು ಬಿಟ್ಟರೂ

ನಮ್ಮೂರ ಮಾಲಿಂಗ ಕೈ ಬಿಡನು..

ಎಂದು ಹಾಡುತ್ತ ಹೊರಟೇಬಿಟ್ಟರು…

( ಮುಗಿಯಿತು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter