ಸೀತಿಮನಿ ತಾಯಿ ಮತ್ತು ಹೆಗ್ಗಣದೊಡ್ಡಿ ಧರ್ಮರು

ಈ ಎರಡೂ ಹೆಸರುಗಳು ನನ್ನ ಬಾಲ್ಯದ ಆರೇಳು ವರುಷದಷ್ಟು  ಪ್ರಾಚೀನ ಕಾಲದವು. ಅಷ್ಟೇ ಯಾಕೆ ನಾನಿನ್ನೂ ಭಿನ್ನೀಯತ್ತೆ ಸಾಲಿ ಕಲಿಯುವ ಕಾಲದವೆಂದರೂ ತಕರಾರಿಲ್ಲ. ನಮ್ಮ ಆ ಪುರಾತನ ಕಾಲದ (ಪ್ರಾಚೀನ ಮತ್ತು ಪುರಾತನ ಪದ ಬಳಕೆ ನಮ್ಮ ಕಾಲದ ಬಾಲ್ಯಕ್ಕೆ ಸಂವಾದಿಯಾಗಿ ಅರ್ಥೈಸುವುದು) ಪ್ರತಿವರುಷ  ಬೇಸಿಗೆಯಲ್ಲಿ ಸೀತಿಮನಿ ಧರ್ಮರ ತಾಯಿ ಇಲ್ಲವೇ ಹೆಗ್ಗಣದೊಡ್ಡಿ ಧರ್ಮರು ನಮ್ಮೂರಿಗೆ ಖಾಯಂ ಆಗಿ ಆಗಮಿಸುತ್ತಿದ್ದರು.

ಧರ್ಮರತಾಯಿ ಬರುವುದೆಂದರೆ ಊರಿಗೂರೇ ಗೌರವದಿಂದ ನೋಡುವ, ಅದಕ್ಕಾಗಿ ನಮ್ಮೂರು ಪಡುವ ಸಂಭ್ರಮಕೆ ಆ ಸಂಭ್ರಮವೇ ಸಾಟಿ. ನನ್ನ ವಾರಗೆಯ ಗೆಣೆಕಾರರಿಗೆಲ್ಲ ಧರ್ಮರತಾಯಿ  ನಮ್ಮೂರಲ್ಲಿ ಇರೋಮಟ ಹೇಳತೀರದ ಉಲ್ಲಾಸ, ಸಂತಸ – ಸಡಗರ. ಅವರು ಬೀಡುಬಿಟ್ಟ ಹಣಮಂದೇವರ ಗುಡಿಯ ಸುತ್ತಮುತ್ತ ನಮ್ಮಗಳ ಉಮೇದಿನ  ಓಡಾಟ. ಅದೇನೋ ಅಕ್ಷರಗಳಿಗೆ ನಿಲುಕದ ಖುಷಿ.

ಬೆಳ್ಳಗೆಂದರೆ ಅಚ್ಚ ಬೆಳ್ಳನೆಯ ಸಿಂಗಾರದ ಶಿವನ ಕುದುರೆ. ಅದರ ಮೇಲೆ ಬೆಳ್ಳಿಪಲ್ಲಕ್ಕಿ. ಡೋಲಿಯಂತಹ ಆ ಪಲ್ಲಕ್ಕಿಯಲ್ಲಿ ಕುಂತು ಧರ್ಮರತಾಯಿ ಬರುತ್ತಿದ್ದಳು. ತಾಯಿಯ ಬಿಳಿಕುದುರೆ ಮುಂದೆ ಕೈಯಲ್ಲಿ  ಅದೆಂತದೋ  ಬೆಳ್ಳಿ ಬೆತ್ತದ ಉದ್ದನೆಯ ಆಯುಧ ಧರಿಸಿದ ಬಿಳಿ ಉಡುಪಿನ ಸಿಪಾಯಿಯಂತಹ ಲಟ್ಟಾ ಆಳು ವೇಗದ ನಡಿಗೆಯಲ್ಲಿ ಮುನ್ನಡೆಯುತ್ತಿದ್ದ. ಧರ್ಮರತಾಯಿಯ ಕುದುರೆ ಹಿಂದೆ ಜೋಡೆತ್ತಿನ ಆರೇಳು  ಸವಾರಿ ಗಾಡಿಗಳು. ಅದರಲ್ಲೊಂದು  ಒಂಟೆತ್ತಿನ ಗಾಡಿ. ಅದು ಬಿಳಿ ಎತ್ತೇ ಆಗಿರ್ತಿತ್ತು. ಆ ಗಾಡಿ‌ತುಂಬೆಲ್ಲ ಅಮ್ಮನ ಪೂಜಾ ಸಾಮಗ್ರಿ, ವಸ್ತ್ರ ,ಒಡವೆಗಳೇ ತುಂಬಿರ್ತಿದ್ದವು.

ಇನ್ನುಳಿದ ನಾಕೈದು ಗಾಡಿಗಳ ತುಂಬಾ ಅಮ್ಮನ ಸೇವಾ ಕೈಂಕರ್ಯದವರ ದಿನ ನಿತ್ಯದ ಬದುಕಿಗೆ ಬೇಕಾದ ಕಾಳು – ಕಡಿ, ಉಡುಗೆ – ತೊಡುಗೆ, ಇತರೆ ಸಾಮಾನು ಸರಂಜಾಮುಗಳು. ಒಂದು ಚಕ್ಕಡಿಯಲ್ಲಿ ಪುಟ್ಟ, ಪುಟ್ಟ ಮೊಲ, ಚಿಗರಿ, ನವಿಲು ಮರಿಗಳು. ಈ ಮರಿಗಳ ತಾಯಿ ಪ್ರಾಣಿಗಳು ಎತ್ತಿನ ಗಾಡಿಯಲ್ಲಿರುವ  ತಮ್ಮ ಕಂದಮ್ಮಗಳತ್ತ  ಹಾತೊರೆದು ಓಡೋಡಿ ಬರುತ್ತಿದ್ದವು. ಅವು ಹಾಗೆ ಬರುವುದನ್ನು ನೋಡುವುದೇ ನಮಗೆಲ್ಲ ಪಂಚಪ್ರಾಣದ ಖುಷಿ. ಅವೆಲ್ಲ ಪ್ರಾಣಿಗಳ ಸಾಲು ಮುಗಿದು ಮುರ್ನಾಲ್ಕು ಮಂದಿ ಕಾವಲುಗಾರರೊಡನೆ  ನಾಕೈದು ಜೂಲು ನಾಯಿಗಳು. ಅವೂ ಬೆಳ್ಳಗೆ ಇರ್ತಿದ್ದವು. 

ಶ್ವೇತಾರೂಢ ಡೋಲಿಯ ಅಮ್ಮನನ್ನು  ಥೇಟ್ ಆಕಾಶ ದೇವತೆಯಂತೆಯೋ, ಅಶ್ವಾರೂಢ ಶ್ವೇತಮಾತೆಯಂತೆಯೋ… ಎಂದು ಊರ ಹಿರೀಕರು ಪೂಜನೀಯ  ದನಿಯಲ್ಲಿ ಹೇಳುತ್ತಿದ್ದರೆ… ನಮಗೊಂದೂ ತಿಳಿಯದ ಸಾಕ್ಷಾತ್ ದೇವತೆ ಎಂಬುದು ಮಾತ್ರ ನಾವು ಸಣ್ಣ ಚುಕ್ಕೋಳು  ಮಾ(ತಾ)ಡಿಕೊಳ್ಳುವ ‌ತೀರ್ಪು. ನಮಗೆ ನಾವೇ ಕೊಟ್ಟುಕೊಂಡ ಧರ್ಮರತಾಯಿ ಕುರಿತ ಈ ತೀರ್ಪಿನ ಬಗ್ಗೆ ನಾವು ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡವರಂತೆ ವಾಗ್ವಾದ ಮಾಡುತ್ತಿದ್ದೆವು.

ಅಮ್ಮನವರು ನಮ್ಮೂರ ಸೀಮೆ ಪ್ರವೇಶಿಸುತ್ತಿದ್ದಂತೆ  ನಮ್ಮೂರಿನ ಪಂಚರು, ಚ್ಯಾಜದ ಮನೆಯ ಮುತ್ತೈದೆಯರ ಕಳಸದಾರತಿ, ಬಾಜಾ ಬಜಂತ್ರಿಗಳೊಂದಿಗೆ ಅಮ್ಮನ ಕುದುರೆಯ ಪಾದಗಳಿಗೆ ಮನೆ ಮನೆಗಳಿಂದ ತುಂಬಿದ ಕೊಡಗಳ ನೀರು ನೀಡಿ ಅಮ್ಮನ ಪರಿವಾರವನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಊರ ಹೊರಗಿನ ಹಣಮಂದೇವರ ಗುಡಿಯಲ್ಲಿ ಅಮ್ಮನ ವಾಸ್ತವ್ಯ. ಗುಡಿಯ ಪೌಳಿ ತುಂಬಾ ಗುಡಾರದ ಡೇರಿ ಹಾಕುತಿದ್ದರು.

ಅಮ್ಮನ ಪೂಜಾ ವಿಧಿವಿಧಾನ ಪ್ರಕ್ರಿಯೆಗಳಿಗೆ ವಿಶೇಷ ಸ್ಥಾನಮಾನ. ದಿನಕ್ಕೆರಡು ಬಾರಿ ಪೂಜೆ. ತಾಸುಗಟ್ಟಲೆ ಗಂಟೆ, ಜಾಗಟೆ, ಶಂಕವಾದ್ಯಗಳು ಮೊಳಗುತ್ತಿದ್ದರೆ ಮೊಲ, ಜಿಂಕೆ, ನವಿಲುಗಳು ತನ್ಮಯಗೊಂಡು  ಆಲಿಸುವುದನ್ನು ರೂಢಿಸಿಕೊಂಡಿದ್ದವು. ನನಗೆ ನಾದಮಯಿಗಳಾದ ಆ ಪ್ರಾಣಿಗಳು, ಪೂಜಾ ಪರಿಸರದ ಸುಗಂಧ ಭರಿತ ಧೂಪದ ವಾಸನೆ, ಬಿದಿರ ತಟ್ಟಿಯಿಂದ ಕಟ್ಟಿದ  ಬಿಳಿಗದ್ದುಗೆ ಮೇಲೆ ಕುಂತ ಅಮ್ಮನನ್ನು ನೋಡುವ ಅದಮ್ಯ ವಾಂಛೆ. ಅಮ್ಮ ಗದ್ದುಗೆ ಮೇಲೆ ಕುಂತ ಮೇಲೆ ನಮ್ಮಂಥ ಸಣ್ಣಮಕ್ಕಳಿಗೆ ಕಾರಬಾರಿಗಳು ತಾಯಿಯ ಸನಿಹಕ್ಕೆ ಬಿಡ್ತಿರ್ಲಿಲ್ಲ.

ಆದರೂ ನಾನು ಸನ್ಮಾಡುವ (ನಮಸ್ಕಾರ) ನೆವನ ಮಾಡಿಕೊಂಡು ಅಮ್ಮನನ್ನು  ಹತ್ತಿರದಿಂದ ನೋಡುವ  ಅಪೇಕ್ಷೆ  ಈಡೇರಿಸಿಕೊಳ್ತಿದ್ದೆ. ಹಾಗೆ ಮಾಡಿದ ನಾನು ಸಾಕ್ಷಾತ್  ‘ದೇವತೆ’ಯನ್ನು ನೋಡಿಬಂದೆನೆಂದು ವಾರಗೆಯವರೊಂದಿಗೆ ಬಿಂಕ, ಪ್ರತಿಷ್ಠೆಯಿಂದ ಕೊಚ್ಚಿಕೊಳ್ಳುತ್ತಿದ್ದೆ.  ಆದರೆ ತಾಯಿಯ ದರ್ಶನ ಮಾಡಲು ಹೆಣ್ಮಕ್ಕಳಿಗೆ ಯಾವುದೇ ನಿರ್ಬಂಧಗಳು ಇರ್ತಿರಲಿಲ್ಲ. ಆಮೇಲೆ ಸರತಿಯಂತೆ ದರ್ಶನ. ತದನಂತರ ಪ್ರಸಾದ ವಿನಿಯೋಗ.

ಹೀಗೆ ಸಾತ್ವಿಕ ಸಂಪ್ರದಾಯವೊಂದು ಪರಂಪರೆಯಂತೆ  ಪ್ರತೀವರುಷವೂ ಧರ್ಮರತಾಯಿಯ ಆಗಮನಕ್ಕಾಗಿ ನನ್ನೂರು ಸಮೃದ್ಧ ಪ್ರೀತಿಯಿಂದ ಕಾಯುತ್ತಿತ್ತು. ಆ ಕಾಲದಲ್ಲಿ ಸಂತೃಪ್ತಿಯ ಮಳೆ ಬೆಳೆ ಕೂಡ ಆಗ್ತಿತ್ತು. ಅಂತೆಯೇ ಧರ್ಮರತಾಯಿಯ  ಜೋಳಿಗೆಗೆ ಜೋಳ, ಗೋಧಿ,ಬೇಳೆ ಕಾಳುಗಳು…ಹೀಗೆ ರೈತರು ಬೆಳೆದ ದವಸ ಧಾನ್ಯಗಳನ್ನು ಪ್ರೀತಿಯಿಂದ ಊರವರೆಲ್ಲ ಅರ್ಪಿಸುತ್ತಿದ್ದರು.

ಏನಿಲ್ಲವೆಂದರೂ ಬರೋಬ್ಬರಿ ಒಂದು ತಿಂಗಳಾದರೂ ಧರ್ಮರತಾಯಿ ನಮ್ಮೂರಲ್ಲಿ ಇರ್ತಿದ್ದಳು. ಧರ್ಮರ ತಾಯಿಯ ಆ ಒಂದು ತಿಂಗಳ ಗ್ರಾಮ ವಾಸ್ತವ್ಯದೊಳಗೆ  ಊರಿನ ಎಲ್ಲ ಜನರು  ತಮ್ಮ ಹರಕೆ,  ಬೇಡಿಕೆಗಳನ್ನು  ಈಡೇರಿಸಿಕೊಳ್ಳುತ್ತಿದ್ದರು. ಕೌಟುಂಬಿಕ ಸಮಸ್ಯೆಯು  ಸೇರಿದಂತೆ ಮಳೆ, ಬೆಳೆ, ಜಡ್ಡು, ಜಾಪತ್ರಿ, ಎಲ್ಲವನ್ನು‌ ಅಮ್ಮನ ಬಳಿ ಹೇಳಿಕೊಂಡು ಜೀವ ಹಗುರ ಮಾಡಿಕೊಳ್ಳುತ್ತಿದ್ದರು. ನಾನು ದೊಡ್ಡವನಾಗಿ, ನನಗೆ ಬುದ್ದಿಬಂದ ಮೇಲೆ  ಹೆಗ್ಗಣದೊಡ್ಡಿ, ಸೀತಿಮನಿ ಧರ್ಮರತಾಯಿ ಬಂದಿರುವುದು ನನಗಂತೂ ನೆನಪಿಲ್ಲ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter