ಶಿಶಿರದ ಚಳಿಗೆ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದ ಊರು ನಿದ್ದೆಯ ಮಂಪರಿನಲ್ಲಿತ್ತು. ಸೂರ್ಯ ರಥವೇರಿ ಬರಲು ಇನ್ನೂ ಸಮಯವಿತ್ತು.ಉಳ್ಳವರು ಬೆಚ್ಚನೆಯ ರಗ್ಗಿನೊಳಗೆ ಕನಸು ಕಾಣುತ್ತಿದ್ದರೆ, ಹೊಟ್ಟೆ ಪಾಡಿಗೆ ಬೇಗನೆದ್ದು ಚಳಿಗೆ ನಡುಗುತ್ತ ಕೆಲಸಕ್ಕೆ ಹೋಗುವವರ ತಯಾರಿ ಇನ್ನೊಂದು ಕಡೆ ನಡೆದಿತ್ತು.ದೂರದ ಮಸೀದಿಯಿಂದ ‘ಅಜಾನ್’ ಕೇಳಿಬಂದಾಗ ಮಲಗಿದ್ದ ರಂಗಣ್ಣ ಓ! ಆಗಲೇ ಐದು ಗಂಟೆಯಾಯಿತು ಎಂದು ಕೊಳ್ಳುತ್ತ ಎದ್ದು ಎದುರಿಗಿದ್ದ ದೇವರ ಪಟಕ್ಕೆ ಕೈ ಮುಗಿದು ಇಂದು ವ್ಯಾಪಾರ ಚೆನ್ನಾಗಾಗಲಿ ಎಂದು ಬೇಡಿಕೊಂಡನು. ತನ್ನ ಬೆಳಗಿನ ದಿನಚರಿ ಮುಗಿಸಿ ಅವನ ಆಸ್ತಿಯಾದ ತಳ್ಳುವ ಗಾಡಿಯನ್ನು ಒರೆಸಿ ಒಪ್ಪ ಮಾಡಿದನು.ರಂಗಣ್ಣನದು ತರಕಾರಿ ವ್ಯಾಪಾರ.ಬೆಳಿಗ್ಗೆ ಐದು ಗಂಟೆಗೆ ಎದ್ದು ತರಕಾರಿ ಮಂಡಿಗೆ ಹೋಗಿ ಅಕ್ಕ ಪಕ್ಕದ ಹಳ್ಳಿಗಳಿಂದ ರೈತರು ತಂದ ತರಕಾರಿ,ಸೊಪ್ಪುಗಳನ್ನು ಖರೀದಿಸಿ ತನ್ನ ಝೋಪಡಿಗೆ ಬಂದು ದೊಡ್ಡದಾದ ಕೊತ್ತಂಬರಿ, ಮೆಂತೆ,ಸಬ್ಬಸಿಗೆ,ಪಾಲಕ ,ಹರಿವೆ ಸೊಪ್ಪಿನ ಕಟ್ಟುಗಳನ್ನು ಬಿಚ್ಚಿ ಚಿಕ್ಕಚಿಕ್ಕ ಕಟ್ಟುಗಳನ್ನಾಗಿ ಮಾಡುತ್ತಿದ್ದನು.ಬದನೆಕಾಯಿ,ಬೆಂಡೆಕಾಯಿ,ಹಸಿ ಮೆಣಸಿನಕಾಯಿ,ಹೀರೆಕಾಯಿಗಳನ್ನು ಬೇರೆ ಬೇರೆ ಗುಂಪುಗಳಾಗಿ ನೀಟಾಗಿ ತನ್ನ ತಳ್ಳುವ ಗಾಡಿಯಲ್ಲಿ ಜೋಡಿಸಿ ,ಈರುಳ್ಳಿ, ಬೆಳ್ಳುಳ್ಳಿ ಯನ್ನು ಗಾಡಿಯ ಹಿಂದೆ ಪೇರಿಸಿ ಸರಿಯಾಗಿ ಏಳು ಗಂಟೆಗೆ ವ್ಯಾಪಾರ ಪ್ರಾರಂಭಿಸುತ್ತಿದ್ದನು.ತಾಜಾ ತರಕಾರಿಗಾಗಿ ಕಾಯ್ದು ಕುಳಿತಿರುತಿದ್ದ ಹೆಂಗಳೆಯರು ರಂಗಣ್ಣನ ವಿಶಿಷ್ಟವಾದ ತರಕಾರಿ ,ತರಕಾರಿ ಎಂಬ ಕೂಗು ಕೇಳಿದಾಗ ಮನೆ ಹೊರಗೆ ಬಂದು ಚೌಕಾಶಿ ಮಾಡಿ ತಮಗೆ ಬೇಕಾದ ತರಕಾರಿ ಕೊಂಡು ,ಮಾರನೆಯ ದಿನಕ್ಕೆ ಬೇಕಾದ ತರಕಾರಿ ಲಿಸ್ಟು ಕೊಟ್ಟು ತರಲು ಹೇಳುತ್ತಿದ್ದರು.ಇದು ಪ್ರತಿದಿನವೂ ತಪ್ಪದೆ ಹತ್ತು ವರ್ಷದಿಂದ ನಡೆದುಕೊಂಡು ಬಂದಿತ್ತು.ಈ ದಿನವೂ ಅದೇ ರೀತಿ ತರಕಾರಿ ತರಲು ಗಾಡಿಯನ್ಮು ತಳ್ಳುತ್ತಾ ತರಕಾರಿ ಮಂಡಿಯ ಕಡೆಗೆ ಹೊರಟ.
ಇನ್ನೂ ಕತ್ತಲಿದ್ದರೂ ದಿನನಿತ್ಯದ ದಾರಿಯಾಗಿದ್ದರಿಂದ ರಂಗಣ್ಣನ ಕಾಲು,ಕೈ,ಕಣ್ಣುಗಳು ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಿದ್ದವು.ರಂಗಣ್ಣ ಗಾಡಿಯನ್ನು ತಳ್ಳುತ್ತ ಮುಂದೆ ಹೋದಂತೆ ಅನತಿ ದೂರದಲ್ಲಿದ್ದ ಕಸದ ತೊಟ್ಟಿಯ ಹತ್ತಿರ ಯಾರೋ ಬಗ್ಗಿ ಏನನ್ನೋ ಇಟ್ಟಂತಾಯಿತು.ಬೆಳಗಾದರೆ ಕಂಡ ಕಂಡದ್ದನ್ನು ಎಸೆಯಲು ಆಗುವುದಿಲ್ಲ ಎಂದು ಇನ್ನೂ ಬೆಳಕಾಗುವುದರಲ್ಲಿಯೇ ಕಸ ತಂದು ಸುರಿದು ಹೋಗಿರ ಬೇಕು ಎಂದು ಕೊಳ್ಳುತ್ತಾ ಕಸದ ತೊಟ್ಟಿಯ ಹತ್ತಿರ ಬಂದ .ಇವನು ಬರುವುದರೊಳಗೆ ಆಗಲೇ ಒಂದು ನಾಯಿ ಕಸದ ತೊಟ್ಟಿಯ ಹತ್ತಿರ ಠಳಾಯಿಸುತ್ತಿತ್ತು.ರಂಗಣ್ಣ ಹಚಾ,ಹಚಾ ಎನ್ನುತ್ತ ನಾಯಿಯನ್ನು ಓಡಿಸುತ್ತ ಮುಂದೆ ಬಂದಾಗ ಆಂಯ್ಯ ಆಂಯ್ಯ ಎಂಬ ಮಗುವಿನ ಅಳುವ ಸದ್ದು ಕೇಳಿದಾಗ ಯಾವುದೋ ಬೆಕ್ಕು ಮಗುವಿನ ದ್ವನಿಯಲ್ಲಿ ಅಳುತ್ತಿದೆ ಎಂದು ಕೊಂಡರೂ ಕುತೂಹಲದಿಂದ ರಸ್ತೆಯ ಪಕ್ಕಕ್ಕೆ ಬಗ್ಗಿ ನೋಡಿದಾಗ ,ಅಕಸ್ಮಾತ್ತಾಗಿ ಬಂದ ಕಾರಿನ ಹೆಡ್ ಲೈಟ್ ಬೆಳಕಿನಲ್ಲಿ ಕಂಡು ಬಂದ ನವಜಾತ ಶಿಶುವನ್ನು ನೋಡಿ ದಿಗ್ಭ್ರಮೆಗೊಂಡ. ಒಂದು ಕ್ಷಣ ಏನು ಮಾಡಲು ತೋಚದೆ ನಿಂತರೂ ತಕ್ಷಣ ಮಗುವಿನೆಡೆಗೆ ಧಾವಿಸಿ ಮಗುವನ್ನು ಎತ್ತಿ ತನ್ನ ಹರವಾದ ಎದೆಗೆ ತಬ್ಬಿಕೊಂಡು ತನ್ನ ತಲೆಗೆ ಸುತ್ತಿ ಕೊಂಡಿದ್ದ ರುಮಾಲನ್ಮು ಬಿಚ್ಚಿ ಚಳಿಗೆ ನಡುಗುತ್ತಿದ್ದ ಮಗುವಿಗೆ ಹೊದಿಸಿದಾಗ ಬೆಚ್ಚನೆಯ ಅಪ್ಪುಗೆಯಲ್ಲಿ ಮಗು ಮೌನವಾಯಿತು.ಕೂಡಲೇ ಇನ್ನೊಂದು ಕೈಯಲ್ಲಿ ಗಾಡಿಯನ್ನು ಮನೆಯತ್ತ ತಿರುಗಿಸಿ ಬೇಗ ಬೇಗನೆ ಮನೆಗೆ ಬಂದು ಪಕ್ಕದ ಮನೆಯ ರಾಜೀವನ ಪತ್ನಿ ಗೌರಿಯನ್ನು ಕೂಗುತ್ತ ಮನೆ ಬಾಗಿಲು ಬಡಿದನು.
ಇನ್ನೋ ನಿದ್ದೆಯ ಮಂಪರಿನಲ್ಲಿದ್ದ ಗೌರಿ ಇನ್ನೂ ಬೆಳಕೇ ಆಗಿಲ್ಲ ,ಅದ್ಯಾರು ಬಾಗಿಲು ಬಾರಸ್ತಿದಾರೆ ಎಂದು ಕೊಳ್ಳುತ್ತ ಬಾಗಿಲು ತೆಗೆದಳು. ಗೌರಿಯನ್ನು ನೋಡುತ್ತಲೇ ರಂಗಣ್ಣ….ಗೌರಕ್ಕಾ ಯಾರೋ ಈ ಕೂಸಿನ್ನ ಕಸ ಚೆಲ್ಲೋ ಡಬ್ಬಿ ಕಡೆ ಮಲಗಿಸಿ ಹೋಗಿದ್ರು,ನಾನು ಮಂಡಿ ಕಡೆ ಹೊಂಟಾವ ಕೂಸಿನ ನೋಡಿ ತೊಗೊಂಡ ಬಂದೇನಿ ಇಲ್ಲದಿದ್ರ ಅಲ್ಲೆ ಇದ್ದ ನಾಯಿ ಬಾಯಿಗೆ ಈ ಕೂಸು ಬೀಳತಿತ್ತು.ನನಗ ಏನ ಮಾಡ ಬೇಕಂತ ತಿಳಿವಲ್ದ ಎಂದಾಗ ಗೌರಿಯ ನಿದ್ದೆಯ ಮಂಪರು ಹೋಗಿ ನಿಚ್ವಳವಾದಳು.ಹಾಂ! ರಂಗಣ್ಣ ಇದೇನಿದು ಈಗ ಹುಟ್ಟಿದ ಕೂಸಿನ್ನ ಎತಗೊಂಡ ಬಂದಿಯಲ್ಲಾ ,ಇರ್ಲಿ ಮೊದ್ಲ ಒಳಗ ಬಾ ಥಂಡಿ ಭಾಳ ಐತಿ ಎಂದು ರಂಗಣ್ಣನನ್ನು ಒಳ ಕರೆದು ಬಾಗಿಲು ಹಾಕಿದಳು.ಒಳಗೆ ದೀಪದ ಬೆಳಕಿನಲ್ಲಿ ಮಗುವನ್ನು ನೋಡಿದಾಗ ಸುಂದರವಾದ,ನೀಳ ಮೂಗಿನ ,ತಲೆ ತುಂಬ ಕೂದಲಿನ ,ಶ್ಯಾಮಲ ವರ್ಣದ ಹೆಣ್ಣು ಕೂಸಾಗಿತ್ತು. ಅಷ್ಟರಲ್ಲಿ ಬಹುಶಃ ಹಸಿದ ಕೂಸು ಅಳತೊಡಗಿದಾಗ ಎಚ್ಚೆತ್ತ ಗೌರಕ್ಕ ಬೆಳಿಗ್ಗೆ ಗಂಡ ಕೆಲಸಕ್ಕೆ ಹೋಗುವಾಗ ಚಹಾ ಮಾಡಿಕೊಡಲು ಇಟ್ಟಿದ್ದ ಅರ್ಧ ಕಪ್ಪ ಹಾಲನ್ನು ಬೆಚ್ಚಗೆ ಮಾಡಿ ರಂಗಣ್ಣನ ಕೈಯಲ್ಲಿದ್ದ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು ದೇವರ ಮುಂದೆ ಶುಚಿ ಮಾಡಿ ಇಟ್ಟಿದ್ದ ಅರಳೆಯನ್ನು ಹಾಲಿನಲ್ಲಿ ಅದ್ದಿ ಮಗುವಿನ ಬಾಯಿಗೆ ಹಿಂಡಿದಾಗ ಹಸಿದ ಮಗು ಗುಟುಕರಿಸಿದಾಗ ಮನುಷ್ಯನಿಗೆ ಹಸಿವು ಎಷ್ಟು ಕಷ್ಟದಲ್ಲಾ ಎನಿಸಿತು ರಂಗಣ್ಣ,ಗೌರಿಗೆ. ಇಷ್ಟೆಲ್ಲಾ ಆಗುವಷ್ಟರಲ್ಲಿ ಮಲಗಿದ್ದ ಗೌರಿ ಗಂಡ ರಾಜೀವ ಹಾಗೂ ಅವರ ಆರು ವರ್ಷ ದ ಮಗ ಸುಹಾಸ ಕಣ್ಣುಜ್ಜಿ ಕೊಳ್ಳುತ್ತಾ ಎದ್ದು ಬಂದು ಗೌರಿಯ ತೊಡೆಯ ಮೇಲಿದ್ದ ಎಳೆ ಬೊಮ್ಮಟ್ಟೆಯನ್ನು ನೋಡಿ ಕಣ್ಣರಳಿಸಿದರು.ಗೌರಿ ಎಲ್ಲವನ್ನೂ ಗಂಡನಿಗೆ ವಿವರಿಸಿದಾಗ ರಾಜೀವ…..ರಂಗಣ್ಣ ಆ ಟೈಮಿಗೆ ಅಲ್ಲಿಗೆ ಹೋಗಿದ್ದಿಲ್ಲಾ ಅಂದಿದ್ರ,ಇಷ್ಟೊತ್ತಿಗೆ ಬೀದಿನಾಯಿಗೋಳ ಕೈಯ್ಯಾಗ ಸಿಕ್ಕು ಕೂಸು ಪಚಡಿಯಾಗಿ ಹೋಗ್ತಿತ್ತು ಎಂದಾಗ ಗೌರಿ ….ಹೌದು ಖರೇ ಅದ ನೋಡ್ರಿ ಕೂಸಿನ ಆಯುಷ್ಯ ಗಟ್ಟಿ ಇದ್ದಿದ್ದಕ್ಕ ರಂಗಣ್ಣನ ಕೈಯ್ಯಾಗ ಸಿಕ್ಕೇತಿ.ಇಂಥಾ ಮಾಟನ್ನ ಕೂಸಿನ್ನ ಒಗದ ಹೋಗ ಬೇಕಂದ್ರ ಅಕಿ ಎಂಥಾ ಕಠೋರ ಮನಸ್ಸಿನ ತಾಯಿ ಆಗಿರ ಬೇಕು ನೋಡ್ರಿ ಎಂದು ಮಾತನಾಡುತ್ತಲೇ ರಂಗಣ್ಣ ಕಟ್ಟಿದ್ದ ಜೋಲಿ ಒಳಗೆ ಮಗುವನ್ನು ಮಲಗಿಸಿ ತೂಗಿದಾಗ ಮಗು ಬೆಚ್ವಗಿನ ಜೋಲಿಯಲ್ಲಿ ನಿದ್ರಿಸಿತು.
ಈಗ ಆರು ತಿಂಗಳ ಕೆಳಗೆ ಹೆಣ್ಣು ಮಗುವಿಗೆ ಜನ್ಮ ಕೊಟ್ಟು ,ಕಾಮಾಲೆಯಾಗಿ ಹುಟ್ಟಿದ ವಾರದೊಳಗೆ ಭೂಮಿಯ ಋಣ ಕಳೆದುಕೊಂಡು ತೀರಿ ಹೋಗಿದ್ದ ಹೆಣ್ಣು ಮಗುವಿನ ನೆನಪಾಗಿ ಗೌರಿಯ ಕಣ್ಣುಗಳು ತುಂಬಿ ಬಂದಿದ್ದವು.ರಂಗಣ್ಣ ಗೌರಿಗೆ…ಗೌರಕ್ಕಾ ಕೂಸು ಮಕ್ಕೊಂಡೇತಿ ನಾನು ಲಗೂನ ಹೋಗಿ ಕೂಸಿಗೆ ಹಾಲು ತೊಗೊಂಡ ಬರ್ತೇನಿ ಎಂದು ಹೇಳುತ್ತಾ ಹೊರಗೋಡಿದ.ಗೌರಿ ತನ್ನ ದಿನದ ಕೆಲಸದಲ್ಲಿ ವ್ಯಸ್ತಳಾದಳು.ಪೌರ ಕಾರ್ಮಿಕನಾಗಿದ್ದ ರಾಜೀವ ಉಳಿದ ಹಾಲಿನಲ್ಲಿ ಗೌರಿ ಮಾಡಿಕೊಟ್ಟ ಚಹಾ ಕುಡಿದು ತನ್ನ ಕೆಲಸಕ್ಕೆಹೊರಟ.ಸುಹಾಸ ಮಗುವಿನ ಜೋಲಿ ತೂಗುತ್ತ ತನಗೆ ತಿಳಿದ ಹಾಡು ಹಾಡ ತೊಡಗಿದ.
ಮಗುವಿಗೆ ತಂದ ಹಾಲನ್ನು ಗೌರಿಗೆ ಕೊಟ್ಟ ರಂಗಣ್ಣ …ಅತ್ಯಂತ ಸಂಕೋಚದಿಂದ ಗೌರಕ್ಕಾ ಹಾಲು ತಂದೇನಿ ಕೂಸಿಗೆ ಕುಡಸೂದು ನಿನ್ನ ಜವಾಬ್ದಾರಿ.ಕೂಸಿಗೆ ಬೇಕಾಗೋ ಅರಿವಿ,ಕುಲಾಯಿ,ದುಪಟಿ ಎಲ್ಲಾ ಆಮೇಲೆ ಬಜಾರಿಗೆ ಹೋಗಿ ತರ್ತೇನಿ ,ಮತ್ತ,ಮತ್ತ ಎಂದು ಉಗುಳು ನುಂಗುತ್ತ ನಿಂತಾಗ ,ಗೌರಿ ಏನಾತು ರಂಗಣ್ಣ ಏನೋ ಹೇಳ ಬೇಕಂತಿ ಏನದು ಹೇಳು ಎಂದಾಗ ..ಏನಿಲ್ಲ ಗೌರಕ್ಕಾ ನೀನು ಒಂದ ಎರಡ ದಿನ ಈ ಕೂಸಿನ ಜವಾಬ್ದಾರಿ ತೊಗೋ ಬೇಕ ನೋಡವ್ವಾ,ನಾನು ಹಳ್ಳಿಗೆ ಹೋಗಿ ಕೂಸಿನ್ನ ನೋಡ ಕೊಳ್ಳಾಕ ನಮ್ಮ ಚಿಗವ್ವನ್ನ ಕರ್ಕೊಂಡ ಬರ್ತೇನಿ,ಅಲ್ಲೀತಂಕಾ ಕೂಸು ನಿನ್ನ ಹತ್ರ ಇರ್ಲಿ ಅಂತ .
ಇದನ್ನು ಕೇಳಿದ ಗೌರಿ…ನಿನಗೇನ ತಲಿ,ಗಿಲಿ ಕೆಟ್ಟೇತೇನ ಇಂಥಾ ಸಣ್ಣ ಕೂಸಿನ್ನ ನೋಡಕೊಳ್ಳೋದು,ಬೆಳೆಸೋದ ಅಂದ್ರ ಸುಮ್ನ ಆಕ್ಕೇತೇನು ಸುಮ್ಮನ ಪೋಲೀಸರಿಗೆ ತಿಳಿಸಿದ್ರ ಅವ್ರು ಬಂದ ಕೂಸಿನ್ನ ಯಾವದರೆ ಅನಾಥಾಶ್ರಮಕ್ಕ ಸೇರಸ್ತಾರ.ಇಂಥಾ ಜವಾಬ್ದಾರಿ ಯಾಕ ಬೇಕು ನಿನಗ ಇನ್ನೂ ನೀನು ಮದುವಿನ ಮಾಡಿಕೊಂಡಿಲ್ಲ ಅಂಥಾದ್ರಾಗ ಕೂಸಿನ್ನ ಸಂಭಾಳಸಾಕ ಹೊಂಟಿಯಲ್ಲ ಈ ಹುಚ್ಚಾಟೆಲ್ಲ ಬಿಟ್ಟ ಬಿಡು ಎಂದಳು.
ಆಗ ರಂಗಣ್ಣ ಮದುವಿ ಆಗೋದು ಬಿಡೋದು ಮುಂದಿನ ಮಾತು ಏನೋ ನನಗ ಈ ಕೂಸಿನ ಮ್ಯಾಲ ಭಾಳ ಪ್ರೀತಿ ಆಗೇದ,ಇದನ್ನ ನಾನ ಬೆಳಸ ಬೇಕು ಅನ್ನೋ ಮನಸ್ಸಾಗೇತಿ. ನೋಡೋಣ ಮುಂದ ಏನಾಕ್ಕೇತೋ ಈಗ ನೀ ಹೂಂ ಅಂದ್ರ ಹಳ್ಳಿಗೆ ಹೋಗಿ ಬರ್ತೇನಿ ಇಲ್ಲಾ ಅಂದ್ರ ಕೂಸಿನ್ನೂ ಉಡ್ಯಾಗ ಇಟಗೊಂಡ ಹೊಕ್ಕೇನಿ ಅಂದಾಗ ಗೌರಿ ಆತ ಬಿಡಪ್ಪಾ ರಂಗಣ್ಣ ನಾನು ಕೂಸಿನ್ನ ನೋಡಂಗಿಲ್ಲಾ ಅಂತ ಹೇಳಲಿಲ್ಲಾ,ನೀನು ಕೂಸಿನ್ನ ಜವಾಬ್ದಾರಿ ಹೆಂಗ ತೊಗೋತಿ ಅಂತ ನನ್ನ ಕಾಳಜಿ ಅಷ್ಟ ಎಂದು,ಈಗೇನ ಕೂಸಿಗೆ ಅರಿವಿ,ಗಿರವಿ ತರಬ್ಯಾಡ,ಸುಹಾಸನವು ಅರಿವಿಗೋಳ ಅದಾವ ಅದನ್ನ ಹಾಕ್ತೇನಿ ನೀ ಕಾಳಜಿ ಮಾಡ ಬ್ಯಾಡ ಹಳ್ಳಿಗೆ ಹೋಗಿ ಎರಡ ದಿನದಾಗ ಬಾ ಎಂದಾಗ ರಂಗಣ್ಣ ಗೌರಿಯ ಕೈ ಹಿಡಿದು ಕಣ್ಣಿಗೊತ್ತಿಕೊಂಡು ನಿನ್ನ ಉಪಕಾರಾನ್ನ ನಾ ಮರೆಯಂಗಿಲ್ಲ ಎಂದನು.
ಆ ದಿನವೇ ಹಳ್ಳಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗಿ, ರಂಗಣ್ಣ ಚಿಕ್ಕಮ್ಮನಿಗೆ ಎಲ್ಲ ವಿಷಯ ತಿಳಿಸಿದಾಗ ಚಿಕ್ಕಮ್ಮನದೂ ಗೌರಿಯ ಅಭಿಪ್ರಾಯವೇ ಆಗಿತ್ತು.ಆಗ ತಾನೆ ಹುಟ್ಟಿದ್ದ ಎಳೆ ಬೊಮ್ಮಟ್ಟೆಯನ್ನು ತಾಯಿ ಇಲ್ಲದೆ ಸಾಕುವುದು ತುಂಬಾ ಕಷ್ಟ ಈ ಹುಚ್ಚು ವ್ಯವಹಾರ ಬೇಡ ಎಂದಾಗ,ರಂಗಣ್ಣ ….ಚಿಗವ್ವಾ ನೀ ಏನರೆ ಅನ್ನು ,ನನಗೇನೋ ಈ ಕೂಸು ನನಗ ಸಿಕ್ಕೇತಿ ಅಂದ ಮ್ಯಾಲೆ ಭಗವಂತ ಇದರ ಹಿಂದ ಏನರ ಒಂದು ಕಾರಣಾ ಇಟ್ಟ ನನಗ ಸಿಗೋ ಹಂಗ ಮಾಡ್ಯಾನ ಅಂತ ನನಗ ಅನಸತೈತಿ.ನೋಡವ್ವಾ ನಿನಗೂ ಯಾರೂ ಇಲ್ಲ ನೀನು ನನ್ನ ಮನಿಗೆ ಬಂದು ಈ ಕೂಸಿನ ಜವಾಬ್ದಾರಿ ತೊಗೊಂಡ್ರ ನನಗ ಸಮಾಧಾನ ಆಕ್ಕೇತಿ.ನೀ ಇಲ್ಲಾ ಅಂದ್ರ ನಾ ಮತ್ತ ಬ್ಯಾರೆ ಏನರ ವ್ಯವಸ್ಥಾ ಮಾಡತೇನಿ ಎಂದಾಗ , ರಂಗಣ್ಣನ ಸ್ವಭಾವದ ಪರಿಚಯವಿದ್ದ ಶಾಂತಮ್ಮ ,ತನಗೂ ಯಾರೂ ಇಲ್ಲ ಆ ಕೂಸಿನ ಕಾರಣದಿಂದ ತನ್ನ ಮನಸ್ಸಿಗೆ ಸಮಾಧಾನ ಸಿಕ್ರ ಏನ ತಪ್ಪೈತಿ ಅಂತ ಯೋಚಿಸಿ ಬರಲು ಒಪ್ಪಿಕೊಂಡಾಗ ರಂಗಣ್ಣನ ಮುಖದಲ್ಲಿ ವಿಜಯದ ನಗೆ ಮೂಡುತ್ತದೆ.
ಮಾರನೆಯ ದಿನ ಚಿಕ್ಕಮ್ಮನ ಜೋಪಡಿಯ ಮನೆಗೆ ,ಹೆಸರಿಗೆ ಒಂದು ಚಿಕ್ಕ ಬೀಗ ಹಾಕಿ ಅವಳ ಸೀರೆ ಮತ್ತಿತರ ಸಾಮಾನಿನ ಒಂದು ಪುಟ್ಟ ಗಂಟನ್ನು ಹೊತ್ತು ಬಸ್ಸು ಹತ್ತಿ ಊರು ಸೇರಿದಾಗ ರಾತ್ರಿ ಹನ್ನೊಂದು ಗಂಟೆ.ದಾರಿಯಲ್ಲೇ ಒಂದು ಚಿಕ್ಕ ಹೋಟೇಲಿನಲ್ಲಿ ಊಟ ಮಾಡಿ ಮನೆ ಸೇರಿದಾಗ ಹನ್ನೆರಡು ಗಂಟೆಯಾಗಿದ್ದರಿಂದ ಗೌರಿಯನ್ನು ಎಬ್ಬಿಸಿ ತೊಂದರೆ ಕೊಡಲಾರದೆ ಸುಮ್ಮನೆ ಮಲಗಿ ನಿದ್ರಿಸುತ್ತಾರೆ ರಂಗಣ್ಣ ಹಾಗೂ ಶಾಂತಮ್ಮ. ಬೆಳಿಗ್ಗೆ ಆರು ಗಂಟೆಗೆ ಎದ್ದ ರಂಗಣ್ಣನಿಗೆ ಮಗುವನ್ನು ನೋಡುವ ಆತುರ.ಆದರೆ ಗೌರಕ್ಕನ ಮನೆ ಬಾಗಿಲು ತೆರೆದಿರದ ಕಾರಣ ಚಹಾಕ್ಕೆ ಹಾಲಾದರೂ ತರೋಣ ಎಂದು ಅಂಗಡಿಗೆ ಹೋಗಿ ತಿರುಗಿ ಬಂದಾಗ ಗೌರಿಯ ಮನೆಯಿಂದ ಮಗುವಿನ ಅಳು ಕೇಳಿ, ತಡೆಯಲಾಗದೆ ಗೌರಕ್ಕ,ಗೌರಕ್ಕಾ ಎಂದು ಮನೆ ಬಾಗಿಲು ಬಡಿದಾಗ ಗೌರಿಯೇ ಬಂದು ಬಾಗಿಲು ತೆರೆದಾಗ ,ಆಶ್ಚರ್ಯದಿಂದ ….ಅಯ್ಯ ನೀನು ನಾಳೆ ಬರ್ತಿ ಅಂತ ಅನಕೊಂಡಿದ್ದೆ ,ಆಗ್ಲೆ ಬಂದ ಬಿಟ್ಟಿಯಲ್ಲ ಎಂದಾಗ ರಂಗಣ್ಣ… ಚಿಗವ್ವ ಬರಾಕ ಹೂಂ ಅಂದ್ಲು ಇನ್ನ ನಂದೇನ ಅಲ್ಲೆ ಕೆಲಸ ಅಂತ ನಿನ್ನೇನ ಹೊಂಟ ಬಂದ್ವಿ ಎಂದು ಹೇಳುತ್ತಾ ,ಕೂಸಿಗೆ ಹಾಲ ತಂದೇನಿ ತೊಗೋ ಗೌರಕ್ಕಾ ಎಂದು ಹಾಲಿನ ಪಾಕೀಟು ಕೊಡುತ್ತಾನೆ.ಆಗ ಗೌರಿ….ನಿಮ್ಮ ಚಿಗವ್ವ ಎದ್ದಿದ್ರ ಇಲ್ಲೆ ಕಕ್ರೊಂಡ ಬಾ ಚಾ ಮಾಡ್ತೇನಿ ಎನ್ನುತ್ತಾ ಮಗುವನ್ನು ರಂಗಣ್ಣನ ಕೈಗಿತ್ತಳು.ರಂಗಣ್ಣನಿಗೆ ಮಗುವನ್ನು ನೋಡುತ್ತಿದ್ದಂತೆ ಅಕ್ಕರೆ ಉಕ್ಕಿ ಬಂದು ಮೆಲ್ಲಗೆ ಮೃದು ಗಲ್ಲಕ್ಕೆ ಮುತ್ತು ಕೊಟ್ಟು ತನ್ನ ಹೃದಯಕ್ಕೆ ಮಗುವನ್ನು ಅಪ್ಪಿಕೊಂಡಾಗ ಅರಿವಿಲ್ಲದೆ ಅವನ ಕಣ್ಣಿನಿಂದ ನೀರು ತೊಟ್ಟಿಕ್ಕಿ ಮಗುವಿನ ಕೆನ್ನೆಯ ಮೇಲೆ ಬಿದ್ದಾಗ ಮಗುವಿನ ಮುಖದ ಮೇಲೊಂದು ಕಿರು ನಗೆ ಮೂಡಿ ಮಾಯವಾಯಿತು.ಯಾವ ಜನ್ಮದ ಋಣಾನುಬಂಧವೋ ಏನೋ ರಂಗಣ್ಣ ಮತ್ತು ಮಗು ವನ್ನು ಬಂಧಿಸಿತ್ತು.
ಮಗುವಿಗೆ ಆ ದಿನ ಪುಟ್ಟ ಸುಹಾಸ್ ಸ್ಪೂರ್ತಿ, ಸ್ಪೂರ್ತಿ ಎಂದು ಕರೆಯುತ್ತ ಆಟವಾಡಿಸ ತೊಡಗಿದಾಗ ಅಲ್ಲೆ ಇದ್ದ ರಂಗಣ್ಣನ ಕಿವಿಗಳು ನಿಮಿರಿದವು.ಹೌದಲ್ಲಾ! ಮಗುವಿಗೆ ಹೆಸರಿಡಬೇಕೆಂಬುದನ್ನೇ ಮರೆತಿದ್ದೆನಲ್ಲಾ ಎನ್ನುತ್ತಾ ಗೌರಕ್ಕಾ….ನೋಡ ನಿನ್ನ ಮಗ ಸುಹಾಸ ತನ್ನ ತಂಗೀಗೆ ಎಷ್ಟ ಚಂದನ್ನ ಹೆಸರ ಇಟ್ಟಾನ ನೋಡ ಎನ್ನುತ್ತಾ ನಗ ತೊಡಗಿದಾಗ ಗೌರಿಯ ನಗುವೂ ಅವನೊಂದಿಗೆ ಬೆರೆತಿತ್ತು.ಚಿಕ್ಕಮ್ಮ ಹಾಗೂ ಗೌರಿಯ ಆರೈಕೆಯಲ್ಲಿ ಮಗು ಹುಣ್ಣಿಮೆಯ ಚಂದ್ರನಂತೆ ಬೆಳೆಯ ತೊಡಗಿತು. ರಂಗಣ್ಣ ಮಗಳು ಸ್ಪೂರ್ತಿಗಾಗಿ ತರಕಾರಿ ವ್ಯಾಪಾರದ ಜೊತೆ ಬೇರೆ ಕೆಲಸಗಳನ್ನು ಮಾಡುತ್ತ ಹಣ ಗಳಿಕೆಯ ದಾರಿ ಹುಡುಕ ತೊಡಗಿದ.ಎಲ್ಲೇ ಯಾವುದೇ ಕೆಲಸವಿರಲಿ ದುಡ್ಡು ಸಿಗುವುದು ಎಂದಾಕ್ಷಣ ಎಷ್ಟೇ ಕಠಿಣ ಕೆಲಸವಿದ್ದರೂ ಮಾಡಿ ಸಿಕ್ಕ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡುತ್ತಿದ್ದ.ರಾತ್ರಿ ಮನೆಗೆ ಬಂದಾಗ ಅವನನ್ನು ನೋಡಿ ಓಡಿ ಬಂದು ಪ್ಪಾ,ಪ್ಪಾಎನುತ ಅಪ್ಪಿಕೊಳ್ಳುವ ಸ್ಪೂರ್ತಿ ಯ ಆಲಿಂಗನದಿಂದ ರಂಗಣ್ಣನ ಆಯಾಸವೆಲ್ಲ ಪರಿಹಾರವಾಗುತ್ತಿತ್ತು.ಶಾಂತಮ್ಮ ರಂಗಣ್ಣನಿಗೆ ಮದುವೆಯಾಗಲು ಒತ್ತಾಯಿಸಿದಾಗ ರಂಗಣ್ಣ ….ಚಿಗವ್ವಾ ಮದುವಿ ಬಗ್ಗೆ ನನಗ ಅಷ್ಟು ಆಸಕ್ತಿ ಇದ್ದಿಲ್ಲ. ಏನೋ ಮುಂದ ನೋಡಿದರಾತು ಅನ್ಕೊಂಡಿದ್ದೆ ಆದರ ನನ್ನ ಮಗಳು ಸ್ಪೂರ್ತಿ ಬಂದ ಮ್ಯಾಲೆ ನನಗ ಮದುವಿ ಬಗ್ಗೆ ಇದ್ದ ಅಲ್ಪ,ಸ್ವಲ್ಪ ಆಸಕ್ತಿ ನೂ ಹೋಗಿ ಈಗ ನನ್ನ ತಲ್ಯಾಗ ಬರೇ ಸ್ಪೂರ್ತಿ ಭವಿಷ್ಯದ ಬಗ್ಗೇನ ಚಿಂತಿ ನೋಡವ್ವಾ.ಸ್ಪೂರ್ತಿ ಬಹಳಷ್ಟ ಓದಿ ದೊಡ್ಡ ಸಾಹೇಬ ಆಗಬೇಕನ್ನುದss ನನ್ನ ಆಶಾ ನೋಡವ್ವ ಎಂದಾಗ ಶಾಂತಮ್ಮ ನಿರುತ್ತರಾದರು.
ನೋಡ ನೋಡುತ್ತ ತಪ್ಪು ಹೆಜ್ಜೆಗಳನ್ನಿಡುತ್ತ ತೊದಲು ಮಾತುಗಳನ್ನಾಡುತ್ತ ಸ್ಪೂರ್ತಿ ಮೂರು ವರ್ಷದವಳಾದಾಗ ಹತ್ತಿರದ ಬಾಲವಾಡಿಗೆ ಸೇರಿಸಿದ ರಂಗಣ್ಣ ಅವಳ ಬಾಲ ಭಾಷೆಯಲ್ಲಿ ಶಾಲೆಯಲ್ಲಿ ಕಲಿಸಿದ ಹಾಡುಗಳನ್ನು,ಶಾಲೆಯ ವಿಷಯಗಳನ್ನು ಹೇಳಿದಾಗ ಪ್ರೀತಿಯಿಂದ ಅಪ್ಪಿ ಮುದ್ದಾಡುತ್ತಿದ್ದ.ಒಂದನೇ ಕ್ಲಾಸಿಗೆ ಹತ್ತಿರದಲ್ಲಿದ್ದ ಸರಕಾರಿ ಶಾಲೆಗೆ ಸೇರಿಸಿ ಬಂದಿದ್ದ.ಮೊದಲಿನಿಂದಲೂ ಚೂಟಿಯಾಗಿದ್ದ ಸ್ಪೂರ್ತಿ ಶಾಲೆಯಲ್ಲಿ ಕಲಿಸಿದ ಪಾಠ,ಹಾಡು,ಇತರ ವಿಷಯಗಳನ್ನು ಆಸಕ್ತಿಯಿಂದ ಆಲಿಸಿ ಟೀಚರಗಳ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಿ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಳು.
ಸ್ಪೂರ್ತಿಯ ಸರಕಾರಿ ಶಾಲೆಯಲ್ಲಿ ಅಕ್ಕಪಕ್ಕದ ಕೊಳಗೇರಿಯ ಮಕ್ಕಳೇ ತುಂಬಿದ್ದರು.ಆ ಮಕ್ಕಳಿಗೆ ಓದುವುದಕ್ಕಿಂತಲೂ ಮಧ್ಯಾನ್ಹದ ಬಿಸಿಯೂಟದ ಮೇಲೇ ಕಣ್ಣು.ಎಲ್ಲೋ ಕೆಲವು ಮಕ್ಕಳು ಪಾಠದ ಕಡೆಗೆ ಗಮನ ಕೊಟ್ಟರೆ ಉಳಿದವರು ಗಲಾಟೆ,ಜಗಳ,ನಿದ್ದೆಯಲ್ಲಿ ಕಾಲ ಕಳೆಯುತ್ತಿದ್ದರು.ಟೀಚರ್ ಗಳಿಗೆ ಮಕ್ಕಳಿಗೆ ಕಲಿಸುವುದರ ಜೊತೆಗೆ ಬಿಸಿಯೂಟದ ಜವಾಬ್ದಾರಿ ಬೇರೆ.ಇಂಥ ವಾತಾವರಣದಲ್ಲೂ ಸ್ಪೂರ್ತಿಯ ಗಮನವೆಲ್ಲ ಓದಿನ ಕಡೆಗೇ ಇರುತ್ತಿತ್ತು.ತನಗೆ ತಿಳಿಯದ ವಿಷಯದ ಬಗ್ಗೆ ರಾಮಣ್ಣನನ್ನು ಕೇಳಿದಾಗ ಶಾಲೆ ಕಲಿಯದ ರಾಮಣ್ಣ ಪೆಚ್ಚಾಗುತ್ತಿದ್ದ.ಸ್ಪೂರ್ತಿಗೆ ಸಮಝಾಯಿಸಿ ಹೇಳುವಾಗ ಅವಳ ಪ್ರಶ್ನೆಗಳಿಗೆ ಉತ್ತರ ಹೇಳಲಾಗದೆ ತಡಬಡಿಸುತ್ತಿದ್ದ. ಆಗ ಚಿಕ್ಕ ಸ್ಫೂರ್ತಿ ಅಪ್ಪಾ….ನೀ ಇಷ್ಟ ದೊಡ್ಡಾಂವ ಇದ್ರೂ ನಿನಗೇನೂ ಗೊತ್ತೆ ಇಲ್ಲ ಎಂದು ಚಪ್ಪಾಳೆ ತಟ್ಟಿ ನಕ್ಕಾಗ ,ಶಾಲೆ ಕಲಿಯದ ತನ್ನ ಪರಿಸ್ಥಿತಿ ಬಗ್ಗೆ ಅವನಿಗೆ ನಾಚಿಕೆಯಾಗುತ್ತಿತ್ತು.ಅಂಥ ಸಮಯದಲ್ಲಿ ಸ್ಪೂರ್ತಿಯನ್ನು ಬಿಗಿದಪ್ಪಿ ….ಹೌದ ಪುಟ್ಟಾ ನಾನು ಸಾಲಿ ಕಲೀದ ಭಾಳ ತಪ್ಪ ಮಾಡ್ದೆ,ನಮ್ಮವ್ವ,ಅಪ್ಪಾ ಸಾಲಿ ಕಲಿಸಾಕ ಎಷ್ಟ ಪ್ರಯತ್ನ ಪಟ್ಟರೂ ನಾನು ಸಾಲಿಗೆ ಹೋಗಲೇ ಇಲ್ಲ ,ಆದ್ರ ನಿನಗ ಮಾತ್ರ ಭಾಳ ಸಾಲಿ ಕಲಸ್ತೇನಿ,ನೀ ಎಷ್ಟ ಓದತಿ ಓದ ನಾ ಕಲಸಾಕ ಗಟ್ಟಿ ಅದೇನಿ… ಅಂತ ಮಗಳನ್ನ ಲಲ್ಲೆಗರೆಯುತ್ತಿದ್ದ.
ಋತುಗಳು ಬದಲಾದಂತೆ ಶ್ರುತಿಯಲ್ಲೂ ಬದಲಾವಣೆಗಳಾದವು.ಕಲಿಯುವ ಅವಳ ಆಸಕ್ತಿಗೆ ರೆಕ್ಕೆ,ಪುಕ್ಕಗಳು ಮೂಡಿದ್ದವು.ಸರಕಾರಿ ಶಾಲೆಯಲ್ಲಿಯೇ ಕಲಿಯುತ್ತ ಮೆಟ್ರಿಕ್ ಪರೀಕ್ಷೆ ಯಲ್ಲಿ ರಾಜ್ಯಕ್ಜೆ ಮೊದಲ ಸ್ಥಾನ ಪಡೆದಾಗ ,ನಾಡಿನ ಎಲ್ಲ ಪೇಪರಿನಲ್ಲಿಯೂ’ ಕೊಳೆಗೇರಿಯ ಕನ್ಯೆ ರಾಜ್ಯಕ್ಕೆ ಟಾಪರ್ ‘ಎಂಬ ಶೀರ್ಷಿಕೆ ಯ ಅಡಿಯಲ್ಲಿ ಅವಳ ಯಶೋಗಾತೆ ಪ್ರಕಟವಾದಾಗ ದಿನ ಕಳೆಯುವಷ್ಟರಲ್ಲಿ ರಾಜ್ಯಾದ್ಯಂತ ಪ್ರಸಿದ್ದ ಳಾಗಿದ್ದಳು.ಅವಳ ಇಂಟವ್ಯೂಗಳು ಪೇಪರಿನಲ್ಲಿ, ಟಿ.ವಿಯಲ್ಲಿ ಬಿತ್ತರಗೊಂಡವು.ಇಂಟರ್ವ್ಯೂನಲ್ಲಿ ಅವಳ ಮುಂದಿನ ಗುರಿ ಬಗ್ಗೆ ಕೇಳಿದಾಗ… ಐ.ಎ.ಎಸ್ ಮಾಡುವುದೇ ನನ್ನ ಗುರಿ ಎಂದು ಹೇಳಿದಳು.ಮಗಳ ಈ ಸಾಧನೆಯಿಂದ ರಾಮಣ್ಣನಿಗೆ ಸ್ವರ್ಗ ಕೈಗೆಟಕುವ ಅಂತರದಲ್ಲಿತ್ತು.ಏನೇ ತೊಂದರೆ ಯಾದರೂ ಅವಳಿಷ್ಟದ ಶಿಕ್ಷಣ ಕೊಡಿಸ ಬೇಕು ಎಂಬುದು ರಾಮಣ್ಣನ ಇರಾದೆಯಾಗಿತ್ತು.ಸ್ಪೂರ್ತಿ ಯ ಪ್ರತಿಭೆಗೆ ಮೆಚ್ಚಿ ಕೆಲವರು ಅವಳ ಮುಂದಿನ ಓದಿಗೆ ಅನುಕೂಲವಾಗಲೆಂದು ಹಣದ ಸಹಾಯ ಮಾಡಿದ್ದರೂ ರಾಮಣ್ಣನಿಗೆ ಸ್ಪೂರ್ತಿಯ ಹೆಚ್ಚಿನ ಓದಿಗೆ ಹಣ ಹೇಗೆ ಹೊಂದಿಸ ಬೇಕೆಂಬುದೇ ಚಿಂತೆಯಾಯಿತು.ತರಕಾರಿ ಮಾರುವ ತಾನು ಈ ಮಹತ್ವಾಕಾಂಕ್ಷೆಯ ಗುರಿ ಮುಟ್ಟಲು ಸಾಧ್ಯವೇ ಎಂಬ ಅಳಲು ಕಾಡುತ್ತಿತ್ತು.
ಪಿ.ಯು.ಸಿಗೆ ಸರಕಾರಿ ಕಾಲೇಜಿನಲ್ಲಿ ಆರ್ಟ್ಸ್ ವಿಭಾಗಕ್ಕೆ ಸೇರಿದ ಸ್ಪೂರ್ತಿ ಯ ಗೆಳೆತನ ಮಾಡಲು ಅನೇಕ ಹುಡುಗಿಯರು ಹಾತೊರೆದರು. ಎಲ್ಲರೊಟ್ಟಿಗೆ ನಗು ಮೊಗದಿಂದ ಮಾತಾಡಿ ಎಲ್ಲರ ಮನ ಗೆದ್ದಿದ್ದಳು ಸ್ಪೂರ್ತಿ. ಆದರೆ ಆಶಾ ಒಬ್ಬಳೇ ಅವಳಂತರಂಗದ ಗೆಳತಿಯಾದಳು. ತನ್ನ ದುಗುಡ , ದುಮ್ಮಾನಗಳನ್ನು ಆಶಾಳ ಮುಂದೆ ಹೇಳಿಕೊಳ್ಳುತ್ತ ಸ್ಫೂರ್ತಿ…. ಆಶಾ,ಇಷ್ಡ ದಿವ್ಸ ಹೆಂಗೋ ಸಾಲೀ ಕಲ್ತ ಮುಗಿಸಿದೆ.ಈಗ ಕಾಲೇಜ್ ಅಂದ್ರ ಖರ್ಚ ಆಗತ್ತ.ಅಪ್ಪಾನೂ ನನ್ನ ಸಲುವಾಗಿ ಹಗಲೂ ರಾತ್ರಿ ದುಡಿತಾನ.ಅವನ ತ್ರಾಸ ನೋಡಾಕ ಆಗೂದಿಲ್ಲ.ನಾನೂ ಹೈಸ್ಕೂಲು ಹುಡುಗರಿಗೆ ಟ್ಯೂಷನ್ ಹೇಳಿದರ ಒಂದ ಸ್ವಲ್ಪ ರೊಕ್ಕಾ ನನ್ನ ಖರ್ಚಿಗರ ಆಗ್ತಾವ ಅಂದಾಗ ಆಶಾ….ಸ್ಪೂರ್ತಿ ನಮ್ಮ ಮನಿ ಹತ್ರ ಇದ್ದ ಒಂದಿಬ್ಬರು ಆಂಟಿಗೋಳ ತಮ್ಮ ಮಕ್ಕಳಿಗೆ ಟ್ಯೂಷನ್ ಹೇಳಾಕ ಯಾರರ ಗೊತ್ತದಾರೇನು ಅಂತ ನಮ್ಮವ್ವಗ ಕೇಳಾಕ ಹತ್ತಿದ್ದರು ನಾನು ಅವರಿಗೆ ಹೇಳಿ ನಿನ್ನ ಹತ್ತಿರ ಟ್ಯೂಶನ್ನಿಗೆ ಕಳಸಾಕ ಹೇಳ್ತೇನಿ ಅಂದಾಗ ಸ್ಪೂರ್ತಿ…. ‘ಯವ್ವಾ ತಾಯಿ ಅಷ್ಟ ಮಾಡಿ ಪುಣ್ಯೆ ಕಟಗೋ’ ಎಂದು ಗೆಳತಿಗೆ ಕೈ ಮುಗಿದಳು.ಫಸ್ಟ ರೇಂಕ್ ಸ್ಟೂಡೆಂಟ ತಮ್ಮ ಮಕ್ಕಳಿಗೆ ಕಲಿಸಿದರ ತಮಗೂ ಹೆಮ್ಮೆ ಅಂತ ಒಂದು ಎಂಟು ಹುಡುಗರ ಗುಂಪು ಮಾಡಿ ಒಬ್ಬರ ಮನೆಯ ಅಟ್ಟದ ಮೇಲೆ ಸಾಯಂಕಾಲ ಅವಳ ಕಾಲೇಜ ಮುಗಿದ ಮೇಲೆ ಕಲಿಸಲು ಅನುಕೂಲ ಮಾಡಿ ಕೊಟ್ಟರು.ಹೀಗೆ ಪ್ರತಿ ತಿಂಗಳು ಸಿಗುವ ಆರು ಸಾವಿರ ರೂಪಾಯಿಯನ್ನು ತನಗೆ ಬೇಕಾದ ಪುಸ್ತಕಗಳನ್ನು ಕೊಳ್ಳಲು,ತನಗೆ ಒಂದೆರಡು ಜೊತೆ ಬಟ್ಟೆಗಳನ್ನು ಕೊಳ್ಳಲು ,ಅವಶ್ಯವಿದ್ದರೆ ಮಾತ್ರ ಖರ್ಚು ಮಾಡುತ್ತ ಆದಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದಳು. ಹೀಗೆ ಟ್ಯೂಷನ್ ಹೇಳುತ್ತಲೆ ತನ್ನ ಓದನ್ನು ಮುಂದುವರಿಸುತ್ತ ಬಿ.ಎನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಪಾಸಾದಾಗ ಐ.ಎ.ಎಸ್ ಉಪಾದಿ ಅವಳನ್ನು ಕೈ ಬೀಸಿ ಕರೆಯುತ್ತಿತ್ತು.ರಂಗಣ್ಣ ತನ್ನ ತರಕಾರಿ ವ್ಯಾಪಾರದೊಂದಿಗೆ ಬೇರೆ ಬೇರೆ ಕೆಲಸ ಮಾಡುತ್ತ ದುಡ್ಡು ಹೊಂದಿಸಲು ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದನು. ಈ ನಡುವೆ ಶಾಂತಮ್ಮ ಅನಾರೋಗ್ಯದಿಂದ ತೀರಿ ಹೋದಾಗ ಮನೆಯ ಕಡೆ ತಲೆ ಹಾಕದ ರಂಗಣ್ಣನಿಗೆ ಮತ್ತೊಂದು ಸಮಸ್ಯೆ ಉದ್ಬವಿಸಿತು.ಅಪ್ಪ ಮಗಳು ಇಬ್ಬರೂ ಸೇರಿ ಅಡುಗೆ ಮಾಡಿ ತಿಂದು ಡಬ್ಬಿ ಕಟ್ಟಿಕೊಂಡು ಸ್ಪೂರ್ತಿ ಮನೆ ಬಿಟ್ಟರೆ ರಾತ್ರಿ ಏಳು,ಎಂಟಕ್ಕೆ ಟ್ಯೂಷನ್ ಮುಗಿಸಿ ಮನೆ ಸೇರುತ್ತಿದ್ದಳು. ಜಾಣೆಯಾದ ಸ್ಪೂರ್ತಿ ಎಲ್ಲವನ್ನೂ ನಿಭಾಯಿಸುತ್ತಿದ್ದಳು.
ಮುಂದಿನ ದಾರಿ ಕಠಿಣವಾಗಿತ್ತು. ಐ.ಎ.ಎಸ್ ಮಾಡಲು ಕೋಚಿಂಗ ಅವಶ್ಯವಾಗಿತ್ತು.ಕೋಚಿಂಗ ತೆಗೆದುಕೊಳ್ಳುವಷ್ಟು ಹಣವಿಲ್ಲ.ತನ್ನಲ್ಲಿರುವ ಆತ್ಮ ವಿಶ್ವಾಸವನ್ನೇ ನಂಬಿದ ಸ್ಪೂರ್ತಿ ಲೈಬ್ರರಿಯ ಮೊರೆ ಹೊಕ್ಕಳು. ಲೈಬ್ರರಿಯಲ್ಲಿ ಐ.ಎ.ಎಸ್ ಗೆ ತಯಾರಿ ಮಾಡುತ್ತಿದ್ದ ಇವಳಂತೆಯೇ ಮಹತ್ವಾಕಾಂಕ್ಷಿಯಾದ ರಾಣಿಯ ಪರಿಚಯ ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಂತಾಗಿತ್ತು.ರಾಣಿ ಶೀಮಂತರ ಮನೆ ಮಗಳಾಗಿದ್ದರೂ ಒಂದು ಚೂರೂ ಅಹಂ ಇಲ್ಲದ ಹುಡುಗಿ.ಬಲು ಬೇಗ ಸ್ಪೂರ್ತಿಯ ಅಂತರಂಗದ ಗೆಳತಿಯಾದಳು.ಸ್ಪೂರ್ತಿಯ ಪರಿಸ್ಥಿತಿಯನ್ನು ಅರಿತ ಅವಳು ಉದಾರ ಮನಸ್ಸಿನಿಂದ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಳು. ಇದು ಸ್ಪೂರ್ತಿ ಗೆ ನುಂಗಲಾರದ ತುತ್ತಾಗಿತ್ತು.ಒಂದು ದಿನ ಸ್ಪೂರ್ತಿ ರಾಣಿಗೆ…..ರಾಣಿ ನಿನ್ನದು ದೊಡ್ಡ ಮನಸ್ಸು,ಪ್ರತಿಯೊಂದಕ್ಕೂ ನನಗ ಸಹಾಯ ಮಾಡಾಕ ಮುಂದ ಬರತಿ ಆದ್ರ ನನಗ ಇದು ಸರಿ ಅನುಸೂದಿಲ್ಲ.ನನಗ ನೀನು ಬ್ಯಾಂಕಿನಿಂದ ಸಾಲಾ ಕೊಡಿಸಿದರ ನನಗ ರೊಕ್ಕದ ಅಡಚಣಿ ಆಗೂದಿಲ್ಲ.ಆ ಸಾಲಾ ನಾನು ನನಗ ನೌಕರಿ ಸಿಕ್ಕಾಗ ತೀರಸ್ತೇನಿ ಎಂದಾಗ ಸ್ಪೂರ್ತಿ ಯ ಆತ್ಮಭಿಮಾನದ ಅರಿವಿದ್ದ ರಾಣಿ ,ಸ್ಪೂರ್ತಿ ಯ ಇಚ್ಚೆಯಂತೆ ಬ್ಯಾಂಕಿನಲ್ಲಿ ತನ್ನ ಶ್ಯೂರಿಟಿ ಮೇಲೆ ಸಾಲ ಕೊಡಿಸಿದಾಗ ಗೆಳತಿಯ ಸಹಾಯಕ್ಕೆ ಸ್ಪೂರ್ತಿ ಯ ಕಂಗಳು ತುಂಬಿ ಬಂದವು. ಈಗ ಓದಲು ಅವಶ್ಯವಿದ್ದ ಮೊಬೈಲ್,ಲ್ಯಾಪ್ಟಾಪ್,ಪುಸ್ತಕಗಳನ್ನು ಖರೀದಿಸಿದ ಸ್ಪೂರ್ತಿ ತನ್ನೆಲ್ಲ ಚಿತ್ತವನ್ನು ಓದಿನ ಕಡೆಗೆ ಕ್ರೋಢಿಕರಿಸಿದಳು.ಅವಶ್ಯ ಬಿದ್ದಾಗ ಗೆಳತಿಯರು ಚರ್ಚೆ ಮಾಡಿ ತಮ್ಮ ಅನುಮಾನಗಳನ್ನು ಬಗೆಹರಿಸಿ ಕೊಳ್ಳುತ್ತಿದ್ದರು.ಸ್ಪೂರ್ತಿಯ ಓದಿನ ಹಸಿವಿನ ಅರಿವಿದ್ದ ಗೌರಿ ಆಂಟಿಯ ಮಗ ಸುಹಾಸ ಅವನೂ ಕಷ್ಟಪಟ್ಟು ಎಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸದಲ್ಲಿದ್ದುದ್ದರಿಂದ ಸ್ಪೂರ್ತಿ ಗೆ ಹಣಕಾಸಿನ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಿಲ್ಲ.ಸ್ಪೂರ್ತಿ ಯೇ ಮುಜುಗುರ ಪಟ್ಟಾಗ ನಾನು ನಿನ್ನ ಅಣ್ಣ ನಾನೇ ನಿನಗೆ ಹೆಸರಿಟ್ಟಿದ್ದು ನನ್ನ ತಂಗಿಗೆ ತಾನೆ ನಾನು ಕೊಡ್ತಾ ಇರೋದು ಎಂದಾಗ ಸ್ಪೂರ್ತಿ ಮೌನಕ್ಕೆ ಶರಣಾಗಿ ಕಣ್ಣಿನಲ್ಲೇ ಅವನಿಗೆ ಕೃತಜ್ಞತೆ ಅರ್ಪಿಸುತ್ತಿದ್ದಳು.ರಂಗಣ್ಣ ಅವಳ ಓದಿಗೆ ತೊಂದರೆಯಾಗಬಾರದೆಂದು ಹಳೆಯ ಜೋಪಡಿ ಮನೆಯಿಂದ ಒಂದು ರೂಮು,ಅಡುಗೆ ಮನೆ,ಹಾಲಿರುವ ಮನೆಗೆ ಕರೆತಂದಿದ್ದ. ಕಸದ ರಾಶಿಯಲ್ಲಿ ಬಿದ್ದು ನಾಯಿ,ಬೆಕ್ಕುಗಳಿಗೆ ಆಹಾರವಾಗ ಬೇಕಿದ್ದ ತನ್ನನ್ನು ಮನೆಗೆ ತಂದು ಹಡೆದವರೇ ನೀಡದಷ್ಷು ಪ್ರೀತಿ ತೋರುತ್ತಿರುವ ಈ ಅಪ್ಪನೆಂದರೆ ಸ್ಪೂರ್ತಿಯ ಹೃದಯ ಹೆಮ್ಮೆಯಿಂದ ಬೀಗುತ್ತಿತ್ತು. ಈ ಅಪ್ಪನಿಗೆ ಅವಳು ತೋರುವ ಕೃತಜ್ಞತೆ ಎಂದರೆ ಐ.ಎ.ಎಸ್ ಪಾಸು ಮಾಡಿ ‘ಇವನಂಥ ಅಪ್ಪ ಯಾರಿಲ್ಲ’ ಎಂದು ಜಗತ್ತಿಗೆ ಸಾರುವುದೇ ಅವಳ ಏಕೈಕ ಗುರಿಯಾಗಿತ್ತು.ಬೌತಿಕವಾಗಿ ಯಾವ ಸಂಬಂಧವಿಲ್ಲದಿದ್ದರೂ ಮಾನವೀಯತೆ,ಪ್ರೀತಿ,ಅಂತಃಕರುಣೆ ಅವರಿಬ್ಬರಲ್ಲಿ ಅಪ್ಪ ,ಮಗಳ ಸಂಬಂಧವನ್ನು ಏರ್ಪಡಿಸಿತ್ತು.
ಐ.ಎ.ಸ್ ಭದ್ರಕೋಟೆಯ ಮೊದಲ ಬಾಗಿಲು ಪ್ರಿಲಿಮ್ಸ ಪರೀಕ್ಷೆಯಾಗಿತ್ತು. ಯಾವುದೇ ಕೋಚಿಂಗ ಕ್ಲಾಸಿಗೆ ಹೋಗದೆ ಪ್ರತಿದಿನ 12-14 ತಾಸು ಓದುತ್ತಿದ್ದ ಅವಳ ಗುರಿ ನಿಚ್ಚಳವಾಗಿತ್ತು. ತಾನು ಬೆಳೆದ ಪರಿಸರ,ಅಲ್ಲಿರುವ ಜನರ ಕಷ್ಟ ,ಕೋಟಲೆಗಳು,ತಲೆ ಮೇಲೆ ಗಟ್ಟಿ ಸೂರಿಲ್ಲದ ಹುಲ್ಲಿನ ಜೋಪಡಿಯ ವಾಸ ನೈರ್ಮಲ್ಯದ ಕೊರತೆ ಇವೆಲ್ಲವೂ ಅವಳ ಮನಸ್ಸನ್ನು ಘಾಸಿಗೊಳಿಸುತ್ತಿದ್ದವು.ತಾನು ಗುರಿ ಮುಟ್ಟಿದ ಮೇಲೆ ಈ ಎಲ್ಲ ಜನರಿಗೆ ಸರಕಾರದ ಅನುದಾನದ ಅಡಿಯಲ್ಲಿ ಒಂದು ಸೂರು ಕಟ್ಟಿಕೊಡ ಬೇಕೆಂಬುದು ಅವಳ ಕನಸಾಗಿತ್ತು .ಈ ಕನಸು ನನಸಾಗ ಬೇಕೆಂದರೆ ಅವಳು ಐ.ಎ.ಎಸ್ ಪಾಸು ಮಾಡಿ ಸರ್ಕಾರಿ ನೌಕರಿಗೆ ಸೇರಲೇ ಬೇಕಿತ್ತು.ಇವಳ ಕನಸು ನನಸಾಗುವ ದಿನ ಬಂದೇ ಬಿಟ್ಟಿತು. ಪರೀಕ್ಷೆ ದಿನ ಸ್ಪೂರ್ತಿ ರಂಗಣ್ಣನಿಗೆ ಕಾಲು ಮುಟ್ಟಿ ನಮಸ್ಕರಿಸಿ ರಾಣಿಯ ಜೊತೆ ಪರೀಕ್ಷೆಗೆ ಹಾಜರಾಗಿದ್ದಳು.ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಚೆನ್ನಾಗಿ ಮಾಡಿದ್ದ ಸ್ಪೂರ್ತಿ ಹಾಗೂ ರಾಣಿ ಇಬ್ಬರೂ ಪಾಸಾಗಿದ್ದರು.ಮುಂದಿನ ತಯಾರಿ ಮೇನ್ ಎಂಟ್ರನ್ಸದ್ದಾಗಿತ್ತು. ಹಗಲು ,ರಾತ್ರಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಮುಗಿಸಿದಾಗ ದೊಡ್ಡದೊಂದು ನಿಟ್ಟುಸಿರು ಬಿಟ್ಟಿದ್ದಳು ಸ್ಪೂರ್ತಿ. ಆದರೆ ಅವಳ ಜೀವನದ ಪರೀಕ್ಷೆ ಇನ್ನೂ ಬಾಕಿಯಿದ್ದ ಕಾರಣ ಒಂದು ಪೇಪರಿನಲ್ಲಿ ಅತೀ ಕಡಿಮೆ ಅಂಕಗಳು ಬಂದು ರೇಂಕ್ ಕೈತಪ್ಪಿ ಹೋಯಿತು.ಇದರಿಂದ ವಿಚಳಿತಳಾಗದ ಸ್ಪೂರ್ತಿ ಮತ್ತೆ ಓದಿ ಪರೀಕ್ಷೆ ಕಟ್ಟಿ ಪಾಸಾಗಿ ಇಂಟವ್ಯೂನಲ್ಲೂ ಚೆನ್ನಾಗಿ ಮಾಡಿದಳು. ಉತ್ತೀರ್ಣರಾದವರ ಪಟ್ಟಿ ಬಿಡುಗಡೆಯಾದಾಗ ಇವಳದು ರಾಜ್ಯಕ್ಕೆ ಮೊದಲನೇ ಸ್ಥಾನ, ಹಾಗೂ ಕೇಂದ್ರ ಕ್ಕೆ ಎಂಟನೆಯ ಸ್ಥಾನವಾಗಿತ್ತು.ರಾಣಿಯೂ ಒಳ್ಳೆಯ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಳು.ಇಬ್ಬರೂ ಗೆಳತಿಯರು ಒಬ್ಬರನೊಬ್ಬರನ್ನು ಅಪ್ಪಿಕೊಂಡು ಖುಷಿಯಿಂದ ಕುಣಿದು ಕುಪ್ಪಳಿಸಿದರು.ರಾಜ್ಯದಾದ್ಯಂತ, ದೇಶದಾದ್ಯಂತ ಎಲ್ಲ ವೃತ್ತ ಪತ್ರಿಕೆಗಳಲ್ಲಿ,ಸಾಮಾಜಿಕ ತಾಣಗಳಲ್ಲಿ, ಟಿ.ವಿ ಮಾಧ್ಯಮಗಳಲ್ಲಿ ಸ್ಪೂರ್ತಿಯ ಸಾಹಸಗಾತೆಯ ವರದಿಗಳೇ ಮುಖ್ಯಾಂಶ ವಾಗಿದ್ದವು. ಒಬ್ಬ ತರಕಾರಿ ಮಾರುವ ಬಡ ಮನುಷ್ಯ ಕಸದ ರಾಶಿಯಲ್ಲಿ ಸಿಕ್ಕ ಅನಾಥ ಮಗುವನ್ನು ತಂದು ಬೆಳೆಸಿ,ಓದಿಸಿ ಆ ಮಗು ಸಮಾಜದ ಅತ್ಯುನ್ನತ ಪದವಿಯ ಕಿರೀಟ ತೊಡುವಂತೆ ಮಾಡಿದ್ದು ಸಾಧಾರಣ ವಿಷಯವಾಗಿರಲಿಲ್ಲ. ಸ್ಪೂರ್ತಿ ಎಲ್ಲ ಮಾಧ್ಯಮದವರ ಮುಂದೆ ತನ್ನಪ್ಪ ರಂಗಣ್ಣನಿಗೆ ಕಾಲಿಗೆ ನಮಸ್ಕರಿಸಿ ತನ್ನ ಪಾಲಿನ ನಡೆದಾಡುವ ದೇವರು ಎಂದು ಭಾವ ತುಂಬಿ ಹೇಳಿದಾಗ ನೆರೆದವರ ಕಣ್ಣುಗಳೂ ತುಂಬಿ ಬಂದಿದ್ದವು.ಮಗುವಾಗಿದ್ದಾಗ ತನ್ನನ್ನು ನೋಡಿಕೊಂಡ ಗೌರಿ ಆಂಟಿ,ಶಾಂತಮ್ಮ,ತಂಗಿ ಪ್ರೀತಿ ತೋರಿದ ಸುಹಾನನ್ನು ನೆನೆಯದೇ ಇರಲಿಲ್ಲ.
ಮುಂದೆ ಟ್ರೇನಿಂಗ್ ಮುಗಿಸಿ ತಾನಿರುವ ಜಿಲ್ಲೆಗೇ ಡಿ.ಸಿಯಾಗಿ ಬಂದ ಸ್ಪೂರ್ತಿ ಸರಕಾರಿ ಬಂಗಲೆಯಲ್ಲಿ ಅಪ್ಪನೊಂದಿಗೆ ಕಾಲಿಟ್ಟಾಗ ತನ್ನ ಬಾಂಧವರಿಗೆ ಸೂರು ಕಲ್ಪಿಸುವ ಯೋಜನೆಯ ನೀಲನಕ್ಷೆ ಅವಳ ಮನದಲ್ಲಿ ರೂಪುಗೊಳ್ಳುತ್ತಿತ್ತು, ಬದುಕ ಸಾರ್ಥಕವೆನಿಸಿತ್ತು.
******
3 thoughts on “ಮಹತ್ವಾಕಾಂಕ್ಷೆಯ ಸುತ್ತ”
ಸ್ಫೂರ್ತಿದಾಯಕ ಕತೆ.
ಒಬ್ಬ ಸಹೃದಯಿ ಮನುಷ್ಯ ಅನಾಥಮಗುವಿಗೆ ಆಸರೆಯಾದ ಕಥೆ ಚೆನ್ನಾಗಿದೆ.
Good writing; liked the style.