ಅದು ನಟ್ಟನಡುರಾತ್ರಿ. ಕೋಲ್ಮಿಂಚು, ಗುಡುಗು, ಸಿಡಿಲ ಸಪ್ಪಳದ ನಡುವೆ ಉಕ್ಕಿನ ಗಜುಗಗಳೇ ಅಪ್ಪಳಿಸುವಂಥ ಮರಮಳೆ. ಆ ಮಳೆ ನೆನಪಾದರೆ ನನಗೀಗಲೂ ಎದೆ ಝಲ್ಲೆನ್ನುತ್ತದೆ. ಮರಮಳೆ ತಮಣಿಯಾಗಿ ದಿನಗಟ್ಟಲೇ ತಪ, ತಪ, ತಪಂತ ಸಣ್ಣಗೆ ಉದುರುವ ಬಯಲುಸೀಮೆಯ ಜಿನುಗುವ ಸೋನೆಮಳೆ.
ಸೋನೆಮಳೆ ನಿಂತು ಸುಂಯ್ಯಂತ ಬೀಸುವ ಬಿರುಸಿನ ತಂಗಾಳಿಗೆ ಸೋಜಾಗಿ ಉರುಳಿ ಬೀಳುವ ಮಾಳಿಗೆ ಮನೆಗಳು ಮತ್ತು ಅವುಗಳ ಹೊರ ಗೋಡೆಗಳು. ಪರಿಣಾಮ ಹಸಿ ಹಸಿ ಸಾವುಗಳು. ಹೀಗೆ ಹಲವು ಅವಗಡಗಳನ್ನೇ ಉಣಬಡಿಸಿದ ಮಳೆಗಾಲ ನನಗೆ ಮಲೆನಾಡಿನವರಂತೆ ಸಂಭ್ರಮ ಸಡಗರ ತರುತ್ತಿರಲಿಲ್ಲ. ಯಾವಾಗಲೋ ದಕ್ಕಿಸುವ ಸಣ್ಣಪುಟ್ಟ ಸಂತಸಗಳಿಗಿಂತ ಭೀಕರಭಯ ಹುಟ್ಟಿಸಿದ್ದೇ ಅಧಿಕ. ನಾನಾಗ ಐದಾರನೇ ಈಯತ್ತೆಯಲ್ಲಿ ಓದುತ್ತಿದ್ದ ನೆನಪು.
ಮುತ್ತಾತನ ಕಾಲದ ಮಣ್ಣಿನ ಮಾಳಿಗೆಮನೆ ನಮ್ಮದು. ಆಗ ನಮ್ಕಡೆ ಎಲ್ಲಾ ಮನೆಗಳು ಹಾಗೇ ಇದ್ದವು. ಈಗಲೂ ನೋಡಲು ಅಲ್ಲಲ್ಲಿ ಸಿಗುತ್ತವೆ. ಗುಂಡುಗಲ್ಲಿನ ಅರ್ಧ ಮಾರುದ್ದದ ಗೋಡೆಗಳು. ಒಲೆಗಳ ಉಸಿರುಗಟ್ಟುವ ಹೊಗೆಗೆ ಮಾಳಿಗೆಯಡಿಯ ಕಟ್ಟಿಗೆ ಜಂತಿ, ತುಂಡು, ತೊಲೆಗಳೆಲ್ಲ ಕರ್ರಗೆ ಕಪ್ಪಿಟ್ಟು ಶತಮಾನವೇ ಕಳೆದಿರುವಂತಹದು. ಜಂತಿ ಜಂಜಡಗಳಲ್ಲಿ ಹಲ್ಲಿ, ಇಲಿ, ಹೆಗ್ಗಣಗಳ ವಹಿವಾಟು. ಇಲಿ ಬೇಟೆಗೆಂದು ಬೇಸಿಗೆಯಲ್ಲಿ ಹವಣಿಸಿ ಬರುವ ಹಾವುಗಳು. ಅವೆಲ್ಲವೂ ಮಣ್ಣಿನ ಮೇಲ್ಮುದ್ದೆಯ ಮಾಳಿಗೆಯನ್ನು ಪೊಳ್ಳು ಮಾಡುತ್ತಿದ್ದವು.
ಪೊಳ್ಳಾದ ಮಣ್ಣಿನ ಮಾಳಿಗೆಯಲ್ಲಿ ಸಣ್ಣ ಪುಟ್ಟ ಗುದ್ದುಗಳು ಅವಕಾಳಿ ಮಳೆಗೆ ತೆರೆದುಕೊಂಡು ಮನೆಯೊಳಗೆಲ್ಲ ಮಳೆನೀರಿನ ಸಣ್ಣದೊಂದು ಹಳ್ಳವೇ ನಿರ್ಮಾಣಗೊಳ್ಳುತ್ತಿತ್ತು. ನನ್ನವ್ವ ಚಿಮಣಿ ಬುಡ್ಡಿ ಹಚ್ಚಿಕೊಂಡು ರಾತ್ರೆಲ್ಲ ಕಬ್ಬಿಣದ ಬುಟ್ಟಿಯಲ್ಲಿ ನೀರುತುಂಬಿ ಚೆಲ್ಲಿದ್ದೇ ಚೆಲ್ಲಿದ್ದು. ಅಪ್ಪ ಮಳೆಗಾಲದಲ್ಲಿ ಹಣಮಂದೇವರ ಗುಡಿಯಲ್ಲೋ, ಭೀಮಾಶಂಕರ ಗವಿಯಲ್ಲೋ ಮಲಗುತ್ತಿದ್ದ. ಬೇಸಿಗೆಯಲ್ಲಿ ಮಾತ್ರ ಮನೇಸು ಮಂದೆಲ್ಲ ಮಾಳಿಗೆ ಮೇಲೆ ಮಲಗುವುದು ರೂಢಿ.
ಮಳೆಗಾಲ ಬಂತೆಂದರೆ ಗತಕಾಲದ ನಮ್ಮನೆ ಯಾವಾಗ ಬಿದ್ದು ನೆಲಸಮ ಆಗುತ್ತದೆಂಬ ಯಮಭಯ ನನ್ನವ್ವಗೆ. ಅಂಥ ಸಾವಿನ ರಣಭಯದಿಂದ ನಾವು ಬದುಕಿಉಳಿಯುವ ಯೋಚನೆ ಅವಳಲ್ಲಿ. ನಿರಂತರ ಸುರಿಯುವ ಮಳೆನೀರಿನ ಅಪಾಯಕ್ಕಿಂತಲೂ ಮಣ್ಣಿನ ಮೇಲ್ಮುದ್ದೆಯ ಮಾಳಿಗೆ ಕುಸಿದು ಬೀಳುವ ಸಾವಿನಭಯ.
ನಿತ್ಯಮುಂಜಾನೆ ನಡುಗಂಭಕ್ಕೆ ಕಡಗೋಲು ಕಟ್ಟಿ ಮಜ್ಜಿಗೆ ಮಾಡುತ್ತಿದ್ದ ಅವ್ವ ಕಟ್ಟಿಗೆಯ ಆ ಕಂಭಕ್ಕೆ ಅಂಥ ನಡುರಾತ್ರಿಯಲಿ, “ಲಕ್ಷ್ಮಿತಾಯಿ ನಮ್ಮನ್ನು ಕಾಪಾಡೆಂದು” ಸೆರಗೊಡ್ಡಿ ದೈನ್ಯತೆಯ ದನಿಯಲ್ಲಿ ಬೇಡುತ್ತಿದ್ದಳು. ಹೊರಗೆ ಮಡುಗಟ್ಟಿದ ಕಾರ್ಗತ್ತಲು. ಗುಡುಗು ಸಿಡಿಲುಗಳ ಆರ್ಭಟದ ಮಳೆ. ಅಪಾಯದ ಅವಾಜು ಮಾಡುತ್ತಾ ನಡುರಾತ್ರಿ ಎರಡೂ ದಡತುಂಬಿ ಹರಿಯುವ ಹಿರೇಹಳ್ಳದ ವಿಕಾರ ಭೋರ್ಗರೆತದ ಸೌಂಡು ಇಂದಿಗೂ ನನ್ನ ನಾದಭಿತ್ತಿಯಿಂದ ಕದಲಿಲ್ಲ.
ಹತ್ತಾರು ಹರದಾರಿ ದೂರದ ಹಿರೇಹಳ್ಳ ತೀರದ ಮೇಲಿನ ಪ್ರದೇಶಗಳಲ್ಲಿ ಮಳೆಯಾದರೂ ಅದರ ಭೋರ್ಗರೆತ ನಮ್ಮ ನಿದ್ದೆ ಕೆಡಿಸುತ್ತಿತ್ತು. ದಟ್ಟವಾದ ಲಕ್ಕಿಪೊದೆ, ಅಷ್ಟೇ ದಟ್ಟನೆಯ ಕರಿಜಾಲಿ ಗಿಡಗಳ ನಡುವಿನಿಂದ ಕೇಳಿಬರುವ ಅದರ ಆರ್ತಗರ್ಜನೆಗೆ ಅಂಥದೊಂದು ಕ್ರೂರತೆಯ ಘೋರ ಸ್ಪರ್ಶವಿತ್ತು. ಮಂಡರುಗಪ್ಪೆಗಳ ಅದೇ ತೆರದ ಮೊರೆತ ನಾನಿನ್ನೂ ಮರೆತಿಲ್ಲ.
ಪ್ರಾಣಪಾಯದಿಂದ ಪಾರಾಗಲು ಅರ್ಧ ಮಾರುದ್ದದ ಗೋಡೆಗಳ ಅಗಳಿ ಬಾಗಿಲು ಗೂಡಿನ ಆಶ್ರಯದಲ್ಲಿ ಅವ್ವ ನನ್ನನ್ನು ತಬ್ಬಿಕೊಂಡೇ ಕೂತಿರುತ್ತಿದ್ದಳು. ತಾನು ಸತ್ತರೂ ಸಾಯಲಿ ನಾನು ಸಾಯಬಾರದೆಂಬ ಕರುಳ ಕಕುಲಾತಿ ಅವಳದು. ಮಣ್ಣಿನಮಾಳಿಗೆ ಯಾವಾಗ ಕುಸಿದು ಬೀಳುತ್ತದೆಂಬ ಭಯದಿಂದಲೇ ರಾತ್ರಿಯೆಲ್ಲ ನೂಕುತ್ತಿದ್ದೆವು. ಮನೆಯೆಲ್ಲ ಸೋರಿ ಬಿದ್ದು ಹೋದರೂ ಅಗಲಗೋಡೆಯ ಅಗಳಿ ಬಾಗಿಲೊಳಗಿನದು ಸುರಕ್ಷೆಯ ಜಾಗ. ಅಲ್ಲಿ ಬದುಕಿ ಉಳಿಯಬಹುದೆಂಬ ಕಟ್ಟಕಡೆಯ ಉಪಾಯ.
ಇದು ಒಂದೆರಡು ರಾತ್ರಿಹಗಲುಗಳ ಮಾತಲ್ಲ. ನಾನು ಬಲ್ಲವನಾಗುವ ಮಟ ಹದಿನೆಂಟಿಪ್ಪತ್ತು ಮಳೆಗಾಲಗಳನ್ನು ಇದೇ ಮಣ್ಣಿನ ಮಾಳಿಗೆ ಮನೆಯಲ್ಲಿ ಕಳೆದ ನೆನಪಿದೆ. ಅದಕ್ಕೆ ಮೊದಲು ಅಪ್ಪ ಅವ್ವ ಇದೇ ಮಣ್ಣಿನ ಮಾಳಿಗೆ ಮನೆಯಲ್ಲಿ ಅಂತಹ ಅದೆಷ್ಟು ಮಳೆಗಾಲಗಳನ್ನು ಕಳೆದಿದ್ದರೆಂದು ಲೆಕ್ಕವಿಟ್ಟಿರಲಿಲ್ಲ. ಲಾತೂರ ಭೂಕಂಪದ ಕಾಲಕ್ಕೆ ಸಣ್ಣಗೆ ಕಂಪಿಸಿ ನಮ್ಮ ತಾತನ ಕಾಲದ ಮಣ್ಣಿನ ಮಾಳಿಗೆಮನೆ ಯಾರನ್ನೂ ಬಲಿಪಡೆಯದೇ ನೆಲಸಮಗೊಂಡು ನಮ್ಮೆಲ್ಲರ ಜೀವ ಉಳಿಸಿ ತಾಯ್ತ ನದ ಇತಿಹಾಸ ನಿರ್ಮಿಸಿದ ಹಸಿ ಹಸಿನೆನಪು.
*****
4 thoughts on “ದಡತುಂಬಿದ ಹಿರೇಹಳ್ಳದ ನಡುರಾತ್ರಿಯ ಭೋರ್ಗರೆತ”
ಹಳೆಯ ನೆನಪುಗಳು ನಿಚ್ಚಳವಾಗಿ ಮೂಡಿಬಂದಿವೆ..
ನೆನಪುಗಳು ಎಂದೆಂದೂ ಶಾಶ್ವತ. ಲೇಖನ ಚೆನ್ನಾಗಿದೆ
ಮಳೆಗಾಲದ ನೆನಪು ಭಯದ ಭೀಕರತೆ ಜೊತೆ ಚೆನ್ನಾಗಿ ಮೂಡಿದೆ
good one.