ಘನಶ್ಯಾಮ್ಅಗ್ರವಾಲ್ ಅವರಹಿಂದಿ “ಕಿರು“ಕತೆಗಳು
ಅನುವಾದ: ಡಾ. ಮಾಧವಿ ಎಸ್. ಭಂಡಾರಿ
ಕೆಲವು ತಿಂಗಳುಗಳಿಂದ ಸರ್ಕಸ್ ಕಂಪನಿಯೊಂದು ಊರಲ್ಲಿ ಟೆಂಟ್ ಹಾಕಿತ್ತು. ಅದರಲ್ಲಿಯ ಅತ್ಯಪೂರ್ವವಾದ ಶೋ ಒಂದಕ್ಕೆ ಆ ಊರಲ್ಲಿ ವಿಶೇಷ ಜನಮನ್ನಣೆ ಸಿಕ್ಕಿತ್ತು. ಆ ಸರ್ಕಸ್ ಕಂಪನಿಯ ಹೆಸರಾಂತ ಹಾಗೂ ರೋಮಾಂಚಕಾರಿ ಶೋ ‘ಹುಲಿ ಮತ್ತು ಕುರಿಮರಿ’ ಅದಾಗಿತ್ತು. ಪಂಜರದೊಳಗಡೆ ಹುಲಿ ಮತ್ತು ಕುರಿಮರಿ ಮುಖಾಮುಖಿಯಾಗಿ ನಿಂತಿರುತ್ತವೆ. ರಿಂಗ್‍ಮಾಸ್ಟರ್ ಮೊದಲು ಕೈ ಮುಗಿದು ಪ್ರೇಕ್ಷಕರಿಗೆ ಅಭಿವಂದಿಸುತ್ತಾನೆ. ಕೈಯಲ್ಲೊಂದು ಚಾಟಿ. ಅದನ್ನೆತ್ತಿ ‘ಅಪ್’ ಎನ್ನುತ್ತಿದ್ದಂತೆ ಹುಲಿ ಪೂರ್ತಿಯಾಗಿ ಬಾಯಿ ತೆರೆಯುತ್ತದೆ. ಹೆದರಿಕೆಯಿಂದ ಮುದ್ದೆಯಾದ ಕುರಿಮರಿ ನಿಧಾನವಾಗಿ ತನ್ನ ಕತ್ತನ್ನು ಹುಲಿಯ ಬಾಯಿಗಿಡುತ್ತದೆ. ಇಡೀ ಟೆಂಟ್ ಸೂಜಿ ಬಿದ್ದರೂ ಸದ್ದಾಗುವಷ್ಟು ಸ್ತಬ್ಧ. ಹತ್ತು ಸೆಕೆಂಡುಗಳ ನಂತರ ರಿಂಗ್ ಮಾಸ್ಟರ್ ಪುನಃ ‘ಅಪ್’ ಎಂದಾಗ ಕುರಿಮರಿ ತನ್ನ ಕತ್ತನ್ನು ಹುಲಿಯ ದವಡೆಗಳಿಂದ ಹಿಂದಕ್ಕೆ ತೆಗೆದುಕೊಳ್ಳುತ್ತದೆ. ಹುಲಿ ತನ್ನ ಬಾಯಿ ಮುಚ್ಚಿಕೊಂಡು ಹಿಂದಿರುಗುತ್ತದೆ. ಕುರಿಮರಿ ಹಿಂದಕ್ಕೆ ಸರಿಯುತ್ತ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಸಭಾಂಗಣದಲ್ಲಿಯ ಚಪ್ಪಾಳೆ ಸದ್ದು ಮುಗಿಲು ಮುಟ್ಟುತ್ತದೆ.
ಪರಿಸರವಾದ, ಪ್ರಾಕೃತಿಕ ಸಮತೋಲನದ ತುಡಿತ, ಪರಿಸರ ಮಾಲಿನ್ಯಕ್ಕೆ ಪರಿಹಾರ, ಪ್ರಾಣಿದಯೆ ಇತ್ಯಾದಿ ಗಾಳಿ-ಬೆಂಕಿಯಂತೆ ಹರಡುತ್ತಿರುವುದರಿಂದ ಸರಕಾರ ಸರ್ಕಸ್‍ನಲ್ಲಿ ಪ್ರಾಣಿಗಳ ಬಳಕೆಯ ಮೇಲೆ ನಿಷೇಧ ಹೇರಿತು. ಜೊತೆಗೆ ಎಲ್ಲ ಪ್ರಾಣಿಗಳನ್ನು ಕಡ್ಡಾಯವಾಗಿ ಕಾಡಿಗೆ ಬಿಡುವಂತೆ ಆದೇಶಿಸಿತು.
ಸರ್ಕಸ್ ಕಂಪನಿಯ ಇಂದಿನ ಪ್ರದರ್ಶನ ಲಾಸ್ಟ್ ಶೋ. ಅದನ್ನು ಕಣ್ಣಲ್ಲಿ ತುಂಬಿಸಿಕೊಳ್ಳಲು ಊರಿಗೆ ಊರೇ ಟೆಂಟಿನೊಳಗಿತ್ತು. ಧ್ವನಿವರ್ಧಕ ಮೇಲಿಂದ ಮೇಲೆ ಅರಚುತ್ತಿತ್ತು, “ಅಕ್ಕಂದಿರೇ, ಅಣ್ಣಂದಿರೆ, ‘ಹುಲಿ ಮತ್ತು ಕುರಿಮರಿ’ ಯ ಈ ಶೋ ನಮ್ಮ ಲಾಸ್ಟ್ ಶೋ. ಸರಕಾರದ ಆದೇಶದ ಮೇರೆಗೆ ನಾವು ಎಲ್ಲ ಪ್ರಾಣಿಗಳನ್ನು ಕಾಡಿಗೆ ಬಿಡುತ್ತಿದ್ದೇವೆ. ಇಂತಹ ಮೈ ನವಿರೇಳಿಸುವ ಪ್ರದರ್ಶನವನ್ನು ನೀವು ಇನ್ನೆಂದೂ ನೋಡಲಾರಿರಿ.”
“ನೋಡಿರಿ, ಆನಂದಿಸಿರಿ, ಅಣ್ಣಂದಿರೆ, ಅಕ್ಕಂದಿರೇ, ನಮ್ಮ ಸರ್ಕಸ್ ಕಂಪನಿಯ ಅತ್ಯದ್ಭುತ, ಅಸಾಧಾರಣ, ಅಪರೂಪದ, ರೋಮಾಂಚಕಾರಿ, ಮುಂದೆಂದೂ ಕಾಣಸಿಗದ ನಮ್ಮ ಲಾಸ್ಟ್ ಶೋ ‘ಹುಲಿ ಮತ್ತು ಕುರಿಮರಿ’, ‘ಕುರಿಮರಿ ಮತ್ತು ಹುಲಿ”. ಕರತಾಡನದೊಂದಿಗೆ ಪ್ರೇಕ್ಷಕರು ತಮ್ಮ ಕುತೂಹಲ ವ್ಯಕ್ತಪಡಿಸಿದರು.
ಹಿಂದಿನಂತೆಯೆ ಹುಲಿ ಮತ್ತು ಕುರಿಮರಿ ಮುಖಾಮುಖಿಯಾದವು. ಎಂದಿನಂತೆ ರಿಂಗ್‍ಮಾಸ್ಟರ್ ಮೊದಲು ಕೈ ಮುಗಿದು ಪ್ರೇಕ್ಷಕರಿಗೆ ಅಭಿವಂದನೆ ಸಲ್ಲಿಸಿದ. ಕೈಯಲ್ಲಿದ್ದ ಚಾಟಿ ಎತ್ತಿ ‘ಅಪ್’ ಎನ್ನುತ್ತಿದ್ದಂತೆ ಹುಲಿ ಪೂರ್ತಿಯಾಗಿ ಬಾಯಿ ತೆರೆಯಿತು. ಮುದುಡಿ ಮುದ್ದೆಯಾದ ಕುರಿಮರಿ ನಿಧಾನವಾಗಿ ತನ್ನ ಕತ್ತನ್ನು ಹುಲಿಯ ಬಾಯಿಗಿಟ್ಟಿತು. ಪ್ರೇಕ್ಷಕವರ್ಗ ಉಸಿರು ಬಿಗಿಹಿಡಿದು ಈ ದೃಶ್ಯವನ್ನು ಕಣ್ಣು ತುಂಬಿಸಿಕೊಳ್ಳುತ್ತಿತ್ತು. ಧ್ವನಿವರ್ಧಕದ ಲಾಸ್ಟ್ ಶೋ… ಲಾಸ್ಟ್ ಶೋ… ಉದ್ಘೋಷ ಟೆಂಟ್ ತುಂಬೆಲ್ಲ ಪ್ರತಿಧ್ವನಿಸುತ್ತಿತ್ತು. ಅದನ್ನು ಹುಲಿಯೂ ಕೇಳಿಸಿಕೊಳ್ಳುತ್ತಿತ್ತು. ಅಷ್ಟರಲ್ಲಿ ರಿಂಗ್‍ಮಾಸ್ಟರ್ ಮತ್ತೊಮ್ಮೆ ‘ಅಪ್’ ಎಂದ. ಇನ್ನೇನು ಕುರಿಮರಿ ತನ್ನ ಕತ್ತನ್ನು ಹಿಂದಕ್ಕೆ ಚಾಚಬೇಕು, ಹುಲಿ ಬಿಗಿಯಾಗಿ ಬಾಯಿ ಮುಚ್ಚಿ ಕುರಿಮರಿಯ ಉಸಿರುಗಟ್ಟಿಸಿತು.
ಟೆಂಟ್‍ನಲ್ಲಿದ್ದವರ ಮುಖ ಒಮ್ಮೆಲೆ ಬಿಳಿಚಿಕೊಂಡಿತು. ಯಾರಿಗೂ ಏನೊಂದೂ ಅರ್ಥವಾಗಲಿಲ್ಲ. ಪ್ರೇಕ್ಷಕರಲ್ಲಿ ಯಾರೊಬ್ಬರೂ ಚಪ್ಪಾಳೆ ತಟ್ಟಲಿಲ್ಲ. ಒತ್ತಡ ಎಲ್ಲರ ಮುಖದಲ್ಲೂ ಮನೆ ಮಾಡಿತ್ತು. ಅದಾಗಲೇ ಶೋ ಫ್ಲಾಪ್ ಆಗಿತ್ತು. ಇನ್ನು ಏನೇ ಹೇಳಿದರೂ ಅದು ತೇಪೆ ಹಚ್ಚುವ ಕೆಲಸ ಎಂಬ ತೀರ್ಮಾನಕ್ಕೆ ಪ್ರೇಕ್ಷಕರು ಬಂದಾಗಿತ್ತು. ಧ್ವನಿವರ್ಧಕದಲ್ಲಿ ಮತ್ತೆ ಕೇಳಿಸಿತು, “ಅಕ್ಕಂದಿರೇ, ಅಣ್ಣಂದಿರೆ, ನೀವಿಂದು ಚಪ್ಪಾಳೆ ತಟ್ಟುವುದನ್ನೇ ಮರೆತಂತಿದೆ. ಯಾಕೆ…? ನಿಮ್ಮ ದೃಷ್ಟಿಯಲ್ಲಿ ನಮ್ಮ ಈ ಲಾಸ್ಟ್ ಶೋ ಫ್ಲಾಪ್ ಆದಂತೆ ಅನ್ನಿಸುತ್ತಿದೆಯಲ್ಲವೇ?… ಆದರೆ, ಅಣ್ಣಂದಿರೆ, ಅಕ್ಕಂದಿರೇ, ನಮ್ಮ ಈ ಲಾಸ್ಟ್ ಶೋ ಫ್ಲಾಪ್ ಆಗಿಲ್ಲ. ಇಂದಿನ ನಮ್ಮ ಈ ಪ್ರಯೋಗವು ಅತ್ಯಂತ ಯಶಸ್ವಿ ಪ್ರಯೋಗ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ…ನಾವು ಹುಲಿಗೆ ಟ್ರೇನಿಂಗ್ ಕೊಡುವಾಗ ಒಂದು ಆಶ್ವಾಸನೆ ಕೊಟ್ಟಿದ್ದೆವು, ನಮ್ಮ ಕೊನೆಯ ಶೋ ಆಗುವಾಗ ಈ ಕುರಿಮರಿ ನಿನ್ನದಾಗುತ್ತದೆ. ಅದೇ ಭರವಸೆಯ ಮೇಲೆ ಹುಲಿ ನಮ್ಮ ಸರ್ಕಸ್ ಕಂಪನಿಯಲ್ಲಿತ್ತ…ಈಗಲಾದರೂ ನಿಮಗೆ ಅರ್ಥವಾಯಿತಲ್ವಾ, ಇದೊಂದು ಫ್ಲಾಪ್ ಶೋ ಅಲ್ಲ. ಇದೊಂದು ಅತ್ಯಂತ ಯಶಸ್ವಿ ಪ್ರಯೋಗ! ಇನ್ನಾದರೂ ಚಪ್ಪಾಳೆ ಹೊಡೆಯಬಹುದಲ್ವಾ?
ಪ್ರೇಕ್ಷಕರು ಈಗಲೂ ಸುಮ್ಮನೆ ಕುಳಿತಿದ್ದರು. ಹುಲಿಯ ಬಾಯೊಳಗೆ ಹೋದ ಮುಗ್ಧ ಕುರಿಮರಿಯ ಜೀವ…ಅವರಿಗೆ ದಿಕ್ಕೇ ತೋಚದಂತಾಗಿತ್ತು. ಧ್ವನಿವರ್ಧಕದಲ್ಲಿ ಮತ್ತೆ ಕೇಳಿ ಬಂತು, “ಅಕ್ಕಂದಿರೇ, ಅಣ್ಣಂದಿರೆ, ನಿಮಗೆ ನಮ್ಮ ಈ ಹೇಳಿಕೆಗಳು ಅರ್ಥವಾಗಿರಲಿಕ್ಕಿಲ್ಲ. ನಾವೀಗ ಸ್ವಲ್ಪ ಬಿಡಿಸಿ ಹೇಳುತ್ತೇವೆ…ಈ ದೇಶ ಒಂದು ದೊಡ್ಡ ಟೆಂಟ್. ಅದರ ರಿಂಗ್‍ಮಾಸ್ಟರ್ ‘ಅಪ್’ ಎಂದಾಗ ಇಲೆಕ್ಶನ್ ಡಿಕ್ಲೇರ್ ಆಗೋದು. ಚುನಾವಣೆ ಬಂದಾಗ ಈ ಪ್ರಜಾಪ್ರಭುತ್ವ ತನ್ನ ಬಾಯನ್ನು ಪೂರ್ತಿ ತೆರೆಯುತ್ತದೆ. ಮತ್ತೊಮ್ಮೆ ‘ಅಪ್’ ಎನ್ನುವ ತನಕ ಆ ಬಾಯಲ್ಲಿ ತನ್ನ ಕತ್ತನ್ನು ಇಡುವುದು ಜನರ ಸಂವಿಧಾನಿಕ ಅನಿವಾರ್ಯತೆ. ದೇಶದಲ್ಲಿ ಪ್ರಜೆಗಳು ಇರಲಿ ಅಥವಾ ಇಲ್ಲದಿರಲಿ, ಪ್ರಜಾಪ್ರಭುತ್ವ ಇರಬೇಕಾದ್ದು ಅನಿವಾರ್ಯ. ಅದನ್ನು ಉಳಿಸಿ ಬೆಳೆಸುವುದಕ್ಕಾಗಿ ಆಗಾಗ ‘ದ ಲಾಸ್ಟ್ ಶೋ’…’ದ ಲಾಸ್ಟ್ ಶೋ’ ಎನ್ನುವುದು ದ ಗ್ರೇಟ್ ಇಂಡಿಯನ್ ಸರ್ಕಸ್‍ನ ಒಂದು ಭಾಗ…ನಿಮಗೀಗ ಇಂದಿನ ಈ ಪ್ರದರ್ಶನ ನೂರು ಪ್ರತಿಶತ ಅರ್ಥವಾಗಿರಲೇಬೇಕು.”
ಟೆಂಟ್ ಕಳಚಿ ಬೀಳುವಷ್ಟು ಕರತಾಡನದೊಂದಿಗೆ ಪ್ರೇಕ್ಷಕರು ತಮ್ಮ ತಿಳುವಳಿಕೆ ಪ್ರದರ್ಶಿಸಿದರು.
******
ಮುಂದಿನಬುಧವಾರಇನ್ನೊಂದುಕಿರುಕಥೆ
3 thoughts on “ದ ಲಾಸ್ಟ್ ಶೋ”
ರಾಜಕೀಯ ವಿಡಂಬನೆಯನ್ನು ಕಥೆಯ ಮೂಲಕ ಹೇಳಿದ ಪರಿ ಚೆನ್ನಾಗಿದೆ. ಅಭಿನಂದನೆಗಳು ಲೇಖಕಿಗೆ
ಎಷ್ಟೊಳ್ಳೆಯ ಕ್ರೀಯೇಟಿವ ಕಾನ್ಸೆಪ್ಟ.
ರಾಜಕೀಯ ವಿಡಂಬನೆ 👌👌
ಮನಮುಟ್ಟುವಂತಿದೆ