ಅಣುವೆಂಬ ಕ್ರಿಮಿ
ಹಾರಿ ನೆಗೆದು ಸೀಮೋಲ್ಲಂಘನ
ಪೂರ್ವ-ಪಶ್ಚಿಮ… ಎಲ್ಲ ದಿಕ್ಕುಗಳನು ಬೆಸೆದು
ಎಲ್ಲರನು ನುಂಗಿ ನೊಣೆದು
ಸಾವಿನ ಅಲೆಗಳಂತೆ ಬಂದಪ್ಪಳಿಸಿ
ನೆಗೆದು ಪ್ರಾಣಗಳು ಹಾರಿ
ತೂರಿ ಜೀವಗಳ ಮಸಣಕ್ಕೆ
ಜೀವ ಅಲ್ಲೋಲ ಕಲ್ಲೋಲ
“ವಿಶ್ವ ಗ್ರಾಮ” ಅನುಭವಿಸಲೇಬೇಕಲ್ಲ.
ಉಸಿರು ಭಯದ ಹೊದರಿಗೆ ನುಗ್ಗಿ
ಜೀವಗಳು ನುಗ್ಗಾದವು
ಜೀವವಿಲ್ಲಿ ತೂತು ಕಾಸಿಗೂ ಕಡೆ
‘ಕರೋನ’ ಹುಳ ಹೊಕ್ಕಿ ಜೀವಗಳ ಬಲಿಬೇಟೆ
ಜೈವಿಕ ಸಮರಕ್ಕೆ ಮುನ್ನುಡಿಯೇ?
ಈಗ ಯುದ್ಧದಾಹಿ ಕತ್ತಿ ಹಿಡಿಯಬೇಕಿಲ್ಲ
ಅಣ್ವಸ್ತ್ರ ಸಿಡಿತಲೆಗಳು ಉರುಳಬೇಕಿಲ್ಲ
ಬಣ್ಣ, ವಾಸನೆ, ರುಚಿ, ಆಕಾರ ಏನೊಂದು ಇಲ್ಲದ
ಕ್ರಿಮಿಗಳನು ಗಾಳಿಯಲ್ಲಿ ತೂರಿಬಿಟ್ಟರಾಯಿತು.
ಚೀನಾದ ಬಿರುಗಾಳಿ ಅಮೆರಿಕಾದಲ್ಲೂ
ನಮ್ಮೂರಲ್ಲೂ ಬೀಸಿತು ಇದು ಮಾರುತಗಳ ನಿಯತಿ
ಇಲ್ಲೂ, ಎಲ್ಲೆಲ್ಲೂ ಬೀಸಿ ಕ್ರಿಮಿ ಹಾರಿ ಜೀವ ಶವವಾಯಿತು
ಗೋಳೀಕರಣಕ್ಕೆ ಅರ್ಥ ಬೇಕೆ?
ಒಡಕು ಕನ್ನಡಿಯ ಪ್ರತಿಬಿಂಬ ಅಸ್ಪಷ್ಟ.
ಆದರೆ, ಈ ಒಂದು ಸುವರ್ಣಾವಕಾಶದಲಿ…
ಹೊತ್ತಿ ಉರಿವ ಗುಡಿಸಲುಗಳಲಿ ಗಳ ಹಿರಿದರು
ಚರ್ಮ ಸುಲಿದು ಹದ ಮಾಡದೆ ಹಸಿಯದ್ದನ್ನೇ
ಮಾರಿ ಕಾಸು ಮಾಡಿದರು
ಪುಪ್ಪಸ ಹರಿದು ಗಾಳಿ ಚೆಲ್ಲಾಡಿ
ಕೃತಕ ಗಾಳಿ ತುಂಬಿ ಕಾಸು ಗಿಟ್ಟಿಸಿದರು
ಹೃದಯ ಸ್ತಂಭನಗೊಳಿಸಿ
ಮೇಲೆ ಮುದ್ರೆ ಒತ್ತಿ ಲಕ್ಷ ಲಕ್ಷ ಪೀಕಿದರು.
ಈ ಒಂದು ಸುವರ್ಣ ಅವಕಾಶದಲಿ…
ನೆಲ ಬಗೆದು ಜೀವ ಜನ ಜಾಲಾಡಿ
ಪೆರಾರಿಯಲ್ಲಿ ಭದ್ರವಾಗಿಟ್ಟುಕೊಂಡರು
ಕೊಳಕು ಮಂಡಲಗಳು ಕಚ್ಚಿ
ಇಡೀ ನರಮಂಡಲ ಹದಗೆಡಿಸಿದವು.
ಹದ್ದು, ಕಾಗೆಗಳ ಹಾಗೆ ಹೊಂಚು ಹಾಕಿ
ಕಿತ್ತಾಡಿ ಜೇಬು ತುಂಬಿಸಿಕೊಂಡವು
ಕ್ಷುದ್ರ ಹುಳುವಿನ ಹೆಸರಿನಲಿ ಗೋರಿಕೊಂಡರು
ಜೀವಗಳ ಗೋರಿಗಟ್ಟಿದರು, ಲೂಟಿ ಮಾಡಿದರು
ಬರಿಗೈ ತೋರಿಸಿ ಬಗೆದು ಬಿತ್ತಿದರು ರೋದನೆಯ
ಬಡತನವ ಬೆನ್ನಿಗಂಟಿಸಿದರು.
ಈ ಜೀವಕ್ಕಿಲ್ಲ ಬೆಲೆ
ಬೆಲೆ ತೆರಲಾರದೆ ಬಿಟ್ಟ ಜೀವಗಳೆಷ್ಟೋ?
ಸಾವಿನ ಸಾಲು ಮೆರವಣಿಗೆ ಕಮಟು ವಾಸನೆ
ಮುಟ್ಟಲಾರದ ಜೀವ
ಮುಟ್ಟಿಸಿಕೊಳ್ಳಲಾಗದ ಭಾವ
ಅಸ್ಪøಷ್ಯತೆಗೂ ಮಿಗಿಲು ಮಿಗಿಲು
“ನಭೂತೋ ನ ಭವಿಷ್ಯತಿ”
ಎಲ್ಲ ದಾಖಲೆಗಳ ಅಳಿಸಿತು.
ಈ ಗೋಳೀಕರಣಕ್ಕೆ ‘ಕರಣಗಳು’ ಸತ್ತು ಹೋಗಿವೆ
ರಕ್ತ ಬೀಜಾಸುರರ ಸಂತತಿ ನೂರಾಗಿ, ಲಕ್ಷ, ಕೋಟಿಯಾಗುತ್ತಲಿವೆ
ಹೆದರಿಕೆಯ ಕಣ್ಣುಗಳಲಿ ಬೆಳಕಿಲ್ಲ
ತೆರೆದ ಕಣ್ಣಿನೆದುರು ಅಂಧಕಾರ ಕಾಡಿದೆ
—-*—
4 thoughts on “ರಕ್ತ ಬೀಜಾಸುರರು…”
ಕರೋನದ ರುದ್ರತೆಯ ಅಕ್ಕರದಲಿ ತೆರೆದಿಟ್ಟಿದ್ದಾರೆ ಕವಿ.ತುಂಬಾ ಚೆನ್ನಾಗಿದೆ
ರಕ್ತಬೀಜಾಸುರರು ಶೀರ್ಷಿಕೆಯಡಿ ಕರೊನಾ ಮಾರಿಯ ಸಾಮಾಜಿಕ-ರಾಜಜೀಯ ಚಿತ್ರವನ್ನು ಕವನದ ಚೌಕಟ್ಟಿನಲ್ಲಿ ಸುಂದರವಾಗಿ ಕೆತ್ತಿದ್ದಾರೆ. ಅಭಿನಂದನೆಗಳು.
ನರ ರಾಕ್ಷಸರ ನಾಮರ್ಧತನಕ್ಕೆ ನಾಚಿಕೆಯಾಗುವಂತಹ ಸಾಲುಗಳನ್ನು ಬರೆದಿರುವಿರಿ,ಬದಲಾಗುವರೇ!!!!
ಮಹಾ ಸಾವಿನಲ್ಲೂ ಸ್ವಾರ್ಥ ಸಾಧಿಸುವ ಮನುಷ್ಯನ ದುಷ್ಟತನದ ಕಟು ದರ್ಶನ