ಕವಿತೆಗೆ

ಇದೇ ತಾನೆ ಬಂದೇ ಬರುವೆ ಎನುವ ಕವಿತೆ

ಬಾರದೇ ಇರುತ್ತಿಯಲ್ಲ ಅನೇಕ ವೇಳೆ!

ಸಿಟ್ಟೇ? ಸೆಡವೇ? ಅಳುಕೇ? ಅಹಂಕಾರವೇ?

ಇವುಗಳೆಲ್ಲದರ ಆಚೆಯ ನಾಚಿಕೆಯೆ?

ಸುಮ್ಮನೇ ಕೇಳುತ್ತಿದ್ದೇನೆ, ಹೇಳು: ನವಿಲಿಗೆ

ಯಾಕೆ ಅಂಥ  ಬಹುವರ್ಣದ ಗರಿಯ ಕೊಟ್ಟೆ?

ಕುದಿಎಸರಿನ ಸಿಟ್ಟಿನಲಿ ಏಕೆ ನಿಂತೆ? ಹೆಂಡತಿಯ

ತುಟಿ ಮತ್ತು ಎದೆಯಲ್ಲಿ ಯಾಕೆ ನನ್ನ ಕಡೆದಿಟ್ಟೆ?

ಕೋಗಿಲೆಯ ಕೊರಳು ನಿನ್ನದೇ? ಜೋಪಡಿಯ

ಚಿಮಿಣಿಯ ಬೆಳಕೆ? ಅಥವಾ ಕಾರ್ಖಾನೆಯ ಹೊಗೆಯೇ?

ಧೂಳು ರಸ್ತೆಯಲಿ ಓಡಾಡುವ ಗಾಡಿಯ ಎತ್ತೇ? ಐಶಾರಾಮಿ

ಕಾರಿನೊಳಗಣ ಸಮಶಿತೋಷ್ಣದ ಹವೆ ಇಷ್ಟವೇ?

ಹೂವಿನಲಿ ಚಿಟ್ಟೆ, ಚಿಟ್ಟೆಯಲಿ ಬಣ್ಣ, ಬಣ್ಣದಲಿ ಕಣ್ಣು

ಇರುವಂತೆ ಇರುವೆಯಾ ಸಶರೀರವಾಗೀ?

ಗಂಧದಲಿ ಗಂಧ, ಗಾಳಿಯಲಿ ಗಾಳಿ, ಮೌನದಲಿ

ಮೌನ ಗುದ್ದಾಡಿದಂತೆ ಶಬ್ದಗಳಲ್ಲಡಗಿ?

ಉತ್ತರಿಸಲಾರೆ ನೀನು, ನಾನೆಸೆದ ಈ ಚೆಂಡನ್ನು

ಮರಳಿ ನನಗೇ ಎಸೆದು ನಗು ಮೊಗದಲಿದ್ದು!

ಅಕೋ ನೋಡು! ಆ ಮನೆಯ ಕಿಟಕಿ ಸಂದಿನಲಿ

ಅಳುವ ಮಗು, ಹೋಗೋಣವೇ ಮುದ್ದಿಸಲು ನಾವು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಕವಿತೆಗೆ”

  1. Dr Madhavi S Bhandary

    ಅಬ್ಬಾ! ಕವಿತೆಯ ಹಿಂದೆ ಮುಂದೆ ಎಷ್ಟೊಂದು ಪ್ರತಿಮೆಗಳು. ಪ್ರತಿಮಾಲೋಕದಿಂದ ಇಣುಕುವ ಕವಿಗೆ, ಕವಿತೆಗೆ ನನ್ನದೊಂದು ಸಲಾಂ!

  2. ಟಿ.ಎ.ಎನ್ .ಖಂಡಿಗೆ

    ಕಾವ್ಯ ಸೃಷ್ಟಿಗೆ ಕಾರಣಗಳು‌ ಅನೇಕ ಇರಬಹುದು. ಆದರೆ ಅದರ ಅಂತಿಮ ಉದ್ದೇಶ ಸಮಾಜಮುಖಿಯಾಗಿರಬೇಕು.ಸೃಜನಶೀಲ ತೆಯ ನಿಗೂಢತೆಯನ್ನು ಬಿಡಿಬಿಡಿಯಾಗಿ ತೆರೆದಿಡವ ಈ‌ ಕವಿತೆಯನ್ನು‌ ಮೊಗಸಾಲೆಯವರ ಧ್ವನಿಯಲ್ಲಿ ಕೇಳುದೇ ಕಾವ್ಯಸುಖ. ಮೊಗಸಾಲೆಯವರ ಕಾವ್ಯ ಶರೀರ ಮಗ್ಗಲು ಬದಲಾಯಿಸುತ್ತಿರುವುದು ಇಲ್ಲಿ‌ ಗಮನಾರ್ಹ.

  3. ಡಾ. ಬಿ. ಜನಾರ್ದನ ಭಟ್

    ಒಳ್ಳೆಯ ಕವಿತೆ. ಹಿರಿಯ ಕವಿಯ ಧ್ವನಿಯಲ್ಲಿ ಕೇಳಿಸಿದ್ದು ಇನ್ನೂ ಸಂತೋಷದ ಸಂಗತಿ. ಅಭಿನಂದನೆಗಳು.
    – ಡಾ. ಬಿ. ಜನಾರ್ದನ ಭಟ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter