ಹಚ್ಚೆ ಹಾಕುವವನಿಗೆ

ಕವಿಯತ್ರಿಯ ಧ್ವನಿಯಲ್ಲಿಯೇ ಕವಿತೆ ಕೇಳಲು ಈ ರೇಡಿಯೋ ಬಟನ್ ಒತ್ತಿರಿ

ಎದೆಯಮೇಲೆ ಹೂವರಳಿಸುವವನ ಕೈಗೆ
ತಲ್ಲಣಗಳು ತಾಕುವುದಿಲ್ಲ
ಸೂರ್ಯ-ಚಂದ್ರ ತಾರೆಗಳೆಲ್ಲವೂ
ನಿಲುಕುತ್ತವೆ ಅವನ ಬೆರಳಿಗೆ
ನಕ್ಷತ್ರ ನೀಲಿಯಾಗಿ
ಆಕಾಶ ಕೆಂಪಗಾಗಿ!
ಎಲ್ಲವೂ ಅವನಿಷ್ಟದಂತೆಯೇ ಇಲ್ಲಿ
ಪದಗಳಿಲ್ಲದ ಕವಿತೆ ಎದೆತುಂಬ

ತಂದು ಕೂರಿಸುತ್ತಾನೆ ಎಲ್ಲೆಂದರಲ್ಲಿ
ಅಲ್ಲೆಲ್ಲೋ ಹಾರಾಡುವ ಚಿಟ್ಟೆಯ
ಅಂಗಳದ ಮೈಮೇಲಿನ ರಂಗೋಲಿ
ನುಣುಪಾದ ಪಾದಗಳ ಮೇಲೆ!
ನಾಜೂಕು ಪದರಗಳೊಳಗೆ
ಚುಚ್ಚಿದ ಬಣ್ಣಗಳು ತನಗಂಟದಂತೆ
ಅಂತರವ ಕಾಯ್ದುಕೊಳ್ಳುತ್ತಾನೆ

ಮರಿಜಿಂಕೆಯೊಂದು ಕಾಲಮರೆತು
ಕಣ್ಣುಮಿಟುಕಿಸುತ್ತದೆ
ನಿಂತಸಮಯದ ಒಡಲಿನಲ್ಲಿ
ಸದಾ ಹಸಿರಾದ ಹುಲ್ಲುಗಾವಲು!
ಶಿವನ ಶಿರದಿಂದಿಳಿದ ಗಂಗೆ
ಸ್ಪರ್ಶಕ್ಕೆ ಸಿಕ್ಕುತ್ತಾಳೆ
ಮೂರ್ತ-ಅಮೂರ್ತಗಳೆಲ್ಲವೂ
ಅವನಾಜ್ಞೆಯಂತೆಯೇ ಇಲ್ಲಿ
ಸಾಲುಸಾಲು ಕತೆಗಳು
ಬಿಡಿಬಿಡಿಯಾಗಿ ಹರಡಿಕೊಳ್ಳುತ್ತವೆ

ಬಾಲಕೃಷ್ಣನ ನವಿಲುಗರಿ
ಬೆನ್ನಮೇಲೆ ಕಚಗುಳಿಯಿಡುವಾಗ
ಮೊಲದಮರಿಯೊಂದು ಕುತ್ತಿಗೆಯ ಮುದ್ದಿಸುತ್ತದೆ
ಕೀಗೊಂಚಲಿನಿಂದ ಹೊರಟ
ರೆಕ್ಕೆಯೊಂದು ಬಯಲ ತಲುಪಿದರೆ
ಆಗಸದಿಂದಿಳಿದ ಅದೃಷ್ಟದೇವತೆ
ಮುಂಗೈಮೇಲೆ!
ನೆನಪ ಹಿಡಿದಿಡುವ ಕಾಯಕದಲ್ಲಿ
ನೋವಿನ ಮಾರಾಟ ರಿಯಾಯಿತಿಯಲ್ಲಿ

ಹೊಕ್ಕುಳಿಗೆ ಸೂಜಿ ಚುಚ್ಚುವವನ
ತೆರೆದ ಎದೆಯಮೇಲೆ
ಬಣ್ಣದ ಹೂಗಳ ಹರಡಬೇಕಿದೆ;
ಪರಿಮಳದ ಎಳೆಯೊಂದ ಎಳೆಯಬೇಕಿದೆ!
ಸೂಜಿಗಂಟಿದ ಸತ್ಯಗಳೆಲ್ಲ
ಬಳ್ಳಿಯಾಗಿ ಹಬ್ಬಿಕೊಳ್ಳಲಿ
ಹಚ್ಚೆ ಹಾಕುವವನ ಹೃದಯದಲ್ಲಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ಹಚ್ಚೆ ಹಾಕುವವನಿಗೆ”

  1. ಹಚ್ಚೆ ಹಾಕುವವನ ಹೃದಯದಲ್ಲೇ ಬಳ್ಳಿ ಬೆಳೆಸುವ ನಿಮ್ಮ ವೈಖರಿ, ಬಲು ಭಾರಿ…

  2. ಗುಂಡಣ್ಣ ಚಿಕ್ಕಮಗಳೂರು

    ಮೂರ್ತ-ಅಮೂರ್ತ ಕಲ್ಪನೆಉ ಚಿತ್ರಗಳು ಸೂಜಿಯ ಮೊನೆಯಿಂದ ಹಚ್ಚೆಯ ಚಿತ್ರಗಳಾಗಿ, ಮೈ ಮನ ತುಂಬಿದೆ….
    ಕವಿಯ ಮನಸ್ಸು ಖಾಲಿಯಾಗಿದೆ, ಹೊಸ ಕಲ್ಪನೆಗಳ ತುಂಬಿಕೊಳ್ಳಲು…
    ಗುಂಡಣ್ಣ ಚಿಕ್ಕಮಗಳೂರು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter