“ಮಣ್ಣು ಹೇಳಿತು ಕುಂಬಾರನಿಗೆ
ನೀನೇನು ತುಳಿಯುವೆ ನನ್ನ
ಕಾಯುತ್ತಿರು ನೀನಲ್ಲೆ, ಮುಂದೊಮ್ಮೆ
ನಾ ತುಳಿಯುವೆ ನಿನ್ನ”-
ಕಬೀರ ಹೇಳಿದ ಈ ಸಾರ್ವಕಾಲಿಕ ಸತ್ಯ
ಕೊನೆಗೂ ತಟ್ಟಿತು ನನ್ನೆದೆಯ
ಒಂದು ಮಾತು ಹೇಳಿಕೊಳ್ಳಲೇ ಬೇಕು ಅವನಲ್ಲಿ-
ನೀ ಪಟ್ಟ ಪಾಡಿನ ಮುಂದೆ ನನ್ನದೇನಲ್ಲ ಬಿಡು,
ನಿನಗೂ ಗೊತ್ತು, ಲೋಕರೂಢಿ, ಬಗ್ಗಿದವನಿಗೆ ಮತ್ತೆರಡು ಗುದ್ದು
ಬಾದಶಾಹ ಸಿಕಂದರ ಲೋದಿಯೆದುರೇ
ಸೆಟೆದು ನಿಂತವನು ನೀನು
ನನ್ನ ಕಥೆಯೋ…
ಕೂಪ ಮಂಡೂಕ ತುಂಡರಸ ಪಾಳೇಗಾರರ
ಒಣ ದರ್ಪದೆದುರು ಗೋಣು ಬಗ್ಗಿಸದಿದ್ದುದಂತೂ ದಿಟ…
ಆದರಿದು ಆರು ಹಡೆದವಳ ಮುಂದೆ
ಮೂರು ಹಡೆದವಳು ಅಲವತ್ತು ಕೊಂಡಂತೆ…
ಒಂದು ಮಾತಂತೂ ಸತ್ಯ,
ಇರುವೆಯ ಕಷ್ಟ ಇರುವೆಯದು ಆನೆಯ ಬದುಕು ಆನೆಯದ್ದೇ
ಆದರೂಇಲ್ಲಿ ಎತ್ತಿಕೊಳ್ಳಲೇ ಬೇಕು ಕವನವೊಂದರ ಸಾಲುಗಳನ್ನು
ನಿನಗೂ-ನನಗೂ ಅನ್ವಯಿಸುವಂಥದ್ದು, ಕವಿ ಧೂಮಿಲರು ಹೇಳಿದ್ದು-
“ಕಮ್ಮಾರನಿಗೇನು ಗೊತ್ತು ಕಬ್ಬಿಣದ ರುಚಿ, ಕೇಳ ಬೇಕದನ್ನು
ಲಗಾಮು ಕಚ್ಚಿದ ಕುದುರೆಯ ಬಾಯಿಂದ”
ಕಾಯಿಸಿದಾಗಲೇ ಬಡಿಯ ಬೇಕೆಂಬ ಕಮ್ಮಾರ
ಸದಾ ಎತ್ತಿ ಕೊಂಡೇ ಇರುತ್ತಾನೆ ಕೈಯ
ಸಿಕ್ಕ-ಸಿಕ್ಕಲ್ಲೆಲ್ಲ ಬಡಿದು ಬಗ್ಗಿಸುವುದಕ್ಕಾಗಿ.
ಆದರಿದು ಕಬ್ಬಿಣದ ತುಂಡಲ್ಲ!
ಇಲ್ಲಿ ನಾನಿದ್ದೇನೆ ಕಬೀರ, ನೀನೆಂಬ ಆಲದ ಬಿಳಲು
ಬಗ್ಗುವುದಂತೂ ಇಲ್ಲ, ಮುರಿಯುವುದೆಂತು?!
ಈ ನೆಲದೊಳಗೆ ಹೂತು, ಬೇರು ಕಚ್ಚುತ್ತೇನೆ ಇದೇ ನೆಲದ ಮಣ್ಣಲ್ಲಿ
ಬಸವಾದಿ ಶರಣರ ನುಡಿಕಲಿತ ಈ ನಾಡಲ್ಲಿ ನನ್ನದೇ ಬೀಡಲ್ಲಿ!
*****
1 thought on “ಮಣ್ಣು ಹೇಳಿತು ಕುಂಬಾರನಿಗೆ…”
ಚೆನ್ನಾಗಿದೆ