ಬದಲಾಗುವುದಪರೂಪ

ಬದಲಿಸಬಹುದು ರೂಪ 

ಬದಲಾಗುವುದಪರೂಪ 

ಕಾವಿ ವಸ್ತ್ರವನ್ನುಟ್ಟು 

ಜಪಮಣಿಸರಗಳ ತೊಟ್ಟು 

ಹಣೆಗೆ ಭಸ್ಮವನು  ಬಳಿದು 

ಯತಿಯ ವೇಷವನು ತಳೆದು 

                        ನುಡಿದರೆ ಭಿಕ್ಷಾಂದೇಹಿ 

                     ಆಗುವಿಯಾ ನಿರ್ಮೋಹಿ?

ಸಾಧ್ವಿಯ ನೆಪದಲಿ ಬಂದು 

ಮಗುವ ಹಿಡಿದೆತ್ತಿ ತಂದು 

ಮುದ್ದು ಹಾಡುಗಳ ಹಾಡಿ 

ವಿಷದ ಎದೆಹಾಲ ನೀಡಿ

         ತಾಯಿಯಾಗುವಿಯ ಹೆಣ್ಣೆ? 

          ಹೆಣ್ಣೆನುವರೆ ನಿನ್ನನ್ನೆ!

ಗೆಳೆಯನ ಹಾಗೆ ನಟಿಸಿ 

ಹಗಲಿರುಳೂ ತಟವಟಿಸಿ 

ಇನಿದನಿಯಲಿ ಮಾತಾಡಿ 

ವಂಚನೆಗೈಯುವಿ ಖೋಡಿ 

        ಮಾಡಿದಿ ಮಿತ್ರದ್ರೋಹ 

        ವಿನಾಶ ನಿಸ್ಸಂದೇಹ 

ಬದಲಾಗಲು,ಬೇಕು,ಅಂತರಂಗದಲಿ 

ಉರಿವ ದೊಡ್ಡ ಬೆಂಕಿ 

ನಿನ್ನನೆ ಸುಟ್ಟು ನಿನ್ನ ಬೂದಿಯಲೆ 

ಎದ್ದು ಬರುವಂತಿ!

‘ಬದಲಾಗುವುದು’ ದೊಡ್ಡ ಸಾಧನೆ

ಇಡೀ ಬದುಕು ಯಜ್ಞ 

ತಪೋನಿಷ್ಠನೆ ನಿನಗೆ ಜಯವಿರಲಿ 

ಸಾಗಲಿ   ನಿರ್ವಿಘ್ನ!

*ಡಾ.ಚಿಂತಾಮಣಿ  ಕೊಡ್ಲೆಕೆರೆ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

17 thoughts on “ಬದಲಾಗುವುದಪರೂಪ”

  1. ನಾ.ದಾಮೋದರ ಶೆಟ್ಟಿ

    ಸರಳ ಹಾಗೂ ಮಾರ್ಮಿಕ ಕವನ ಕಿಡ್ಲಕೆರೆಯವರೇ.

  2. ನಾ.ದಾಮೋದರ ಶೆಟ್ಟಿ

    ಸರಳ ಹಾಗೂ ಮಾರ್ಮಿಕ ಕವನ ಕೊಡ್ಲಕೆರೆಯವರೇ.

    1. ಭೌತಿಕತೆ ತಾತ್ವಿಕತೆಯೊಂದಿಗೆ ಸಂವಾದಗೈಯ್ಯುತ್ತಿದೆ. ಹುಟ್ಟುವುದು ಪ್ರಾಕೃತಿಕ. ಮರುಹುಟ್ಟು ಪಡೆಯುವುದು…?
      ಅದೊಂದು ಮಹಾನ್ ಹೋರಾಟ. ಪ್ರೀತಿ ಪಡೆಯುವುದರಲ್ಲಿಲ್ಲ. ಕೊಡುವುದರಲ್ಲಿದೆ.
      ಸ್ವಾರ್ಥ ಕಪಟವಿಲ್ಲದಲ್ಲಿ ಪ್ರೀತಿ ಗೆ ಸಹಜ ಸ್ಥಾನ. ಅದು ತನ್ನಂತಾನೇ ಚಿಮ್ಮುವುದು.
      ಪ್ರೀತಿ ಯ ಕನಸಿನ ಅಪ್ರತಿಮ ಕವನ.
      ಧನ್ಯವಾದ.

  3. Dr Madhavi S Bhandary

    ಬದಲಾವಣೆ ಅಂತರಂಗದಿಂದ ಆಗಬೇಕೆ ಹೊರತು ಬಾಹ್ಯ ಪರಿವರ್ತನೆಯಿಂದಲ್ಲ, ಎಂಬುದನ್ನು ನಿರೂಪಿಸಿದ ಡಾ. ಚಿಂತಾಮಣಿ ಕೊಡ್ಲಕೆರೆಯವರ ಸುಂದರ ಕವನ.

  4. MANOHARA M GOKHALE

    ಪುರಾಣ ಇತಿಹಾಸಗಳ ಚಿತ್ರಣದೊಂದಿಗೆ ಭೂತ ವರ್ತಮಾನ ಭವಿಷ್ಯತ್ ಗಳಿಗೆ ಸಂದೇಶ ಹೊತ್ತ ಕವಿತೆ.

  5. “ಬದಲಾಗುವುದು ದೊಡ್ಡ ಸಾಧನೆ.ಇಡೀ ಬದುಕು ಯಜ್ಞ”- ಅರ್ಥಪೂರ್ಣ ಸಾಲುಗಳು.
    ನಿಜ.ನಮ್ಮೊಳಗೇ ಇರುವ ತಾಮಸ ಪ್ರವೃತ್ತಿಗಳನ್ನು ಹತ್ತಿಕ್ಕುವುದು ಸುಲಭವಲ್ಲ.ಬದುಕು ಅನುಭವಗಳಿಂದ ಪಕ್ವವಾಗುತ್ತಾ ಬದಲಾಗುತ್ತಾ ಹೋದಾಗಲೇ ಅರ್ಥಪೂರ್ಣ.ಉತ್ತಮ ಕವನ.ಅಭಿನಂದನೆಗಳು👏🏼💐

  6. ಕವನವು ಸರಳ
    ಇಂಗಿತ ಬಹಳ
    ಅಂತರಂಗ ಬದಲಾದರೆ
    ಜೀವನ ಫಳ ಫಳ.

  7. ವಿಶ್ವೇಶ್ವರ ಗಾಯತ್ರಿ ಬೆಂಗಳೂರು

    ತುಂಬಾ ಅರ್ಥಪೂರ್ಣ ಕವನ.
    ಮಾರ್ಮಿಕವಾಗಿದೆ.
    ಓದಿ ತುಂಬಾ ಸಂತೋಷವಾಯಿತು

    1. ಆರತಿ ರೈ

      ಮನುಷ್ಯನಿಗೆ ಅಂತರಂಗ ಶುಧ್ಧಿ ಒಂದಿದ್ದರೆ ಸಾಕು. Sir, your writing ✍️, as usual comes out naturally from your ಅಂತರಂಗ.

  8. ತಮ್ಮಣ್ಣ ಬೀಗಾರ

    ಬದುಕ ಯಜ್ಞದಲ್ಲಿ ಬೆಂದು ಆಂತರ್ಯದ ಬದಲಾವಣೆ ಆಗಬೇಕೇ ಹೊರತು ಬಾಹ್ಯ ಬದಲಾವಣೆಯಿಂದಲ್ಲ ಎಂಬುದು ಸತ್ಯವಾದ ಮಾತು. ಕವನ ಚನ್ನಾಗಿದೆ.ನಮಸ್ತೆ ಸರ್

  9. Hema Sadanand Amin

    ಬದಲಾಗುವುದಪರೂಪ ಕವನದ ಮೂಲಕ ಬದಲಾವಣೆ ನಮ್ಮಿಂದಲೇ ನಮಗೆ ಆಗಬೇಕು ಅದಕ್ಕೆ ಇತರ ಪರಿಕರಗಳು ಅನವಶ್ಯಕ ಎಂದು ಡಾ. ಚಿಂತಾಮಣಿ ಕೊಡ್ಲೇಕೆರೆ ಅವರು ಸುಂದರವಾಗಿ ಚಿತ್ರಿಸಿದ್ದಾರೆ.

  10. ಡಾ. ಸುಬ್ರಹ್ಮಣ್ಯ ಭಟ್ಟ

    ಕವಿತೆ ಮನಸ್ಸಿಗೆ ಹಿತವನ್ನು ಉಂಟುಮಾಡಿದೆ. ಸುಂದರ ಕಲ್ಪನೆ ಧನ್ಯವಾದಗಳು

  11. ಜಿ ವಿ ಅರುಣ

    ಚಿಂತನೆಗೆ ಹಚ್ಚುವ ಸುಂದರ ಕವನ.
    ಹೌದು, ‘ಬದಲಾಗುವುದು’ ದೊಡ್ಡ ಸಾಧನೆ,
    ಅದಕ್ಕೆ ಮೊದಲು ನಾವು ‘ಸಂಕಲ್ಪ’ ಮಾಡಬೇಕು – ಬದಲಾಗಲು.

  12. ಶ್ರೀಧರಸ್ವಾಮಿ

    ಕೊಡ್ಲೆಕೆರೆಯವರೆ, ನಿಮ್ಮ ನವಿರಾದ ಶೈಲಿಯ ಅಂತರಂಗವನ್ನು ಮುಟ್ಟುವ ಕವಿತೆ ಇದು.
    ಅದು ನುಡಿ ನಡೆಯ ಅಂತರವನ್ನು ಅತ್ಯಂತ ಸಹಜವಾಗಿಸಿದವರ ಹಿನ್ನೆಲೆಯಲ್ಲಿ ಕಂಡಾಗ ಹೆಚ್ಚು ಮಹತ್ವ ಎನಿಸುತ್ತದೆ.

    ಹೊರ ಆವರಣಕ್ಕಿಂತ ಒಳ ಹೂರಣ ಪ್ರಮುಖವೇ. ಕೆಲವೊಮ್ಮೆ ಆವೆಣದ ಪ್ರಭಾವವೂ ಇರುತ್ತದೆ.

    ರಾಮಾಯಣದ ಪ್ರಸಂಗ. ಸೀತೆಯನ್ನು ಲಂಕೆಯ ಅಶೋಕವನದಲ್ಲಿರಿಸಿದ ಸಮಯ. ರಾಮನ ವೇಷ ಧರಿಸಿ ಸೀತೆಯನ್ನು ಮರಳುಮಾಡಬಹುದಲ್ಲ ಎನ್ನುವ ಸಲಹೆಯನ್ನು ಕಾರ್ಯಗತ ಮಾಡಲು ಪ್ರಯತ್ನಿಸಿದ ರಾವಣ. ನಂತರ ರಾವಣ ಸೀತೆಯ ಬಳಿ ಹೋಗಲು ಸಾಧ್ಯವಾಗಲೇ ಇಲ್ಲ. ನಂತರ ರಾವಣ ಹೇಳ್ತಾನೆ, ರಾಮನ ವೇಷದಲ್ಲಿದ್ದಷ್ಟು ಹೊತ್ತು ನಾನು ರಾಮನೇ ಆಗಿದ್ದೆ, ಸೀತೆಯ ಬಳಿ ಹೋಗುವುದರಲಿ, ಅಪಹರಿಸಿದ್ದೆ ತಪ್ಪು ಎನಿಸಿ ವಾಪಾಸ್ ಕಳಿಸಬೇಕು ಎನಿಸಿತ್ತು.
    ಹೀಗೇ ರಾಮನ ವೇಷ ಧರಿಸಿದ ಮಾತ್ರಕ್ಕೇ ಬದಲಾವಣೆಯಾಗಿತ್ತು ರಾವಣನ ಚಿಂತನೆ.
    ಹೀಗೆ ಆವರಣದ ಪ್ಭಭಾವ ಹೂರಣದ ಮೇಲಾಗುವುದನ್ನು ಅಲ್ಲಗಳೆಯಲಾಗದು.

  13. ರಾಮನಾಥ್

    ಬದಲು=change=ಚಿಲ್ಲರೆ ಎಂದು ಅರ್ಥ ಮಾಡಿಕೊಂಡು ಚಿಲ್ಲರೆಯಾಗಿಯೇ ಮುಂದುವರಿಯುವರು ಓದಿ, ಅರಿಯಬೇಕಾದ ಸಾಲುಗಳು.

  14. Dr. Channesh Honnali

    ಸರಳವಾದ ಪದಗಳಲ್ಲಿ ಗಟ್ಟಿಯಾದ ತಾತ್ವಿಕತೆಯಯೊಂದನ್ನು ಸುಂದವಾಗಿ ಕಟ್ಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter