ಆಗಸದಲ್ಲಿ ಕಪ್ಪು ಮೋಡಗಳು ದಟ್ಟೈಸಿದ್ದವು. ಮಳೆ ಜಿನುಗುತ್ತಿತ್ತು. ಸಾವಿತ್ರಿ ಕಿಟಕಿಯ ಗಾಜಿಗೆ ಮುಖವಿಟ್ಟು ಹಿತ್ತಲಲ್ಲಿ ನೆಟ್ಟ ಹೂವಿನ ಗಿಡಗಳು ಚಿಗುರಿವೆಯೇ ನೋಡುತ್ತಿದ್ದಳು. ಕಿಟಕಿಯಿಂದ ಹತ್ತಾರು ಅಡಿ ದೂರವಿದ್ದ ಗಿಡ ಚಿಗುರಿದ್ದು ಕಾಣುವುದು ಅಶಕ್ಯ ಎಂದೆನಿಸಿದೊಡೆ ಒಂದು ಬಗೆಯ ಹತಾಶೆಯಿಂದ ಹಾಲ್ನ ಖುರ್ಚಿಯಲ್ಲಿ ಕುಸಿದು ಕುಳಿತವಳ ಮನದಲ್ಲಿ ಪ್ರತಿ ದಿನವೂ ಆಫೀಸಿಗೆ ಹೋಗುವಾಗ ಮಗ ಹೇಳುವ ಮಾತುಗಳು ಮರುಕಳಿಸಲಾರಂಭಿದವು.
‘ಅಮ್ಮಾ ನೀ ಅಡ್ಗೆ ಒಂದು ಮಾಡಿ ಹಾಕು ಯನಗೆ.ಸಾಕೇ ಸಾಕು.ನೀ ಆರಾಮಾಗಿರು. ಹೂವಿನ ಗಿಡಾ ನೆಡ್ತಿ ತರಕಾರಿ ಬೆಳಿತಿ ಇಂತಾ ಹುಚ್ಚೆಲ್ಲ ಬಿಟ್ಟ ಬಿಡು. ನಿನಗ ಎಷ್ಟ ಬೇಕೋ ಅಷ್ಟ ತರಕಾರಿ ತಂದು ಕೊಡ್ತಿ. ದಿನಾ ಬೇಕಾದರೆ ಮಾರ್ಕೆಟಿಂದ ಹೂವು ತಂದುಕೊಡ್ತಿ….’
ಮಗನಿಚ್ಛೆಯಂತೆ ನಡೆದುಕೊಂಡು ಬಿಡಬೇಕು ಎಂದುಕೊಂಡರೂ ಸಾವಿತ್ರಿ ಸುಮ್ಮನೇ ಕುಳಿತಿರಲಾಗದೇ ಚಟಪಡಿಸಲಾರಂಭಿಸಿದಳು .ಕೊನೆಗೆ ಮಗನಿಗಿಷ್ಟವಾದ ಪಲ್ಯ ಮಾಡಲೆಂದು ಚೌಳಿಕಾಯಿ ಮುರಿಯುತ್ತ ಕುಳಿತಳು. ‘ಬೆಳೆದ ಚೌಳಿಕಾಯಿ ನಾರು ತೆಗೆದ್ರೂ ರುಚಿ ಆಗ್ತಿಲ್ಲೆ’ಎಂದು ಗೊಣಗಿಕೊಳ್ಳುವಾಗ ಹಿತ್ತಲಲ್ಲಿದ್ದ ತೊಂಡೆ ಚಪ್ಪರದ ನೆನಪಾಯಿತು. “ಒಂದು ವಾರಾತು ಕಾಯಿ ಕೊಯ್ಯದೇಯಾ. ವಾರದ ಹಿಂದೆ ನೋಡಿದಾಗ ಒಂದ್ರಾಶಿ ಹೂವಿತ್ತು ಇಷ್ಟು ದಿನದಲ್ಲಿ ಅವೆಲ್ಲ ಎಳೆಯ ಕಾಯಾಗಿರ್ತ. ಒಮ್ಮೆ ಮೆಲ್ಲಗೆ ಹೋಗಿ ಕೊಯ್ದುಕೊಂಡು ಬಂದರೆ .ಒಳ್ಳೆಯ ಸಾಂಬಾರು ಮಾಡಲಾಗ್ತು. ಆವಾಗ್ಲೆ ಊರಿನಿಂದ ತಂದು ನೆಟ್ಟ ಗಿಡಗಳೆಲ್ಲ ಬೇರು ಕೊಟ್ಟು ಚಿಗುರಿದ್ದ ನೋಡಿದಂಗೂ ಆಗ್ತು”ಎಂದುಕೊಳ್ಳುತ್ತಲೇ ಮುರಿದ ಚೌಳಿಕಾಯನ್ನು ಒಂದುಕಡೆ ಸರಿಸಿಟ್ಟಳು.ಮಗನ ಮಾತನ್ನೂ ಮನದ ಮೂಲೆಗೆ ಸರಿಸಿಟ್ಟು ಹಿತ್ತಲಿಗೆ ಹೋಗಲೆಂದು ಹಿಂಬಾಗಿಲು ತೆರೆದಳು. ತಣ್ಣನೆಯ ಗಾಳಿ ಮುಖಕ್ಕೆ ಸೋಕಿ ಹಾಯೆನಿಸಿತು.
ಮಳೆಗಾಲದ ನೀರುಂಡು ಸೊಕ್ಕಿ ಬೆಳೆದಿದ್ದ ಗಿಡಗಳತ್ತ ಕಣ್ಣು ಹಾಯಿಸಿದಳು. ಅರಳಿದ ಗುಲಾಬಿಯ ಚೆಲುವು, ಗಿಡದ ತುಂಬೆಲ್ಲ ಮೊಗ್ಗು ಬಿರಿದು ನಕ್ಕಂತೆ ಕಾಣುವ ಮಲ್ಲಿಗೆ, ಅಂಗೈ ಅಗಲದ ಡೇರೆ, ನೆಲದೊಡಲ ಪ್ರೇಮವರಳಿದಂತೆ ಕಾಣುವ ತಾವರೆ…ಇದೇ ಮೊದಲ ಬಾರಿ ಇವುಗಳ ಚೆಲುವನ್ನು ಆಸ್ವಾದಿಸುತ್ತಿದ್ದೇನೆ ಎಂಬಷ್ಟು ಹಿಗ್ಗಿನಿಂದ ಸರ್ವೇ ನಡೆಸಿದಳು ಸಾವಿತ್ರಿ. ನಲ್ಮೆಯ ಗಿಡಗಳೊಂದಿಗೆ ಸಂವಾದವೂ ಶುರುವಾಯಿತು.
‘ಆರೇರೆರೆರೆ ಸತ್ತೇ ಹೋಗತ್ಯನ ಮಾಡಿದ್ದಿದ್ದಿ. ಬದುಕಿ ಕಾಯಾಗಿಗಿದ್ಯನೇ ಮೆಣಸಿನ ಗಿಡವೇ? ಅಂತೂ ಒಂದು ಉಪ್ಪಿಟ್ಟಿಗೆ ಬೇಕಪ್ಪಷ್ಟು ಕಾಯಾದ್ರು ಕೊಟ್ಟೆ ಮಾರಾಯ್ತಿ. ಅಯ್ಯೋ ಶಿವಾ ಶಿವಾ ಎಂತಾ ತಪ್ಪು ಮಾಡತಿದ್ದಿ ನಾಲ್ಕು ವರ್ಷದಿಂದ ಕಾಯಿ ಬಿಡತಾ ಇಲ್ಲೆ ಕಡಿದು ಹಾಕವು ಅಂತ ಅಂದ್ಕಂಡಿದ್ದ ನಿಂಬೆ ಗಿಡದಲ್ಲಿ ಹೂವು! ಭೂಮಿ ತಾಯಿ ಶಕ್ತಿ ಅಪಾರ.ವಾರದ ಹಿಂದೆ ನೋಡಿದಾಗ ಇವೆಲ್ಲಾ ಹೀಂಗಿದ್ದಿದ್ವೇ ಇಲ್ಲೆ. ಅಂಗೈ ಅಗಲದ ಹಿತ್ತಲಿನೊಳಗೆ ಎಷ್ಟೆಲ್ಲಾ ವೈವಿಧ್ಯ’ ಎಂದುಕೊಳ್ಳುತ್ತಾ ಹೇರಳವಾಗಿ ಕಾಯಿಬಿಟ್ಟಿದ್ದ ತೊಂಡೇ ಚಪ್ಪರದ ಬಳಿ ಬಂದಾಗ ಮನಸ್ಸು ಸಾವಿತ್ರಿಯ ಮನಸ್ಸು ಬಾಲ್ಯಕ್ಕೆ ಮರಳಿತ್ತು.ಚಿತ್ತ ತೌರಿನತ್ತ ಹೊರಳಿತು..
********
ಸಾವಿತ್ರಿಯ ಊರು ಉತ್ತರ ಕನ್ನಡದ ಕಡೇಕೇರಿ. ಇದ್ದಿದ್ದು ಹತ್ತು ಮನೆಗಳು. ಊರಿನ ಎದುರು ಬತ್ತದ ಗದ್ದೆಗಳಿದ್ದರೆ ಪಕ್ಕದಲ್ಲಿ ಅಡಿಕೆ ತೋಟಗಳಿದ್ದವು. ಹಿಂಭಾಗದಲ್ಲಿ ದಟ್ಟ ಕಾನನವಿತ್ತು. ಎಡ ಮಗ್ಗುಲಲ್ಲಿ ಹರಿವ ಮಾನಿ ಹೊಳೆಯಿಂದಾಗಿ ಊರಿಗೆ ಸದಾ ಜಲ ಸಮೃದ್ಧಿ. ‘ಯಂದು ನಾಲ್ಕೆಕರೆ ತ್ವಾಟಾ, ಮೂರೆಕರೆ ಗದ್ದೆ ಇದೆ ಎನ್ನುವ ಗಂಡಸರು ಮನೆಯ ಹೆಂಗಸರಿಗೆ ಭೂಮಿಯ ಒಡೆತನದ ಹಕ್ಕನ್ನೆಂದೂ ಬಿಟ್ಟುಕೊಟ್ಟವರಲ್ಲ. ಕೃಷಿ ಕೆಲಸದಲ್ಲಿ ಮಾತ್ರ ಹೆಂಗಸರಿಗೆ ಹಿರಿಯ ಪಾಲು.’
‘ಹೆಂಗಸರಂದ್ರೆ ನಮ್ಮನೆ ಗಂಡಸರಿಗೆ ಕಾಲ ಕೆಳಗಿನ ಕಸ’ ಎಂದು ಗೊಣಗಾಡುವ ಸಾವಿತ್ರಿಯ ಅಮ್ಮ ಗಂಗೆ ಕೆಲಸದಲ್ಲಿ ಬಲು ಅಚ್ಚುಕಟ್ಟಿನ ಹೆಣ್ಣು. ಮನೆಯ ಬಳಿ ಎರಡು ಗುಂಟೆಯ ಹಿತ್ತಲು ಅವಳ ಕರ್ಮ ಭೂಮಿ.
ಪರಿಚಿತರ್ಯಾರ ಮನೆಗೆ ಹೋಗಲಿ ಯನಗೆ ಓ ಇದೊಂದು ಚೂರು ಗಿಡದ ಹೆಣೆ ಕತ್ತರಿಸಿಕೊಡ್ತ್ಯ? ಎಂದು ಕೇಳಿ ತಂದು ಕಾಳಜಿ ಮಾಡಿ ಬೆಳೆಸುತ್ತಿದ್ದಳು. ‘ನೋಡೆ ನಿಮ್ಮನೆಯಿಂದ ತಂದ ಹೂವಿನ ಗಿಡ ಯಮ್ಮನೆಲ್ಲಿ ಆಳೆತ್ತರ ಬೆಳೆದು ಹೂವಾಜು’ ಎಂದು ಅವರು ಮನೆಗೆ ಬಂದಾಗ ಕರೆದೊಯ್ದು ತೋರಿಸುತ್ತಿದ್ದಳು.
‘ಆ ಗಿಡದಲ್ಲಿ ಹೂವಾಜ ನೋಡವು.ಈ ಗಿಡದಲ್ಲಿ ಹೊಸಾ ಫಲ ಬಂಜು, ಬೆಂಡೆ ಓಳಿಗೆ ಮಣ್ಣು ಏರಿಸವು’ ಹೀಗೆ ಸದಾ ಹಿತ್ತಲ ಗಿಡಗಳ ಬಗ್ಗೆ ಅವಳ ತಲೆಯಲ್ಲಿ ಹಲವು ಯೋಜನೆಗಳು ನಡೆದಿರುತ್ತಿದ್ದವು.
‘ ಎದ್ಕಳೆ ಕೂಸೆ ಹಿತ್ಲಲ್ಲಿ ಆ ನಮನಿ ಹೂವಾಜು ದೇವರಿಗೆ ಹೂ ಕೊಯ್ಕ ಬಾ.ಪರೀಕ್ಷೆಲ್ಲಿ ಚೊಲೋ ಮಾರ್ಕ್ಸ ಬರ್ತು!’ಎಂದು ಉದಯ ರಾಗ ಹಾಡುತ್ತಲೆ ಎಬ್ಬಿಸುವ ಅಮ್ಮ ರೀತಿ ಸಾವಿತ್ರಿಗೆ ಕೆಲವೊಮ್ಮೆ ಸಿಟ್ಟು ತರಿಸುತ್ತಿತ್ತು.ಆದರೆ ಕೆಲಸ ಮಾಡದಿದ್ದರೆ ದೋಸೆ ಆಸರಿಗೆ ಬದಲು ತೆಳ್ಳಗಿನ ಗಂಜಿ ಹಾಕುತ್ತಾಳೆ ಎಂಬ ಅರಿವಿರುವುದರಿಂದಲೋ ದೇವರ ಕೆಲಸಕ್ಕೆ ಬೇಸರಿಸಿಕೊಂಡರೆ ಕೆಟ್ಟದ್ದಾದೀತೆಂಬ ಹೆದರಿಕೆಯಿಂದಲೋ ಹಸಿರಿನ ಸಹವಾಸಕ್ಕೆ ಬಂದ ಸಾವಿತ್ರಿಗೆ ಕ್ರಮೇಣ ಅಮ್ಮನಷ್ಟೇ ಪ್ರೀತಿ ಹಿತ್ತಲಿನ ಹೂಗಿಡಗಳ ಬಗ್ಗೆ ಬೆಳೆದಿತ್ತು.
ರೇಷಿಮೆದಾರದಂತಿರುವ ಉದ್ದನೆಯ ಜಡೆಯನ್ನು ಬಾಚಿ ಎರಡು ಜಡೆ ಹಾಕಿಕೊಂಡು ಮುಡಿಯಲ್ಲಿ ಆಯಾ ಕಾಲಕ್ಕನುಸಾರವಾಗಿ ಕನಕಾಂಬರ, ಮಲ್ಲಿಗೆ ಗೆಂಟಿಗೆ, ಸೇವಂತಿಗೆ ಡೇರೆ, ಮೋತಿ ಮಲ್ಲಿಗೆ, ಗುಲಾಬಿಯನ್ನು ಮುಡಿದುಕೊಳ್ಳುತ್ತಿದ್ದಳು.
‘ಐಯ್ಯಾ ಎಷ್ಟು ಚೆಂದಾಜೆ ನಿನ್ನ ಜಡೆಲಿದ್ದ ಮಾಲೆ ಅಥವಾ ಹೂವು’ ಎಂದು ಗೆಳತಿಯರು ಹೇಳಿದಾಗ ಹೆಮ್ಮೆ ಮುಗಿಲೆತ್ತರಕ್ಕೇರುತ್ತಿತ್ತು.ರಜಾ ದಿನಗಳಲ್ಲಿ ಸಾವಿತ್ರಿ ಅಮ್ಮನೊಂದಿಗೆ ಹಿತ್ತಲ ಕೆಲಸದಲ್ಲಿ ಕೈಗೂಡಿಸುತ್ತ ಅನೇಕ ಕೆಲಸಗಳನ್ನು ಕಲಿತುಕೊಂಡಳು.
************
‘ಬ್ಯಾಂಕಿನಲ್ಲಿ ಕ್ಲರ್ಕ ಇದ್ನಡಾ. ಮಾಣಿ ಚೆಂದಿದ್ನಡಾ. ಹುಬ್ಬಳ್ಳಿಯಲ್ಲಿ ಕೆಲಸ. ನಿನ್ನ ಜಾತಕ ಆಗ್ತು’ ಎಂಬ ಅಪ್ಪನ ನುಡಿಗೆ ನಾಚಿಕೆಯಿಂದ ಪುಸ್ತಕದಲ್ಲಿ ಮುಖ ಮುಚ್ಚಿಕೊಂಡಿದ್ದಳು ಸಾವಿತ್ರಿ.
ಮರುದಿನ ನೋಡಲೆಂದು ಬಂದ ಪ್ರಕಾಶ ಸಾವಿತ್ರಿಯನ್ನು ಇಷ್ಟಪಟ್ಟ. ಹೂವೆತ್ತಿದಷ್ಟು ಸಹಜವಾಗಿ ಎರಡೂ ಮನೆಯವರಿಗೂ ಸಂಬಂಧಗಳು ಹೊಂದಿ ಮದುವೆ ನೆರವೇರಿತು.
ಹುಬ್ಬಳ್ಳಿಯಲ್ಲಿ ಬ್ಯಾಂಕ್ ಕ್ವಾರ್ಟರ್ಸನಲ್ಲಿ ಮಗಳ ಸಂಸಾರ ಅಣಿಹೂಡಿ ಕೊಟ್ಟ ಸಾವಿತ್ರಿಯ ಅಮ್ಮ’ ಮಗಳೇ ನಿಂಗೆ ಚಾನ್ಸು ಆಳಗಳನ್ನ ಸುಧಾರಿಸದಿಲ್ಲೆ, ಸಗಣಿ ತೆಗೆಯದಿಲ್ಲೆ, ಹಾಲ ಕರಿಯದಿಲ್ಲೆ ಸುಖದ ಜೀವ್ನಾ.ಗಂಡಂಗೆ ಬೇಕ ಬೇಕಾಗಿದ್ದ ಅಡಿಗೆ ಮಾಡಿಕ್ಯಂಡು ಮಹಾರಾಣಿ ಹಾಂಗೆ ಇರಲಕ್ಕು’ ಎಂದು ಹರಸಿ ಬಂದ ಎರಡೇ ದಿನದಲ್ಲಿ ವಾಪಸ್ ಹೊರಟಳು.
‘ಅಮ್ಮಾ ಇನ್ನೊಂದು ನಾಲ್ಕ ದಿನ ಇರೇ’ ಎಂದ ಮಗಳಿಗೆ ‘ಉಳಿದ ಕೆಲಸಾ ನಿನ್ನ ಅಪ್ಪ ಮಾಡ್ತಾ ಆದ್ರೆ ಆನು ನೆಟ್ಟ ಗಿಡಕ್ಕೆ ಕುಡ್ತೆ ನೀರೂ ಕಾಣಿಸ್ತ್ನಿಲ್ಲೆ. ಈಗ ಬ್ಯಾಸಿಗೆ ನೀರು ಹಾಕದಿದ್ರೆ ಗಿಡಾ ಎಲ್ಲಾ ಒಣಗ್ತ… ಮತ್ತೆ ಮಳೆಗಾಲದಲ್ಲಿ ಬರ್ತಿ’ ಎಂದು ಸಮಾಧಾನ ಹೇಳಿ ಗಂಗೆ ಊರಿಗೆ ಮರಳಿದಳು..
‘ ಕೂತ್ರೆ ನಿಂತ್ರೆ ಅಂವಂದೇ ಧ್ಯಾನ ಜೀವಕ್ಕಿಲ್ಲ ಸಮಾಧಾನ’ ಎನ್ನುವಂತೆ ಸಾವಿತ್ರಿಯ ಇಡೀ ಪ್ರಪಂಚ ಪ್ರಕಾಶಮಯವಾಗಿ ಹೋಗಿತ್ತು.. ಗಂಡನಿಗೇನಿಷ್ಟ ಆ ತಿಂಡಿ ಅಡುಗೆಯನ್ನು ಹುಡುಕಿ ತಯಾರಿಸುವುದು, ಮನೆಯನ್ನು ಚೊಕ್ಕ ಮಾಡುವುದು ಬಟ್ಟೆ ತೊಳೆಯುವುದು,ಇಸ್ತ್ರಿಹಾಕುವುದು ಸಂಜೆ ಆದೊಡನೆ ಅವನೊಂದಿಗೆ ವಾಕಿಂಗ್ ಹೋಗುವುದು’ ಹೀಗೆ ಸಾವಿತ್ರಿಯ ದಿನ ಕಳೆಯುತ್ತಿತ್ತು.
ಆರೇ ತಿಂಗಳಿನಲ್ಲಿ ಬ್ಯಾಂಕ್ ಎಕ್ಸಾಮಿನಲ್ಲಿ ಪಾಸಾಗಿದ್ದರಿಂದ ಪ್ರಕಾಶನಿಗೆ ಆಫೀಸರ್ ಆಗಿ ಪ್ರಮೋಷನ್ ದೊರೆಯಿತು.ಕೆಲಸದ ಒತ್ತಡ ಹೆಚ್ಚಾದಂತೆ ಅವನಿಗೆ ಸಾವಿತ್ರಿಯೊಂದಿಗೆ ಕಳೆಯಲು ಸಿಗುವ ಸಮಯಾವಕಾಶ ಕಡಿಮೆಯಾಯಿತು.ಇರುವ ಇಬ್ಬರಿಗೆ ಅಡುಗೆ ಎಷ್ಟು ಹೊತ್ತಿನ ಕೆಲಸ? ಸಾವಿತ್ರಿಗೆ ಬಿಡುವಿನ ವೇಳೆಗಳೆಯಬೇಕೆಂದರೆ ಕಷ್ಟವಾಗತೊಡಗಿತು.…ಏನಿದೆ ಈ ನಗರದ ಬದುಕಿನಲ್ಲಿ? ಹಳ್ಳಿಯಲ್ಲಾದರೆ ಗಂಡನಿಗೆ ಬಿಡುವಿಲ್ಲ ಎಂದಾದರೆ ಒಂದಿಷ್ಟು ಹೂವಿನ ಗಿಡಗಳನ್ನಾದರೂ ಬೆಳೆಸಬಹುದು ನಾಯಿ ಹಸುಗಳನ್ನಾದರೂ ಸಾಕಬಹುದು ಎನ್ನಿಸಲಾರಂಭಿಸಿತು.
‘ರೀ ಯನಗೆ ಬೇಜಾರು ಬರ್ತು.ನಿಮಗೋ ಮೊದಲಿನ ಹಾಂಗೆ ಪುರುಸೊತ್ತು ಸಿಗತಿಲ್ಲೆ….ಆನು ಎಂತದಾದ್ರೂ ನೌಕರಿ ಸೇರಲ?ಎಂದು ಗಂಡನನ್ನು ಕೇಳಿದಳು.ಅವನು ಮುಗುಳ್ನಗುತ್ತಾ ‘ಈ ಹುಬ್ಬಳ್ಳಿಯಲ್ಲಿ ನೀನು ಓದಿರುವ ಡಿಗ್ರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ದುಡಿಯುವ ಕೆಲಸ ಸಿಗಲಕ್ಕು ಅಷ್ಟೇಯಾ.ಅದಕ್ಕೆ ಮುಂಜಾನೆಯಿಂದ ಸಂಜೆ ತನಕಾ ಕಷ್ಟಪಡವು.ಆನು ದುಡಿದ್ದದ್ದೆಲ್ಲ ನಿನ್ನ ಕೈಗೇ ತಂದು ಹಾಕ್ತಿ.ಮತ್ತೆಂತಕ್ಕೆ ನಿನಗೆ ನೌಕರಿ ಬೇಕೆ?’ಉತ್ಸಾಹಕ್ಕೆ ತಣ್ಣೀರೆರೆಚಿದ.
ಬಣಗುಡುವ ಹಗಲಿನ ಬೇಸರ ಕಳೆಯಲು ಕಿಟಕಿಗೆ ಮುಖವಿಟ್ಟು ನಿಂತಾಗ ಎರಡು ಅಂತಸ್ಸಿನ ಮನೆಯ ಕಿಟಕಿಯಾಚೆ ಕಾಣುವ ಮರದ ತಲೆಗಳೇ ಕಾಣುತ್ತಿದ್ದವು… ತವರು ಮನೆಯ ಸುತ್ತಲಿನ ಕಾಡಿನಲ್ಲಿ ಸುತ್ತಿದ. ಹಿತ್ತಲಿನಲ್ಲಿ ಗಿಡಗಳೊಂದಿಗೆ ಒಡನಾಡಿದ ನೆನಪು ದಟ್ಟವಾಗಿ ಕಾಡುತ್ತಿದ್ದವು.ಸ್ವಂತಕ್ಕೊಂದು ಹಿಡಿ ಭೂಮಿಯಿಲ್ಲದ ಮೇಲೆ ಹಸಿರಿನೊಂದಿಗೆ ಗಾಢ ಸಂಬಂಧವೆಲ್ಲಿಯದು?ಪೆಟ್ಟಿಗೆಯಂತಹ ಕ್ವಾರ್ಟರ್ಸ ಗೋಡೆಯನ್ನು ಇಡೀ ದಿನ ನೋಡಿ ಸಾವಿತ್ರಿಗೆ ರೇಜಿಗೆ ಹುಟ್ಟುತ್ತಿತ್ತು.
ಮಗ ರವಿ ಮಡಿಲು ತುಂಬಿದಾಗ ಇಂತಹ ಹಳಹಳಿಕೆಯಿಂದ ಕೊಂಚ ಮುಕ್ತಿ.ಅವನ ಅಳು ನಗು ಆಟಗಳಲ್ಲಿ ಬೆರೆಯುತ್ತ ಅವನೊಂದಿಗೆ ತೆವಳುವ, ಅಂಬೆಗಾಲಿಕ್ಕುವ ಸಂಭ್ರಮದಲ್ಲಿ ಹಗಲು ರಾತ್ರಿಗಳು ಸರಿಯುವುದೇ ಅರಿವಾಗುತ್ತಿರಲಿಲ್ಲ. ವರುಷ ತುಂಬುವಷ್ಟರಲ್ಲಿ ನಿಲ್ಲಲು ನಡೆಯಲು ಆರಂಭಿಸಿದ ರವಿಗೆ ಮನೆ ಎಂದರೆ ಬೇಸರ.ಸದಾ ಕ್ವಾರ್ಟರ್ಸನ ಆವರಣದಲ್ಲಿಯೇ ಇರೋಣವೆಂಬ ಹಠ.ದಿನಕ್ಕೆ ಹತ್ತಾರು ಸಲ ನಲವತ್ತು ಮೆಟ್ಟಿಲಿಳಿದು ಹತ್ತಿ ಸುಸ್ತಾದಳು. ಸಾವಿತ್ರಿ ಅಮ್ಮನಿಗೆ ಮನೆಗೆಲಸದ ಒತ್ತಡವೂ ಇರುತ್ತದೆ ಎನ್ನುವ ಅರಿವಿರದ ಪುಟ್ಟ ಮಗುಇಡೀ ದಿನವೂ ಆವರಣದಲ್ಲಿರುವ ಜಾರುಬಂಡಿ, ಜೋಕಾಲಿ ಆಡುತ್ತಲೋ, ಪುಟು ಪುಟುನೆ ಓಡಾಡಿ ಎಲ್ಲರೊಂದಿಗೆ ಲುಟುಲುಟನೆ ಮಾತನಾಡುತ್ತ ಬೆಳೆಯಲಾರಂಭಿಸಿತು.
*************
‘ರೀ ಇನ್ನೆಷ್ಟು ದಿನಾ ಹಿಂಗೆ ಈ ತ್ರಿಶಂಕು ಸ್ವರ್ಗದಂತಹ ಮನೆಯಲ್ಲಿ ಬದುಕದು ಎಲ್ಲಿಯಾದರೂ ಪುಟ್ಟದೊಂದು ಸೈಟು ನೋಡಿ.. ಬ್ಯಾಂಕಿನಲ್ಲಿಯೇ ಕೆಲ್ಸ ಇರದ್ರಿಂದ ಸಾಲದ
ಸವಲತ್ತಂತೂ ಸಿಗತು.’. ಎಂದು ಗಂಡನಿಗೆ ವರಾತ ಹಚ್ಚಲಾರಂಭಿಸಿದಳು ಸಾವಿತ್ರಿ..’ಸೈಟ ತಗಂಡ್ರೆ ಆತನೆ ಮನೆ ಕಟ್ಟವು.ಸಾಲ ಮಾಡಿದ್ರೆ ಆಜಿಲ್ಲೆ ತೀರ್ಸವು’ ಎಂದು ಪ್ರಕಾಶ ಹಿಂಜರಿಯಲಾರಂಭಿಸಿದ.
‘ಪುಟ್ಟ ಮನೆ ಸಾಕು ನಮಗೆ.ಮನೆಯ ಸುತ್ತಲೂ ಗಿಡಾ ಹಚ್ಚಲ್ಲೆ ತುಂಡು ಭೂಮಿ ಇದ್ರೆ ಸಾಕು.ಸಾಲಾ ಭಾಳಾ ಆಗ್ತು ಅನ್ಸಿದ್ರೆ ಯನ್ನ ಅಮ್ಮನ ಮನೆಯಲ್ಲಿ ಹಾಕಿದ ಬಂಗಾರ ಬೇಕಾದ್ರೆ ಮಾರಿಬಿಡನ’ ಎಂದು ಸಾವಿತ್ರಿ ದಿನವೂ ಗಂಡನ ತಲೆತಿನ್ನಲಾರಂಭಿಸಿದಳು.
ಪ್ರಕಾಶ ಪರಿಚಿತರೆಲ್ಲರ ಬಳಿ ‘ಎಲ್ಲಾದರೂ ಎನ್. ಎ ಆಗಿರೋ ಸೈಟೊಂದು ಇದ್ದರೆ ಹೇಳಿ ಮಾರಾಯ್ರೆ’ ಎಂದು ಹುಡುಕಲಾರಂಭಿಸಿದ. ಮೂರು ತಿಂಗಳಿನಲ್ಲಿ ಆದರ್ಶ ನಗರದಲ್ಲಿದ್ದ ಮೂರು ಗುಂಟೆಯ ಸೈಟೊಂದು ಸಿಕ್ಕಿತು. ಉಳಿತಾಯದ ಹಣಕ್ಕೆ ಸಾಲ ಮಾಡಿದ ಹಣ ಸೇರಿಸಿಸೈಟು ಖರೀದಿಸಿ. ಇಂಜಿನಿಯರ್ ಹುಡುಕಿ ಮನೆಯ ನೀಲನಕ್ಷೆ ತೆಗೆಸಿದ್ದೂ ಆಯಿತು.ಬ್ಯಾಂಕಿನಿಂದ ಸಾಲ ಮಂಜೂರಾಯಿತು.
ಸೈಟಿನಲ್ಲಿ ಪುಟ್ಟದೊಂದು ಮನೆಯ ನಿರ್ಮಾಣ ನಡೆದಾಗ ಸಾವಿತ್ರಿಯ ಹಸಿರ ಕನಸೂ ಚಿಗುರೊಡೆಯಿತು.ಮನೆಯ ಮುಂಭಾಗದ ಸ್ಲಾಬ್ ಗೆ ತೂಗು ಕುಂಡಗಳನ್ನಿಡಲು ಕಬ್ಬಿಣದ ಹುಕ್ ಇಡಿಸಿದಳು.ತುಳಸಿ ಕಟ್ಟೆ ನಿರ್ಮಿಸಿಕೊಂಡಳು. ಪುಟ್ಟ ಪುಟ್ಟ ಕಟ್ಟೆಗಳನ್ನು ಮಾಡಿಸಿಕೊಂಡಳು.ಮನೆಯ ನಿರ್ಮಾಣ ಕಾರ್ಯ ಮುಗಿದೊಡನೆ ಗೃಹಪ್ರವೇಶಕ್ಕೆ ತಯಾರಿಯೊಂದಿಗೆ ಗಿಡನೆಡುವ ಕೆಲಸವೂ ಶುರುವಾಯ್ತು. ತವರುಮನೆಯಿಂದತಂದ ಹೂವಿನ ಗಿಡಗಳು, ಅಜ್ಜಿಯಮನೆಯಿಂದ ತಂದ ಬಾಳೆ, ಬಸಳೆ, ತೊಂಡೆ, ನರ್ಸರಿಯಿಂದ ತಂದ ಹಣ್ಣಿನ ಗಿಡಗಳು..ಒಂದೇ ಎರಡೇ.ಪ್ರಕಾಶನಿಗೆ ಹೆಂಡತಿಯ ಗಿಡ ಬೆಳೆಸುವ ಆಸಕ್ತಿಯನ್ನು ನೋಡಿ ಕೀಟಲೆ ಮಾಡುವುದೇ ಕೆಲಸ.
‘ಇವತ್ತೆಂತಾ ಗಿಡಾ ನೆಟ್ಯೇ ಸಾವಿತ್ರಿ?ಎಂದರೆ ಸಾಕು ಅಕ್ಕ ಪಕ್ಕದ ಮನೆಯವರ ಸ್ನೇಹ ಬೆಳೆಸಿ ತಂದ ಗಿಡಗಳ ಪ್ರವರ ಬಿಚ್ಚಿಕೊಳ್ಳುತ್ತಿತ್ತು.ರಸ್ತೆಯಂಚಿಗೆ ಬಿದ್ದು ಹುಟ್ಟಿದ ಟೊಮೇಟೋ, ಎಲವರಿಗೆ ಗಿಡಗಳು, ಯಾರ್ಯಾರೋ ಮಳೆಗಾಲದಾರಂಭದಲ್ಲಿ ಕತ್ತರಿಸಿ ಒಗೆದ ಗಿಡಗಳ ಕಟಿಂಗ್ಸ ಎಲ್ಲವೂ ಸಾವಿತ್ರಿಯ ಮನೆಯಂಗಳಕ್ಕೆ ಬಂದು ಮರುಜನ್ಮ ಪಡೆದುಬಿಡುತ್ತಿದ್ದವು.ಪ್ರತೀ ಗಿಡದೊಂದಿಗೆ ಒಂದೊಂದು ಕಥೆ ಇರುತ್ತಿತ್ತು.“ನಮ್ಮನೆ ಹಿತ್ತಲಿನಲ್ಲೇ ಬೆಳೆದ ಕರಿಬೇವಿನ ತಂಬುಳಿ, ನಮ್ಮದೇ ಕೆಸುವಿನ ಸೊಪ್ಪಿನ ಕರಗಲಿ, ನಮ್ಮನೆ ಹಿತ್ತಲಿನಲ್ಲಿ ಆದ ಬದನೇಕಾಯಿ ಪಲ್ಯ” ಎಂದು ದಿನವೂ ಗಂಡ ಮಗನಿಗೆ ಊಟಕ್ಕೆ ಬಡಿಸುವಾಗ ಹೇಳುತ್ತಾ ಹೆಮ್ಮೆಪಡುತ್ತಿದ್ದಳು. ಪರಿಚಿತರ್ಯಾರಾದರೂ ಬಂದರೆ ಯಮ್ಮನೆ ತರಕಾರಿ ಕೊಡ್ತಿ ತಗಂಡು ಹೋಗ್ರೆ ಎಂದುಕವರ್ ತುಂಬಿ ಕಳಿಸುವಾಗಲೂ ತುಂಬು ಸಂಭ್ರಮವೇ. ಪುಟ್ಟ ದೇವರ ಪೀಠ ತುಂಬುವಷ್ಟು ಹೂಗಳು, ಬಂದ ಮುತೈದೆಯರ ಮುಡಿಗೊಂದು ಹೂವು ಅಥವಾ ಮಾಲೆ ತವರುಮನೆಗೆ, ಅಕ್ಕಂದಿರ ಮನೆಗೆ ಹೋಗುವಾಗಲೂಕೈಚೀಲ ತುಂಬಿಕೊಂಡು ಹೋಗುವಷ್ಟು ತರಕಾರಿ ಹಣ್ಣು ಹಂಪಲುಗಳು..ಮಣ್ಣಿದ್ದರೆ, ಬೆಳೆಯುವ ಉತ್ಸಾಹವಿದ್ದರೆ ಎಷ್ಟೊಂದು ಸಮೃದ್ಧಿ!
ಸಾವಿತ್ರಿಯ ಕೆಲಸದಲ್ಲಿ ಮಗ ರವಿಯೂ ಪಾಲುದಾರನೇ.ಸಾಲಾಗಿ ಇಟ್ಟಂಗಿ ಜೋಡಿಸುವುದು, ಬೀಜ ಹಾಕುವುದು, ಕಳೆ ತೆಗೆಯುವುದು ಇಂತಹ ಕೆಲಸದಲ್ಲಿ ರವಿ ಅಮ್ಮನಿಗೆ ಸಹಾಯ ಮಾಡುತ್ತಿದ್ದ.ಎಳೆಸೌತೆ ಕಾಯಿ ಕಾಕಿಹಣ್ಣು, ಸ್ಟ್ರಾಬೆರಿ ಮೆಲ್ಲುತ್ತ ಪೇರಲೆ ಮರ ಹತ್ತಿಳಿಯುತ್ತ ಪಾತರಗಿತ್ತಿಗಳನ್ನು ಹಿಡಿಯಲೆತ್ನಿಸುತ್ತಲೇ ಬೆಳೆದನು ರವಿ.
‘ರೀ ತೊಂಡೇ ಬಳ್ಳಿ ಬದುÀಕಿದ್ದು ಅದಕ್ಕೊಂದು ಚಪ್ಪರಾ ಕಟ್ಟಿಕೊಡ್ರೀ. ಬಸಳೇ ಬಳ್ಳಿಗೆ ಒಂದು ತಟ್ಟಿಕಟ್ಟಿಕೊಡ್ರೀ ಚೆಂದಾಗಿ ಹಬ್ಬಿ ಬೆಳೆಸಲ್ಲಾಗ್ತು.ದಾಸವಾಳದ ಬಡ್ಡೆ ದೊಡ್ಡಕ್ಕಾಯ್ದು ಕತ್ತರಿಸಿಕೊಡಿ ಪ್ಲೀಸ್..ಎಂದು ಸಾವಿತ್ರಿ ಗಂಡನಿಗೂ ಆಗಾಗ ದಮ್ಮಯ್ಯದ ಗುಡ್ಡೆ ಹಾಕುತ್ತಿದ್ದಳು.’
ಭಾನುವಾರವಾದರೂ ನ್ಯೂಸ್ ಪೇಪರನ್ನು ಬುಡದಿಂದ ತುದಿಯವರೆಗೆ ಓದನ ಅಂದ್ರೆ ನಿನ್ನದೊಂದು ಕಾಟ ಮಾರಾಯ್ತಿ’ ಎಂದು ಪ್ರಕಾಶ ಕಮೆಂಟ್ ಹಾಕುತ್ತಲೇ ಹೆಂಡತಿ ಹೇಳಿದ ಕೆಲಸವನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಡುತ್ತಿದ್ದ! ಮನಸ್ಸಿನೊಳಗೇ ಹೆಂಡತಿಯ ಆಸಕ್ತಿಯನ್ನು ಮೆಚ್ಚಿಕೊಳ್ಳುತ್ತಿದ್ದ!…
ಸಾವಿತ್ರಿಯ ಮನೆ ಎಂದರೆ ಕೈತೋಟವೂ ಸೇರಿಯೇ ಎಂಬಂತಿತ್ತು.. ಒಗ್ಗರಣೆಗೆ ಎಣ್ಣೆ ಬಿಸಿಗಿಟ್ಟಾದರೂ ಕರಿಬೇವು ಕೊಯ್ದು ತರಬಹುದಾದ ಅನುಕೂಲ ನಮಗೆ ಈ ಕೈತೋಟ ಕೊಟ್ಟ ಭಾಗ್ಯ..ಎನ್ನುತ್ತಾ ಅಷ್ಟಾಗಿ ಶಿಸ್ತನ್ನು ಹೇರದೇ ಔಷಧೀಯ ಸಸ್ಯ, ತರಕಾರಿ, ಹಣ್ಣುಹಂಪಲು, ಕ್ಯಾಕ್ಟಸ್ಸುಗಳನ್ನೆಲ್ಲ ಬೆಳೆಸಿದ ಸುಂದರ ಕೈತೋಟವನ್ನು ಸಾವಿತ್ರಿ ಸೃಷ್ಟಿಸಿದ್ದಳು.ಮಗ ಬೆಳೆದಂತೆ ಅಂಗಳದ ಸಸ್ಯ ಸಂಕುಲವೂ ಬೆಳೆದಿತ್ತು. ಗಿಡಗಳನ್ನು ಬೆಳೆಸಲಾರಂಭಿಸಿದ ಮೇಲೆ ನೌಕರಿ ಸೇರಿಕೊಳ್ಳುತ್ತೇನೆ.ನನಗೆ ಬೇಜಾರು ಎನ್ನುವ ಸಾವಿತ್ರಿಯ ರಾಗ ನಿಂತೇ ಹೋಗಿತ್ತು.
************
ನಿವೃತ್ತಿಯಾದ ಎರಡೇ ತಿಂಗಳಿನಲ್ಲಿ ವಾಹನ ಅಪಘಾತದಲ್ಲಿ ಪ್ರಕಾಶ ತೀರಿಕೊಂಡ. ಆಗಸವೇ ಕಳಚಿಬಿದ್ದಂತೆ ಆಘಾತದಿಂದ ಕುಳಿತು ಸದಾ ಕಣ್ಣೀರು ಹಾಕುತ್ತ ಕುಳಿತ ಸಾವಿತ್ರಿಯನ್ನು ಇಪ್ಪತ್ತೆಂಟು ವರ್ಷದ ರವಿ ಮಗುವಿನಂತೆ ಸಂತೈಸಿದ್ದ..‘ಅಮ್ಮಾ ನಾನಿದ್ದೀನಿ.ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಭರವಸೆಯ ಮಾತಾಡಿದ್ದ.
ಸದಾ ಗಂಡನ ಅಗಲಿಕೆಯನ್ನು ನೆನಪಿಸಿಕೊಳ್ಳುತ್ತ’ ಯಾಕಿಂಥ ಕಷ್ಟ ತಂದಿತ್ತೆ ದೇವಾ’ ಎಂದು ಮನದಲ್ಲೇ ಇಡೀ ದಿನ ತಟವಟಪಡುತ್ತಿದ್ದ ಸಾವಿತ್ರಿ ಚಿಂತೆಯಲ್ಲೇ ಮುಪ್ಪಾದಳು.ಲೋ ಬಿಪಿ ಸಮಸ್ಯೆ ಶುರುವಾಗಿ ಒಮ್ಮೊಮ್ಮೆ ಜೋಲಿ ಹೋಗುತ್ತಿದ್ದಳು.ಎರಡು ಸಲ ಮನೆಯಲ್ಲಿಯೇ ಬಿದ್ದಳು.
ಹುಬ್ಬಳ್ಳಿಯ ಪ್ರಸಿದ್ಧ ವೈದ್ಯರಾದ ದುಗ್ಗಾಣಿಯವರ ಆಸ್ಪತ್ರೆಯಲ್ಲಿ ಅಮ್ಮನನ್ನು ಅಡ್ಮಿಟ್ ಮಾಡಿ ಕಾಳಜಿಯಿಂದ ನೋಡಿಕೊಂಡ ಮಗನಿಂದಾಗಿ ಪ್ಯಾರಾಲಿಸಿಸ್ಗೆ ತುತ್ತಾಗದೇ ಸಾವಿತ್ರಿ ಮನೆಗೆ ಮರಳಿದಳು.
ಆಸ್ಪತ್ರೆಗೆ ಮನೆಗೆ ಅಲೆಯುತ್ತ ಸರಿಯಾಗಿ ಊಟ ತಿಂಡಿ ಮಾಡದೇ ಸೊರಗಿದ ಮಗನನ್ನು ನೋಡಿ ಸಾವಿತ್ರಿಗೆ ತುಸು ಜ್ಞಾನೋದಯವಾಗಿತ್ತು.‘ಎಷ್ಟು ಬೇಸರಿಸಿದರೂ ಸತ್ತವರು ಹಿಂದಿರುಗಲಾರರು.ಇದ್ದ ಮಗನನ್ನು ಕಾಳಜಿ ಮಾಡಬೇಕು’ ಎಂದು ಕಣ್ಣೀರಿಗೆ ಕಟ್ಟೆ ಹಾಕಿದಳು.ಇರುವವರೆಗೆ ಪರಾಧೀನವಾಗಿ ಬದುಕುವಂತಾಗಬಾರದು ಎಂದು ನಿರ್ಧರಿಸಿ ಆರೋಗ್ಯzಬಗ್ಗೆಯೂ ಕಾಳಜಿವಹಿಸಿ ದಿನವೂ ತಪ್ಪದೇ ಮಾತ್ರೆಗಳನ್ನು ತೆಗೆದುಕೊಳ್ಳಲಾರಂಭಿಸಿದಳು.
ಆದರೂ ನಲವತ್ತು ವರ್ಷ ಒಡನಾಡಿಯಾದ ಪ್ರಕಾಶನ ನೆನಪು ಕೂತಲ್ಲಿ ನಿಂತಲ್ಲಿ ಬರುವುದು ತಪ್ಪಲಿಲ್ಲ. ಇಪ್ಪತ್ತು ವರ್ಷ ನಾನು ಮದುವೆಯಾಗುವ ಮೊದಲು ಸಂತೋಷವಾಗಿರಲಿಲ್ಲವೇ. ಈಗ್ಯಾಕೆ ಹೀಗಾಗಬೇಕು? ಗಂಡ ಹೆಂಡತಿ ಇಬ್ಬರೂ ಒಂದೇ ಸಲ ಸಾಯಲು ಸಾಧ್ಯವೇ?ನನಗಿಂತ ಹಿರಿಯನಾದ ನನ್ನ ಗಂಡನಿಗೆ ಮೊದಲು ಸಾವು ಬಂತು.. ಇರುವವರೆಗೆ ಪರಾಧೀನಳಾಗಬಾರದು ಎಂಬ ತಿಳುವಳಿಕೆ ತೆಗೆದುಕೊಂಡು ಮನ ತಹಬಂದಿಗೆ ತರಲು ಮತ್ತೆ ಕೈ ತೋಟದ ಮೊರೆ ಹೋದಳು.ಕಳೆಕೀಳುವುದು, ಗಿಡಗಳಿಗೆ ಮಡಿ ಮಾಡುವುದು, ಬೀಜ ಹಾಕುವುದು, ಗಿಡಗಳೊಂದಿಗೆ ಸಂಭಾಷಣೆ ನೆಡುವುದು ಇಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದಳು.ಬೀಜ ಬಿತ್ತುವುದು,ಮೊಳಕೆ ಆಗುವುದು, ಗಿಡವಾಗುವುದು ಫಲಪುಷ್ಪವಾಗುವುದು ಹೀಗೆ ಪ್ರತೀ ಗಿಡದ ಬೆಳವಣಿಗೆಯನ್ನು ತನ್ನ ಜೀವನವನ್ನು ಸಮೀಕರಿಸಿಕೊಳ್ಳುತ್ತಿದ್ದಳು.ಕೆಲವು ಗಿಡಗಳು ಫಲ ಪುಷ್ಟಗಳನ್ನುನೀಡದೇ ಮಡಿಯುತ್ತವೆ ತನ್ನ ಜೀವನವೇನೂ ಹಾಗಾಗಲಿಲ್ಲ. ತಮ್ಮ ದಾಂಪತ್ಯದಲ್ಲಿ ಫಲವೊಂದಾಗಿದೆ.ಗಂಡ ಬದುಕಿದಷ್ಟು ದಿನವೂ ಹೊಂದಾಣಿಕೆಯ ದಾಂಪತ್ಯವೇ ಆಗಿತ್ತು.ಕಾಲನ ಕರೆ ಬರುವ ತನಕ ಈ ಗಿಡಗಳಂತೇ ಬದುಕಿಬಿಡಬೇಕು.‘ಯಾರೆರೆದ ನೀರಾದರೂ ಸರಿ ಯಾರು ಹಾಕಿದ ಗೊಬ್ಬರವಾದರೂ ಸರಿ ನಳನಳಿಸುತ್ತಿರಬೇಕು’ ಎಂದುಕೊಂಡು ಕೆಲಸ ಮಾಡುತ್ತಿದ್ದಳು.ಒಂದು ದಿನ ಕಳೆ ಕಿತ್ತುತ್ತಿರುವಾಗ ತಲೆ ಸುತ್ತಿದಂತಾಗಿ ಮಗನನ್ನು ಕರೆದು ‘ಒಂದು ಗ್ಲಾಸ್ ನೀರು ಕೊಡಪ್ಪಾ ಬಾಯಾರಿಕೆ ಆಗಿದೆ’ ಎಂದಳು.
ಅಂದಿನಿಂದ ಮಗನ ಕಾಳಜಿಯ ಪರಿಧಿ ಮತ್ತಷ್ಟು ವಿಸ್ತಾರವಾಯ್ತು. ‘ಅಮ್ಮಾ ಇಷ್ಟುವರ್ಷ ಗಿಡಾ ಪಡಾ ಬೆಳೆಸಿದ್ದು ಸಾಕು ಆರಾಮಾಗಿರು ಸಾಕು’ ಎನ್ನಲಾರಂಭಿಸಿದ.ಮಗನ ಮನಸ್ಸನ್ನೇಕೆ ನೋಯಿಸುವುದು ಎಂದು ಒಂದೆರಡು ದಿನ ಮನೆಯೊಳಗೇ ಕಳೆಯುತ್ತಿದ್ದಳು. ಆದರೆ ಮತ್ತೆ ಮೆಲ್ಲನೇ ಹಿತ್ತಲಿಗೆ ಮುಖ ಮಾಡುತ್ತಿದ್ದಳು….
*******
ಹೊರಗೆ ಗೇಟಿನಲ್ಲಿ ಯಾರೋ ಕೂಗಿದಂತೆನಿಸಿದಾಗ ನೆನಪಿನ ಬಲೆಯಿಂದೀಚೆಗೆ ಬಂದು ಸರ್ರನೇ ತಿರುಗಿ ಬಾಗಿಲು ತೆರೆಯಲೆಂದು ಹೆಜ್ಜೆ ಕಿತ್ತಿದ್ದೇ ತಡಪಾಚಿಗಟ್ಟಿದ ಕಲ್ಲಿನ ಮೇಲೆ ಕಾಲಿಟ್ಟು ದೊಪ್ಪನೇ ಬಿದ್ದಳು.
ಬಿದ್ದ ರಭಸಕ್ಕೆ ಕಣ್ಣು ಕತ್ತಲಿಟ್ಟ ಅನುಭವ ತಲೆ ಗೋಡೆಗೆ ಬಡಿದು ಕೊಂಚ ರಕ್ತವೂ ಬಂದಿತ್ತು.‘ಅಮ್ಮ’ ಎನ್ನುತ್ತ ಅಲ್ಲೇ ಒಂದೆರಡು ಕ್ಷಣ ಕುಳಿತಳು.ಬಿದ್ದ ಐದಾರು ನಿಮಿಷದ ಬಳಿಕ ತಲೆ ಸುತ್ತುವುದು ಕಡಿಮೆಯಾದಂತೆನಿಸಿತು.ಮೆಲ್ಲನೇ ಮೇಲೆದ್ದು ನೋವಾದ ಕಾಲನ್ನು ಎಳೆಯುತ್ತ ಕೊಯ್ದ ತೊಂಡೇಕಾಯನ್ನು ಅಡುಗೇಮನೆಯಲ್ಲಿ ತಂದಿಟ್ಟಳು.ಈಳಿಗೆಯ ಮೇಲೆ ಕುಳಿತು ಹೆಚ್ಚುವುದಕ್ಕೂ ಕಾಲುನೋವು ಬಿಡಲಿಲ್ಲ.ನಿಂತು ತಿಳಿಸಾರೊಂದನ್ನು ಕುದಿಸಿ ಮೆಲ್ಲನೆ ಬಂದು ಸೋಫಾದ ಮೇಲೆ ಉರುಳಿಕೊಂಡಳು.ಅಷ್ಟರಲ್ಲಿಯೇ ಮಗ ಬಂದ ‘ಅಮ್ಮಾ ಅಡುಗೆ ಎಂತಾ ಮಾಡಿದ್ದೆ ಸಿಕ್ಕಾಪಟ್ಟೆ ಹಸಿವಾಜು’ ಎಂದ.
‘ಬರೀ ಸಾರೊಂದನ್ನೇ ಮಾಡಿದ್ದಿಮಗನೆ’ ಎಂದುತ್ತರಿಸಿದಳು ಸಾವಿತ್ರಿ.
‘ಅನ್ನಾ ಸಾರು ಅಷ್ಟೇ ಮಾಡವ್ಳೇ ಅಲ್ಲನೀನು ಆರಾಮಿಲ್ಯನೇ ಅಮಾ’್ಮ ಎನ್ನುತ್ತಾ ಹತ್ತಿರ ಬಂದು ಹಣೆಯ ಮೇಲೆ ಕೈ ಇಟ್ಟ.ಅವನ ಹಸ್ತಸ್ಪರ್ಶ ಪ್ರೀತಿಗೆ ಕರಗಿದ ಸಾವಿತ್ರಿ ಮೆಲ್ಲನೇ ‘ಇವತ್ತು ಹಿತ್ತಲಿನಲ್ಲಿ ಬಿದ್ದು ಸ್ವಲ್ಪ ಪೆಟ್ಟು ಮಾಡಿಕ್ಯಂಡಿ.ಕೂತು ಪಲ್ಯಕ್ಕೆ ಹೆಚ್ಚಲ್ಲಾಯ್ದಿಲ್ಲೆ’ ಎಂದಳು.
ಅಲ್ಲಿಯವರೆಗೆ ಕರುಣಾಭಾವದಿಂದ ನೋಡುತ್ತಿದ್ದ ರವಿಗೆ ಈಗ ಸಿಟ್ಟು ಬಂತು. ‘ಎಷ್ಟು ಸಲಾ ನಿನಗೆ ಹೇಳಿದ್ದಿ ಗಿಡಗಳ ಬಗ್ಗೆ ಮೋಹ ಇಟ್ಗಳಡಾ ಅಂತಾ ನೀನು ಯನ್ನ ಮಾತಿಗೆ ಕವಡೆಕಾಸಿನ ಬೆಲೆನೂ ಕೊಡ್ತಿಲ್ಲೆ.ಯನ್ನ ಮಾತು ಕೇಳಲ್ಲಾಗ ಅನ್ನದು ನಿಂಗೆ ಹಠವೇ ಇದ್ದು’ ಸಿಡಿಮಿಡಿಗೊಳ್ಳುತ್ತಾ ಎಲ್ಲಿ ಪೆಟ್ಟಾಜು? ಎಂದು ಕೇಳಿದ ರವಿ.
ಸಾವಿತ್ರಿ ನೋವಿನಲ್ಲೂ ಮೆಲ್ಲನೇ ನಗುತ್ತಾ “ಮಗನೇ ನಿನ್ನ ಮೊಳಕಾಲು ಕೈ ನೋಡು ಎಷ್ಟೊಂದು ಕಲೆ ಇದ್ದು.ಅದೆಲ್ಲಾ ನೀನು ಬಾಲ್ಯದಲ್ಲಿ ಆಟಾ ಆಡಕ್ಕಾದ್ರೆ ಬಿದ್ದು ಏಟು ಮಾಡಿಕೊಂಡ ಗಾಯದ ಕಲೆಗಳು.ಆನು ಮನೆಯಲ್ಲಿ ಪ್ರಥಮಚಿಕಿತ್ಸೆ ಮಾಡಲ್ಲೆ ಒಂದು ಪೆಟ್ಟಗೆ ತಯಾರು ಇಟ್ಗತ್ತಿದ್ದಿ. ಅಳುವ ನಿನ್ನ ತಬ್ಬಿ ಸಮಾಧಾನ ಮಾಡಿ, ಗಾಯ ಗುಣವಾಗುವವರೆಗೆ ಉಪಚಾರ ಮಾಡತಿದ್ದಿ..ಆರಾಮಾದ ಮೇಲೆ ಮತ್ತೆ ಆಟಾ ಆಡು ಅಂತ ಧೈರ್ಯ ತುಂಬಿ ಕಳಸ್ತಿದ್ದಿ. ಬಾಲ್ಯ ಮುಪ್ಪು ಎರಡೂ ಒಂದೇ ರೀತಿ ಅವಸ್ಥೆ ಜೀವನದಲ್ಲಿ.ಹಿತ್ತಲ ಗಿಡಗಳೂ ನಿನ್ನ ಹಾಗೆ ಮಕ್ಕಳೇಯಾ ಯನಗೆ..ಆ ಗಿಡಗಳೆಲ್ಲ ಬಾ ಕಾಳಜಿ ಮಾಡು, ನೀರು ಹಾಕು ಎಂದು ಕರೆದ ಹಾಗನಿಸ್ತು…ದಿನಕ್ಕೆ ಒಂದು ಸಲಾನಾದ್ರೂ ಮಾತಾಡ್ಸನ ಅನ್ನಿಸಿಬಿಡ್ತು.ನಿನ್ನ ಮಾತು ಕೇಳಲ್ಲಾಗ ಅಂತಲ್ಲ”ಎಂದು ಕ್ಷೀಣ ದ್ವನಿಯಲ್ಲಿ ಮಾತು ನಿಲ್ಲಿಸಿದಳು.
ಮರುಕ್ಷಣದಲ್ಲಿ ಕಣ್ಣೀರು ತುಂಬಿಕೊಂಡ ರವಿ ಅಮ್ಮನನ್ನು ಬಾಚಿ ತಬ್ಬಿದ್ದ ಥೇಟ್ ಅಮ್ಮನಂತೆಯೇ….
6 thoughts on “ಬೇಡವೆಂದರೂ ಕರೆವ ಹಸಿರು”
Super
ಮಾಲತಿ ಹೆಗಡೆಯವರ ‘ಬೇಡವೆಂದರೂ ಕರೇವ ಹಸಿರು’ ಪ್ರಕೃತಿಯೊಂದಿಗೆ ಬೆಸೆದುಕೊಂಡ ಮಾನವ ಸಂಬಂಧಗಳ ಕುರಿತಾಗಿ ಆಪ್ತವಾಗಿ ಬರೆದ ಕತೆ. ಹವ್ಯಕ ಭಾಷೆಯ ಸೊಗಡನ್ನು ಇಲ್ಲಿ ಸವಿಯಬಹುದು. ಕತೆ ಖುಷಿಕೊಡುತ್ತದೆ.
ಜೀವನದ ಕಟು ವಾಸ್ತವವನ್ನು ತುಂಬಾ ನವೀರಾಗಿ ಮನ ಸೆಳೆಯುವ ಹಾಗೆ ಬರೆದಿದ್ದು.ತುಂಬಾ ಖುಷಿ ಆಯ್ತು ಓದಲು. ಸಸ್ಯಗಳೊಂದಿಗೆ ಒಲವ ಭಾವದ ಮಾತು ಎಲ್ಲವೂ ತುಂಬಾ ಚೆಂದ 🌺💞🙏🏻🙏🏻
ಬಾಲ್ಯ ಮುಪ್ಪು ಒಂದೇ ಎಂದು ತಿಳಿಯುವದು ಸ್ವತ:ಕ್ಕೆ ಮುಪ್ಪು ಬಂದಾಗಲೇ ಅಲ್ಲವೇ? ಆದರೂ ನಿಮ್ಮ ಕಥೆ ಹೊಸ ತಿರುವಿನೊಂದಿಗೆ ಓದುಗರಿಗೆ ಕೂಡ ಹೊಸ ಆಶೆ ಚಿಗುರಿಸಿತ್ತದೆ. ಹವ್ಯಕ ಭಾಷೆ ಓದಲು ಸ್ವಲ್ಪ ಕಷ್ಟ ಅನಿಸಿತು.
ಸುಂದರ ಕಥೆ…
ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರ. Your surroundings while you were growing is reflecting in the story. ನಾನು ಸಾವಿತ್ರಿಯ ತೋಟದಲ್ಲಿ ಒಂದು ಸುತ್ತು ಹೋಗಿ ಬಂದೆ. ಧನ್ಯವಾದ ನನ್ನ ಬಾಲ್ಯಕ್ಕೆ ಕರೆದು ಹೋದಕ್ಕೆ.