ಕುವೆಂಪು ಅವರನ್ನು ರೂಪಿಸಿದ ಒಂದು ಕವಿತೆ

ಕಾವ್ಯ ಅನುಭವದ ಕಲಾತ್ಮಕ ಸೃಷ್ಟಿ. ಕಾವ್ಯ ಒಂದು ಸಶಕ್ತ ಮಾಧ್ಯಮ. ಕಾವ್ಯ ಅಥವಾ ಸಾಹಿತ್ಯದ ಪ್ರಯೋಜನವನ್ನು ಕುರಿತಂತೆ ಭಾರತೀಯ ಹಾಗೂ ಪಾಶ್ಚಾತ್ಯ ಚಿಂತಕರು ವಿಸ್ತಾರವಾಗಿಯೇ ವಿವೇಚನೆ ನಡೆಸಿದ್ದಾರೆ. ಕಾವ್ಯಕ್ಕೆ ವಿಶೇಷವಾದ ಶಕ್ತಿಯಿದೆ; ಅದು ಕಾಂತಾ ಸಂಮಿತ ಎಂಬುದಾಗಿ ಬಹು ಹಿಂದೆಯೇ ಮಮ್ಮಟ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಆಚಾರ್ಯ ಪುರುಷ ಅರಿಸ್ಟಾಟಲ್ “ಕಾವ್ಯ ಒಂದು ಬಗೆಯ ಸುಸಂಸ್ಕøತವಾದ ಸಂತೋಷವನ್ನು ಒದಗಿಸುತ್ತದೆ. ಕಾವ್ಯ ಜನತೆಯ ನೈತಿಕ ಆರೋಗ್ಯವನ್ನು ಸಂವರ್ಧನೆಗೊಳಿಸುತ್ತದೆ ಎಂದು ಗಟ್ಟಿಯಾದ ದನಿಯಲ್ಲೇ ಹೇಳಿದ್ದಾನೆ. ಹಾಗೆಯೇ ಕವಿಯನ್ನು ಅವನು ಸಮಾಜದ ಆರೋಗ್ಯವನ್ನು ಕಾಪಾಡುವ ವೈದ್ಯನೆಂದು ಹೇಳುವಲ್ಲಿ ಇನ್ನು ವಿಶೇಷತೆ ಇರುವುದನ್ನು ಕಾಣಬಹುದು. ಹೀಗೆ ಹೇಳುವುದರ ಮುಖಾಂತರ ಅವನು ಕಾವ್ಯದ ತಲೆಯ ಮೇಲೆ ಇನ್ನಷ್ಟು ನೈತಿಕತೆಯ ಭಾರವನ್ನು ಹೊರಿಸಿದನೆಂದೇ ತಿಳಿಯಬೇಕಾಗುತ್ತದೆ. ದೈನಂದಿನ ಬದುಕಿನಲ್ಲಿ ವೈದ್ಯನಾದವನು ಕೇವಲ ಸಂತೋಷದಾಯಕವಾದ ನುಡಿಗಳಿಂದಲೇ ರೋಗಿಯೊಬ್ಬನ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಕ್ಕೆ ಸಾಧ್ಯವಿಲ್ಲ. ವೈದ್ಯನ ಬಳಿಗೆ ಹೋದ ರೋಗಿಯನ್ನು ಕುರಿತು ಅವನು ಸಾಂತ್ವನದ, ಸಮಾಧಾನದ ನುಡಿಗಳನ್ನಾಡಿದರೆ ರೋಗಿಗೆ ಆನಂದವೆನಿಸುತ್ತದೆ. ರೋಗದಿಂದ ಬಿಡುಗಡೆ ಹೊಂದುವ ಆಶೆಯು ಮೂಡುತ್ತದೆ. ಹಾಗೆಯೇ ಬದುಕಿನಲ್ಲಿ ಒಂದು ತೆರನಾದ ಮಾನಸಿಕ ಸ್ಥೈರ್ಯವು ದೊರಕಿದಂತಾಗುತ್ತದೆ. ಹೀಗೆ ರೋಗಿಯನ್ನು ಮಾನಸಿಕವಾಗಿ ತನ್ನ ಹಿತವಾದ ನುಡಿಗಳಿಂದ ಸಿದ್ಧಗೊಳಿಸಿದ ವೈದ್ಯನು, ನಂತರದಲ್ಲಿ ಆರೋಗ್ಯಕ್ಕೆ ಸರಿಯಾದ ಔಷಧಿಗಳನ್ನು ಕೊಟ್ಟು ಚಿಕಿತ್ಸೆ ಮಾಡುತ್ತಾನೆ. ಹಿತವಾದ ನುಡಿಗಳಿಗಿಂತಲೂ ರೋಗ ನಿರೋಧಕ ಶಕ್ತಿಯು ಅಡಕವಾಗಿರುವುದು ವೈದ್ಯನು ಕೊಡುವ ಔಷಧಿಗಳಲ್ಲಿ. ಕೊಟ್ಟ ಔಷಧಿಯು ಸರಿಯಾಗಿ ಕ್ರಿಯೆ ಮಾಡುವುದಕ್ಕೆ ವೈದ್ಯನ ಮಾತುಗಳ ಸಹಕಾರಿಯಾಗಬಲ್ಲವಷ್ಟೆ. ಹಾಗೆಯೇ ಕವಿಯಾದವನು ಸಮಾಜದ ವೈದ್ಯನಾಗಿ ಕೇವಲ ಸಂತಸದ ಮಾತುಗಳಿಂದಲೇ ಅದರ ಆರೋಗ್ಯವನ್ನು ವರ್ಧನೆಗೊಳ್ಳುವಂತೆ ಮಾಡಲಾರನು. ಸಮಾಜಪುರುಷನಿಗೆ ಅಂಟಿದ ಜಾಡ್ಯವನ್ನು ನಿವಾರಿಸಲು ಅವನು ತನ್ನ ಕಾವ್ಯದ ಮೂಲಕ ನೈತಿಕತೆಯ ಔಷಧವನ್ನು ಪೂರೈಸುತ್ತಾನೆ”. ಹೀಗೆ ಕಾವ್ಯದ ಪರಮ ಪ್ರಯೋಜನಗಳ ಸ್ಥಾನದಲ್ಲಿ ಅರಿಸ್ಟಾಟಲ್ ನೀತಿಬೋಧೆ ಮತ್ತು ಆನಂದ ಇವುಗಳನ್ನು ಇರಿಸುತ್ತಾನೆ.

 ಸಾಹಿತ್ಯ ಮನಸ್ಸನ್ನು ಸೆಳೆದು ಮೈಮರೆಯಿಸಿ ಮೇಲಕ್ಕೆತ್ತಿ ಒಂದು ಬಗೆಯ ಆನಂದಾನುಭೂತಿಯನ್ನು ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಸಿದ್ಧ ಆಂಗ್ಲ ವಿಮರ್ಶಕ ಐ. ಎ. ರಿಚಡ್ರ್ಸ್ ತನ್ನ `ಸೈನ್ಸ್ ಆ್ಯಂಡ್ ಪೋಯೆಟ್ರಿ’ಎಂಬ ಪುಸ್ತಕದಲ್ಲಿ ಕಾವ್ಯದ ಹಿರಿಮೆ ಗರಿಮೆ, ಅದು ಸಹೃದಯನ ಮೇಲೆ ಮಾಡುವ ಪರಿಣಾಮಗಳನ್ನು ವಿಸ್ತøತವಾಗಿ ವಿವರಿಸಿ ಜಗದ ಕಣ್ಣು ತೆರೆಯಿಸಿದ್ದಾನೆ. ಮ್ಯಾಥ್ಯೂ ಆರ್ನಾಲ್ಡ್ “ಕಾವ್ಯದ ಭವಿಷ್ಯ ಅಪಾರವಾಗಿದೆ. ಏಕೆಂದರೆ ಕಾವ್ಯದಲ್ಲಿ ಅದು ತನ್ನ ಉನ್ನತ ಧ್ಯೇಯಗಳಿಗೆ ತಕ್ಕುದಾಗಿರುವ ಕಡೆಗಳಲ್ಲಿ ನಮ್ಮ ಜನಾಂಗ ಕಾಲಕ್ರಮೇಣ ಹೆಚ್ಚು ಹೆಚ್ಚು ದೃಢವಾದ ನೆಲೆಯನ್ನು ಕಂಡುಕೊಳ್ಳುವುದು. ಕಾವ್ಯವು ಜನಾಂಗದ ಜೀವನಕ್ಕೆ ದೃಢವಾದ ನೆಲೆಯನ್ನು ದೊರಕಿಸಿಕೊಡುತ್ತದೆ” ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಾತು ನಿಜ.

ಸಾಹಿತ್ಯ ಸಮಾಜದ ಒಂದಂಗ. ಸಮಾಜದ ರಕ್ಷಣೆ, ಪೋಷಣೆಗೆ  ಸಹಕಾರಿ ಎಂಬುದನ್ನು ಮನಶಾಸ್ತ್ರಜ್ಞರೂ ಒಪ್ಪಿಕೊಂಡಿದ್ದಾರೆ. ಪ್ರಸಿದ್ಧ ಚಿಂತಕ ಸಿ. ಡೇ. ಲೂಯಿ ಕಾವ್ಯ ಹೇಗೆ ವ್ಯಕ್ತಿಯನ್ನು ಸದೃಢಗೊಳಿಸುತ್ತದೆ ಎಂಬುದನ್ನು ಸೋದಾಹರಣವಾಗಿ ಹೀಗೆ ವಿವರಿಸಿದ್ದಾನೆ;

ಸಿ. ಡೇ. ಲೂಯಿಯು ಕಾವ್ಯವನ್ನು ಕಾಲುಚೆಂಡಿನ ಆಟಕ್ಕೆ ಹೋಲಿಸುತ್ತಾನೆ. ಕ್ರೀಡೆಯು ಮನುಷ್ಯನನ್ನು ಕ್ರಿಯಾಶೀಲಗೊಳಿಸುವುದರೊಂದಿಗೆ ಅವನಲ್ಲಿ ವಿನೂತನ ಚೈತನ್ಯವನ್ನು ತುಂಬುತ್ತದೆ, ಶಕ್ತಿವಂತನನ್ನಾಗಿ ಮಾಡುತ್ತದೆ. ದೈಹಿಕ ಶಕ್ತಿ ಸಂವರ್ಧನೆಗಾಗಿ ಪ್ರತಿಯೊಬ್ಬನು ಕ್ರೀಡೆಯನ್ನು ತನ್ನ ಒಂದು ಹವ್ಯಾಸವಾಗಿ ಸ್ವೀಕರಿಸಲೇಬೇಕು. ಕಾಲ್ಚೆಂಡಿನ  ಆಟದಿಂದ ಕಾಲುಗಳು ಮತ್ತಷ್ಟು ಗಟ್ಟಿಯಾಗುತ್ತವೆ, ಸದೃಢವಾಗುತ್ತವೆ. ಮೈಯಲ್ಲಿ ಅದೇ ತೆರನಾದ ಶಕ್ತಿಯು ಸಂಚಲನವಾಗಿ ಮನುಷ್ಯನು ಆರೋಗ್ಯಶಾಲಿಯಾಗುತ್ತಾನೆ. ಹೇಗೆ ವ್ಯಕ್ತಿಯು ಕಾಲ್ಚೆಂಡಿನ ಆಟದಿಂದ ಸದೃಢವಾದ ದೇಹವನ್ನೂ, ದೈಹಿಕ ಆರೋಗ್ಯವನ್ನೂ ಹೊಂದುತ್ತಾನೋ ಹಾಗೆಯೇ ಕಾವ್ಯವನ್ನು ಆಸ್ವಾದನೆ ಮಾಡುವುದರಿಂದ ಅವನ ಅಂತರಂಗದ ಸ್ವಾಸ್ಥ್ಯವು ಹೆಚ್ಚುತ್ತದೆ. ಅವನು ಸದಾ ಕ್ರಿಯಾಶೀಲನಾಗಿರುವುದಕ್ಕೆ ಸಾಧ್ಯವಾಗುತ್ತದೆ. ಕಾವ್ಯವು ಸಹೃದಯನಿಗೆ ಬುದ್ಧಿಯ ಕಸುವಿನೊಂದಿಗೆ ಹೃದಯ-ಆತ್ಮಗಳ ಕಸುವನ್ನು ಕುದುರಿಸುತ್ತದೆ. ಆದುದರಿಂದಲೇ ಅದನ್ನೂ ಲೂಯಿಯು ಕಾಲ್ಚೆಂಡಿನ ಆಟಕ್ಕೆ ಹೋಲಿಸಿದ್ದಾನೆ.

ಕಾವ್ಯಕ್ಕೆ ಅಪಾರವಾದ ಶಕ್ತಿಯಿದೆ ಎಂಬುದು ಎಲ್ಲರ ಅಭಿಪ್ರಾಯವೇ ಆಗಿದೆ. ಖ್ಯಾತಕವಿ ಚೆನ್ನವೀರ ಕಣವಿ ಅವರ ವಿಚಾರ ಇಂತಿದೆ;

ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು

ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು

ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು

ಒಂದು ಕವಿತೆಗೆ ಕೂಡ ಮನಕರಗಬಹುದು

 ಒಂದು ಕವಿತೆಗೆ ಕೂಡ ಮನಕರಗಬಹುದು ಎಂಬುದನ್ನು `ನೆನಪಿನ ದೋಣಿಯಲ್ಲಿ’ ಕೃತಿಯಲ್ಲಿ ಕುವೆಂಪು ಅವರು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಕುವೆಂಪು ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಜವಾಬ್ದಾರಿಯಲ್ಲಿ ಓದು ಮುಂದುವರಿಸುತ್ತಾರೆ. ಆ ಸಂದರ್ಭದಲ್ಲಿ ಅವರ ಹತ್ತಿರದ ಸಂಬಂಧಿ ವಿದ್ಯಾವಂತರಾದ ಮಂಜೇಗೌಡರು ಪಾಶ್ಚಾತ್ಯ ಜಗತ್ತಿನ ಮಹಾಪುರುಷರ, ಮಹಾಲೇಖಕರ, ಮಹಾಕವಿಗಳ ಜೀವನದ ಸಂಗತಿಗಳನ್ನು ಹೇಳಿ ನಾವೂ ಅವರಂತೆ ಆಗಬೇಕು ಎಂದು ಪ್ರೋತ್ಸಾಹಿಸುತ್ತಿದ್ದರು. ಅವರ ಮಾತನ್ನು ಕೇಳಿ “ ನನ್ನ ಅಂತಃಶ್ಚೇತನದ ಪೆಟ್ರೋಲಿಗೆ ಬೆಂಕಿ ತೋರಿಸಿದಂತಾಗುತ್ತಿತ್ತು” ಎಂಬುದಾಗಿ ಕುವೆಂಪು ಅವರೇ ಹೇಳಿಕೊಂಡಿದ್ದಾರೆ. ಲಾಂಗ್ ಫೆಲೋ ಕವಿಯ `ದಿ ಸಾಮ್ ಆಫ್ ಲೈಫ್’ ಎಂಬ ಕವನ ಕುವೆಂಪು ಅವರ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿತು ಎಂಬುದನ್ನು ಅವರೇ ತಮ್ಮ ಆತ್ಮಕತೆಯಲ್ಲಿ ಹೀಗೆ ಚಿತ್ರಿಸಿದ್ದಾರೆ;

ನನ್ನ ಆತ್ಮಕ್ಕೆ ಚೈತನ್ಯಪೂರ್ಣವಾದ ಒಂದು ಮಂತ್ರದೀಕ್ಷೆಯನ್ನು ಕೊಟ್ಟಿತು ಆ ಕವಿತೆ. “ಜಗತ್ತು ಮತ್ತು ಜೀವನ ಬರಿಯ ಒಂದು ಶೂನ್ಯ ಸ್ವಪ್ನವಲ್ಲ. ಹಾಗೆಂದುಕೊಂಡು ನಿದ್ರಿಸುವ ಜೀವ ಸತ್ತಂತೆಯೇ ಸರಿ! ಬದುಕು ಮಿಥ್ಯೆಯಲ್ಲ. ಬದುಕು ಸದೃಢ ಸತ್ಯ. ಪಂಚಭೂತಗಳಿಂದ ಹುಟ್ಟಿಬಂದ ನೀನು ಪಂಚಭೂತಗಳಲ್ಲಿ ಸೇರಿಹೋಗುತ್ತೀಯೆ ಎಂಬುದು ಆತ್ಮಕ್ಕಲ್ಲ, ಆ ಮಾತು ಅನ್ವಯವಾಗುವುದು ದೇಹಕ್ಕೆ. ನಮ್ಮ ದಾರಿ ನಮ್ಮಗುರಿ ಸುಖಕ್ಕೂ ಅಲ್ಲ ದುಃಖಕ್ಕೂ ಅಲ್ಲ. ಕರ್ಮಕ್ಕೆ. ಕರ್ಮ ಮಾಡುವುದೇ ನಮ್ಮ ಕರ್ತವ್ಯ. ಇಂದಿಗಿಂತ ನಾಳೆ ಒಂದೊಂದು ದಿನಕ್ಕೂ ನಮ್ಮ ದಾರಿ ಮುಂದು ಮುಂದಕ್ಕೆ ಸಾಗುತ್ತಿರಬೇಕು. ವಿದ್ಯೆ, ಕಲೆ, ಜ್ಞಾನ ಇವು ಅನಂತ, ಅಪಾರ. ನಮ್ಮ ಆಯುಸ್ಸಾದರೊ ಕ್ಷಣಿಕವೆಂಬಂತೆ ಮಿಂಚಿ ಹರಿಯುತ್ತಿದೆ. ಯಾವತ್ತಾದರೂ ಮೃತ್ಯುವಿನ ಕರೆ ಬರಬಹುದು ನಮಗೆ. ಆದ್ದರಿಂದ ಬದುಕಿನ ಕದನ ರಂಗದಲ್ಲಿ ಮೂಕ ಪ್ರಾಣಿಗಳಂತಾಗದೆ ವೀರರಂತೆ ಹೋರುತ್ತ ಮುನ್ನುಗ್ಗಬೇಕು. ಭವಿಷ್ಯತ್ತಿನ ಸುಖ ಸ್ವಪ್ನವನ್ನು ನಂಬಿ ಕುಳಿತಿರಬಾರದು. ಹಾಗೆಯೇ, ಕಳೆದ ಕಾಲದ ವೈಭವವನ್ನೇ ಮೆಲುಕು ಹಾಕುತ್ತಲೂ ಇರಬಾರದು. ಹಿಂದಕ್ಕೂ ನೋಡದೆ ಮುಂದಕ್ಕೂ ಹಾಕದೆ ಇಂದಿನದನ್ನು ಇಂದೆಯೆ ಮಾಡಿ ಪೂರೈಸಬೇಕು, ಹೃದಯದ ಧೈರ್ಯೋತ್ಸಾಹ ಕೆಡದೆ ಭಗವಂತನಲ್ಲಿ ಶ್ರದ್ಧೆಯಿಟ್ಟು ಮುನ್ನಡೆಯಬೇಕು. ಇದಕ್ಕೆಲ್ಲ ನಮಗೆ ಮಾರ್ಗದರ್ಶಿಗಳಾಗಿದ್ದಾರೆ ಜಗತ್ತಿನ ಮಹಾಪುರುಷರು. ಅವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆದರೆ ನಮ್ಮ ಬದುಕು ಭವ್ಯವಾಗುತ್ತದೆ. ಅಳಿದ ಮೇಲೆ ನಾವೂ ಅವರಂತೆ ಕಾಲದ ಹೊಳೆಯ ಮರುಳದಿನ್ನೆಯ ಮೇಲೆ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬಹುದು. ಆದ್ದರಿಂದ ಎದ್ದೇಳು! ಕರ್ಮನಿರತನಾಗು. ಬಂದದ್ದೆಲ್ಲಾ ಬರಲಿ. ಹೋಗುತ್ತಾ, ಜಯಿಸುತ್ತಾ ಮುಂದುವರಿ. ಕರ್ಮ  ಮಾಡುತ್ತಾ ತಾಳ್ಮೆಗೆಡದೆ ಕಾಯುವುದನ್ನು ಕಲಿ!… ಆಲಿಸುತ್ತಾ ಆಲಿಸುತ್ತಾ ನನ್ನ ಜೀವ ಜ್ವಾಲಾಮಯವಾಯಿತು” ನನ್ನ ಅಂತಃಶ್ಚೇತನಕ್ಕೊಂದು ಮೊತ್ತ ಮೊದಲನೆಯ `ಉಪನಯ’ ವಾಯ್ತು! ಚೈತನ್ಯ ಕಣ್ಣು ಬಿಟ್ಟಿತು; ಎಚ್ಚರಗೊಂಡು (ಪುಟ, 117). ನನ್ನ ಬಾಲ್ಯದ ಗುರುವಾಗಿ ನನ್ನ ಚೇತನಕ್ಕೆ ಕಣ್ದೆರೆಯಿಸಿದ ಈ ಕವನ ನನ್ನ ಪ್ರಪ್ರಥಮ

ದೀಕ್ಷಾಗುರುವಾಗಿಯೇ ನಿಂತಿದೆ. ಒಂದು ಕವಿತೆ ಕುವೆಂಪು ಅವರ ವ್ಯಕ್ತಿತ್ವವನ್ನು ರೂಪಿಸಿದ್ದು ಸಾಮಾನ್ಯ ಸಂಗತಿಯಲ್ಲ. ಇದು ಸಾಹಿತ್ಯದ ಶಕ್ತಿ ಹಾಗೂ ಹಿರಿಮೆ.

                                                              – ಡಾ. ಜಿ. ಎನ್. ಉಪಾಧ್ಯ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಕುವೆಂಪು ಅವರನ್ನು ರೂಪಿಸಿದ ಒಂದು ಕವಿತೆ”

  1. ತುಂಬಾ ಅಚ್ಚುಕಟ್ಟಾಗಿ, ಸಂಗ್ರಾಹ್ಯವಾಗಿ ಧ್ಯಾನಿಸುವಂತೆ ಕವಿತೆ ಮತ್ತು ರಸ ಋಷಿ ಕುವೆಂಪು ಕುರಿತು ಬೆರೆದ ಬರಹ ಖುಷಿ ಕೊಟ್ಟಿದೆ… ಲೇಖಕರಿಗೆ ಧನ್ಯವಾದಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter